ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ

By ವರದಿ: ಪ್ರಕಾಶ್ ರಾಜಾರಾವ್
|
Google Oneindia Kannada News

MK Vamana Murthy
ಸುಮಾರು ನಾಲ್ಕು ದಶಕಗಳ ಕಾಲ ನ್ಯೂಜಿಲೆಂಡಿನ ನಿವಾಸಿಯಾಗಿದ್ದು ಇಲ್ಲಿನ ಸಮಸ್ತ ಭಾರತೀಯರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ ಇಂದು ಬೆಳಿಗ್ಗೆ ಅಕ್ಲೆಂಡ್ ನಲ್ಲಿ ನಿಧನರಾದರು.

ಆಕ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ವಾಮನ ಮೂರ್ತಿಯವರು ಜನಿಸಿದ್ದು 5ನೇ ಸೆಪ್ಟೆಂಬರ್ 1934ರಂದು ಮಂಡ್ಯದಲ್ಲಿ. ಮೈಸೂರಿನಲ್ಲಿ ಶಾಲಾಭ್ಯಾಸ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲ ಕಾಲ ತಮಿಳುನಾಡು ಹಾಗೂ ಅಮೆರಿಕದಲ್ಲಿ ಹೆಚ್ಚಿನ ವ್ಯಾಸಂಗ ಹಾಗೂ ಕೆಲಸ ಮಾಡಿ ನಂತರ ಆಕ್ಲೆಂಡಿನಲ್ಲಿ 1971ರಲ್ಲಿ ಬಂದು ನೆಲೆಸಿದರು.

ನ್ಯೂಜಿಲೆಂಡಿನ ಕನ್ನಡಿಗ ಸಮುದಾಯವನ್ನು ಒಂದು ವಿಸ್ತೃತ ಕುಟುಂಬ ಎಂದು ಭಾವಿಸಿದ್ದ ಅವರು ಎಲ್ಲ ರೀತಿಯಲ್ಲೂ ಹಿರಿಯರಾಗಿದ್ದು ಎಲ್ಲರಿಗೂ ಪ್ರೀತಿಯ ಅಂಕಲ್ ಆಗಿದ್ದರು. ಭಾರತೀಯ ಸಂಸ್ಕೃತಿ ಮತ್ತು ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಇಲ್ಲಿಯೇ ಹುಟ್ಟಿ ಬೆಳೆಯುತ್ತಿರುವ ಮಕ್ಕಳಲ್ಲಿ ಇವುಗಳಲ್ಲಿ ಆಸಕ್ತಿ ಬೆಳೆಸುವ ಸಲುವಾಗಿ ನ್ಯೂಜಿಲೆಂಡ್ ಕನ್ನಡ ಕೂಟ ಮತ್ತು ಭಜನ್ ಸತ್ಸಂಗ ಮುಂತಾದ ಸಂಘ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆಯಾದರು. ಕನ್ನಡ ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅವರು ಅದರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು.

Preetiya Uncle Vamana Murthy
ವಾರವಿಡೀ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ ಭೋದಿಸುತ್ತಿದ್ದ ಅವರು, ವಾರಾಂತ್ಯದಲ್ಲಿ ಕನ್ನಡ ಶಾಲೆಯಲ್ಲಿ ಹಾಲುಗೆನ್ನೆಯ ಮಕ್ಕಳಿಗೆ ಅಕ್ಕರೆಯಿಂದ ಅಆಇಈ ಕನ್ನಡದ ಅಕ್ಷರಮಾಲೆ ಕಲಿಸುತ್ತಿದ್ದರು. ಕನ್ನಡ ಕೂಟದ ಯಾವುದೇ ಕೆಲಸವಿರಲಿ ಅಥವಾ ಕಾರ್ಯಕ್ರಮವಿರಲಿ ಅವರ ವೈಯುಕ್ತಿಕ ಕೊಡುಗೆ ಮತ್ತು ಪರಿಶ್ರಮ ಇದ್ದೇ ಇರುತ್ತಿತ್ತು. ಯಾವುದೇ ಪ್ರತಿಫಲ ಬಯಸದ ವಾಮನ ಮೂರ್ತಿ ಮತ್ತು ಅವರ ಪತ್ನಿ ರತ್ನಾ ವಾಮನ ಮೂರ್ತಿಯವರು ಪರರ ಸಂತೋಷವನ್ನು ಕಂಡು ಸಂತಸಪಡುವುದೇ ಪರಮ ಸಂತೋಷವೆಂದು ತಿಳಿದಿದ್ದರು.

ಅಂಕಲ್ ವಾಮನ ಮೂರ್ತಿಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಈ ನಾಡಿನ ಎಲ್ಲ ಜನಾಂಗದವರಿಂದ ಶೋಕ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ. ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಲು ಇದೇ ಬುಧವಾರ 8ನೆ ತಾರೀಕಿನಂದು ಅಕ್ಲೆಂಡಿನ ಮಹಾತ್ಮಾ ಗಾಂಧೀ ಕೇಂದ್ರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X