ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಸೆಶನ್ ಗೊಗ್ಗಯ್ಯನ ಎದುರು ಉಳಿತಾಯ ಮಂತ್ರ

By Staff
|
Google Oneindia Kannada News

Shelvanarayana A R, Netherlands
ಹಲವು ತಿಂಗಳುಗಳಿಂದ ಪ್ರಪಂಚದ ಎಲ್ಲೆಡೆ ಕೇಳಿಬರುತ್ತಿರುವ ಪದ ಎಂದರೆ, "ರಿಸೆಶನ್". ಭಾರತದಲ್ಲಿ ಕೂಡ, ಆರ್ಥಿಕ ತಜ್ಞರಿಂದ ಹಿಡಿದು ರಿಯಲ್ ಎಸ್ಟೇಟ್ ದಳ್ಳಾಳಿಗಳು, ಸ್ಟಾಕ್ ಬ್ರೋಕರ್ ಗಳು, ಹೋಟೆಲ್ ಮತ್ತು ಬಾರ್ ಗಳ ಒಡೆಯರು, ಸೂಪರ್ ಮಾರ್‍ಕೆಟ್ಗಳು, ತರಕಾರಿ ಮಾರಾಟಗಾರರ ವರೆಗೆ ಎಲ್ಲರಿಗೆ ಕಹಿ ಉಣಿಸಿದ ಶಬ್ದವಿದು.

*ಶೆಲ್ವನಾರಾಯಣ ಎ.ಆರ್, ರೋಟರ್ಡ್ಯಾಂ, ನೆದರ್ಲ್ಯಾಂಡ್ಸ್.

ಎಲ್ಲರ, ವಿಶೇಷವಾಗಿ ಟೆಕ್ಕಿಗಳ ನಿದ್ದೆ ಕೆಡಿಸಿ ರುದ್ರ ತಾಂಡವವಾಡುತ್ತಿರುವ ಈ ಭಯಂಕರನನ್ನು ರಿಸೆಶನ್ ಗೊಗ್ಗಯ್ಯ ಎನ್ನೋಣವೇ? ಈ ಪದವನ್ನು ಕೇಳಿದ ತಕ್ಷಣ ಭಯದಿಂದ ಎಲ್ಲರ ದೇಹದಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಹಾಗಾಗಿ ಅದನ್ನು ಎಕಾನಮಿಕ್ ಟೆರರಿಸ್ಟ್ ಎಂದೂ ಸಂಬೋಧಿಸೋಣವೇ? ಭಾರತದಲ್ಲಿ ತಂತ್ರಾಂಶ ತಂತ್ರಜ್ಞಾನದ ಕ್ರಾಂತಿಯಾದ ಕಾಲದಿಂದ, ಬೆಂಗಳೂರಿನಲ್ಲಿ ಉದ್ಯೋಗಗಳ ಮಹಾಪೂರವೇ ಹರಿದಿದೆ. ಬೆಂಗಳೂರು ವಿಶ್ವಪಟದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದು, ಭಾರತದ ಸಿಲಿಕಾನ್‍ವ್ಯಾಲಿ ಎಂದೇ ಪ್ರಖ್ಯಾತಿಯಾಯಿತು. ನಮ್ಮ ಹಿರಿಯರು ಒಂದು ವರ್ಷದಲ್ಲಿ ಸಂಪಾದಿಸುತ್ತಿದ್ದ ಹಣವನ್ನು ಒಂದೇ ತಿಂಗಳಿನಲ್ಲಿ ಸಂಪಾದನೆ ಮಾಡುವ ಅವಕಾಶವನ್ನು ಯುವಜನತೆಗೆ ಒದಗಿಸಿಕೊಟ್ಟಿದೆ.

