ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೃಂದಾವನ ಕನ್ನಡ ಕೂಟದ ಅದ್ದೂರಿ ವಾರ್ಷಿಕೋತ್ಸವ

By Prasad
|
Google Oneindia Kannada News

Brindavana annual day and kids festival
ಡಿಸೆಂಬರ್ 16ರ ಭಾನುವಾರ ನಾರ್ತ್ ಬ್ರನ್ಸ್‌ವಿಕ್ ಹೈ ಸ್ಕೂಲ್ ಸಭಾಭವನದಲ್ಲಿ ನ್ಯೂ ಜೆರ್ಸಿ ಬೃಂದಾವನ ಕನ್ನಡ ಕೂಟದ ವಾರ್ಷಿಕೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗಣೇಶ ಪೂಜೆ, ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ ಕಾರ್ಯಕ್ರಮಗಳ ಜೊತೆಗೆ ಅತಿಥಿ ಕಲಾವಿದರ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಸುಮಾರು ಇನ್ನೂರೈವತ್ತು ಜನ ಸೇರಿದ್ದ ಈ ಕಾರ್ಯಕ್ರಮ ಸ್ಥಳೀಯ ಕನ್ನಡ ಸಂಘದ ಅತಿ ಮುಖ್ಯವಾದ ಕಾರ್ಯಕ್ರಮಗಳಲ್ಲೊಂದು.

ಈ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11 ಗಂಟೆಯಿಂದಲೇ ನಾರ್ತ್ ಬ್ರನ್ಸ್‌ವಿಕ್ ಹೈ ಸ್ಕೂಲು ಆವರಣ ಕಳೆಕಟ್ಟತೊಡಗಿತ್ತು. 12 ಗಂಟೆಗೆ ವಾರ್ಷಿಕ ಜೆನರಲ್ ಬಾಡಿ ಮೀಟಿಂಗ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಎಮ್.ಜಿ. ಪ್ರಸಾದ್ ಅವರ ಮಾಡರೇಷನ್‌ನಲ್ಲಿ ನಡೆದ ಈ ಸಭೆಯಲ್ಲಿ ಎಲ್ಲ ಬೋರ್ಡ್ ಆಫ್ ಡೈರೆಕ್ಟರ್ಸ್, ಟ್ರಸ್ಟಿಗಳು ಹಾಗೂ ಕೆಲವು ಮೆಂಬರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಪದ್ಮಿನಿಯವರು ತಮ್ಮ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸುತ್ತಾ ಮೈತ್ರಿ ತಂಡದ ಕಳೆದ ಎರಡು ವರ್ಷದ ಸಾಧನೆಯನ್ನು ಶ್ಲಾಘಿಸಿದರು.

ಖಜಾಂಚಿ ರವೀಂದ್ರ ಲಂಬಿಯವರು ತಮ್ಮ ವಾರ್ಷಿಕ ವರದಿಯ ವಿವರವನ್ನು ನೀಡಿದರು. ಹಣಕಾಸಿನ ವಿಚಾರದಲ್ಲಿ ಅನೇಕ ಅಡೆತಡೆಗಳ ನಡುವೆಯೂ ತಮ್ಮ ಎರಡು ವರ್ಷಗಳ ಕಾರ್ಯಾವಧಿಯ ಕೊನೆಗೆ ಪಾಸಿಟಿವ್ ಬ್ಯಾಲೆನ್ಸ್ ತೋರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಕಾರ್ಯದರ್ಶಿ ಹಾಗೂ ಖಜಾಂಚಿ ಇವರಿಬ್ಬರ ವರದಿಗಳನ್ನು ಬರೀ ತಮ್ಮ ಸಾಧನೆಯ ವಿವರಗಳಿಗಷ್ಟೇ ಸೀಮಿತವಾಗಿರಿಸದೇ, ಸ್ಥಳೀಯ ಕನ್ನಡ ಸಮುದಾಯದ ದೃಷ್ಟಿಯಿಂದ ಮುಂದೆ ಹೇಗಿರಬೇಕು ಎಂಬ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದು ವಿಶೇಷ.

