ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪು ನಾರಾಯಣ ವಸ್ತಾರೆ ಮನೆಗೆ ಹಿಂತಿರುಗಿದ ಕಥೆ

By Mahesh
|
Google Oneindia Kannada News

ಬೆಂಗಳೂರು, ಮೇ.9: 'ನಮ್ಮ ಮನೆಯ ಹತ್ತೂವರೆ ವರ್ಷದ ಹಿರೀಕ ಕೆಂಪು- (ಕೆಂಪುನಾರಾಯಣ ಅಂತ ಅವನ ಪೂರ್ತಿ ಹೆಸರು)
ಈ ಬೆಳಿಗ್ಗೆಯಿಂದ ಕಾಣೆಯಾಗಿದ್ದಾನೆ. ಕಣ್ಣು ಕಾಣುವುದಿಲ್ಲ. ಬನಶಂಕರಿ ಎರಡನೇ ಹಂತದ ಆಸುಪಾಸಿನಲ್ಲಿ ಅವನನ್ನು ಯಾರಾದರೂ ಕಂಡರೆ ಕೂಡಲೆ ನನಗೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ.' ಎಂಬ ಸಂದೇಶವನ್ನು ಖ್ಯಾತ ವಾಸ್ತು ಶಿಲ್ಪಿ, ಉದಯೋನ್ಮುಖ ಲೇಖಕ ನಾಗರಾಜ ವಸ್ತಾರೆ ಅವರು ಫೇಸ್ ಬುಕ್ ನಲ್ಲಿ ಹಾಕಿದ್ದರು. ಕಾಕರ್ ಸ್ಪಾನಿಯಲ್ ಜಾತಿಯ ಕಪ್ಪು ಬಣ್ಣದ ನಾಯಿ ಕಳೆದುಕೊಂಡ ನಾಗರಾಜ ಹಾಗೂ ಅಪರ್ಣ ದಂಪತಿಗೆ ಮರುದಿನವೇ ಸಂತಸದ ಸುದ್ದಿ ಸಿಕ್ಕಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಾಯಿ ಕಳೆದುಕೊಂಡು ಪರದಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಒಳ್ಳೆ ಜಾತಿ ನಾಯಿಗಳು ಎಲ್ಲಿ ಮಾಯವಾಗುತ್ತದೋ ತಿಳಿಯುವುದೇ ಇಲ್ಲದ್ದಂಥ ಪರಿಸ್ಥಿತಿ. ಇಂಥ ಸಂದರ್ಭದಲ್ಲಿ ಕೆಂಪು ನಾರಾಯಣ ಎಂಬ ಹೆಸರಿನ ಸ್ಪಾನಿಯಲ್ ನಾಯಿ ಮತ್ತೆ ತನ್ನ ಮನೆಗೆ ಹಿಂತಿರುಗುವುದು ಆಶ್ಚರ್ಯವೇ ಸರಿ. ಬೆಂಗಳೂರಿನಲ್ಲಿ ಪ್ರಾಣಿಪ್ರಿಯರು ಇನ್ನೂ ಇದ್ದಾರೆ ಎಂಬುದಕ್ಕೆ ಇದು ನಿದರ್ಶನ ಎನ್ನಬಹುದು. ನಿಮ್ಮ ಮನೆ ನಾಯಿ ಕಳೆದು ಹೋದರೆ cupabangalore.org ಗೆ ಭೇಟಿ ನೀಡಿ ಸಹಾಯ ಕೋರಿ..

ಈಗ ಕೆಂಪು ಮನೆಗೆ ಹಿಂತಿರುಗಿದ ಕಥೆ ಮುಂದುವರೆಸುತ್ತಾ..
ಬನಶಂಕರಿ ಎರಡನೇ ಹಂತದಲ್ಲಿ ಕಾಣೆಯಾಗಿದ್ದ ಕೆಂಪು ಜಯನಗರದಲ್ಲಿ ಒಬ್ಬರ ಕೈ ಸೇರಿದ್ದಾನೆ. ಅಲ್ಲಿಂದ ಕೆಂಗೇರಿಯ ಪ್ರಾಣಿ ಪುನರ್ವಸತಿ ಕೇಂದ್ರ ಸೇರಿದ್ದಾನೆ. ಈ ವೇಳೆಗೆ ವಸ್ತಾರೆ ಅವರು ಬನಶಂಕರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಪೋಸ್ಟರ್ ಗಳನ್ನು ಅಂಟಿಸಿ.. ನಾಯಿಯನ್ನು ಹುಡುಕಿಕೊಡಿ ಎಂದು ಕೋರಿದ್ದಾರೆ. cupa ಆಗಲಿ ಇನ್ಯಾವುದೇ ಸಂಘಟನೆಗಳಿಗೆ ಸಹಾಯ ಕೋರಿ ಕರೆ ಮಾಡುವ ಆಲೋಚನೆಯೂ ಬಾರದಷ್ಟು ನಾಗರಾಜ ಅವರು ಚಿಂತಿತರಾಗಿದ್ದರಂತೆ.

