ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದನೆ ಅಭಿನಂದನೆ ಮದುಮಗಳಿಗೂ ಮದುಮಗನಿಗೂ

By ವರದಿ : ಪ್ರಕಾಶ್ ರಾಜಾರಾವ್.
|
Google Oneindia Kannada News

Srinivasa Kalyana in Auckland
ಸಾಮಾನ್ಯವಾಗಿ ಮದುವೆಗೆ ಬಂದ ಹಿರಿಯರು ವಧುವರರನ್ನು ಆಶೀರ್ವದಿಸುತ್ತಾರೆ. ಆದರೆ ಈ ವಿವಾಹದ ವಿಶೇಷವೆಂದರೆ ಇಲ್ಲಿರುವ ಎಲ್ಲರೂ ವಧು ವರರ ಕೃಪಾ ಕಟಾಕ್ಷ ಕೋರುತ್ತಾರೆ. ಹೀಗೆಂದು ಹೇಳಿದವರು ಆಕ್ಲೆಂಡಿನ ಪ್ರಸಿದ್ಧ ಪಾಪಾಕುರ ಶ್ರೀ ಗಣೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರು ಅವರು. ದಿನಾಂಕ 8ನೇ ಮಾರ್ಚ್ 2009ರಂದು ಶನಿವಾರ ಆಕ್ಲೆಂಡಿನ ಮೌಂಟ್ ಈಡನ್ ಸಮರ ಸ್ಮಾರಕ ಭವನದಲ್ಲಿ ಭಜನ್ ಸತ್ಸಂಗ ಪ್ರಥಮ ಬಾರಿಗೆ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಪೌರೋಹಿತ್ಯ ವಹಿಸಿದ ಚಂದ್ರು ಇಂತಹ ಮಂಗಳಕರ ಸಮಾರಂಭದಲ್ಲಿ ಭಾಗವಹಿಸಿದ್ದು ತಮಗೆ ಆನಂದವೆನಿಸಿದೆ ಎಂದರು.

ಆಕ್ಲೆಂಡ್ ಭಜನ್ ಸತ್ಸಂಗ ಈವರೆಗೆ ಆನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಶ್ರೀನಿವಾಸ ಕಲ್ಯಾಣ ನಡೆಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡು ಇದರಲ್ಲಿ ಪಾಲ್ಗೊಳ್ಳುವಂತೆ ಕೋರಿದಾಗ ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸಿದರು. ವಧು ವರರ ತಂದೆತಾಯಿಯರ ಪಾತ್ರವಹಿಸಲು ಆದೃಷ್ಟ ಪರೀಕ್ಷೆ ನಡೆದು ಬಿಂದು ಮತ್ತು ಅನಿಲ್ ಲಕ್ಷ್ಮೀನರಸಿಂಹ ಹಾಗೂ ಮೈಥಿಲಿ ಮತ್ತು ಪ್ರಹ್ಲಾದ್ ದಂಪತಿಗಳು ಭಾಗ್ಯಶಾಲಿಗಳಾಗಿ ಹೊರಹೊಮ್ಮಿದರು.

ಝಗಮಗಿಸುತ್ತಿದ್ದ ಕಲ್ಯಾಣ ಮಂಟಪ, ರೇಶ್ಮೆ ಸೀರೆ, ಕಚ್ಚೆ ಪಂಚೆ ಇತ್ಯಾದಿಗಳಿಂದ ಸಾಲಂಕೃತ ಭಕ್ತಾದಿಗಳು, ಮಂಗಳಕರ ವಾದ್ಯ ಘೋಷ ಎಲ್ಲವೂ ಕರ್ನಾಟಕದಲ್ಲಿ ಭಾಗವಹಿಸಿದ್ದ ಮದುವೆ ಮನೆಯ ನೆನಪು ಬಂದು ಆಹಾ ಎಂಥಾ ಮಧುರ ಭಾವನೆ ಎನ್ನುವಂತೆ ಎಲ್ಲರ ಮನಕೆ ಮುದ ತಂದಿತು. ಸುಮಾರು ಮೂರು ಗಂಟೆಗಳ ಕಾಲ ಶಾಸ್ತ್ರೋಕ್ತವಾಗಿ ನಡೆದ ಮದುವೆ, ವಿಷ್ಣು ಸಹಸ್ರನಾಮ ಪಠಣೆ, ಭಜನೆ, ಸಾಮೂಹಿಕ ಭಕ್ತಿ ಸಂಗೀತ ಗಾಯನ ಇವೆಲ್ಲದರ ಪರಿಣಾಮವಾಗಿ ನಾವೆಲ್ಲೋ ವಿದೇಶದಲ್ಲಿ ಇರುವುದು ಮರೆತು ಕರ್ನಾಟಕಕ್ಕೆ ಮಾನಸಿಕವಾಗಿ ಪ್ರಯಾಣ ಮಾಡಿದ್ದೆವು.

