ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಂದರ ನಮನಕ್ಕೆ ವಿದ್ವಾನ್ ಕೃಷ್ಣಪ್ರಸಾದ್ ಮೆರುಗು

By ವೆಂಕಟ್, ಸಿಂಗಪುರ
|
Google Oneindia Kannada News

ಈ ಬಾರಿಯ 'ಪುರಂದರ ನಮನ' ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿತ್ತೆಂದರೆ ಅತಿಶಯೋಕ್ತಿಯಾಗಲಾರದು. ಕರ್ನಾಟಕ ಸಂಗೀತದ ಗಾಯನ, ವಾದ್ಯಗಳ ಸ್ಪರ್ಧೆ, ಸಮೂಹ ಗಾಯನ ಹಾಗೂ ಸಂಗೀತ ಶಿಬಿರಗಳೆಂಬ ಪ್ರಮುಖ ಮೂರು ವಿಭಾಗಗಳಲ್ಲಿ ರೂಪುಗೊಂಡ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ದಾಸವರೇಣ್ಯರ ಆರಾಧನೆ ಕರ್ನಾಟಕ ಸಂಗೀತ ಪ್ರೇಮಿಗಳ ಮನಗಳಲ್ಲಿ ಸಂತೃಪ್ತಿಯ ನಾದವನ್ನು ಹೊಮ್ಮಿಸಿ ಸಂಗೀತ ಸುಧೆಯನ್ನು ಹರಿಸಿ, ಕನ್ನಡ ಸಾಹಿತ್ಯ ಹಾಗೂ ಸಂಗೀತ ಲೋಕಕ್ಕೆ ಪುರಂದರದಾಸರ ಕೊಡುಗೆಯನ್ನು ಎತ್ತಿ ಹಿಡಿಯುವಲ್ಲಿ ಸಾರ್ಥಕತೆಯನ್ನು ಕಂಡಿತು.

ಬೆಂಗಳೂರಿನಿಂದ ಬಂದ ವಿದ್ವಾನ್ ಕೆ.ವಿ. ಕೃಷ್ಣ ಪ್ರಸಾದ್ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಾಗೂ ರೂವಾರಿ ಎನ್ನಬಹುದು. ಕರ್ನಾಟಕ ಸಂಗೀತ ಹಾಗೂ ಸಾಹಿತ್ಯದಲ್ಲಿ ಅಪಾರ ಜ್ಞಾನವುಳ್ಳ ಶ್ರೀಯುತರು ಚಿಕ್ಕ ವಯಸ್ಸಿನಲ್ಲಿಯೇ ಅಮೋಘ ಸಾಧನೆಗೈಯ್ದು ಸಂಗೀತ ಸಾಧನೆಯ ಹಾದಿಯಲ್ಲಿ ಮುಂಚೂಣಿಯಲ್ಲಿದ್ದಾರೆ. 8ನೇ ವಯಸ್ಸಿನಿಂದಲೇ ವಿದುಷಿ ಗೀತ, ವಿದುಷಿ ಸ್ವರ್ಣಲತ ಹಾಗೂ ವಿದ್ವಾನ್ ಎಮ್.ವಿ. ರಘುರಾಮ್‌ರಂತಹ ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ಸಂಗೀತದ ಯಾತ್ರೆಯನ್ನು ಕೈಗೊಂಡ ಕೃಷ್ಣ ಪ್ರಸಾದ್ ಅವರು, ಪ್ರಸ್ತುತ ಸಂಗೀತದ ತರಬೇತಿಯನ್ನು ತಮ್ಮ ಆಧ್ಯ ಗುರುಗಳಾದ ಗಾನ ಕಲಾ ಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭ ಅವರಲ್ಲಿ ಮುಂದುವರೆಸುತ್ತಿದ್ದಾರೆ.

