[an error occurred while processing this directive][an error occurred while processing this directive][an error occurred while processing this directive]
 ಮುಖಪುಟ  »  ಎನ್ಆರ್ಐ

ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹತ್ತಾರು ವಿಶೇಷ... ನೂರಾರು ವೈವಿಧ್ಯ!
ಬುಧವಾರ, ಏಪ್ರಿಲ್ 5, 2006 Hrs (IST)      ನಮ್ಮ "ಸುದ್ದಿಸಾರಂಗಿಗೆ" ಚಂದಾದಾರರಾಗಿ     ಸಿಟಿಜನ್ ಜರ್ನಲಿಸಂ   


ಆತ್ಮೀಯ ಕನ್ನಡಬಂಧುಗಳಿಗೆ ಶರಣು.

ಸೆಪ್ಟೆಂಬರ್‌ 1-3 ಮಧ್ಯೆ ನಡೆಯಲಿರುವ ಅಕ್ಕ ವಿಶ್ವ ಕನ್ನಡ ಈ ಸಮ್ಮೇಳನಾಚರಣೆಯನ್ನು ವರ್ಷದ ಅತ್ಯಂತ ಉಲ್ಲಾಸದಾಯಕ ಘಟನೆಯನ್ನಾಗಿಸುವ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಸಾಗಿವೆ. ಕಾವೇರಿ ಕನ್ನಡ ಸಂಘದ ಸಹಕಾರ ಹಾಗು ಸಹಯೋಗದೊಂದಿಗೆ ನಡೆಯಲಿರುವ ಈ ಸಮ್ಮೇಳನದಲ್ಲಿ ಸುಮಾರು 150 ಮಂದಿ ಸ್ವಯಂ ಸೇವಕರು ಹಲವಾರು ಉಪ ಸಮಿತಿಗಳ ನಿರ್ದೇಶನದಲ್ಲಿ ಶ್ರಮವಹಿಸಿ ದುಡಿಯುತ್ತಿದ್ದಾರೆ. ಈ ಶ್ರಮಕ್ಕೆ ಕಾರಣ, 5000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬರಲಿರುವ ನಿಮಗಾಗಿ ಅತ್ಯುತ್ತಮ ಹಾಗು ಚಿರಸ್ಮರಣೇಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು.

ಈ ಪತ್ರದ ಉದ್ದೇಶ ಸೆಪ್ಟೆಂಬರ್‌ 1-3 ದಿನಾಂಕಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪಕ್ಷಿನೋಟವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು. ಸ್ಥಳೀಯ ಹಾಗು ನಮ್ಮ ತಾಯ್ನಾಡಿನಿಂದ ಬರಲಿರುವ ಉತ್ಕೃಷ್ಟ ಕಲಾವಿದರ ಸಹಯೋಗದೊಂದಿಗೆ ನಿಮ್ಮ ಕಣ್ಮನ ತಣಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕರ್ನಾಟಕದಿಂದ ಕೆಲವಾರು ಕಲಾವಿದರನ್ನು ಇಲ್ಲಿ ಬರಮಾಡಿಕೊಳ್ಳರು ಕರ್ನಾಟಕ ಸರ್ಕಾರ ನೀಡುತ್ತಿರುವ ನೆರವನ್ನು ತುಂಬು ಮನದಿಂದ ನೆನೆಯುತ್ತೇವೆ. ಅಲ್ಲಿಂದ ಬರಲಿರುವ ಕಲಾವಿದರಿಗೆ ಅಗತ್ಯವಿರುವ ವೀಸಾ ದೊರೆತು ಅವರೆಲ್ಲರೂ ನಮ್ಮ ನಿಮ್ಮೊಡನಿರುವಂತಾಗಲಿ ಎಂಬುದು ನಮ್ಮ ಹಾರೈಕೆ ಮತ್ತು ಆಶಯ.

ಸದ್ಯದಲ್ಲಿ ಖಚಿತವಾಗಿ ಬರುವ ಅತಿಥಿಗಳ ಪಟ್ಟಿ ನಮ್ಮಲ್ಲಿಲ್ಲ. ನಮಗೆ ಈ ಬಗ್ಗೆ ಮಾಹಿತಿ ದೊರೆತ ತಕ್ಷಣ ನಿಮ್ಮ ಮುಂದೆ ಪಟ್ಟಿಯನ್ನಿಡುತ್ತೇವೆ. ಎಲ್ಲಾ ನವೀಕರಿಸಿದ ವರದಿಗಳಿಗಾಗಿ ಆಗಿಂದಾಗ್ಗೆ ನಮ್ಮ ವೆಬ್‌ ಪುಟವನ್ನು ಸಂದರ್ಶಿಸುತ್ತಿರಿ.

ನಿಮ್ಮ ಗಮನಕ್ಕಾಗಿ :

ದಿನಕ್ಕೊಮ್ಮೆ ಬರುವ ಸೂರ್ಯ; ಆ ಸೂರ್ಯನ ಬರುವಿಕೆಗಾಗಿ ಕಾಯ್ವ ಸೂರ್ಯಕಾಂತಿಯಂತೆ
ತಿಂಗಳಿಗೊಮ್ಮೆ ಬರುವ ಚಂದ್ರ; ಆ ಚಂದ್ರನ ಬರುವಿಕೆಗಾಗಿ ಕಾಯ್ವ ನೈದಿಲೆಯಂತೆ
ವರ್ಷಕ್ಕೊಮ್ಮೆ ಬರುವ ಶ್ರಾವಣ; ಆ ಶ್ರಾವಣದ ಸಂಭ್ರಮಕ್ಕಾಗಿ ಕಾಯ್ವ ಹೆಂಗೆಳತಿಯರಂತೆ
ಎರಡು ವರ್ಷಕ್ಕೊಮ್ಮೆ ಬರುವ ‘ಅಕ್ಕ ವಿಶ್ವ ಸಮ್ಮೇಳನ; ಆ ಸಮ್ಮೇಳದ ಆಚರಣೆಗಾಗಿ ನಿಂತಿದೆ ‘ಕಾವೇರಿ’ ಬಳಗ.

