[an error occurred while processing this directive][an error occurred while processing this directive][an error occurred while processing this directive]
ಕಛೇರಿಯಲ್ಲಿ ಕೆಲಸ ಮುಗಿಸಿಕೊಂಡು ಇತರ ಅವಿವಾಹಿತ ಸ್ನೇಹಿತರ ಜೊತೆ ಹೊರಗೇ ಹೋಟೆಲ್‌ನಲ್ಲಿ ರಾತ್ರಿಯೂಟ ಮುಗಿಸಿ ರೂಮಿಗೆ ಬರುವಷ್ಟರಲ್ಲಿ 9 ಗಂಟೆ. ಇಂದು ಊರಿನಿಂದ ಪೋನ್ ಕರೆ ಬರುವ ದಿನ. ಅಣ್ಣ ವಾರಕ್ಕೊಂದು ದಿನ ತಪ್ಪದೆ ಮನೆಯಿಂದ ಫೋನ್ ಮಾಡುತ್ತಿದ್ದ. ಮನೆಯ ಸಮಸ್ತ ವ್ಯವಹಾರಗಳಿಂದ ಹಿಡಿದು ಊರಿನ ಆಗುಹೋಗುಗಳ ತನಕ ದುಬಾರಿ ಕರೆ ಎನ್ನುವುದನ್ನೂ ಲೆಕ್ಕಿಸದೆ ಮಾತು ಸಾಗುತ್ತಿತ್ತು. ಇಂದೂ ಹಾಗೇ ಎಲ್ಲೆಲ್ಲಿಯೋ ಹೊರಟ ಮಾತುಕತೆ ಮಧ್ಯದಲ್ಲಿ ನಿಂತದ್ದು ಅಣ್ಣನೆಂದ ಈ ಮಾತಿನಿಂದ, ‘‘ ಲೇ ಶೀನ, ಅಂದ್ಹಾಗೆ ..ತಿಮ್ಮಕ್ಕ ಹೋಗ್ಬಿಟ್ಳೊ!’’ ಶ್ರೀನಿವಾಸನಿಗೆ ಒಂದು ಕ್ಷಣ ಏನು ಪ್ರತಿಕ್ರಿಯಿಸಬೇಕೆಂದೇ ತಿಳಿಯಲಿಲ್ಲ. ‘‘ ಹೌದಾ, ಮೊನ್ನೆ ತಾನೇ ಊರಿಗೆ ಬಂದಿದ್ದಾಗ ನಾನೂ ನೀನು, ಬಾಬು ಅವಳ ಬಗ್ಗೆ ಮಾತಾಡಿಕೊಳ್ತಿದ್ವಲ್ಲಾ . ಆಗಲೇ ಹೆಚ್ಚು ದಿನ ಉಳಿಯೋಲ್ಲ ಅಂತಿದ್ದೆ ನೀನು’’. ‘‘ ಹ್ಞೂ.. ಭಾಳ ಒಳ್ಳೇ ಹೆಂಗಸು’’ ಎಂದು ಅತ್ತ ರಮೇಶನೂ ಒಂದು ಕ್ಷಣ ಸುಮ್ಮನಾದ. ನೆನಪಿನ ಗುಂಗಿನಲ್ಲಿ ಪ್ರಯಾಣ ಹೊರಟ ಇಬ್ಬರಿಗೂ ಮಾತಾಡಲು ಬೇರೇ ಏನೂ ವಿಷಯ ಇಲ್ಲದ ಹಾಗೆ ಅನ್ನಿಸಿತು. ಅತ್ತ ರಮೇಶ ಫೋನ್ ಇಟ್ಟ .
ಎರಡು ವಾರದ ಹಿಂದೆ ಊರಿಗೆ ಹೋಗಿದ್ದಾಗ ಅಣ್ಣ ತಮ್ಮ ಮತ್ತು ಪಕ್ಕದ ಮನೆಯ ಬಾಬು ಎಂದಿನಂತೆ ತಮ್ಮ ಸಾಯಂಕಾಲದ ಹರಟೆಯಲ್ಲಿ ಮುಳುಗಿದ್ದಾಗ ಹೀಗೆ ಮೇಲುಬೀದಿಯ ತಿಮ್ಮಕ್ಕ ಕಾಯಿಲೆ ಮಲಗಿರುವ ವಿಷಯ ಬಂದಿತ್ತು. ಊರಿನಲ್ಲಿ ಈ ನಡುವೆ ಒಬ್ಬೊಬ್ಬರೇ ಹಿರಿಯ ವಯಸ್ಸಿನವರು ಕಾಲವಾಗುತ್ತಿರುವುದರ ಬಗ್ಗೆ ಮಾತನಾಡುತ್ತಿದ್ದರು. ಹಿರಿಯ ವಯಸ್ಸಿನವರು ಈ ಹಿಂದೆ ಸಾಯ್ತಿರಲಿಲ್ಲ ಅಂತಲ್ಲ ; ಆದರೆ ಈ ಪ್ರಮಾಣದಲ್ಲಿ ವರ್ಷಕ್ಕೆ ನಾಲ್ಕೈದು ಜನ ಸಾಯೋದು ಇವರು ನೋಡಿರಲಿಲ್ಲ . ಬಹುಶಃ ಹಿರಿ ಪೀಳಿಗೆ ಈ ಮಧ್ಯೆ ಜಾಸ್ತಿ ಇತ್ತು. ಹಾಗೇ ಮಾತಾಡ್ತಾ , ತಿಮ್ಮಕ್ಕನಿಗೂ ಹತ್ತಿರತ್ತಿರ ಎಂಬತ್ತಾಗಿರುವುದು , ಅವಳು ಈ ನಡುವೆ ಹೊರಗೆ ಓಡಾಡುವುದನ್ನು ನಿಲ್ಲಿಸಿರುವುದು, ಅವಳಿಗೇ ಈಗ ಊರಿನ ಮುದುಕೀರಲ್ಲಿ ಹೆಚ್ಚು ವಯಸ್ಸಾಗಿರೋದು , ಹೀಗೆ ಸಾಗಿದ್ದ ಮಾತುಕತೆ ಅಣ್ಣತಮ್ಮಂದಿರಿಬ್ಬರಿಗೂ ಸುಮಾರು ವರ್ಷಗಳ ಹಿಂದೆ ತಿಮ್ಮಕ್ಕ ಮಾಡಿದ್ದ ಫಜೀತಿ ಜ್ಞಾಪಕಕ್ಕೆ ಬಂತು. ಅದನ್ನು ಇಬ್ಬರೂ ಆಪ್ತವಾಗಿ ಬಾಬು ಜೊತೆ ಹಂಚಿಕೊಂಡರು. ತಿಮ್ಮಕ್ಕನಿಂದ, ಅವತ್ತು ಒಂದು ರಾತ್ರಿಯೆಲ್ಲಾ ಕಣ್ಣು ಕೆಂಪಗೆ ಮಾಡಿಕೊಂಡು, ಕೆಮ್ಮಿ ಕೆಮ್ಮಿ ಎದೇಲಿ ಉಸಿರು ಕಟ್ಟಿಕೊಳ್ಳೋ ಹಾಗೆ ಆಗಿತ್ತಾದರೂ, ತಿಮ್ಮಕ್ಕ ಅಂದರೆ ತಮಗೆ ಏನೋ ಆಪ್ತತೆ ; ಭಾವನೆಗಳು ಆಪ್ತವಾಗಿ ಮಾತಾಗಿ ಹರಿದಾಡಿದ್ದವು. ಚಿಕ್ಕಂದಿನ ಕೆಲವು ಅಪ್ರಿಯ ಘಟನೆಗಳು ಯಾಕೋ ಕಾಲಾಂತರದಲ್ಲಿ ಆಪ್ತವಾಗುವ ವಿಸ್ಮಯದ ರೀತಿಗೆ ಮೂವರೂ ವಿಸ್ಮಿತರಾಗಿದ್ದರು.
ಹೆಚ್ಚೂಕಮ್ಮಿ ಇಪ್ಪತ್ತು ವರ್ಷಕ್ಕೂ ಮೇಲಾಗಿರಬೇಕು. ಶ್ರೀನಿವಾಸ ಆಗ ಇನ್ನೂ ಆರೇಳು ವರ್ಷದವನು. ರಮೇಶ ಅವನಿಗಿಂತ ನಾಲ್ಕು ವರ್ಷಕ್ಕೆ ದೊಡ್ಡವನು. ಇವರ ಮನೇಲಿ ಆಗಲೇ ಮೂರ್ನಾಲ್ಕು ಮಿಶ್ರತಳಿಯ ಹಸುಗಳಿದ್ದವು. ಇವರ ತಾಯಿ ಶಾಂತಮ್ಮ ಬೆಳಿಗ್ಗೆ ಎದ್ದಕೂಡಲೆ ಸಗಣಿ ಬಾಚಿ, ಎಲ್ಲಾ ಹಸುಗಳ ಹಾಲು ಕರೆದು, ಎಲ್ಲರಿಗೂ ಅಡಿಗೆ ಮಾಡಿ ಮಕ್ಕಳು ಸ್ಕೂಲಿಗೆ ಹೋಗೋ ಸಮಯಕ್ಕೆ ತಾನೂ ಹಸುಗಳನ್ನು ಹೊಡೆದುಕೊಂಡು ಹೊಲದ ಬಳಿಗೆ ಮೇಯಿಸಲು ಹೋಗುತ್ತಿದ್ದಳು. ಅಲ್ಲಿ ಹೊಲದಲ್ಲಿ ಇದ್ದಬದ್ದ ಕೆಲಸ ಮಾಡ್ಕೊಂಡು, ಹಸುಗಳಿಗೆ ರಾತ್ರಿ ಗಾಟಿಗೆ ಹುಲ್ಲು ಒಟ್ಟುಮಾಡಿಕೊಂಡೋ, ಇಲ್ಲಾ ಒಲೆಗೆ ಸೌದೆ ಹೊತ್ತುಕೊಂಡೋ ಮನೆಗೆ ಬರುತ್ತಿದ್ದದ್ದು ಸಾಯಂಕಾಲ ಐದರ ಸುಮಾರಿಗೆ; ಹಾಲು ಕರೆದು ಡೈರಿಗೆ ಹಾಕುವ ಸಮಯಕ್ಕೆ ಸರಿಯಾಗಿ. ಒಳ್ಳೆ ಲಹರಿಯಲ್ಲಿದ್ದ ದಿನ ರಮೇಶ ಶಾಲೆ ಬಿಟ್ಟಮೇಲೆ ಶ್ರೀನಿವಾಸನ ಕೈಗೆ ಪುಸ್ತಕದಚೀಲ ಒಪ್ಪಿಸಿ ಅಮ್ಮನಿಗೆ ಸಹಾಯ ಮಾಡಲು ಮೈಲು ದೂರದ ಹೊಲದ ಕಡೆ ಓಡುತ್ತಿದ್ದ. ಅಂತಹ ದಿನ ಶಾಂತಮ್ಮನಿಗೆ ಭವಿಷ್ಯದ ಬಗೆಗೆ ಸ್ವಲ್ಪವಾದರೂ ಆಶಾಭಾವನೆ ಹುಟ್ಟುತ್ತಿತ್ತು.
