ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ರಾಷ್ಟ್ರೀಯ ಗ್ರಾಹಕ ದಿನ" ಮತ್ತು ಕನ್ನಡಿಗ ಗ್ರಾಹಕರು

By ಅನ್ನದಾನೇಶ ಶಿ ಸಂಕದಾಳ
|
Google Oneindia Kannada News

1986 ರ ಡಿಸೆಂಬರ್ 24 ರಂದು 'ಗ್ರಾಹಕರ ಹಿತರಕ್ಷಣೆ/ಗ್ರಾಹಕರ ರಕ್ಷಣೆ ಕಾಯಿದೆ(ಕನ್ಸ್ಯುಮರ್ ಪ್ರೊಟೆಕ್ಷನ್ ಆಕ್ಟ್ ) ಯನ್ನು ಭಾರತದಲ್ಲಿ ಮಾಡಲಾಯಿತು. ಆದರಿಂದ ನಮ್ಮ ದೇಶದಲ್ಲಿ ಡಿಸೆಂಬರ್ 24 ನ್ನು "ರಾಷ್ಟ್ರೀಯ ಗ್ರಾಹಕ ದಿನ"ವಾಗಿ ಆಚರಿಸಲಾಗುತ್ತದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಮಾರುವವರಿಂದ ಕೊಳ್ಳುಗನು ಒಳಗಾಗಬಹುದಾದ ಶೋಷಣೆಯನ್ನು ತಪ್ಪಿಸಲು ವಿಶ್ವ ಸಂಸ್ಥೆಯ ಮಾರ್ಗಸೂಚಿಗಳ ಆಧಾರದ ಮೇಲೆ ಈ ಕಾಯಿದೆಯನ್ನು ಮಾಡಲಾಯಿತು.ಖಾಸಗಿ ವಲಯ, ಸರ್ಕಾರಿ ವಲಯ ಎನ್ನುವ ಭೇದವಿಲ್ಲದೆ, ತಾನು ಪಡೆಯುವ ಸೇವೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾಯಿದೆಯು ಗ್ರಾಹಕನಲ್ಲಿ ಹೆಚ್ಚು ಕಸುವು ತುಂಬುತ್ತದೆ.

'ಗ್ರಾಹಕ' ಅನ್ನುವ ಪದದ ವಿವರಣೆಯಿಂದ ಹಿಡಿದು ಗ್ರಾಹಕನಿಗಿರುವ ಹಕ್ಕುಗಳ ಬಗ್ಗೆ ಈ ಕಾಯಿದೆಯಲ್ಲಿ ವಿಸ್ತಾರವಾಗಿ ತಿಳಿಸಲಾಗಿದೆ. ಯಾವುದೇ ಒಂದು ಸರಕನ್ನು ಅಥವಾ ಸೇವೆಯನ್ನು ದುಡ್ಡು ಕೊಟ್ಟು ( ಮಾರುವವನು ಒಪ್ಪಿದಲ್ಲಿ ಹಣವನ್ನು ತಡವಾಗಿ ಪಾವತಿಸಿದರೂ ಸರಿ ) ಪಡೆಯುವವನು ಗ್ರಾಹಕನೆನಿಸಿಕೊಳ್ಳುತ್ತಾನೆ. ಹಾಗೆ ಒಬ್ಬ ಗ್ರಾಹಕನು ದುಡ್ಡು ಕೊಟ್ಟು ಪಡೆದ ಸೇವೆ ಅಥವಾ ಸರಕನ್ನು ಆ ಗ್ರಾಹಕನ ಒಪ್ಪಿಗೆ ಪಡೆದು ಬಳಸುವವರೂ ಗ್ರಾಹಕರಾಗುತ್ತಾರೆ ( ಹಣ ಕೊಡದೆ ಇದ್ದರೂ ).

