ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟ್ಕೊಂಡಿರುವವಳು ಕಡೇ ತನಕ, ಕಟ್ಕೊಂಡಿರುವವಳು ಇರೋ ತನಕ

By ವಸಂತ್ ಕುಮಾರ್, ಮೈಸೂರು
|
Google Oneindia Kannada News

ಇದೆಂಥಾ ತಿರುಗು ಮುರುಗಾಗಿರುವ ಗಾದೆ ಮಾತು ಅಂತೀರಾ? ಇಲ್ಲ, ಇದೊಂದು ದಾರುಣ ಸತ್ಯ. ನಮ್ಮ ಕನ್ನಡ ನಾಡಿನಲ್ಲಿ ನಡೆಯುತ್ತಿರುವ ಭಯಾನಕ ಘಟನೆ. ತಮ್ಮ ತಾಯಿನುಡಿಯನ್ನೇ ಮರೆತು ಪರ ದೇಶದ ಭಾಷೆಗೆ ತುಂಡು ಲಂಗದ ಆಕಾರ ಕೊಟ್ಟು, ಶೃಂಗರಿಸಿ ಹೆಗಲ ಮೇಲೆ ಎತ್ತಿಕೊಂಡು ರಾರಾಜಿಸುತ್ತಿರುವ ನಮ್ಮ ಇಂದಿನ ಪೀಳಿಗೆಯ ಪಂಪ ರನ್ನರು, ಎಚ್ಚೆಮ ನಾಯಕರು, ಸಂಗೊಳ್ಳಿ ರಾಯಣ್ಣಂದಿರು, ಕುವೆಂಪು, ಬೇಂದ್ರೆ ಮುಂತಾದ ಮಹಾ ಮಹಾ ಅತಿರಥ ಮಹಾರಥರಾದ ಕನ್ನಡದ ಕಂದಮ್ಮಗಳು ಅನುಸರಿಸುತ್ತಿರುವ ಹೇಯ ಕೃತ್ಯ. ಹೌದು, ಇದು ಸತ್ಯ ಕಥೆ. ಕೇಳಿ:

ಶ್ರೀಗಂಧದ ಮರದ ಸದೃಢ ಕಾಂಡದಿಂದ ಕಡೆದು, ತಿದ್ದಿ, ಆಕಾರ ಕೊಟ್ಟು ಅವಳನ್ನು ಅಪ್ರತಿಮ ಸುಂದರಿ ಸಿಂಗಾರಿ ಎಂದು ಕರೆದು ಶಕ್ತಿ ಸ್ಥಾನಕ್ಕೆ ಮೆರಗುಕೊಡುವಂತೆ ಅಲಂಕರಿಸಿ, ಮೈಸೂರು ಮಲ್ಲಿಗೆ, ಕನಕಾಂಬರದ ಹೂವುಗಳಿಂದ ಸಿಂಗರಿಸಿ, ಅರಿಶಿನ ಕುಂಕುಮ ಶೋಭಿತೆಯನ್ನಾಗಿಸಿ, ಅವಳನ್ನು ನಮ್ಮ ಸಾವಿರಾರು ವರ್ಷಗಳ ಹಿರಿಮೆವೆತ್ತ ಭಾಷೆ, ಸೊಗಡು, ಸಂಸ್ಕೃತಿ, ಇತಿಹಾಸಗಳಲ್ಲಿ ಅವಳನ್ನು ಸಂಸ್ಕರಿಸಿ.... (ಸ್ವಲ್ಪ ಉಸಿರು ತೆಗೆದುಕೊಳ್ಳಿ) ಸುಂದರ ಯುವತಿಯನ್ನಾಗಿಸಿ ಇವಳನ್ನು ನಿನ್ನ ಹೃದಯದಲ್ಲಿ ಆರಾಧ್ಯ ದೇವತೆಯನ್ನಾಗಿಸಿಕೊಂಡು ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ಎತ್ತಿ ತೋರುವಂತೆ ಮೆರೆಯಿಸು ಎಂದು (ಇನ್ನೂ ಸ್ವಲ್ಪ ಉಸಿರು ತೆಗೆದುಕೊಳ್ಳಿ) ಅವಳನ್ನು ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಹತ್ತೂ ಹಿರಿಯರ ಮುಂದೆ ಸಿಂಗರಿಸಿದ ಕಲ್ಯಾಣ ಮಂಟಪದಲ್ಲಿ ರಾರಾಜಿಸುವಂತೆ ಹಸೆಮಣೆಯ ಮೇಲೆ ಕೂಡಿಸಿ, ನಿನ್ನನ್ನು ಗಂಡುಗಲಿ ರಾಮನಂತೆ ಎಂದು ತಿಳಿದು ನಿನ್ನನ್ನೂ ಸಿಂಗರಿಸಿ ಅಲಂಕರಿಸಿ ಅವಳ ಕೈ ಹಿಡಿಸಿ, ಅವಳನ್ನು ಕಾಪಾಡು ಹೃದಯ ಶಿವ ಎಂದು ಕೇಳಿಕೊಂಡು ಅವಳನ್ನು ನಿನ್ನೊಡನೆ ಕಳುಹಿಸಿಕೊಟ್ಟ ನಮಗೆ ನೀನು ಕೊಟ್ಟ ಮುಯ್ಯಿ ಇದೇನಾ?

