ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಟತಿಂಡಿ ಸಕ್ಸಸ್ ಆದ್ರೆ, ಸಮ್ಮೇಳನ ಸಕ್ಸಸ್!

By ಎಸ್.ಕೆ. ಶಾಮಸುಂದರ, ಸ್ಯಾನ್ ಫ್ರಾನ್ಸಿಸ್ಕೋದಿಂದ
|
Google Oneindia Kannada News

ತೊಟ್ಟಿಲು ಶಾಸ್ತ್ರದಿಂದ ಮೊದಲಾಗಿ ವೈಕುಂಠ ಸಮಾರಾಧನೆಯವರೆಗೆ ಭಾರತೀಯ ಕುಟುಂಬಗಳು ಹಮ್ಮಿಕೊಳ್ಳುವ ನಾನಾ ಬಗೆಯ ಸಮಾರಂಭಗಳ ಬಹುಪಾಲು ಯಶಸ್ಸು ಅವರು ಮಾಡುವ, ಮಾಡಿಬಡಿಸುವ ಆಹಾರ ಪದಾರ್ಥಗಳ ವೈವಿಧ್ಯ ಮತ್ತು ರುಚಿ ಮೇಲೆ ಅವಲಂಬಿತವಾಗಿರುತ್ತದೆ. ಊಟ ತಿಂಡಿ ಸಕ್ಸಸ್ ಆಯ್ತಾ? ಯಸ್, ಎಲ್ಲಾ ಕಾರ್ಯಕ್ರಮ ಸಕ್ಸಸ್, ಇಲ್ಲ ಅಂದ್ರೆ ಗೋವಿಂದ!

ಅದಕ್ಕೋಸ್ಕರನೇ ಅಮೆರಿಕಾಗೆ ಬಂದ ಕ್ಷಣವೇ ನಾನು ಮೊದಲು ಮಾಡಿದ ಕೆಲಸ ಅಕ್ಕ ಸಮ್ಮೇಳನದ ಊಟತಿಂಡಿ ವ್ಯವಸ್ಥೆ ಹೇಗಿದೆ ಅಂತ ನೋಡುವುದಕ್ಕೆ ಪೀಕಾಕ್ ಫುಡ್ ಫ್ಯಾಕ್ಟರಿಗೆ ಹೋಗಿದ್ದೆ. ಉತ್ತರ ಕ್ಯಾಲಿಫೋರ್ನಿಯ ಬೇಏರಿಯಾದಲ್ಲಿರುವ ಮಿಲ್ಪಿಟಾಸ್ ಸಿಟಿ, ಪೀಕಾಕ್ ಇಂಡಿಯನ್ ರೆಸ್ಟೋರೆಂಟ್ ಸಮೂಹದ ಹೆಡ್ ಕ್ವಾರ್ಟರ್ಸ್.

ಆಗಸ್ಟ್ 29ರಿಂದ ಮೂರು ದಿನ ಇಲ್ಲಿ ಜರಗುವ 8ನೇ ಅಕ್ಕ ಸಮ್ಮೇಳನಕ್ಕೆ ಊಟತಿಂಡಿ ಸರಬರಾಜುವ ಮಾಡುವ ಗುತ್ತಿಗೆ ಪೀಕಾಕ್ ಗೆ ಸಿಕ್ಕಿದೆ. ಅಮೆರಿಕಾ ಮತ್ತು ಕರ್ನಾಟಕದ ಮೂಲೆಮೂಲೆಗಳಿಂದ ಆಗಮಿಸುವ ಸುಮಾರು 4,000 ಕನ್ನಡ ಪ್ರತಿನಿಧಿಗಳಿಗೆ ಸಮರ್ಪಕವಾಗಿ ಊಟ ತಿಂಡಿ ಬಡಿಸುವ ಹೊಣೆ ಪೀಕಾಕ್ ಮಾಲೀಕ ಪ್ರಸಾದ್ ವಾಸಿರೆಡ್ಡಿ ಹೆಗಲೇರಿದೆ.

