ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಲಾಂಟ ಅಕ್ಕ ಸಮ್ಮೇಳನ : ಶುಕ್ರವಾರದ ಮುಖ್ಯಾಂಶ

By ವರದಿ: ಶ್ರೀವತ್ಸ ಜೋಶಿ, ಕ್ಯಾಂಪ್: ಅಟ್ಲಾಂಟ
|
Google Oneindia Kannada News

"ಬರೀ ಕನಸುಗಳು ಇರುವ, ನೆನಪುಗಳು ಇಲ್ಲದ ದೇಶ ಅಮೆರಿಕ. ಅಂತಹ ದೇಶಕ್ಕೆ ಬಂದು ಕನಸುಗಳನ್ನು ನನಸಾಗಿಸುವುದರ ಜೊತೆಯಲ್ಲಿ ನೆನಪುಗಳನ್ನೂ ಹಸಿರಾಗಿಟ್ಟುಕೊಂಡಿರುವ ಅಮೆರಿಕನ್ನಡಿಗರನ್ನು ಮೆಚ್ಚಬೇಕು. 'ಅಕ್ಕ' ಸಮ್ಮೇಳನದಂಥವು ಬರೀ ಜಾತ್ರೆಯಷ್ಟೇ ಆಗದೆ ನೆನಪುಗಳನ್ನು, ಅಂದರೆ ಈ ಸಂದರ್ಭದಲ್ಲಿ ಕನ್ನಡ ಮಣ್ಣಿನ ಸೊಗಡನ್ನು ಜೀವಂತವಾಗಿಡುವಲ್ಲಿ ಸಹಕಾರಿ. ಅಮೆರಿಕ ದೇಶಕ್ಕೆ ಬಂದು ವಿಜ್ಞಾನ, ತಂತ್ರಜ್ಞಾನ ಶಾಸ್ತ್ರಗಳಲ್ಲಿ ಅಧ್ಯಯನ ನಡೆಸಿ ಪ್ರಗತಿ ಸಾಧಿಸಿರುವ ಕನ್ನಡಿಗರು ಆ ಶಾಸ್ತ್ರಗಳನ್ನು ಕನ್ನಡಕ್ಕೆ ತರುವಲ್ಲಿಯೂ ಮುಂದಾಗಬೇಕು. ಇವತ್ತು ಕನ್ನಡದಲ್ಲಿ ಬೇರೆಲ್ಲ ತೆರನಾದ ಸಾಹಿತ್ಯ ಶ್ರೀಮಂತವಾಗಿದ್ದರೂ ವಿಜ್ಞಾನ ತಂತ್ರಜ್ಞಾನ ಶಾಸ್ತ್ರಕ್ಕೆ ಸಂಬಂಧಿಸಿದ ಬರೆವಣಿಗೆ ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿಯಿದೆ. ಈ ದಿಸೆಯಲ್ಲಿ ಅಮೆರಿಕನ್ನಡಿಗರು ಯೋಚಿಸಬೇಕು. ದೇವರ ಜತೆಗೂ ಕನ್ನಡದಲ್ಲೇ ಮಾತಾಡೋಣ ಎಂದು ಬಸವಣ್ಣ ಹೇಳಿದ್ದಾರಾದರೆ ಮಿಕ್ಕೆಲ್ಲ ವಿಷಯಗಳಲ್ಲೂ ಕನ್ನಡದಲ್ಲೇ ಮಾತು ಏಕಾಗಬಾರದು?"

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಟ್ಲಾಂಟದ ಬೃಹತ್ ಸಭಾಭವನದ "ಅಮೋಘವರ್ಷ" ವೇದಿಕೆಯಲ್ಲಿ 7ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಭಾಷಣದಲ್ಲಿ ಹೇಳಿದ ಮಾತುಗಳು.

