ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನ ಸಂಚಾಲಕ ಸುರೇಶ್ ಬಾಬು ಸಂದರ್ಶನ

By Prasad
|
Google Oneindia Kannada News

ಸ್ನೇಹಿತರೆ, "ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು" ... ಕುವೆಂಪುರವರ ಈ ಒಂದು ವಾಕ್ಯ ನಮ್ಮ ಎಲ್ಲ ಕನ್ನಡಿಗರ ಮನಸ್ಸಿನಲ್ಲಿ ಹಚ್ಚೆ ಹಾಸಿದಂತೆ ಧೃಢವಾಗಿದೆ. ಇದಕ್ಕೆ ಮತ್ತೊಂದು ನಿದರ್ಶನ ಎಂದರೆ ಸಪ್ತ ಸಾಗರದಾಚೆ ಇರುವಂತಹ ಸ್ವರ್ಣಸೇತುವಿನ ತಪ್ಪಲಲ್ಲಿ ನಡೆಯುತ್ತಿರುವಂತಹ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ. ಈ ಸಮ್ಮೇಳನದಲ್ಲಿ ಸಹಸ್ರಾರು ಜನ ಕನ್ನಡಿಗರು ಒಂದುಗೂಡಿ 'ಸಾಧನೆ, ಸಂಭ್ರಮ, ಸಂಕಲ್ಪ' ಈ ಪತಾಕೆಯನ್ನ ಹಿಡಿದು ಬಹಳ ವಿಜೃಂಭಣೆಯಿಂದ ಈ ಒಂದು ಸಮ್ಮೇಳನವನ್ನು ನಡೆಸುವುದಕ್ಕೆ ಸಿದ್ಧರಾಗಿದ್ದಾರೆ. ಇವತ್ತು ನಮ್ಮ ಅದೃಷ್ಟ ಎಂಬಂತೆ ಈ ಸಮ್ಮೇಳನದ ಕನ್ವೀನರ್ ಆದಂತಹ ಸುರೇಶ್ ಬಾಬು ಅವರು ನಮ್ಮ ಜೊತೆಗಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.

ಪೂರ್ಣಿಮಾ ಮೋಹನ್ : ನಮಸ್ಕಾರ ಸುರೇಶ್ ಅವರೆ!

ಸುರೇಶ್ ಬಾಬು : ನಮಸ್ಕಾರ!

AKKA 8th WKC convenor Suresh Babu interview

ಪೂರ್ಣಿಮಾ ಮೋಹನ್ : ಅಕ್ಕ ಸಮ್ಮೇಳನದ ಬಗ್ಗೆ ಮಾತಾಡುವುದಕ್ಕೆ ನೀವು ಮುಂದೆ ಬಂದಿದ್ದು ನಮ್ಮೆಲ್ಲರ ಭಾಗ್ಯ. ಈ ಸಮ್ಮೇಳನದ ಬಗ್ಗೆ ನಿಮಗೇನನ್ನಿಸತ್ತೆ, ಅಂತ ಕೆಲವು ಮಾತುಗಳನ್ನ, ಅಭಿಪ್ರಾಯಗಳನ್ನ ಹಂಚಿಕೊಳ್ತೀರ ನಮ್ಮ ಜೊತೆ.

ಸುರೇಶ್ ಬಾಬು : ಖಂಡಿತ. ವಿಶ್ವದಲ್ಲಿ ಕನ್ನಡ ಸಮ್ಮೇಳನ ನಡೆಯೋದು ಕರ್ನಾಟಕದಲ್ಲಿ ಮಾತ್ರ. ಇಡೀ ವಿಶ್ವದಲ್ಲಿ ವಿಶ್ವ ಕನ್ನಡ ಸಮ್ಮೇಳನ ಅತಿ ದೊಡ್ಡ ರೀತಿಯಲ್ಲಿ ಕರ್ನಾಟಕದಿಂದ ಹೊರಗೆ ನಡೆಯೋದು ಅಮೇರಿಕ ದೇಶದಲ್ಲಿ. ಅದು ನಮ್ಮ ಅಕ್ಕ ಸಂಸ್ಥೆಯ ನೇತೃತ್ವದಲ್ಲಿ. ಇದುವರೆಗೆ ಅಕ್ಕ ಸಂಸ್ಥೆ ಏಳು ಬಾರಿ ವಿಶ್ವ ಕನ್ನಡ ಸಮ್ಮೇಳನವನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಎಂಟನೇ ಬಾರಿ ಈ ಸಮ್ಮೇಳನವನ್ನು ನಡೆಸುವ ಜವಾಬ್ದಾರಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಪಾಲಿಗೆ ಬಂದಿದೆ. ಇದು ನಮ್ಮ ಸೌಭಾಗ್ಯ ಅಂತ ನಾವು ಅಂದುಕೊಂಡಿದ್ದೇವೆ. ಈ ಒಂದು ಕಾರ್ಯಕ್ರಮವನ್ನು ಮಾಡುವುದಕ್ಕೆ ನಮಗೆ ಬಹಳ ಹೆಮ್ಮೆಯಾಗುತ್ತಿದೆ. ಹಲವಾರು ವರ್ಷಗಳಿಂದ ನಾವು ಇಟ್ಟುಕೊಂಡಂತಹ ಕನಸು ಈಗ ನನಸಾಗಿ ನಮ್ಮ ಆಸೆ ಕೈಗೂಡುತ್ತಿದೆ. ಬರುವ ಆಗಸ್ಟ್ 29, 30, 31ರಂದು ಸ್ಯಾನ್ ಹೋಸೆ ಮೆಕೆನ್ರಿ ಕನ್ವೆನ್ಷನ್ ಸೆಂಟರಲ್ಲಿ ನಾವು ಈ ಕಾರ್ಯಕ್ರಮವನ್ನು ನಡೆಸ್ತಾ ಇದ್ದೀವಿ.