Prasad Vasi Reddy

ಪ್ರಸಾದ್ ಮೂಲತಃ ಬಾಗಲಕೋಟೆವರು. ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಬಿಇ (ಮೆಕ್ಯಾನಿಕಲ್) ವ್ಯಾಸಂಗ ಮಾಡಿ ಅಮೆರಿಕಾಗೆ ವಲಸೆ ಬಂದಿದ್ದಾರೆ. ಸ್ಪ್ಯಾನರ್, ಬೋಲ್ಟು ನಟ್ಟು ಕೈಬಿಟ್ಟು, ಈಳಿಗೆ ಮಣೆ, ಸೌಟು, ಚುಚ್ಚುಗ ನಂಬಿಕೊಂಡ ಹೋಟೆಲ್ ಉದ್ಯಮಿಯಕ್ಕೆ ಧುಮುಕಿದ್ದಾರೆ. ಕ್ಯಾಲಿಫೋರ್ನಿಯಾದ 9 ಬಡಾವಣೆಗಳಲ್ಲಿ ಅವರ ಹೋಟೆಲ್ ಶಾಖೆಗಳಿವೆ. ಇದೀಗ ಸಾಕ್ರಮೆಂಟೋದಲ್ಲೂ ಪೀಕಾಕ್ ದರ್ಶಿನಿ ಆರಂಭವಾಗಿದೆ.

ಶುಕ್ರವಾರ ಸಂಜೆ ಊಟದಿಂದ ಭಾನುವಾರ ಸಂಜೆ ಭೋಜನದವರೆಗೆ ಒಟ್ಟು 7 ಸಲ ಒಲೆ ಹಚ್ಚಬೇಕು. ಅದಕ್ಕೆ ಪ್ರಸಾದ್ ಮತ್ತು ಅವರ 8 ಮಂದಿ ಅಡುಗೆ ಭಟ್ಟರ ತಂಡ ಸಿದ್ಧವಾಗಿದೆ. ಮುಖ್ಯ ಅಡುಗೆ ಭಟ್ಟರು ಅಲೆಕ್ಸ್ ಮತ್ತು ಸತೀಶ್. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿದ್ದ ಅಲೆಕ್ಸ್ ಈಗ ಪ್ರಸಾದ್ ಅಡುಗೆ ಗರಡಿಮನೆಯಲ್ಲಿ ಮಲ್ಲಿಗೆಯಂತೆ ಕೋಮಲವಾದ ಇಡ್ಲಿಗಳನ್ನೂ ತಯಾರಿಸುವನು ಮತ್ತು ಏಕ್ ದಂ ದಂಬಿರಿಯಾನಿ ಬೇಯಿಸುವನು.

Ravishankar

ಆದರೆ, ಊಟದ ತಟ್ಟೆಗಳಲ್ಲಿ ಏನೇನಿರಬೇಕು ಎಂದು ಸಮ್ಮೇಳನದ ಕೆಟರಿಂಗ್ ಕಮಿಟಿ ಇತ್ಯರ್ಥ ಮಾಡುತ್ತದೆ. ಕಮಿಟಿಯ ಮುಖ್ಯಸ್ಥ ಬಿ. ರವಿಶಂಕರ್, ವೇಣು ಟಿ ಗೋಪಾಲ್ ಮತ್ತು ದೀಪಕ್ ಗುಲ್ಲ ಮೆನು ಪಟ್ಟಿ ತಯಾರಿಸಿದ್ದು ಅದು ತುಂಬ ಉದ್ದ ಇದೆ. ಮುಖ್ಯ ವಿಷಯ ಅಂದ್ರೆ, ಇದುವರೆಗೂ ಅಕ್ಕದ ಯಾವ ಸಮ್ಮೇಳನದಲ್ಲೂ ಮಾಡಿರದ ಭಕ್ಷ್ಯ ಭೋಜ್ಯಗಳನ್ನು ಮಾಡಲಾಗುವುದು ಎಂದು ಎಕ್ಸ್ಎಲ್ ಶೀಟನ್ನು ಫೈನ್ ಟ್ಯೂನ್ ಮಾಡುತ್ತಿರುವ ಸಮಿತಿಯ ರವಿಶಂಕರ್ ಒನ್ ಇಂಡಿಯ ಕನ್ನಡಕ್ಕೆ ಮಂಗಳವಾರ ಸಂಜೆ ತಿಳಿಸಿದರು.

