ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ನಗೆ ಎಬ್ಬಿಸಿದ ಸಂಸಾರದಲ್ಲಿ ಸನಿದಪ

By Prasad
|
Google Oneindia Kannada News

ನಾಟಕಗಳಲ್ಲಿ ಅನೇಕ ವಿಧಗಳು; ಸಾಮಾಜಿಕ ನಾಟಕ ಎಲ್ಲಾ ದೇಶಗಳಲ್ಲೂ ಮತ್ತು ಭಾಷೆಗಳಲ್ಲೂ ಒಂದು ಜನಪ್ರಿಯ ನಾಟಕ ಪ್ರಕಾರ. ಸಂದಿಗ್ಧ ಪರಿಸ್ಥಿತಿಗಳನ್ನು ಹೆಣೆಯುವುದೇ ಅಲ್ಲದೆ, ಇಂತಹ ಒಂದು ಪರಿಸ್ಥಿತಿಯಿಂದ ಸೂಕ್ಷ್ಮವಾಗಿ ಬಚಾವು ಆಗುವಂತೆ ಮಾಡುವುದು ಚೆನ್ನ; ಒಂದರಿಂದ ಇನ್ನೊಂದು, ಅದರಿಂದ ಮತ್ತೊಂದರಂತೆ ನಿಪುಣತೆಯಿಂದ ಸಂಬಂಧ ಪಡಿಸಿಕೊಂಡು ಸಂದರ್ಭಗಳನ್ನು ಕೊಂಡಿ - ಕೊಂಡಿಯಾಗಿ ಪೋಣಿಸಿ ನಾಟಕದ ಸಂಭಾಷಣೆಯಲ್ಲೂ ಮತ್ತು ಕೊನೆಯಲ್ಲಿಯೂ ಪ್ರಹಸನವೆಂಬ ತಂತ್ರದಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ, ಮುಳುಗಿಸಿ ಅಂತ್ಯದಲ್ಲಿ ಮೊದಲಿಂದ ಹಾಕಿದ ಹತ್ತಾರು ಗಂಟುಗಳನ್ನು ದಿಢೀರ್ ಅಂತ ಬಿಡಿಸುವುದು, ಪ್ರೇಕ್ಷಕರಿಗೆಲ್ಲಾ "ಆ..... " ಎಂದು ಬಿಡಿ ಬೀಸಾದ ಉಸಿರನ್ನು ಬಿಡಿಸಿ ಒಮ್ಮೆಯೇ 'ಶಭಾಷ್' ಎನ್ನಿಸಿಕೊಳ್ಳುವುದು ಚಮತ್ಕಾರ.

ದಾರಿಯೋ ಫ಼ೋ ಅವರು 1958ರಲ್ಲಿ ರಚಿಸಿದ ಇಟಾಲಿಯನ್ ನಾಟಕದ ಹೆಸರು Non tutti i ladri vengono a nuocere. ಇದನ್ನು ವಿವಿಧ ಭಾಷೆಗಳಲ್ಲಿ ತರ್ಜುಮೆ ಮಾಡಿ, ಆಡಿದ್ದಾರೆ. ಕನ್ನಡಕ್ಕೆ ಅಳವಡಿಸಿ, ಕನ್ನಡದ ಮಣ್ಣಿನ ವಾಸನೆ ಕೊಟ್ಟು ನಾಟಕಕಾರ ಮತ್ತು ಸಾಹಿತಿ ಅಕ್ಷರ ಅವರು "ಸಂಸಾರದಲ್ಲಿ ಸನಿದಪ' ಎಂಬ ಹೆಸರನ್ನು ಇಟ್ಟು ನಾಟಕವನ್ನು ರಚಿಸಿದ್ದಾರೆ. ಈ ನಾಟಕವನ್ನು ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ(ಕೆಕೆಎನ್‌ಸಿ)ಯ ಮಾಜಿ ಅಧ್ಯಕ್ಷೆ ಪದ್ಮಾ ರಾವ್ ಅವರ ನಿರ್ದೇಶನದಲ್ಲಿ ಕಳೆದ ತಿಂಗಳು ಆ.24ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದ ಸನ್ನಿವೇಲ್ ನಲ್ಲಿ ಪ್ರದರ್ಶಿಸಲಾಯಿತು.

