ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನದ ಎರಡನೇ ದಿನ ಸಂಭ್ರಮದ ಮೇಲುಗೈ

By ವರದಿ: ಶ್ರೀವತ್ಸ ಜೋಶಿ, ಕ್ಯಾಂಪ್: ಅಟ್ಲಾಂಟ
|
Google Oneindia Kannada News

ಬೆಳಗ್ಗೆ ಭವ್ಯವಾದ ಮೆರವಣಿಗೆಯಿಂದ ಮೊದಲ್ಗೊಂಡು ರಾತ್ರಿ ರಘು ದೀಕ್ಷಿತ್ ತಂಡದ ಸಂಗೀತ ಕಾರ್ಯಕ್ರಮದವರೆಗೂ "ನೋಡಲೆರಡು ಕಣ್ಣು ಸಾಲದು, ಕೇಳಲೆರಡು ಕಿವಿಯು ಸಾಲದು..." ಎಂಬಷ್ಟೂ ಅತ್ಯುತ್ತಮ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ಅಟ್ಲಾಂಟ 'ಅಕ್ಕ' ಸಮ್ಮೇಳನದ ಎರಡನೇ ದಿನ(ಶನಿವಾರ)ವನ್ನು ಸಮೃದ್ಧಗೊಳಿಸಿದವು.

ಪ್ರತಿ ಸಮ್ಮೇಳನದಲ್ಲಿ ಇರುವಂಥದೇ ಅಂಶವಾದರೂ "ಅಕ್ಕ ಸಮ್ಮೇಳನದ ಮೆರವಣಿಗೆ"ಗೆ ಅದರದೇ ಆದ ವೈಶಿಷ್ಟ್ಯ, ಅಮೆರಿಕದ ಉದ್ದಗಲ ಹರಡಿರುವ ವಿವಿಧ ಚಿಕ್ಕ ದೊಡ್ಡ ಕನ್ನಡ ಕೂಟಗಳ ಸದಸ್ಯರು ವಿವಿಧ ವೇಷಭೂಷಣಗಳನ್ನುಟ್ಟು ಸಂಗೀತ ನೃತ್ಯ ಅಭಿನಯ ಕಲೆಗಳಿಂದ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರದರ್ಶನಗಳೊಂದಿಗೆ ತಂಡತಂಡಗಳಾಗಿ ಸಾಗುವಾಗ, ಭಾಗವಹಿಸಿದರ ಉತ್ಸಾಹ ಮುಗಿಲುಮುಟ್ಟುತ್ತದೆ, ನೋಡುಗರ ಮೈನವಿರೇಳುತ್ತದೆ. ಕಳೆದಬಾರಿ ನ್ಯೂಜೆರ್ಸಿಯಲ್ಲಿ ನಡೆದ ಸಮ್ಮೇಳನದ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಆನೆಯ ಆಕರ್ಷಣೆಯಾದರೆ ಈಸಲ ಅಟ್ಲಾಂಟಾದಲ್ಲಿ ಕುದುರೆ ಸಾರೋಟಿನಲ್ಲಿ ಮಹಾರಾಜ ಬರುವ ದೃಶ್ಯವೈಭವ. ರಘು ದೀಕ್ಷಿತ್ ಸಂಗೀತಕಾರ್ಯಕ್ರಮದ ವೇಳೆಯಂತೂ ಇಡೀ ಸಭಾಂಗಣವೇ ಹುಚ್ಚೆದ್ದು ಕುಣಿಯುತ್ತಿತ್ತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣದ ಮೂಲಕ ಶುಕ್ರವಾರ ಸಂಜೆಯೇ ಸಮ್ಮೇಳನದ ಉದ್ಘಾಟನೆಯಾಗಿತ್ತಾದರೂ ಶನಿವಾರ ಬೆಳಗ್ಗೆ ಮುಖ್ಯ ಸಭಾಂಗಣದ "ಅಮೋಘವರ್ಷ"ದ ವೇದಿಕೆಯಲ್ಲಿ ಔಪಚಾರಿಕ ಉದ್ಘಾಟನಾ ಸಮಾರಂಭ. ಭಾರತದ ರಾಯಭಾರಿ ನಿರುಪಮಾ ರಾವ್ ಮತ್ತು ಇನ್ಫೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರ ಉಪಸ್ಥಿತಿ, ಅವರಿಬ್ಬರಿಂದಲೂ ಆತ್ಮೀಯವೆನಿಸುವಂಥ ಭಾಷಣಗಳು. ರಾಜಕಾರಣಿಗಳನ್ನು ಕರೆಸಿ ಅವರ ಕೊರೆತವನ್ನು ಅನುಭವಿಸುವುದಕ್ಕಿಂತ ಸುಧಾಮೂರ್ತಿಯವರ ಸುಧೆಯಂಥ ಮಾತುಗಳನ್ನು ಮನಃಪೂರ್ತಿಯಾಗಿ ಆಲಿಸುವ ಆತ್ಮೀಯ ಅನುಭವ. "ಇಂದು ಅಮೆರಿಕದಲ್ಲಿ ಭಾರತದ ಬಗ್ಗೆ ಒಳ್ಳೆಯ ಭಾವನೆ ಮೂಡಿದೆಯಾದರೆ ಅದರಲ್ಲಿ ನಿಮ್ಮಂಥ ಅಮೆರಿಕನ್ನಡಿಗರ ಪಾತ್ರ ಹಿರಿದು, ನಮ್ಮ ಸಂಸ್ಕೃತಿಯನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಇಲ್ಲಿ ನೀವು ಪಸರಿಸುತ್ತಿರುವ ರೀತಿ ಶ್ಲಾಘನೀಯ" ಎಂದು ಅವರು ಸೋದಾಹರಣವಾಗಿ ವಿವರಿಸುತ್ತಿದ್ದರೆ ಸಮ್ಮೇಳನಾರ್ಥಿಗಳಿಗೆಲ್ಲ ಏನೋಒಂದು ಸಾರ್ಥಕಭಾವ.