ಕಡಬು, ಸ್ಪೆಷಲ್ ಹೋಳಿಗೆ, ಚಿರೋಟಿಗಳಲ್ಲದೆ, ಮಾಂಸಾಹಾರ ಪ್ರಿಯರಿಗೆ ದಂ ಬಿರಿಯಾನಿ ಇರತ್ತೆ. ಅಮೆರಿಕದಲ್ಲೇ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ನಿಮ್ಮ ಶ್ಯಾವಿಗೆ ಉಪ್ಪಿಟ್ಟು, ಚಿರೋಟಿ ಇಷ್ಟ ಆಗಲ್ಲ. ಆದ್ದರಿಂದ ಅವರಿಗೋಸ್ಕರ ಪಾಸ್ತಾ ಗೀಸ್ತಾ, ಐಸ್ ಕ್ರೀಂ, ಡೋನಟ್ ವಾಲ್ ನಟ್ಟುಗಳನ್ನು ಏರ್ಪಾಡಲಾಗುವುದು. ಸಮ್ಮೇಳನಕ್ಕೆ ಆಗಮಿಸುವ ಯಾರೂ ಕೂಡ ನಮ್ಮ ಆದರಾತಿಥ್ಯವನ್ನು ಮಿಸ್ ಮಾಡಿಕೊಳ್ಳಬಾರದು, ಸ್ಪೆಷಲ್ ಆಗಿ, ಶನಿವಾರದ ರಾತ್ರಿಯ ಭೂರಿಭೋಜನವನ್ನು ತಪ್ಪಿಸಿಕೊಳ್ಳಬಾರದು ಎಂದು ಸಮಿತಿಯ ವೇಣು ಸ್ಪೆಷಲ್ ಆಗಿ ಹೇಳಿದರು.

Alex

ಇನ್ನೇನೇರಿತ್ತೆ ಲಿಸ್ಟ್ ಕೊಡಿ ಮಾರಾಯ್ರೆ ಅಂತ ರವಿಶಂಕರ್ ಅವರನ್ನು ಕೇಳಿದ್ದಕ್ಕೆ, "ಥೂ ಹೋಗೀಪ್ಪಾ, ನೀವು ದಟ್ಸ್ ಕನ್ನಡದವರು ಈಗ್ಲೇ ಎಲ್ಲಾ ಲೀಕ್ ಮಾಡ್ ಬಿಡ್ತೀರಾ" ಅಂತಂದಂದ್ರು. ಏನೇನು ಇರಬಹುದು ಎಂದು ನಿಮ್ಮ ಚುರುಕು ಮೂಗಿಗೆ ಈಗಾಗಲೆ ವಾಸನೆ ಸಿಕ್ಕಿರಬಹುದು. ಸುಮ್ನೆ ಸಸ್ಪೆನ್ಸ್ ಯಾಕೆ? ತಿಂಡಿಗೆ, ಊಟಕ್ಕೆ ಏನೇನು ಸಿಗಲಿವೆ ಎಂಬುದು ಗುರುವಾರ ಸಂಜೆ ಅಕ್ಕ ವೆಬ್ ಸೈಟಿನಲ್ಲಿ ಪ್ರಕಟವಾಗಲಿದೆ. ಯಾತಕ್ಕೂ ಒಂದು ಸತಿ ಇಣುಕಿನೋಡಿ.

ಈ ಸಲದ ಅಕ್ಕ ಸಮ್ಮೇಳನವನ್ನು ಲಾಗೂ ಮಾಡುವ ಜವಾಬ್ದಾರಿಯನ್ನು ಸ್ಥಳೀಯ ಕನ್ನಡ ಕೂಟ ಕೆಕೆಎನ್ ಸಿ ವಹಿಸಿಕೊಂಡಿದೆ. ಸಮ್ಮೇಳನ ನಡೆಯುವ ಜಾಗ : ಮೆಕೆನ್ರಿ ಕನ್ ವೆನ್ಷನ್ ಸೆಂಟರ್, ಸ್ಯಾನ್ ಹೊಸೆ. ಉತ್ತರ ಕ್ಯಾಲಿಫೋರ್ನಿಯ.

English summary
SFO Bay Area Foodie, the Peacock Restaurant all set to cook and serve authentic Karnataka. Food for about 4,000 participants during 3 day 8th World Kannada Convention in San Jose, North California. Caterer Prasad Vasi Reddy in conversation with Oneindia Kannada news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X