ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಲಾಂಟಾದಲ್ಲಿ 7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ

By Prasad
|
Google Oneindia Kannada News

7th AKKA World Kannada Conference, Atlanta
ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) 7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ ಜಾರ್ಜಿಯಾ ರಾಜ್ಯದ ರಾಜಧಾನಿ ಅಟ್ಲಾಂಟ ನಗರದ ನೃಪತುಂಗ ಕನ್ನಡ ಕೂಟದ ಸಹಯೋಗದಲ್ಲಿ ನಡೆಸಲು ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ದಯಾಶಂಕರ್ ಅಡಪ, ಅಕ್ಕ ಅಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ವರ್ಷ 2012ರ ಆಗಸ್ಟ್ 31 - ಸೆಪ್ಟೆಂಬರ್ 1, 2ರ ಲೇಬರ್ ಡೇ ವಾರಾಂತ್ಯದಲ್ಲಿ ಈ ಸಮ್ಮೇಳನವು ನಡೆಯಲಿದೆ. 3 ದಿನಗಳ ಅಕ್ಕ ವಿಶ್ವ ಕನ್ನಡ ಸಮ್ಮೇಳನವು ಕರ್ನಾಟಕದ ನುಡಿ, ಕಲೆ ಮತ್ತು ಸಂಸ್ಕೃತಿಯ ಸಂಭ್ರಮ ಹಾಗೂ ಸಡಗರಗಳ ಹಬ್ಬವಾಗಲಿದೆ. ಅಕ್ಕ ಇಲ್ಲಿಯವರೆಗೆ 6 ವಿಶ್ವ ಕನ್ನಡ ಸಮ್ಮೇಳನಗಳನ್ನು ಹ್ಯೂಸ್ಟನ್, ಡೆಟ್ರಾಯಿಟ್, ಒರ್ಲಾಂಡೊ, ಬಾಲ್ಟಿಮೋರ್, ಶಿಕಾಗೋ ಮತ್ತು ನ್ಯೂ ಜೆರ್ಸಿಗಳಲ್ಲಿ ಸ್ಥಳೀಯ ಕನ್ನಡ ಕೂಟಗಳ ಸಹಯೋಗದಿಂದ ಯಶಸ್ವಿಯಾಗಿ ನಡೆಸಿಕೊಟ್ಟಿದೆ.

ಅಕ್ಕ ಲಾಭರಹಿತ ಸೇವಾ ಸಂಸ್ಥೆಯಾಗಿದ್ದು, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿನ ಕನ್ನಡ ಕೂಟಗಳನ್ನು ಜೊತೆ ಸೇರಿಸುವ ಕೊಂಡಿಯಾಗಿದೆ. ಉತ್ತರ ಅಮೆರಿಕಾದ ಕನ್ನಡಿಗರಲ್ಲಿ ಕನ್ನಡ ನಾಡಿನ ಭಾಷೆ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಿ, ಕನ್ನಡಿಗರನ್ನು ಒಂದುಗೂಡಿಸುವ ಕಾರ್ಯದಲ್ಲಿ ತನ್ನಿಂದಾದ ಸೇವೆ ಸಲ್ಲಿಸುತ್ತಿದೆ. 1973ರಲ್ಲಿ ಸ್ಥಾಪನೆಗೊಂಡ ನೃಪತುಂಗ ಕನ್ನಡ ಕೂಟ ಅಮೆರಿಕಾದ ದಕ್ಷಿಣ ಭಾಗದ ಕನ್ನಡಿಗರನ್ನು ಒಂದುಗೂಡಿಸಿ ಬಹಳಷ್ಟು ಕನ್ನಡ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಚಿಗುರು ಸಾಹಿತ್ಯ ಪತ್ರಿಕೆ, ಅರ್ಹ ಕನ್ನಡಿಗ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ತನ್ನದೇ ಆದ ವೈಶಿಷ್ಟ್ಯತೆಯನ್ನು ಕಾಯ್ದುಕೊಂಡು ಬಂದಿದೆ.

