ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಇಂದಿನ ಅಧೋಗತಿಗೆ ಕಾರಣವಾದರೂ ಏನು?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

Who is responsible for India's present situation
ಇದೇ ತಾನೇ ನಾವು ನಮ್ಮ ದೇಶದ 67ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಕೇವಲ ಧ್ವಜವಂದನೆ ಮಾಡಿ, ಕೆಲವು ದೇಶ ಭಕ್ತಿಗೀತೆಗಳನ್ನು ಕೇಳಿ, ಬಾಕಿ ಸಮಯವನ್ನು ರಜೆಯ ಆನಂದ ಪಡೆಯುತ್ತ ಕಳೆಯುವದು ಸರ್ವೇ ಸಾಮಾನ್ಯವಾಗಿದೆ. ಆದರೆ ಸದ್ಯದ ನಮ್ಮ ದೇಶದ ಪರಿಸ್ಥಿತಿಯನ್ನು ಗಮನಿಸಿದರೆ, ಈ ಸ್ವಾತಂತ್ರ್ಯ ದಿನಾಚರಣೆಯ ನಂತರ ನಾವು ನಮ್ಮ ದೇಶದ ಕರಾಳ ಸಮಯದ ಬಗ್ಗೆ ಸ್ವಲ್ಪ ಚಿಂತನೆ ಮಾಡುವ ಸಮಯ ಪರಿಪಕ್ವವಾಗಿದೆ ಎಂದೆನಿಸುವಲ್ಲವೇ?

ನಮ್ಮ ಅವಳಿ ಸಹೋದರ ದೇಶವಾದ ಪಾಕಿಸ್ತಾನದ ಸೈನಿಕರು ಯಾವಾಗ ಬೇಕೆಂದಾಗ ನಮ್ಮ ದೇಶದ ಸೀಮೆಯೊಳಗೆ ಕಳ್ಳತನದಿಂದ ನುಗ್ಗಿ ನಮ್ಮ ದೇಶದ ಸೈನಿಕರ ಮೇಲೆ ಹಲ್ಲೆ ನಡಿಸಿ, ಕೊಂದು ತಿರುಗಿ ಹೋಗುತ್ತಾರೆ! ಒಂದೊಮ್ಮೆ ನಮ್ಮ ದೇಶದ "ಭಾಯಿ, ಭಾಯಿ" ಎಂದು ವರ್ಣಿಸಲ್ಪಟ್ಟಿದ್ದ ಚೀನ ದೇಶದ ಸೈನಿಕರು ನಮ್ಮ ದೇಶದ ಸೀಮೆಯೊಳಗೆ ನುಗ್ಗಿ "ಇದು ನಮ್ಮ ದೇಶದ ಭಾಗ, ಭಾರತೀಯರೇ, ನೀವು ಇಲ್ಲಿಂದ ಹೊರಟು ಹೋಗಿ" ಎಂದು ಅರ್ಥ ಬರುವ ಬೋರ್ಡುಗಳನ್ನು ನಮ್ಮ ಸೈನಿಕರಿಗೇ ತೋರಿಸುವ ಧಾರ್ಷ್ಟ್ಯ ತೋರಿಸುತ್ತಾರೆ!