Purandara Namana 2014 in Singapore

ಇವರು ಈಗ ಕಲಾ ಪ್ರಕಾರಗಳ ಮೂಲಕ ವಿಶಿಷ್ಟವಾದಂತಹ ಕಲಿಕೆಯನ್ನು ಸರಾಗವಾಗಿ ಹೇಳಿಕೊಡುತ್ತಿರುವ ವಿದ್ಯಾಶಾಲೆ 'Our School'ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹಾಗೂ 'ಶ್ರೀ ವಿದ್ಯಾ ಕಲಾ ಕೇಂದ್ರ'ವೆಂಬ ಕರ್ನಾಟಕ ಸಂಗೀತದ ಶಾಲೆಯನ್ನು ಸಹ ನಡೆಸುತ್ತಿದ್ದಾರೆ. ತಮ್ಮ ಗುರುಗಳಲ್ಲಿ ಅಪಾರವಾದ ಭಕ್ತಿಯುಳ್ಳ ವಿದ್ವಾನ್.ಕೆ.ವಿ. ಕೃಷ್ಣ ಪ್ರಸಾದ್ ಅವರು 'ಪದ್ಮನಾಭಪ್ರಿಯ'ವೆಂಬ ರಾಗವನ್ನು ಸೃಷ್ಟಿಸಿ, ಒಂದು ಹೊಸ ತಿಲ್ಲಾನವನ್ನು ಇದೇ ರಾಗದಲ್ಲಿ ಸಂಯೋಜಿಸಿ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ್ದು ಅವರ ಗುರು ಭಕ್ತಿಗೆ ಹಿಡಿದ ಕನ್ನಡಿ. 'ವೆಂಕಟದಾಸ'ವೆಂಬ ಅಂಕಿತ ನಾಮದಡಿಯಲ್ಲಿ ನೂರಕ್ಕೂ ಹೆಚ್ಚು ಗೀತೆಗಳನ್ನು ಸಂಯೋಜಿಸಿದ ಇವರು ಸಂಗೀತ ವಿಶಾರದ, ಶಂಕರ ಪ್ರಶಸ್ತಿ ಮತ್ತು ಅನೇಕಾನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ.

ಶನಿವಾರ, 15 ಫೆಬ್ರವರಿ 2014ರಂದು ಕನ್ನಡ ಸಂಘ (ಸಿಂಗಪುರ) ಹಾಗೂ ವುಡ್‌ಲ್ಯಾಂಡ್ಸ್ ಸಿ.ಸಿ.ಯ ಜಂಟಿ ಆಯೋಗದಲ್ಲಿ ನಡೆದ 'ಪುರಂದರ ನಮನ -2014' ಕಾರ್ಯಕ್ರಮದಲ್ಲಿ ನಾದ ನಿಧಿ ಭಾಗ್ಯಮೂರ್ತಿ ಅವರ ಮುಂದಾಳತ್ವದಲ್ಲಿ ನಡೆದ ಕೀರ್ತನೆಗಳ ಸಮೂಹ ಗಾಯನ ಪುರಂದರ ದಾಸರಿಗೆ ಅರ್ಪಿತವಾಯಿತು. ರಶ್ಮಿ ಉದಯಕುಮಾರ್ ಅವರ ಕಾರ್ಯಕ್ರಮ ನಿರ್ವಹಣೆಯಲ್ಲಿ ಆರಂಭಗೊಂಡ ನಂತರ ಸಂಘದ ಅಧ್ಯಕ್ಷರಾದ ವಿಶಾಲಾಕ್ಷಿ ವೈದ್ಯ ಅವರು ತಮ್ಮ ಸ್ವಾಗತ ಬಾಷಣದಲ್ಲಿ ಮುಖ್ಯ ಅಥಿತಿಗಳಿಗೆ, ಗಣ್ಯರಿಗೆ, ನೆರೆದಿದ್ದ ಸಭಿಕರೆಲ್ಲರಿಗೂ ಸ್ವಾಗತ ಕೊರಿ ಸಂಗೀತದ ಸುಧೆಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ದಾಸರ ಹಾಡುಗಳಿಗೆ ರಚನ ಹೆಗಡೆ, ಸಾಧನ ರಾಜರಾಂ ಅವರ ತಂಡ ಹಾಗೂ ಶ್ರೀಲಕ್ಷ್ಮಿ ಅವರ ತಂಡ ಅಮೋಘವಾದ ಭರತನಾಟ್ಯವನ್ನು ಪ್ರದರ್ಶಿಸಿದರು. ಕೆ.ವಿ. ಕೃಷ್ಣ ಪ್ರಸಾದ್ ಅವರು 'ನಾದ ಜಾಗೃತಿ'ಯ ಬಗ್ಗೆ ವ್ಯಾಖ್ಯಾನ ನೀಡಿ, ಕರ್ನಾಟಕ ಸಂಗೀತದ ವ್ಯವಸ್ಥೆಯನ್ನು ವಿವರಿಸುತ್ತಾ ಸಂಗೀತ ಹೇಗೆ ಸಮಾಜದ ಒಳಿತು ಹಾಗು ನಾಗರಿಕ ಜಾಗೃತಿಯನ್ನು ಕಾಪಾಡುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆಂಬುದನ್ನು ಉದಾಹರಣೆಗಳ ಸಮೇತ ವಿವರಿಸಿ ತಮ್ಮ ವಾಕ್ಚಾತುರ್ಯ ಹಾಗೂ ಗಾಯನದ ಮೋಡಿಯಲ್ಲಿ ಇಡೀ ಸಭಾಂಗಣವನ್ನು ತೇಲಿಸಿದರು. ಅಮೋಘವಾಗಿ ಪುರಂದರ ದಾಸರ ಪ್ರಮುಖ ಕೀರ್ತನೆಗಳನ್ನು ಹಾಡಿ ಸಭಿಕರನ್ನೂ ಮಂತ್ರಮುಗ್ಧರನ್ನಾಗಿಸಿದರು. ಪಕ್ಕವಾದ್ಯದಲ್ಲಿ ರಾಮ್‌ಕುಮಾರ್ (ವೀಣೆ), ವಿಘ್ನೇಶ್ ಬಾಲಕೃಷ್ಣನ್ (ಮೃದಂಗ), ಸರವಣನ್ (ಕೊಳಲು), ಬಾಂಬೆ ವಿ.ಆನಂದ್ (ಪಿಟೀಲು) ಸಹಗೂಡಿದ್ದರು.