ಈ ಕಾರ್ಯಕ್ರಮವನ್ನ ಯಾವ ರೀತಿ ನಡೆಸಬೇಕು ಅಂತ ನಾವು ಒಂದು ಯೋಜನೆ ಹಾಕಿಕೊಂಡಿದ್ದೀವಿ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಕಾರ್ಯಕ್ರಮವನ್ನು ವಿಶೇಷವಾಗಿ, ವಿಭಿನ್ನವಾಗಿ ಹಾಗೂ ಅದ್ದೂರಿಯಾಗಿ ನಡೆಸಬೇಕು ಅಂತ ನಾವು ಅಂದುಕೊಂಡಿದ್ದೀವಿ. ನಾವೆಲ್ಲ ಇಟ್ಕೊಂಡಿರೊ ಒಂದು aim ಏನಂದ್ರೆ ... ಇಂಗ್ಲೀಷಲ್ಲಿ ಹೇಳೋದಾದ್ರೆ memorable experience... ಅವಿಸ್ಮರಣೀಯವಾದಂಥ ಒಂದು ಅನುಭವವನ್ನ ಅಲ್ಲಿ ಬಂದಿರತಕ್ಕಂಥ ಎಲ್ಲ participantsಗೂ, ಎಲ್ಲ ಸಭಿಕರಿಗೂ ಕೊಡಬೇಕು ಅನ್ನುವುದು ನಮ್ಮ ಉದ್ದೇಶ. ಈ ಉದ್ದೇಶದಲ್ಲಿ ಸಫಲರಾಗ್ತೀವಿ ಅಂತ ಅಂದುಕೊಂಡಿದ್ದೀವಿ. ತಯಾರಿ ಎಲ್ಲ ಬಹಳ ಚೆನ್ನಾಗಿ ನಡೆದಿದೆ. ನೋಡೋಣ ಹೇಗೆ ಬರತ್ತೆ ಅಂತ. [ಅಕ್ಕನ ನೋಡಲು ಹೊರಟ ಪುಟ್ಟಮಲ್ಲಿ]

ಪೂರ್ಣಿಮಾ ಮೋಹನ್ : ಸುರೇಶ್ ಅವರೆ, ನೀವು ಮಾತಿನ ಮಧ್ಯೆ ಹೇಳ್ತಾ ಇದ್ರಿ ಇದನ್ನ ವಿಭಿನ್ನವಾಗಿ ಮಾಡ್ಬೇಕು, ಏಳು ಬಾರಿ ಈಗಾಗಲೇ ಮಾಡಿರೋದಕ್ಕಿಂತ ವಿಶಿಷ್ಟವಾಗಿ ಮಾಡಬೇಕು ಅಂತ. ನಮ್ಮ ಓದುಗರಿಗೆ ಬೇರೆ ಏಳು ವಿಶ್ವ ಕನ್ನಡ ಸಮ್ಮೇಳನಗಳಿಗಿಂತ ಇದು ಹೇಗೆ ವಿಭಿನ್ನ, ಹೇಗೆ ಇದು ಇನ್ನಷ್ಟು ವೈಶಿಷ್ಟ್ಯಪೂರ್ಣ, learning from the past experiences ಹೇಗೆ ನೀವು ವಿಭಿನ್ನವಾಗಿ ಮಾಡ್ತಾ ಇದೀರ?

