ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ.ಆಫ್ರಿಕಾದಲ್ಲಿ ಮೈಸೂರು ದಸರಾದ ಗಮ್ಮತ್ತು!

By ಪ್ರಶಾಂತ್ ಬೀಚಿ
|
Google Oneindia Kannada News

ಮೈಸೂರು ದಸರದ ಜಂಬೂ ಸವಾರಿಯ ಗಮ್ಮತ್ತು ನೋಡಿದವರಿಗೆ ಮಾತ್ರ ಗೊತ್ತು. ಆನೆಯ ಮೇಲೆ ಮಹಾರಾಜರ ಅಂಬಾರಿ ಬರುತ್ತಿದ್ದ ಕಾಲವಿತ್ತು, ಈಗ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಕೂತು ಬರುತ್ತಾಳೆ. ಮಹಾರಾಜರ ಆರಾಧ್ಯ ದೇವಿ, ಮೈಸೂರಿನ ಕೃಪಾಕಟಾಕ್ಷಿಣಿ, ಮಹಿಷಾಸುರ ಮರ್ಧಿನಿ, ಮಾತಾ ಚಾಮುಂಡೇಶ್ವರಿಯ ಆಶೀರ್ವಾದ ಮೈಸೂರಿನ ದಸರಾ ಹಬ್ಬವನ್ನು ಜೀವಂತವಾಗಿರಿಸಿದೆ.

ವಿಶ್ವ ವಿಖ್ಯಾತವಾಗಿರುವ ಈ ಒಂಬತ್ತು ದಿನದ ದಸರಾ ಆಚರಣೆಯನ್ನು ನೋಡಲು ಪ್ರಪಂಚದ ಮೂಲೆ ಮೂಲೆಗಳಿಂದ ಆಸಕ್ತರು ಬರುತ್ತಾರೆ. ಮೈಸೂರಿನಲ್ಲಿ ಅರಮನೆಯ ದೀಪಾಲಂಕಾರ, ಮೈಸೂರು ರಾಜರ ಖಾಸಗಿ ದರ್ಬಾರು, ಚಾಮುಂಡೇಶ್ವರಿಯ ವಿಧ ವಿಧ ಅಲಂಕಾರ ಮತ್ತು ಪೂಜೆ, ಮೈಸೂರಿಗೆ ಮೈಸೂರೆ ನವ ವಧುವಿನಂತೆ ಅಲಂಕೃತಗೊಂಡಿರುತ್ತದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ವಿಧವಿಧವಾದ ಚಿತ್ರ ಭಂಡಾರಗಳ ಪ್ರದರ್ಶನಗಳಿರುತ್ತದೆ.


ರಾಜ್ಯದ ಜಾನಪದ ಲೋಕದ ಪರಿಚಯವಾಗುತ್ತದೆ, ಒಂದಲ್ಲ ಎರಡಲ್ಲ ನೂರಾರು ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಇಂತಹ ಮೈಸೂರು ದಸರಾವನ್ನು ನಾಡಿನಿಂದ ಹೊರಗಿರುವ ಎಲ್ಲರೂ ದೂರವಾಗಿರುವ ಭಾರವಾದ ಮನಸ್ಸಿನಿಂದ ನೆನೆದುಕೊಳ್ಳುತ್ತೇವೆ. ದಾರ್-ಎಸ್-ಸಲಾಮ್ ನಲ್ಲಿನ ಕನ್ನಡಿಗರು ಮೈಸೂರು ದಸರಾವನ್ನು ಆಫ್ರಿಕಾಗೆ ಕರೆತಂದಿದ್ದರು ಎನ್ನುವುದೆ ಇಲ್ಲಿನ ಖಾಸ್ ಬಾತ್! [ದಾರ್-ಎಸ್-ಸಲಾಮ್ ನಲ್ಲಿ ಮರೆಯಲಾಗದ ಸಂಗೀತ ಸಂಜೆ]