Let's not just marry, let's hold on to marriage also

ಎಲ್ಲಿಂದಲೋ ಬಂದ ತನ್ನದೇ ಆದ ಅರಿವು, ಹಿರಿಮೆ, ಸಂಸ್ಕೃತಿ ಇಲ್ಲದ ಮತ್ತು ಸಂಸ್ಕರಣೆ ಇಲ್ಲದ ಅನ್ಯ ಭಾಷೆಯ ಸುಂದರಿಯ ಮೋಹದ ಜಾಲಕ್ಕೆ ಸಿಕ್ಕು, ಅವಳ ತುಂಡು ಲಂಗಕ್ಕೆ ಮಾರು ಹೋಗಿ, ಅವಳನ್ನು ಕೈ ಹಿಡಿದು, ಸೊಂಟ ಬಳಸಿ, ಅವಳ ಹೆಜ್ಜೆಗೆ ನಿನ್ನ ಹೆಜ್ಜೆ ಹಾಕಿ, ಅವಳನ್ನು ಹೆಗಲ ಮೇಲೂ ಕೊರಿಸಿಕೊಂಡು, ಮನೆಯೊಳಗೂ ಸೇರಿಸಿ, ಅವಳ ಹಾಡುವ ಹಾಡಿಗೆ ನಿನ್ನ ಧನಿಗೂಡಿಸಿ, ದೇವರ ಮನೆಯೊಳಗೂ ಕರೆದುಕೊಂಡು ಹೋಗಿ, ಅವಳನ್ನು ತಾಳಿ ಕಟ್ಟಿದ ಕನ್ನಡಿತಿಗಿಂತಾ ಜಾಸ್ತಿ ಮರ್ಯಾದೆಯನ್ನು ಕೊಟ್ಟು, ಮಕ್ಕಳು ಮರಿಗಳಿಗೂ ಪರಿಚಯಿಸಿ ಅವರುಗಳ ನಾಲಿಗೆಗಳ ಮೇಲೆ ಅವಳ ಭಾಷೆಯೇ ಹರಿದಾಡುವುದನ್ನು ನೋಡಿ ಆನಂದ ಪಡುತ್ತಿರುವ ಕನ್ನಡದ ಇಂದಿನ ತುಂಡು ನಾಯಕರುಗಳೇ....

ನಿಮಗೆ ಕಟ್ಕೊಂಡಿರುವವಳಿಗಿಂತಾ ಇಟ್ಕೊಂಡಿರುವವಳು ಹೆಚ್ಚಾದ್ಳಾ? ಎಂಥ ವಿಪರ್ಯಾಸ? ಏಕೆ ಹೀಗಾಯ್ತೋ? ಇದನ್ನು ನೆನಿಸಿಕೊಂಡು ನಮ್ಮ ಕನ್ನಡತಿಯು ಮೂಲೆ ಸೇರಿ, ನೊಂದು, ಬೆಂದು, ದಿನ ನಿತ್ಯ ಬಿಕ್ಕಳಿಸಿ ಅಳುತ್ತಿರುವುದನ್ನು ಕಂಡರೆ ನಮ್ಮ ಎದೆಯಲ್ಲಿ ಬೆಂಕಿ ಉರಿದಂತಾಗುವುದಿಲ್ಲವೇ?

ಯೋಚನೆ ಮಾಡು ಕನ್ನಡದ ಕಂಡ. ಸಾಕು ನಿನ್ನ ಈ ಅರಿವುಗೆಟ್ಟ, ನೀತಿಇಲ್ಲದ ಅವತಾರ. ಸಾಕು ಮಾಡು ಇನ್ನಾದರೂ ನಿನ್ನ ಅತ್ಯಾಚಾರ. ನಿಲ್ಲಿಸು ಈ ಅನಾಚಾರ. ಆ ಕಟ್ಟಿಕೊಂಡಿರುವವಳಿಗೆ ನೇರವಾಗಿ ಹೇಳು - ಸಾಕು ಮಹರಾಯಿತಿ, ನಮ್ಮ ಹಿರೀಕರೂ ಮಾಡಿರುವ ತಪ್ಪನ್ನು ತಿದ್ದುವ ಕಾಲ ಬಂದಿದೆ, ನಿನ್ನ ಆಟಾಟೋಪಗಳು ಸಾಕು, ನಿನ್ನನ್ನು ಒಂದೇ ಸಾರಿ ಹೊರಟು ಹೋಗು ಎನ್ನುವ ಧೈರ್ಯ ನಮ್ಮಲ್ಲಿ ಇನ್ನೂ ಮೂಡಿಲ್ಲ, ಇರು ಇನ್ನೂ ಸ್ವಲ್ಪ ದಿನಗಳು ಇರು, ನಮ್ಮ ನಾಲಿಗೆಗಳ ಮೇಲೆ ನಮ್ಮ ಸುಂದರ ಕನ್ನಡ ಭಾಷೆ ಹಾಸು ಹೊಕ್ಕಾಗಿ ನಲಿದಾಡುವವರೆಗೆ ಮತ್ತು ಮುಕ್ಕೋಟಿ ಕನ್ನಡಿಗರಿಗೆ ಅರಿವು ಮೂಡುವವರೆಗೆ, ಇರು, ಹೊಸ್ತಿಲವರೆಗೆ ಬಾ, ಆದರೆ ಒಳಗೆ ಬಂದು ನಮ್ಮ ಅಂಗಳದಲ್ಲಿ ಮೆರೆಯಲು ಬರಬೇಡ, ಸಾಕು ನಿನ್ನ ಸಹವಾಸ ಆದರೂ ಇರು, ಇನ್ನೂ ಸ್ವಲ್ಪ ದಿನ ಇರು.

