ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

16ನೆ ಲೋಕಸಭೆಗೆ ನಡೆಯಲಿದೆ ನಿರ್ಣಾಯಕ ಮತದಾನ!

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಕರ್ನಾಟಕ ಸೇರಿದಂತೆ ಇತರೆ 12 ರಾಜ್ಯಗಳಲ್ಲಿ 121 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಗುರುವಾರ ಮತದಾನ ನಡೆಯಲಿದೆ. 16ನೆಯ ಲೋಕಸಭೆಗಾಗಿ ಇದು ನಿರ್ಣಾಯಕವೂ ಹೌದು ಮಹತ್ವದ್ದೂ ಆಗಿದೆ. ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಮತದಾನವೂ ಇದಾಗಿದೆ.

ಮುಂಚಿನ 4 ಹಂತಗಳಲ್ಲಿ ಒಟ್ಟು 24 ರಾಜ್ಯಗಳ 110 ಸ್ಥಾನಗಳಿಗೆ ಮತದಾನ ನಡೆದಿದೆ. ಗುರುವಾರದ 5ನೇ ಹಂತದ ಮತದಾನದ ಬಳಿಕ ಇನ್ನೂ 4 ಹಂತಗಳಲ್ಲಿ 13 ರಾಜ್ಯಗಳ 311 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. (ಲೋಕಸಭಾ ಚುನಾವಣೆ ವಿವರವಾದ ವೇಳಾಪಟ್ಟಿ ಇಲ್ಲಿದೆ)

ನಾಳೆ ಮತ ಚಲಾಯಿಸುವವರು ಕೆಳಗಿನ ದಾಖಲೆಗಳ ಪೈಕಿ ಯಾವುದಾದರೊಂದು ಗುರುತಿನ ಚೀಟಿ ಹಾಜರುಪಡಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಕೆಳಗಿನ ಯಾವುದಾದರೊಂದು ಗುರುತಿನ ಚೀಟಿ ಇಲ್ಲದಿದ್ದರೆ ಅಂತಹವರಿಗೆ ಮತ ಹಾಕಲು ಅವಕಾಶ ನೀಡುವುದಿಲ್ಲ ಎಂದೂ ಆಯೋಗ ಸ್ಪಷ್ಟಪಡಿಸಿದೆ.

ಮತದಾರರು ತಮ್ಮ ಪಾಸ್‌ ಪೋರ್ಟ್ , ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ (ಪ್ಯಾನ್ ಕಾರ್ಡ್), ಸಾರ್ವಜನಿಕ ವಲಯದ ಬ್ಯಾಂಕ್, ಕಿಸಾನ್ ಕಾರ್ಡ್, ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ಯಮಿಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ನರೇಗಾ ಯೋಜನೆಯಡಿ ನೀಡಿರುವ ಉದ್ಯೋಗ ಕಾರ್ಡ್, ಪಿಂಚಣಿ ಪುಸ್ತಕ, ಆರೋಗ್ಯ ವಿಮಾ ಯೋಜನಾ ಸ್ಮಾರ್ಟ್ ಕಾರ್ಡ್, ಆಧಾರ್ ಕಾರ್ಡ್, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಕಾರ್ಡ್‌ ದಾಖಲೆಯನ್ನು ಹಾಜರುಪಡಿಸಬಹುದು.

ಪ್ರಸಕ್ತ ಲೋಕಸಭಾ ಚುನಾವಣೆಯ ಐದನೆ ಹಂತದ ಮತದಾನದಲ್ಲಿ 150 ದಶಲಕ್ಷ ಮತದಾರರು 1,762 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. * ಕರ್ನಾಟಕ ರಾಜ್ಯದ ಒಟ್ಟು ಮತದಾರರ ಸಂಖ್ಯೆ 4.62 ಕೋಟಿ. * ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿನ ಮತದಾರರ ಸಂಖ್ಯೆ 4.36 ಕೋಟಿ. * ಕಳೆದ ವಿಧಾನಸಭೆಗೆ ಹೋಲಿಸಿದರೆ ಮತದಾರರ ಸಂಖ್ಯೆಯಲ್ಲಿ ಈ ಬಾರಿ 25 ಲಕ್ಷ ಏರಿಕೆ.

2,35, 55,074 ಪುರುಷರು, 2,26,12,084 ಮಹಿಳೆಯರು, 3957 ಮಂದಿ ಇತರರು, ಸೇವಾನಿತರ 40,729 ಮತದಾರರು ಸೇರಿದಂತೆ ಒಟ್ಟು 4,62,11,844 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದು, ಘಟಾನುಘಟಿ ನಾಯಕರ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 'ಮೇಲಿನ ಅಭ್ಯರ್ಥಿಗಳ ಪೈಕಿ ಯಾರಿಗೂ ಮತವಿಲ್ಲ' (ನೋಟ) ಎಂಬ ನೂತನ ವ್ಯವಸ್ಥೆಯೂ ಜಾರಿಗೆ ಬಂದಿರುವುದು ಈ ಚುನಾವಣೆಯ ವಿಶೇಷವಾಗಿದೆ.