ಸುರೇಶ್ ಬಾಬು : ಖಂಡಿತ. ಒಂದು ಕಾರ್ಯಕ್ರಮವನ್ನ ವಿಭಿನ್ನವಾಗಿ ಮಾಡ್ಬೇಕು ಅಂದ್ರೆ ನನ್ನ ದೃಷ್ಟಿಯಲ್ಲಿ ಎರಡು ಅಂಶಗಳಿವೆ. ಒಂದು, ಎಲ್ಲಾ ಸಮ್ಮೇಳನಗಳಲ್ಲಿ ಮಾಡತಕ್ಕಂತಹ ಕೆಲವು ಕಾರ್ಯಕ್ರಮಗಳನ್ನ ಚೆನ್ನಾಗಿ ನಡೆಸೋದು... ಅದೂ ಒಂದು ವಿಭಿನ್ನತೆ ಅಂತ ಹೇಳಬಹುದು. ಆಮೇಲೆ ಮಿಕ್ಕ ಸಮ್ಮೇಳನಗಳಲ್ಲಿ ನಡೆಯದೇ ಇರುವಂತಹ ಕಾರ್ಯಕ್ರಮಗಳನ್ನ ಮಾಡಿದರೆ ಅದಕ್ಕೊಂದು ವಿಶೇಷತೆ ಬರುತ್ತದೆ. ಹಾಗಾಗಿ ಮೊದಲನೆಯದಾಗಿ ಕಾರ್ಯಕ್ರಮ ನಡೆಸುವ ರೀತಿ. ಎಷ್ಟು ಉತ್ತಮ ರೀತಿಯಲ್ಲಿ ನಡೆಸಬೇಕು ಅಂದುಕೊಂಡಿದ್ದೀವಿ ಅನ್ನೋದನ್ನ ಹೇಳ್ತೀನಿ.

ನಾವು ಕಾರ್ಯಕ್ರಮಗಳನ್ನ ನಡೆಸುವಾಗ... ನಮ್ಮ ಮನರಂಜನಾ ಕಾರ್ಯಕ್ರಮ ಇರಬಹುದು, ಅಥವಾ ಯಾವುದೇ ರೀತಿಯ ಸ್ಪೆಷಲ್ ಕಮಿಟಿ ಫೋರಂಗಳಿರಬಹುದು, ಅವೆಲ್ಲವೂ ಉತ್ತಮ ಗುಣಮಟ್ಟದ್ದಾಗಿರಬೇಕು ಅಂತ ಯೋಜನೆ ಹಾಕಿಕೊಂಡಿದ್ವಿ. ಬಹಳ ಶ್ರಮಪಟ್ಟು, ಪ್ರತಿಯೊಂದು ಕಾರ್ಯಕ್ರಮವನ್ನೂ ನಮ್ಮ ಒಂದು principle ಪ್ರಕಾರ ಅಂದರೆ 'don't take the program, but seek the program' ಅನ್ನುವಂತೆ, ನಮ್ಮ ಘೋಷವಾಕ್ಯ 'ಸಾಧನೆ, ಸಂಭ್ರಮ, ಸಂಕಲ್ಪ' ಕ್ಕೆ ಅನುಗುಣವಾಗಿ, ಪ್ರತಿಯೊಂದು ಕಾರ್ಯಕ್ರಮವನ್ನೂ ಈ ಶೀರ್ಷಿಕೆಯಂತೆ ನಡೆಯಬೇಕು ಅನ್ನುವ ಉದ್ದೇಶ ಇಟ್ಟುಕೊಂಡು, ಗುಣಮಟ್ಟಕ್ಕೆ ಒಂದು ನಿದರ್ಶನ ಇಟ್ಟುಕೊಂಡು, ಒಂದು ಸ್ಕೇಲ್ ಅಂತ ಮಾಡಿಕೊಂಡು ಆ ಗುಣಮಟ್ಟದ ಕಾರ್ಯಕ್ರಮಗಳನ್ನೇ ತಂದಿದ್ದೇವೆ.