Humorous drama Samsaradalli Sanidapa played in America

ನಾಟಕದ ಸಾರಾಂಶ : ಕಳ್ಳನೊಬ್ಬನು ಒಂದು ಮನೆಗೆ ಹೊಕ್ಕು ಕಳ್ಳತನ ಮಾಡುತ್ತಿರುವಾಗ ಅವನ ಹೆಂಡತಿಯಿಂದ ಒಂದು ಫೋನು ಬರುತ್ತದೆ. ಅನೇಕ ತಮಾಷೆ ಪೂರ್ವಕವಾಗಿ ಮಾತುಕತೆಗಳು ನಡೆಯುತ್ತವೆ. ಇದ್ದಕ್ಕಿದ್ದಂತೆ, ಒಬ್ಬ ಪೊಲೀಸನು ಸುತ್ತು ಮುತ್ತಲಿನ ನಡೆದಾಟದ ತನ್ನ ಕಾರ್ಯದ ಮೇರೆಗೆ, ಈ ಮನೆಯ ಒಳಗೂ ಬರುತ್ತಾನೆ. ಕಳ್ಳನು ತಾನು ಮನೆಯವನೆಂದು ಅಂದದ್ದನ್ನು ನಂಬಿ ಹೊರಟು ಹೋಗುತ್ತಾನೆ, ಮಧ್ಯೆ - ಮಧ್ಯೆ ಪೊಲೀಸಪ್ಪನ ಹೆಂಡತಿಯು ಅವನನ್ನು ಅರಸಿ ಬಂದವಳು ಕೂಡ ಬಂದು ಹೋಗುತ್ತಾಳೆ.

ನಂತರ, ಮನೆಯ ಒಡೆಯ, ತನ್ನ ಜೊತೆಗೆ ಒಬ್ಬಳು ಲವ್ವರ್ ಹುಡುಗಿಯನ್ನು ಕರೆತರುತ್ತಾನೆ. ಈ ಸಮಯದಲ್ಲಿ, ಮತ್ತು ಇತರ ಸಮಯದಲ್ಲಿ ಕಳ್ಳನು ಮನೆಯಲ್ಲಿರುವ ಒಂದು "ಹಳೆಯ ಕಾಲದ' ದೊಡ್ಡ ಲೋಲಕ ಮಾದರಿಯ ತೂಗು ಗಡಿಯಾರದ ಒಳಗೆ ಬಚ್ಚಿಟ್ಟುಕೊಳ್ಳುತ್ತಾನೆ. ಈ ಗಡಿಯಾರದ ತೂಗು ಲೋಲಾಕು ಗಂಟೆ ಹೊಡೆದಾಗಲೆಲ್ಲಾ ತಲೆಗೆ ಪೆಟ್ಟು ಬಿದ್ದು, ಸಂಯಮವನ್ನು ತಪ್ಪಿ ಕಳ್ಳನು ಆಚೆ ಬಂದಾಗ ಗೊಂದಲ ಪ್ರಾರಂಭವಾಗುತ್ತದೆ. ಕಳ್ಳನು 'ತಾನು ಸಿಕ್ಕಿ ಬಿದ್ದೆ' ಎಂದು ಹೆದರುವುದಕ್ಕಿಂತ ಲವ್ವರ್ ಜೊತೆ ಬಂದಿರುವ ಒಡೆಯನೂ, ಅವನ ಲವ್ವರ್ ಕೂಡ ತಾವೇ ಈ ಗೊಂದಲದಲ್ಲಿ ಸಿಕ್ಕವರ ಹಾಗೆ ಗಾಬರಿ ಪಡುತ್ತಿರುತ್ತಾರೆ. ಇಂತಹ ಸರಪಳಿಯಂತಹ ಗೊಂದಲ ಮತ್ತು ಸಂದಿಗ್ಧ ಪರಿಸ್ಥಿತಿಗಳು ನಾಟಕದ ಪೂರ್ತಿ ಬರುತ್ತಿರುತ್ತದೆ.