90ರ ದಶಕದಲ್ಲಿ, ನೋಡುತ್ತಿದಂತೆಯೆ ಬೆಂಗಳೂರಿನಲ್ಲಿ ಎಲ್ಲೆಡೆ ಹೊಸ ಲಕ್ಷಾಧಿಪತಿಗಳು ಕೋಟ್ಯಾಧಿಪತಿಗಳು ಹುಟ್ಟಿಕೊಂಡರು. ವಿದೇಶ ಪ್ರಯಾಣಗಳು ಸಾಮಾನ್ಯವಾದವು ಮತ್ತು ಹಲವರು ವಿದೇಶದಲ್ಲೇ ನೆಲೆಸಬೇಕೆಂದು ತೆರಳಿದರು. ಡಾಲರ್ ಯೂರೋಗಳು ಭಾರತದೊಳಕ್ಕೆ ವೇಗವಾಗಿ ಹರಿದವು. ಇದರಿಂದ ಯುವಜನತೆಯ ಜೀವನ ಶೈಲಿಯಲ್ಲಿ ಎಲ್ಲಿಲ್ಲದ ಬದಲಾವಣೆಗಳು ಉಂಟಾಯಿತು. ಹಿಂಜರಿಯದೇ ಯಥೇಚ್ಚವಾಗಿ ಹಣ ಬಳಸಿ, ಎಂದೋ ಅನುಭವಿಸಲು ಸಾಧ್ಯವಾಗುತ್ತಿದ್ದ ಭೋಗವನ್ನು ಇಂದೇ ಅನುಭವಿಸುವ ಪ್ರವೃತ್ತಿ ಪ್ರಾರಂಭವಾಯಿತು. ಇದರ ಹಿಂದೆಯೇ ಹಲವಾರು ಬ್ಯಾಂಕ್‍ಗಳು ಹೊಸ ಸೇವೆಗಳನ್ನು ಹೊತ್ತು ತಂದವು. ಕ್ರೆಡಿಟ್ ಕಾರ್ಡ್ಗಳು, ಕಾರು ಕೊಳ್ಳಲು ಸಾಲ, ಮನೆ ಕೊಳ್ಳಲು ಸಾಲ, ವಯಕ್ತಿಕ ಕಾರಣಗಳಿಗಾಗಿ ಸಾಲ ಹೀಗೇ ಹತ್ತು ಹಲವು ಸೇವೆಗಳು ತಲೆ ಎತ್ತಿದವು.

ಪ್ರಾರಂಭದಲ್ಲಿ ಬಲು ಎಚ್ಚರದಿಂದ ಕೆಲವರಿಗೆ ಮಾತ್ರ ಸಾಲ ಕೊಡುತ್ತಿದ್ದ ಬ್ಯಾಂಕ್‍ಗಳು ನಂತರ ಮಾರುಕಟ್ಟೆಯಲ್ಲಿನ ಸ್ಪರ್ಧೆಗೆ ಮಣಿದು ಬಹುತೇಕ ಎಲ್ಲರಿಗೂ ಸಾಲಕೊಡಲು ಮುಂದಾದರು. ಇದರಿಂದಾಗಿ ವರ್ಷಾನುಗಟ್ಟಲೆ ದುಡಿದು, ಹಣಕೂಡಿಟ್ಟು ಮನೆಕಟ್ಟಿ ನಿಟ್ಟುಸಿರು ಬಿಡುತ್ತಿದ್ದ ನಮ್ಮ ಹಿರಿಯರ ಪರಿಸ್ಥಿತಿ ಇನ್ನಿಲ್ಲ. ಬೇಕಾದ್ದನ್ನೆಲ್ಲಾ ಕೊಂಡು, ಮುಖ್ಯವಾಗಿ ಕಾರು ಬೈಕುಗಳನ್ನು ಕೊಂಡು, ತಿರುಗಾಡಿ ಬೇಕಾದ್ದನ್ನು ತಿಂದು, ಕುಡಿದು ಸಂತೋಷಪಡುವುದು ಚಿಕ್ಕವಯಸ್ಸಿಗೇ ಸಮಂಜಸ. ಮನೆಕಟ್ಟಿನೋಡು, ಮದುವೆ ಮಾಡಿನೋಡು ಎಂಬ ಗಾದೆಯ ಮಹತ್ವವನ್ನು ಈ ಕ್ರಾಂತಿ ಮಂಕಾಗಿಸಿಬಿಟ್ಟಿದೆ ಅಲ್ಲವೇ? ಹಾಂ! ಕೆಲವರಿಗೆ ಭೋಗಗಳಿಲ್ಲದಿದ್ದರೂ, ತಮ್ಮ ಕೌಟುಂಬಿಕ ತೊಂದರೆಗಳನ್ನು ನಿವಾರಿಸಿಕೊಳ್ಳಲು ನೆರವಾಯಿತು.

