ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ

By Staff
|
Google Oneindia Kannada News

Ramesh Gowda, AKKA President
ಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.

ಮಾನ್ಯರೆ,

ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:

ಕೆಲವೊಂದು ಮಂದಿ "ಅಕ್ಕ" ಇಬ್ಭಾಗ ಎಂದು ಘೊಷಿಸಿಬಿಟ್ಟರೆ ಇಬ್ಭಾಗವಾಗುವಷ್ಟು ಟೊಳ್ಳಲ್ಲ ಅಕ್ಕ ಸಂಸ್ಥೆ. ಆಗಿಂದಾಗ್ಗೆ ನಮ್ಮ ತಪ್ಪುಗಳನ್ನು ಗುರುತಿಸಿಕೊಂಡು ಸಂವಿಧಾನದ ತಿದ್ದುಪಡಿಗಳನ್ನು ಮಾಡುತ್ತಾ, ಕಾರ್ಯ ವೈಖರಿಗಳನ್ನು ಬದಲಾಯಿಸಿಕೊಳ್ಳುತ್ತ ಸಾಗಿದ್ದೇವೆ. ಹಾಗಿದ್ದೂ ಕೂಡ ಕೆಲವೊಂದು ಜನ ತಮ್ಮ ನಿಟ್ಟಿನಲ್ಲಿ ಸಾಗುತ್ತಿಲ್ಲವೆಂದು ದೂರಿ ಬೇರೆ ಹೊಗುತ್ತೇವೆ ಎಂದರೆ "ಎಂದೆಂದಿಗೂ ನೀ ಕನ್ನಡವಾಗಿರು" ಎಂದು ಹರಸಿ ಬೀಳ್ಕೊಡುವುದರ ಬದಲು ಇನ್ನೇನು ಮಾಡಲು ಸಾಧ್ಯ?

ನಿಮ್ಮ ವರದಿಗೆ ಸಹಿ ಹಾಕಿರತಕ್ಕಂತಹ ಮಹನೀಯರೆಲ್ಲ ಅಕ್ಕ ಸಂಸ್ಥೆಗೆ ಬಹಳ ಕೆಲಸ ಮಾಡಿದ್ದಾರೆ ನಿಜ. ಆದರೆ "ಅಕ್ಕ" ಯಾರ ವೈಯಕ್ತಿಕ ಸೊತ್ತಲ್ಲ. ಇದು ಅಮೆರಿಕನ್ನಡಿಗರ ಸಂಸ್ಥೆ. ಇದರ ಸದಸ್ಯರುಗಳು ಏನು ಬಯಸುತ್ತಾರೊ ಹಾಗೆಯೇ ನಡೆಯುತ್ತಕ್ಕಂಥ ಸಂಸ್ಥೆ. ಈ ಭಿನ್ನಮತೀಯರ ಬೇಡಿಕೆಯಂತೆಯೇ ಮೊಟ್ಟ ಮೊದಲನೆ ಬಾರಿಗೆ ಈ ಬಾರಿ ವಿಶ್ವಾಸಾರ್ಹ ಸ್ವತಂತ್ರ ಚುನಾವಣಾ ಸಂಸ್ಥೆಯನ್ನು (Election Trust http://www.electiontrust.com]ನೇಮಕ ಮಾಡಿ ಚುನಾವಣೆ ನಡೆಸಲಾಯಿತು.