ಪ್ರತೀ ಬಾರಿಯಂತೆ ಗಣರಾಜ್ಯೋತ್ಸವ ಸಮಾರಂಭವನ್ನು ಎಲ್ಲಾ ಭಾರತೀಯರು ಸೇರಿ ಆಚರಿಸುವ ಯೋಜನೆ ಶುರುವಾಯಿತು. ಭಾರತದ ಎಲ್ಲಾ ರಾಜ್ಯದ ಜನರು ಅವರವರ ಹಬ್ಬದ ವೈಶಿಷ್ಟ್ಯತೆಯನ್ನು ಸಾಂಸ್ಕೃತಿಕವಾಗಿ ತೋರಿಸಬೇಕು ಎಂದು ತೀರ್ಮಾನಿಸಿದರು. ಪಂಜಾಬಿಗಳು ಬೈಸಾಕಿ ಹಬ್ಬದ ನೃತ್ಯವನ್ನು ಮಾಡಲು ನಿರ್ಧರಿಸಿದರು, ಗುಜರಾತಿಗಳು ನವರಾತ್ರಿಯ ಗರ್ಭಾ ಮತ್ತು ದಾಂಡಿಯಾ ಆಡಲು ನಿರ್ಧರಿಸಿದರು, ಮಹಾರಾಷ್ಟ್ರದ ಜನರು ಗಣಪತಿ ಹಬ್ಬ, ಒಂದು ಬಿಹು ನೃತ್ಯ ಮತ್ತೊಂದು ಮಣಿಪುರಿ ಹೀಗೆ ಎಲ್ಲಾ ರಾಜ್ಯದ ಜನರು ಅವರವರ ಹಬ್ಬವನ್ನು ತೋರಿಸಿದರು. ಕರ್ನಾಟಕ ತನ್ನ ಹೆಮ್ಮಯ ದಸರಾ ಹಬ್ಬವನ್ನೆ ದಾರ್-ಎಸ್-ಸಲಾಮ್ ಗೆ ಕರೆತಂದಿತ್ತು.

Mysore Dasara comes alive in South Africa

ಮೈಸೂರು ದರಸಾ ಎಷ್ಟೊಂದು ಸುಂದರ : ಸಣ್ಣ ಮಕ್ಕಳಿಂದ ಹಿಡಿದು ಅರವತ್ತರವರೆಗಿನೆ ಉತ್ಸಾಹಿಗಳ ಒಂದು ಗುಂಪು ತಯಾರಾಗಿತ್ತು. ನಂದಿ ಧ್ವಜ ಹಿಡಿದ ಇಬ್ಬರು ಸಿಪಾಯಿಗಳು ಮುಂದೆ ಬರುತ್ತಿದ್ದರೆ, ಅದರ ಹಿಂದೆ ಅರ್ಜುನನಂತಹ ನಮ್ಮ ಆನೆ. ತಾಯಿ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಕೂರಿಸಿಕೊಂಡು ಗಜ ಗಾಂಭೀರ್ಯದಲ್ಲಿ ನಡೆಯುತ್ತಿದ್ದರೆ ಪಕ್ಕದಲ್ಲೆ ಹೂವು ಹಾಕುವ ಯುವತಿ, ಇನ್ನೊಂದು ಬದಿಯಲ್ಲಿ ದೇವಿಗೆ ಚಾಮರ ಬೀಸುವ ಸೇವಕ, ದೇವಿಗೆ ಚತ್ರಿ ಹಿಡಿಯುವ ಯುವಕ ಇವರ ಜೊತೆಗೆ ಅರ್ಚಕರು. ಎಲ್ಲರೂ ಬಂದು ವೇದಿಕೆಯ ಮಧ್ಯದಲ್ಲಿ ಉರುತಿಸಿಕೊಂಡರು.