ಬ್ಯಾಂಕುಗಳಿಂದ ಸಾಲಗಳನ್ನು ಪಡೆದು ಭೋಗಗಳನ್ನು ಅನುಭವಿಸುತ್ತಿರುವ ಟೆಕ್ಕಿಗಳಿಗೆ ಸ್ವರ್ಗ ಮೂರೇಗೇಣು ಎಂಬಂತಿತ್ತು. Living pay cheque to pay cheque ಎಂಬ ಪರಿಸ್ಥಿತಿ ಉಂಟಾಯಿತು. ಆದರೂ ಐ.ಟಿ ವಲಯ ಬೆಳೆಯುತ್ತಿದ್ದ ವೇಗದಲ್ಲಿ ಯಾರಿಗೂ ಇದರ ಪರಿವೆ ಇರಲಿಲ್ಲ. ಉದ್ಯೋಗವಲಯದಲ್ಲಿ ಟೆಕ್ಕಿಗಳ ಬೆಲೆ ಗಗನಕ್ಕೇರಿತು, ಕಂಪನಿಯಿಂದ ಕಂಪನಿಗೆ ಜಿಗಿದು ಹೆಚ್ಚು ಸಂಬಳ ಕುದುರಿಸುವುದು ಸಾಮಾನ್ಯವಾಯಿತು. ಉದ್ಯೋಗಪತಿಗಳೂ ತಮ್ಮ ಅಪಾರ ಲಾಭದಲ್ಲಿ ಇನ್ನಷ್ಟನ್ನು (ಕಿಂಚಿತ್) ಉದ್ಯೋಗಿಗಳಿಗೆ ನೀಡಲು ಹಿಂಜರಿಯದೆ ಸಂಬಳ ಬೋನಸ್‍ಗಳ ಸುರಿಮಳೆ ಹರಿಸಿದರು, ಉದ್ಯೋಗಿಗಳ ಮನದಲ್ಲಿ ಮತ್ತಷ್ಟು ಕನಸುಗಳು ಮೂಡಿದವು.

ಕಾಲಚಕ್ರ ತಿರುಗಿತು, 21ನೇ ಶತಮಾನದ ಪ್ರಾರಂಭ, ಇದ್ದಕ್ಕಿದ್ದಂತೆಯೇ ಈ ಕನಸುಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು, ಅಮೆರಿಕದಲ್ಲಿ ಡಾಟ್‍ಕಾಂ ಗುಳ್ಳೆ ಸಿಡಿದಿತ್ತು. ಕಂಪನಿಗಳ ವರಮಾನ ಕುಗ್ಗ ತೊಡಗಿತು, ಕಂಪನಿಗಳು ವೆಚ್ಚಗಳನ್ನು ಕಡಿತಗೊಳಿಸುವುದರಲ್ಲಿ ಕಾರ್ಯೋನ್ಮುಖರಾದರು. ಉದ್ಯೋಗಪತಿಗಳ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು, ಅಮೇರಿಕ ಬಿಟ್ಟು ಬೇರೆಡೆ ವ್ಯಾಪಾರದ ಅವಕಾಶಗಳಿಗಾಗಿ ಕೈಕಾಲು ಜಾಡಿಸತೊಡಗಿದರು. ಆದರೆ ಅಮೇರಿಕದ ಮೇಲಿದ್ದ/ಮೇಲಿರುವ ಜಗತ್ತಿನ ಆರ್ಥಿಕ ವ್ಯವಸ್ಥೆಯ ಅವಲಂಬನೆಯಿಂದಾಗಿ ಹೆಚ್ಚು ಫಲ ದೊರೆಯಲಿಲ್ಲ. ಅಮೆರಿಕದದಿಂದ ಪ್ರಾರಂಭವಾದ ರಿಸೆಶನ್ ಗೊಗ್ಗಯ್ಯನ ಪ್ರವಾಸ ಪ್ರಪಂಚದೆಲ್ಲೆಡೆ ಮುಂದುವರಿಯಿತು.

