ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ

By * ಸುರೇಶ ಎಚ್. ಸಿ.
|
Google Oneindia Kannada News

Yakshagana puppet show in Singapore
ಜನವರಿ 10ನೇ ತಾರೀಖಿನಂದು ಮೊಟ್ಟ ಮೊದಲ ಬಾರಿಗೆ ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡ ಸಂಘ(ಸಿಂಗಪುರ)ವು ತನ್ನ ಇತಿಹಾಸದ ಪುಟಗಳಲ್ಲಿ ಇನ್ನೊಂದು ಸಾಧನೆಯ ಮೈಲಿಗಲ್ಲನ್ನು ತಲುಪಿತು. ಕನ್ನಡ ಸಂಘವು ಇದೇ ಮೊದಲ ಬಾರಿಗೆ 12 ಮಂದಿ ಅನುಭವಿ ವೃತ್ತಿನಿರತ ಜನಪದ ಕಲಾವಿದರ ತಂಡವನ್ನು ಕರೆಸಿ ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸಿಂಗಪುರದ ಡಿ.ಬಿ.ಎಸ್. ಸಭಾಂಗಣದಲ್ಲಿ ಏರ್ಪಡಿಸಿತ್ತು. ದಕ್ಷಿಣ ಕನ್ನಡದ 'ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಮಂಡಳಿ'ಯವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಪ್ರದರ್ಶನ ನೀಡುತ್ತಿರುವ ಈ ತಂಡವು ನೃತ್ಯ, ಸಂಗೀತ, ಸಂಭಾಷಣೆಗಳನ್ನೊಳಗೊಂಡ, ಆದರೆ ನಶಿಸಿಹೋಗುತ್ತಿರುವ, ಈ ಜನಪದ ಕಲೆಯನ್ನು ಕಳೆದ ಆರು ತಲೆಮಾರುಗಳಿಂದ ಜೀವಂತವಾಗಿಡಲು ಅವಿರತವಾಗಿ ಶ್ರಮಿಸುತ್ತಿದೆ. ಆಕರ್ಷಣೀಯವಾದ ಸೂತ್ರದ ಗೊಂಬೆಗಳ ಈ ಆಟ ತಾಂತ್ರಿಕತೆಯಲ್ಲೂ ಹಾಗೂ ಅಂಶಗಳಲ್ಲೂ ಯಕ್ಷಗಾನ ಬಯಲಾಟದ ಎಲ್ಲ ನಿಯಮಗಳನ್ನೂ ಚಾಚೂ ತಪ್ಪದೆ ಪರಿಪಾಲಿಸುತ್ತದೆ. ಮರದ ಗೊಂಬೆಗಳಿಗೆ ಜೀವಕಳೆ ತುಂಬುವ ಈ ಕಲೆಯನ್ನು ನೋಡುವಾಗ ಕೆಲವೊಮ್ಮೆ ಇದು ಜೀವರಹಿತ ಗೊಂಬೆಗಳ ಕುಣಿತವೋ ಇಲ್ಲವೇ ನಿಪುಣ ಕಲಾವಿದರ ಗಂಭೀರ ಪ್ರದರ್ಶನವೋ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ.

ಸಾಂಪ್ರದಾಯಿಕವಾದ, ವರ್ಣರಂಜಿತ ಗೊಂಬೆಗಳ ಕುಣಿತಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ಭಾರತದಿಂದ ತಮ್ಮ ಜೊತೆ ತಂದಿದ್ದ ಈ ನಿಪುಣ ಕಲಾವಿದರು ವಿಶಿಷ್ಟವಾದ ಕಿರುವೇದಿಕೆಯನ್ನು ಬಹಳ ಬೇಗ ಕಟ್ಟಿ ಅದನ್ನು ಸುಂದರ ದೀಪಗಳಿಂದ ಅಲಂಕರಿಸಿದ್ದರು. ನೆರೆದಿದ್ದ ಕನ್ನಡೇತರ ಕಲಾಸಕ್ತರನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಆಯೋಜಿಸಲಾಗಿತ್ತು. ಕುಮಾರಿ ಧ್ಯುತಿ ರಾಮದಾಸ್ ಹಾಗೂ ಕುಮಾರ ನಿಶಾಂತ್ ಹಾರಿಮನೆಯವರು ಈ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿಕೊಟ್ಟರು. ಕುಮಾರಿ ಸೂಕ್ತಿ ಭಟ್ ಹಾಗು ಕುಮಾರಿ ನಿಧಿ ಹೆಗ್ಡೆಯವರು ಹಾಡಿದ ಇಂಪಾದ ಪ್ರಾರ್ಥನೆಯಿಂದ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಾಮದಾಸ್ ಅವರು ಕಲಾವಿದರನ್ನು ಹಾಗೂ ಪ್ರೇಕ್ಷಕರನ್ನು ಸ್ವಾಗತಿಸಿದರೆ, ಸಂಘದ ಕಾರ್ಯಕಾರೀ ಸಮಿತಿಯ ಸದಸ್ಯ ಪ್ರಕಾಶ್ ಹಂದೆಯವರು ಈ ಕಲೆಯ ಬಗ್ಗೆ, ಕಲಾವಿದರ ಬಗ್ಗೆ ಹಾಗೂ ಆಡಲು ಆಯ್ದುಕೊಂಡ ಪ್ರಸಂಗದ ಬಗ್ಗೆ ಕಿರುಪರಿಚಯ ನೀಡಿದರು.