ಕೆಲವು ಸಲ ಶಾಂತಮ್ಮ ಹೆಸರಿಗಷ್ಟೇ ಶಾಂತ. ವರ್ಷ ಪೂರ್ತಿ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಕಷ್ಟಪಟ್ಟು ದುಡಿಯುತ್ತಿದ್ದರಿಂದ ಬೇಗ ಸಿಟ್ಟು ಬಂದುಬಿಡುತ್ತಿತ್ತು. ಅಂತಹ ಸಮಯದಲ್ಲಿ ಕೆಲಸ ಮಾಡುತ್ತಿದ್ದಾಗಲೂ ಬಿಡದೆ ಬೈದುಕೊಳ್ಳುತ್ತ ಕೋಪ ಶಮನ ಮಾಡಿಕೊಳ್ಳುತ್ತಿದ್ದ ಪೈಕಿ. ಮಳೆ ಏನಾದರೂ ಬಂದು ರಾತ್ರಿ ಗಾಟಿಗೆ ಹುಲ್ಲು ಹೊಂದಿಸಲಾಗದೇ ಹೋದಾಗ, ಸೌದೆ ನೆಂದು ಅಡಿಗೆ ಒಲೆಯ ಮುಂದೆ ಹೊಗೆ ಕಟ್ಟಿದಾಗ, ಮಕ್ಕಳೇನಾದರೂ ಹೇಳಿದ ಮಾತು ಕೇಳದೆ ಆಡಲು, ಅಲೆಯಲು ಹೋದಾಗ, ಮನೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಊರಿನ ಉಸಾಬರಿಗೆ ಬೆಳಿಗ್ಗೆಯಿಂದ ರಾತ್ರಿಯ ತನಕ ತಿರುಗುವ ಗಂಡನ ಮೇಲೆ ರೇಗಿಕೊಳ್ಳುತ್ತ ತನ್ನ ದುಃಖ ದುಮ್ಮಾನವನ್ನೆಲ್ಲ ನಿರಂತರ ವಾಗ್ಜರಿಯಲ್ಲಿ ತೋಯಿಸಿಬಿಡುತ್ತಿದ್ದಳು. ಅಮ್ಮನ ಒಟಗುಟ್ಟುವಿಕೆ ಬೈಗುಳ ಸಹಿಸಿಕೊಳ್ಳಲಾಗದೇ ಅಮ್ಮ ಯಾಕೆ ಹೀಗೆ ಒಂದೊಂದು ಸಲ ಹಿಂಸೆಯಾಗುತ್ತಾಳೆ ಎಂದುಕೊಳ್ಳುತ್ತಾ ಮಕ್ಕಳಿಬ್ಬರೂ ಆವಾಗ ಮೂಲೆ ಸೇರಿ ಪುಸ್ತಕ ಹಿಡಿಯುತ್ತಿದ್ದರು. ಅಂತಹ ಸಮಯದಲ್ಲಿ ಬಾಯಿಬಿಟ್ಟು ಎದುರಾಡಿ ಮತ್ತಷ್ಟು ರೇಗಿಸಿದರೆ ಮುಲಾಜಿಲ್ಲದೆ ಅವರ ಸುಕೋಮಲ ತೊಡೆ ಹಿಂಡಿ ನರಕ ದರ್ಶನ ಮಾಡಿಸುತ್ತಿದ್ದರಿಂದ ಅವರಿಬ್ಬರೂ ಈ ಮಧ್ಯೆ ಚಾಲಾಕಿಗಳಾಗಿ ಬಿಟ್ಟಿದ್ದರು. ಮಕ್ಕಳಿಗೂ ವಿಚಿತ್ರವೆನ್ನಿಸುವಂತೆ ಅವರು ಪುಸ್ತಕ ಹಿಡಿದು ಓದಲು ಕುಳಿತರೆ ಮಾತ್ರ ಎಂತಹ ಕಷ್ಟದಲ್ಲೂ ನಿಧಾನವಾಗಿ ತನ್ನ ಮಾತನ್ನು ಕಮ್ಮಿ ಮಾಡುತ್ತಿದ್ದಳು. ಇಡೀ ಊರಿಗೆಲ್ಲ ಎಮ್ಮೆಗಳನ್ನು ಸಾಕುತ್ತಿದ್ದವಳೆಂದರೆ ತಿಮ್ಮಕ್ಕ ಮಾತ್ರ. ಅಷ್ಟೊತ್ತಿಗಾಗಲೇ ಇಡೀ ತಲೆಯ ಕೂದಲು ನೆರೆತಿದ್ದ ತಿಮ್ಮಕ್ಕನಿಗೆ ಸಣ್ಣ ಮಕ್ಕಳಿಂದ ಹಿಡಿದು ಅವಳ ವಾರಿಗೆಯ ಹೆಂಗಸರ ತನಕ ಎಲ್ಲರೂ ಏನೋ ಒಂದು ರೀತಿಯ ಪ್ರೀತಿ ತುಂಬಿದ ಗೌರವ ನೀಡುತ್ತಿದ್ದರು. ಅದು ಅವಳ ನೆರೆತ ಕೂದಲಿಗೋ, ಎಲ್ಲರನ್ನು ಮಗ, ಅಮ್ಮಯ್ಯ ಅಂತ ಮೃದುವಾಗಿ ಪ್ರೀತಿಯಿಂದ ಮಾತಾಡಿಸುತ್ತಿದ್ದಕ್ಕೋ, ಚಿಕ್ಕಂದಿನಲ್ಲೇ ಗಂಡನನ್ನು ಕಳೆದುಕೊಂಡರೂ ಮಗನನ್ನು ಚೆನ್ನಾಗಿ ಓದಿಸಿ ಪಟ್ಟಣ ಸೇರಿಸಿ ತಾನು ಮಾತ್ರ ಇಲ್ಲೇ ಊರಿನಲ್ಲಿ ತನ್ನ ಕೆಲಸ ತಾನು ಮಾಡಿಕೊಳ್ಳುತ್ತ ಸ್ವಾಭಿಮಾನದಿಂದ ಬದುಕುತ್ತಿದ್ದದ್ದಕ್ಕೊ, ಇಲ್ಲಾ.. ಬೇಕಾದವರಿಗೆ ಕಷ್ಟಸುಖಕ್ಕೆ ಆಗುತ್ತಿದ್ದಕ್ಕೋ, ಇಲ್ಲಾ ಇವೆಲ್ಲವುಗಳಿಗೂ ಸೇರಿಸಿಯೋ ಇರಬಹುದು. ಇವೆಲ್ಲದರ ಜೊತೆಗೆ ಊರಿನಲ್ಲಿ ತಿಮ್ಮಕ್ಕನಿಗಿಂತ ಪ್ರಸಿದ್ಧವಾದದ್ದು ಅವಳ ಎಮ್ಮೆಗಳು ಕೊಡುವ ಗಟ್ಟಿ ಹಾಲು. ಹಾಲು ಕೊಳ್ಳುತ್ತಿದ್ದ ಜನರು ಊರಿನ ಡೈರಿಯ ಬಳಿ ತಿಮ್ಮಕ್ಕ ಬರುವ ತನಕ ಸುಮ್ಮನೆ ಕಾದಿದ್ದು ಅವಳು ಬಂದಾಗ ಅದೇ ಹಾಲು ಬೇಕೆಂದು ಹಾಲು ಅಳೆಯುವ ರಂಗಯ್ಯನೊಂದಿಗೆ ಜಗಳವಾಡಿ ಹಾಕಿಸಿಕೊಳ್ಳುತ್ತಿದ್ದರು.