‘ಅಕ್ಕ ವಿಶ್ವ ಸಮ್ಮೇಳನ’ ಕನ್ನಡಿಗರ ನಾಡು ನುಡಿಯ ಮೇಲಣ ಪ್ರೀತಿಯ ಸಂಕೇತ. ಈ ಸಮ್ಮೇಳನದ ಸಂಭ್ರಮದ ಆಚರಣೆಗಾಗಿ ಹತ್ತಾರು ರಾಷ್ಟ್ರಗಳಿಂದ ಮುವ್ವತ್ತೇಳು ಕನ್ನಡ ಸಂಘಗಳಿಂದ ಬರಲಿದ್ದೀರಿ. ಸೆಪ್ಟೆಂಬರ್‌ 1ರಿಂದ 3 ರ ವರೆಗೂ ‘ಅಕ್ಕ’ನ ಮನೆಗೆ ಬರುವ ನಿಮ್ಮೆಲ್ಲರೆಗೂ ನಮ್ಮ ಅಂತರಾಳದ ಒಲವಿನ ಸ್ವಾಗತ. ಆ ದಿನಗಳಲ್ಲಿ ನಿಮ್ಮ ಆತಿಥ್ಯ ನಮ್ಮ ಹೊಣೆ. ನಿಮ್ಮ ಸಂತೋಷ ನಮ್ಮ ಗುರಿ. ನಿಮ್ಮ ಮನೋರಂಜನೆ ನಮ್ಮ ಧ್ಯೇಯ. ಹಾಗೆಂದೇ ನಿಮ್ಮೆಲ್ಲರ ಹಿತಾಭಿಲಾಷೆಯನ್ನು ಮನದಲ್ಲಿಟ್ಟುಕೊಂಡು, ಅತೀವವಾದ ಕಾಳಜಿಯಿಂದ ಕಾರ್ಯಕ್ರಮಗಳನ್ನು ನಿರ್ವಹಿಸಲಿದ್ದೇವೆ. ಇದು ಕರ್ನಾಟಕದ ಸುವರ್ಣ ಹಬ್ಬ. ಸಮಸ್ತ ಕನ್ನಡಿಗರೂ ಕನ್ನಡ ಹಣತೆಯನ್ನು ಹಚ್ಚಿಟ್ಟು ಭೂಗೋಲಕ್ಕೆಲ್ಲಾ ಹೊಂಬೆಳಕನ್ನು ಮೂಡಿಸುವ ಸಮಯ.

ಕಾರ್ಯಕ್ರಮಗಳು :

ನೃತ್ಯ/ನಾಟಕ/ಸಂಗೀತ, ಈ ಪ್ರಾಕಾರಗಳು ಸುಸಂಸ್ಕೃತ ಕನ್ನಡಿಗರ ಬದುಕಿನ ಭಾಗ. ಬಸವ, ಪುರಂದರ, ಕನಕ, ಒಡೆಯರ್‌, ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಪರಮೇಶ್ವರ ಭಟ್ಟರ ಹಾಡಿನ ತುಣುಕುಗಳ ಮೆಲುಕು ಹಾಕುವ ಮನ ನಮ್ಮದು. ವೆಂಕಟ ಲಕ್ಷಮ್ಮ, ಜಟ್ಟಿತಾಯಮ್ಮನವರು ನರ್ತಿಸಿದ ಮೈಸೂರು ನೃತ್ಯ ಶೈಲಿಗೆ ಮಾರು ಹೋದ ಜೀವ ನಮ್ಮದು. ಶ್ರೀರಂಗ, ಜಡಭರತ, ಗುಬ್ಬಿವೀರಣ್ಣ, ವರದಾಚರ್‌, ಸುಬ್ಬಯ್ಯ ನಾಯ್ಡು , ಕಾರ್ನಾಡ, ಕಾರಂತ, ಮಾ.ಹಿರಣ್ಣಯ್ಯ ಅವರುಗಳು ಒಡನಾಡಿದ ರಂಗಭೂಮಿಕೆಗೆ ನಮಿಸಿದ ಕರ ನಮ್ಮದು. ಈ ಮೂರೂ ಪ್ರಕಾರಗಳಲ್ಲಿ ಪರಿಣತಿ ಪಡೆದ ಅತ್ಯುತ್ತಮ ಕಲಾವಿದರನ್ನು ಆಹ್ವಾನಿಸಿದ್ದೇವೆ.

ನಮ್ಮ ಕರೆಯನ್ನು ಮನ್ನಿಸಿ ಈ ಕಲಾವಿದರೆಲ್ಲಾರೂ ಸಮ್ಮೇಳನಕ್ಕೆ ಬರಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು, ಕಲೆಯನ್ನು ಆನಂದಿಸಿ ಅನುಭವಿಸುವ ಅವಕಾಶ ನಿಮ್ಮದು. ಹಾಗೆಯೇ ನಿಮ್ಮಲ್ಲಿರುವ ಕಲಾವಿದರನ್ನು ಒಗ್ಗೂಡಿಸಿ ಕಾರ್ಯಕ್ರಮ ಕೊಡುವಂತೆ ಪ್ರೋತ್ಸಾಹಿಸಿ.ಕಾರಣ ಇದು ನಿಮ್ಮ ವೇದಿಕೆಯೂ ಹೌದು!. ನಿಮ್ಮ ತಂಡಗಳ ಕಲೆಯ ಅಭಿವ್ಯಕ್ತಿಗೆ ನಮ್ಮ ವೇದಿಕೆ ನಿರ್ಮಿತವಾಗಿದೆ.

ನಮ್ಮ ಯಾದಿಯಲ್ಲಿರುವ ಹೆಸರಾಂತ ಪ್ರತಿಭಾವಂತರು :

ಕನ್ನಡದ ಆಸ್ತಿಯಾದ ಮಾಸ್ತಿ ವೆಂಕಟೇಶ್‌ ಐಯ್ಯಂಗಾರ್‌ ರಚಿತ ‘ಗೌಡರ ಮಲ್ಲಿ’ ನೃತ್ಯ ರೂಪಕವನ್ನು ಲಲಿತಾ ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ತೆರೆಯ ಮೇಲೆ ಸಾಕಾರ ಗೊಳಿಸಲಿದ್ದಾರೆ ನೂಪುರ ತಂಡದವರು. ಹೊಸ ಪೀಳಿಗೆಯ ನವ್ಯ ಶೈಲಿಯ ನೃತ್ಯ ಶೈಲಿಗೆ ಹೆಸರಾದ ‘ನಿತರುತ್ತ್ಯ’ ಪ್ರತಿಭಾನ್ವಿತ ತಂಡದವರ ಕಾರ್ಯಕ್ರಮ ನಿಮ್ಮನ್ನು ಮೋಡಿಮಾಡುವುದರಲ್ಲಿ ಸಂದೇಹವೇ ಇಲ್ಲಾ. ವಸುಂಧರಾ ದೊರೈಸ್ವಾಮಿಯವರ ನೃತ್ಯ ಪ್ರದರ್ಶನವೂ ನಮ್ಮ ಕಾರ್ಯಕ್ರಮದ ಭಾಗ.

