ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕ್ಕ' ಕನ್ನಡ ಸಮ್ಮೇಳನಕ್ಕೆ ದಿನಗಣನೆ ಆರಂಭ

By Prasad
|
Google Oneindia Kannada News

ಅಮೆರಿಕದ ಸ್ಯಾನ್ ಹೋಸೆಯಲ್ಲಿ ಆಗಸ್ಟ್ 29ರಿಂದ ನಡೆಯಲಿರುವ ಮೂರು ದಿನಗಳ 8ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಶ್ರಾವಣ ಶುದ್ಧ ಪಂಚಮಿಯ ಹಬ್ಬದೊಂದಿಗೆ ಆಗಸ್ಟ್ ತಿಂಗಳಲ್ಲಿ ಹಬ್ಬಗಳ ಸಂಭ್ರಮ ಶುರುವಾಗಿದ್ದರೆ, ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಸಹಯೋಗದೊಂದಿಗೆ ನಡೆಯುತ್ತಿರುವ ಕನ್ನಡ ನುಡಿಹಬ್ಬದ ತಯಾರಿಗಳು ಆರಂಭವಾಗಿ 10 ತಿಂಗಳು ಉರುಳಿವೆ.

'ಯಾನ' ಕನ್ನಡ ಕಾದಂಬರಿಯನ್ನು ಸಾರಸ್ವತ ಜಗತ್ತಿಗೆ ಇತ್ತೀಚೆಗೆ ನೀಡಿರುವ ಲೇಖಕ ಡಾ. ಎಸ್.ಎಲ್. ಭೈರಪ್ಪ, 'ಭಾರತ ರತ್ನ' ಡಾ. ಸಿ.ಎನ್.ಆರ್, ಚಲನಚಿತ್ರ ನಟರಾದ ಪುನೀತ್ ಮತ್ತು ದರ್ಶನ್, ಸಂಗೀತ ನಿರ್ದೇಶಕ ಹರಿಕೃಷ್ಣ ಮುಂತಾದ ಖ್ಯಾತನಾಮರು ಆಗಮಿಸುತ್ತಿರುವುದು ಸಮ್ಮೇಳನದ ನಿರೀಕ್ಷೆ ಹೆಚ್ಚಿಸಿದೆ. ಸಮ್ಮೇಳನದ ಆಕರ್ಷಣೆಯ ಪಟ್ಟಿ ಉದ್ದವಾಗಿದೆ. ಅದರಲ್ಲಿ ಎದ್ದುಕಾಣುವ ಅಂಶ ಕನ್ನಡ ಸಂಘಗಳು ಸಾದರಪಡಿಸುವ ವಿಶಿಷ್ಟ ಮೆರವಣಿಗೆ ಎಂದು 'ಅಕ್ಕ' ಅಧ್ಯಕ್ಷ ಹಳೇಕೋಟೆ ವಿಶ್ವಾಮಿತ್ರ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಸಮ್ಮೇಳನದ ಎರಡನೇ ದಿನ, ಆ.30ರಂದು ಶನಿವಾರ ನಡೆಯಲಿರುವ ಮೆರವಣಿಗೆಯನ್ನು ಅತ್ಯಂತ ವಿಭಿನ್ನವಾಗಿ ಮತ್ತು ವೈಭವದಿಂದ ಆಚರಿಸಲು ಸಂಯೋಜಕರು ತಯ್ಯಾರಿ ನಡೆಸಿದ್ದಾರೆ. ವೈವಿಧ್ಯಮಯ ವೇಷಭೂಷಣ ಧರಿಸಿದ ಅಮೆರಿಕದ 30ಕ್ಕೂ ಹೆಚ್ಚು ಕನ್ನಡ ಸಂಘಗಳ ಸದಸ್ಯ ಕುಟುಂಬಗಳು, ಅವರ ಮಕ್ಕಳು ಹಾಡುತ್ತ, ಕುಣಿಯುತ್ತ, ನಲಿಯುತ್ತ ಕರ್ನಾಟಕದ ಸಮೃದ್ಧ ಸಂಸ್ಕೃತಿ, ಸಂಪ್ರದಾಯ, ಇತಿಹಾಸವನ್ನು ಬಿಂಬಿಸುತ್ತಾರೆ. ಇದರ ಜೊತೆಗೆ ಜುಗಲಬಂದಿ, ವಿಶಿಷ್ಟ ವಿನ್ಯಾಸದ ನರ್ತನ, ಮಾನವ ನಿರ್ಮಿತ ಸ್ತಬ್ಧಚಿತ್ರ ವಿಶೇಷ ಆಕರ್ಷಣೆಯಾಗಲಿದೆ.