ನೆರೆದಿದ್ದ ಪ್ರೇಕ್ಷಕರಲ್ಲಿ ಕೆಲವರಿಗೆ ಗೊಂಬೆಗಳ ಪರಿಕಲ್ಪನೆಯಿದ್ದರೆ ಕೆಲವರಿಗೆ ಯಕ್ಷಗಾನದ ಪರಿಚಯವಿತ್ತು. ಆದರೆ ಸರಿ ಸುಮಾರು 18 ಇಂಚುಗಳಷ್ಟು ಎತ್ತರದ ಮರದ ಗೊಂಬೆಗಳ ಮೂಲಕ ಸೂತ್ರದಾರರು ಯಕ್ಷಗಾನದಂತಹ ಸಂಕೀರ್ಣ ಕಲೆಯನ್ನು ನೈಜವಾಗಿ ಪ್ರಸ್ತುತ ಪಡಿಸಬಲ್ಲರೆಂಬುದು ಬಹುತೇಕ ಮಂದಿಗೆ ಊಹಾತೀತವಾಗಿತ್ತು ಹಾಗೂ ಎಲ್ಲರ ಕುತೂಹಲಭರಿತ ಕಣ್ಣುಗಳು ಕಿರುವೇದಿಕೆಯ ಮೇಲೆ ಕೇಂದ್ರೀಕೃತವಾಗಿತ್ತು. ಸರಿಸುಮಾರು ಆರು ಘಂಟೆಗೆ ಕಿರುಪರದೆ ಸರಿದಾಗ; ಹಿನ್ನೆಲೆಯಲ್ಲಿ ಚಂಡೆ, ಮದ್ದಲೆ, ಹಾರ್ಮೋನಿಯಮ್‌ಗಳ ಮಧುರ ನಿನಾದ ಹೊರಹೊಮ್ಮಿದಾಗ ಸಭಾಂಗಣದಲ್ಲಿ ಬಡಗತಿಟ್ಟು ಶೈಲಿಯ ಯಕ್ಷಗಾನದ ಕಳೆ ಕಟ್ಟಿತ್ತು.

ರಾಮಾಯಣದಿಂದ ಆಯ್ದುಕೊಂಡ ಚೂಡಾಮಣಿ / ಲಂಕಾದಹನ ಕಾರ್ಯಕ್ರಮವು ಗಣೇಶನ ಪೂಜೆಯೊಂದಿಗೆ ಆರಂಭವಾಯಿತು. ಇಲ್ಲಿಂದ ಮುಂದೆ ಸುಮಾರು 90 ನಿಮಿಷಗಳ ಕಾಲ 16 ಅಂಕಗಳಲ್ಲಿ, ವಿರಾಮವಿಲ್ಲದೆ ಪ್ರದರ್ಶಿತವಾದ ಈ ಗೊಂಬೆಯಾಟವು ನೆರೆದ ಹಿರಿಯ-ಕಿರಿಯರೆಲ್ಲರನ್ನೂ ತಮ್ಮ ಆಸನಗಳಿಂದ ಒಂದಿನಿತೂ ಅಲುಗಬಿಡದೆ ಅವರನ್ನು ಗೊಂಬೆಗಳ ಮಾಯಾನಗರಿಗೆ ಕರೆದೊಯ್ದಿತ್ತು. ಹಿಮ್ಮೇಳದಲ್ಲಿ ಭಾಗವತ ಶಂಕರನಾರಾಯಣ ಶಾನುಭೋಗ ಅವರ ಸುಶ್ರಾವ್ಯ ಗಾಯನ ಹಾಗೂ ನಾರಾಯಣ ಬಿಲ್ಲವ ಮತ್ತು ರಾಮ ಬಳೆಗಾರ್ ಅವರ ಸಂಭಾಷಣೆ ಸೊಗಸಾಗಿ ಕೇಳುತ್ತಿದ್ದರೆ ಪರದೆಯ ಹಿಂದಿನಿಂದ ಸೂತ್ರದಾರರು ತಮ್ಮ ಕೈಚಳಕದಿಂದ ಬಣ್ಣದ ಗೊಂಬೆಗಳ ಮೂಲಕ ಯಕ್ಷಗಾನದ ಕಲೆಯನ್ನು; ಎಲ್ಲ ಹಾವ-ಭಾವ, ಚಲನೆಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಲಿಂಗದಿಂದ ಹೊರಬಂದು ದರ್ಶನವನ್ನಿತ್ತ ಶಿವ, ಲಂಕೆಗೆ ಹಾರಿದ ಹನುಮಂತ, ಯುದ್ಧಕ್ಕೆ ಸಿದ್ದವಾದ ಸೈನ್ಯ ಮುಂತಾದ ಕೆಲವು ದೃಶ್ಯಗಳು ಅತ್ಯುತ್ತಮವಾಗಿ ಮೂಡಿಬಂದು ಪ್ರೇಕ್ಷಕರನ್ನು ಮೂಕವಿಸ್ಮಿತರಾಗಿಸಿ, ಚಪ್ಪಾಳೆ ಗಿಟ್ಟಿಸಿದವು.