ಆರೋಗ್ಯನಿಧಿಗಾಗಿ ಕೊಡುಗೆ : ಕ್ಯಾಲಿಫೋರ್ನಿಯಾದ 'ರಾಗ' ತಂಡದ ರಸಮಂಜರಿ ಕಾರ್ಯಕ್ರಮ ಶನಿವಾರ ಅಪರಾಹ್ನ ಮುಖ್ಯ ಸಭಾಂಗಣದಲ್ಲಿ ಇತ್ತು. ಅಲ್ಲೊಂದು ಉಲ್ಲೇಖಾರ್ಹ ಸಂಗತಿ ದಾಖಲಾಯಿತು. ಕರ್ನಾಟಕದಲ್ಲಿ ಆರೋಗ್ಯನಿಧಿಗಾಗಿ ಧನಸಂಗ್ರಹದ ಉದ್ದೇಶದಿಂದ ನಡೆದಿದ್ದ ಆ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಕೊಡುಗೈ ದಾನಿಗಳಾದರು. ಸ್ವತಃ ಗಾಯಕರೂ ಆಗಿರುವ ಉದ್ಯಮಿ ಕ್ಯಾಲಿಫೋರ್ನಿಯಾದ ಬಿ.ವಿ.ಜಗದೀಶ್ 1 ಲಕ್ಷ ಡಾಲರ್ ಕೊಡುಗೆಯನ್ನು ಘೋಷಿಸಿದರೆ, ಅದಕ್ಕೆ ಸರಿಸಾಟಿಯಾಗಿ ಯು.ಎಲ್.ಬಿ ರಿಯಲ್ಟರ್ಸ್ ನಿರ್ದೇಶಕ ಎಸ್.ಪ್ರದೀಪ್ ಕುಮಾರ್ (ಸಮ್ಮೇಳನದ ಮುಖ್ಯ ಪ್ರಾಯೋಜಕರಲ್ಲೊಬ್ಬರು) ಸಹ 1 ಲಕ್ಷ ಡಾಲರ್ ದೇಣಿಗೆಯ ಭರವಸೆಯಿತ್ತರು.

