ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಾವೇರಿ’ಗೆ ಬಂದ ಋತುರಾಜ ವಸಂತ!

By Staff
|
Google Oneindia Kannada News

Ugadi celebrated in Kaveri, Washington DC
ಋತುರಾಜ ವಸಂತ ಬಂದ, ಹೆಣ್ಗಳ ಕುಣಿಸುತ ನಿಂದ! ಇಷ್ಟೆಲ್ಲ ಭರ್ಜರಿ ಮನರಂಜನೆಯ ನಂತರ ಅಷ್ಟೇ ಭರ್ಜರಿ ಹಬ್ಬದೂಟ. ಬಿಸಿಬೇಳೆಹುಳಿಯನ್ನ, ಬುಂದಿಲಡ್ಡು, ಬಟಾಟೆವಡೆಯೇ ಮೊದಲಾದ ವಿವಿಧ ಐಟಂ‌ಗಳು... ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಮಾರಂಭದಂತೆ ಎಲ್ಲರೂ ಒಟ್ಟಾಗಿ ಹರಟುತ್ತ ರಸನಿಮಿಷಗಳನ್ನು ಮೆಲುಕುಹಾಕುತ್ತ ಹೊಂದಿದ ಆನಂದ!

* ಶ್ರೀವತ್ಸ ಜೋಶಿ; ವರ್ಜೀನಿಯಾ

ವಸಂತ ಸುಮ್ಮನೆ ಬರೋದಿಲ್ಲ, ಬಂದಮೇಲೆ ಸುಮ್ಮನೆ ಇರುವುದು ಅವನ ಜಾಯಮಾನವಲ್ಲ. ಚಳಿಯನ್ನು ಕೊಲ್ತಾನಂತೆ, ಹಕ್ಕಿಗಳು ಉಲಿಯುವಂತೆ ಮಾಡ್ತಾನಂತೆ, ಅಷ್ಟೇ ಏಕೆ ಹೆಣ್ಗಳನ್ನೂ ಕುಣಿಸ್ತಾನಂತೆ! ಇದೇನೂ ಬರೀ ಕವಿಕಲ್ಪನೆಯಲ್ಲ. ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘದಲ್ಲಿ ವಸಂತನಾಗಮನದ ವಿಜೃಂಭಣೆಯನ್ನು ನೋಡಿದರೆ ಕವಿ ಸ್ವಲ್ಪವೂ ಉತ್ಪ್ರೇಕ್ಷೆ ಮಾಡಿಲ್ಲವೆಂದೇ ಹೇಳಬೇಕಾಗುತ್ತದೆ. ಅಂತಹ ಲವಲವಿಕೆ ಈಬಾರಿಯ ಕಾವೇರಿ ಯುಗಾದಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ!

“ಗಣೇಶಸ್ತುತಿಯೊಂದಿಗೆ..." ಅಂತ ತಾನೆ ಈರೀತಿಯ ಕಾರ್ಯಕ್ರಮಗಳೂ ಅದರ ವರದಿಯೂ ಶುರು ಆಗೋದು? ಮೊನ್ನೆ (ಶನಿವಾರ‍ ಏಪ್ರಿಲ್ 4) ಕಾವೇರಿ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆ, ಮಕ್ಕಳಿಂದ 'ಜೈ ಹನುಮಾನ್" ನೃತ್ಯ ರೂಪದಲ್ಲಿ! ಭದ್ರಗಿರಿ ಅಚ್ಯುತದಾಶರು ಹರಿಕಥೆಯಲ್ಲಿ ಅಳವಡಿಸಿಕೊಂಡ ಒಂದು ಹನುಮಭಕ್ತಿಗೀತೆಗೆ ಗದಾಧಾರಿ ಪುಟ್ಟ ಮಕ್ಕಳಿಂದ ಅಭಿನಯ. ಅದರ ನಂತರವೂ ಮಕ್ಕಳಿಂದಲೇ ಸಾಲುಸಾಲಾಗಿ ವಿವಿಧ ಗೀತಸಂಗೀತನೃತ್ಯಗಳ ಪ್ರಸ್ತುತಿ. 'ಹಮ್ಮಕ ಝುಮ್ಮಕ ಚುಮ್ಮಕದಿಂದ..." ರತುನಾ ಬಂದಿದ್ದೇನು, ಅವಳ ಒಡವೆಗಳು ಥಳಥಳ ಹೊಳೆದದ್ದೇನು, ಅವಳು ಕಾಲು ಕುಣಿಸಿದ್ದೇನು, ಸೊಂಟ ತಿರುಗಿಸಿದ್ದೇನು, ಪ್ರೇಕ್ಷಕರು ಶಿಳ್ಳೆ ಹಾಕಿದ್ದೇನು, ಚಪ್ಪಾಳೆ ತಟ್ಟಿದ್ದೇನು!