ಸಾವಿರಕ್ಕು ಹೆಚ್ಚಿನ ಸದಸ್ಯರೊಳಗೊಂಡ ಪಟ್ಟಿಯಲ್ಲಿ ಒಂದೆರಡು ಲೋಪಗಳಿರಬಹುದು. ಅದನ್ನು ಬೇಕೆಂದೆ ಮಾಡಲಾಗಿದೆ ಎಂದು ಆಪಾದಿಸುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಗೆದ್ದವರ ಗೆಲುವಿನ ಅಂತರ (300 ಕ್ಕೂ ಹೆಚ್ಚು) ನೋಡಿದರೆ, ಈ ಬೆರಳೆಣಿಕೆಯ ದೋಷಗಳು ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಮಾಡಿರುತ್ತಿರಲಿಲ್ಲ. ಇವರುಗಳ ಬೇಡಿಕೆಯಂತೆ ಸದಸ್ಯರ ಪಟ್ಟಿಯನ್ನು ಚುನಾವಣೆ ಘೊಷಿಸುವುದಕ್ಕೆ ಮುನ್ನವೆ ಎಲ್ಲಾ ನಿರ್ದೆಶಕರುಗಳಿಗೆ ಲಭ್ಯವಿತ್ತು. ಅಂದು ಯಾವುದೆ ಚಕಾರವೆತ್ತದೆ, ಫಲಿತಾಂಶ ಬಂದ ನಂತರ ಮಾತನಾಡುತ್ತಿರುವುದು ಅವರ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಮತ್ತು ಅವರ ಹತಾಶ ಮನೋಭಾವದ ಸಂಕೇತ. ಬಹುಶಃ, ಅಮೇರಿಕನ್ನಡಿಗರು ಬೇಕೆಂದೇ ಹೊಸ ಮುಖಗಳನ್ನು ಆಯ್ಕೆ ಮಾಡಿರಬಹುದು. ಅದಕ್ಕೆ ಸಂಸ್ಥೆದೇನು ತಪ್ಪು? ಇಲ್ಲಿನ ಅಮೆರಿಕನ್ನಡಿಗರ ಇಂಗಿತಕ್ಕೆ ಸ್ಪಂದಿಸುವ ಬದಲು, "My way or high-way" ಎಂಬ ಅಖೈರು ನಿಲುವು ಸರಿಯಲ್ಲ.

ಅಕ್ಕ ಸಂಸ್ಥೆ ಮೂವತ್ತಕ್ಕೂ ಹೆಚ್ಚಿನ ಕನ್ನಡ ಕೂಟಗಳ ಎಪ್ಪತ್ತು ಸಾವಿರಕ್ಕು ಹೆಚ್ಚಿನ ಅಮೇರಿಕನ್ನಡಿಗರನ್ನು ಪ್ರತಿನಿಧಿಸುತ್ತಿರುವ ಪ್ರತಿಷ್ಠಿತ ಸಂಸ್ಥೆ.ಅಕ್ಕ ಸಂಸ್ಥೆಗೆ ಈ ರೀತಿಯ ಒಡೆಯುವ ಯತ್ನಗಳೇನು ಹೊಸದಲ್ಲ. ಪ್ರತಿ ಬಾರಿಯು "ಅಕ್ಕ" ಇನ್ನಷ್ಟು ಸಧೃಡವಾಗುತ್ತಿದ್ದಾಳೆಯೇ ವಿನಹ ಕ್ಷೀಣವಾಗುತಿಲ್ಲ. 2003-04 ರಲ್ಲಿ ಕೆಲವೊಂದು ಮಂದಿ ಒಡೆಯಲ್ಲಿಕ್ಕೆ ಹೊರಟರು. ಆದರೆ ಆ ಯತ್ನವನ್ನುಅಮೆರಿಕನ್ನಡಿಗರು ತಿರಸ್ಕರಿಸಿ ಅಂತವರನ್ನು ಮೂಲೆಗುಂಪು ಮಾಡಿದರು. ಇದೇ ಡಾ|| ರೇಣುಕಾ ರಾಮಪ್ಪರವರು 2006ರಲ್ಲಿ ಅಧ್ಯಕ್ಷ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆಯೆಂದು ಆಪಾದಿಸಿ ಕೊರ್ಟು-ಕಛೇರಿ ಹತ್ತಿದರು. ಆದರೆ ಅದರಲ್ಲಿ ಏನೇನು ಹುರುಳಿಲ್ಲ ಎಂದು ಎರಡು ವರ್ಷಗಳ ನಂತರ ಇತ್ತೀಚಿನ ಚುನಾವಣೆಗೂ ಮೊದಲು ಕೇಸನ್ನು ಕೈ ಬಿಟ್ಟರು.