ನಮ್ಮ ಶಾಂತಿಪ್ರಿಯ ದೇಶದ ಪರಮ ಶಾಂತ ನಾಯಕರು, ಈ ತರಹದ ಕುಚೇಷ್ಟೆಗಳನ್ನು ಶಾಂತವಾಗಿ ಸಹಿಸಿ, ಜನರೆಲ್ಲರಿಗೂ ಶಾಂತಿಯುತರಾಗಿರಲು ಮನವಿ ಮಾಡುತ್ತಾರೆ. ಇದು ನಮ್ಮ ಹೊರಗಿನವರ ಪರಾಕ್ರಮವಾದರೆ, ನಮ್ಮ ಒಳಗಿನವರ ಪರಾಕ್ರಮವಂತೂ ಇನ್ನೂ ಮುಂದೆ! ಇತ್ತೀಚೆಗೆ ಪೋಲೀಸರ ಬಲೆಗೆ ಸಿಕ್ಕಿ ಬಿದ್ದ ಯಾಸಿನ್ ಭಟ್ಕಳನಂತಹ ದೇಶದ್ರೋಹಿಗಳು ತನ್ನ ದೇಶದ ಅಮಾಯಕ ಜನರನ್ನು ಬಾಂಬು ಇಟ್ಟು ಕೊಲ್ಲಲು ಹಿಂಜರಿಯುವದಿಲ್ಲ. ದೇಶದ ಸಂಪತ್ತುಗಳ ಕಳ್ಳರನ್ನು ಬಯಲಿಗೆಳೆಯಲು ತಮ್ಮ ಜೀವವನ್ನೇ ಒತ್ತೆ ಹಾಕಿ, ಅವರ ಮೇಲೆ ಕ್ರಮ ಕೈಗೊಳ್ಳುವ ಎಲ್ಲೋ ಒಬ್ಬಿಬ್ಬ ಅಧಿಕಾರಿಗಳನ್ನು ನಮ್ಮ ಧೀಮಂತ ನಾಯಕರು, ಕ್ಷಣ ಮಾತ್ರದಲ್ಲಿ ಎತ್ತಂಗಡಿಯೋ ಅಥವಾ ಅಮಾನತ್ತೋ ಮಾಡಿಬಿಡುತ್ತಾರೆ.

ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿ ನಮಗಿಂದು ಎದುರಾಗಿದೆ. ಇದಕ್ಕೆ ಏನು ಕಾರಣ? ಈ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಮ್ಮ ದೇಶದ ಗತಿ ಏನು? ಇದಕ್ಕೆ ಸಾಮಾನ್ಯರಾದ ನಾವು ನೀವು ಏನು ಮಾಡಲು ಸಾಧ್ಯ? ಎಂಬೆಲ್ಲಾ ಪಶ್ನೆಗಳ ಕುರಿತಾಗಿ ಚಿಂತನೆ ಮಾಡಬೇಕಾದ ಸಮಯ ಇದು. ಕೇವಲ ಕ್ರಿಕೆಟ್ ಆಟವನ್ನೋ, ಯಾವುದೋ ಸಿನೆಮಾವನ್ನೋ ಅಥವಾ ಟಿವಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಆರಾಮಕುರ್ಚಿ ಬುದ್ಧಿಜೀವಿಗಳ ಅರ್ಥವಿಲ್ಲದ ಚರ್ಚೆಯನ್ನು ನೋಡಿ ಕಾಲ ಹರಣ ಮಾಡುವ ಸಮಯವಲ್ಲ. ನಮಗಿಂದು ಒಬ್ಬ ಕ್ರಿಕೆಟ್ ಆಟಗಾರನ ಸಾಧನೆಗಳು, ಸಿನೆಮಾ ನಟನ ಹೆಗ್ಗಳಿಕೆಗಳು ಅಥವಾ ರಾಜಕೀಯ ನಾಯಕನೊಬ್ಬನ ಚದುರಂಗದಾಟಗಳು ದೇಶದ ಸಾಮಾನ್ಯ ಜನರ ಒಟ್ಟಾರೆ ಬೆಳವಣಿಗೆಗಿಂತ ಹೆಚ್ಚು ಮಹತ್ವದ್ದೇ? ನಮ್ಮ ಸಮಯವನ್ನು ಈ ಜನರ ಆಟ, ಕೂಟಗಳನ್ನು ಕುರಿತು ಚರ್ಚಿಸಲು ಉಪಯೋಗಿಸುವುದಕ್ಕಿಂತ, ದೇಶದ ಒಟ್ಟಾರೆ ಹಿತಾಸಕ್ತಿಗೆ ನಾವು ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸುವುದು ಮುಖ್ಯ ಅಲ್ಲವೇ?