ಹಾಲು ಅಳೆಯುವ ರಂಗಯ್ಯ ಖುಷಿಯಲ್ಲಿದ್ದಾಗ ಎಲ್ಲರ ಜೊತೆಯೂ ಚೆನ್ನಾಗಿಯೇ ನಡೆದುಕೊಳ್ಳುತ್ತಿದ್ದ. ಡೈರಿಯ ಕಾರ್ಯದರ್ಶಿ ಶಂಕರಪ್ಪನಿಗೂ, ಇವನಿಗೂ ಒಳ್ಳೆಯ ಒಳಸಂಬಂಧ ಇದ್ದುದ್ದರಿಂದ ಹಾಲು ತೆಗೆದುಕೊಳ್ಳುವ, ಬಿಡುವ ವಿಷಯದಲ್ಲಿ ಇವನದೇ ಫೈಸಲ್ ಮಾತು. ಐದಾರು ಜನರಿಗೊಂದು ಸಲ ಹಾಲಿನ ಡಿಗ್ರಿ ನೋಡುತ್ತಿದ್ದ ಅಷ್ಟೇ. ಕೆಲವರು ನೀರು ಬೆರೆಸುವಂತಹ ಚೇಷ್ಟೆ ಮಾಡಿದರೂ ತಿಮ್ಮಕ್ಕನಂತವರ ಒಳ್ಳೆ ಡಿಗ್ರಿ ಬರುವ ಗಟ್ಟಿಹಾಲು ತೆಳುಹಾಲನ್ನು ಮುಚ್ಚಿಹಾಕುತ್ತಿತ್ತು. ಅವಳ ಎಮ್ಮೆ ಹಾಲಿಗೆ ಒಳ್ಳೆಯ ಫ್ಯಾಟು ಬರುತ್ತಿದ್ದರಿಂದ ಎಲ್ಲರಿಗಿಂತ ಒಳ್ಳೆಯ ಬೆಲೆ ಸಿಗುತ್ತಿದ್ದದ್ದು ತಿಮ್ಮಕ್ಕನ ಹಾಲಿಗೇ. ಸಹಕಾರಿ ಡೈರಿಯ ಇಂತಹ ಸರ್ವಜನರ ಸಹಕಾರಕ್ಕೆ ಬೆಂಕಿ ಬೀಳುತ್ತಿದ್ದದ್ದು ಒಂದು ಯಾರಾದರೂ ಹೆಚ್ಚಿಗೆ ನೀರು ಬೆರೆಸಿದ ಹಾಲನ್ನು ಯಾಮಾರಿಸಿ ಅಳೆಸಿದ ದಿನ ಇಲ್ಲವೇ ಹಾಲಿನ ಕ್ಯಾನುಗಳನ್ನು ತಾಲ್ಲೂಕು ಕೇಂದ್ರಕ್ಕೆ ಸಾಗಿಸುವ ಡೈರಿ ಲಾರಿಯವರು ದಾರಿ ಮಧ್ಯದಲ್ಲಿ ಎಗರಿಸಿ ಅಷ್ಟೇ ಪ್ರಮಾಣಕ್ಕೆ ಪ್ರಾಮಾಣಿಕವಾಗಿ ನೀರು ಬೆರೆಸುತ್ತಿದ್ದ ದಿನ. ಅಂತಹ ದಿನಗಳಲ್ಲಿ ಇಡೀ ಕ್ಯಾನೇ ತಿರಸ್ಕೃತಗೊಂಡು ಮಾರನೆಯ ದಿನದ ರಿಪೋರ್ಟ್ ನೋಡಿ ಸೆಕ್ರಟರಿ ಶಂಕರಪ್ಪ ರಂಗಪ್ಪನ ಮೇಲೆ ಎಗರಿಬೀಳುತ್ತಿದ್ದ. ರಂಗಪ್ಪನು ತಾನು ಹಾಗೆ ಉಗಿಸಿಕೊಂಡ ದಿನ ಎಲ್ಲರ ಡಿಗ್ರಿ ಅಳೆದು ಒಬ್ಬಿಬ್ಬರ ಹಾಲನ್ನು ವಾಪಸ್ಸು ಕಳಿಸುವುದಲ್ಲದೆ ತಾನು ಭೈಸಿಕೊಂಡದ್ದನ್ನು ತಿಮ್ಮಕ್ಕನ ಹಾಲಿಗೇ ಕಾಯುತ್ತಿರುತ್ತಿದ್ದ ಜನರ ಮೇಲೆ ಪ್ರಾಮಾಣಿಕವಾಗಿ ವರ್ಗಾಯಿಸುತ್ತಿದ್ದ. ‘‘ಲೌಡಿ , ಮುಂಡೇ ಮಕ್ಕಳು, ಯಾಮಾರಿಸಿ ಮೋಸ ಮಾಡ್ತಾರೆ. ಇಲ್ಲಿ ನೀವು ನಮ್ಮ ಡೈರಿಗೆ, ಊರಿಗೆ ಮರ್ಯಾದೆ ತರೋ ತಿಮ್ಮಕ್ಕನ ಹಾಲೇ ಬೇಕು ಅಂದರೆ ನಮ್ಮ ಡೈರೀ ಹಾಲಿಗೆ ಒಳ್ಳೇ ಫ್ಯಾಟೂ ರೇಟು ಸಿಗೋದ್ ಹೆಂಗೆ. ಡೈರಿ ಮುಚ್ಕೊಂಡ್ ಹೋಗ್ತದೆ ಅಷ್ಟೆಯಾ. ಇವತ್ತು ತಿಮ್ಮಕ್ಕನ ಹಾಲು ಕ್ಯಾನುಗಳಿಗೇ ಹಾಕ್ತೀನಿ. ನೀಮಗೂ ಕ್ಯಾನ್ ಹಾಲೇ ಅಳೀತೀನಿ, ತಕ್ಕೊಳಿ’’ ಅಂತ ಮುಲಾಜಿಲ್ಲದೆ ತಿಮ್ಮಕ್ಕನ ಹಾಲನ್ನು ಸಮನಾಗಿ ಎಲ್ಲಾ ಕ್ಯಾನುಗಳಿಗೂ ಹಂಚಿಬಿಡುತ್ತಿದ್ದ.
ಶಾಂತಮ್ಮನ ಮನೆ ಇದ್ದದ್ದು ತಿಮ್ಮಕ್ಕನ ಮನೆಗೂ ಡೈರಿಗೂ ನಡುವೆ. ಹಾಗಾಗಿ ತಿಮ್ಮಕ್ಕ ದಿನಕ್ಕೆ ಎರಡು ಬಾರಿ ಇವರ ಮನೇ ಮುಂದಿನಿಂದಲೇ ಡೈರಿಗೆ ಹಾಲು ತಗೊಂಡುಹೋಗ್ಬೇಕಿತ್ತು. ತಿಮ್ಮಕ್ಕನಿಗೆ ತನ್ನ ಅರ್ಧವಯಸ್ಸಿನ ಶಾಂತಮ್ಮನ ಕಂಡರೆ ಏನೋ ಪ್ರೀತಿ. ವರ್ಷಕ್ಕೊಂದು ಸಲ ತವರುಮನೆಗೂ ಹೋಗೋಕಾಗದೆ ಮುರ್ನಾಲ್ಕು ಹಸುಗಳನ್ನು ಕಟ್ಟಿಕೊಂಡು ಹೊಲಗದ್ದೇಲಿ ಬಿಸಿಲು, ಮಳೆ ಎನ್ನದೇ ದುಡಿಯೋ ಅವಳಲ್ಲಿ ಒಂದು ರೀತಿಲ್ಲಿ ತನ್ನ ಗತ ನೋಡ್ತಿದ್ದಳೋ ಏನೋ. ಪ್ರೀತಿ ತುಂಬಿದ ಕಣ್ಣುಗಳಿಂದ ತಿಮ್ಮಕ್ಕ ಅಂತಲೇ ಮಾತಾಡಿಸೋ ಶಾಂತಮ್ಮನ ಮಕ್ಕಳಲ್ಲಿಯೂ ಒಂಥರಾ ವಿಶ್ವಾಸ. ‘‘ಏನೇ ಅಮ್ಮಯ್ಯ, ಹೊಲ ಹೆಂಗಿದೆಯೇ? ಎಷ್ಟು ಖಂಡುಗ ರಾಗಿ ಆಯ್ತದೇ ಈ ವರ್ಷ ? ರಾಗಿ ಹುಲ್ಲು ಎಷ್ಟು ಬೀಳುತ್ತೇ ? ಗಬ್ಬ ಕಟ್ಟಿದ್ದ ಹಸು ಯಾವ ಕರ ಈಯಿತೇ’’ ಅಂತೆಲ್ಲಾ ಆಗಾಗ ಮನೆ ಮುಂದೆ ನಿರಾಳವಾಗಿ ಹೊಗೆಸೊಪ್ಪು ಜಗೀತಾ ಕ್ಷೇಮ ಸಮಾಚಾರ ವಿಚಾರಿಸೋಳೇ ಹೊರತು ಬೇರೆ ಕೆಲವು ವಾರಿಗೆ ಹೆಂಗಸರ ತರಹ ಊರ ಉಸಾಬರಿ, ಅವರಿವರ ಗಬ್ಬು ಗಲೀಜು ಮಾತಾಡೋಕೇ ಹೋಗ್ತಿರಲಿಲ್ಲ. ಶಾಂತಮ್ಮ ಹೊಲದಲ್ಲಿ ದುಡಿದು ಹಸುಗಳನ್ನು ಸಂಭಾಳಿಸಿಕೊಂಡು ಹೈರಾಣಾಗಿ ಹ್ಯಾಪು ಮೋರೆ ಹಾಕ್ಕೊಂಡು ಬಂದ ದಿನ ‘‘ ಯಾಕ್ ಅಮ್ಮಯ್ಯ, ಏನಾಯ್ತೇ ? ಅಪ್ಪಯ್ಯ ಇನ್ನೂ ಮನೇಗ್ ಬಂದಿಲ್ಲೇನು ? ಎಷ್ಟ್ ಕಷ್ಟ ಪಡ್ತೀಯೇ ನನ್ ತಾಯಿ, ಸ್ವಲ್ಪ ಸುಧಾರಿಸಿಕ್ಕೊಳ್ಳಾಕಾಗಲ್ವ?’’ ಅನ್ನೋಳು. ಅದಕ್ಕೆ ಶಾಂತಮ್ಮ ‘‘ ಅಯ್ಯೋ , ನಂದೇನ್ ಬಿಡು ತಿಮ್ಮಕ್ಕ. ನೀನು ಇನ್ನೂ ನನಗಿಂತ ಗಟ್ಟಿ ದುಡೀತಿಲ್ವ. ರಾತ್ರಿ ಎಮ್ಮೆ ಗಾಟಿಗೆ ಹುಲ್ಲು ಹಾಕಲೇ ಬೇಕು ಅನ್ನೋದಿಲ್ಲ ಅನ್ನೋದು ಬಿಟ್ಟರೆ ನಿನ್ನದರ ಮುಂದೆ ನಂದೇನ್ ಕಷ್ಟ ಬಿಡು’’ ಎಂದು ಗುಣಾತ್ಮಕವಾಗಿ ತೆಗೆದುಕೊಳ್ಳೊವಳು.‘‘ಏನೋ ತಾಯಿ. ಮುಂದಕ್ಕಿದೆ ಮುದುಕಿ ಹಬ್ಬ ಅಂತಾರೆ. ಹಂಗಾಗದೆ ಒಳ್ಳೆ ಕಾಲ ಬರ್ತದೆ ತಗೋ. ಈ ಮಳೆ ಒಂದು ಕೈಕೊಡದಿದ್ದರೆ ನೀನು , ನಾನು ಈ ಹಾಲಿನಲ್ಲೇ ಸಂಸಾರಗಳನ್ನು ನಡೆಸ್ಬೋದು ನೋಡು. ಹೋದ ವರ್ಷದ ಬೇಸಗೇಲಿ ಹುಲ್ಲು ಸಿಗದೆ ಜನರ ಪಾಡು ನೋಡಿದ್ಯ? ಕೊನೆಗೆ ಹೆಂಗಾಯ್ತು ಅಂದರೆ ಜನ ಯಾವ ಮರದ ಹಸಿರು ಕಾಣಿಸಿದರೂ ದೋಟೀಲಿ ಕೀಳೋದು ದನಗಳಿಗೆ ಹಾಕೋದು. ಕಡೇಗೇ ಊರಿನ ಅಶ್ವತ್ಥಕಟ್ಟೆ ಅರಳೀಮರನೂ ಬಿಡಲಿಲ್ಲವ್ವ. ಮಳೆ ಬೀಳೋ ತಂಕ ಯಾವ ಮರದ ಸುಳೀನೂ ಕಾಣಿಸ್ತಿರಲಿಲ್ಲ. ನನ್ನ ಎಮ್ಮೆಗಳೂ ಬಡ್ಡಾಗಿದ್ದವು ಒಂದ್ವರ್ಷ. ನಾಳೇಗೆ ಏನೋ ಸುಖ ಐತೆ ಅಂತ ಬದುಕಿದ್ರೇನೆ ಜೀವ ಉಳಿಸ್ಕೊಳ್ಳೋಕಾಗೋದು. ಮನೇಗೆ ಅಂತ ದುಡೀದೇ ಇದ್ರೂ ನಿನ್ ಗಂಡನಂತ ನಾಲ್ಕು ಜನಕ್ಕೆ ಆಗೋರೂ ಊರಿಗೆ ಬೇಕು ಕಣವ್ವ. ಮಕ್ಕಳು ಭಾಳ ಚುರುಕಾಗಿ ಓದ್ತಾರೆ ಅಂತಾರೆ ಎಲ್ಲರೂ. ಒಳ್ಳೇ ಕಾಲ ಬರ್ತೈತೆ ತಗೋ’’ ಅಂತಾ ತಿಮ್ಮಕ್ಕ ಮತ್ತಿಷ್ಟು ಒತ್ತಾಸೆ ನೀಡೋಳು.