ಮಾಯಾಮೃಗ ಖ್ಯಾತಿಯ ಸಿರಿ ಕಂಠದೊಡತಿ ಪಲ್ಲವಿ ಬರಲಿದ್ದಾರೆ ಎಂಬ ವಿಚಾರವನ್ನು ನಿಮ್ಮೊಡನೆ ಹಂಚಿಕೊಳ್ಳ ಬಯಸುತ್ತಿದ್ದೇವೆ. ಸಿನಿಮಾ ಮತ್ತು ರಂಗಭೂಮಿಯಲ್ಲಿ ಹೆಸರು ಮಾಡಿರುವ ಯಶಸ್ವಿ ನಿರ್ದೇಶಕ ಹಾಗು ನಟ ನಾಗಾಭರಣ ತಮ್ಮ ತಂಡದೊಂದಿಗೆ, ಕಂಬಾರರ ಪ್ರಸಿದ್ಧ ನಾಟಕ ‘ಜೊಕುಮಾರ ಸ್ವಾಮಿ’ ನಾಟಕವನ್ನು ಸಾದರ ಪಡಿಸಲಿದ್ದಾರೆ. ಜೊತೆ ಜೊತೆಗೆ ನಮ್ಮ ಅಮೆರಿಗನ್ನಡಿಗರ ಹಲವಾರು ತಂಡದವರು ನವರಸ ಭರಿತ ನಾಟಕಗಳನ್ನು ನಿಮ್ಮ ಮುಂದೆ ಆಡಲು ತಯಾರಾಗಿ ಸಮ್ಮೇಳನದ ದಿನವನ್ನು ಎದುರು ನೋಡುತ್ತಿದಾರೆ. ಅರುಂಧತಿಯವರನ್ನು ಸಮ್ಮೇಳನಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳೂ ಭರದಿಂದ ಸಾಗುತ್ತಿದೆ. ಮಾಯಾಮೃಗ ಖ್ಯಾತಿಯ ಲಕ್ಷ್ಮಿಚಂದ್ರಶೇಖರ್‌ ಹಾಗು ಜನಪ್ರಿಯ ಟಿ.ವಿ ನಿರ್ದೇಶಕ/ನಟ ಬಿ.ವಿ ರಾಜಾರಾಂ ಬರಲಿದ್ದಾರೆ.

ಶಾಸ್ತ್ರೀಯ ಸಂಗೀತ ಪ್ರೇಮಿಗಳಿಗಾಗ ವಿಶೇಷ ವೇದಿಕೆಯನ್ನು ನಿರ್ಮಿಸಲಾಗಿದ್ದು, ಸತತವಾಗಿ ಎರಡೂ ದಿನಗಳು ಉತ್ತಮ ಕಲಾವಿದರ ಹಾಡುಗಾರಿಕೆಗೆ ವೇದಿಕೆಯನ್ನು ತೆರೆದಿಡಲಾಗಿದೆ. ಪ್ರಸಿದ್ಧ ವೇಣುವಾದಕ ಪ್ರವೀಣ್‌ ಗೋಡ್‌ ಕಿಂಡಿ, ಹಾಗೂ ನಾದಸ್ವರ ವಾದಕ ಮುನಿಸ್ವಾಮಿ ಕೋದಂಡ ರಾಮ್‌ ಅವರೊನ್ನೊಳಗೊಂಡ ಲಯಲಹರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕರ್ನಾಟಕ ಪ್ರಸಿದ್ಧ ಗಾಯಕ/ಗಾಯಕಿಯರು ಬರುವ ಭರವಸೆಗಳಿವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಮಗೆ ಖಾತ್ರಿಯಾದ ತಕ್ಷಣ ನಿಮಗೆ ತಿಳಿಸುವೆವು ಎಂಬ ಭರವಸೆ ಕೊಡುತ್ತೇವೆ.

ಯಕ್ಷಗಾನ :

ಕರಾವಳಿಯ ಅದ್ಭುತ ರಮ್ಯ ಕಲೆ ಯಕ್ಷಗಾನ. ಮನಗೆಲ್ಲುವ ಸಂಭಾಷಣೆ, ಕಣ್ಣಿಗೆಹಬ್ಬವೆನಿಸುವ ಪೋಷಾಕು, ಹುಚ್ಚೆಬ್ಬಿಸುವ ನೃತ್ಯಗತಿ ಇವೆಲ್ಲಾ ಯಕ್ಷಗಾನದ ಚಮತ್ಕಾರ. ಚಿತ್ತಾಣಿ ತಂಡದವರ ‘ಗದಾಯುದ್ಧ’ ನಿಮ್ಮೆಲ್ಲರ ಮನ ಗೆಲ್ಲುವುದು ಎಂಬ ನಂಬಿಕೆ ನಮ್ಮದು.

ಅಕ್ಕ ಐಡಲ್‌ :

ಈ ವರ್ಷ ಹೊಸದಾಗಿ ಸೇರ್ಪಡೆಯಾಗಲಿರುವ ಕಾರ್ಯಕ್ರಮ ‘ಅಕ್ಕ ಐಡಲ್‌’ ವಿನೂತನವಾದ ಈ ಕಾರ್ಯಕ್ರಮದಲ್ಲಿ ಅತ್ಯಂತ ಸುಶ್ರಾವ್ಯವಾಗಿ ಹಾಡುವ ಹಾಡುಗಾರ, ಹಾಡುಗಾರ್ತಿಯರನ್ನು ಆರಿಸಲಿದ್ದೇವೆ. ಈ ಸುವರ್ಣ ಕಂಠದ ಶೋಧ ನಿಮ್ಮ ಸಂಘಗಳ ಅಂಗಳದಿಂದ ಶುರುವಾಗಬೇಕಿದೆ. ‘ಸುವರ್ಣ ಕಂಠದ’ ಶೋಧನೆಗೆ ನಿಮ್ಮ ಸಹಕಾರ ಅತ್ಯಗತ್ಯ.