ಮಕ್ಕಳಿಗೆ ವಿವಿಧ ಸ್ಪರ್ಧೆ : ನಂತರ ಸರಿಯಾಗಿ ಮಧ್ಯಾಹ್ನ 2 ಗಂಟೆಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೆಫೆಟೇರಿಯಾದಲ್ಲಿ ಮಕ್ಕಳ ವಯೋಮಾನಕ್ಕನುಗುಣವಾಗಿ ಮೂರು ಗುಂಪುಗಳಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಯೂತ್ ಕಮಿಟಿಯ ಸದಸ್ಯರು ನೆರವೇರಿಸಿಕೊಟ್ಟ ಈ ಸ್ಪರ್ಧೆಯಲ್ಲಿ ಸುಮಾರು 30 ಮಕ್ಕಳು ಭಾಗವಹಿಸಿದ್ದರು. 4ರಿಂದ 6 ವರ್ಷದ ಮಕ್ಕಳು ಕರ್ನಾಟಕ ಹಾಗೂ ಭಾರತ ಧ್ವಜದ ಚಿತ್ರ ಬರೆದರೆ, 7ರಿಂದ 10 ವರ್ಷದವರು ದೀಪಾವಳಿ ಆಚರಣೆಯ ಬಗ್ಗೆ ಹಾಗೂ 11ರಿಂದ 16 ವರ್ಷದ ಮಕ್ಕಳು ಕರ್ನಾಟಕದ ಮಾನ್ಯುಮೆಂಟ್ಸ್ ಚಿತ್ರಗಳನ್ನು ಬರೆದರು. ಈ ಸ್ಪರ್ಧೆಗೆ ಗಾಯತ್ರಿ ಕೃಷ್ಣನ್ ಮತ್ತು ಉದಯ ತೀಗವರಪು ಜಡ್ಜ್ ಆಗಿದ್ದರು.

3 ಗಂಟೆಗೆಲ್ಲಾ ಮುಖ್ಯ ವೇದಿಕೆಯಲ್ಲಿ ಜನರು ಸೇರುತ್ತಿದ್ದಂತೆ, ಗಣೇಶ ಸ್ತುತಿ, ಬೃಂದಾವನ ಸಂಕೇತ ಗೀತೆ ಹಾಗೂ ರಾಷ್ಟ್ರಗೀತೆಗಳಿಂದ ಕಾರ್ಯಕ್ರಮಗಳು ಆರಂಭಗೊಂಡವು. ಎಮ್.ಜಿ. ಪ್ರಸಾದ್ ಅವರು ಮಕ್ಕಳೊಂದಿಗೆ ಸಾಂಪ್ರದಾಯಿಕ ಗಣೇಶ ಪೂಜೆಯನ್ನು ನೆರವೇರಿಸಿಕೊಟ್ಟರು. ಬೃಂದಾವನ ಐಡಲ್ ಕಾರ್ಯಕ್ರಮದಲ್ಲೂ ಕೂಡ ವಯೋಮಾನಕ್ಕನುಗುಣವಾಗಿ ಮೂರು ಗುಂಪುಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 6 ವರ್ಷದಿಂದ ಹಿಡಿದು ವಯಸ್ಕರವರೆಗೆ ಸುಮಾರು 20 ಸ್ಪರ್ಧಿಗಳು ಯಾವುದೇ ಟ್ರ್ಯಾಕ್ ಅಥವಾ ಹಿನ್ನೆಲೆ ಸಂಗೀತದ ಆಧಾರವಿಲ್ಲದೆ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಪ್ರತಿಯೊಬ್ಬರೂ ಪ್ರೇಕ್ಷಕರಿಂದ ಚಪ್ಪಾಳೆಗಳನ್ನು ಗಿಟ್ಟಿಸಿದರು. ಈ ಸ್ಪರ್ಧೆಗೆ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದವರು ಶಾರದಾ ಖಂಡಿವಿಲ್ಲಿ ಮತ್ತು ಶ್ರೇಯಸ್ ಶ್ರೀಕರ್ ಅವರು.

ರಂಜಿಸಿದ ಫ್ಯಾನ್ಸಿ ಡ್ರೆಸ್ : ನಂತರ ಎಲ್ಲರ ಮೆಚ್ಚಿನ ಫ್ಯಾನ್ಸಿ ಡ್ರೆಸ್ ಸ್ಪರ್ಧೆ. ಹತ್ತು ವರ್ಷಕ್ಕಿಂತ ಕೆಳ ವಯಸ್ಸಿನ ಏಳು ಮಕ್ಕಳು ನಾನಾ ವಿಧವಾದ ಪೋಷಾಕುಗಳನ್ನು ಧರಿಸಿ ವೇದಿಕೆಯ ಮೇಲೆ ಮುದ್ದಾಗಿ ಕನ್ನಡದಲ್ಲಿ ಮಾತನಾಡುತ್ತ ಎಲ್ಲರ ಮೆಚ್ಚುಗೆ ಗಳಿಸಿದರು. ಈ ಕಾರ್ಯಕ್ರಮದ ವಿಶೇಷವಾಗಿ ಯೂತ್ ಕಮಿಟಿಯ ಸದಸ್ಯರಾದ ನೂಪುರ್ ಮತ್ತು ಸಂಹಿತಾ ಪ್ರತಿಯೊಬ್ಬ ಸ್ಪರ್ಧಿಯನ್ನು ಮಾತನಾಡಿಸಿ ಅವರ ಪೋಷಾಕುಗಳ ವಿವರವನ್ನು ಕೇಳಿ ಪಡೆಯುತ್ತಿದ್ದರು. ಒನಕೆ ಓಬವ್ವ, ಕರ್ನಾಟಕ ಮಾತೆ, ಭಾರತ ಮಾತೆ, ಪೋಲಿಸ್, ನಾನೊಬ್ಬ ಕಳ್ಳ, ಗೃಹಿಣಿ - ಮೊದಲಾದ ವರ್ಣರಂಜಿತ ಪೋಷಾಕುಗಳನ್ನು ಮಕ್ಕಳು ಪ್ರದರ್ಶಿಸಿದರು. ಈ ಸ್ಪರ್ಧೆಗೆ ಜಡ್ಜ್ ಆಗಿ ಪಲ್ಲವಿ ತೋಲ್ಪಾಡಿ ಮತ್ತು ರಶ್ಮಿ ಗೋಕರಂ ಕಾರ್ಯ ನಿರ್ವಹಿಸಿದರು.

