ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕ್ಕ'ನ ಮನೆಗೆ ಹೊರಟ ಪುಟ್ಟಮಲ್ಲಿ ಉಮಾಶ್ರೀ

By Rajendra
|
Google Oneindia Kannada News

ಕನ್ನಡ ಚಿತ್ರರಂಗದ ಅತ್ಯಂತ ಕ್ರಿಯಾಶೀಲ ನಟಿ, ರಂಗ ಕಲಾವಿದೆ ಶ್ರೀಮತಿ ಉಮಾಶ್ರೀ (57) ಅವರ ಪಾತ್ರಗಳ ಬಗ್ಗೆ ಪರಿಚಯ ಅಗತ್ಯವಿಲ್ಲ. ಅದು ಯಾವುದೇ ಪಾತ್ರವಾಗಿರಲಿ ಭಾವುಕತೆ, ಹಾವ ಭಾವ, ಅಭಿವ್ಯಕ್ತಿಯಲ್ಲಿ ಅವರ ಸಮಕಾಲೀನರ ಸಮಕ್ಕೆ ನಿಲ್ಲುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯ.

ರಂಗಭೂಮಿಯ ತಾಜಾ ಪ್ರತಿಭೆಯಾದ ಕಾರಣ ಸಿನಿಮಾ ಅಭಿನಯ ಅವರ ಪಾಲಿಗೆ ಸಿಹಿನೀರು ಮೊಗೆದು ಕುಡಿದಷ್ಟೇ ಸಲೀಸು. ಆದರೆ ಬಣ್ಣದ ಜಗತ್ತಿನಷ್ಟು ಕಲರ್ ಫುಲ್ ಆಗಿರಲಿಲ್ಲ ಅವರ ಆರಂಭದ ದಿನಗಳು. ಸಾಕಷ್ಟು ಕಷ್ಟ ಕೋಟಲೆಗಳಲ್ಲಿ ಬೆಳೆದು ಬಂದವರು. [ವಿಶ್ವಕನ್ನಡ ಸಮ್ಮೇಳನ]

Actress Umashree
'ಅನುಭವ'ದಿಂದ ಸಿನಿಮಾ ಅನುಭವಗಳನ್ನು ಶುರುಮಾಡಿ, ಕನ್ನಡದ ಪುಟ್ಟಮಲ್ಲಿಯಾಗಿ ಕುಣಿದು ಪ್ರೇಕ್ಷಕರ ತನುಮನದಲ್ಲಿ ಚಿರವಾಗಿ ನೆಲೆನಿಂತ ಅಭಿನೇತ್ರಿ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು.

ಉಮಾಶ್ರೀ ಅವರು ಮೇ 10, 1957ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಬಡತನದ ಬವಣೆಯಲ್ಲಿ ಬೆಳೆದು ಬಂದ ಉಮಾಶ್ರೀ ಅವರು ಬಳಿಕ ಸಿರಿವಂತ ಕಲಾವಿದೆಯಾಗಿ, ರಂಗಕರ್ಮಿ, ಸಮಾಜ ಸೇವಾಕರ್ತೆ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡವರು.

ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಾ, "ತಾನು ನಾಟಕಕ್ಕೆ ಬಂದದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆ ಎಂಬ ಕಾರಣಕ್ಕೆ" ಎಂದು ಮುದ್ದಾಗಿ ಹೇಳಿ ಎಲ್ಲರನ್ನು ಚಕಿತಗೊಳಿಸಿದ್ದರು.

ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಕಷ್ಟಪಟ್ಟು ದುಡಿದು ತಮ್ಮಿಬ್ಬರು ಮಕ್ಕಳನ್ನು ಉತ್ತಮ ವಿದ್ಯಾವಂತರಾಗಿಸಿರುವ ಉಮಾಶ್ರೀ ತಮ್ಮ ಬದುಕಿನ ಜವಾಬ್ದಾರಿಗಳನ್ನು ಕೂಡಾ ಸಮರ್ಥವಾಗಿ ಪೂರೈಸಿದ್ದಾರೆ. ಬದುಕಿಗಾಗಿ ಕಲೆಯನ್ನು ಅನಿವಾರ್ಯವಾಗಿ ಅಪ್ಪಿಕೊಂಡ ಉಮಾಶ್ರೀ ಅದಕ್ಕೆ ತೋರಿದ ನಿಷ್ಠೆ ಮಾತ್ರ ಅನನ್ಯವಾದದ್ದು.

ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದಾಕೆ ಉಮಾಶ್ರೀ. ಅವರ ಒಡಲಾಳ ನಾಟಕದ ಸಾಕವ್ವನ ಅಭಿನಯ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು.

'ಅನುಭವ' (1984) ಚಿತ್ರದಲ್ಲಿನ ಅವರ ಪಾತ್ರ ಕಾಶೀನಾಥರ ಹೊಸ ರೀತಿಯ ಒಂದು ಬೋಲ್ಡ್ ಪ್ರಯೋಗ. ಈ ಚಿತ್ರದಲ್ಲಿ ಉಮಾಶ್ರೀ ಅವರು ತೋರಿದ ಗಮನಾರ್ಹ ಅಭಿನಯ ನೆನಪಿನಲ್ಲಿ ಉಳಿಯುವಂತದ್ದು. ತಮ್ಮ ಪಾತ್ರದ ಬಗ್ಗೆ ಅವರೇ ಹೇಳುತ್ತಾರೆ, "ಹೋದ ಕಡೆಯಲ್ಲಾ ಪಡ್ಡೆ ಹುಡುಗರ ಮನಸ್ಸಿನ ಮೇಲೆ ಪದ್ದಿ ಪಾತ್ರ ತುಂಬಾ ಪರಿಣಾಮ ಬೀರಿತು. ಎಲ್ಲಾ ಪಡ್ಡೆ ಹುಡುಗರು ಮನಸ್ಸಿನಲ್ಲೇ ಮಂಡಕ್ಕಿ ತಿಂದರು" ಎಂದು ಧೈರ್ಯವಾಗಿ ಹೇಳುವ ಕೆಲವೇ ಕೆಲವು ಕಲಾವಿದರಲ್ಲಿ ಉಮಾಶ್ರೀ ಸಹ ಒಬ್ಬರು.

ಗೋಲ್ ಮಾಲ್ ರಾಧಾಕೃಷ್ಣ, ಪುಟ್ನಂಜ, ಕೋತಿಗಳು ಸಾರ್ ಕೋತಿಗಳು, ದಿಗ್ಗಜರು, ಸಂಗ್ಯಾಬಾಳ್ಯ, ಕೊಟ್ರೇಶಿ ಕನಸು, ಯಾರಿಗೆ ಸಾಲುತ್ತೆ ಸಂಬಳ ಹೀಗೆ ಹಲವು ತಕ್ಷಣಕ್ಕೆ ನೆನಪಿಗೆ ಬರುವ ಪಾತ್ರಗಳು ಅವರ ಅಭಿನಯ ವೈಶಾಲತೆಯನ್ನು ತೋರುತ್ತವೆ.

ಉಮಾಶ್ರೀ ಅವರಿಗೆ 'ಗುಲಾಬಿ ಟಾಕೀಸ್' ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟ ಮಹಾನ್ ದಿಗ್ದರ್ಶಕ ಗಿರೀಶ್ ಕಾಸರವಳ್ಳಿ, ಅವರು ಆಕೆಗೆ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಮತ್ತು ಓಶಿಯಾನ್ಸ್ ಅಂತರರಾಷ್ಟ್ರೀಯ ಕಲಾಭಿಮಾನಿಗಳ ಪ್ರಶಸ್ತಿ ದೊರಕುವಂತಹ ಪಾತ್ರ ಕೊಟ್ಟು ಸೊಗಸಾದ ಅಭಿನಯ ಹೊರಹೊಮ್ಮುವಂತೆ ಮಾಡಿದ್ದಾರೆ. ಕಾಸರವಳ್ಳಿಯವರ 'ಕನಸೆಂಬ ಕುದುರೆಯನ್ನೇರಿ' ಚಿತ್ರದಲ್ಲೂ ಉಮಾಶ್ರೀ ಮನಮಿಡಿಯುವ ಅಭಿನಯ ನೀಡಿದ್ದಾರೆ.

ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿರುವ ಉಮಾಶ್ರೀ, ಸಿನಿಮಾ, ದೂರದರ್ಶನಗಳಲ್ಲಿನ ಹಲವು ಪಾತ್ರಗಳಲ್ಲಿ ಎಡೆಬಿಡದೆ ಮುನ್ನಡೆಯುತ್ತಿದ್ದಾರೆ. 2013ರ ವರ್ಷದಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿ ಇದೀಗ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ.

ತನಗೆ ಹೀರೋಗಳಿಗಿಂತ ಹೀರೋಹಿನ್ ಗಳೇ ಇಷ್ಟ ಎನ್ನುವ ಉಮಾಶ್ರೀ ಅವರ ಮೆಚ್ಚಿನ ತಾರೆ ಕಲ್ಪನಾ ಮತ್ತು ಮೀನಾ ಕುಮಾರಿ. ಹೀರೋಗಳಲ್ಲಿ ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರೆಂದರೆ ಇಷ್ಟ. ಅರೆ ಹುಚ್ಚಿ ಪಾತ್ರ ಮಾಡಲು ನನಗಿಷ್ಟ ಎನ್ನುವ ಉಮಾಶ್ರೀ ಅವರಿಗೆ ಉರ್ದು ಮಿಶ್ರಿತ ಕನ್ನಡ ಮಾತನಾಡುವ ಅಲ್ಪ ಸಂಖ್ಯಾತ ಮಹಿಳೆ ಪಾತ್ರ ಮಾಡಬೇಕು ಎಂಬ ಕನಸೂ ಇದೆ.

ಒಂದು ಕಾಲದದಲ್ಲಿ ಹಿಟ್ ಪೇರ್ ಎನ್ನಿಸಿಕೊಂಡಿದ್ದ ಎನ್ ಎಸ್ ರಾವ್ ಬಗ್ಗೆ ಇಂದಿಗೂ ಬಹಳ ಮೆಚ್ಚುಗೆ ವ್ಯಕ್ತಪಡಿಸುವ ಉಮಾಶ್ರೀ ಅವರು ಬಹಳ ಒಳ್ಳೆ ಮನುಷ್ಯ ಎಂದು ಹೇಳುತ್ತಾ ನೆನಪಿನ ದೋಣಿಯಲ್ಲಿ ವಿಹರಿಸುತ್ತಾರೆ. ಬಿ.ಗಣಪತಿ ಅವರು ನಿರೂಪಣೆಯ 'ಬೆಂಕಿ ಬೆಡಗು' ಪುಸ್ತಕ ಅವರ ಬದುಕಿನ ಕೆಲವು ಎಪಿಸೋಡುಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ.

ಉಮಾಶ್ರೀ ಅವರ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಅವರು ಇದೇ ಆಗಸ್ಟ್ 29, 30 ಹಾಗೂ 31ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಹೊಸೆಯಲ್ಲಿ ನಡೆಯುತ್ತಿರುವ 8ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ದೀಪ ಬೆಳಗಿ ಉದ್ಘಾಟಿಸಲಿದ್ದಾರೆ. ಅನಿವಾಸಿ ಕನ್ನಡಿಗರು ಅವರನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

English summary
Seasoned movie artist and Minister for Kannada and culture in Karnataka government Smt. Umashree profile. Umashree inaugurating 8th AKKA World Kannada Conference -2014 in San Jose, California
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X