ವಿದೇಶದಲ್ಲಿದ್ದ ಹಲವಾರು ಟೆಕ್ಕಿಗಳು ಕೆಲಸ ಕಳೆದುಕೊಂಡು ತಾಯ್ನಾಡಿನತ್ತ ಪ್ರಯಾಣ ಬೆಳೆಸಿದರು. ಬೆಂಗಳೂರಿನಲ್ಲೂ ಕೆಲಸ ಕಳೆದುಕೊಳ್ಳುವ ಆತಂಕ ಆವರಿಸಿಕೊಂಡಿತು. ಎಲ್ಲರಲ್ಲೂ ಮುಂದೇನೆಂಬ ಚಿಂತೆ ಕಾಡತೊಡಗಿತು. ಸಾಲಪಡೆದ ಜನ, ತಿಂಗಳ ಕಂತುಗಳನ್ನು ಕಟ್ಟುವುದು ಹೇಗೆ ಎಂಬ ಭಯದಿಂದ ಚಡಪಡಿಸತೊಡಗಿದರು. ಒಂದೊಂದಾಗಿ ಕಂಪನಿಗಳು ಉದ್ಯೋಗ ಕಡಿತ ಪ್ರಾರಂಭಿಸಿದರು. ಪಿಂಕ್ ಸ್ಲಿಪ್, ಫೈರಿಂಗ್, ಟೋಪಿ ಉಡ್‍ಗಯ ಎಂಬ ಶಬ್ದಗಳು ಎಲ್ಲೆಡೆ ಗುಯ್ಗುಟ್ಟಲಾರಂಭಿಸಿತು, ಹೆಚ್ಚುಸಂಖ್ಯೆಗಳಲ್ಲಿ ಜನ ಕೆಲಸ ಕಳೆದುಕೊಂಡರು. ಭಾರತದಲ್ಲಿ ಸೋಷಿಯಲ್ ಸೆಕ್ಯೂರಿಟಿಯಂಥ ವ್ಯವಸ್ಥೆ ಇಲ್ಲ, ಕಾನೂನುಗಳೆಲ್ಲವೂ ಉದ್ಯೋಗಪತಿಗಳ ಪರವಾಗಿವೆ, ಹೋರಾಟ ನಡೆಸಲು ಐ.ಟಿ ಕಂಪನಿಗಳಲ್ಲಿ ಕಾರ್ಮಿಕ ಸಂಘಟನೆಗಳಿಲ್ಲ. ಇಂಥ ಪ್ರತಿಕೂಲಪರಿಸ್ಥಿತಿಗಳಲ್ಲಿ (ಬಡ?) ಉದ್ಯೋಗಿ ಏನುತಾನೇ ಮಾಡಲು ಸಾಧ್ಯ? ಕೆಲಸ ಕಳೆದುಕೊಂದು ಕಂತು ಕಟ್ಟಲಾಗದ ಜನರನ್ನು ಬ್ಯಾಂಕುಗಳೂ ನಾನಾ ರೀತಿಯಾಗಿ ಪೀಡಿಸತೊಡಗಿದರು. ಅತ್ಯಾಧುನಿಕ ಬ್ಯಾಂಕ್ ಎನಿಸಿಕೊಂಡಿದ್ದ ಹಲವು ಬ್ಯಾಂಕ್‍ಗಳು ರೌಡಿಗಳನ್ನು ಬಳಸಿದ್ದೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಈ ರಿಸೆಶನ್ ಗೊಗ್ಗಯ್ಯನ ಆರ್ಭಟ ಕಡಿಮೆಯಾಗಲು ಕೆಲವು ವರ್ಷಗಳೇ ಬೇಕಾಯಿತು.

ಕಾಲ ಚಕ್ರ ಮತ್ತೊಂದು ಸುತ್ತು ಹಾಕಿತ್ತು, ಸುಮಾರು 2004ನೇ ಇಸವಿಯ ವೇಳೆಗೆ ವಸಂತನನ್ನು ಕಂಡು ಚಿಗುರುವ ಮರಗಳಂತೆ ಮತ್ತೆ ಗುತ್ತಿಗೆಗಳು, ಉದ್ಯೋಗಗಳು ಬೆಂಗಳೂರಿನತ್ತ ಮುಖಮಾಡಿದವು. ಆದರೆ ಕಹಿಯ ಸವಿಯನ್ನುಂಡಿದ್ದ ಉದ್ಯೋಗಪತಿಗಳು ಕೆಲವು ಒಪ್ಪಂದಗಳನ್ನು, ನಿರ್ಧಾರಗಳನ್ನೂ ಮಾಡಿಕೊಂಡರು. ಉದ್ಯೋಗಿಗಳ ಸಂಬಳದ ಮೇಲೆ ಹಿಡಿತ, ವೆಚ್ಚಗಳಮೇಲೆ ಎಚ್ಚರ ಮತ್ತು ಮುಖ್ಯವಾಗಿ ಹೆಚ್ಚು ಹಣ ನೀಡಿ ಉದ್ಯೋಗಿಗಳ ಬೇಟೆ ಮಾಡುವುದಿಲ್ಲ ಎಂಬ ಅಲಿಖಿತ ಕರಾರುಗಳು ರೂಪಗೊಂಡವು.