ಅದು ಮೊದಲನೆಯ ಅಂಶ. ಎಲ್ಲಾ ಸಮ್ಮೇಳನಗಳಲ್ಲೂ ಇದು ನಡೆಯತ್ತೆ. ಆದರೆ ನಾವು ಇನ್ನೂ ಚೆನ್ನಾಗಿ ಮಾಡಬೇಕು ಅನ್ನೋ ಆಶಯ ಇಟ್ಟುಕೊಂಡಿದ್ದೀವಿ. ನಮ್ಮ ಹತ್ತಿರ ತುಂಬಾ ಒಳ್ಳೆಯ ಟೀಮ್ ಇರೋದ್ರಿಂದ ಆಗತ್ತೆ ಅನ್ನುವ ಭರವಸೆ ನನಗಿದೆ. ಎರಡನೆಯದು ಇಲ್ಲಿ ಬಂದಿರತಕ್ಕಂತಹ ಜನಗಳಿಗೆ ಉತ್ತಮ ಆತಿಥ್ಯ ನೀಡೋದು. ಎಲ್ಲಾ ರೀತಿಯ ಅನುಕೂಲ... ಬಂದು ಹೋಗೋದಿಕ್ಕೆ, ಇಳಿದುಕೊಳ್ಳೋದಿಕ್ಕೆ, ಅವರಿಗೆ ಬೇಕಾದಂತಹ ಇನ್ಫರ್ಮೇಷನ್ ಒದಗಿಸಿಕೊಡೋದಿಕ್ಕೆ, ಅವರಿಗೆ ಸೌಲಭ್ಯ ಒದಗಿಸಿಕೊಡೋದಿಕ್ಕೆ, ಅವರಿಗೆ ಸಹಾಯ ಏನಾದರೂ ಬೇಕಿದ್ರೆ ಮಾಡೊದಿಕ್ಕೆ... ಒಟ್ಟಿನಲ್ಲಿ ನಮ್ಮ ಮನೆಗೆ ಬಂದ ಅತಿಥಿಗಳನ್ನ ಹೇಗೆ ನೋಡ್ಕೋತೀವೋ ಹಾಗೆ ನೋಡ್ಕೋಬೇಕು ಅನ್ನುವುದು ಎರಡನೆಯ ವಿಭಿನ್ನತೆ. ಮೂರನೆಯ ವಿಭಿನ್ನತೆ ಅಂದರೆ ಅವರಿಗೆ ಒಳ್ಳೆಯ ಊಟವನ್ನ ಕೊಡೋದು. ಸಮಾರಂಭ ಅಂದ ತಕ್ಷಣ ಊಟ ಚೆನ್ನಾಗಿರ್ಬೇಕು. ನಮ್ಮ ಕರ್ನಾಟಕದ ವಿಶಿಷ್ಟವಾದ ಊಟ, ಕರ್ನಾಟಕದ ಹಲವಾರು ಪ್ರಾಂತ್ಯಗಳ ವಿಶಿಷ್ಟವಾದ ಅಡುಗೆ, ಅದನ್ನ ಚೆನ್ನಾಗಿ ಎರಡೂವರೆ ದಿವಸ, ಮೂರು ದಿವಸ ಏಳು ಊಟ ಅಥವ ಮೀಲ್ಸ್ ಅಂತೀವಲ್ಲ ಅದನ್ನ ಒದಗಿಸೋದು. [ಅಮೆರಿಕಕ್ಕೆ ಕರ್ನಾಟಕದ ಶಾಸಕರು]

ಪೂರ್ಣಿಮಾ ಮೋಹನ್ : ಖಂಡಿತವಾಗಿ. ನೀವು ಊಟ ಅಂತ ಹೇಳಿ ಎಷ್ಟೋ ಕಿವಿಗಳಿಗೆ ಚುರುಕು ಮುಟ್ಟಿಸಿದ್ರಿ. ಈ ಊಟ ಅಂದ ತಕ್ಷಣ ಜನಗಳಿಗೆ 'ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು' ಆ ಪ್ರಸಿದ್ಧ ಹಾಡೇ ನೆನಪಾಗತ್ತೆ. ಆಮೇಲೆ ನಾನು ಕೇಳಲ್ಪಟ್ಟಂತೆ ಈ ಊಟಕ್ಕೆ ಬೇರೆ ಬೇರೆ ರೀತಿಯಾಗಿ ವಿಶೇಷವಾದ ಮಹತ್ವವನ್ನ ಕೊಟ್ಟು, ಸ್ಪೆಷಲ್ ನೀಡ್ಸ್ ಪೀಪಲ್ ಹೀಗೆ ಫೈನ್ ಡೀಟೈಲ್ಗಳನ್ನ ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಮಾಡಿದೀರ ಅಂತ. ಅದರ ಬಗ್ಗೆ ಏನಾದ್ರು ನೀವು ನಮ್ಮ ಓದುಗರಿಗೆ ಒಂದು ಟ್ರೈಲರ್ ತರಹ, ಒಂದು ಗ್ಲಿಂಪ್ಸ್ ಕೊಡೋದಕ್ಕೆ ಆಗತ್ತಾ?