ಆ ವರ್ಷ ಗಣೇಶನ ಹಬ್ಬಕ್ಕೆ ಗಣೇಶನ ಜಲಧೀಗೆ ಕೆರೇಲಿ ನೀರು ಇರುತ್ತೋ ಇರಲ್ವೋ ಅಂತ ಜನ ಮಾತಾಡಿಕೊಳ್ಳೋ ಅಷ್ಟೊತ್ತಿಗೆ ಗೌರಿ ಹಬ್ಬದ ದಿನ ಮೋಡಗಳಿಂದ ಗಂಗಾವತರಣೆ ಎಡಬಿಡದೆ ಆಯಿತು. ಊರಿನ ಎಲ್ಲಾ ಸಣ್ಣಪುಟ್ಟ ಕುಂಟೆಗಳೆಲ್ಲಾ ತುಂಬಿಹೋಗಿ ಊರಿನ ದೊಡ್ಡಕೆರೆಗೂ ಸಾಕಷ್ಟು ನೀರು ಬಂತು. ಈ ಸಲವೂ ಒಳ್ಳೆ ಮಳೆ ಬೀಳೋ ಹಂಗೆ ಕಾಣಿಸುತ್ತೆ ಅಂತ ಜನ ಮಾತಾಡಿಕೊಳ್ತಿದ್ದ ಹಾಗೆ ಮಹಾನವಮಿ ದಿನ ಮತ್ತು ಅದರ ಮಾರನೇ ದಿನದ ವಿಜಯದಶಮಿ ರಾತ್ರೀಲಿ ಊರಿನ ದೇವರ ಮೆರವಣಿಗೆ, ಕುಣಿತ, ಬನ್ನಿ ಮಂಟಪಕ್ಕೆ ಬಾಣ ಬಿಡೋದು, ಹೀಗೆ ಎಲ್ಲಾ ತರಹದ ಸಂಪ್ರದಾಯಕ್ಕೆ ಅಡ್ಡ ಬರೋ ಹಾಗೆ ವಿಪರೀತ ಮಳೆ ಸುರಿಯಿತು. ರಾತ್ರಿ ಮೆರವಣಿಗೆ ಸಂಪ್ರದಾಯವನ್ನು ಅರ್ಧಬರ್ಧ ಹೇಗೋ ಮುಗಿಸಿ ಬೆಳಗೆದ್ದು ಕೆರೆ ಕಡೆ ಹೋದ ಜನರಿಗೆ ಕಾಣಿಸಿದ್ದು ತುಂಬಿ ಕೋಡಿ ಬಿದ್ದ ಕೆರೆ. ಈ ವರ್ಷ ಬೇಸಗೆಯ ಭತ್ತದ ಬೆಳೆಗೆ ಮೋಸ ಇಲ್ಲ ಅಂತ ಜನ ಖುಷಿಪಟ್ಟಿದ್ರು. ಊರಿನ ಸುತ್ತಮುತ್ತ ನೆಲ ಎಲ್ಲಾ ತಂಪಾಗಿ ದೀಪಾವಳಿ ಸಮಯಕ್ಕೆಲ್ಲ ಚಳಿ ರಾತ್ರಿ ಹೊತ್ತಿನ ಅತಿಥಿಯಾಯಿತು.
ಶನಿವಾರ ಮಧ್ಯಾಹ್ನಕ್ಕೆಲ್ಲ ಶಾಲೆ ಮುಗೀತಿದ್ದಂತೆ ತಮ್ಮನ್ನ ಮನೇಗೆ ಎಳ್ಕೊಂಡು ಬಂದು ಒಂದಷ್ಟು ಊಟ ಮಾಡಿ ಹೊಲಕ್ಕೆ ಅಮ್ಮನಿಗೆ ಹಸು ಮೇಯಿಸೋದಿಕ್ಕೆ ಸಹಾಯ ಮಾಡೋದಿಕ್ಕೆ ಹೋಗೋದು ರಮೇಶನ ಅಭ್ಯಾಸ. ಆದರೆ ಅವತ್ತು ಇವನ ವಯಸ್ಸಿನ ಬೀದಿ ಹುಡುಗರೆಲ್ಲ ಕೆರೆ ಕಡೆ ಈಜು ಕಲಿಯೋದಿಕ್ಕೆ ಹೋಗೋದು ಅಂತ ಮಾತಾಡಿಕೊಂಡು ಇವನನ್ನು ಬರೋದಿಕ್ಕೆ ಕರೆದಿದ್ರು. ರಮೇಶನಿಗೂ ಈಜು ಕಲಿಯುವ ಪ್ರಲೋಭನೆ, ಹೊಸ ಸಾಹಸದ ಸೆಳವು ಹೊಲಕ್ಕೆ ಹೋಗೋದಕ್ಕಿಂತ ಜಾಸ್ತಿಯಾಗಿತ್ತು. ಶ್ರೀನಿವಾಸನಿಗೂ ವಿಷಯ ಗೊತ್ತಾಗಿದ್ದರಿಂದ ಅವನೆಲ್ಲಿ ಅಮ್ಮನಿಗೆ ಹೇಳಿಬಿಡ್ತಾನೋ ಅಂತ ಪಕ್ಷಾಂತರಕ್ಕೆ ಅವಕಾಶವಿಲ್ಲದಂತೆ ಅವನನ್ನೂ ತನ್ನ ಸಾಹಸದಲ್ಲಿ ಪಾಲುದಾರನನ್ನಾಗಿ ಮಾಡಿಕೊಳ್ಳಲು ಜೊತೆಗೇ ಕರೆದುಕೊಂಡು ಹೋದ.
ಕೆರೆಯಲ್ಲಿ ನೀರು ಜಾಸ್ತಿ ಇದ್ದದ್ದರಿಂದ ಮತ್ತು ದೊಡ್ಡವರ ಕೈಗೆ ಸಿಕ್ಕಿ ಹಾಕಿಕೊಂಡು ಒದೆ ತಿನ್ನಬಾರದು ಎಂದು ನೀರು ಕಮ್ಮಿ ಇರುವ ಜಾಗ ಹುಡುಕಿಕೊಂಡು ಒಂಬತ್ತು ಹತ್ತು ವಯೋಮಾನದ ಇವರ ಪಟಾಲಂ ಹೊರಡಿತು. ನಮಗೂ ನಿಮ್ಮ ಮೇಲೆ ವಿಪರೀತ ಕಾಳಜಿ ಅಂತ ತೋರಿಸಿಕೊಳ್ಳುವ ನೆಪದಲ್ಲಿ ಮೀಸೆ ಬಲಿತವರೆಲ್ಲ ಸಣ್ಣ ಹುಡುಗರು ಈಜಾಡುವುದನ್ನು ಕಂಡಾಗ ಎಲ್ಲಿಲ್ಲದ ಮೋಹ ಉಕ್ಕಿ, ಈಗ ಹೊಡೆದರೆ ನಮ್ಮನ್ಯಾರೂ ಬೈಯ್ಯಲ್ಲ ಅಂತ ಬೇರೆಯವರ ಮಕ್ಕಳು ಅನ್ನುವುದನ್ನೂ ನೋಡದೆ ಬಾರಿಸುತ್ತಿದ್ದರಿಂದ ಯಾರ ಕಣ್ಣಿಗೂ ಬೀಳದ ಕಡೆಗೆ ಹೊರಟು ಕೆರೆಯ ಹಿನ್ನೀರಿನಿಂದಾಗಿ ಕೇವಲ ಮೂರ್ನಾಲ್ಕು ಅಡಿ ನೀರಿದ್ದ ಒಂದು ಕುಂಟೆ ಹುಡುಕಿ ಅದಕ್ಕೆ ಬಿದ್ದರು.
ಆ ಕುಂಟೆ ಒಂದು ಹಳೆಯ ಹತ್ತಡಿ ಆಳದ ಬಾವಿ. ಸುತ್ತಲ ಮಣ್ಣೆಲ್ಲ ಕುಸಿದು ಈಗ ಕುಂಟೆಯ ರೂಪ ತಾಳಿತ್ತು. ನೆಲದಿಂದ ನಾಲ್ಕೈದು ಅಡಿ ಆಳದಲ್ಲಿ ನೀರಿತ್ತು. ಎರಡಮೂರು ಅಡಿ ನೀರಾದರೆ ಅದರ ಕೆಳಗೆ ಒಂದಡಿ ಕೆಸರಿನ ಹೂಳು. ಕೆಲವರಿಗಷ್ಟೇ ಈಜು ಬರುತ್ತಿತ್ತು, ಅಂತವರು ಮಾತ್ರ ಮುಳುಗುವಷ್ಟು ಆಳವಿದ್ದ ಕಡೆ ಈಜುತ್ತಿದ್ದರು. ಮಿಕ್ಕವರು ಎಲ್ಲಿ ಈಜುವುದು, ಧುಮುಕುವುದು ತಕ್ಕಮಟ್ಟಿಗೆ ಸುರಕ್ಷಿತವಿತ್ತೋ ಅತ್ತ ಕೈಕಾಲು ಬಡಿಯಲು ಆರಂಭಿಸಿದರು. ಸ್ವಲ್ಪ ಹೊತ್ತಿಗೆಲ್ಲ ಆಳ ಅಗಲ ಅಳೆದು ನೋಡಿದ ಮೇಲೆ ಮಾನವ ವಿಕಾಸದ ಪೂರ್ವಿಕರ ಚೇಷ್ಟೆಗಳು ಜಾಗೃತಗೊಂಡು ಮೈಮೇಲೆ ಬಂದವು. ಮೇಲಿನಿಂದ ಧುಮುಕುವುದು, ಕೈಗೆ ಸಿಕ್ಕವನನ್ನು ಅದುಮಿ ನೀರು ಕುಡಿಸುವುದು, ಆಳ ತೋರಿಸಲು ಕುಂಟೆಯಲ್ಲ ನಡೆದಾಡಿ ರಾಡಿ ಎಬ್ಬಿಸುವುದು, ಕೆಸರೆರಚುವುದು, ಬೇಕಂತಲೇ ಮುಳುಗಿ ಕೈಮೇಲೆತ್ತಿ ಸುಳ್ಳು ಸುಳ್ಳೇ ನೀರಿನ ಆಳ ತೋರಿಸಿ ಅಂಜಿಸುವುದು, ಹೀಗೆ ಬಹಳ ಹೊತ್ತು ಮಾಡಿದರು. ದಡದಲ್ಲಿ ಈಜಿದರೆ ಏನೂ ಆಗುವುದಿಲ್ಲ ಅಂತ ಖಾತ್ರಿಯಾಗುವ ತನಕ ತಮ್ಮನನ್ನು ಮೊಟಕಿ ಕುಳ್ಳಿರಿಸಿದ್ದ ರಮೇಶ. ಯಾವಾಗ ಅವನಿಗೂ ವಿಶ್ವಾಸ ಕುದುರಿತೋ ಬಟ್ಟೆ ಬಿಚ್ಚಿ ಬಿಸಿಲಿನಲ್ಲಿ ಬರಿ ಮೈಯಲ್ಲಿ ನಿಂತಿದ್ದ ತಮ್ಮನಿಗೆ ನಿಶಾನೆ ತೋರಿದ. ಕ್ಷಣಾರ್ಧದಲ್ಲಿ ಶ್ರೀನಿವಾಸ ಅಣ್ಣನಿದ್ದ ಕಡೆಗೆ ಓಡಿ ಬಂದು ಅವನ ಪಕ್ಕ ನೀರಿಗೆ ಬಿದ್ದ. ಅಣ್ಣ ಎನ್ನುವ ಹಕ್ಕು ಗೈರತ್ತಿನಿಂದ ತಮ್ಮನ ಉಡಿದಾರ ಹಿಡಿದು ಹೊಟ್ಟೆಯ ಕೆಳಗೆ ಕೈ ಹಾಕಿ ತನಗೇ ಬರದ ಈಜನ್ನು ಕೈಕಾಲು ಬಡಿಯೋ ಅಂತ ಜಬರಿಸಿ ತಮ್ಮನಿಗೆ ಹೇಳಿಕೊಡಲಾರಂಭಿಸಿದ.