ಮುಖ್ಯವಾಗಿ ಅದು ಹೇಗೆ ಇಂತಹ ಅಧೋಗತಿಯನ್ನು ನಾವು ತಲುಪಿದೆವು? ಹೆಚ್ಚು ಕಡಿಮೆ ನಮ್ಮ ಜೊತೆಯೇ ಸ್ವಾತಂತ್ರ್ಯ ಪಡೆದ ದೇಶಗಳಾದ ದಕ್ಷಿಣ ಕೊರಿಯ, ಮಲೇಶಿಯ, ಸಿಂಗಪುರ ಮತ್ತು ಥೈಲ್ಯಾಂಡ್ ನಮಗಿಂತ ಚಿಕ್ಕವಾಗಿದ್ದರೂ, ನಮಗಿಂತ ಸಂಪನ್ಮೂಲಗಳು ಕಡಿಮೆಯಿದ್ದರೂ, ನಮಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಿವೆ. ನಮ್ಮ ದೇಶದ ಪರಿಸ್ಥಿತಿ ಏಕೆ ಹೀಗೆ? ನಮ್ಮ ಅವನತಿಗೆ ಮುಖ್ಯ ಕಾರಣ ಎಂದು ನಮ್ಮ ಜನಸಂಖ್ಯೆಯ ಮೇಲೆ ಗೂಬೆ ಕೂರಿಸಲಾಗುತ್ತದೆ. ನಮ್ಮ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಕೇವಲ ಜನಸಂಖ್ಯೆ ಮಾತ್ರವೆ? ಅಥವಾ ಜನಸಂಖ್ಯೆ ಕೂಡ ರೋಗ ಲಕ್ಷಣ ಮಾತ್ರವಾಗಿದ್ದು, ನಮ್ಮ ನಿಜವಾದ ರೋಗವನ್ನು ನಮ್ಮಿಂದ ಇನ್ನೂ ಕಂಡು ಹಿಡಿಯಲಾಗಿಲ್ಲವೇ? ನಮ್ಮ ಸಮಸ್ಯೆಗಳ ಮೂಲ ಜನಸಂಖ್ಯೆಯಂತಹ ಭೌತಿಕ ಕಾರಣಗಳಲ್ಲದೇ ನಮ್ಮ ಮನೋವೃತ್ತಿಯಲ್ಲಿ ಅಡಗಿದೆ ಎಂಬುದು ನನ್ನ ಅಭಿಪ್ರಾಯ. ನನಗೆ ತಿಳಿದ ಕೆಲವು ಮುಖ್ಯ ಅಂಶಗಳನ್ನು ನಾನು ಇಲ್ಲಿ ಮಂಡಿಸಿದ್ದೇನೆ.

ಭಾರತೀಯತೆ : ಮುಖ್ಯವಾಗಿ ನಮ್ಮ ಅಸ್ತಿತ್ವದ ಪ್ರಮುಖ ಕುರುಹಾದ "ಭಾರತೀಯತೆ", ನಮ್ಮ ಇತರ ಉಪ ಕುರುಹುಗಳಾದ ನಮ್ಮ ಭಾಷೆ (ಕನ್ನಡಿಗ, ಮರಾಠಿಗ, ಬೆಂಗಾಲಿ ಇತ್ಯಾದಿ), ಧರ್ಮ (ಹಿಂದು, ಮುಸ್ಲಿಂ ಇತ್ಯಾದಿ) ಮತ್ತು ಜಾತಿ(ಬ್ರಾಹ್ಮಣ, ಲಿಂಗಾಯತ, ಕುರುಬ ಇತ್ಯಾದಿ)ಗಳ ಪ್ರಭಾವವನ್ನು ಹತ್ತಿಕ್ಕುವಲ್ಲಿ ವಿಫಲವಾಗಿದೆ ಎಂದೆನಿಸುತ್ತದೆ. ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ನಾವು ನಮ್ಮ ಭಾಷೆ, ಧರ್ಮ, ಜಾತಿ ಮುಂತಾದವುಗಳ ಹಿಡಿತದಿಂದ ಹೊರಬಂದಿಲ್ಲ. ನಮ್ಮ ವೋಟನ್ನು ನಾವು ಈಗಲೂ ಕೂಡಾ ಈ ಭಾಷೆ, ಧರ್ಮ ಮತ್ತು ಜಾತಿಗಳ ಅಧಾರದ ಮೇಲೆಯೇ ಹಾಕುವುದು. ನಮ್ಮ ಭಾರತೀಯತೆ, ನಮ್ಮ ಧರ್ಮ, ಜಾತಿ ಮತ್ತು ಭಾಷೆಗಳ ಭರಾಟೆಯಲ್ಲಿ ನೇಪಥ್ಯಕ್ಕೆ ಸರಿಯುತ್ತದೆ.