ಮೂಲೆಗುಂಪಾಗಿ ಮುದುಡಿ ಮಲಗಿರುವ ಕನ್ನಡತಿಯನ್ನು ಕೈ ಹಿಡಿದು ಎತ್ತಿ, ಅಪ್ಪಿ, ಮುದ್ದಾಡಿ, ಅವಳ ಕಣ್ಣೀರು ಒರೆಸಿ, ಅವಳ ಮುಖದಲ್ಲಿ ಮಂದಹಾಸ ತರಿಸಿ, ಅವಳನ್ನು ಪುನಃ ಸಿಂಗರಿಸಿ, ಮಲ್ಲಿಗೆ, ಕನಕಾಂಬರಗಳನ್ನು ಮುಡಿಸಿ, ಸುಗಂಧಗಳಿಂದ ಲೇಪಿಸಿ, ಅವಳ ಹಾಲುಗೆನ್ನೆಗಳಿಗೆ ಅರಿಶಿನ ಲೇಪಿಸಿ, ಹಣೆಯ ಮೇಲೆ ಕಾಸಗಲ ಕುಂಕುಮವನ್ನು ಇಟ್ಟು, ಮೈಸೂರು ರೇಷ್ಮೆಯ ಜರತಾರಿ ಸೀರೆಯನ್ನು ಉಡಿಸಿ, ಹುಬ್ಬಳ್ಳಿಯ ಕುಪ್ಪುಸ ತೊಡಿಸಿ, ಚಿನ್ನದ ಡಾಬು, ಕಾಲಂದಿಗೆ, ಕೈ ಬಳೆ, ಕಾಲುಂಗುರಗಳಿಂದ ಅಲಂಕರಿಸಿ, ಕೈ ಹಿಡಿದು ವಿಜಯ ನಗರದ ರಾಜ ಬೀದಿಗಳಲಿ, ಮೈಸೂರಿನ ಅರಮನೆಗಳ ಬೀದಿಗಳಲ್ಲಿ ಸಂಭ್ರಮದಿಂದ ಅವಳನ್ನು ರಾರಾಜಿಸುವ ಸುಂದರ ದೃಶ್ಯವನ್ನು ನಮ್ಮಂತ ಹಿರಿಯರು ನೋಡಿ, ಕಿರಿಯರು ಅನುಕರಿಸುವ ಮಾದರಿಯ ಪ್ರಕ್ರಿಯೆಯನ್ನು ಹಮ್ಮಿಕೊ. ಕನ್ನಡದ ಹಿರಿಮೆಯು ವಿಶ್ವದಲ್ಲಿ ಮೆರೆಯುವಂತೆ ಮಾಡು. ಇನ್ನು ಮುಂದಾದರೂ ಕನ್ನಡ ಭಾಷೆಗೆ ಆದ್ಯತೆ ಕೊಟ್ಟು ನಮ್ಮ ನಮ್ಮ ಮನೆಗಳೊಳಗೆ ಅಚ್ಚ ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನು ಮಾತನಾಡುವುದಿಲ್ಲ ಎನ್ನುವ ಶಪಥ ಮಾಡು. ನಮ್ಮ ಕನ್ನಡ ಭಾಷೆಯ ಉಳಿವಿನ ಪ್ರಕ್ರಿಯೆನ್ನು ಹಮ್ಮಿಕೊಳ್ಳೋಣ, ಕನ್ನಡದ ಕಂದಮ್ಮಗಳಿರಾ.

English summary
Let's not just marry Kannada, but let's hold on to the marriage too. This is the message sent by Oneindia reader Vasanth Kumar from Mysore on the occasion of 58th Kannada Rajyotsava. We are unnecessarily pampering other languages at the cost of Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X