ಆಗಲೇ ಶುರುವಾಗಿದ್ದು ಬಹುಪರಾಕ್! ರಾಜಾಧಿರಾಜ, ವೀರ ಸಾಮ್ರಾಟ, ಒಡೆಯರ ಕುಲತಿಲಕ, ಮೈಸೂರು ಸಿಂಹಾಸನಾಧೀಶ... ಹೀಗೆ ಬಹುಪರಾಕ್ ಹೇಳುತ್ತಿದ್ದಾಗಲೆ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬಂದಿದ್ದು ನಮ್ಮ ಮಹಾರಾಜರು. ಕಟ್ಟುಮಸ್ತಾದ ಆಸಾಮಿ, ಮುಖದ ಮೇಲೆ ಹುರಿ ಮೀಸೆ, ಕೈಲಿ ಖಡ್ಗ, ಸೊಂಟಕ್ಕೆ ಸುತ್ತಿದ ಉತ್ತರಿ, ಮಿರಿ ಮಿರಿ ಮಿಂಚುವ ರಾಜನ ಧಿರಿಸು ಇವೆಲ್ಲ ನೋಡುತ್ತಿದ್ದರೆ ಸಾಕ್ಷಾತ್ ಮಹಾರಾಜರೆ ಎದುರಿಗೆ ಇದ್ದ ಅನುಭವ. ದೇವರಿಗೆ ಕೈ ಮುಗಿದು ಪೂಜೆ ಮುಗಿಸಿ ದೇವಿಯ ಆಶೀರ್ವಾದ ಪಡೆದು ಆಸೀನರಾದರು ಮಹಾರಾಜರು. ಪಕ್ಕದಲ್ಲೆ ನಿಂತರು ಮಂತ್ರಿಗಳು. [ಮೈಸೂರು ಅರಸರ ಖಾಸಗಿ ದರ್ಬಾರ್]

ಮೈಸೂರು ದಸರ, ಎಷ್ಟೊಂದು ಸುಂದರ ಎಂದು ಹಾಡುತ್ತಾ ಚಿಕ್ಕ ಮಕ್ಕಳು ರೇಷ್ಮೆ ಬಟ್ಟೆಯುಟ್ಟು ಕುಣಿಯುತ್ತ ಬಂದರು. ರಾಜನ ಎದುರಿಗೆ ನೃತ್ಯ ಮಾಡುತ್ತಾ ನೆರೆದಿದ್ದವರಿಗೆಲ್ಲ ಸಂತಸಪಡಿಸಿದರು. ಅವರು ಹೋಗುತ್ತಲೆ ಕೇಳಿಸಿತು ಖಡ್ಗದ ಸಪ್ಪಳ. ಎಲ್ಲಿಂದಲೋ ಹಾರಿ ಬಂದರು ಇಬ್ಬರು ಯೋಧರು. ಒಂದು ಕೈಲಿ ಖಡ್ಗ ಇನ್ನೊಂದು ಕೈಲಿ ಗುರಾಣಿ ಹಿಡಿದು ದೇವಿಗೆ ನಮಸ್ಕರಿಸಿ, ಮಹಾರಾಜರ ಅಪ್ಪಣೆ ಪಡೆದು ತಮ್ಮ ಖಡ್ಗ ವರಸೆಯನ್ನು ತೋರಿಸಿದರು. ನಿಜವಾದ ಖಡ್ಗಗಳೆ ಶಬ್ದ ಮಾಡುವಂತೆ ಶಬ್ದಕ್ಕೆ ಸರಿಯಾಗಿ ಹೊಂದಿದ ಅಭಿನಯ ಎಲ್ಲರಿಂದ ಮೆಚ್ಚುಗೆ ಪಡೆಯಿತು. [ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ಒಡೆಯರ್]