ಯಕ್ಷಗಾನ ಮುಗಿಯುತ್ತಿದ್ದಂತೆ ಮುಖ್ಯ ಸೂತ್ರದಾರರಾದ ಭಾಸ್ಕರ್ ಕೊಗ್ಗ ಕಾಮತ್ ಹಾಗೂ ತಂಡದವರು ಪರದೆಯ ಮುಂದೆ ಬಂದು ಗೊಂಬೆಯಾಟದ ಕೈಚಳಕವನ್ನು, ದಾರಗಳ ಮೂಲಕ ಗೊಂಬೆಗಳನ್ನು ಕುಣಿಸುವ ತಂತ್ರವನ್ನು ಪ್ರೇಕ್ಷಕರಿಗೆ ಮಾಹಿತಿಯುಕ್ತವಾದ ವ್ಯಾಖ್ಯಾನ - ಪ್ರದರ್ಶನದ ಮೂಲಕ ಸರಳವಾಗಿ ವಿವರಿಸಿ ತೋರಿಸಿದರು. ತಂಡದ ನಾಯಕರಾದ ಡಾ|| ಲೀಲಾ ಉಪಾಧ್ಯಾಯ ಅವರು ಆಂಗ್ಲ ಭಾಷೆಯಲ್ಲಿ ವಿವರಣೆ ನೀಡಿದರು. ಈ ಕಲೆಯ ಹಲವು ನವೀನ ಆವಿಷ್ಕಾರಗಳಾದ ಮರದ ಹಾಗೂ ವಸ್ತ್ರದ ಗೊಂಬೆಗಳನ್ನು ಪ್ರದರ್ಶಿಸಲಾಯಿತು. ನವಯುಗದ ಜೇಡದ ಗೊಂಬೆ, ಯೋಗದ ಗೊಂಬೆ, ನೊಣದ ಗೊಂಬೆ, ಕಂಬಳಿ ಹುಳು ಗೊಂಬೆ, ಡಾಂಡಿಯಾ ಗೊಂಬೆ, ಜನಪದ ಗೊಂಬೆಗಳು ಜನಮನವನ್ನು ಸೂರೆಗೊಂಡವು. ಒಟ್ಟು ಸುಮಾರು 50 ಗೊಂಬೆಗಳನ್ನು ಈ ಕಾರ್ಯಕ್ರಮಕ್ಕೆ ಬಳಸಲಾಗಿತ್ತು. ಹೊಸವರ್ಷ ಹಾಗೂ ಸಂಕ್ರಾಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವು ಅತಿಥಿಗಳಿಗೆ ಕಿರುಕಾಣಿಕೆ ಹಾಗು ಸಂಘದ ಸಹಕಾರ್ಯದರ್ಶಿ ಅರ್ಚನಾ ಪ್ರಕಾಶ್ ಅವರಿಂದ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು. ಕಾರ್ಯಕ್ರಮದ ನಂತರ ಎಲ್ಲು ಬೆಲ್ಲ, ಗಣಪತಿ ಪ್ರಸಾದ ವಿತರಣೆ ಹಾಗೂ ಭೋಜನವನ್ನು ಕೊಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಈ ಯಶಸ್ವೀ ಕಾರ್ಯಕ್ರಮದ ಮೂಲಕ ಕನ್ನಡ ಸಂಘ(ಸಿಂಗಪುರ)ವು ಆಯೋಜಿಸುವ ಕಾರ್ಯಕ್ರಮಗಳ ವೈವಿಧ್ಯತೆ ಮತ್ತು ಗುಣಮಟ್ಟವು ಇನ್ನೊಂದು ಮಟ್ಟಕ್ಕೆ ಮೇಲೇರಿತ್ತು. ಇಂತಹ ಅಪರೂಪದ ಕಲಾಪ್ರದರ್ಶನ ಸಿಂಗಪುರದಲ್ಲಿ ಸಾಧ್ಯವಾಗಿದ್ದು ಇನ್‌ಫೋಸಿಸ್ ಪ್ರತಿಷ್ಠಾನದ ಧರ್ಮದರ್ಶಿಗಳಾದ ಸುಧಾಮೂರ್ತಿಯವರ ಪ್ರೋತ್ಸಾಹ ಹಾಗೂ ಪ್ರಾಯೋಜಕತ್ವದಿಂದ ಮಾತ್ರ. ಸ್ಥಳೀಯವಾಗಿ ಕಾಮತ್ ರೆಸ್ಟೋರೆಂಟ್, ಎಚ್.ಡಿ.ಎಫ್.ಸಿ. ಸಿಂಗಪುರ ಹಾಗೂ ಡಿವೈನ್ ಸ್ಪಾರ್ಕ್, ಸಿಂಗಪುರ ಸಂಸ್ಥೆಗಳು ಈ ಕಾರ್ಯಕ್ರಮದ ಸಹ-ಪ್ರಾಯೋಜಕರಾಗಿದ್ದರು. ಸಂಘ-ಸಂಸ್ಥೆಗಳಿಂದ, ಕಲಾಪೋಷಕರಿಂದ ಹಾಗೂ ಕಲಾವಿದರ ಪರಿಶ್ರಮ ಇದೇರೀತಿ ಮುಂದುವರೆದರೆ ಚಲನಚಿತ್ರ, ದೂರದರ್ಶನಗಳಂತಹ ಪ್ರಭಾವಾಶಾಲೀ ಮಾಧ್ಯಮಗಳ ನಡುವೆಯೂ ಯಕ್ಷಗಾನ ಗೊಂಬೆಯಾಟ ಕಲೆ ಉಳಿದು, ಬೆಳೆಯುವುದರಲ್ಲಿ ಸಂಶಯವೇ ಇಲ್ಲ.