ಸುರೇಶ್ ಬಾಬು : ಮೊದಲನೆಯದಾಗಿ ಊಟ ಯಾವ ರೀತಿ ಇರತ್ತೆ ಅಂತ ಹೇಳ್ತೀನಿ. ಎಲ್ಲಾ ತರಹದ, ಎಲ್ಲಾ ಪ್ರಾಂತ್ಯದ ಊಟಗಳಿರುತ್ತವೆ. ನಾವು ಜೋಳದ ರೊಟ್ಟಿ ಮಾಡಬಹುದು, ಅಥವಾ ಚಿರೋಟಿ ಮಾಡಬಹುದು, ಅಥವಾ ಮದ್ದೂರ್ ವಡೆ ಮಾಡಬಹುದು. ಆ ತರಹದ್ದೆಲ್ಲ ಒಂದು ಸ್ಪೆಷಲ್ ಊಟ. ಮೊದಲನೇ ಹಬ್ಬದ ದಿವಸ... ಹಬ್ಬದೂಟ... ಮೋದಕ, ಕಡುಬು... ಅವತ್ತಿನ ದಿವಸ ಬಾಳೆ ಎಲೆ ಊಟ... ಈ ತರಹ ಎಲ್ಲ ವ್ಯವಸ್ಥೆ ಮಾಡಿದ್ದೀವಿ. ಯಾವುದೇ ಸಮಾರಂಭದಲ್ಲೂ ಬಾಳೆ ಎಲೆ ಊಟ ಆಗೇ ಇಲ್ಲ. ಇದನ್ನ ಮಾಡಿಯೇ ತೀರಬೇಕು ಅಂತ ಮಾಡಿದೀವಿ. ಹಬ್ಬ ಮಾಡೋದು, ಬಾಳೆ ಎಲೆ ಊಟ ಮಾಡೋದು. ಅದು ಊಟದ ರುಚಿ ಬಗ್ಗೆ.

ಆದರೆ ಬಂದೋರೆಲ್ಲರೂ ಕೂಡ ಬಹಳ ಚೆನ್ನಾಗಿ ಊಟವನ್ನ ಮುಗಿಸಿಕೊಂಡು ಹೋಗ್ಬೇಕು, ಯಾರೂ ಕ್ಯೂನಲ್ಲಿ ಕಾಯಬಾರದು ಅಂತ, ಊಟ ಮಾಡೋ ಕದೆ 32 ಸ್ಟೇಷನ್ಗಳಿರಬೇಕು ಅನ್ನೋ ಯೋಜನೆ ಹಾಕ್ಕೊಂಡಿದೀವಿ. ಅದೇ ರೀತಿ ಜನಗಳಿಗೆ ADA Compliance ಮಾಡಿದೀವಿ. ಅಂದರೆ disabled ಜನಗಳಿಗೆ ಅನುಕೂಲ ಒದಗಿಸಬೇಕು ಅಂತ ಅವರಿಗೆ ಒಂದು ಸೆಪರೇಟ್ ಜಾಗ ಮಾಡಿಕೊಟ್ಟಿದ್ದೀವಿ. ಅದೇ ರೀತಿ ಅಮ್ಮಂದಿರಿಗೆ, ಸಣ್ಣ ಕೂಸು ಇರುವಂಥ, ಹಸುಗೂಸು ಇರುವಂಥ ಅಮ್ಮಂದಿರಿಗೆ, infantsಗೆ ಒಂದು ಸೆಪರೇಟ್ ಜಾಗ ಮಾಡಿಕೊಟ್ಟಿದ್ದೀವಿ. Diabetic patients ಇದ್ದರೆ ಅವರಿಗೆ diabetic menu ಹಾಕಿಕೊಂಡಿದೀವಿ. ಮತ್ತೆ we will make milk available to all the babies all through... ದಿನ ಪೂರ್ತಿ, ಮೂರು ದಿವಸವೂ ಎಳೆಯ ಮಕ್ಕಳಿಗೆ ಹಾಲು ಸಿಗುವ ವ್ಯವಸ್ಥೆ ಮಾಡಿದೀವಿ.

ಪೂರ್ಣಿಮಾ ಮೋಹನ್ : ಬಹಳ ಸುಂದರವಾಗಿ ಮೂಡಿಬಂದಿದೆ ನಿಮ್ಮ ತಯಾರಿ ಅಂತ ಅನ್ನಿಸ್ತಾ ಇದೆ. ನಿಮ್ಮ ತಯಾರಿಗಳನ್ನ ಕೇಳಿದ್ರೆ 'ನ ಭೂತೋ, ನ ಭವಿಷ್ಯತಿ' ಅಂತ ಹೇಳಿರುವಂಥ ಒಂದು ವಾಕ್ಯ ನನಗೆ ಮನದಟ್ಟಾಗ್ತಾ ಇದೆ. ಇನ್ನು ಕೊನೆಯದಾಗಿ ನಾನು ಕೇಳೋದೇನಪ್ಪಾ ಅಂದ್ರೆ... ಇನ್ನೂ ಕೂಡ 'ಅಕ್ಕಾಗೆ ಬರಬೇಕ?' ಅಂತ ಯೋಚನೆ ಮಾಡೋಂತಹವರು ಯಾರಾದ್ರೂ ಕೆಲವರು ಇದ್ರೆ... ಇದರ ಬಗ್ಗೆ ಗೊತ್ತಿರೋ ಪ್ರತಿಯೊಬ್ಬರೂ ಕಾತರದಿಂದ ಎದುರು ನೋಡ್ತಾ ಇರೋ 'ಅಕ್ಕಾ'ಗೆ ಬರೋದಿಲ್ಲ ಅನ್ನೋರ ಸಂಖ್ಯೆ ಬಹಳ ಕಮ್ಮಿ ಇರಬಹುದು. ಆದರೂ ಮೆಸೇಜು ಸರಿಯಾಗಿ ತಲುಪದೆ ಇರುವಂತಹ ಕೆಲವರು ಯಾರಾದರೂ ಇದ್ದರೆ ಅವರಿಗೆ ನೀವು ಹೇಳುವಂಥ ವಿಷಯ ಯಾವುದಾದ್ರೂ ಇದೆಯಾ?