ಕಾವೇರಿಯ ಆಶ್ರಯದಲ್ಲಿ ವರ್ಜೀನಿಯಾ ಮತ್ತು ಮೇರಿಲ್ಯಾಂಡ್‍ನ ವಿವಿಧೆಡೆಗಳಲ್ಲಿ "ಕನ್ನಡ ಕಲಿಯೋಣ" ತರಗತಿಗಳು ಕಳೆದೆರಡು ವರ್ಷಗಳಿಂದ ಬಹಳ ಅರ್ಥಪೂರ್ಣವಾಗಿ ನಡೆಯುತ್ತಿವೆ, ಆ ವಿದ್ಯಾರ್ಥಿಗಳಿಗೆಲ್ಲ ಕಾವೇರಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಕಲಿಕೆಯನ್ನು ಪ್ರದರ್ಶಿಸುವ ಅವಕಾಶ. ಮೊನ್ನೆಯ ಕಾರ್ಯಕ್ರಮದಲ್ಲೂ ಒಂದು ಶಾಲೆಯ ತಂಡದ ಮಕ್ಕಳಿಂದ ಹಣ್ಣುಗಳ ನೃತ್ಯ, ಮತ್ತೊಂದರಿಂದ ತರಕಾರಿ ನೃತ್ಯ, ಇನ್ನೊಂದು ತಂಡದಿಂದ ಕಿರುಪ್ರಹಸನ- ಕನ್ನಡ ಕಲಿತ ಮಕ್ಕಳಿಗೂ, ಕಲಿಸಿದ ಶಿಕ್ಷಕರಿಗೂ, ಶಾಲೆಗೆ ಮಕ್ಕಳನ್ನು ಕಳಿಸುವ ಹೆತ್ತವರಿಗೂ ಬಹಳ ಸಂತೋಷವುಂಟುಮಾಡಿದ ಪ್ರಸ್ತುತಿಗಳು. ಹಾಗೆಯೇ ಕಾವೇರಿ ಯುವ ಸದಸ್ಯರ ತಂಡಗಳು ಪ್ರದರ್ಶಿಸಿದ 'ಆಡ್-ಒ-ರಾಮ" - ಜಾಹೀರಾತುಗಳು ಹೇಗಿರಬಹುದೆಂಬ ಕಲ್ಪನೆಯ ಅಭಿನಯ.

Ugadi celebrated in Kaveri, Washington DC
ಮಕ್ಕಳ ಚಿಲಿಪಿಲಿ ಕಲರವದ ಕಾರ್ಯಕ್ರಮಗಳೆಲ್ಲ ಮುಗಿದಮೇಲೆ ಏಕ್‍ದಂ ಗಾಂಭೀರ್ಯ ಕಂಡುಕೊಂಡ ವೇದಿಕೆಯಲ್ಲಿ "ಭೀಷ್ಮಪ್ರತಿಜ್ಞೆ" - ಯಕ್ಷಗಾನ ಮತ್ತು ಗೀತನೃತ್ಯರೂಪಕಗಳ ಫ್ಯೂಷನ್ ಕಾರ್ಯಕ್ರಮ. ಅದರಲ್ಲಿ ಅಭಿನಯಸಿದವರ ಶ್ರದ್ಧೆ ತಾದಾತ್ಮ್ಯಗಳದು ಒಂದು ಅಂಶವಾದರೆ, ಪರಿಣಾಮಕಾರಿಯಾಗುವಂತೆ ಬಳಸಿದ ರಂಗಪರಿಕರಗಳು (props) ವೃತ್ತಿಪರ ನಾಟಕಸಂಸ್ಥೆಗಳನ್ನೂ ನಾಚಿಸುವಂತಿದ್ದವು. ಎಲಿಕಾಟ್/ಕೊಲಂಬಿಯ ಸಿಟಿಯ ಕನ್ನಡ ಗೆಳೆಯರ ಬಳಗಕ್ಕೆ ಮೆಚ್ಚುಗೆಯ ಭೇಷ್ ಸಲ್ಲಲೇಬೇಕು. ಅಂತೆಯೇ, ಉಷಾ ಚಾರ್ ಶಿಷ್ಯವರ್ಗದಿಂದ "ರಾಗಮಾಲಿಕಾ ಸುಂದರಕಾಂಡ" ವೃಂದಗಾನ ಮೂಡಿಸಿದ ಭಕ್ತಿಯಲೆಗಳ ವಾತಾವರಣ. ಹಬ್ಬದ ವೈಭವಕ್ಕೆ ಸಂಗೀತ ಸಂಸ್ಕೃತಿಯ ಲೇಪ.