ಮನೆಯ ಒಡತಿಯು ಊರಾಚೆ ಹೋದವಳು ಬೇಗ ಹಿಂತಿರುಗಿ ಮನೆಗೆ ಬಂದಾಗ ಸಂದಿಗ್ಧ ಸಮಯಗಳು ಉಲ್ಬಣವಾಗುತ್ತವೆ. ಈ ಪ್ರತಿಯೊಂದು ಗೊಂದಲಗಳೂ ತಮಾಷೆಯಿಂದ ತುಂಬಿ, 'ಮುಂದೇನು ನಡೆಯಬಹುದು' ಎಂಬ ಪ್ರಶ್ನೆಯು ಪ್ರೇಕ್ಷಕರಲ್ಲಿ ಹೆಚ್ಚುತ್ತಾ ಹೋಗುತ್ತದೆ. ಒಂದು ಗಂಟಿನ ಮೇಲೆ ಇನ್ನೊಂದು ಗಂಟು. ಗಂಟುಗಳು ಪೇರಿಸಿದಾಗ ಪ್ರೇಕ್ಷಕರ ಮನದಲ್ಲೂ ಗಂಟು. ಒಡೆಯನು ತಾನು ತನ್ನ ಹೆಂಡತಿಯಿಂದ ಲಾತ ತಪ್ಪಿಸಿಕೊಳ್ಳಲು ಕಳ್ಳನೇ ತನ್ನ ಲವ್ವರ್ ಗಂಡನೆಂದೂ, ಅವರು ಅತಿಥಿಗಳಾಗಿ ಬಂದಿರುವರೆಂದೂ ಬೊಗಳೆ ಬಿಡುತ್ತಾನೆ. ಕೊನೆಯಲ್ಲಿ, ಒಡತಿಯು ಒಬ್ಬಳೇ ರಂಗದಲ್ಲಿ ಇದ್ದಾಗ, ಅಂದರೆ ಇನ್ನಾರೂ ಅಲ್ಲಿ ಇಲ್ಲದಾಗ ಅವಳ ರೋಮಿಯೋ ಬಾಯ್ ಫ್ರೆಂಡ್ ಸೀಟಿ ಹೊಡೆದು ಮಹಡಿಯನ್ನು ಹತ್ತಿ ಒಳಗಡೆ ಬರುತ್ತಾನೆ. ಇಷ್ಟೇ ಅಲ್ಲದೆ, ಕಳ್ಳನ ಹೆಂಡತಿಯು ತನ್ನ ಗಂಡನಿಗೆ ಕಾದೂ, ಕಾದೂ ಸಾಕಾಗಿ ತಾನೇ ಈ ಮನೆಗೆ ಬಂದು ಬಿಡುತ್ತಾಳೆ. ಗೊಂದಲ ಕ್ಲಿಷ್ಟತೆಯ ಪರಮಾವಧಿ ಏರಿದಾಗ ರಂಗದ ಮೇಲೆ ಗೊಂದಲ ಪಾತ್ರಧಾರಿಗಳ ಅವಸ್ಥೆಯಲ್ಲೇ ರಂಗದ ಪರದೆ ಜರುಗುತ್ತದೆ.

'ಕಳ್ಳರು ಯಾರು?' ಎಂದು ಕೇಳಬೇಕೋ? ಯಾರು - ಯಾರು ಎಂದೆನ್ನಬೇಕೋ? ಎಲ್ಲರೂ ಐನಾತಿ ಕಳ್ಳರು ಎನ್ನಲೇ ಬೇಕೊ?