Kannada culture human tableau : WKC 8th AKKA Convention, San Jose

ವಿಶ್ವವಿಖ್ಯಾತ ಮೈಸೂರು ದಸರಾವನ್ನು ನೆನಪಿಸುವಂಥ ಮೆರವಣಿಗೆಯಲ್ಲಿ ಮೈಸೂರು ಅರಮನೆ, ಅರಸರು, ಸಿಂಹಾಸನ, ಕೀಲು ಕುದುರೆ, ಚನ್ನಪಟ್ಟಣದ ಬೊಂಬೆಗಳು ಜೀವ ತಳೆಯಲಿವೆ. ಪಂಜಿನ ಮೆರವಣಿಗೆ ಕೂಡ ಹಬ್ಬದ ಕಳೆ ಹೆಚ್ಚಿಸಲಿದೆ. ವಿಶ್ವದ ಎಲ್ಲೆಡೆಯಿಂದ ಆಗಮಿಸಿರುವ ಸಾವಿರಾರು ಕನ್ನಡಿಗರು ಮಾತ್ರವಲ್ಲ ಅಮೆರಿಕದ ನಾಗರಿಕರು ಕೂಡ ಮೆಚ್ಚುವಂಥ ಮೆರವಣಿಗೆಯನ್ನು ಆಯೋಜಿಸಲಾಗುವುದು ಎಂದು ವಿಶ್ವಾಮಿತ್ರ ವಿಶ್ವಾಸ ವ್ಯಕ್ತಪಡಿಸಿದರು

ಮೆರವಣಿಗೆಯ ಇತರ ವಿಶೇಷಗಳು ಕೆಳಗಿನಂತಿವೆ

* ಮಾತಿನಲ್ಲೇ ಮೋಡಿ ಮಾಡುವ ಪ್ರೊ. ಕೃಷ್ಣೇಗೌಡರು ತಮ್ಮ ವಿಶಿಷ್ಟ ಶೈಲಿಯಲ್ಲಿ ಮೆರವಣಿಗೆಯ ಕಾಮೆಂಟರಿ ನೀಡಲಿದ್ದಾರೆ.

* ಸಿನೆಮಾ ತಾರೆಗಳಾದ ಪುನೀತ್ ರಾಜ್ ಕುಮಾರ್, ದರ್ಶನ್, ಲೇಖಕರಾದ ಭೈರಪ್ಪ, ಕೆ.ಎಸ್. ನಿಸಾರ್ ಅಹ್ಮದ್ ಮುಂತಾದ ಘಟಾನುಘಟಿಗಳು ಮಾನವ ಸ್ತಬ್ಧಚಿತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ.

* ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ (ತೇರದಾಳ), ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಸಿದ್ದೇಶ್ವರ (ದಾವಣಗೆರೆ), ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಮಂಡ್ಯದ ಸಂಸದ ಸಿ.ಎಸ್. ಪುಟ್ಟರಾಜು ಮತ್ತು ಅನೇಕ ಶಾಸಕರು ಕೂಡ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷಯಿದೆ.

* ನೂರಕ್ಕೂ ಹೆಚ್ಚು ಸ್ಥಳೀಯರನ್ನು ಬಳಸಿ ನಿರ್ಮಿಸುತ್ತಿರುವ ಮಾನವ ಸ್ತಬ್ಧಚಿತ್ರ ಅಕ್ಕ ಸಮ್ಮೇಳನಗಳ ಇತಿಹಾಸದಲ್ಲೇ ವಿನೂತನ ಮತ್ತು ವಿಶಿಷ್ಟವಾಗಿರಲಿದೆ.

* 30ಕ್ಕೂ ಹೆಚ್ಚು ಅಮೆರಿಕದ ವಿವಿಧ ಸಂಘಗಳಿಂದ 500ಕ್ಕೂ ಹೆಚ್ಚು ಅಮೆರಿಕನ್ನಡಿಗರು ತಮ್ಮ ಸಂಘಗಳ ಬ್ಯಾನರ್ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ.

* ಕರ್ನಾಟಕದಿಂದ ಆಗಮಿಸುತ್ತಿರುವ ಹಲವಾರು ಜನಪದ ಕಲಾವಿದರು ಜಾನಪದ ಉಡುಗೆತೊಡುಗೆಯಿಂದ ಮೆರವಣಿಗೆಯಲ್ಲಿ ಮಿಂಚಲಿದ್ದಾರೆ.

ಮೆರವಣಿಗೆ ವಿಡಿಯೋ ಟೂರ್

ಹಿಲ್ಟನ್ ಸೈಡ್ ಎಂಟ್ರನ್ಸ್ ನಿಂದ ಆರಂಭವಾಗಿ ಮೆಕೆನ್ರಿ ಕನ್ವೆನ್ಷನ್ ಸೆಂಟರ್ ವರೆಗೆ ಮೆರವಣಿಗೆ ಸಾಗಲಿದ್ದು, ಮೆರವಣಿಗೆ ಸಾಗುವ ಹಾದಿಯನ್ನು ಈ ಕೊಂಡಿಯಲ್ಲಿ ನೀಡಲಾಗಿದೆ. (ಈ ವಿಡಿಯೋ ನೋಡಲು ಗೂಗಲ್ ಅರ್ಥ ಇನ್‌ಸ್ಟಾಲ್ ಮಾಡಬೇಕು)

[ಅಕ್ಕ ಆನ್ ಲೈನ್], [ಅಕ್ಕ ಸಮ್ಮೇಳನ ಫೇಸ್ ಬುಕ್], [ಸ್ಯಾನ್ ಹೋಸೆ ಹವಾಮಾನ]

English summary
Colorful procession depicting Karnataka culture and tradition is the high light of AKKA World Kannada Convention 29th-31st August 2014. Venue : McEnery Convention Center, San Jose, CA
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X