1996ರಲ್ಲಿ ನೋಂದಣಿಯಾಗಿ, ತನ್ನ ತಾರುಣ್ಯಕ್ಕೆ ಕಾಲಿದುತ್ತಿರುವ ಕನ್ನಡ ಸಂಘ (ಸಿಂಗಪುರ)ವು ಕಳೆದ ಹಲವಾರು ವರ್ಷಗಳಿಂದ ಸುಮಾರು ತಿಂಗಳಿಗೊಂದು ವೈವಿಧ್ಯಮಯ, ಉತ್ತಮ ಗುಣಮಟ್ಟದ ಕಾರ್ಯಕ್ರಮವನ್ನು ಅತೀ ಕಡಿಮೆ ದರದಲ್ಲಿ ನೀಡುತ್ತಾ ಬಂದಿದೆ. ಪ್ರವಾಸೀ ಭಾರತೀಯರು, ಸಿಂಗಪುರ ಹಾಗೂ ಮಲೇಶಿಯಾದ ಕನ್ನಡಿಗರು ಈ ಕಾರ್ಯಕ್ರಮಗಳನ್ನು ನೋಡಿ, ಆನಂದಿಸಿ, ಪ್ರೋತ್ಸಾಹಿಸುತ್ತಿದ್ದಾರೆ. ಹೊರನಾಡಿನಲ್ಲಿ, ತಮ್ಮ ದೈನಂದಿನ ಕಾರ್ಯ, ಚಟುವಟಿಕೆಗಳ ನಡುವೆಯೂ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸ್ವಯಂಸೇವಕರು ಪ್ರತಿ ದಿನ ಕೆಲವು ಘಂಟೆಗಳನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟು, ನಿಸ್ವಾರ್ಥಸೇವೆ ಸಲ್ಲಿಸುತ್ತಿದ್ದಾರೆ. ಜನಸಾಮಾನ್ಯರೆಲ್ಲರಿಗೂ ಕಲೆಯನ್ನು ಉಳಿಸಿ ಬೆಳೆಸುವ ತಮ್ಮ ಜವಾಬ್ದಾರಿಯು ಮನವರಿಕೆಯಾಗಿ, ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ದೊರೆತರೆ ಸಿಂಗಪುರ ಕನ್ನಡ ಸಂಘವು ಇನ್ನೂ ಉನ್ನತ ಗುರಿಯನ್ನು ಇಟ್ಟು, ಸಾಧಿಸಿ, ಇತರ ಕಲಾಪೋಷಕ ಸಂಘ-ಸಂಸ್ಥೆಗಳಿಗೆ ಮಾದರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X