ಬೆಳ್ಳಂಬೆಳ್ಳಗೆ ಮಹಿಳೆಯೊಬ್ಬರು ನಾಗರಾಜ್ ಅವರಿಗೆ ಕರೆ ಮಾಡಿ ನನ್ನ ಪತಿ ಕೈಗೆ ನಿಮ್ಮ ಕೆಂಪು ಸಿಕ್ಕಿದ್ದ. ಆತನನ್ನು ಕೆಂಗೇರಿಯ ಪ್ರಾಣಿ ಪುನವರ್ಸತಿ ಕೇಂದ್ರದಲ್ಲಿ ಬಿಟ್ಟಿದ್ದೇವೆ ಎಂದು ಕೇಂದ್ರದ ವಿಳಾಸ ನೀಡಿದ್ದಾರೆ. ಇಷ್ಟು ಸುದ್ದಿಯನ್ನು ಮೊಬೈಲ್ ನಿಂದ ಕೀ ಮಾಡಿ ಫೇಸ್ ಬುಕ್ ನಲ್ಲಿ ಹಾಕಿದ್ದ ನಾಗರಾಜ್ ಅವರು ಮುಂದೆ ಕೆಂಪು ಹಿಂತಿರುಗಿದ ಕಥೆಯನ್ನು ವಿಸ್ತರಿಸಿ ಬರೆದು, ಫೇಸ್ ಬುಕ್ ಗೆಳೆಯರು ಸೇರಿದಂತೆ, ಕಷ್ಟಕಾಲದಲ್ಲಿ ಧೈರ್ಯ ಹೇಳಿದ ಮಿತ್ರವರ್ಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಕೆಂಪು ಮನೆಗೆ ಬಂದ ಬಗ್ಗೆ ನಾಗರಾಜ್ ವಸ್ತಾರೆ ಬರೆದಿದ್ದನ್ನು ಇಲ್ಲಿ ಯಥವತ್ತಾಗಿ ನೀಡಲಾಗಿದೆ. ಪ್ರಾಣಿ ಪ್ರಿಯರ ಕಣ್ಣಾಲಿಗಳನ್ನು ಒದ್ದೆ ಮಾಡುವ ಇಂಥ ಪ್ರಸಂಗಗಳು ನಿಮಗೂ ತಿಳಿದಿದ್ದಾರೆ ಹಂಚಿಕೊಳ್ಳಿ....

Nagaraj Vastrey

ಕೆಂಪು ವಾಪಸ್ಸಾದ ವಿಚಾರವಾಗಿ ಇನ್ನೊಂದಿಷ್ಟು ಹೇಳಲೇಬೇಕು. ನಿನ್ನೆ ರಾತ್ರಿ ಒಂಬತ್ತರ ಸುಮಾರಿಗೆ ನನಗೊಂದು ಫೋನು ಬಂತು. ಗುರುತಿರದ ಹೆಣ್ಣು ಧ್ವನಿ. ಜಯನಗರದ ಏಳನೇ ಬ್ಲಾಕಿನಲ್ಲಿರುವ ಆಕೆ, ತನ್ನ ಪತಿಗೆ ಬೀದಿಯಲ್ಲಿ ಸಿಕ್ಕಿದ ಒಂದು ಮುದಿಯಾದ ಮತ್ತು ಕುರುಡಾದ ಕಾಕರ್ಸ್ಪೇನಿಯಲನ್ನು ಕೆಂಗೇರಿಯಲ್ಲಿರುವ ‘ಕೃಪಾ ಅನಿಮಲ್ ಕೇರ್' ಎಂಬ ಸಂಸ್ಥೆಗೆ ಕೊಂಡೊಯ್ದು ಒಪ್ಪಿಸಿದ್ದಾಗಿ ಹೇಳಿದರು. ಅರ್ಧ ತಾಸಿನ ಬಳಿಕ ಆಕೆಯ ಪತಿಯೇ ಫೋನು ಮಾಡಿ, ಸಂಸ್ಥೆಯ ವಿಳಾಸವನ್ನೂ ಫೋನಂಕಿಯನ್ನೂ ಹಂಚಿಕೊಂಡರು.