ನಮ್ಮ ಈ ಗುಂಪುಗಾರಿಕೆಯ ಗುಣ ನಮ್ಮ ಅನೇಕ ದೂರದೃಷ್ಟಿಯಿಲ್ಲದ, ಸ್ವಾರ್ಥಿ ರಾಜಕಾರಣಿಗಳಿಗೆ, ಅಧುನಿಕತೆಯ ಸೋಗು ಹಾಕಿ ತಮ್ಮ ಬೇಳೆ ಬೇಯಿಸುವ ಇತರ ಹಿತಾಸಕ್ತಿಗಳಿಗೆ ವರದಾನವಾಗಿದೆ. ನಾವು ನಮ್ಮ ದೌರ್ಬಲ್ಯಗಳಿಗೆ ನಮ್ಮವರೇ ಆದ ಮತ್ತೊಂದು ಗುಂಪನ್ನು ದೂಷಿಸುತ್ತೇವೆ. ನಮ್ಮ ದೌರ್ಬಲ್ಯಗಳಿಗೆ ನಾವೇ ಕಾರಣ ಎಂಬ ಹೊಣೆಗಾರಿಕೆಯನ್ನು ಹೊರದೇ ಮತ್ತೊಬ್ಬರ ಮೇಲೆ ಹಾಕುವುದರಿಂದ ನಮಗೆ ಅಲ್ಪಾವಧಿ ಸಮಾಧಾನ ಸಿಗುತ್ತದೆಯೇ ಹೊರತು ನಮ್ಮ ದೌರ್ಬಲ್ಯ ಮಾಯವಾಗುವುದಿಲ್ಲ. ನಮ್ಮ ದೂಷಣೆ ನಮ್ಮಲ್ಲಿಯೇ ಒಡಕನ್ನು ಸೃಷ್ಟಿಸುತ್ತದೆ. ದೇಶದ್ರೋಹಿಗಳಿಗೆ ನಮ್ಮ ಈ ಒಡಕು ಒಂದು ಸುಭದ್ರ ಶ್ರೀರಕ್ಷೆಯಾಗಿದೆ. ದುರ್ದೈವವಶಾತ್ ನಮ್ಮ ರಾಜಕೀಯ ನಾಯಕರು, ಸ್ವಘೋಷಿತ ಬುದ್ಧಿಜೀವಿಗಳು ಕೂಡ ತಮ್ಮ ಸ್ವಲಾಭಕ್ಕಾಗಿ ನಮ್ಮ ಈ ಒಡಕನ್ನು ಪೋಷಿಸುತ್ತ ನೀರೆರೆಯುತ್ತಿದ್ದಾರೆ.