ಕರ್ನಾಟಕ ಸರಕಾರದ ಏಕೈಕ ಪ್ರತಿನಿಧಿಯಾಗಿ ಸಮ್ಮೇಳನಕ್ಕೆ ಆಗಮಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದ್ದೂ ಕನ್ನಡ ಭಾಷೆಯ ಸೊಗಡು ಹೇಗೆ ಅನನ್ಯವೂ ವಿಶಿಷ್ಟವೂ ಆದುದೆಂದು. ಗ್ರಾಮ್ಯ ಕನ್ನಡದ ಅನೇಕ ಉದಾಹರಣೆಗಳನ್ನು ಹೆಸರಿಸಿ ಅದಕ್ಕೊಂದಿಷ್ಟು ನಗೆಲೇಪನವನ್ನೂ ಮಾಡಿದ ಚಂದ್ರು ಭಾಷಣವನ್ನು ಮುಗಿಸಿದ ಪರಿ ಹೇಗೆಂದರೆ, "ಇವತ್ತು ಕನ್ನಡ ಬದುಕಿ ಬೆಳೆಯುತ್ತಿರುವುದು ಒಬ್ಬ ಮುಖ್ಯಮಂತ್ರಿ ಚಂದ್ರುವಿನಂದಲ್ಲ, ಒಬ್ಬ ಟಿ.ಎಸ್.ಸೀತಾರಾಮನಿಂದಲ್ಲ, ಒಬ್ಬ ಐ.ಎಂ.ವಿಟ್ಠಲಮೂರ್ತಿಯಿಂದಲ್ಲ, ಬದಲಿಗೆ ಆ ಕೀರ್ತಿ ಸಲ್ಲಬೇಕಾದ್ದು ಗ್ರಾಮೀಣ ಪ್ರದೇಶದಲ್ಲಿನ ನೇಗಿಲಯೋಗಿಗೆ. ಆತ ತನ್ನ ಕೆಲಸಕೈಂಕರ್ಯಗಳಲ್ಲಿ ಯಾವೊಂದು ಆಡಂಬರವಿಲ್ಲದೆ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾನೆ."

ಅಕ್ಕ' ಸಮ್ಮೇಳನದ ವಿಧ್ಯುಕ್ತ ಉದ್ಘಾಟನೆ ಶನಿವಾರದಂದು ಬೆಳಿಗ್ಗೆ ನಡೆಯಲಿದೆ. ಶುಕ್ರವಾರದ ಕಾರ್ಯಕ್ರಮವೇನಿದ್ದರೂ ಇನ್ನೆರಡು ದಿನಗಳಲ್ಲಿನ ಸಾಂಸ್ಕೃತಿಕ ರಸದೂಟದ ಒಂದು ಮುನ್ನೋಟ ಅಷ್ಟೇ. ಈಸಲ ಅದರಲ್ಲೂ ಒಂದು ವಿಶಿಷ್ಟವಾದ ಕಾರ್ಯಕ್ರಮವಿತ್ತು. "ಸಂಪ್ರದಾಯದಿಂದ ಸಮಕಾಲೀನತೆ" ಎಂಬ ಥೀಮ್‌ನಲ್ಲಿ ಒಂದು ಆಕರ್ಷಕ ನೃತ್ಯರೂಪಕ. ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯಕಲಾವಿದೆ ಮಧು ನಟರಾಜ್ ಅವರ STEM (Space, Time, Energy and Movement) ತಂಡದವರ ಪ್ರಸ್ತುತಿ. ಶಿಲಾಶಾಸನಗಳ ಕಾಲದ ಕರ್ನಾಟಕ, ಕನ್ನಡ ಸಂಸ್ಕೃತಿಯಿಂದ ಹಿಡಿದು ಇಂದಿನ ಹೈಟೆಕ್ ಯುಗದ ಕರ್ನಾಟಕದವರೆಗೆ ವಿವಿಧ ದೃಶ್ಯಾವಳಿಗಳ ನೃತ್ಯರೂಪ, ಪೂರಕ ಸಂಗೀತ ಮತ್ತು ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನದೊಂದಿಗೆ. ಅದು ಟೀಮ್ ಪ್ರೆಸೆಂಟೇಶನ್ ಆದರೆ ಶ್ವೇತಾ ವೆಂಕಟೇಶ್ ಅವರಿಂದ ಕಥಕ್ ಶೈಲಿಯಲ್ಲಿ "ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ" ಹಾಡಿಗೆ ನರ್ತನ. ಪ್ರೇಕ್ಷಕರಲ್ಲಿ ಮಿಂಚಿನ ಸಂಚಾರ ಮೂಡಿಸಿದ ಕಾರ್ಯಕ್ರಮಗಳು.

ಮತ್ತೆ ಎಂದಿನಂತೆ 'ಅಕ್ಕ' ಪದಾಧಿಕಾರಿಗಳು, ಸಮ್ಮೇಳನ ಸಂಚಾಲಕರು, ಮುಖ್ಯ ಅತಿಥಿಗಳು ಹೀಗೆ ವೇದಿಕೆಯ ತುಂಬೆಲ್ಲ ಆಸೀನರಾದ ಗಣ್ಯರಿಂದ ಕಿರು ಭಾಷಣಗಳು. ಅದರಲ್ಲಿ ಐದು ಜನ 'ಸ್ವಾಮಿಗಳು' ಆದ್ದರಿಂದ ಆಶೀರ್ವಚನ ಎಂದರೂ ಸರಿಯೇ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಕರ್ಷಕವಾಗಿ ಅಚ್ಚುಕಟ್ಟಾಗಿ ಮಾತಾಡಿದರು. ಅಮೆರಿಕನ್ನಡತಿ ದಿ.ವಿಮಲಾ ಚನ್ನಬಸಪ್ಪ ಬರೆದ ಕವಿತೆಯನ್ನು ಉಲ್ಲೇಖಿಸಿದ ಸ್ವಾಮೀಜಿ, ಹತ್ತಿಪ್ಪತ್ತು ವರ್ಷಗಳ ಹಿಂದೆ ಬರೆದಿದ್ದ ಆ ಕವಿತೆಯ ಅರ್ಥ, ಮಾರ್ಮಿಕತೆ ಈಗ ಮತ್ತಷ್ಟು ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು. ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿಯವರ ಆಶೀರ್ವಚನ ಭಾಷಣವೂ ಸತ್ವಯುತವಾಗಿತ್ತು.

ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂಬ ಗೊಣಗಾಟವಿಲ್ಲ : ಇದು 'ಅಕ್ಕ'ದ ಏಳನೇ ಸಮ್ಮೇಳನ. ಕಳೆದ ಆರು 'ಜಾತ್ರೆ'ಗಳಿಗೆ ಹೋಲಿಸಿದರೆ ಈಸಲ ಸಮ್ಮೇಳನಕ್ಕೆ ನೋಂದಾವಣೆ ಮಾಡಿದವರ ಸಂಖ್ಯೆ ಕಡಿಮೆ. ಅದಕ್ಕಿಂತಲೂ ಮುಖ್ಯವಾದ ಮತ್ತು ಎದ್ದುಕಾಣುತ್ತಿದ್ದ ಬದಲಾವಣೆ ಎಂದರೆ ಈಬಾರಿ ಒಬ್ಬೇಒಬ್ಬ ಶಾಸಕನಾಗಲೀ ಮಂತ್ರಿಮಾಗಧನಾಗಲೀ ಈ ಸಮ್ಮೇಳನದಲ್ಲಿ ಕಾಣಿಸಿಕೊಳ್ಳಲಿರುವುದು. ಇದು ಬಹಳ ಸಮಾಧಾನದ ವಿಚಾರ ಎಂದು ಅಮೆರಿಕನ್ನಡಿಗರ ನಿಟ್ಟುಸಿರು. ರಾಜಕಾರಣಿಗಳಿಲ್ಲ ಅಷ್ಟೇ ಅಲ್ಲ, ಈ ಸರ್ತಿ ಚಲನಚಿತ್ರತಾರೆಯರ ದಂಡೂ ಇಲ್ಲ. ಶ್ರೀನಿವಾಸ ಕಪ್ಪಣ್ಣ ಮತ್ತು ಐ.ಎಂ.ವಿಟ್ಠಲಮೂರ್ತಿಯವರ ಪರಿಕಲ್ಪನೆಯ "ಸಾಂಸ್ಕೃತಿಕ ತಂಡ"ದ ಕಲಾವಿದರಷ್ಟೇ ಕರ್ನಾಟಕದಿಂದ ಬಂದವರು. ಹಾಗಾಗಿ ಈಸಲ "ಅದು ಸರಿಯಾಗಲಿಲ್ಲ, ಇದು ಸರಿ ಇರಲಿಲ್ಲ..." ಎಂದು ಹಿಂದಿರುಗಿದ ಮೇಲಿನ ಗೊಣಗಾಟವೂ ಇರಲಿಕ್ಕಿಲ್ಲ ಎಂದು ಸಮ್ಮೇಳನ ಸಂಚಾಲಕರ ಆಶಾಭಾವ.

ಮುಖ್ಯ ಸಂಚಾಲಕ ಡಾ.ರಾಮಸ್ವಾಮಿ ಮನೆ ಯಜಮಾನನ ಗೆಟ್‌ಅಪ್‌ನಲ್ಲಿಯೇ ಯುವತಂಡದ ಅಧ್ವರ್ಯುವಾಗಿ ಸ್ವತಃ ನಿಂತು ಕೆಲಸಮಾಡುತ್ತಿದ್ದದ್ದು ಸಮ್ಮೇಳನವನ್ನು ಅರ್ಥಪೂರ್ಣವಾಗಿ ಪೂರೈಸುವ ಅವರ ಹಿರಿದಾಸೆಯ ಪ್ರತೀಕ. ಆಗಲೇ ಹೇಳಿದಂತೆ ಈಬಾರಿ ರಾಜಕಾರಣಿಗಳು ಮತ್ತು ಚಿತ್ರತಾರೆಯರು ಇಲ್ಲವಾದ್ದರಿಂದ "ಅವರನ್ನು ನೋಡಿಕೊಳ್ಳುವ" ಜವಾಬ್ದಾರಿಯೂ ಇಲ್ಲ. ಅಕ್ಕ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಅಮರನಾಥ ಗೌಡ ಮತ್ತಿತರ ಪದಾಧಿಕಾರಿಗಳಿಗೆ ಇದರಿಂದಾಗಿ ಸಾಮಾನ್ಯ ಸ್ವಯಂಸೇವಕರನ್ನು, ಸಮ್ಮೇಳನಕ್ಕಾಗಿ ಅಮೆರಿಕದ ದೂರದೂರುಗಳಿಂದ ಬಂದ ಕನ್ನಡಿಗರನ್ನು ಖುದ್ದಾಗಿ ಆತ್ಮೀಯವಾಗಿ ಮಾತನಾಡಿಸಿ ಕುಶಲ ವಿಚಾರಿಸುವ ಅವಕಾಶ. ಸಮ್ಮೇಳನ ಒಂಥರದಲ್ಲಿ "ನಮ್ಮನೆಯ ಸಮಾರಂಭ" ಎನಿಸಿಕೊಳ್ಳುವುದಕ್ಕೆ ಕಾರಣ.