ಹುಡುಗರೆಲ್ಲ ತಾವೇ ಸೃಷ್ಟಿಸಿದ ಕೆಂಪುನೀರಿನ ಸರೋವರದಲ್ಲಿ ಸ್ವಚ್ಛಂದ ಜಲವಿಹಾರ ಮಾಡುತಿದ್ದಾಗ ಅಲ್ಲೆಲ್ಲೊ ಎಮ್ಮೆ ಕಾಯುತ್ತಿದ್ದ ತಿಮ್ಮಕ್ಕ ಇವರ್ಯಾರ ಗಮನಕ್ಕೂ ಬಾರದಂತೆ ದಿಢೀರ್ ಅಂತ ಪ್ರತ್ಯಕ್ಷವಾದವಳು ‘‘ಏಯ್ ಏನ್ ಮಕ್ಕಳೋ ನೀವು. ಏನಾದರೂ ಆದರೆ ಏನು ಗತಿ, ಎಲ್ಲಾ ದಡ ಹತ್ತರೋ’’ ಅಂದಳು. ಮಕ್ಕಳಿಗೆಲ್ಲ ಸಾಯಂಕಾಲದ ಒಳಗೆ ತಿಮ್ಮಕ್ಕ ತಮ್ಮತಮ್ಮ ಮನೆಗಳಲ್ಲಿ ತಮ್ಮ ಸಾಹಸ ವಿವರಿಸಿ ತಾವೆಲ್ಲ ಮೈಗೆ ಎಣ್ಣೆ ಹಚ್ಚಿಕೊಳ್ಳಬೇಕಾದ ಪರಿಸ್ಥಿತಿ ನೆನಸಿಕೊಂಡು ಚಲ್ಲಾಪಿಲ್ಲಿಯಾಗಿ ತಮ್ಮ ಬಟ್ಟೆಗಳೊಂದಿಗೆ ಓಟಕಿತ್ತರು. ತಮ್ಮನನ್ನು ಜೊತೆಗೆ ಮೇಲಕ್ಕೆ ಎಳೆದುಕೊಂಡು ಬಂದ ರಮೇಶನೇ ಕೊನೆಗೆ ತಿಮ್ಮಕ್ಕನಿಗೆ ಸಿಕ್ಕಿಹಾಕಿಕೊಂಡಿದ್ದು. ಅವರಿಬ್ಬರನ್ನೂ ನೋಡಿದ್ದೇ ತಿಮ್ಮಕ್ಕನಿಗೆ ರಮೇಶ ಹೊಲಕ್ಕೆ ಹೋಗದೆ ತಮ್ಮನನ್ನು ಕರೆದುಕೊಂಡು ಈಜಲು ಬಂದಿರುವುದು ಮನವರಿಕೆಯಾಯ್ತು. ‘‘ ಯಾಕೋ ಮಗ ಹಿಂಗ್ ಮಾಡ್ತೀಯ. ಅಮ್ಮನ ತಾವಕ್ಕೆ ಹೋಗದೆ ಇಲ್ಲಿ ತಮ್ಮನ್ನೂ ಜೊತೇಗೆ ಹಾಕ್ಕೊಂಡು ಬಂದಿದ್ದೀಯಲ್ಲ. ಆಳು ಮುಳುಗೋ ಅಷ್ಟು ಆಳ ಇದೆ, ಏನಾದರೂ ಆದರೆ ಏನೋ ಗತಿ. ನಡಿ ನಿಮ್ಮಮ್ಮನಿಗೆ ಹೇಳ್ತೀನಿ ಈವತ್ತು’’ ಅಂತ ಗದರಿಕೊಂಡಳು. ಇವರಿಬ್ಬರು ಉಳಿದಿದ್ದ ತಮ್ಮ ಬಟ್ಟೆಗಳನ್ನು ಎತ್ತಿಕೊಂಡು ಊರಿನ ಕಡೆ ಓಡಿದರು.
ತಿಮ್ಮಕ್ಕನ ಕಣ್ಣಿನಿಂದ ಮರೆಯಾದ ಮೇಲೆ ಅಣ್ಣತಮ್ಮ ಯೋಚಿಸುತ್ತ ಕಾಲೆಳೆದುಕೊಂಡು ಮನೆಗೆ ಬಂದರು. ಸಾಯಂಕಾಲ ವಿಷಯ ತಿಳಿದ ಮೇಲೆ ಅಮ್ಮ ಕೊಟ್ಟೇ ಕೊಡಲಿರುವ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬ ಚಿಂತೆ ಅತಿಯಾಗಿ ಇಬ್ಬರೂ ದಾರಿಯಲ್ಲಿ ಮಾತು ನಿಲ್ಲಿಸಿ ಬಿಟ್ಟಿದ್ದರು. ಆಗಲೇ ಸಾಯಂಕಾಲ ನಾಲ್ಕು ಗಂಟೆಯ ಮೇಲಾಗಿತ್ತು. ಸರಿ, ಈಗಲಾದರೂ ಹೊಲದ ಕಡೆ ಹೋಗೋಣ, ಅಮ್ಮ ಹಸುಗಳೊಂದಿಗೆ ದಾರೀಲಿ ಅಡ್ಡ ಸಿಗಬಹುದು ಎಂದುಕೊಳ್ಳುತ್ತ ತಮ್ಮನಿಗೆ ಮನೆಯಲ್ಲೇ ಇರಲು ಹೇಳಿ ರಮೇಶ ಹೊರಟ.
ದಾರೀಲೇ ಸಿಗ್ತಾಳೆ ಎಂದು ಹೊರಟ ರಮೇಶನಿಗೆ ಶಾಂತಮ್ಮ ಕಾಣಿಸಿದ್ದು ಹೊಲದಲ್ಲಿ ಹುಲ್ಲಿನ ಹೊರೆ ಕಟ್ಟುತ್ತಿದ್ದ ಸ್ಥಿತಿಯಲ್ಲಿ. ಇವತ್ತು ಹಾಲು ಕರೆಯಲು ತಡವಾಗುವುದಿಲ್ಲವೇ ಎಂದು ಅವನಿಗೆ ಸಂದೇಹ ಬಂತು. ಅಮ್ಮನ ಬಳಿಗೆ ಹೋಗಿ ನಿಲ್ಲುತ್ತಲೇ ಇವನನ್ನು ಕಂಡ ಶಾಂತಮ್ಮ ಗುರುಗುಟ್ಟಿಕೊಂಡು ‘‘ ಯಾಕೋ ಬೇವಾರ್ಸಿ, ಎಲ್ಲಿ ಅಲೆಯೋಕೆ ಹೋಗಿದ್ದೆ. ಮಧ್ಯಾಹ್ನ ಸ್ಕೂಲು ಮುಗಿಸ್ಕೊಂಡು ಈ ಕಡೆ ಬರಬೇಕು ಅನ್ನೋ ಪರಿಜ್ಞಾನ ಬೇಡ. ಬೀದಿ ಅಲೆಯೋನೆ’’ ಎಂದು ಬೈಯ್ಯಲು ಪ್ರಾರಂಭಿಸಿದಳು. ಇವನು ಹ್ಯಾಪು ಮೋರೆ ಬಿಟ್ಟುಕೊಂಡು ಯಾಕೋ ಇವಳಿಗೂ ಇವತ್ತು ದಿನ ಸರಿಯಾಗಿದ್ದ ಹಾಗೆ ಕಾಣಿಸುತ್ತಿಲ್ಲ ಎಂದುಕೊಂಡು ನಿಂತ. ಆಗಲೇ ಸಮಯ ಆಗಿದ್ದರಿಂದ ಸುಮ್ಮನೆ ನಿಂತ ಅವನನ್ನು ಮತ್ತಷ್ಟು ಹೀಯಾಳಿಸುತ್ತ ’’ ಹಸುಗಳ ಹಗ್ಗ ಬಿಚ್ಚಿಕೊಂಡು ನಡೆಯೋ, ಈಗಲೇ ತಡ ಆಯ್ತು’’ ಎಂದು ಗದರಿದಳು.