ಹಾಗೆಯೆ ಈಗ ಕೆಲವರು,ಜನರಿಂದ ದೂರವಾದ ನಂತರವೂ ಅಧಿಕಾರದ ಮೇಲಿನ ವ್ಯಾಮೋಹದಿಂದ ಹಾಗೂ ಹೇಗಾದರೂ ಯಾವುದಾದರು ಅಧಿಕಾರದಲ್ಲಿರಬೇಕೆಂದು ಅಕ್ಕ ಒಡೆಯಪವುದಕ್ಕೆ ಹೊರಟಿದ್ದಾರೆ. ಈ ಬಾರಿಯು ಜನ ಅವರನ್ನು ತಿರಸ್ಕರಿಸುತ್ತಾರೆಂಬುವುದರಲ್ಲಿ ಸಂದೇಹವೇ ಇಲ್ಲ.ಪ್ರಜಾಪ್ರಭುತ್ವದಲ್ಲಿ ಒಬ್ಬರು ಸೊಲುತ್ತಾರೆ ಮತ್ತೊಬ್ಬರು ಗೆಲ್ಲುತ್ತಾರೆ. ಸೋತ ಮಾತ್ರಕ್ಕೆ ಸಂಸ್ಥೆಯನ್ನೇ ದೂಷಿಸುವುದು ಸರಿಯಲ್ಲ. ಅಕ್ಕ ಸದಸ್ಯರುಗಳು ಬಹುತೇಕ ಯುವ ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ. ಬಹುಶಃ ಅವರ ಹೊಸ ಕಾರ್ಯಕ್ರಮಗಳು ಅಥವಾ ಅವರ ಚುನಾವಣಾ ಪ್ರಚಾರದ ವೈಖರಿ ನಮ್ಮ ಸದಸ್ಯರುಗಳಿಗೆ ರುಚಿಸಿರಬಹುದು. ಇಲ್ಲವೇ ಇತ್ತೀಚಿನ ಅಮೇರಿಕಾದಲ್ಲಿ ನಡೆದ ಒಬಾಮರವರ ಆಯ್ಕೆಯಿಂದಲೂ ಪ್ರಭಾವಿತರಾಗಿರಬಹುದು. ಇದರಲ್ಲಿ ಯಾವುದೇ ಆಶ್ಚರ್ಯಕರವಾದ ಸಂಗತಿಯಿಲ್ಲ.

ಇದು ನಿಮಗೆ ತಿಳಿದಿರಲಿ: ಅಕ್ಕ ಸಂಸ್ಥೆ ಇದುವರೆಗೆ ಐದು ಸಮ್ಮೇಳನಗಳನ್ನು (2000ರಲ್ಲಿ ಹ್ಯೂಸ್ಟನ್, 2002ರಲ್ಲಿ ಡೆಟ್ರಾಯಿಟ್, 2004ರಲ್ಲಿಆರ್ಲಾಂಡೊ, 2006 ರಲ್ಲಿ ಬಾಲ್ಟಿಮೋರ್, 2008ರಲ್ಲಿ ಚಿಕಾಗೊ) ಯಶಸ್ವಿಯಾಗಿ ನಿರ್ವಹಿಸಿದೆ. ಈ ಸಮ್ಮೆಳನಗಳು ಸಾವಿರಾರು ಕನ್ನಡಿಗರನ್ನು ಒಂದುಗೂಡಿಸಿ ಅಮೆರಿಕಾ ಮತ್ತು ಭಾರತದ ಕಲಾವಿದರಿಗೆ ವೇದಿಕೆಯನ್ನು ಒದಗಿಸಿದೆ. ಈ ಸಮ್ಮೇಳನಗಳು ವಾಣಿಜ್ಯ ಹಾಗು ಸಾಂಸ್ಕ್ರತಿಕ ವಿನಿಮಯಗಳ ಮಹಾವೇದಿಕೆಯೇ ಆಗಿದೆ.