'ಅಕ್ಷಯಪಾತ್ರೆ' ಹೆಸರಿನ ದೊಡ್ಡ ಹಾಲ್‌‍ನಲ್ಲಿ ಊಟದ ವ್ಯವಸ್ಥೆ. ಸೊಗಸಾದ ರುಚಿಕರವಾದ ಅಡುಗೆ. ಜನಜಂಗುಳಿಯಿಲ್ಲ. ಮುಖ್ಯ ಸಭಾಂಗಣದ ಅಕ್ಕಪಕ್ಕದಲ್ಲಿ ನಿರಂತರ ಕಾಫಿ/ಟೀ ವ್ಯವಸ್ಥೆ. ಇಂಥ ಸಮ್ಮೇಳನಗಳಲ್ಲಿ ಮುಖ್ಯವಾಗಿ ಕೈಗೂಡುವುದು ಸ್ನೇಹಿತರನ್ನು, ಹಳೇಪರಿಚಯದವರನ್ನು, ದೂರದ ಸಂಬಂಧಿಕರನ್ನು ಬಹು ವರ್ಷಗಳ ನಂತರ ಭೇಟಿಯಾಗುವ ಅವಕಾಶ. ಪ್ರಾಯಕ್ಕೆ ಬಂದ ಮಕ್ಕಳಿರುವವರಿಗೆ ವಧು-ವರ ಅನ್ವೇಷಣೆಯ ವೇದಿಕೆ. ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಊಟದ ಜತೆ ಉಪ್ಪಿನಕಾಯಿ ಇದ್ದಂತೆ.

ಸಮ್ಮೇಳನ ಸಭಾಂಗಣದ ಹೊರಗೆ ಬಾಳೆ ಗಿಡಗಳಿಂದ ಅಲಂಕರಿಸಿದ ಪುಟ್ಟದಾದ ಸುಂದರ ಚಪ್ಪರವೊಂದನ್ನು ನಿರ್ಮಿಸಿಟ್ಟಿದ್ದಾರೆ. ಆ ಬಾಳೆದಿಂಡುಗಳು, ತೆಂಗಿನ ಮಡಲುಗಳು, ಬಾಳೆಗೊನೆಗಳೆಲ್ಲ ಫ್ಲೋರಿಡಾ ಸಂಸ್ಥಾನದ ಬಾಳೆ ಗಾರ್ಡನ್‌ನಿಂದ ತಂದದ್ದಂತೆ. ಫ್ಲೋರಿಡಾದಲ್ಲಿ ತೆಂಗು, ಬಾಳೆ ಬೆಳೆಸುವ ಅಮೆರಿಕನ್ ಕೃಷಿಕನೊಬ್ಬ ಸಮ್ಮೇಳನ ಸಭಾಂಗಣದ ಹೊರಗಡೆ ಎಳೇನೀರಿನ ಸ್ಟಾಲ್ ಕೂಡ ಇಟ್ಟಿದ್ದಾನೆ! ಇನ್ನೊಂದು ಸ್ಟಾಲ್ ಕಬ್ಬಿನ ಹಾಲಿನದು. ಅಮೆರಿಕನ್ನಡಿಗರಿಗೆ ತವರೂರ ಮಣ್ಣಿನ ಸೊಗಡು ನೆನಪಾಗಲು ಇನ್ನೇನು ಬೇಕು?

English summary
7th AKKA World Kannada Conference, Atlanta, USA. Highlights of day 1 by Srivathsa Joshi. Dr. Chandrashekar Kambar inaugurated cultural activities and called on the americannadigas to write Kannada articles on science and technologies too. The formal inauguration will be done on Saturday, Sept 1, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X