ಉದಾ : ಒಂದು ಮನೆಗೆ ಟಿ ವಿ ಯನ್ನು ಒಬ್ಬ ಹಣ ಕೊಟ್ಟು ತರುತ್ತಾನೆ. ಮನೆ ಮಂದಿಯೆಲ್ಲ ಆ ಟಿವಿ ಯನ್ನು ಬಳಸುತ್ತಾರೆ. ದುಡ್ಡು ಕೊಟ್ಟವನು ಮತ್ತು ದುಡ್ಡು ಕೊಡದೆ ಟಿ ವಿ ಬಳಸುವ ಮಂದಿ - ಎಲ್ಲರೂ "ಗ್ರಾಹಕರು" ಎಂದು ಈ ಕಾಯ್ದೆ ಹೇಳುತ್ತದೆ. ಹಾಗೆ, ಗ್ರಾಹನಿಕರಿಗುವ ಹಕ್ಕುಗಳ ವಿಷಯದ ಬಗ್ಗೆ ಬಂದಾಗ - ಸುರಕ್ಷತೆಯ ಹಕ್ಕು, ಮಾಹಿತಿ ಹಕ್ಕು, ಆಯ್ಕೆಯ ಹಕ್ಕು, ಸಮಸ್ಯೆಯನ್ನು ತಿಳಿಸುವ ಹಕ್ಕು, ಸಮಸ್ಯೆಗೆ ಪರಿಹಾರ ಪಡೆಯುವ ಹಕ್ಕು ಮತ್ತು ಗ್ರಾಹಕ ಸೇವೆ ಬಗ್ಗೆ ಹೆಚ್ಚು ಜ್ಞಾನವನ್ನು ಪಡೆಯುವ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ.

ಕಾಯಿದೆಯಲ್ಲಿ ಪ್ರಸ್ತಾಪಿಸಿರುವ ಮಾಹಿತಿ ಹಕ್ಕನ್ನು ಸ್ವಲ್ಪ ವಿವರವಾಗಿ ನೋಡಿದಾಗ ಅದು ಹೀಗೆ ಹೇಳುತ್ತದೆ : "ಗ್ರಾಹಕನು ತಾನು ಕೊಳ್ಳುವ ಸರಕಿನ ಅಥವ ಪಡೆಯುವ ಸೇವೆ ಬಗ್ಗೆ ಮೋಸ ಹೋಗದಿರಲು - ವಸ್ತುವಿನ ಅಥವಾ ಸೇವೆಯ ಗುಣಮಟ್ಟ, ಪ್ರಮಾಣ, ಸಾಮರ್ಥ್ಯ, ಶುದ್ಧತೆ, ಮಾನದಂಡ ಮತ್ತು ಮೌಲ್ಯ, ಇವೆಲ್ಲದರ ಬಗ್ಗೆ ಮಾಹಿತಿ ಹೊಂದುವ ಹಕ್ಕನ್ನು ಹೊಂದಿರುತ್ತಾನೆ".

ಕನ್ನಡಿಗ ಗ್ರಾಹಕರ ಇಂದಿನ ಸ್ಥಿತಿ: "ವ್ಯಾಪಾರದಲ್ಲಿ ಗ್ರಾಹಕನ ರಕ್ಷಣೆ" ಎಂದೊಡನೆ ಉತ್ಪನ್ನದ ತೂಕ-ಅಳತೆಯಲ್ಲಿ ಏರು-ಪೇರು ಆಗುವ ಬಗ್ಗೆ ಅಥವಾ ಕೊಂಡ ವಸ್ತುವಿಗೆ/ಪಡೆದ ಸೇವೆಗೆ ನಿಗದಿ ಪಡಿಸಿದಕ್ಕಿಂತ ಹೆಚ್ಚಿನ ಹಣ ಕೊಡುವುದರ ಬಗ್ಗೆ ಯೋಚಿಸುವುದು ಹೆಚ್ಚು. ಆದರೆ ತೂಕ-ಅಳತೆ-ದರ ಎಷ್ಟು ಮುಖ್ಯವೋ, ವಸ್ತುವಿನ ಅಥವಾ ಸೇವೆಯ ಬಗ್ಗೆ ನೀಡಬೇಕಾದ ಮಾಹಿತಿ ಜನರ ನುಡಿಯಲ್ಲಿ ಇರುವುದು ಕೂಡ ಅಷ್ಟೇ ಮುಖ್ಯ. ಭಾರತದಲ್ಲಿ ಹೆಚ್ಚಾಗಿ ಗ್ರಾಹಕ ಸೇವೆಗಳು ಮತ್ತು ಉತ್ಪನ್ನದ ಬಗ್ಗೆ ಮಾಹಿತಿಗಳು(ಸರ್ಕಾರಿ ಆಗಿರಲಿ ಅಥವಾ ಖಾಸಗಿ ಆಗಿರಲಿ), ಇಂಗ್ಲೀಶ್ ಹಿಂದಿಯಲ್ಲಿ ಮಾತ್ರ ಸಿಗುತ್ತಿದ್ದು ಆಯಾ ರಾಜ್ಯಗಳ ನುಡಿಯಲ್ಲಿ ಸಿಗದೇ ಇರುವುದು ಸತ್ಯ.