ಸಂಗೀತ ಪ್ರೇಮಿಗಳ ಆಲಿಸುವ ದಾಹವನ್ನು ತೀರಿಸಲಾಗಲಿಲ್ಲವೋ ಅಥವ ಸಮಯ ಕಳೆದಿದ್ದು ತಿಳಿಯಲಾಗಲಿಲ್ಲವೋ, ಮಂಗಳವಾದ ನಂತರ ಜನಸ್ತೋಮವು ನಿಂತು ಜಯಘೋಷ ಮಾಡಿದ್ದು ಕೆ.ವಿ. ಕೃಷ್ಣ ಪ್ರಸಾದ್ ಅವರಿಗೆ ಸಿಂಗನ್ನಡಿಗರು ನೀಡಿದ ಗೌರವವಾಗಿತ್ತು. ಇದೇ ಸಂದರ್ಭದಲ್ಲಿ ವುಡ್‌ಲ್ಯಾಂಡ್ಸ್ ಸಿ.ಸಿ.ಯ IAEC ಚೇರ್ಮನ್ ಅಜೇಯನ್ ಹಾಗೂ ಕನ್ನಡ ಸಂಘದ ಅಧ್ಯಕ್ಷರಾದ ವಿಶಾಲಾಕ್ಷಿ ವೈದ್ಯ ಅವರಿಂದ ಪಕ್ಕವಾದ್ಯದವರಿಗೆ ಹಾಗೂ ವಿದ್ವಾನ್ ಕೆ.ವಿ. ಕೃಷ್ಣ ಪ್ರಸಾದ್ ಅವರಿಗೆ ಶಾಲು, ಹಾರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಇಡೀ ಕಾರ್ಯಕ್ರಮವನ್ನು ಆಯೋಜಿಸಿ, ಯಶಸ್ವಿಯಾಗಿ ನಿಭಾಯಿಸಿದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಸಾಧ್ವಿ ಸಂಧ್ಯಾ ಅವರು ತಮ್ಮ ವಂದನಾರ್ಪಣೆಯಲ್ಲಿ ಎಲ್ಲಾ ಕಾರ್ಯಕರ್ತರಿಗೆ, ಸಭಿಕರಿಗೆ ಪ್ರಸಾದ ಸರಬರಾಜು ಮಾಡಿದ ಗಣೇಶ್ ವಿಲಾಸ್ ರಮಣ ಭಟ್ ಅವರಿಗೆ ವಂದನೆ ತಿಳಿಸಿದರು.

ಕರ್ನಾಟಕ ಸಂಗೀತ ಗಾಯನ ಹಾಗೂ ವಾದ್ಯ ಸ್ಪರ್ಧೆ : ಕಳೆದ ವರ್ಷ ಕನ್ನಡ ಸಂಘ (ಸಿಂಗಪುರ)ದಿಂದ ಶುಭಾರಂಭಗೊಂಡ ಸ್ಪರ್ಧೆಗಳು ಇತರೆ ಸಂಸ್ಥೆಗಳಲ್ಲಿ ಕೂಡ ಪ್ರಸಿದ್ದಿ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿರುವುದು ಸಂಘದ ಪ್ರಯತ್ನಕ್ಕೆ ಸಂದ ಶ್ಲಾಘನೆ. ಈ ಬಾರಿ 9 ಫೆಬ್ರವರಿರಂದು SINDAದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಾದ್ಯ ವಿಭಾಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು. 67 ಕಿರಿಯ ಹಾಗೂ ಹಿರಿಯ ವಿಭಾಗದ ಪಟುಗಳು ತಮ್ಮ ಗಾಯನ ಹಾಗೂ ವಾದ್ಯಗಳ ಚಾತುರ್ಯವನ್ನು ತೀರ್ಪುಗಾರರ ಮುಂದೆ ಮಂಡಿಸಿದರು. ವಾದ್ಯಗಳ ವಿಭಾಗಕ್ಕೆ ಗೋದಾ, ರಾಮ್‌ಕುಮಾರ್ ಹಾಗೂ ಬಾಂಬೆ ವಿ. ಆನಂದ್ ಮತ್ತು ಸಂಗೀತ ಗಾಯನಕ್ಕೆ ಭಾಗ್ಯಮೂರ್ತಿ, ಶೃತಿ ಆನಂದ್ ಹಾಗೂ ಪ್ರತಿಮ ಬೆಳ್ಳಾವೆ ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು. ವಿಜೇತರಿಗೆ ಕೃಷ್ಣ ಪ್ರಸಾದ್ ಬಹುಮಾನ ವಿತರಿಸಿದರು.