ಹುಲ್ಲಿನ ಹೊರೆ ಹೊತ್ತು ಹಸುಗಳೊಂದಿಗೆ ಇಬ್ಬರೂ ಮನೆಗೆ ಬರುವಾಗ ಒಂದು ಹಸುವಿನ ಹೊಟ್ಟೆ ಯಾಕೋ ತುಂಬದೇ ಇರುವುದು ರಮೇಶನ ಗಮನಕ್ಕೆ ಬಂತು. ಆದರೆ ಅಮ್ಮನನ್ನು ಏನೂ ಕೇಳಲಿಲ್ಲ. ಮನೆಗೆ ಬಂದ ಮೇಲೆ ಶ್ರೀನಿವಾಸ ಎಂದೂ ಇಲ್ಲದ ಗಂಭೀರತನದಲ್ಲಿ ಹಸುಗಳಿಗೆ ಬೂಸಾ ಕಲಿಸುವುದು, ನೀರು ಮುಸುರೆ ಕುಡಿಸುವುದಕ್ಕೆ ಅಣ್ಣನಿಗೆ ಕೈಲಾದಷ್ಟು ಸಹಾಯ ಮಾಡಿದ. ಇನ್ನೂ ಬೈಯುತ್ತಲೇ ಕೆಲಸ ಮಾಡುತ್ತಿದ್ದ ಶಾಂತಮ್ಮ ಒಂದು ಹಸುವಿನ ಕೆಚ್ಚಲ ಕೆಳಗೆ ಹಾಲಿನ ಬಕೆಟ್ ಇಟ್ಟು ಎರಡೂ ಕೈಗಳಿಂದ ಬೇಗ ಬೇಗ ಹಾಲು ಕರೆದು ಮುಗಿಸಿ ಇನ್ನೊಂದು ಹಸುವಿನ ಹಾಲು ಕರೆಯಲು ಪ್ರಾರಂಭಿಸಿದಳು. ಅರೆಹೊಟ್ಟೆಯ ಆ ಹಸುವಿನಿಂದ ಇನ್ನೂ ಅರ್ಧ ಲೀಟರ್ ಹಾಲು ಕರೆದಿರಲಿಲ್ಲ ಅದು ಕಾಲೆತ್ತಿ ಝಾಡಿಸಿತು. ಅದನ್ನು ಮೋದಲೇ ಊಹಿಸಿದ್ದಂತೆ ಶಾಂತಮ್ಮ ಬಕೆಟ್ ಸರಿಸಿದ್ದರಿಂದ ಹಾಲು ಚೆಲ್ಲಲಿಲ್ಲ. ರಮೇಶ ಹೋಗಿ ಹಸುವಿನ ಮೂಗುದಾರ ಕತ್ತಿನ ಪಟ್ಟಿ ಹಿಡಿದು ನೇವರಿಸಲಾರಂಭಿಸಿದ. ಶಾಂತವಾದ ಹಸುವಿನಿಂದ ಶಾಂತಮ್ಮ ಮತ್ತೆ ಹಾಲು ಕರೆಯಲು ಪ್ರಾರಂಭಿಸಿ ಇನ್ನೇನು ಇನ್ನರ್ಧ ಲೀಟರ್ ಅಷ್ಟೇ ಬಾಕಿ ಇರುವುದು ಎನ್ನುವ ಸಮಯದಲ್ಲಿ ಯಾಮಾರಿಸಿ ಮತ್ತೊಮ್ಮೆ ಝಾಡಿಸಿತು. ಈ ಸಾರಿ ಅದನ್ನು ಊಹಿಸದ ಶಾಂತಮ್ಮನ ಕಣ್ಣ ಮುಂದೆ ಬಕೆಟ್ ಉರುಳಿ ಬಿದ್ದು ಸಗಣಿಗಂಜಲದ ಕೊಟ್ಟಿಗೆಯಲ್ಲಾ ಬಿಳೀ ಹಾಲು ಚೆಲ್ಲಾಡಿತು.
ಅಣ್ಣತಮ್ಮಂದಿರಿಬ್ಬರಿಗೂ ಎದೆ ಧಸಕ್ಕೆಂದು, ಅಂದು ರಾತ್ರಿ ತೆರೆದುಕೊಳ್ಳಲಿರುವ ರುದ್ರನಾಟಕದ ಕಲ್ಪನೆ ಯಾಕೋ ಮತ್ತಷ್ಟು ಭಾರವಾಯಿತು. ಮಧ್ಯಾಹ್ನ ಹೊಲಕ್ಕೆ ಬರಬೇಕಿದ್ದ ರಮೇಶ ಬರಲಿಲ್ಲದರ ಜೊತೆಗೆ ಆ ದಿನ ಎಲ್ಲಾ ಯಾವುದೋ ನೊಣ ಬಂದು ಗುಂಯ್‌ಗುಟ್ಟಿದ ಮಾತ್ರಕ್ಕೆ ಹೊಲದಲ್ಲೆಲ್ಲಾ ಹುಚ್ಚಿಡಿದಂತೆ ಓಡಿ ಮೇಯದೆ ತನ್ನನ್ನು ಸುತ್ತಾಡಿಸಿ ಸತಾಯಿಸಿದ್ದಲ್ಲದೆ ಈಗ ಹಾಲನ್ನು ಒದ್ದದ್ದರಿಂದ ಕುಪಿತಳಾದ ಶಾಂತಮ್ಮ ಅಲ್ಲೇ ಬಿದ್ದಿದ್ದ ಒಂದು ಬಾರು ಕೋಲನ್ನು ಹಿಡಿದು ಹಸುವಿಗೆ ಎರಡು ಬಾರಿಸಿದಳು. ಮತ್ತೆ ರಮೇಶ ಮೂಗುದಾರ ಹಿಡಿದು ನೇವರಿಸಲಾರಂಭಿಸಿದ. ಶಾಂತಮ್ಮ ಮುಗುಚಿ ಬಿದ್ದಿದ್ದ ಬಕೆಟ್ ತೆಗೆದುಕೊಂಡು ಇದ್ದಬದ್ದ ಹಾಲನ್ನೆಲ್ಲಾ ಬೇಗ ಹಿಂಡಿದಳು.
ಆಗಲೇ ಡೈರಿ ಮುಚ್ಚುವ ಸಮಯ ಆಗುತ್ತ ಬಂದಿತ್ತು. ಯಾವ ಸಮಯದಲ್ಲಾದರೂ ಲಾರಿ ಬರಬಹುದು. ಒಂದರ್ಧ ಲೀಟರ್ ಹಾಲನ್ನು ಮನೆಗೆ ತೆಗೆದಿಟ್ಟುಕೊಂಡ ಶಾಂತಮ್ಮ ಮಿಕ್ಕ ಹಾಲನ್ನು ತೆಗೆದುಕೊಂಡು ಡೈರಿಗೆ ಓಡಲು ದೊಡ್ಡಮಗನಿಗೆ ಹೇಳಿದಳು. ರಮೇಶ ಲಗುಬಗೆಯಿಂದ ಮಾಮೂಲಿಗಿಂತ ಕಡಿಮೆ ಇದ್ದ ಹಾಲಿನ ಕ್ಯಾನು ಹಿಡಿದು ಡೈರಿಯತ್ತ ಓಡಿದ. ದಾರಿಯಲ್ಲಿ ಪಕ್ಕದ ಮನೆಯವಳ ಜೊತೆ ಮಾತನಾಡಿಕೊಳ್ಳುತ್ತ ಡೈರಿಯಿಂದ ವಾಪಸ್ಸು ಬರುತ್ತಿದ್ದ ತಿಮ್ಮಕ್ಕ ಇವನನ್ನು ಗಮನಿಸಿದಂತೆ ಕಾಣಿಸಲಿಲ್ಲ. ತನ್ನ ಮನೆಯ ಕಡೆ ಹೊರಟಿದ್ದ ಅವಳನ್ನು ನೆನೆಸಿಕೊಂಡು ರಮೇಶ ಬೆವೆತ. ಡೈರಿ ಇರುವ ಬೀದಿಗೆ ತಿರುಗಿ ನೋಡುತ್ತಾನೆ ರಮೇಶ, ಆಗಲೇ ಲಾರಿ ಬಂದು ನಿಂತಿದೆ. ಲಾರಿಯ ಕ್ಲೀನರ್ ಖಾಲಿ ಕ್ಯಾನುಗಳನ್ನು ಇಳಿಸುತ್ತಿದ್ದಾನೆ. ರಂಗಯ್ಯ ತುಂಬಿದ ಕ್ಯಾನುಗಳ ಮುಚ್ಚಳ ಮುಚ್ಚಿ ಅವನ್ನು ಓರೆಯಾಗಿ ವಾಲಿಸಿಕೊಂಡು ವೃತ್ತಾಕಾರವಾಗಿ ತಿರುಗಿಸುತ್ತಾ ಲಾರಿಯ ಹಿಂಭಾಗಕ್ಕೆ ತರುತ್ತಿದ್ದ. ಅದನ್ನು ನೋಡಿದ್ದೇ ಇವನ ಓಟ ವೇಗವಾಯಿತು. ಡೈರಿಯ ಮುಂದಕ್ಕೆ ಬರುವಷ್ಟರಲ್ಲಿ ಸೆಕ್ರೆಟರಿ ಶಂಕರಪ್ಪ ಅಂದಿನ ಡೈರಿ ಹಾಲಿನ ಪೂರ್ಣ ಲೆಕ್ಕ ಬರೆದು ಪುಸ್ತಕವನ್ನು ಲಾರಿ ಡ್ರೈವರ್ ಕೈಗೆ ಇಡುತ್ತಿದ್ದ. ರಮೇಶ ರಂಗಪ್ಪ ಮತ್ತು ಶಂಕರಪ್ಪ ಇಬ್ಬರಿಗೂ ಏನಾದರೂ ಮಾಡಿ ಹಾಲು ಅಳೆಸಿಕೊಳ್ಳಲು ಅಂಗಲಾಚಿದ. ಆದರೆ ಲಾರಿ ಡ್ರೈವರ್ ದೊಡ್ಡ ಗತ್ತಿನಲ್ಲಿ ತಿರಸ್ಕಾರದಿಂದ ನಾ ಕಾಯಲಾರೆ ಎನ್ನುವ ಧೋರಣೆಯಲ್ಲಿ ನೋಡುತ್ತಿದ್ದರಿಂದ ಅವರಿಬ್ಬರೂ ಕೈಚೆಲ್ಲಿ ಬಿಟ್ಟರು. ರಮೇಶನ ಕಣ್ಣಲ್ಲಿ ನೀರು ತುಳುಕಿತು.