ಅವರು ನಿರ್ಗಮಿಸಿದ ನಂತರ ಬಂದವರು ನಾಲ್ಕು ಮಕ್ಕಳು. ಕೋಲು ತಿರುಗಿಸುವ ಕಲೆ ನೋಡಿ ಎಲ್ಲರ ತಲೆ ತಿರುಗಿದ್ದು ಸುಳ್ಳಲ್ಲ. ಕೋಲನ್ನು ಹೇಗೆಲ್ಲಾ ತಿರುಗಿಸಬಹುದು ಎನ್ನುವುದನ್ನು ಕಣ್ಣಾರೆ ಕಂಡು ದಿಗ್ಬ್ರಾಂತರಾದರು. ಅವರ ಹಿಂದೆ ನಮ್ಮ ಪ್ರಾಚೀನ ಆಟವಾದ ಕುಸ್ತಿ, ಮೈಸೂರು ಕುಸ್ತಿಪಟುಗಳ ತವರೂರು ಎನ್ನುವ ಮಾತಿಗೆ ತಕ್ಕಂತೆ ವಿಧ ವಿಧವಾದ ಪಟ್ಟುಗಳನ್ನು ಹಾಕಿ ನೆರೆದಿದ್ದವರಿಗೆಲ್ಲ ರಂಜಿಸಿದರು, ನಂತರ ಬಂದವರೆ ಹುಲಿ ವೇಷದ ಜನರು, ಎರಡು ದೊಡ್ಡ ಹುಲಿಗಳ ಜೊತೆಗೆ ಒಂದು ಮರಿ ಹುಲಿ ಅವುಗಳನ್ನು ಬೇಟೆಯಾಡಲು ಬರುವ ಬೇಟೆಗಾರ ತಮ್ಮ ನೃತ್ಯದಿಂದ ಹುಲಿಕುಣಿತವನ್ನು ತೋರಿಸಿದರು. ಅವರ ನಂತರ ಮೂರು ಮಕ್ಕಳ ಒಂದು ಸಾಂಸ್ಕೃತಿಕ ನೃತ್ಯ ಮತ್ತು ಹೆಂಗಸರು ನಡೆಸಿಕೊಟ್ಟ ಕೋಲಾಟ ಕರ್ನಾಟಕದ ಕೆಲವು ವಿಶೇಷತೆಯ ಪ್ರತೀಕವಾಗಿತ್ತು.

ಮೈಸೂರಿನಲ್ಲಿ ನಡೆಯುವ ದಸರಾ ಸಮಯದ ಕೆಲವು ತುಣುಕುಗಳನ್ನು ಪ್ರದರ್ಶಿಸಿದ ನಂತರ ಮಹಾರಾಜರು ಬನ್ನಿ ಮಂಟಪಕ್ಕೆ ಬಂದು, ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಬನ್ನಿ ಎಲೆಗಳನ್ನು ಕತ್ತರಿಸಿ ತೆಗೆದುಕೊಂಡು ಹೊರಟರು. ಎಲ್ಲಾ ಪ್ರದರ್ಶನಕಾರರು ಕೊನೆಗೆ ಒಟ್ಟಿಗೆ ನಿಂತು ತಾಯಿ ಚಾಮುಂಡೇಶ್ವರಿಗೆ ಪೂಜಿಸಿ ಮಹಾರಾಜರ ಹಿಂದೆ ಕಾಲು ಹಾಕುತ್ತಾ ವೇದಿಕೆಯಿಂದ ಹೊರನಡೆಯುತ್ತಿದ್ದರೆ ನೋಡುತ್ತಿದ್ದವರಿಗೆ ಮೈಸೂರಿನಲ್ಲಿ ದಸರಾ ಮೆರವಣಿಗೆ ನೋಡಿದ ಅನುಭವ ಆಗಿದ್ದು ಸುಳ್ಳಲ್ಲ. ಕನ್ನಡ ಸಂಘದಿಂದ ಈ ರೀತಿ ಒಂದು ಸುಂದರ ಪ್ರದರ್ಶನ ಬಹಳಷ್ಟು ಜನ ಶ್ರಮಪಟ್ಟಿದ್ದರು ಅವರನ್ನೆಲ್ಲ ಹೊಂದಿಸಿಕೊಂಡು ನಡೆಸಿಕೊಂಡು ಹೋಗಿದ್ದು ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶುಭ ಅರುಣ್.

English summary
Kannadigas in Dar Es Salaam, South Africa enacted Mysore Dasara on the occasion of Republic Day and cultural celebrations. People from other languages displayed cultural richness of their state in India. Whole cultural extravaganza was treat to watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X