ನಮ್ಮ ರಾಜ್ಯದ ಮಟ್ಟಿಗೆ ಹೇಳಬೇಕೆಂದರೆ, ಈ ಸಂಗತಿಗಳನ್ನು ಗಮನಿಸಿ : ಔಷಧಿಗಳ ಮೇಲೆ ಮಾಹಿತಿಯು ಇಂಗ್ಲೀಷಿನಲ್ಲಿ ಇರುತ್ತದೆ, ಕನ್ನಡದಲ್ಲಿ ಇರುವುದಿಲ್ಲ - ಅಡುಗೆ ಅನಿಲದ ಸಿಲಿಂಡರ್ ಮೇಲೆ ಭದ್ರತೆ ಸೂಚನೆಗಳು ಇಂಗ್ಲೀಶ್-ಹಿಂದಿಯಲ್ಲಿ ಮಾತ್ರ ಕನ್ನಡದಲ್ಲಿಲ್ಲ, ಬ್ಯಾಂಕುಗಳಲ್ಲಿ ಅರ್ಜಿಗಳು-ಚಲನ್ಗಳು-ಚೆಕ್ಕುಗಳು-ಪಾಸ್ ಬುಕ್ ಗಳು ಇವೆಲ್ಲ ಇಂಗ್ಲೀಶ್-ಹಿಂದಿಯಲ್ಲಿ, ಮನೆ ಬಳಕೆಗೆಂದು ತರುವ ಸಾಧನಗಳ (ಟಿ ವಿ, ಫ್ರಿಡ್ಜ್, ಕುಕರ್ ಇತ್ಯಾದಿ) ಬಳಕೆದಾರರ ಕೈಪಿಡಿಗಳು ಕನ್ನಡದಲ್ಲಿಲ್ಲ, ರೈಲುಗಳಲ್ಲಿ ಸುರಕ್ಷತೆ ಬಗ್ಗೆ ಮಾಹಿತಿ ಕನ್ನಡದಲ್ಲಿಲ್ಲ.

ಹೀಗೆ ' ಕನ್ನಡದಲ್ಲಿ ಇಲ್ಲ' ಗಳನ್ನು ಪಟ್ಟಿ ಮಾಡುತ್ತ ಹೋದರೆ ಕೊನೆಯೇ ಇಲ್ಲ, ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ದುಡ್ಡು ಕೊಡುವ ಗ್ರಾಹಕ, ಸೇವೆಗಾಗಿ ಬೇರೆ ನುಡಿಯನ್ನು ಅವಲಂಬಿಸಬೇಕಾಗುವಂತೆ ಆಗಿರುವುದು ವಿಪರ್ಯಾಸ. ಗ್ರಾಮಾಂತರ ಪ್ರದೇಶಗಳಲ್ಲಿರುವ ಜನರ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ ಅಲ್ಲವೇ? ಗ್ರಾಹಕರಿಗೆ ತಿಳಿದಿಲ್ಲದ ನುಡಿಯಲ್ಲಿ ನೀಡುವ ಸೇವೆ/ಮಾಹಿತಿ ಯಿಂದ ಆಗುವ ಅನಾಹುತಗಳು ಕಡಿಮೆ ಏನಿಲ್ಲ(ಅದರಲ್ಲೂ ಸುರಕ್ಷತೆಯ ಸೂಚನೆಗಳು). ಮೇಲೆ ತಿಳಿಸಿದ ಸಮಸ್ಯೆಗಳು, ಕಾಯ್ದೆಯಲ್ಲಿ ತಿಳಿಸಿರುವ ಗ್ರಾಹಕನಿಗಿರುವ ಮಾಹಿತಿ ಮತ್ತು ಸುರಕ್ಷತೆ ಹಕ್ಕಿನ ಉಲ್ಲಂಘನೆ ಆಗುತ್ತದೆಯಲ್ಲಾ ಅಂತ ಅನಿಸಿದರೂ ಆಶ್ಚರ್ಯವಿಲ್ಲ!