ನಿಯಮ ಮತ್ತು ವಿವರಗಳಿಗೆ ಈ ತಾಣಕ್ಕೆ ಭೇಟಿ ಕೊಡಿ :

ಮೆರವಣಿಗೆ :

ಪ್ರತಿ ವರ್ಷನಡೆಯುವ ‘ಮೆರವಣಿಗೆ’ಯ ಪರಂಪರೆಯನ್ನು ಮುಂದುವರಿಸಲಿದ್ದೇವೆ. ಇದು ಕರ್ನಾಟಕದ ಏಕೀಕರಣದ 50ನೇ ವರ್ಷದ ಆಚರಣೆಯಾದ್ದರಿಂದ ಈ ವರ್ಷದ ಮೆರವಣಿಗೆಗೆ ಒಂದು ವಿಶೇಷ ಅರ್ಥವಿದೆ. ಡೆಪ್ಯುಟಿ ಚನ್ನಬಸಪ್ಪ, ಬೆನಗಲ್‌ ರಾಮರಾವ್‌, ಬೆನಗಲ್‌ ಶಿವರಾವ್‌, ಆಲೂರು ವೆಂಕಟ ರಾಯರು, ಹುಯಿಲುಗೊಳ ನಾರಾಯಣರಾಯರು, ವಿ.ಪಿ ಮಾಧವರಾಯರು, ಸಿದ್ದಪ್ಪ ಕಂಬಳಿ, ಮಿರ್ಜಿ ಇಸ್ಮಾಯಿಲ್‌, ಬಿ. ಎಂ. ಶ್ರೀ., ಕುವೆಂಪು, ಕಡಪದ ರಾಘವೇಂದ್ರ ರಾವ್‌, ಮುದವೀಡು ಕೃಷ್ಣ ರಾವ್‌, ಬಿ. ಶಿವಮೂರ್ತಿ ಶಾಸ್ತ್ರಿಗಳು...... ಏಕೀಕರಣಕ್ಕಾಗಿ ಹೋರಾಡಿದ ಮಹನೀಯರಿವರು. ಇವರನ್ನೆಲ್ಲಾ ಒಳಗೊಂಡಂತೆ ಕರ್ನಾಟಕದ ಪ್ರತೀ ಜಿಲ್ಲೆಯಲ್ಲಿ ಜನಿಸಿದ ಮಹಾನ್‌ ಕನ್ನಡಿಗರನ್ನು ಮೆರವಣಿಗೆಯ ಮೂಲಕ ನೆನೆವುದು ನಾವು ಅವರಿಗೆ ಸಲ್ಲಿಸುವ ಗೌರವ.

ನೃಪತುಂಗ, ರನ್ನ, ಪಂಪ, ಬಸವಾದಿ ಪ್ರಮಥರು, ಕೃಷ್ಣದೇವರಾಯ, ಪುರಂದರ, ಕನಕ, ಕೆಳದಿ ಚನ್ನಮ್ಮ, ಓಬವ್ವ, ಕಿತ್ತೂರು ಚನ್ನಮ್ಮ ,ಸಂಗೊಳ್ಳಿ ರಾಯಣ್ಣ.... ಹೆಸರ ಹೇಳ ಹೊರಟರೆ ಪುಟಗಳು ಸಾಲದಾದೀತು. ಪ್ರತೀ ಸಂಘವೂ ಒಂದೊಂದು ಜಿಲ್ಲೆಯನ್ನು ಪ್ರತಿನಿಧಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಪ್ರತೀ ಜಿಲ್ಲೆಯನ್ನು ಪ್ರತಿನಿಧಿಸುವ ಕೂಟಗಳು ಆ ಜಿಲ್ಲೆಯ ವಿಶೇಷಗಳನ್ನು ಪ್ರತಿನಿಧಿಸುವ ಹಾಗು ಎತ್ತಿ ತೊರಿಸುವ ಪ್ರಯತ್ನ ಮಾಡುವಂತೆ ಕೋರಲಾಗಿದೆ. ಉದಾಹರಣೆಗೆ ಯಾವುದೇ ಜಿಲ್ಲೆಯ ಐತಿಹಾಸಿಕ/ಸಾಂಸ್ಕೃತಿಕ/ಪೌರಾಣಿಕ ಘಟನೆಯನ್ನಾಗಲಿ/ಸ್ಮಾರಕಗಳನ್ನು ತೋರಿಸುವ ತೇರುಗಳನ್ನಾಗಲಿ, ಪೋಸ್ಟರ್‌ಗಳನ್ನಾಗಲಿ ಮೆರವಣಿಗೆಗೆ ತರಬಹುದು. ಅಥವಾ ಆ ಪ್ರಾಂತ್ಯದ ಉಡುಗೆ/ತೊಡುಗೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದು. ಮೆರವಣಿಗೆಯ ವಿವರಣೆಯನ್ನು ನಿಮ್ಮ ಸಂಘಗಳಿಗೆ ಒದಗಿಸಲಾಗಿದೆ.

ತಾರಾ ಮೇಳ :

ಆಕಾಶದಿಂದ ಧರೆಗಿಳಿದು ಬರಲಿರುವ ತಾರಾಗಣಗಳೊಂದಿಗೆ ನೀವೂ ಮಿನುಗ ಬನ್ನಿ. ರಮ್ಯ, ಪುನೀತ್‌ ರಾಜ್‌ ಕುಮಾರ್‌, ಉಪೇಂದ್ರ, ಮುರಳಿ, ವಿಜಯ ರಾಘವೇಂದ್ರ, ಡೈಸಿ ಬೊಪ್ಪಣ್ಣ ಅವರು ಖಚಿತವಾಗಿ ಬರುವ ನಿರೀಕ್ಷೆಯಿದ್ದು, ಅವರೊಂದಿಗೆ ಖ್ಯಾತ ಸಂಗೀರ ನಿರ್ದೇಶಕ ಗುರುಕಿರಣ್‌ ಬರಲಿದ್ದಾರೆ. ಮನ ಮುದಗೊಳಿಸುವ ನೃತ್ಯ ಸಂಗೀತದೊಂದಿಗೆ ನಿಮ್ಮನ್ನು ಕಿನ್ನರಲೋಕಕ್ಕೆ ಕರೆದೊಯ್ಯಲಿದ್ದಾರೆ ಈ ತಾರಾಗಣ.