ಖಾಲಿಯಾಗದ ಹಾಲಿನ ಡಬ್ಬದೊಂದಿಗೆ ಪ್ರಪಂಚ ಮೈಮೇಲೆ ಕಳಚಿಕೊಂಡ ಮುಖಭಾವದಲ್ಲಿ ಮನೆಯ ಕಡೆ ಕಾಲೆಳೆದುಕೊಂಡು ಬಂದ ರಮೇಶನಿಗೆ ತನ್ನ ಮನೆಯಿಂದ ತಿಮ್ಮಕ್ಕ ಆಚೆ ಬರುತ್ತಿರುವುದು ದೂರದಿಂದಲೇ ಕಾಣಿಸಿತು. ಕ್ಯಾನು ಅಲ್ಲೇ ಚರಂಡಿಯಲ್ಲಿ ಬಿಸಾಡಿ ಓಡಿಬಿಡುವಷ್ಟು ತಪನವಾಯಿತು ಇವನಿಗೆ. ಆದರೂ ಧೈರ್ಯ ಮಾಡಿ ಮನೆಯ ಬಾಗಿಲಿನ ಒಳಗೆ ಕಾಲಿಡುತ್ತಿದ್ದಂತೆಯೇ ಶ್ರೀನಿವಾಸ ಹೊಡೀಬೇಡಮ್ಮ ಹೊಡೀಬೇಡಮ್ಮ ಎಂದು ಅಳುತ್ತಾ ಕಿರುಚಿಕೊಳ್ಳುವುದು, ಶಾಂತಮ್ಮ ಅವನನ್ನು ಹಿಡಿದು ಎಲ್ಲೆಂದರಲ್ಲಿ ಮೊಟಕುತ್ತ, ‘‘ನಿನಗೆ ಈಜು ಕಲಿಸೋದಿಕ್ಕೆ ಕರಕೊಂಡು ಹೋಗ್ತಾನ ಅವನು, ಅವನು ಬರಲಿ. ಮಾರುದ್ದ ಇಲ್ಲ ನೀನು, ನಿನಗೆ ಈಜು ಬೇಕಾ ? ಕುಂಟೇಲಿ ಮುಳುಗಿ ಸಾಯೋಕೆ ಹೋಗ್ತೀರಾ, ಏನಾದ್ರೂ ಆದ್ರೆ ಸರೀಕರಿಗೆ ಹೆಂಗ್ರೋ ನಾನು ಮುಖ ತೋರಿಸೋದು?’’ ಅಂತ ಕೋಪದಲ್ಲಿ ತೊಡೆ ಚಿವುಟುವುದು ಕಾಣಿಸಿತು. ಓಡಲೂ ಆಗದ ನಿಲ್ಲಲೂ ಆಗದ ಸ್ಥಿತಿಯಲ್ಲಿ ಕ್ಯಾನನ್ನು ಹಿಡಿದು ಅಯೋಮಯನಾಗಿ ನಿಂತ ರಮೇಶ. ಇವನು ಒಳಗೆ ಬಂದಿರುವುದನ್ನು ಗಮನಿಸಿ ಇವನನ್ನು ಹಿಡಿಯಲು ಬಂದ ಅವಳಿಗೆ ಇವನು ಕ್ಯಾನನ್ನು ಜಗ್ಗಿ ಹಿಡಿದಿರುವ ರೀತಿಯಿಂದಲೇ ಹಾಲು ವಾಪಸ್ಸು ಬಂದಿದೆ ಎನ್ನುವುದು ಗೊತ್ತಾಯಿತು. ಅಸಹಾಯಕ ಸ್ಥಿತಿಯಲ್ಲಿ ಮತ್ತಷ್ಟು ಕೋಪ ದುಃಖ ಒತ್ತರಿಸಿಕೊಂಡು ಬಂತು ಶಾಂತಮ್ಮನಿಗೆ.
ರಮೇಶ ಕ್ಯಾನು ಕೆಳಗಿಟ್ಟ. ತಪ್ಪಿಸಿಕೊಂಡು ಓಡಿಹೋಗಲು ಬಾಗಿಲಿನತ್ತ ತಿರುಗಿದ. ಶಾಂತಮ್ಮ ಅವನ ಜುಟ್ಟನ್ನು ತನ್ನ ಉಡದ ಮುಷ್ಠಿಯಲ್ಲಿ ಬಲವಾಗಿ ಹಿಡಿದಳು. ಇಷ್ಟು ಹೊತ್ತೂ ಗೊಳೋ ಎಂದು ಅಳುತ್ತಿದ್ದ ತಮ್ಮನಿಗೆ ಅಣ್ಣನ ಜುಗಲ್‌ಬಂದಿ ಸಾಥಿ ಸಿಕ್ಕಿತು. ನಾಲ್ಕಾರು ತಪರಾಕಿ ಜೋರಾಗಿ ಇತ್ತಳು. ಸುಣ್ಣ ಬೆಣ್ಣೆಯ ನ್ಯಾಯ ಬೇಡವೆಂದು ಇವನ ತೊಡೆಯನ್ನೂ ಯಮ ಹಿಂಸೆಯಾಗುವಂತೆ ಚಿವುಟಿ ತಿರುಚಿದಳು. ಇಬ್ಬರ ಕತ್ತಿನಪಟ್ಟಿಯನ್ನು ಹಿಡಿದು ದರದರನೆ ಮನೆಯಲ್ಲಿನ ಮೂಲೆಯ ಕೋಣೆಗೆ ಎಳೆದುಕೊಂಡು ಹೋಗಿ ಕೂಡಿ ಹಾಕಿ ಆಚೆಯಿಂದ ಚಿಲಕ ಬಿಗಿದು ಅಡಿಗೆ ಕೋಣೆಯತ್ತ ಹೋದಳು. ಇಷ್ಟೆಲ್ಲ ಮಾಡುವಾಗ ಅವಳ ಬಾಯಿ ನಿರಂತರ ತಡೆರಹಿತ ಚಾಲನೆಯಲ್ಲಿತ್ತು. ಅಷ್ಟೊತ್ತಿಗೆ ಸೋದರರಿಬ್ಬರಿಗೂ ಅರಿವಾಗಿತ್ತು ; ಈ ಕೋಣೆಯಲ್ಲಿ ತಮಗೆ ಮುಂದೆ ಕಾದಿರುವ ಶಿಕ್ಷೆ ಏನು ಅಂತ. ಅಪರೂಪದ್ದಾಗಿದ್ದರೂ ಈ ಮುಂಚೆ ಎರಡುಮೂರು ಭಾರಿ ಮಾತ್ರ ಅನುಭವಿಸಿದ್ದದ್ದು. ತುಂಬಾ ಯಾತನೆಯದ್ದು. ಬಲ್ಲವರೇ ಬಲ್ಲರು ಒಣಮೆಣಸಿನಕಾಯಿ ಧೂಮಪಾನವ ! ಒಳಗಿನಿಂದ ಮತ್ತೂ ಜೋರಾಗಿ ಅಕ್ಕಪಕ್ಕದ ಮನೆಯವರಿಗೆ ಕೇಳಿಸುವಂತೆ ಅಳಲು ಪ್ರಾರಂಭಿಸಿದರು.
ತನ್ನ ವಿಧಿಯನ್ನು, ಮನೆಯ ಕಡೆ ಗಮನ ಕೊಡದ ಗಂಡನನ್ನು, ಇಕ್ಕಟ್ಟಿಗೆ ಸಿಕ್ಕಿಸುವ ಮಕ್ಕಳನ್ನು, ಕಡೆಗೆ ಗೊಡ್ಡು ದನಗಳನ್ನೂ ಸೇರಿಸಿ ಬೈಯುತ್ತ ಒಲೆ ಹತ್ತಿಸಿದ ಶಾಂತಮ್ಮ ನಾಲ್ಕಾರು ನಿಮಿಷದಲ್ಲಿ ಸರಿಯಾದ ಸೌದೆ ಬಳಸಿ ನಿಗಿನಿಗಿ ಕೆಂಡಗಳು ಒಲೆಯಲ್ಲಿ ಉರಿಯುವಂತೆ ಮಾಡಿದಳು. ಡೈರಿಯಿಂದ ವಾಪಸ್ಸು ಬಂದಿದ್ದ ಅಷ್ಟೂ ಹಾಲನ್ನು ದೊಡ್ಡ ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟಿದ್ದಳು ಆಗಾಗಲೆ. ಕೆಂಡ ಸಾಕಷ್ಟು ಇದ್ದಾವೆ ಎನ್ನಿಸಿದಾಗ ಒಂದು ಸಿಲವಾರದ ತಟ್ಟೆಗೆ ಒಲೆಯಿಂದ ಕೆಂಡಗಳನ್ನು ತಳ್ಳಿಕೊಂಡಳು. ಕೈಗೆ ಸಿಗುವಂತಿದ್ದ ಡಬ್ಬದಿಂದ ಒಂದು ಹಿಡಿ ಕೆಂಪನೆಯ ಒಣಮೆಣಸಿನಕಾಯಿಗಳನ್ನು ತೆಗೆದುಕೊಂಡು ಕೆಂಡದ ತಟ್ಟೆಯಾಂದಿಗೆ ಮಕ್ಕಳನ್ನು ಕೂಡಿ ಹಾಕಿದ್ದ ಕೋಣೆಗೆ ಹೋದಳು. ಅಷ್ಟೊತ್ತಿಗಾಗಲೇ ಅವರು ಒಂದೊಂದು ಮೂಲೆಯಲ್ಲಿ ಪ್ರತಿಷ್ಠಾಪಿತವಾಗಿ ಮುಂದಿನ ಕಾರ್ಯಕ್ರಮಕ್ಕೆ ಮಾನಸಿಕವಾಗಿ ಸಿದ್ಧವಾಗಿದ್ದರು. ತಟ್ಟೆಯನ್ನು ಕೋಣೆಯ ಮಧ್ಯದಲ್ಲಿಟ್ಟವಳೇ ಇನ್ನೊಂದು ಸಾರಿ ಇಬ್ಬರ ತಲೆಯ ಮೇಲೂ ಮೊಟಕಿದಳು. ಕೆಂಡಕ್ಕೆ ಮೆಣಸಿನಕಾಯಿಗಳನ್ನು ಹಾಕಿ ಮಕ್ಕಳ ಅಂಗಲಾಚನೆಯ ನಡುವೆ ಬಾಗಿಲನ್ನು ಮುಚ್ಚಿಕೊಂಡು ಹೊರಗೆ ಬಂದಳು. ಆಗ ಸೋದರರು ಎಂತಹ ಸಂಗೀತ ಅರಸಿಕರ ಕರಳೂ ಬಿರಿಯುವಂತೆ ಕಣ್ಣೀರಕೋಡಿ ರಾಗ, ಆರ್ತತಾಳದಲ್ಲಿ ಇಬ್ಬರಿಗೂ ಮೇಳವಿಲ್ಲದ ಗಾಯನ ಕಛೇರಿಯನ್ನು ಮತ್ತಷ್ಟು ಬಲವಾಗಿ, ಒಬ್ಬ ಆರೋಹಣದಲ್ಲಾದರೆ ಮತ್ತೊಬ್ಬ ಅವರೋಹಣದಲ್ಲಿ ಮುಂದುವರಿಸಿದರು.