2005 ರಲ್ಲಿ ಅಕ್ಕ ನಡೆಸಿದ ಕಾರ್ಯಕ್ರಮಗಳಿಂದ ಸಂಗ್ರಹಿಸಿದ ಲಕ್ಷಾಂತರ ರೂಪಾಯಿಗಳನ್ನು ಕರ್ನಾಟಕದ ಬಡ ಮಕ್ಕಳ ಶಿಕ್ಷಣಕ್ಕೆ ಬಳಸಲಾಯಿತು. 2006 ರಲ್ಲಿ ಅಕ್ಕ ಸುಮಾರು 100*ಸಾವಿರ ಡಾಲರುಗಳನ್ನು (45 ಲಕ್ಷ ರೂಪಾಯಿ)ಶಂಕರ ಐ ಫೊಂಡೋಶಲ್ಲಿಗೆ ಗೆ ಕೊಡುವುದರ ಮೂಲಕ ಬೆಂಗಳೂರಿನಲ್ಲಿ ಶಂಕರ ಕಣ್ಣಿನ ಆಸ್ಪತ್ರೆಗೆ ಹಣ ಒದಗಿಸಿದೆವು. ಇದರಿಂದ ಪ್ರೇರಿತರಾಗಿ ಕಾಲಿಫೋರ್ನಿಯಾದ ಬಿ. ವಿ. ಜಗದೀಶ್ ರವರು ಕೂಡ 100ಸಾವಿರ ಡಾಲರುಗಳನ್ನು ಕಣ್ಣಿನ ಆಸ್ಪತ್ರೆಗೆ ಒದಗಿಸಿದರು. 2007 ರಲ್ಲಿ ಅಕ್ಕ ಆಶ್ರಯದಲ್ಲಿ "ಅನಾಥ ಮಕ್ಕಳಿಗೆ ಅಕ್ಕಳ ಆಶ್ರಯ" ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಿಂದ ಸಂಗ್ರಹಿಸಿದ ಹಣವನ್ನು ಕರ್ನಾಟಕದಲ್ಲಿ ವಿತರಿಸಲಾಗುವುದು. 2008 ರಲ್ಲಿ ವಿವಿಧ ಕನ್ನಡ ಕೂಟಗಳ ಸಹಕಾರದೊಂದಿಗೆ ಬಟ್ಟೆ, ಆಟಿಕೆಗಳು, ಪುಸ್ತಕಗಳನ್ನು ಸಂಗ್ರಹಿಸಿ ಕರ್ನಾಟಕದಲ್ಲಿರುವ ಬಡಮಕ್ಕಳಿಗೆ ವಿತರಿಸಲಾಯಿತು.

ಇಷ್ಟಾಗ್ಯೂ ಈ ಕೃಷ್ಣಮೂರ್ತಿ ಯಾರು?

ಈ ಮಹಾನುಭಾವರು 2006ರಲ್ಲಿ ಒಂದು ಗುಂಪಿನೊಂದಿಗೇ ಗುರುತಿಸಿಕೊಂಡು ಗೆದ್ದು ಬಂದು, 2008ರ ಸಮ್ಮೇಳನದಲ್ಲೇ ಸುರೇಶ್ ರಾಮಚಂದ್ರನ್ ರವರನ್ನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಪ್ರಚಾರ ಪ್ರಾರಂಭಿಸಿ ಬಿಟ್ಟಿದ್ದರು. ಇತ್ತೀಚಿನ ನಿರ್ದೆಶಕರುಗಳ ಚುನಾವಣೆಯಲ್ಲೂ ಕೂಡ ಮತ್ತೊಂದು ಗುಂಪನ್ನು ಅನುಮೋದಿಸಿದರು. ಆದರೆ ತಮ್ಮ ಗುಂಪಿನ ಕೆಲವೇ ಮಂದಿ ಆಯ್ಕೆ ಆಗಿದ್ದರಿಂದ, ಸೋಲನ್ನು ಸಹಿಸಲಾಗದೆ ಈ ರೀತಿಯ ಹೊಸ ನಾಟಕ ಶುರುಮಾಡಿದ್ದಾರೆ.