ಸ್ಪರ್ಧೆಗಳಲ್ಲಿ ವಿಜೇತಗೊಂಡವರ ಪಟ್ಟಿ : ಕಿರಿಯರ ಗಾಯನ ವಿಭಾಗದಲ್ಲಿ ಅಮೃತ ದೇವರಾಜ್ (ಪ್ರಥಮ), ನೀರಜ ಮೆನನ್ (ದ್ವಿತೀಯ), ರಿಷಭ್ ರಾಜೇಶ್ (ತೃತೀಯ). ಹಿರಿಯರ ಗಾಯನ ವಿಭಾಗದಲ್ಲಿ ಗಣೇಶ್ ಬಾಲಸುಬ್ರಮಣಿಯನ್ (ಪ್ರಥಮ), ಶ್ರೀರಾಮ್ ಬಾಲಸುಬ್ರಮಣಿಯನ್ (ದ್ವಿತೀಯ), ರಚನ ಮುರಳಿ ನಾರಾಯಣನ್ ಮತ್ತು ಶಿವಾನುಜ ರಾಮ್‌ಕುಮಾರ್ (ತೃತೀಯ). ಕಿರಿಯ ವಾದ್ಯಗಳ ವಿಭಾಗದಲ್ಲಿ ಸುರುಪ್ ಸೌಮಿತ್ರಿ (ಪ್ರಥಮ), ಇಂಬಾಯಿನಿ ಅಂಬರಸನ್ (ದ್ವಿತೀಯ), ಕಿಷನ್ ಹೆಬ್ಬಾರ್ (ತೃತೀಯ), ಹಿರಿಯರ ವಾದ್ಯಗಳ ವಿಭಾಗದಲ್ಲಿ ಅರ್ಚನ ಕುಮಾರಸ್ವಾಮಿ (ಪ್ರಥಮ) ಸ್ಥಾನವನ್ನು ಪಡೆದರು.

ಇದೇ ಸಂದರ್ಭದಲ್ಲಿ ಕೃಷ್ಣ ಪ್ರಸಾದ್ ಅವರ ಸಂಗೀತ ಜ್ಞಾನದ ಪ್ರಯೋಜನವನ್ನು ಪಡೆಯಲು ಅನೇಕ ಉತ್ಸುಕ ಸಂಗೀತ ಅಭಿಲಾಷಿಗಳಿಗೆ 16 ಫೆಬ್ರವರಿಯಂದು 'ಸಂಗೀತ ಶಿಭಿರ'ವನ್ನು ಆಯೋಜಿಸಲಾಗಿತ್ತು ಸತತ 4 ಘಂಟೆಗಳ ಕಾಲ ನಡೆದ ಈ ಶಿಭಿರದಲ್ಲಿ ಕೃಷ್ಣ ಪ್ರಸಾದ್ ಅವರು ಕರ್ನಾಟಕ ಸಂಗೀತದ ಮಹತ್ವವನ್ನು ತಿಳಿಯಪಡಿಸಿ, ಸಂಗೀತಗಾರನು ರಾಗ, ತಾಳ, ಲಯ, ಶೃತಿ, ಭಾವಗಳಲ್ಲಿ ತಲ್ಲೀನನಾಗಿ, ವಿವಿಧ ವಿಷಯಗಳನ್ನೂ ಕೇಂದ್ರೀಕರಿಸಿ, ಹತೋಟಿಯಲ್ಲಿಟ್ಟು ಸಾಧನೆಯನ್ನು ಮಾಡಬೇಕೆಂದು ಮನದಟ್ಟು ಮಾಡಿದರು.

English summary
Vidwan K.V. Krishna Prasad, reknowned classical singer from Bangalore was part of Purandara Namana 2014 in Singapore. On this occasion music and instrument competition, workshops were conducted as part of the celebrations. Report by Venkat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X