ಕಾಲ ಕಳೆದಂತೆ ಹೆಚ್ಚು ಹೆಚ್ಚು ಉದ್ಯೋಗಗಳು ಮತ್ತೆ ಕಾಣಿಸಿಕೊಂಡವು, ಕಂಪನಿಗಳಿಗೆ ಟೆಕ್ಕಿಗಳ ಅಭಾವ ಕಾಡಲಾರಂಭಿಸಿತು. ಉಂಡ ಕಹಿಯ ನೆನಪು ಮಾಸ ತೊಡಗಿತು. ಮತ್ತೆ ಅದೇ ಚಾಳಿಯ ಪ್ರಾರಂಭ, 5 ಅಂಕಿ ಸಂಬಳ ನೀಡುತ್ತಿದ್ದ ಕಂಪನಿಗಳು 6 ಅಂಕಿಗಳಲ್ಲಿ ನೀಡಲಾರಂಭಿಸಿದರು, ಮತ್ತೆ ಟೆಕ್ಕಿಗಳ ಬೇಟೆ ಪ್ರಾರಂಭವಾಯಿತು. ಹೊಸ ಲಕ್ಷಾಧಿಪತಿಗಳು, ಹೊಸ ಕನಸುಗಳು ಹುಟ್ಟಿಕೊಂಡವು. ಈ ಬಾರಿ ಎಲ್ಲಾ ಸುಗಮ, ಏನೂ ತೊಂದರೆ ಆಗೋಲ್ಲಾ, ಕಂಪನಿಗಳು ಹಿಂದಿನ ಅನುಭವದಿಂದ ಎಚ್ಚರ ವಹಿಸಿದ್ದಾರೆ ಎಂಬುದು ಜನರ ಅನಿಸಿಕೆ. ಆದರೆ ಅಮೆರಿಕ ಮತ್ತೆ ಎಡವಿತು, ಸಲ್ಲದವರಿಗೆ ಸಾಲಕೊಟ್ಟು ಕೈಸುಟ್ಟುಕೊಂಡಿತು, ಮತ್ತೆ ರಿಸೆಶನ್ ಗೊಗ್ಗಯ್ಯ ತನ್ನ ಆರ್ಭಟ ಪ್ರಾರಂಭಿಸಿದ್ದಾನೆ. ಬೀಸೋದೊಣ್ಣೆ ತಪ್ಪಿಸಿಕೊಂಡ್ರೆ ಸಾವಿರ ವರ್ಷ ಆಯಸ್ಸು ಅಂತ ಗಾದೆ, ಆದ್ರೆ ಈ ರಿಸೆಶನ್ ಗೊಗ್ಗಯ್ಯ ಐದೈದು ವರ್ಷಕ್ಕೂ ಬಂದು ಕಾಡ್ತಾನಲ್ಲಪ್ಪ ಏನುಮಾಡೋದು?