ಖ್ಯಾತ ನಿರ್ದೇಶಕರುಗಳಾದ ಗಿರೀಶ್‌ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ, ಪ್ರಕಾಶ್‌ ಬರಲಿದ್ದಾರೆ.

ಮಳಿಗೆಗಳು :

ನಿಮ್ಮ ಕಣ್ಮನ ತಣಿಸುವ ವಸ್ತ್ರ, ಒಡವೆ, ಪುಸ್ತಕ, ಧ್ವನಿಸುರಳಿ, ಪರಿಕರದ ನೂರಾರು ಮಳಿಗೆಗಳು ಸಮ್ಮೇಳನದ ನಿವೇಶನದ ತಂಬಿನಡಿಯಲ್ಲಿ ನಿಮಗಾಗಿ ತೆರೆದಿರುತ್ತವೆ. ಹಾಗೆಯೇ ನಿಮಗಾಗಲಿ, ಅಥವ ನಿಮ್ಮ ಪರಿಚಯದ ಯಾರಿಗಾದರೂ ಮಳಿಗೆಯನ್ನು ತೆರೆಯಬೇಕು ಎಂಬ ಆಸಕ್ತಿ ಇದ್ದಲ್ಲಿ ತಕ್ಷಣ ನಮಗೆ ತಿಳಿಸತಕ್ಕದ್ದು. ಮಳಿಗೆಯ ಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಿದ್ದೇವೆ.

ಅಣ್ಣಾವ್ರ ಚಲನ ಚಿತ್ರೋತ್ಸವ :

ನಾಡಿನ ಒಳ ಹೊರಗಿರುವ ಎಲ್ಲಾ ಕನ್ನಡಿಗರಲ್ಲಿ ಕನ್ನಡತನವನ್ನು ಜಾಗೃತಗೊಳಿಸಿ, ಕನ್ನಡನುಡಿಯನ್ನು ನಮ್ಮೆಲ್ಲರ ಮನದಲ್ಲಿ ಸ್ಥಿರಗೊಳಿಸಿ, ನಾವು ‘ಕನ್ನಡಿಗರೆಂಬ ಹೆಮ್ಮೆಯನ್ನು’ ನಮ್ಮೆದೆಯಲ್ಲಿ ಬೆಳಸಿ ಉಳಿಸಿಹೋದ ಸಾರ್ವಭೌಮ ಡಾ.ರಾಜ್‌ಕುಮಾರ್‌ ಅವರ ಚಲನಚಿತ್ರಗಳ ಮತ್ತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿ, ಆ ಬಗ್ಗೆ ವಿಚಾರ ಸಂಕೀರ್ಣವನ್ನು ಏರ್ಪಡಿಸುತ್ತಿದ್ದೇವೆ. ‘ಅಣ್ಣಾವ್ರ’ ಚಲನ ಚಿತ್ರಗಳೊಂದಿಗೆ, ಅರಿವಿನ ಆಳವನ್ನು ಕಲಕುವ ಚಲನಚಿತ್ರಗಳ ಸಾಲಿನಲ್ಲಿ ನಿಂತ ಹಸೀನಾ, ನಾಯಿ ನೆರಳು, ದ್ವೀಪ ಚಿತ್ರಗಳಾದರೆ, ಮನರಂಜನೆಗಾಗಿ ತರಿಸಬೇಕೆಂದಿರುವ ಚಲನಚಿತ್ರ ಪಟ್ಟಿಯಲ್ಲಿ ಚಿನ್ನಾರಿ ಮುತ್ತ, ನಾಗಮಂಡಲ ಸೇರಿವೆ. ಪ್ರದರ್ಶಿಸಲ್ಪಡುವ ಚಲನಚಿತ್ರ ಪಟ್ಟಿ ಖಚಿತವಾದ ತಕ್ಷಣವೇ ನಿಮಗೆ ತಿಳಿಸುತ್ತೇವೆ.

ಪ್ಯಾಷನ್‌ ಶೋ :

ವಿನೂತನವಾದ ವಸ್ತ್ರ ವಿನ್ಯಾಸ ಪ್ರದರ್ಶನ ನಡೆಸಿಕೊಡಲಿದ್ದಾರೆ ನಮ್ಮೂರ ಚೆಲುವ/ಚೆಲುವೆಯರು. ವಸ್ತ್ರ ವಿನ್ಯಾಸ ಬೆಳೆದುಬಂದ ಹಾದಿ, ಇತಿಹಾಸ, ಪರಂಪರೆ ಮತ್ತು ಪ್ರಸ್ತುತ ವಿವರಗಳೊಂದಿಗೆ ನಮ್ಮೂರ ಯುವ ರೂಪದರ್ಶಿ ತಂಡ ನಿಮ್ಮ ಮುಂದೆ ಮಿಂಚಲಿದೆ.

ಅಮೆರಿಕನ್ನಡಿಗ/ಅಮೆರಿಕನ್ನಡತಿ :

ಕನ್ನಡ ಸಂಸ್ಕೃತಿ, ಆಚರಣೆಯನ್ನು ಪ್ರತಿನಿಧಿಸುವ ವ್ಯಕ್ತಿತ್ವ ಉಳ್ಳ ಅಮೆರಿಕನ್ನಡಿಗ/ಅಮೆರಿಕನ್ನಡತಿಯನ್ನು ಆರಿಸಿ ಅವರಿಗೆ ಕಿರೀಟಧಾರಣೆ ಮಾಡಲಾಗುವುದು. ಹಾಗೆಯೇ ಕನ್ನಡ ಕುಮಾರ/ಕನ್ನಡ ಕುಮಾರಿಯನ್ನು ಆರಿಸಲಾಗುವುದು.