ಶನಿವಾರ ಮುಖ್ಯಸಭಾಂಗಣ 'ಅಮೋಘವರ್ಷ'ದಲ್ಲಷ್ಟೇ ಅಲ್ಲದೆ ಸಮಾಂತರ ವೇದಿಕೆಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳೂ "ಪ್ರೇಕ್ಷಕರೆಲ್ಲ ಎದ್ದು ನಿಂತು ಕರತಾಡನ ಮಾಡಿದರು" ಎಂದೆನ್ನಿಸಿಕೊಂಡವು. ಕೆಲವು ಸಂದರ್ಭಗಳಲ್ಲಂತೂ ಮುಖ್ಯ ಸಭಾಂಗಣಕ್ಕಿಂತಲೂ ಸಮಾಂತರ ವೇದಿಕೆ 'ವಿಷ್ಣುವರ್ಧನ' ಕಿಕ್ಕಿರಿದು ತುಂಬಿರುತ್ತಿತ್ತು. "ರಾಜಕೀಯ 2012" ಎಂಬೊಂದು ಸಾಮಾಜಿಕ ನಾಟಕ (ಹಂಟ್ಸ್‌ವಿಲ್ ಕನ್ನಡ ಸಂಘದವರು ಡಾ.ಹೆಗ್ಗೆರೆ ರಂಗನಾಥ್ ನೇತೃತ್ವದಲ್ಲಿ ಅಭಿನಯಿಸಿದ್ದು) ಕರ್ನಾಟಕದ ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ಲೇವಡಿ ಮಾಡಿದ ರೀತಿ ಮನಮುಟ್ಟುವಂತಿತ್ತು. ಆದಾದ ಕೂಡಲೆ ಟೆಕ್ಸಸ್‌ನ 'ಮಲ್ಲಿಗೆ' ಕನ್ನಡ ಕೂಟದ "ಯಮರಾಜನ ಆಸ್ಥಾನದಲ್ಲಿ" ನಗೆನಾಟಕ. ಇಂದಿನ ಹೈಟೆಕ್ ಯುಗದಲ್ಲಿ ಯಮಲೋಕ ಹೇಗಿರುತ್ತದೆಯೆಂಬ ಹಾಸ್ಯಕಲ್ಪನೆ ಪ್ರೇಕ್ಷಕರ ಹೊಟ್ಟೆಹುಣ್ಣಾಗಿಸಿತು. ಅದು ಸಾಲದೋ ಎಂಬಂತೆ ಕನೆಕ್ಟಿಕಟ್‌ನ ಮಲ್ಲಿ ಸಣ್ಣಪ್ಪನವರ್ (ಅಣಕು ಎನಿಮೇಷನ್ ವಿಡಿಯೋಗಳಿಂದ ಜನಪ್ರಿಯನಾದ ಪ್ರತಿಭಾವಂತ) ಪ್ರಸ್ತುತಪಡಿಸಿದ 'ಅಮೆರಿಕನ್ ಅಳಿಯ' ಹಾಸ್ಯನಾಟಕ. ಅದರ ಪಾತ್ರಧಾರಿಗಳೆಲ್ಲ ಅಮೆರಿಕದ ವಿವಿಧ ನಗರಗಳಲ್ಲಿ ವಾಸಿಸುವರು, ಪರಸ್ಪರ ಮುಖಪರಿಚಯವೂ ಇಲ್ಲದವರು. ಟೆಲಿಫೋನ್ ಕಾನ್ಪರೆನ್ಸ್ ಕಾಲ್‌ಗಳ ಮೂಲಕ ರಿಹರ್ಸಲ್ಸ್ ನಡೆಸಿ, ವೇದಿಕೆಯ ಮೇಲೆ ಪ್ರದರ್ಶನ ನೀಡಿದ ಸಾಹಸಿಗರು. ಹಾಗಂತ ಎನೌನ್ಸ್ ಮಾಡುವುದಲ್ಲವಾದರೆ ಪ್ರೇಕ್ಷಕರಾರಿಗೂ ಗೊತ್ತೇ ಆಗುತ್ತಿರುಲಿಲ್ಲವೇನೋ, ಅಷ್ಟೂ ಸಲೀಸಾದ ನಟನೆ.