Kannada consumers

ಗ್ರಾಹಕನ ಪಾತ್ರ: ವಸ್ತುಸ್ಥಿತಿ ಹೀಗಿರುವಾಗ ಗ್ರಾಹಕನು ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವುದು ಹೇಗೆ ಎಂಬ ಯೋಚನೆ ಸಹಜ. ಸೇವೆಗಳಲ್ಲಿ ಕನ್ನಡವಿಲ್ಲದೆ ತೊಂದರೆಗೆ ಒಳಗಾಗುತ್ತಿದ್ದರೂ ಅದನ್ನು ಪ್ರಶ್ನೆ ಮಾಡಿ ಸರಿಪಡಿಸದೇ ಇದ್ದರೆ ಸೇವೆ ಕೊಡುವವರೂ ಕನ್ನಡವನ್ನು ಬಳಸುವುದಿಲ್ಲ. ಗ್ರಾಹಕ ಸೇವೆಗಳಲ್ಲಿ ಹೆಚ್ಚು ಹೆಚ್ಚು ಕನ್ನಡವನ್ನು ಬಳಸುತ್ತಿದ್ದರೆ ಸೇವೆಯಲ್ಲಿನ ತೊಡಕುಗಳನ್ನು ಸರಿ ಪಡಿಸಬಹುದಲ್ಲದೆ ಕನ್ನಡಕ್ಕೆ ಹೆಚ್ಚಿನ "ಆರ್ಥಿಕ ಶಕ್ತಿ" ಯನ್ನು ತುಂಬಬಹುದು.

ಕನ್ನಡದಲ್ಲಿ ಸೇವೆಗೆ ಬೇಡಿಕೆ ಇಟ್ಟರೆ ಅಪಾರ ಕನ್ನಡಿಗರಿಗೂ ಕೆಲಸ ಸಿಗುವ ಸಾಧ್ಯತೆಯನ್ನೂ ನಾವು ಮನಗಾಣಬೇಕು. ಮಾರುಕಟ್ಟೆಯಲ್ಲಿ "ದುಡ್ಡು ಕೊಟ್ಟು ಸೇವೆಯನ್ನು ಪಡೆಯುವ ಗ್ರಾಹಕ"ನೇ ದೊರೆ.ಗ್ರಾಹಕ ಶಕ್ತಿ ಎನ್ನವುದು ತುಂಬಾ ಬಲಿಷ್ಟವಾದುದು. ಗ್ರಾಹಕರೆಲ್ಲರೂ ಒಟ್ಟಾಗಿ ಕನ್ನಡದಲ್ಲಿ ಮಾಹಿತಿ ಅಥವಾ ಸೇವೆಯನ್ನು ಪಡೆಯುವುದರ ಬಗ್ಗೆ ಸತತವಾಗಿ ಒತ್ತಡ ಹೇರುತ್ತಿರಬೇಕು. "ಕನ್ನಡದ ಮಾರುಕಟ್ಟೆ" ಯ ಬಗ್ಗೆ ಒಬ್ಬರಿಗೆ ಅರಿವಾದರೆ ಉಳಿದವರು ಬದಲಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ, ಆಗಬೇಕಿರುವ ಬದಲಾವಣೆ ಬೇಗನೆ ಆಗುತ್ತದೆ.. ಏನಂತೀರಿ?

English summary
National Consumer Rights Day' is celebrated on December 24 every year, the day on which Consumer Protection Act 1986 was enacted by Parliament. Consumer Protection Act is designed to protect consumer rights to ensure fair competition and free flow of truthful information in the market place. But Kannada consumers ignored by many Malls reports Annadaneshi Sankadala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X