ಸುರೇಶ್ ಬಾಬು : ಖಂಡಿತ ಇದೆ. ಅದಕ್ಕೆ ಮೊದಲು ಹಿಂದಿನ ಪ್ರಶ್ನೆಗೆ ಉತ್ತರವನ್ನ ನಾನು ಕಂಪ್ಲೀಟ್ ಮಾಡ್ಬಿಡ್ತೀನಿ. ನಮ್ಮಲ್ಲಿ hygiene factor ಅಂದ್ರೆ ಒಳ್ಳೆಯ ಕಾರ್ಯಕ್ರಮ, ಒಳ್ಳೆಯ ಆತಿಥ್ಯ, ಒಳ್ಳೆಯ ಊಟ ಇರತ್ತೆ. ಎಲ್ಲರೂ ಅದಕ್ಕೆ importance ಕೊಟ್ಟೇ ಇರ್ತಾರೆ. ನಾವು ಸ್ವಲ್ಪ ಜಾಸ್ತಿ ಒತ್ತು ಕೊಡಬೇಕೂಂತಿದೀವಿ. ಅದಲ್ಲದೆ ಇನ್ನೊಂದು ವಿಶೇಷತೆ ಏನಂದ್ರೆ, ವಿಶೇಷವಾದ ಮನರಂಜನಾ ಕಾರ್ಯಕ್ರಮಗಳು. ಉದಾಹರಣೆಗೆ 'glow art' ಅಂತ. ಬರೀ ಲೈಟಲ್ಲೇ ಚಿತ್ರವನ್ನ ಬಿಡಿಸುವಂಥಾ ಕಾರ್ಯಕ್ರಮ, ಇನ್ನೊಂದು 'shadow play' ಅಂತ ಬರೀ ನೆರಳಿನಲ್ಲೇ ಮಾಡುವಂಥ ಕಾರ್ಯಕ್ರಮ. ಎಲ್ಲವನ್ನೂ ಈಗಲೇ ಹೇಳೋದು ಬೇಡ.

ಆದ್ರೆ ಇನ್ನೊಂದು ಹೇಳ್ಬಿಡ್ತೀನಿ ಕೇಳಿ. ಅಮೇರಿಕದಲ್ಲೇ ಹುಟ್ಟಿ ಬೆಳೆದಂತಹ ಅಮೆರಿಕನ್ನರು ... Indian Americans ಅಲ್ಲ, ನಿಜವಾದ ಆಮೆರಿಕನ್ನರು ಕನ್ನಡ ಹಾಡನ್ನು ಹಾಡುವಂತಹ ಕಾರ್ಯಕ್ರಮ ಕೂಡ ಇದೆ. ಎಲ್ಲ ಚೆನ್ನಾಗಿ ಮೂಡಿ ಬರತ್ತೆ ಅಂದುಕೊಂಡಿದ್ದೀವಿ. ನಮ್ಮ ಸ್ಪೆಷಲ್ ಕಮಿಟಿಯಲ್ಲಿ ವಿಶೇಷತೆ, ಬಿಸಿನೆಸ್ ಫೋರಮ್ ಅಲ್ಲಿ ವಿಶೇಷತೆ, ಎಲ್ಲವೂ ವಿಭಿನ್ನವಾದ ರೀತಿಯಲ್ಲಿ ಮಾಡಬೇಕು ಅಂತ ಯೋಜನೆ ಹಾಕಿಕೊಂಡಿದೀವಿ. ಚೆನ್ನಾಗಿ ಮೂಡಿ ಬರತ್ತೆ ಅಂತ ಅಂದ್ಕೊಂಡಿದೀವಿ. ಕೆಲಸ ಮಾಡಿದೀವಿ, ಶ್ರಮ ಪಟ್ಟಿದೀವಿ. ದೇವರ ದಯದಿಂದ, ಎಲ್ಲರ ಸಹಾಯದಿಂದ ಚೆನ್ನಾಗಿ ಆಗತ್ತೆ ಅಂತ ಅಂದ್ಕೊಂಡಿದೀವಿ.