ಸಂಸ್ಥೆಯ ಮುಖ್ಯಸ್ಥೆ ಪೂರ್ಣಿಮಾ ಅಂತೊಬ್ಬಾಕೆ, ಅಪರ್ಣಾ ಫೋನು ಮಾಡಿದಾಗ, ‘ವಯಸ್ಸಾದ ಅದರಲ್ಲೂ ಕುರುಡಾದ ನಾಯಿಯ ಬಗ್ಗೆ ಇಷ್ಟು ಆಸ್ಥೆ ಹೊಂದಿದ್ದೀರಲ್ಲ...' ಅಂತ ಇನ್ನಿಲ್ಲದ ಅಚ್ಚರಿಪಟ್ಟರಂತೆ! ಕೆಂಗೇರಿಯ ಹೊರವರ್ತುಲದಲ್ಲಿರುವ ಕೃಪಾ ಸಂಸ್ಥೆಯನ್ನು ತಲುಪಿದಾಗ ಹತ್ತೂ ಮುಕ್ಕಾಲಾಗಿತ್ತು. ಅದೊಂದು ಕಂಪೋಂಡಿರುವ ಬಯಲು ಪ್ರದೇಶ. ಗೇಟಿನಿಂದ ಕಣ್ಣು ಹಾಯಿಸಿದರೆ ಅಂತಿಂತಲ್ಲದ ಶ್ವಾನಸಾಮ್ರಾಜ್ಯ! ಎಲ್ಲೆಲ್ಲೂ ನಾಯಿಗಳೇ. ನಾವು ಕಾರು ನಿಲ್ಲಿಸಿದ್ದೇ ಎಲ್ಲವೂ ಒಂದೇ ಸಮ ಊಳಿಡತೊಡಗಿದವು. ನಿಮಿಷಗಳ ಬಳಿಕ ಅಲ್ಲಿನ ಕೇರ್ಟೇಕರ್ (ಅರವತ್ತು ತೀರಿದಾತ; ಹೆಸರು ಮರೆತೆ) ಬಂದು ವಿಚಾರಿಸಿ, ಏನು ಎತ್ತ ಕೇಳಿ ಕೆಂಪುವನ್ನು ತಂದೊಪ್ಪಿಸಿದರು. ಹೋದ ಜೀವ ವಾಪಸು ಬಂತು.

ಆತನಿಗೆ ಭಕ್ಷೀಸು ಕೊಡಲು ಗೇಟಿನಾಚೆಯಿಂದಲೇ ಕೈಮುಂದು ಮಾಡಿದರೆ, ಸುತರಾಂ ನಿರಾಕರಿಸಿಬಿಟ್ಟರು. ‘ಈ ವಯಸಿನಲ್ಲಿ ನಾನು ದುಡ್ಡಿಸಕೊಂಡು ಏನು ಮಾಡಲಿ?' ಅಂತ ವಿಚಿತ್ರವೆನಿಸುವ ಹಾಗೊಂದು ‘ಕನ್ನಡ'ದಲ್ಲಿ ಹೇಳಿದರು. ‘ಒಂದೇ ಒಂದು ಹೇಳುತೀನಿ... ಬಾಯಿರದ ಪ್ರಾಣಿಗಳು ದೇವರಿದ್ದ ಹಾಗೆ. ಚೆನ್ನಾಗಿ ನೋಡಿಕೊಳ್ಳಿ ಅಷ್ಟೆ...'

ಅದು ನಿಜಕ್ಕು ಮಾತು ಸೋತ ಗಳಿಗೆ! ಕಣ್ಣು ತೊಯ್ದ ಸಮಯ.

ನಿನ್ನೆ ನಮ್ಮ ಮನೆಯ ರಾತ್ರಿಯನ್ನು ಬೆಳಗಿದ- ಫೋನಿನಲ್ಲಿ ಕೇಳಿಸಿದ ಕಾಣದ ಆ ಮೂರು ಕೊರಳುಗಳಿಗೆ, ಎತ್ತರದ ಗೇಟಿನಾಚೆ ಕಂಡ ಆ ಉದಾತ್ತ ಹಿರಿಜೀವಕ್ಕೆ ಒಟ್ಟಾರೆ ನಮಸ್ಕಾರ.

ಇನ್ನು ಇಲ್ಲಿ ಫೇಸ್ಬುಕ್ಕಿನಲ್ಲಿ ನನಗೆ ಬೆಂಬಲವಾಗಿ ನಿಂತ, ಅದರಲ್ಲೂ ಕಂಡು ಗೊತ್ತಿರದ ಎಷ್ಟೆಲ್ಲ ಸಖಸಖಿಯರಿಗೂ ಧನ್ಯವಾದ.

ದೇವರಿರುವುದು ಸತ್ಯ ಮತ್ತು ದೇವರು ಅಸಂಖ್ಯಾತ. [ಭೈರ, ಕೆಂಚಿ ಹುಡುಕಲು ಒಂದು ಲಕ್ಷ ಖರ್ಚು]

English summary
Here is a story how Ace Architect, promising writer Nagaraj Vastarey got back his lost pet dog(Kempu Narayana). Nagaraj describes it as 'miraculous reunion' and Thanked his friends and well wishers who stood at the time of crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X