ಅಭಿನಯ : ಕಳ್ಳನ ಪಾತ್ರದಲ್ಲಿ ರಾಘವೇಂದ್ರ ಮುದ್ದಯ್ಯ ಮತ್ತು ಕಳ್ಳನ ಘಟವಾಣಿ ಹೆಂಡತಿಯ ಪಾತ್ರದಲ್ಲಿ ಶ್ವೇತ ನಾರಣಪ್ಪ ನಾಟಕದ ಬೆನ್ನೆಲುಬಾಗಿ ಪ್ರೇಕ್ಷಕರ ಸೆರೆಹಿಡಿದು ಬಿಟ್ಟರು. ರಾಘವೇಂದ್ರ ಒಮ್ಮೆ ಕಳ್ಳನಾಗಿ, ಒಮ್ಮೊಮ್ಮೆ ವೇದಾಂತಿಯಾಗಿ, ಕೆಲವೊಮ್ಮೆ ಗಾಬರಿಯ ಮುಖ ಚಹರೆಯಲ್ಲಿ, 'ಅಸಾಮಾನ್ಯ ಕಳ್ಳ'ನ ಪ್ರಮುಖ ಪಾತ್ರದಲ್ಲಿ, ನಗೆ ಮಾತು ತುಂಬಿದ ಪಾತ್ರ ಪಾಲನೆಯನ್ನು ಉತ್ತಮವಾಗಿ ಅಭಿನಯಿಸಿದರು. ಶ್ವೇತ ಅವರು ಪರಿಣಿತ ನಟನೆಯ ಮಟ್ಟದಲ್ಲಿ ಪ್ರೇಕ್ಷಕ ಜನರನ್ನೆಲ್ಲಾ ನಗೆಯ ಸಾಗರದಲ್ಲಿ ರಭಸ, ಸರಸ, ರಸವತ್ತುಗಳ ಯಾತಾಯಾತಗಳನ್ನೂ ಕೂಡಿಸಿ ಒಮ್ಮೆ ಮುಳುಗಿಸಿ, ಮತ್ತೊಮ್ಮೆ ಅವರನ್ನೆಲ್ಲಾ ಹಿಡಿದೆತ್ತಿ ದಪ್ಪನೆ ಮುಳುಗಿಸಿ, ನಗೆಯಾಟವನ್ನು ಆಡಿಸಿಬಿಟ್ಟರು.

ಒಡೆಯನಾಗಿ ಸುರೇಶ್ ಭಟ್, ಅವರ ಲವ್ವರ್ ಆಗಿ ಪ್ರತಿಭಾ ಶ್ರೀಕಂಠಯ್ಯ ಸಹಜವಾಗಿ ಒಲವು, ಲವ್ವು, ಒಳಗೊಳಗೇ ಡವ - ಡವ, ಗೊಂದಲ ಸಮಯದಲ್ಲಿ ಗಾಬರಿಗಳನ್ನು ಸೂಕ್ತವಾಗಿ ಅಭಿವ್ಯಕ್ತಿಸಿದರು. ಉತ್ತರ ಕರ್ನಾಟಕದಲ್ಲಿ ಹುಟ್ಟಿ, ಪೊಲೀಸು ಕೆಲಸಕ್ಕೆ ಬೆಂಗಳೂರಿಗೆ ಬಂದು ನೆಲೆಸಿ, ರಾತ್ರಿ ಬೀಟ್ ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ಮಾಡುವರ ಹಾಗೆ ವಿಶ್ವಾನಂದ ಪಟ್ಟಣ ಶೆಟ್ಟಿ, ತಮ್ಮ ಭಾಷೆಯಲ್ಲಿ 'ಚಮಕ್' ತುಂಬಿ ಪ್ರೇಕ್ಷಕರನ್ನೆಲ್ಲಾ ನಗಿಸಿ ರಂಜಿಸಿದರು. ಅವರ "ಬಾಸ್' ಹೆಂಡತಿಯಾಗಿ ಶೋಭಲತ ಪಟ್ಟಣ ಶೆಟ್ಟಿಯವರು ರಂಗದ ಮೇಲೆ ಬಂದು ಕೆಲವು ಮಾತಿನಲ್ಲಿ ಘಟವಾಣಿತನ ಅಭಿನಯಿಸಿ ನಿರ್ಗಮಿಸಿದ ಒಡನೆಯೇ ಪ್ರೇಕ್ಷಕರ ಚಪ್ಪಾಳೆ. ಮನೆಯ ಒಡತಿಯಾಗಿ ಅಭಿನಯಿಸಿದ ದೀಪ ಅರುಣ್ ಒಡತಿತನ ಬೇಕಾದ ರೀತಿಯಲ್ಲಿ, ಮತ್ತೊಮ್ಮೆ ಯಾರೂ ಇಲ್ಲದಾಗ ರೋಮಿಯೋ ಲವ್ವರ್ ಪಾತ್ರಧಾರಿ ದೇವದತ್ತ ಸ್ಟೈಲಾಗಿ ಹೀರೋ ರೀತಿಯಲ್ಲಿ ಮಹಡಿ ಕಿಟಿಕಿಯಿಂದ ಒಳಬಂದಾಗ ಜೂಲಿಯೆಟ್ ಆಗಿ ಒಲವಿನ ಜೊತೆಯಾಗಿ ಇಬ್ಬರೂ ಅಭಿನಯಿಸಿದರು.