ಮುಂದೆ ಸ್ಥಳೀಯ ಕನ್ನಡ ಕೂಟದ ಮೆಂಬರುಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮಕ್ಕಳು ಹಾಗೂ ಪೋಷಕರೆಲ್ಲರೂ ಭಾಗವಹಿಸಿ ಅನೇಕ ಹಾಡು, ನೃತ್ಯ, ರೂಪಕಗಳನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಎಮ್‌ಸೀ ಮಾಡಿ ನಡೆಸಿಕೊಟ್ಟವರು ಹದಿ ಹರೆಯದ ಮಕ್ಕಳು. ಅಶೋಕ್ ಕಟ್ಟೀಮನಿ ಅವರು ಪ್ರತಿ ಕಾರ್ಯಕ್ರಮಕ್ಕೆ ಅನುಗುಣವಾಗಿ ಕನ್ನಡ ಪರಂಪರೆಯ ಕವಿಯ ಹಿನ್ನೆಲೆಯನ್ನು ಬರೆದು ಅದನ್ನು ಅರ್ಥಪೂರ್ಣವಾಗಿ ಜೋಡಿಸಿದ್ದರು. ಅಶೋಕ್ ಹಾಗೂ ಎಮ್‌ಸಿ ಮಾಡಿದ ಮಕ್ಕಳ ಪೋಷಕರು ತರಬೇತಿ ನೀಡಿದ ಹಾಗೆ ಬಹಳ ಅಚ್ಚುಕಟ್ಟಿನಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ತೇಜಸ್ ಕಡೂರ್, ಆಕಾಂಕ್ಷಾ ಲಂಬಿ, ಅನಘಾ ಮಲ್ಲಿಕ್, ಏಕತಾ ಕೃಷ್ಣಮೂರ್ತಿ, ಈಶಾನ್ ಕೃಷ್ಣಮೂರ್ತಿ, ಅನನ್ಯ ಕಟ್ಟೀಮನಿ, ಸ್ಪೂರ್ತಿ ಭಟ್ಟ, ಕೀರ್ತಿ ಭಟ್ಟ.

ಮುಂದಿನ ಕಾರ್ಯಕ್ರಮಗಳನ್ನು ಅತಿಥಿ ಕಲಾವಿದರು ನಡೆಸಿಕೊಟ್ಟರು. ಕನೆಕ್ಟಿಕಟ್‌ನಿಂದ ಆಗಮಿಸಿದ ಮಲ್ಲಿ ಸಣ್ಣಪ್ಪನವರ್ ತಂಡದಿಂದ ಗ್ರೂಪ್ ಡ್ಯಾನ್ಸ್ ಮತ್ತು ಶ್ರೀ ಕಮಲಾನಂದ ಸ್ವಾಮಿ ಮಹಾತ್ಮೆ ಹಾಸ್ಯ ನಾಟಕವನ್ನು ಪ್ರಸ್ತುತಪಡಿಸಲಾಯ್ತು. ಈ ತಂಡದಲ್ಲಿ ಮಕ್ಕಳು ಹಾಗೂ ಮಹಿಳೆಯರೊಂದಿಗೆ ಎಲ್ಲರೂ ಸಹ ಕಾರ್ಯಕ್ರಮಕ್ಕೆ ಅನುಗುಣವಾಗಿ ವಿಶೇಷ ವರ್ಣರಂಜಿತ ಪೋಷಾಕುಗಳನ್ನು ಧರಿಸಿದ್ದು ಮನಮೋಹಕವಾಗಿತ್ತು. ಮಲ್ಲಿ ಸಣ್ಣಪ್ಪನವರೊಂದಿಗೆ ಅರುಣ್ ಪಾಲಾಕ್ಷಪ್ಪ, ರಮೇಶ್ ಕಬ್ಬಿನಾಡ, ಗೌತಮ್ ಪ್ರಸಾದ್, ನಾಗರಾಜ್ ಮಹೇಶ್ವರಪ್ಪ, ಬಸಂತ ಮರೋಗೌಡರ್ ಹಾಗೂ ಸುಮಾ ಬಸಂತ್ ಜೊತೆ ನೀಡಿದರು.