ಕನ್ನಡಿಗ ಮಿತ್ರ ವೆಂಕಟೇಶ ಕುಮಾರ್ ಮತ್ತು ಸಂಗಡಿಗರ ನಳ ಪಾಕದಿಂದ ಎಲ್ಲರೂ ಅಹಹಹ್ಹಾ ಎಂದು ಚಪ್ಪರಿಸುತ್ತಾ ಲಾಡು ಇತ್ಯಾದಿ ವಿವಾಹ ಭೋಜನ ಸವಿದರು. ನ್ಯೂಜಿಲೆಂಡ್ ನಲ್ಲಿ ವಿರಳವಾದ ಬಾಳೆ ಎಲೆಯ ಮೇಲಿನ ಊಟ, ಸ್ನೇಹಿತರೊಡನೆ ಹರಟೆ ಎಲ್ಲ ಸೇರಿ ಸ್ವರ್ಗವೇ ಧರೆಗಿಳಿದಂತೆ ಭಾಸವಾಯಿತು. ಎಲ್ಲರಿಗೂ ಶ್ರೀನಿವಾಸನ ವಿಗ್ರಹ, ದೈನಂದಿನ ಪಠಣೆಗೆ ಅನುವಾಗಲು ವಿಷ್ಣು ಸಹಸ್ರನಾಮ ಕೈಪಿಡಿಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಸಂಜೆ ಸ್ಥಳೀಯ ಕಲಾವಿದರಿಂದ ಸಂಗೀತ, ಪೂಜೆ, ಶಯನೋತ್ಸವ ಮತ್ತು ಪ್ರಸಾದ ವಿನಿಯೋಗದೊಡನೆ ಕಾರ್ಯಕ್ರಮ ಮುಕ್ತಾಯವಾಯಿತು. ಇಡೀ ಕಾರ್ಯಕ್ರಮವನ್ನು ಶ್ರದ್ಧೆ ಭಕ್ತಿಗಳಿಂದ ಉತ್ತಮವಾಗಿ ಆಯೋಜಿಸಿದ್ದ ಭಜನ್ ಸತ್ಸಂಗದ ಸದಸ್ಯರು, ಮದುವೆ ಹೂವೆತ್ತಿದಂತೆ ನಡೆಯಲು ನೆರವಾದ ಸ್ವಯಂ ಸೇವಕರ ಪಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಶ್ರೀನಿವಾಸ ಕಲ್ಯಾಣ ಆಕ್ಲೆಂಡ್ ಭಜನ್ ಸತ್ಸಂಗದ ದಶಮಾನೋತ್ಸವದ ಅಂಗವಾಗಿ ನಡೆಸಿದ ಕಾರ್ಯಕ್ರಮ. ಹತ್ತು ವರ್ಷದ ಹಿಂದೆ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ, ವಿದ್ವಾನ್ ಎಂ.ಡಿ. ದಿವಾಕರ್, ಶ್ರೀಧರ್ ಹೊನ್ನವಳ್ಳಿ ಮತ್ತು ಬೆಂಗಳೂರು ಪ್ರಭಾಕರ ಅವರ ಸದುದ್ದೇಶದ ಫಲವಾಗಿ ಜನಿಸಿದ ಭಜನ್ ಸತ್ಸಂಗ ಪ್ರತೀ ತಿಂಗಳ ಮೊದಲ ಶನಿವಾರ ಸಾಮೂಹಿಕ ಭಜನೆ, ಪೂಜೆ ನಡೆಸುವುದಲ್ಲದೆ ಶಿವರಾತ್ರಿ, ರಾಮ ನವಮಿ, ನರಸಿಂಹ ಜಯಂತಿ, ರಾಘವೇಂದ್ರ ಆರಾಧನೆ, ಗೋಕುಲಾಷ್ಟಮಿ ಮುಂತಾದ ಹಬ್ಬ ಗಳನ್ನು ಸಹ ಆಚರಿಸಿ, ನಮ್ಮಲ್ಲಿ, ಅದರಲ್ಲೂ ಇಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಲ್ಲಿ , ಧಾರ್ಮಿಕ ಭಾವನೆ ಜಾಗೃತವಾಗಿರಲು ನೆರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X