ರುದ್ರ ಪ್ರಸಾದ್ ಅವರು ನಾಟಕದ ಪ್ರಾರಂಭದಲ್ಲಿ ದಿಗ್ದರ್ಶಕಿ ಪದ್ಮಾ ರಾವ್ ಜೊತೆ ಪೀಠಿಕೆ ಮತ್ತು ಪ್ರೇಕ್ಷಕರಿಗೆ ಸೂಚನೆ ಕೊಡುವುದೇ ಅಲ್ಲದೆ, ಅನೇಕ ರೀತಿಯಲ್ಲಿ ಸದಾ ನಗು ಮುಖದಲ್ಲಿ ಸಹಾಯ ಮಾಡಿದರು. ರಂಗ ಸಜ್ಜಿಕೆಗೆ ಅನೇಕರು ಸಹಾಯ ಮಾಡಿದ್ದರೂ, ದಕ್ಷವಾಗಿ, ನಿಷ್ಠೆಪೂರ್ವಕವಾಗಿ, ಕಲಾತ್ಮಕವಾಗಿ, ಸದಾ ಸಾವಧಾನಿಯಾಗಿ ಕುಸುಮ ಅರಕಲಗೂಡು ತಯಾರಿಸಿದ ಗಡಿಯಾರವು ಮಾತ್ರ ಜರ್ಮನಿಯ ಬ್ಲ್ಯಾಕ್ ಫಾರೆಸ್ಟ್ ನಿಂದಲೇ ಮಾಡಿಸಿ ತಂದಂತೆ ಇತ್ತು. ಲೋಲಕ, ವಿವಿಧ ಚಿನ್ನದ ಕಸೂರಿ ಕೆಲಸ ತುಂಬಿದ ಗಡಿಯಾರವು ನಾಟಕಕ್ಕೆ ಕೇಂದ್ರ ವಸ್ತುವಾಗಿದ್ದರಿಂದ ನಾಟಕದ ಎಲ್ಲಾ ಸಮಯದಲ್ಲೂ ಪ್ರೇಕ್ಷಕರ ಗಮನವನ್ನು ಸೆಳೆದಿತ್ತು.

ಮೂಲ ನಾಟಕ ಭಾಷೆ : ಇಟಾಲಿಯನ್
ಮೂಲ ನಾಟಕಕಾರ : ನೊಬೆಲ್ಲು ವಿಜೇತ ದಾರಿಯೋ ಫ಼ೋ
ಕನ್ನಡದಲ್ಲಿ : ಕೆ.ವಿ. ಅಕ್ಷರ
ದಿಗ್ದರ್ಶನ : ಪದ್ಮ ರಾವ್

English summary
Humorous Kannada drama Samsaradalli Sanidapa was successfully played in America on August 24, 2013. Italian play written by Nobel laureate Dario Fo is translated to Kananda by KV Akshara. KKNC former president Padma Rao has directed the play.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X