ಆದರೆ ಅವತ್ತಿನ ಸಂಜೆ steal the show ಮಾಡಿದ್ದು 'ಬೂಗೀ ವೂಗೀ" ನೃತ್ಯ ಸ್ಪರ್ಧೆ. ಆರು ಬೇರೆಬೇರೆ ತಂಡಗಳು ತಿಂಗಳುಗಳಿಂದ ಶ್ರಮಪಟ್ಟು ತಾಲೀಮು ನಡೆಸಿ ಅದ್ಭುತವಾಗಿ ನಿರ್ವಹಿಸಿದ ಸಮೂಹನೃತ್ಯ. ಸುಪರ್‌ಹಿಟ್ ಕನ್ನಡ ಚಿತ್ರಗೀತೆಗಳು ಮತ್ತು ಪಾಶ್ಚಾತ್ಯ ಸಂಗೀತವನ್ನೂ 'ಮೇಡ್ಲೆ"ಯಾಗಿಸಿ ನರ್ತಿಸಿದವರನ್ನು ಯಾರಾದರೂ ಚಲನಚಿತ್ರ ನೃತ್ಯನಿರ್ದೇಶಕರು ನೋಡಿದ್ದರೆ ತಮ್ಮ ಸಿನೆಮಾಗಳಿಗೆ ಆಯ್ದುಕೊಳ್ಳುತ್ತಿದ್ದರೇನೊ! ಅದಕ್ಕೇ ಆರಂಭದಲ್ಲೇ ಹೇಳಿದ್ದು- ಋತುರಾಜ ವಸಂತ ಬಂದ, ಹೆಣ್ಗಳ ಕುಣಿಸುತ ನಿಂದ! ಇಷ್ಟೆಲ್ಲ ಭರ್ಜರಿ ಮನರಂಜನೆಯ ನಂತರ ಅಷ್ಟೇ ಭರ್ಜರಿ ಹಬ್ಬದೂಟ. ಬಿಸಿಬೇಳೆಹುಳಿಯನ್ನ, ಬುಂದಿಲಡ್ಡು, ಬಟಾಟೆವಡೆಯೇ ಮೊದಲಾದ ವಿವಿಧ ಐಟಂ‌ಗಳು... ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಮಾರಂಭದಂತೆ ಎಲ್ಲರೂ ಒಟ್ಟಾಗಿ ಹರಟುತ್ತ ರಸನಿಮಿಷಗಳನ್ನು ಮೆಲುಕುಹಾಕುತ್ತ ಹೊಂದಿದ ಆನಂದ!

ಕಾವೇರಿ ಸಂಘದ ಈ ವರ್ಷದ ಸಮಿತಿ, ಅಧ್ಯಕ್ಷೆ ಮೀನಾ ರಾವ್ ಮತ್ತು ಬಳಗಕ್ಕೆ ಇಂಥದೊಂದು ಅದ್ಧೂರಿಯ ಕಾರ್ಯಕ್ರಮ ಯೋಜಿಸಿ, ನಿರ್ವಹಿಸಿ, ಚಂದಗಾಣಿಸಿಕೊಟ್ಟದ್ದಕ್ಕೆ ಐದು ನಕ್ಷತ್ರಗಳ ಪೈಕಿ ನಾಲ್ಕು-ನಾಲ್ಕೂವರೆ ಕೊಡಲಿಕ್ಕಡ್ಡಿಯಿಲ್ಲ, ಹಾಗೆಯೇ ಕಾವೇರಿ ಆಶ್ರಯದಲ್ಲಿ ಹಮ್ಮಿಕೊಂಡಿರುವ "ನಗೋಕಿಲ್ಲ ರಿಸೆಷನ್" ಹಾಸ್ಯಸಂಜೆ ಕಾರ್ಯಕ್ರಮ (ವಿವರಗಳನ್ನು ಸದ್ಯದಲ್ಲೇ ನಿರೀಕ್ಷಿಸಿ), ಕನ್ನಡ ಸಾಹಿತ್ಯ ರಂಗದ ಸಾಹಿತ್ಯೋತ್ಸವ ಕಾರ್ಯಕ್ರಮ, ಮತ್ತೊಂದು ನಗೆನಾಟಕ- ಇವುಗಳಲ್ಲೂ ಸಹ ಕಾವೇರಿ ಬಳಗದ ನಿರ್ವಹಣೆ ಐದು ನಕ್ಷತ್ರಗಳಿಗೆ ಭಾಜನವಾಗುವಂತಿರುತ್ತದೆ ಎಂದು ನಿರೀಕ್ಷಿಸಲಿಕ್ಕೂ ಅಡ್ಡಿಯಿಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X