'ಅಕ್ಕ ಐಡಲ್' ನಡೆಯುತ್ತಿದ್ದ ಪ್ರೊ.ಜಿ.ವೆಂಕಟಸುಬ್ಬಯ್ಯ ಸಭಾಂಗಣದಲ್ಲಂತೂ ಕುಳಿತುಕೊಳ್ಳಲು ಸ್ಥಳವಿಲ್ಲದೆ ಕಿಟಕಿ-ಬಾಗಿಲುಗಳಿಂದ ಇಣುಕಿನೋಡಿ ಮುದಗೊಂಡವರೂ ಇದ್ದಾರೆ. ಇಷ್ಟಾದರೂ ವಿವಿಧ ವೇದಿಕೆಗಳಲ್ಲಿ ಒಳ್ಳೊಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಸಮ್ಮೇಳನ ಭವನದ ಲಾಬಿಗಳಲ್ಲಿ ಅಲ್ಲಲ್ಲಿ ಆರಾಮಾಗಿ ಆತ್ಮೀಯ ಹರಟೆಗಳು ನಡೆಯುತ್ತಿದ್ದ ದೃಶ್ಯಗಳೂ ಸಾಮಾನ್ಯವಾಗಿದ್ದವು.

ಮಂತ್ರಮುಗ್ಧಗೊಳಿಸಿದ ಯಕ್ಷಗಾನ : ಮಂಗಳೂರಿನ ಯಕ್ಷಮಂಜೂಷಾ ತಂಡ ಪ್ರಸ್ತುತಪಡಿಸಿದ 'ಪಂಚವಟಿ' ಯಕ್ಷಗಾನ ಪ್ರದರ್ಶನಕ್ಕೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾದದ್ದು. ಶನಿವಾರ ಸಂಜೆ ಮುಖ್ಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದು ಸುಳ್ಳಲ್ಲ. ಪ್ರೇಕ್ಷಕರು ಎಷ್ಟೊಂದು ತಲ್ಲೀನರಾಗಿದ್ದರೆಂದರೆ ನಡುವೆ ಒಮ್ಮೆ ಹಠಾತ್ತಾಗಿ ವಿದ್ಯುತ್ ಪೂರೈಕೆ ವ್ಯತ್ಯಯವಾದಾಗ ಶೂರ್ಪನಖಿಯ ಅಬ್ಬರಕ್ಕೆ ಕಣ್ಮುಂದೆ ಕತ್ತಲೆ ಬಂದಂತಾಯಿತೆಂದೇ ಗ್ರಹಿಸಿರಬೇಕು! ಒಂದರ್ಧ ನಿಮಿಷದೊಳಗೇ ಮತ್ತೆ ವಿದ್ಯುತ್ ಪೂರೈಕೆ ಶುರುವಾಯಿತೆನ್ನಿ. ವಿದ್ಯಾ ಕೊಳ್ಯೂರು ನೇತೃತ್ವದ ಈ ಯಕ್ಷಗಾನ ತಂಡವು ಹೊಸದಿಲ್ಲಿಯ ಐ.ಸಿ.ಸಿ.ಆರ್ (ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್‌ಶಿಪ್ಸ್) ಪ್ರಾಯೋಜಕತ್ವ ಪಡೆದುಕೊಂಡು ಅಮೆರಿಕ ಪ್ರವಾಸ ಮಾಡುತ್ತಿದೆ. 'ಅಕ್ಕ' ಸಮ್ಮೇಳನದ ನಂತರ ಅಮೆರಿಕದ ವಿವಿಧ ನಗರಗಳಲ್ಲಿ ಬೇರೆಬೇರೆ ಪ್ರಸಂಗಗಳನ್ನು ಆಡಿ ತೋರಿಸಲಿದೆ. 'ಅಕ್ಕ' ಸಮ್ಮೇಳನದಲ್ಲೂ, ಒಂದು ಪೂರ್ಣಪ್ರಮಾಣದ ಯಕ್ಷಗಾನ ತಂಡ ಕರ್ನಾಟಕದಿಂದ ಬಂದು ಪ್ರದರ್ಶನ ನೀಡುತ್ತಿರುವುದು ಇದೇ ಮೊದಲು. ಅಲ್ಲದೇ ಈ ತಂಡದಿಂದಾಗಿ ಹೊಸದಿಲ್ಲಿಯ ಐ.ಸಿ.ಸಿ,ಆರ್ ಕೂಡ 'ಅಕ್ಕ'ಸಮ್ಮೇಳನವನ್ನು ತನ್ನ ಕಾರ್ಯವ್ಯಾಪ್ತಿಯಲ್ಲಿ ಗುರುತಿಸಿದಂತಾಯ್ತು.