ನೀವು ಕೇಳಿದ್ರಿ ಏನು ಮೆಸೇಜು ಅಂತ. ಈ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ... ಅದಕ್ಕೆ ಬರೋದೇ ಒಂದು ವಿಶೇಷತೆ. ಇಡೀ ಅಮೆರಿಕದಲ್ಲಿ ಅಮೆರಿಕನ್ನಡಿಗರು, ಹಾಗೂ ವಿಶ್ವ ಕನ್ನಡಿಗರು ಒಂದು ಕಡೆ ಬಂದು, ಎಲ್ಲರ ಜೊತೆಗೂಡಿ, ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನಮ್ಮ ಧರ್ಮವನ್ನ ಅದ್ದೂರಿಯಾಗಿ ಆಚರಿಸುವುದಕ್ಕೆ ಒಂದು ಉತ್ತಮ ಅವಕಾಶ. ಹೀಗೆ involve ಆಗೋದಕ್ಕೆ ಅವಕಾಶ ಸಿಗೋದು ಬಹಳ ಕಮ್ಮಿ, ಇದು ಒಂದು rare ಅವಕಾಶ. ಈ ಅವಕಾಶವನ್ನ ಯಾವ ಕನ್ನಡಿಗನೂ ಮಿಸ್ ಮಾಡ್ಕೋಬಾರದು. ಬಂದವರಿಗೇ ಗೊತ್ತಿರತ್ತೆ ಈ ಅನುಭವ ಎಂಥದ್ದು ಅಂತ.

ಆದರೆ ನಮ್ಮಲ್ಲಿರೋ ಕನ್ನಡಿಗರಿಗೆ, west region ಕನ್ನಡಿಗರಿಗೆ, ಇದುವರೆಗೆ 'ಅಕ್ಕ'ಕ್ಕೆ ಬಹಳ ದೂರ ಹೋಗಬೇಕಾಗಿತ್ತು... east coastಗೆ. ಈಗ ನಮ್ಮ ಹಿತ್ತಿಲಲ್ಲಿಯೇ ಈ ಕಾರ್ಯಕ್ರಮ ನಡೀತಾ ಇದೆ. ಇಂಥಾ ಅವಕಾಶವನ್ನ ಅತಿ ಉತ್ತಮ ರೀತಿಯಲ್ಲಿ ಅಂದ್ರೆ ಎಲ್ಲರಿಗೂ ಮನಸ್ಸಿನಲ್ಲಿ ನಿಲ್ಲುವಂತಹ ಅವಕಾಶವನ್ನ ಕಲ್ಪಿಸಿಕೊಡಬೇಕು ಅಂತ ನಾವು ಅಂದುಕೊಂಡಿದ್ದೀವಿ. ಕಲ್ಪಿಸಿಕೊಡ್ತೀವಿ ಅನ್ನುವ ಭರವಸೆ ನಮಗಿದೆ. ಕಾರ್ಯಕ್ರಮಕ್ಕೆ ಇನ್ನು ಕೇವಲ ಕೆಲವೇ ದಿನಗಳು ಮಾತ್ರ ಇದೆ. ಈ ಕಾರ್ಯಕ್ರಮದ ಮೂಲಕ ಒಂದು ಅವಿಸ್ಮರಣೀಯವಾದಂಥ ಅನುಭವವನ್ನ ಕೊಡೋದ್ರಲ್ಲಿ ನಾವು ಸಫಲರಾಗ್ತೀವಿ ಅಂತ ಅಂದ್ಕೊಂಡಿದೀವಿ. ಅದನ್ನ ಮಿಸ್ ಮಾಡಿಕೊಂಡ್ರೆ ತಿರುಗಿ ಈ ಅವಕಾಶ ಸಿಗೋದಕ್ಕೆ ಕಡಿಮೆ ಅಂದ್ರೆ ಹತ್ತು ವರ್ಷಾನಾದ್ರೂ ಆಗತ್ತೆ. ಇಂತಹ ಸಂದರ್ಭವನ್ನ ಯಾವ ಕನ್ನಡಿಗನೂ ಕಳೆದುಕೋಬಾರದು. ಒಳ್ಳೆಯ ಅವಕಾಶ. ಖಂಡಿತ ಬನ್ನಿ. ಬಂದು ಎಂಜಾಯ್ ಮಾಡಿ ಅಂತ ಕೇಳ್ಕೋತೀನಿ.