ಒಬ್ಬೊಬ್ಬರು ಒಂದೊಂದು ಮೂಲೆಯಲ್ಲಿ ಮೆಣಸಿನಕಾಯಿ ಹೊಗೆಯಿಂದ ಆದಷ್ಟು ದೂರ ಕುಳಿತರೂ ನಿಧಾನವಾಗಿ ಅದರ ಘಾಟು ಹರಡಲಾರಂಭಿಸಿತು. ಮೂಗಿನ ಹೊಳ್ಳೆಗಳೆಲ್ಲ ಅಷ್ಟೊತ್ತಿಗೆ ತೇವವಾಗಿದ್ದರಿಂದ, ಹೊಳ್ಳೆಗಳಲ್ಲಿ, ಶ್ವಾಸನಾಳದಲ್ಲಿ ತೀಕ್ಷ್ಣ ಖಾರದ ಅನುಭವವಾಗಲಾರಂಭಿಸಿತು. ಶ್ರೀನಿವಾಸನಿಗೆ ಈ ನೋವಿನ ಜೊತೆಗೆ ನಿನ್ನಿಂದಲೇ ನನಗಿಂತಹ ಶಿಕ್ಷೆ ಎಂದು ಭಾವಿಸಿ ಅಣ್ಣ ಯಾವಾಗ ಹಿಡಿದು ಚಚ್ಚುತ್ತಾನೋ ಎನ್ನುವ ಭಯ ಬೇರೆ. ತಮ್ಮನನ್ನು ನೋಡಿದಾಗಲೆಲ್ಲ ಆ ಅಳುವಿನಲ್ಲೂ ಅವನನ್ನು ಹಿಡಿದು ಒದೆಯುವಷ್ಟು ಕೋಪ ರಮೇಶನಿಗೆ. ಆದರೆ ತಾನು ಹೊಡೆಯುವುದನ್ನು ಅವನೇನಾದರೂ ಅಮ್ಮನಿಗೆ ಕಿರುಚಿಕೊಂಡರೆ ತಾನೊಬ್ಬನೇ ಶಿಕ್ಷೆ ಅನುಭವಿಸಬೇಕಾಗಿ ಬರಬಹುದಾದ ಮುಂದಾಲೋಚನೆ ಅವನನ್ನು ತಡೆಯುತ್ತಿತ್ತು. ಅದೂ ಅಲ್ಲದೆ ಒಗ್ಗಟ್ಟಿನಲ್ಲಿ ಬಲವಿದೆ. ಇಬ್ಬರೂ ಜೊತೆಯಾಗಿ ಅಳುವುದೇ ಶೀಘ್ರಮುಕ್ತಿಯ ದಾರಿ. ಅಷ್ಟೊತ್ತಿಗೆ ಖಾರದ ಹೊಗೆಯಿಂದಾಗಿ ಉಬ್ಬಸದ ಕೆಮ್ಮಿನಂತೆ ಕೆಮ್ಮಲಾರಂಭಿಸಿದ್ದರು ಇಬ್ಬರೂ.
ಯಾವಾಗ ಅಳುತ್ತಿದ್ದ ಮಕ್ಕಳು ನಿಧಾನವಾಗಿ ಕೆಮ್ಮಲಾರಂಭಿಸಿದರೋ ಶಾಂತಮ್ಮನಿಗೆ ತಳಮಳ ಶುರುವಾಯಿತು. ಎದೆ ಮತ್ತಷ್ಟು ಭಾರವಾಯಿತು. ಕರುಳು ಮಿಡಿಯಿತು. ಆದರೂ ಒಂದೆರಡು ನಿಮಿಷ ತಡೆದಳು. ಒಳಗಿನಿಂದ ಅಳುತ್ತಾ ಕೆಮ್ಮುತ್ತಾ ಇನ್ನೊಂದು ಸಲ ಹೀಗೆ ಮಾಡಲ್ಲಮ್ಮ, ಈಜು ಹೊಡೆಯೋದಿಕ್ಕೆ ಹೋಗಲ್ಲಮ್ಮ, ಶಾಲೆ ಬಿಟ್ಟ ತಕ್ಷಣ ಹೊಲಕ್ಕೆ ಬರ್ತೀನಮ್ಮ, ನಾನೂ ಅಷ್ಟೇನಮ್ಮ, ನಿನ್ನಾಣೆ, ನನ್ನಾಣೆ, ಕಣ್ಣಾಣೆ, ಅಮ್ಮ ಅಮ್ಮ ಬಾಗಿಲು ತೆಗೀಮ್ಮ ಎನ್ನುವುದು ಜೋರಾಯಿತು. ಕೆಮ್ಮುವುದೂ ಜಾಸ್ತಿಯಾಯಿತು. ಒಲೆಯ ಮುಂದೆ ಕುಳಿತವಳ ಕಣ್ಣಿನಲ್ಲಿ ಹನಿ ತುಳುಕಿದವು.
ಇನ್ನು ಅವಳಿಗೆ ಕೂರಲಾಗಲಿಲ್ಲ. ದಡಬಡನೆ ಎದ್ದು ಮುಚ್ಚಿದ್ದ ಕೋಣೆಯ ಬಾಗಿಲು ತೆಗೆದಳು. ಸರಿಯಾಗಿ ಕಿಟಕಿಯ ವ್ಯವಸ್ಥೆ ಇಲ್ಲದ ಕೋಣೆಯಿಂದ ಘಾಟಿನ ಹೊಗೆ ಮನೆಯ ಒಳಗಡೆ ಬಂದಿತು. ‘‘ಆಚೆ ಬನ್ರೋ’’ ಎಂದಿದ್ದೇ ಕೆಂಪಾಗಿದ್ದ ಕಣ್ಣಿನಿಂದ ನೀರು ಸುರಿಸುತ್ತ, ನೀರಿನಷ್ಟು ತೆಳುವಾಗಿ ಸೋರುತ್ತಿದ್ದ ಮೂಗಿನ ಗೊಣ್ಣೆ ಒರೆಸಿಕೊಳ್ಳುತ್ತ ಇಬ್ಬರೂ ಕೋಣೆಯಿಂದ ಹೊರಗೆ ಬಂದರು. ದೈನ್ಯತೆಯಿಂದ ಅಮ್ಮನನ್ನೇ ನೋಡಿದರು. ಈಗ ಸೋಲಬಾರದು ಎಂದು ಅವಳು ‘‘ಇನ್ನೊಂದು ಸಲ ಹೀಗೆ ಮಾಡ್ತೀರಾ?’’ ಅಂದಳು. ‘‘ ಇಲ್ಲಮ್ಮ’’ ಎನ್ನುವ ಪದ ಇಬ್ಬರ ಬಾಯಿಯಿಂದಲೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡ ರೀತಿಯಲ್ಲಿ ಮೇಳೈಸಿ ಬಂತು. ಕೆಂಡದ ತಟ್ಟೆ ಹಿಡಿದು ಅಡಿಗೆ ಕೋಣೆಯತ್ತ ನಡೆದಳು. ಇವರು ಮೂಗು ಒರೆಸಿಕೊಳ್ಳುತ್ತ , ಅರೆಬರೆ ಅಳುತ್ತ ಅವಳನ್ನು ಹಿಂಬಾಲಿಸಿದರು. ಇನ್ನೂ ಸ್ವಲ್ಪ ಹೊಗೆ ಏಳುತ್ತಿದ್ದ ಕೆಂಡಕ್ಕೆ ನೀರು ಸುರುವಿದಳು. ಆಷ್ಟೊತ್ತಿಗೆ ಒಲೆಯ ಮೇಲೆ ಚೆನ್ನಾಗಿ ಕುದಿದು ಕೆನೆ ಕಟ್ಟಿದ್ದ ಹಾಲನ್ನು ಎರಡು ದೊಡ್ಡ ಲೋಟಗಳಿಗೆ ಬಗ್ಗಿಸಿ ಒಂದೆರಡು ಚಮಚ ಸಕ್ಕರೆ ಬೆರೆಸಿ ಮಕ್ಕಳಿಗೆ ಕೊಟ್ಟು ಅನ್ನಕ್ಕಿಟ್ಟಿದ್ದ ಪಾತ್ರೆಯ ಒಲೆ ಉರಿಸುತ್ತ ಕುಳಿತಳು. ಬಿಸಿಬಿಸಿಯಾದ ಸಿಹಿಹಾಲನ್ನು ಸೊರಸೊರ ಅನ್ನುತ್ತ ಇಬ್ಬರೂ ಅವಳಿಗೆ ಅಂಟಿಕೊಂಡು ಕುಡಿಯುತ್ತ ಕುಳಿತರೆ ಶಾಂತಮ್ಮ ಉಪದೇಶ ನಿಲ್ಲಿಸಿ ಮೌನವಾಗಿ, ಮಕ್ಕಳ ಸ್ಪರ್ಶ ಸುಖದ ಭದ್ರತೆ ಅನುಭವಿಸುತ್ತಾ ಬೇರೆ ಪಾತ್ರೆಯಲ್ಲಿ ಅಷ್ಟೊತ್ತಿಗೆ ಸಿದ್ದವಾಗಿದ್ದ ಕಾಫಿಯನ್ನು ಲೋಟಕ್ಕೆ ಬಗ್ಗಿಸಿಕೊಂಡಳು.
ಆದಾದ ಮೇಲೆ ತಿಮ್ಮಕ್ಕ ಕಾಣಿಸಿದಾಗ, ಅವಳ ನೆನಪಾದಾಗ, ಅಣ್ಣತಮ್ಮರಿಗೆ ಆ ದಿನದ ಮೆಣಸಿನಕಾಯಿ ಹೊಗೆಯ ಜ್ಞಾಪಕವೂ ಜೊತೆಗೇ ಬರುತ್ತಿತ್ತು. ಆದರೂ ಅಷ್ಟಕ್ಕೆಲ್ಲ ಕಾರಣಳಾದ ತಿಮ್ಮಕ್ಕನನ್ನು ದ್ವೇಷಿಸಲಾಗದ ವಿಚಿತ್ರ ಅಣ್ಣತಮ್ಮರಿಗೆ ಅರ್ಥವಾಗಲೇ ಇಲ್ಲ. ಬದಲಿಗೆ, ತಾವು ಜಂಟಿಯಾಗಿ ಅನುಭವಿಸಿದ ಶಿಕ್ಷೆ ತಮ್ಮ ನಡುವಿನ ಸೋದರಬಂಧವನ್ನು ಗಟ್ಟಿಮಾಡಿತೇನೋ ಅನ್ನಿಸುತ್ತಿತ್ತು. ತಿಮ್ಮಕ್ಕನ ನೆನಪು ಆಪ್ತಭಾವನೆ ಮರುಕಳಿಸುವಂತೆ ಮಾಡುತ್ತಿತ್ತು. ಮನ ನಿರಾಳವಾಗುತ್ತಿತ್ತು. ಸಂತೃಪ್ತವಾಗುತ್ತಿತ್ತು.