ಅಟ್ಲಾಂಟದಲ್ಲಿ ನಡೆಯಲಿರುವ ಸಂಭ್ರಮದ ಮೂರು ದಿನಗಳ ಸಮ್ಮೇಳನವು ಉತ್ತರ ಅಮೆರಿಕಾದ ವಿವಿಧ ಕನ್ನಡ ಕೂಟಗಳ ಸದಸ್ಯರು ಮತ್ತು ಕರ್ನಾಟಕದಿಂದ ಬರುವ ಆಹಾನ್ವಿತ ಕಲಾವಿದರ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಲಿದೆ. ಬುಸಿನೆಸ್ ಫೋರಂ, ಸಾಹಿತ್ಯ ಕಾರ್ಯಕ್ರಮಗಳು, ಮಹಿಳಾ ವೇದಿಕೆ, ಸಿ. ಎಮ್. ಇ. ಫೋರಂ, ಸೌಂದರ್ಯ ಸ್ಪರ್ಧೆಗಳು, ವೈವಾಹಿಕ ವೇದಿಕೆ, ವಾಣಿಜ್ಯ ಮಳಿಗೆಗಳು ಸಮ್ಮೇಳನದ ಮುಖ್ಯ ಆಕರ್ಷಣೆಗಳಾಗಲಿವೆ. ಸಮ್ಮೇಳನಕ್ಕೆ ವಾಣಿಜ್ಯ ಮಳಿಗೆಯಲ್ಲಿ ಭಾಗವಹಿಸುವವರೂ ಸೇರಿ ಸುಮಾರು 3,000 ರಿಂದ 3,500 ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ.

ಅಟ್ಲಾಂಟ ಅಮೆರಿಕ ಸಂಯುಕ್ತ ಸಂಸ್ಥಾನದ ಮುಖ್ಯ ನಗರಗಳಲ್ಲಿ ಒಂದಾಗಿದ್ದು ಬಹಳಷ್ಟು ಪ್ರಮುಖ ಕೈಗಾರಿಕೆಗಳ ಕೇಂದ್ರ ಸ್ಥಾನವಾಗಿದೆ. ಕೋಕೋ ಕೊಲಾ, ಸಿ. ಎನ್. ಎನ್, ಹೋಮ್ ಡಿಪೋ, ರಬ್ಬರ್ ಮೇಡ್, ಜಾರ್ಜಿಯ ಪೆಸಿಫಿಕ್ ಮತ್ತು ಡೆಲ್ಟಾ ಏರ್ ಲೈನ್ ಇವುಗಳಲ್ಲಿ ಹಲವು. ಈ ಸುಂದರ ವಾಣಿಜ್ಯ ನಗರವು 1996ರ ಒಲಿಂಪಿಕ್ಸ್ ಕ್ರಿಡಾಕೂಟದ ಆತಿಥ್ಯವನ್ನು ವಹಿಸಿತ್ತು. ಅತ್ಯಧಿಕ ಪ್ರಯಾಣಿಕರ ಸೇವೆಯನ್ನು ಪ್ರತಿನಿತ್ಯ ಸಲ್ಲಿಸುತ್ತಿರುವ ಇಲ್ಲಿನ ವಿಮಾನ ನಿಲ್ದಾಣವು ಪ್ರಪಂಚದ ಎಲ್ಲಾ ಪ್ರಮುಖ ನಗರಗಳ ಸಂಪರ್ಕವನ್ನು ಹೊಂದಿದೆ.

ಅಕ್ಕ ಅಧ್ಯಕ್ಷರಾದ ದಯಾಶಂಕರ್ ಅಡಪ ಮತ್ತು ನೃಪತುಂಗ ಕನ್ನಡ ಕೂಟದ ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಡಾ. ಎಚ್. ಎನ್. ರಾಮಸ್ವಾಮಿ ಅವರು 7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಯಶಸ್ಸಿಗೆ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ ಮತ್ತು ಎಲ್ಲಾ ಕನ್ನಡಿಗರನ್ನು ಈ ಸಮ್ಮೇಳನಕ್ಕೆ ತುಂಬು ಹೃದಯದ ಸ್ವಾಗತವನ್ನು ಕೋರುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು www.AkkaOnline.org, www.AtlantaKannada.org ಮತ್ತು ದಟ್ಸ್ ಕನ್ನಡ ಅಂತರ್ಜಾಲ ತಾಣಗಳಲ್ಲಿ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

English summary
7th AKKA World Kannada Conference will be held in Atlanta, GA, USA between Aug 31st – Sept 2nd 2012. Nrupatunga Kannada Koota, one of the oldest Kannada associations in USA is hosting WKC-7. According to a press release by Dayashankar Adappa, AKKA president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X