ಆಯ್ಕೆಯ ಪ್ರವೇಶ ಪತ್ರಕ್ಕೆ ಭೇಟಿ ಕೊಡಿ :

ಮಹಿಳಾ ವೇದಿಕೆ :

ಭೌಗೋಳೀಕರಣದ ಸಮಯದಲ್ಲಿ ಕಾಲ ದಾಪುಕಾಲು ಹಾಕಿ ಓಡುತ್ತಿರುವ ಈ ಶತಮಾನದ ಆದಿಯಲ್ಲಿ ‘ಸ್ತ್ರೀ’ ಶಕ್ತಿ ಅದಮ್ಯ. ಜಗತ್ತಿನ ಪ್ರತೀ ರಂಗದಲ್ಲಿಯೂ ಪುರುಷನ ಸಮಸಾಟಿಯಾಗಿ ನಿಲ್ಲುವ ಜಾಣ್ಮೆ, ಸ್ಥೈರ್ಯ ಇಂದಿನ ಸ್ತ್ರೀಯರದು. ತಮ್ಮ ವೃತ್ತಿ ಹಾಗು ಉದ್ಯಮಗಳಲ್ಲಿ ಪ್ರಗತಿ ಸಾಧಿಸಿರುವ ಜಯಂತಿ ರಾವ್‌, ಸುಧಾ ಮೂರ್ತಿ, ಡಾ.ಪ್ರೇಮಾ ಗಂಗಣ್ಣ, ಪೂರ್ಣಿಮಾ ರಾವ್‌, ಗೀತಾ ರಾಮ ಮೂರ್ತಿ ಮುಂತಾದವರು ಈ ವೇದಿಕೆಗೆ ಚಾಲನೆ ನೀಡಲಿದ್ದಾರೆ. ಕರ ಕುಶಲಕಲೆಗಳ ಪ್ರದರ್ಶನ ಹಾಗು ಸೌಂದರ್ಯ ಸಾಧನ/ವರ್ಧಕ ಬಳಕೆ ಹಾಗು ಉಪಯುಕ್ತ ಸಲಹಾ ಚಟುವಟಿಕೆಗಳ ಕಾರ್ಯಾಗಾರ ನಡೆಯಲಿವೆ.

ಸಾಹಿತ್ಯ ಲೋಕ :

ಕನ್ನಡ ಸಾಹಿತ್ಯ ಲೋಕದ ಚಟುವಟಿಕೆಗಳಿರದ ಸಮ್ಮೇಳನ ಅಪೂರ್ಣ. ಹಲವಾರು ಪ್ರಖ್ಯಾತ ಲೇಖಕರು ಸಮ್ಮೇಳನಕ್ಕೆ ಬರುವ ನಿರೀಕ್ಷೆಯಿದ್ದು, ಸಾಹಿತ್ಯ ಚಟುವಟಿಕೆಯಲ್ಲಿ ಉತ್ಸಾಹವಿರುವ ಎಲ್ಲರಿಗೂ ಸಾಹಿತ್ಯ ಚರ್ಚೆ, ಕವಿತಾ ವಾಚನ, ಲೇಖನ ಮಂಡನೆಗೆ ಅವಕಾಶವಿದೆ. ನಿಮ್ಮೆಲ್ಲರ ನೆಚ್ಚಿನ ಕಾರ್ಯಕ್ರಮ ನಡೆಸಿಕೊಡಲು ಸಾಹಿತ್ಯ ಮಂಡಳಿ ತಯ್ಯಾರಿ ನಡೆಸುತ್ತಿದೆ. ಈ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳು ನಿಯೋಜಿತವಾಗಿವೆ. ಸಾಹಿತಿ ಡಾ.ಭೈರಪ್ಪನವರು ಬರುವವರಿದ್ದಾರೆ. ಮತ್ತೂರು ಕೃಷ್ಣಮೂರ್ತಿ ಯವರ ಕುಮಾರವ್ಯಾಸ ಕಾವ್ಯವಾಚನ ಸಾಹಿತ್ಯ ಪ್ರೇಮಿಗಳಿಗೊಂದು ಸಿಹಿ ಸುದ್ದಿ. ಗೀತಾನಾಗಭೂಷಣ ಹಾಗು ಜಯಂತ ಕಾಯ್ಕಿಣಿಯವರನ್ನು ಕರೆತರುವ ಯತ್ನ ಮಾಡುತ್ತಿದ್ದೇವೆ.

ಯುವಜನ ವೇದಿಕೆ :

ನಮ್ಮ ಕೈಯ್ಯ ಕನ್ನಡ ಜ್ಯೋತಿಯನ್ನು ಯುವ ಪೀಳಿಗೆಗೆ ವರ್ಗಾಯಿಸುವ ಪರ್ವಕಾಲವಿದು. ಇಡೀ ದೇಶದ ಯುವ ಸಂಕುಲವನ್ನು ಸಮ್ಮೇಳನದ ವೇದಿಕೆಗೆ ಕರೆತರುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ರೋಹಿತ್‌ ಶೆಟ್ಟಿ ಯುವ ತಂಡವನ್ನು ಗುಂಪುಗೂಡಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ಸಂಘದ ಒಡನಾಟದಲ್ಲಿರುವ ಯುವಕ/ಯುವತಿಯರನ್ನು ಉತ್ತೇಜಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನಒಲಿಸಿ. ಯುವ ತಂಡದ ಕಾರ್ಯಕ್ರಮ ನೇಯುವಲ್ಲಿ ರೋಹಿತನಿಗೆ ನಿಮ್ಮ ನೆರವು ಅತ್ಯಗತ್ಯ. ದಯವಿಟ್ಟು ಆಸಕ್ತ ಯುವಕ/ಯುವತಿಯರಿಗೆ ರೋಹಿತನ ವಿಳಾಸ ಒದಗಿಸಿ ಪತ್ರ ಬರೆಯಲು ತಿಳಿಸಿ.

ರೋಹಿತನ ಇ-ವಿಳಾಸ ಈ ರೀತಿ ಇದೆ : settyrb@umich.edu

ಹಾಸ್ಯೋತ್ಸವ :

ಡಿವಿಜಿ ಯವರು ಹೇಳುವಂತೆ ನಗುವುದು ಸಹಜ ಧರ್ಮ, ನಗಿಸುವುದು ಪರ ಧರ್ಮ, ನಕ್ಕು ನಗಿಸುವುದು ಅತಿಶಯದ ಧರ್ಮ. ಸಹಜ, ಪರ, ಅತಿಶಯದ ಧರ್ಮವನ್ನು ಕರಗತ ಮಾಡಿಕೊಂಡಿರುವ ಹಾಸ್ಯೋತ್ಸವ ತಂಡ ನಿಮ್ಮನ್ನು ನಗಿಸಿ ನರಳಿಸಲು ಬರಲಿದ್ದಾರೆ. ಉದಯ ಟಿ.ವಿಯ ಹೆಸರಾಂತ ಕಾರ್ಯಕ್ರಮದ ಪರಿಚಯವಿರುವ ನಿಮಗೆ ಆನಂದ್‌, ರಿಚರ್ಡ್‌ ಲೂಯಿಸ್‌ ಮೂರ್ತಿ ಹಾಗು ಅಸದುಲ್ಲ ಬೇಗ್‌ ಹೊಸಬರೇನಲ್ಲ. ಇಷ್ಟುದಿನ ಪರದೆಯ ಮೇಲೆಕಂಡ ತಂಡವನ್ನು ಹತ್ತಿರದಿಂದ ನೋಡಬನ್ನಿ.