ಪೂರ್ಣಿಮಾ ಮೋಹನ್ : ಸುರೇಶ್ ಅವರೆ! ನೀವು 'ಮಹಾಭಾರತ'ದ quote ಒಂದು ಕೇಳಿರಬಹುದು. 'ಯದಿ ಹಸ್ತಿ ತದನ್ಯತ್ರ ಯನ್ನೇ ಹಸ್ತಿ ನ ಕುತ್ರಚಿತ್' ಅಂತ. ಅದರ ಅರ್ಥ ಏನಪ್ಪ ಅಂದ್ರೆ... ಇಲ್ಲಿ (ಪ್ರಪಂಚದಲ್ಲಿ) ನಿನಗೆ ಏನೇನು ಕಾಣೋಕೆ ಸಿಗುತ್ತೋ ಅದು ಖಂಡಿತವಾಗಿಯೂ ಮಹಭಾರತದಲ್ಲಿ ಸಿಗತ್ತೆ. ಮಹಾಭಾರತದಲ್ಲಿ ಇಲ್ಲ ಅಂದ್ರೆ, ಪ್ರಪಂಚದ ಯಾವ ಮೂಲೇನಲ್ಲೂ ಕೂಡ ಅದು ಸಿಗೋದಿಲ್ಲ ಅಂತ. ನಿಮ್ಮ ಈ ಸಂದರ್ಶನದಿಂದ ನನಗೆ ಏನು ಮನವರಿಕೆಯಾಯ್ತು ಅಂದ್ರೆ ಎಂಟರ್ಟೈನ್ಮೆಂಟು, ಎಲ್ಲ fine details ಅಂದ್ರೆ logistics ಆಗ್ಲಿ, ಅತಿಥಿ ಸತ್ಕಾರ ಆಗ್ಲಿ, ಮನರಂಜನೆ ಆಗ್ಲಿ, ಬೇರೆ ಇನ್ಯಾವುದೇ ಅಂಶ ಆಗ್ಲಿ, ಪ್ರತಿಯೊಂದೂ ಸಹ ಯಾವುದಾದ್ರೂ ಸಮ್ಮೇಳನದಲ್ಲಿ ಸಿಗಬಹುದು ಅಂತಿದ್ರೆ ಅದು 'ಅಕ್ಕ' ಸಮ್ಮೇಳನದಲ್ಲಿ ಸಿಗತ್ತೆ. ಇಲ್ಲಿ ನಾವು ಮಾಡಿಲ್ಲ ಅಂದ್ರೆ ಎಲ್ಲೂ ಕೂಡ ನಡೆದಿರೋದಿಕ್ಕೆ ಸಾಧ್ಯ ಇಲ್ಲ ಅಂತ. ಈ ರೀತಿಯಲ್ಲಿ ನೀವು ಕನ್ನಡಿಗರನ್ನ ಆದರದಿಂದ, ಪ್ರೀತಿಯಿಂದ ಬರಮಾಡಿಕೊಳ್ಳೋಕೆ ಮಾಡಿಕೊಂಡಿರೋ ಸಿದ್ಧತೆಗಳೇ ಒಂದು ಸಾಧನೆ. ಅದರಲ್ಲಿ ನಾವೆಲ್ಲರೂ ಭಾಗಿಯಾಗಿದೀವಿ ಅನ್ನೋ ಸಂಭ್ರಮ ನಮಗಿದೆ. ಈ ಪ್ಲಾನು ಯಶಸ್ವಿಯಾಗ್ಲಿ ಅಂತ ನೀವು ಮಾಡ್ತಿರೋ ತಯಾರಿ ನಿಮ್ಮ theme 'ಸಾಧನೆ, ಸಂಭ್ರಮ, ಸಂಕಲ್ಪ'ಕ್ಕೆ ಸರಿಯಾಗಿ ನಡೆದಿದೆ. ಇದು ಖಂಡಿತವಾಗಿ ಯಶಸ್ವಿಯಾಗತ್ತೆ, ಆಗ್ಲಿ ಅಂತ ನಾವೆಲ್ಲ ಹಾರೈಸ್ತಾ, ನಿಮ್ಮ busy scheduleನಲ್ಲಿ ನಮಗೆ ಟೈಂ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನ ತಿಳಿಸ್ತೀವಿ.

ಸುರೇಶ್ ಬಾಬು : ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಿಮಗೂ ಸಹ ಧನ್ಯವಾದಗಳು!

English summary
8th AKKA World Kannada Conference convener Suresh Babu explains how the whole team of AKKA and Kannada Koota Northern California (KKNC) are striving to make the convention memorable. Suresh Babu in an interview with Poornima Mohan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X