ಹಲವು ವರ್ಷದಿಂದ ನಮ್ಮಿಂದ ದುಡಿಸಿಕೊಂಡು ಕೋಟಿಗಟ್ಟಲೆ ಲಾಭಗಳಿಸಿದ ಕಂಪನಿಗಳಿಗೆ, ರಿಸೆಶನ್ ಬಂದಾಗ ಒಂದೆರೆಡು ವರ್ಷ ಸ್ವಲ್ಪ ಕಡಿಮೆ ಲಾಭ ಅಥವಾ ನಷ್ಟ ಅನುಭವಿಸಲು ಸಾಧ್ಯವಿಲ್ಲವೇ? ಅವರುಗಳು ನಮ್ಮ ಜೀವನದ ಬಗ್ಗೆ ಚಿಂತಿಸಬೇಡವೇ? ಇದು ಅನೈತಿಕ ವರ್ತನೆ ಅಲ್ಲವೇ? ಎಂಬುದು ಉದ್ಯೋಗಿಗಳ ವಾದ. Business cannot be done with emotions, we need to measure everything against the target. ಎಂಬುದು ಉದ್ಯೋಗಪತಿಗಳ ವಿವಾದ. ಈ ವಾದ ವಿವಾದಗಳ ನಡುವೆ ಈ ಬಾರಿ ಬಹುಶ:, (ಬಡ?) ಉದ್ಯೋಗಿಗಳಿಗೆ ಹೆಚ್ಚು ನೋವಾಗದಂತೆ ಏನುಮಾಡುವುದು ಎಂಬುದರ ಬಗ್ಗೆ ಸ್ವಲ್ಪ ಚಿಂತನೆ ನಡೆದಿತ್ತೇನೋ. ಆದ್ದರಿಂದಾಗಿ ಈ ಬಾರಿ ಬಹುತೇಕ ಕಂಪನಿಗಳು, ಕೆಲಸದಿಂದ ತೆಗೆಯುವ ಬದಲು ಸಂಬಳಗಳಲ್ಲಿ ಕಡಿತ, ಸಂಬಳ ಹೆಚ್ಚಳದಲ್ಲಿ ಕಡಿತ, ಭತ್ಯೆಗಳಲ್ಲಿ ಕಡಿತ ಮಾಡಿ ತಮ್ಮ ವೆಚ್ಚಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ. ಕಂಪನಿಗಳು ತೆಗೆದುಕೊಂಡ ಈ ನಿರ್ಧಾರ ಶ್ಲಾಘನೀಯ ಎಂದು ನನ್ನ ಅನಿಸಿಕೆ.

ಮಕ್ಕಳಿಗೆ, ಬೇಗ ತಿನ್ನು ಗೊಗ್ಗಯ್ಯ ಬರ್ತಾನೆ, ಬೇಗ ಮಲಗು ಗೊಗ್ಗಯ್ಯಾ ಬರ್ತಾನೆ ಅಂತ ಹೆದರಿಸಿ ಮಲಗಿಸೋ ಅಮ್ಮಂದಿರು, ರಿಸೆಶನ್ ಗೊಗ್ಗಯ್ಯ ಬರ್ತಾನೆ, ಹಣಕೂಡಿಟ್ಟಿರು ಎಂದು ಟೆಕ್ಕಿಗಳನ್ನು ಹೆದರಿಸಬೇಕು ಅನ್ನಿಸುತ್ತೆ. ಸಾಸಿವೆ ಜೀರಿಗೆ ಡಬ್ಬಿಗಳಲ್ಲಿ ಹಣಕೂಡಿಸಿಡುತ್ತಿದ್ದ ಅಮ್ಮನ ಮುಂದಾಲೋಚನೆಗೆ ಯುವಜನತೆ ತಲೆಬಾಗಬೇಕು ಹಾಗೂ ಅವರಂತೆ ಚಿಂತಿಸಬೇಕು. ಸೊಶಿಯಲ್‍ಸೆಕ್ಯೂರಿಟಿ ಇಲ್ಲದಿದ್ದರಿಂದ ಕೆಲಸ ಕಳೆದುಕೊಳ್ಳುವ ಭಯ ಎಲ್ಲರಿಗೂ ಇರುತ್ತದೆ. ಭಾರತದಲ್ಲಿ ಕುಟುಂಬವ್ಯವಸ್ಥೆಯೇ ಸೊಶಿಯಲ್‍ಸೆಕ್ಯೂರಿಟಿ, ಆದರೆ ಇತ್ತೀಚೆಗೆ ಒಟ್ಟುಕುಟುಂಬಗಳು ಒಡೆದು ಸಣ್ಣ ಕುಟುಂಬಗಳಾಗಿ ಪರಿವರ್ತನೆಗೊಂಡಿರುವುದೂ ಜನರಲ್ಲಿ ಹೆಚ್ಚಿನ ಭಯಕ್ಕೆ ಕಾರಣ ಎನಿಸುತ್ತದೆ. ಒಟ್ಟಿನಲ್ಲಿ ನನ್ನ ಸಹ-ಟೆಕ್ಕಿಗಳಿಗೆ, ಹೊಸ ಟೆಕ್ಕಿಗಳಿಗೆ, ಭಾವಿ ಟೆಕ್ಕಿಗಳಿಗೆ ಹೇಳುವುದಿಷ್ಟೆ, ನಮ್ಮ ಅಮ್ಮಂದಿರಂತೆ ಮುಂದಾಲೋಚನೆ ಮಾಡಿ, ಉಳಿತಾಯ ಮಾಡಿದ್ದೇ ಆದರೆ ಇಂಥ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಾಗಿರಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X