ಸಿ.ಎಂ.ಇ (ಕಂಟಿನ್ಯುಯಿಂಗ್‌ ಮೆಡಿಕಲ್‌ ಎಜುಕೇಷನ್‌) :

ಬಾಲ್ಟಿಮೋರ್‌ ಸಿಟಿ ಮೆಡಿಕಲ್‌ ಸೊಸೈಟಿ ಸಹಯೋಗದೊಂದಿಗೆ ನಡೆಸುತ್ತಿರುವ ಸಿ.ಎಂ.ಇ ಕಾರ್ಯಕ್ರಮ ವೈದ್ಯಕೀಯ ರಂಗದಲ್ಲಿ ಕಾರ್ಯನಿರತವಾಗಿರುವವರಿಗೆ ಉಪಯುಕ್ತವಾದ ಕಾರ್ಯಕ್ರಮ.

‘ವಿಕಾಸ’ ವಾಣಿಜ್ಯ ವೇದಿಕೆ :

ಅಮೆರಿಕಾ ಮತ್ತು ಕರ್ನಾಟಕ ರಾಜ್ಯ ನಡುವಿನ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧವನ್ನು ವಿಸ್ತರಿಸುವ ದಿಸೆಯಲ್ಲಿ ವಿಶ್ವಕನ್ನಡ ಸಮ್ಮೇಳನ 2006 ಸಮಿತಿ ಭರದಿಂದ ಕೆಲಸ ನಡೆಸುತ್ತಿದೆ. ವಿದೇಶದಲ್ಲಿ ಬಂಡವಾಳ ಹೂಡಬಯಸುವ ಅಮೆರಿಕನ್‌ ಕಂಪನಿಗಳಿಗೆ ಕರ್ನಾಟಕ ವಾಣಿಜ್ಯ ಅವಕಾಶ ಪರಿಚಯಿಸುವುದು ಈ ವೇದಿಕೆಯ ಉದ್ದೇಶಗಳಲ್ಲೊಂದು. ಸುಮಾರು 500 ಕರ್ನಾಟಕ ನೆಲೆಗಟ್ಟಿನ ಕಂಪನಿಗಳಿಗೆ ಸಮ್ಮೇಳನಕ್ಕೆ ಬರುವಂತೆ ಆಹ್ವಾನ ತಲುಪಿಸಲಾಗಿದೆ. ಕರ್ನಾಟಕದ ಮುಖ್ಯಮಂತ್ರಿಗಳೂ ಸೇರಿದಂತೆ ವರ್ಜೀನಿಯಾ, ಮೇರಿಲ್ಯಾಂಡ್‌ ಗೌರ್ನರ್‌ ಬರುವ ನಿರೀಕ್ಷೆಯಿದೆ. ಈ ಸಮ್ಮೇಳನದಲ್ಲಿ ಭಾಗವಹಿಸುವವರ ಪಟ್ಟಿಯಲಿ ಅಮೆರಿಕಾ ಹಾಗು ಭಾರತೀಯ ಬಂಡವಾಳ ಹೂಡುವ ಪ್ರಮುಖ ವ್ಯಕ್ತಿಗಳು ಇದ್ದಾರೆ.

ವಾಣಿಜ್ಯ ಹಾಗು ವ್ಯಾಪಾರ ಪ್ರಪಂಚದ ಆಗು ಹೋಗುಗಳ, ಒಳ ವ್ಯವಹಾರಗಳ ಪರಿಚಯಿಸಲು ಪರ್ಯಾಯ ಸಮಾಲೋಚನಾ ಸಭೆಗಳನ್ನು ನಿಯೋಜಿಸಿದ್ದು, ಆ ಸಭೆಗಳಲ್ಲಿ ಪರಿಣಿತರ ಭಾಷಣಗಳನ್ನು ಏರ್ಪಡಿಸಲಾಗಿದೆ.ಈ ನಿಟ್ಟಿನಲ್ಲಿ ವಾಣಿಜ್ಯ ಪ್ರದರ್ಶನವೂ ಉಂಟು. ನಿಮ್ಮ ವ್ಯವಹಾರದ ದಿಗಂತವನ್ನು ವಿಸ್ತರಿಸುವ ಅವಕಾಶ ನೀಡಲಿದೆ ‘ವಿಕಾಸ’’ ವಾಣಿಜ್ಯ ವೇದಿಕೆ. ವ್ಯಾಣಿಜ್ಯ ಬೆಳವಣಿಗೆಯಲ್ಲಿ ಮಹತ್ತರ ಗಮನಸೆಳೆದಿರುವ ಕ್ಷೇತ್ರಗಳಾದ ಐ.ಟಿ, ಬಯೋ ಟೆಕ್ನಾಲಜಿ, ಹೆಲ್ತ್‌ ಕೇರ್‌, ಎಂಜಿನಿಯರಿಂಗ್‌ ಹಾಗು ಇನ್ಫಾ ಸ್ಟ್ರಕ್ಚರ್‌ ವಲಯಗಳ ಮಾಹಿತಿ ಈ ವೇದಿಕೆಯ ಕೇಂದ್ರ ದೃಷ್ಟಿಯಲ್ಲಿರುವ ವಿಭಾಗಗಳು.