ದೂರದೃಷ್ಟಿ : ಇನ್ನೊಂದು ಮುಖ್ಯ ದೌರ್ಬಲ್ಯವೆಂದರೆ "ದೂರದೃಷ್ಟಿಯಿಲ್ಲದಿರುವದು". ನಮಗೆ ನಮ್ಮ ತತ್ ಕ್ಷಣದ ಲಾಭ ಹೆಚ್ಚು ಮುಖ್ಯ. ಕೆಲವು ವರ್ಷಗಳ ನಂತರದ ಪರಿಣಾಮದ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ. ನಮ್ಮ ದೇಶದ ಯಾವುದೇ ಸಾರ್ವಜನಿಕ (ಸರಕಾರಿ ನಿಯಂತ್ರಣದ) ಯೋಜನೆಗಳನ್ನೇ ತೆಗೆದುಕೊಳ್ಳಿ. ಯಾವ ಯೋಜನೆಯೂ ಮೂಲ ವೆಚ್ಚ ಮತ್ತು ಸಮಯಾವಧಿಯಲ್ಲಿ ಪೂರ್ಣಗೊಳ್ಳುವುದಿಲ್ಲ. ಉದಾಹರಣೆಗೆ, ನಮ್ಮಲ್ಲಿ ಮಧ್ಯಮ ಮಟ್ಟದ ಆಣೆಕಟ್ಟಿನ ಯೋಜನೆಯೊಂದಕ್ಕೆ ನಲವತ್ತು ವರ್ಷಕ್ಕೂ ಹೆಚ್ಚಿನ ಸಮಯ ಮತ್ತು ಮೂಲ ಯೋಜನಾವೆಚ್ಚದ ಎಂಬತ್ತು ಪಟ್ಟು ಹೆಚ್ಚು ವೆಚ್ಚ ಬೇಕಾಗುತ್ತದೆ. ಇದಕ್ಕಿಂತ ಸುಮಾರು ಎಪ್ಪತ್ತು ಪಟ್ಟು ದೊಡ್ಡದಾದ ಚೀನದ ಬೃಹತ್ Three Gorges Dam ಕೇವಲ ಹದಿನಾಲ್ಕು ವರ್ಷಗಳಲ್ಲಿ ಮುಗಿಯಿತು. ಅದರ ಅಂತಿಮ ಯೋಜನಾವೆಚ್ಚ, ಮೂಲ ವೆಚ್ಚದ ಅಂದಾಜಿಗಿಂತ ಕೇವಲ ಹದಿನೈದು ಶೇಕಡಾ ಹೆಚ್ಚು ಅಷ್ಟೇ. ನಮ್ಮ ದೇಶದಲ್ಲಿ ಇಂತಹ ಯೋಜನೆಗಳಿಂದ ಅನೇಕ ಪ್ರಬಲ ಜನ ತಮ್ಮ ತಮ್ಮ ಮನೆ ಮಠಗಳನ್ನು ಕಟ್ಟಿಕೊಂಡು ತಮ್ಮ ಬ್ಯಾಂಕ್ ಬ್ಯಾಲನ್ಸ್ ಮತ್ತು ಕಪ್ಪು ಹಣ ಹೆಚ್ಚಿಸಿಕೊಂಡರೆ, ಅನೇಕ ದುರ್ಬಲ ಜನ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ರಾಷ್ಟ್ರದ ಬೆಳವಣಿಗೆಗೆಂದು ಆರಂಭಿಸಿದ ಇಂತಹ ಯೋಜನೆಗಳಿಂದ ಅನೇಕ ರಾಷ್ಟ್ರದ್ರೋಹಿಗಳ ಬೆಳವಣಿಗೆ ಮಾತ್ರ ಸಾಧ್ಯವಾಗುತ್ತದೆ.