ಬಹುಮಾನ ವಿತರಣೆ : ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ಹಾಗೂ ಭಾಗವಹಿಸಿದವರಿಗೆಲ್ಲ ಪಾರಿತೋಷಕ ವಿತರಿಸಿದ ನಂತರ ಎಲ್ಲ ವಾಲಂಟಿಯರುಗಳಿಗೆ, ಪ್ರಾಯೋಜಕರಿಗೆ ಹಾಗೂ ಹಲವಾರು ಸಾಧನೆಗಳನ್ನು ಮಾಡಿದವರಿಗೆ ಪಾರಿತೋಷಕವನ್ನು ನೀಡಲಾಯಿತು. ಜೊತೆಗೆ ಎಂಟನೇ ವರ್ಷದ ವಾರ್ಷಿಕೋತ್ಸವ ಸಂಚಿಕೆ ವನವಾಣಿಯನ್ನು ಸಂತೋಷ್‌ಕುಮಾರ್ ಕಡ್ಲೇಬೇಳೆ ಮತ್ತು ಅವರ ಕುಟುಂಬದವರು ಮೈತ್ರಿ ತಂಡದ ಕೋರಿಕೆ ಮೇರೆಗೆ ಬಿಡುಗಡೆಗೊಳಿಸಿದರು. ಈ ಎರಡು ವರ್ಷಗಳಲ್ಲಿ ತೆರೆ ಮರೆಯಲ್ಲಿ ನಿಂತು ಮೈತ್ರಿ ತಂಡವನ್ನು ಮುನ್ನಡೆಸಿಕೊಂಡು ಬಂದು ಅನೇಕ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸಿವುದರ ಮೂಲಕ ಹಾಗೂ ಅಗತ್ಯವಾದ ಹಣ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡ ಸಂತೋಷ್ ಹಾಗೂ ಅವರ ಕುಟುಂಬದವರನ್ನು ವೇದಿಕೆ ಮೇಲೆ ಎಲ್ಲರೂ ಕರತಾಡನದಿಂದ ಬರಮಾಡಿಕೊಂಡರು.

ಮುಂದೆ ಎಮ್.ಜಿ. ಪ್ರಸಾದ್ ಅವರು 2013-14ರ ಎಲೆಕ್ಷನ್ ಫಲಿತಾಂಶಗಳನ್ನು ಶ್ರೋತೃಗಳಲ್ಲಿ ಹಂಚಿಕೊಂಡು ಮುಂದಿನ ವರ್ಷದ ಅಧ್ಯಕ್ಷಿಣಿ ಉಷಾ ಪ್ರಸನ್ನಕುಮಾರ್ ಅವರನ್ನು ಪರಿಚಯಿಸಿದರು. ಸಂತೋಷ್ ಅವರು ಉಷಾ ಅವರಿಗೆ ಬೃಂದಾವನ ಲಾಂಛನವನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ಪ್ರತಿ ಬೃಂದಾವನ ಕಾರ್ಯಕ್ರಮದಂತೆ ಈ ಕಾರ್ಯಕ್ರಮದಲ್ಲೂ ಕೂಡ ಸ್ವಾದಿಷ್ಟ ಭೋಜನ ಎಲ್ಲರನ್ನು ಕಾಯುತ್ತಿತ್ತು. ಪಾಯಸ ಹಾಗೂ ಗುಲಾಬ್ ಜಾಮೂನ್ ಭರಿತ ಪುಷ್ಕಳ ಭೋಜನವನ್ನು ಬಡಿಸಿ ಊಟದ ಹಾಲ್ ಅನ್ನು ಆಯೋಜಿಸಿದ ಕೀರ್ತಿ ಯೂತ್ ಕಮಿಟಿಗೆ ಸಲ್ಲಬೇಕು. [ಫೋಟೋ : ನಾಗರಾಜ ಮಹೇಶ್ವರಪ್ಪ]

English summary
Brindavana Kannada Koota, New Jersey celebrated annual day and kids festival on 16th December, 2012. Drawing, Fancy dress, Brindavana Idol competitions were conducted for the children and elders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X