ಅಧ್ಯಾತ್ಮಿಕ ವಲಯ :

ಮೇಲಿನವು ಬುದ್ಧಿಗೆ ಹಾಗು ಭಾವಕ್ಕೆ ಒದಗುವ ಕಾರ್ಯಕ್ರಮಗಳಾದರೆ, ಆತ್ಮಕ್ಕೆ-ಆಧ್ಯಾತ್ಮಕ್ಕೆ ಒದಗುವ ಕಾರ್ಯಕ್ರಮಗಳೂ ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಪಾಲಿನ ಅದೃಷ್ಟ ದೊಡ್ಡದು. ಶ್ರೀ ಶ್ರೀ ರವಿಶಂಕರ್‌ ಮತ್ತು ಶ್ರೀ ವೀರೇಂದ್ರ ಹೆಗ್ಗಡೆಯವರು ಸಮ್ಮೇಳನಕ್ಕೆ ಬರಲು ಒಪ್ಪಿದ್ದಾರೆ. ಅವರ ವಿಚಾರಧಾರೆಯನ್ನು ಕೇಳುವ ಉತ್ತಮ ಅವಕಾಶ ನಿಮ್ಮದು. ಕಾರ್ಯಕ್ರಮ ಸೆಪ್ಟೆಂಬರ್‌ 1 ಶುಕ್ರವಾರ ಬೆಳ್ಳಂಬೆಳಗು ಈ ಕಾರ್ಯಕ್ರಮ ಶುರುವಾಗಲಿದ್ದು ನಡು ಮಧ್ಯಾನ್ಹ 3 ಗಂಟೆಯವರೆವಿಗೂ ನಡೆಯಲಿದೆ. ಈ ಕಾರ್ಯಕ್ರಮದ ಬೆನ್ನಲ್ಲೇ ಅದ್ಧೂರಿಯ ಉದ್ಘಾಟನಾ ಸಮಾರಂಭ ಶುರುವಾಗುವುದು ಎಂಬುದನ್ನು ಪರಿವಿಡಿ. ‘ಸುವರ್ಣ ಹಬ್ಬದ’ ಉದ್ಘಾಟನೆಯ ಸಂಭ್ರಮಕ್ಕೆ ನಿಮ್ಮ ಹಾಜರಾತಿ ಅತಿ ಮುಖ್ಯ. ನಮ್ಮನ್ನು ನಿರಾಶೆಗೊಳಿಸದಿರಿ.

ಇಷ್ಟೆಲ್ಲಾ ಕಾರ್ಯಕ್ರಮಗಳನ್ನೂ ಅತ್ಯಂತ ಸಂತೋಷದಿಂದ, ಕಟ್ಟಕ್ಕರೆಯಿಂದ, ಕಾಳಜಿಯಿಂದ ರೂಪಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಸಂಘದ ಎಲ್ಲಾ ಸದಸ್ಯರಿಗೂ ವೈಯುಕ್ತಿಕವಾಗಿ ನಮ್ಮ ಮನವಿಯನ್ನು, ಸಂಚಾಲಕರ ಪರವಾಗಿ ತಲುಪಿಸಿ ಎಂಬುದು ನಮ್ಮ ನಮ್ರ ವಿನಂತಿ. ದಯಮಾಡಿ ಕಾರ್ಯಕ್ರಮಗಳಲ್ಲಿ ಹಾಗು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ತಿಳಿಸಿ. ನೀವು ಬರುವ ಶುಭ ಗಳಿಗೆಯನ್ನು ಎದುರು ನೋಡುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ, ಹಾಗು ಶುಭ ಹಾರೈಕೆ ನಮ್ಮ ಯಶಸ್ವಿ ಕಾರ್ಯಕ್ರಮದ ಬೆನ್ನೆಲುಬು ಎನ್ನುವುದನ್ನು ಮರೆಯದಿರಿ. ಪ್ರಪಂಚದ ಮೂಲೆ ಮೂಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾಗಿಬನ್ನಿ. ಭವ್ಯ ಕರ್ನಾಟಕದ ಸುವರ್ಣ ಹಬ್ಬವನ್ನು ಸ್ಮರಣೀಯವಾಗಿಸುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಹಾಗೆಯೇ ಈ ಅಗಾಧವಾದ ಕಾರ್ಯಕ್ರಮ ಯೋಜನೆಗೆ ತಗಲುವ ವೆಚ್ಚ ಅಪಾರ. ಉದಾರ ಮನದಿಂದ ಧನ ಸಹಾಯ ಮಾಡಿ ಎಂದು ನಿಮ್ಮಲ್ಲಿ ವಿನಂತಿಸುತ್ತಿದ್ದೇವೆ. ನಮ್ಮ ಜೋಳಿಗೆಗೆ ನಿಮ್ಮ ತುಂಬುಗೈಯ್ಯ ಕಾಣಿಕೆ ಅತ್ಯಗತ್ಯ.

ಮೇಲ್ಕಂಡ ಯಾವುದೇ ವಿಷಯದಲ್ಲಿ ನಿಮಗೆ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಅಥವಾ ಸಮ್ಮೇಳನ ವಿಷಯಗಳ ಬಗ್ಗೆ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು 1-800-wkc-2006 ಗೆ ಕರೆಮಾಡಿ.

ನೀವು ಕರೆ ಮಾಡಿದಾಗ ವೈಯುಕ್ತಿಕವಾಗಿ ಮಾತನಾಡಲು ಯಾರೂ ಸಿಗದಿದ್ದಲ್ಲಿ ದಯವಿಟ್ಟು ನಿಮ್ಮ ದೂರವಾಣಿ ಸಂಖ್ಯೆಯನ್ನು ತಿಳಿಸಿ. ವಿಶ್ವಕನ್ನಡ ಸಮ್ಮೇಳನ 2006ರ ಕಾರ್ಯಕರ್ತರು ನಿಮ್ಮನ್ನು ತಪ್ಪದೇ ಸಂಪರ್ಕಿಸುತ್ತಾರೆ.

ಸೆಪ್ಟೆಂಬರ್‌ 1ರಂದು ನಿಮ್ಮ ಆಗಮನವನ್ನು ನಿರೀಕ್ಷಿಸುತ್ತಿರುತ್ತೇವೆ.

-ಸುರೇಶ್‌ ರಾಮಚಂದ್ರ ಮತ್ತು ರವಿ ಡಂಕನಕೋಟೆ,
ಸಂಚಾಲಕರು,
ಅಕ್ಕ ವಿಶ್ವಕನ್ನಡ ಸಮ್ಮೇಳನ 2006 ಕಾರ್ಯಕಾರಿ ಸಮಿತಿ



ಮುಖಪುಟ
/ ಎನ್‌ಆರ್‌ಐ




User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
Oneindia  Oneindia Login


 [an error occurred while processing this directive]
[an error occurred while processing this directive]