ಸಾಮಾಜಿಕ ಪ್ರಜ್ಞೆ : ಮತ್ತೊಂದು ದೌರ್ಬಲ್ಯ ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಇಲ್ಲದಿರುವದು. ಸಾಮಾಜಿಕ ಪ್ರಜ್ಞೆ ಕೇವಲ ಸಾಮಾಜಿಕ ಸ್ವಚ್ಛತೆಯನ್ನಷ್ಟೇ ಕುರಿತಾದುದಲ್ಲ. ಅದು ಒಟ್ಟಾರೆ ಸಮಾಜದಲ್ಲಿ ಕಾನೂನು ಪಾಲನೆ, ಇತರರಿಗೆ ಗೌರವ ತೋರಿಸುವುದು ಮತ್ತು ಸಾಮಾಜಿಕ ಸಭ್ಯತೆಯನ್ನು ಯಾವಾಗಲೂ ಎತ್ತ್ತಿ ಹಿಡಿಯುವುದು. ಜಪಾನ್, ಸಿಂಗಪುರದಂತಹ ದೇಶಗಳ ನಾಗರಿಕರಲ್ಲಿ ಈ ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ಎಂತಹ ಕಷ್ಟಗಳೇ ಬರಲಿ, ಅಲ್ಲಿಯ ಜನ ರಾಷ್ಟ್ರದ ಸಂಪತ್ತಿಗೆ ಹಾನಿ ಮಾಡುವುದಿಲ್ಲ. ಈ ದೇಶಗಳಲ್ಲಿ ಯಾವುದೋ ವಿಷಯಕ್ಕೆ ದಂಗೆ ಮಾಡಿ ಬಸ್ಸು, ಟ್ರೇನು, ಕಟ್ಟಡಗಳು ಇತ್ಯಾದಿಗಳಿಗೆ ಬೆಂಕಿ ಹಚ್ಚಿದ್ದನ್ನು ಕೇಳಿದ್ದೇವೆಯೆ? ಅಲ್ಲಿ ವಿರೋಧವನ್ನು ಕೂಡ ಸಭ್ಯತೆಯಿಂದ ಮಾಡುವುದನ್ನು ನೋಡುತ್ತೇವೆ. ಅಲ್ಲದೇ ಮತ್ತೊಬ್ಬ ನಾಗರಿಕನಿಗೆ ಯಾವುದೇ ಅವಮರ್ಯಾದೆ ಮಾಡುವುದನ್ನು ಕಾಣುವುದು ವಿರಳ. ನಮ್ಮ ದೇಶದಲ್ಲಿ ನಾವು ಟಿವಿಯಲ್ಲಿ ಕಾಣುವುದು, ಪತ್ರಿಕೆಯಲ್ಲಿ ಓದುವುದು ಎಲ್ಲಾ ಅಸಭ್ಯ ವರ್ತನೆಯೇ. ಒಬ್ಬರು ಮತ್ತೊಬ್ಬರ ಮೇಲೆ ಅಸಭ್ಯ ಟೀಕೆಯನ್ನು ಸಲೀಸಾಗಿ ಮಾಡುವುದನ್ನು ದಿನ ನಿತ್ಯ ಕಾಣುತ್ತೇವೆ.

ದುರ್ದೈವವಶಾತ್ ನಮ್ಮ ಯುವ ಜನಾಂಗಕ್ಕೆ ಮಾದರಿಯಾಗಿ ನಿಲ್ಲಬಲ್ಲ ಜನರೇ ಕಾಣುತ್ತಿಲ್ಲ. ಎಲ್ಲೋ ಒಬ್ಬಿಬ್ಬರು ಅಣ್ಣಾ ಹಜಾರೆಯಂತಹ ಗಾಂಧೀವಾದಿಗಳನ್ನು ಬಿಟ್ಟರೆ, ರಾಜಕೀಯ ಮತ್ತು ಸಾಮಾಜಿಕ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಆದುದರಿಂದ ಈಗ ದೇಶದ ಮಹಾಜನತೆಯೇ ಈ ದಿಶೆಯಲ್ಲಿ ಸಾಮೂಹಿಕ ನಾಯಕತ್ವವನ್ನು ವಹಿಸಬೇಕಾಗಿದೆ. ಮನೆಮನೆಗಳಿಂದ ಭ್ರಷ್ಟಾಚಾರ ವಿರೋಧಿ ಭಾವನೆ ಮತ್ತು ದೇಶ ಮತ್ತು ಸಮಾಜ ಸುಧಾರಣೆಯ ಕಹಳೆ ಮೊಳಗಬೇಕಾಗಿದೆ.