ಪ್ರಮುಖ ಪಕ್ಷಗಳ ಘಟಾನುಘಟಿ ನಾಯಕರ ಹಣೆಬರಹ:

India gets ready for 5th phase of polling on April 17

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಡಿವಿ ಸದಾನಂದಗೌಡ, ಕೇಂದ್ರ ಸಚಿವರಾದ ಎಂ ವೀರಪ್ಪ ಮೊಯ್ಲಿ, ಎಂ ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಜೆಡಿಎಸ್ ರಾಜ್ಯಾಧ್ಯಕ್ಷ ಎ ಕೃಷ್ಣಪ್ಪ, ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್ ಎನ್ ಅನಂತಕುಮಾರ್, ಇನ್ಫೋಸಿಸ್ ಮಾಜಿ ಮುಖ್ಯಸ್ಥ ನಂದನ್ ನಿಲೇಕಣಿ, ಮಾಜಿ ಸಚಿವರಾದ ಶ್ರೀರಾಮುಲು, ಶಿವನಗೌಡ ನಾಯಕ್, ಶೋಭಾ ಕರಂದ್ಲಾಜೆ, ಜನಾರ್ದನ ಪೂಜಾರಿ, ಎಸ್ಎಸ್ ಮಲ್ಲಿಕಾರ್ಜುನ್, ಗೂಳಿಹಟ್ಟಿ ಶೇಖರ್ ಮತ್ತು

ಇದೇ ಮೊದಲ ಬಾರಿಗೆ ಶಿವಮೊಗ್ಗದಿಂದ ಸ್ಪರ್ಧಿಸಿರುವ ಗೀತಾ ಶಿವರಾಜ್‌ಕುಮಾರ್, ನಂದಿನಿ ಆಳ್ವ, ಹಾಲಿ ಸಂಸದರಾದ ಪಿಸಿ ಮೋಹನ್, ಎಚ್ ವಿಶ್ವನಾಥ್, ಡಿಕೆ ಸುರೇಶ್, ರಮ್ಯಾ, ಜಿಎಸ್ ಬಸವರಾಜ್, ಜಯಪ್ರಕಾಶ್ ಹೆಗ್ಡೆ, ನಳಿನ್‌ ಕುಮಾರ್ ಕಟಿಲ್, ಅನಂತ್‌ ಕುಮಾರ್ ಹೆಗ್ಡೆ, ಪಿಸಿ ಗದ್ದಿಗೌಡರ್, ರಮೇಶ್ ಜಿಗಜಿಣಗಿ, ಶಿವಕುಮಾರ್ ಉದಾಸಿ, ಜಿಎಂ ಸಿದ್ದೇಶ್, ಪತ್ರಕರ್ತ ಪ್ರತಾಪ್ ಸಿಂಹ ಸೇರಿದಂತೆ ಅನೇಕರ ಹಣೆಬರಹವನ್ನು ಮತದಾರ ನಾಳೆ ತೀರ್ಮಾನಿಸಲಿದ್ದಾನೆ.

ದೇಶದ ಗಮನ ಸೆಳೆದಿರುವ ಶಿವಮೊಗ್ಗ, ಚಿಕ್ಕಬಳ್ಳಾಪುರ, ಹಾಸನ, ಗುಲ್ಬರ್ಗ, ಬೆಂಗಳೂರು ದಕ್ಷಿಣ, ದಕ್ಷಿಣ ಕನ್ನಡ, ಮೈಸೂರು, ದಾವಣಗೆರೆ, ಬೆಂಗಳೂರು ಉತ್ತರ ಸೇರಿದಂತೆ ಬಹುತೇಕ 28 ಕ್ಷೇತ್ರಗಳಲ್ಲೂ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಇಂದು ಅಭ್ಯರ್ಥಿಗಳು, ಮುಖಂಡರುಗಳು, ಕಾರ್ಯಕರ್ತರು ಕೆಲವು ಕಡೆ ಮನೆ ಮನೆಗೆ ತೆರಳಿ ಅಂತಿಮವಾಗಿ ಮತಯಾಚಿಸಿದರು.

English summary
Lok Sabha Election 2014: India gets ready for 5th phase of polling on April 17. The fifth phase of the sixteenth Lok Sabha election is set to be held on Thursday, April 17. This will be the biggest phase in terms of constituencies. One-hundred and twenty-one constituencies will in 12 states will go to the polling in this phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X