'ಅಕ್ಕ' ಸಮ್ಮೇಳನಾರ್ಥವಾಗಿ ನಡೆದಿದ್ದ ಕ್ರಿಕೆಟ್ ಪಂದ್ಯದಲ್ಲಿ ವರ್ಜೀನಿಯಾ ತಂಡ ಚಾಂಪಿಯನ್‌ಶಿಪ್ ಪ್ರಶಸ್ತಿ ಗಳಿಸಿದೆ. ಸೆಮಿಫೈನಲ್ಸ್‌ನಲ್ಲಿ ಆಟ್ಲಾಂಟ ತಂಡವನ್ನೂ, ಫೈನಲ್ಸ್‌ನಲ್ಲಿ ಡೆಟ್ರಾಯಿಟ್ ತಂಡವನ್ನೂ ಸೋಲಿಸಿದೆವೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ 'ಅಕ್ಕ' ಉಪಾಧ್ಯಕ್ಷರೂ, ವರ್ಜೀನಿಯಾ ಕ್ರಿಕೆಟ್ ತಂಡದ ಸದಸ್ಯರೂ ಆಗಿರುವ ಮಾದೇಶ ಬಸವರಾಜು.

'ಕಂಬಾರರೊಂದಿಗೆ ಸಂವಾದ' ಕಾರ್ಯಕ್ರಮ ಶನಿವಾರದ ಸಾಹಿತ್ಯ ಚಟುವಟಿಕೆಗಳಲ್ಲಿ ಗಮನ ಸೆಳೆಯಿತು. ಸಮಯ ಮೀರುತ್ತಿದ್ದರೂ ಪ್ರೇಕ್ಷಕರಿಂದ ಪ್ರಶ್ನೆಗಳಿನ್ನೂ ಮುಗಿದಿರಲಿಲ್ಲ. ಸಮಾಧಾನ ಚಿತ್ತದಿಂದ ಪ್ರಶ್ನೆಗಳನ್ನೆಲ್ಲ ಉತ್ತರಿಸಿದ ಕಂಬಾರರನ್ನು ಆಮೇಲೆ ಒಂದು ಹಾಡು ಹಾಡುವಂತೆಯೂ ಕೋರಿಕೊಂಡರು ಕಂಬಾರಾಭಿಮಾನಿಗಳು!