ಅತೀ ಮುಖ್ಯವಾಗಿ ನಮ್ಮ ನಾಗರಿಕರಿಗೆ ನಮ್ಮ ದೇಶದ ಪುರಾತನ ನಾಗರಿಕತೆ, ಸಂಸ್ಕೃತಿ ಮತ್ತು ಕೊಡುಗೆಗಳ ಬಗ್ಗೆ ಗೌರವವಿರಬೇಕು. ಈ ಭಾವಗಳು ನಮ್ಮಲ್ಲಿ ರಾಷ್ಟ್ರೀಯ ಭಾವನೆಯನ್ನು ಸ್ಫುರಿಸುತ್ತವೆ. ನಮ್ಮ ವಿದ್ಯಾಭ್ಯಾಸ ನಮ್ಮ ರಾಷ್ಟ್ರೀಯ ಭಾವನೆಯನ್ನು ವಿಸ್ತರಿಸಿ, ನಮ್ಮ ಯುವಜನರಲ್ಲಿ ನಮ್ಮ ದೇಶದ ಭವ್ಯ ಭವಿಷ್ಯದ ದಾಯಿತ್ವವನ್ನು ಹೊರಲು ಅಣಿ ಮಾಡಬೇಕು. ತಮ್ಮ ಅಲ್ಪ ಮತ್ತು ತತ್ ಕ್ಷಣದ ಲಾಭ ಹಾಗೂ ಸುಖಗಳನ್ನು ಬದಿಗೊತ್ತಿ, ದೂರದರ್ಶಿತ್ವವನ್ನು ಬೆಳೆಸಿಕೊಳ್ಳಲು ಪ್ರಶಿಕ್ಷಣ ನೀಡಬೇಕು. ಚಿಕ್ಕಂದಿನಿಂದಲೇ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲು ಸಹಾಯ ಮಾಡಬೇಕು.

ನಮ್ಮ ಈಗಿನ ಯಾವುದೇ ರಾಜಕೀಯ ನಾಯಕರಿಂದ ಈ ಬಗೆಯ ದೂರದರ್ಶಿತ್ವದ ನಾಯಕತ್ವವನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಆದುದರಿಂದ ಸಮಾಜದ ಮೂಲಭೂತ ಅಂಗವಾದ ಜನತೆಯೇ ಈ ದಿಶೆಯಲ್ಲಿ ಮುಂದಾಗಿ, ನಮ್ಮ ನಮ್ಮಲ್ಲಿಯ ಭಾಷೆ, ಜಾತಿ, ಧರ್ಮಗಳ ಒಡಕನ್ನು ಬದಿಗೊತ್ತಿ, ನಮ್ಮ ಮುಂದಿನ ಪೀಳಿಗೆಗೆ ಸಾಮಾಜಿಕ ಪ್ರಜ್ಞೆಯನ್ನು, ಒಗ್ಗಟ್ಟನ್ನು, ದೂರದರ್ಶಿತ್ವವನ್ನು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ದೇಶಪ್ರೇಮವನ್ನು ಬೆಳೆಸಿಕೊಳ್ಳಲು ಸಹಾಯಮಾಡಬೇಕು. ಇಲ್ಲದಿದ್ದರೆ ನಮ್ಮ ದೇಶ ಅಂಧಕಾರದ ಅವನತಿಯತ್ತ ಸರಿದು ಮತ್ತೆ ವಿದೇಶೀಯರ ದುರಾಕ್ರಮಣಕ್ಕೋ, ವಿಭಜನೆಗೋ ತುತ್ತಾಗಬಹುದು.

English summary
Who is responsible for India's present pathetic situation? Should we blame ourselves or the politicians who are ruling our country? Or repeated attacks from terrorists? At this juncture, we need to sit and find out the parmanent solution. Writes Vasant Kulkarni from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X