ಸಮ್ಮೇಳನದ ಸ್ಮರಣ ಸಂಚಿಕೆ "ಚಿಗುರು" ಮತ್ತು ಕಾರ್ಯಕ್ರಮಗಳ ವೇಳಾಪಟ್ಟಿಯ ಕಿರುಪುಸ್ತಿಕೆ "ತುತ್ತೂರಿ" ಶುಕ್ರವಾರ ರಾತ್ರೆ ಹೊತ್ತಿಗಷ್ಟೇ ಅಚ್ಚಿನಮನೆಯಿಂದ ಹೊರಬಂತು. ಹಾಗಾಗಿ ಕೆಲ ಸ್ವಯಂಸೇವಕರು ರಾತೋರಾತ್ರಿ ಆ ಪುಸ್ತಕಗಳನ್ನು ರಿಜಿಸ್ಟ್ರೇಷನ್ ಕಿಟ್‍‌ನಲ್ಲಿ ತುಂಬಿಸಿ, ಶನಿವಾರ ಬೆಳಿಗ್ಗೆ ಸಮ್ಮೇಳನಾರ್ಥಿಗಳಿಗೆ ಅವುಗಳನ್ನು ವಿತರಿಸಲು ಅಣಿಗೊಳಿಸುವ ಕೆಲಸ ಮಾಡಬೇಕಾಯ್ತು. ಮುಖ್ಯ ಸಂಚಾಲಕರಲ್ಲೊಬ್ಬರಾದ ಪಾದರಸದಂತೆ ಅತ್ತಿಂದಿತ್ತ ಓಡಾಡುತ್ತ ಕೆಲಸಗಳನ್ನು ನಿಭಾಯಿಸುವ ಶ್ರೀವಿಜಯ ಶ್ರೀನಿವಾಸ್ ಸಹ ಪುಸ್ತಕಗಳನ್ನು ಚೀಲಗಳಲ್ಲಿ ತುಂಬಿಸುವ ಕೆಲಸದಲ್ಲಿ ಕೈಜೋಡಿಸಿದ್ದು - ಅವರು "ಕೆಲಸ ಮಾಡುವ ಮುಂದಾಳು" ಎನ್ನುವುದರ ಪ್ರತೀಕವೂ ಹೌದು, ಅಟ್ಲಾಂಟ ಸಮ್ಮೇಳನದಲ್ಲಿ ಸ್ವಯಂಸೇವಕರ ಕೊರತೆ ಎದ್ದುಕಾಣುತ್ತಿದೆ ಎನ್ನುವುವರ ಕುರುಹೂ ಹೌದು.

ಬೊಂಬಾಟ್ ಭೋಜನ : "ಈ ಸಮ್ಮೇಳನದಲ್ಲಿ ಊಟ-ತಿಂಡಿ ವಿಭಾಗಕ್ಕೆ ಹತ್ತರಲ್ಲಿ ಹತ್ತು ಅಂಕ ಕೊಡಬಹುದು, ಅಷ್ಟೂ ಚೆನ್ನಾಗಿದೆ ಊಟದ ವ್ಯವಸ್ಥೆ ಮತ್ತು ರುಚಿಕಟ್ಟಾದ ಅಡುಗೆ" ಎಂದು ಅನೇಕ ಸಮ್ಮೇಳನಾರ್ಥಿಗಳಿಂದ ಮುಕ್ತಕಂಠದ ಪ್ರಶಂಸೆ. ಶನಿವಾರ ಮಧ್ಯಾಹ್ನದೂಟದಲ್ಲಿ ಬಿಸಿಬೇಳೆಭಾತ್ ಮಾಡಿದ ಮೋಡಿ ಅದು! ಆದರೆ ಬಿಸಿಬೇಳೆಭಾತ್ ಒಂದೇ ಅಲ್ಲ, ವಿವಿಧ ಪಲ್ಯಗಳು, ಚಪಾತಿ, ಅನ್ನ-ಸಾರು, ಪುಳಿಯೊಗರೆ ಚಿತ್ರಾನ್ನ ಎಲ್ಲವೂ ರುಚಿಕರ. ಶನಿವಾರ ರಾತ್ರಿಯೂಟಕ್ಕೆ ಒಬ್ಬಟ್ಟು ಸಹ ಇತ್ತು. ಕಾಫಿ ಮತ್ತು ಚಹ ಅಂತೂ ನಿರಂತರವಾಗಿ ಸಿಗುವ ವ್ಯವಸ್ಥೆ ಇತ್ತು.

ಒಟ್ಟಿನಲ್ಲಿ ಸಮ್ಮೇಳನದ ಎರಡನೇ ದಿನವೂ ಉತ್ಸಾಹ ಲವಲವಿಕೆ ಸಡಗರ ಸಂಭ್ರಮಗಳೇ ಮೇಲುಗೈ ಸಾಧಿಸಿದ್ದವು.

English summary
7th AKKA World Kannada Conference, Atlanta, USA. Highlights of day 2 by Srivathsa Joshi. Infosys foundation chairman Sudha Murthy and Indian ambassador in USA Nirupama Rao gave heart warming speach. Cultural activities, procession, interaction with Kambar and food were of first class quality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X