ಇವರ ಮೇಲಿರುವ ಆಪಾದನೆಗಳು ಒಂದೇ, ಎರಡೇ ? ಅಕ್ಕ ಹೆಸರಿನಲ್ಲಿ ಇವರು ಇವರ ಇಚ್ಚಾನುಸಾರಿ ಸಮ್ಮೇಳನಗಳಿಗೆ ಆಹ್ವಾನ ಪತ್ರಿಗೆಗಳನ್ನು ನೀಡಿದರು ಎಂದು, ಹಲವು ಬಾರಿ ಆಹ್ವಾನಿತ ಕಲಾವಿದರಿಗೆ ಅವಮಾನ ಮಾಡಿದರೆಂದು. ಇವರ ಬೇಜಬ್ದಾರಿ ವರ್ತನೆಯಿಂದ ಬೇಸತ್ತ ಕರ್ನಾಟಕದ ಮಾಧ್ಯಮದವರು ಇವರನ್ನು ಆಹ್ವಾನಿಸುವುದನ್ನು ಬಿಟ್ಟರೆಂದು, ಕರ್ನಾಟಕದಲ್ಲಿ ಅಕ್ಕ ಸಂಸ್ಥೆಯ ಎಲ್ಲ ಉಸ್ತುವಾರಿ ತನ್ನದೆ ಎಂದು ದುರುಪಯೋಗಪಡಿಸಿಕೊಳ್ಳುತಿದ್ದಾರೆಂದು ದೂರಲಾಗಿದೆ.

ಈ ಎಲ್ಲಾ ದೂರುಗಳನ್ನು ಅಕ್ಕ ಬೋರ್ಡ್ ಆಫ್ ಟ್ರಸ್ಟೀಸ್ ರವರು ಪರಿಶೀಲನೆ ಮಾಡುತ್ತಾ ಇದ್ದಂತ ಸಂದರ್ಭದಲ್ಲಿ, ಬಹುಶಃ ತಮ್ಮ ಉಚ್ಚಾಟನೆಯ ಸುಳಿವನ್ನು ಅರಿತು, ರಾಜೀನಾಮೆ ನೀಡಿ ಒಂದಿಬ್ಬರು ಸಮಾನ ಮನಸ್ಕರೊಡಗೂಡಿ ಅಕ್ಕಳ ಬಗ್ಗೆ ಅಪ ಪ್ರಚಾರಕ್ಕೆ ಇಳಿದಿದ್ದಾರೆ.

ಹೀಗೆ ಹೇಳುತ್ತಾ ಹೊಗಬಹುದು. ಆದರೆ ನಮ್ಮ ಧ್ಯೇಯ ಅಮೇರಿಕದಲ್ಲಿ ಕನ್ನಡ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳಸಿ ಪ್ರೋತ್ಸಾಹಿಸುವುದು. ಮೊದಲೆ ಹೇಳಿದಂತೆ ಅಕ್ಕ ಬಹಳ ಸಧೃಡವಾಗಿದ್ದು, ನಿಮ್ಮೆಲ್ಲರ ಸಹಕಾರದಿಂದ ಹಲವಾರು ಮಹತ್ತರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಮತ್ತಷ್ಟು ಎತ್ತರಕ್ಕೆ ಬೆಳೆಯುವುದನ್ನು ಕಾಣಲಿದ್ದೀರಿ. ಬೆರಳೆಣಿಕೆಯ ಮಂದಿಯ ನಿರ್ಗಮನದಿಂದ ನೀವುಗಳಾರು ವಿಚಲಿತರಾಗಬೇಕಿಲ್ಲ. ಭಿನ್ನಮತೀಯರು ವಿದ್ವಂಸಕ ಕಾರ್ಯಗಳನ್ನು ಬಿಟ್ಟು ಸಕ್ರಿಯವಾಗಿ, ಕ್ರಿಯಾತ್ಮಕವಾಗಿ ಅಕ್ಕಳನ್ನು ಇನ್ನಷ್ಟು ಬಲಪಡಿಸಲು ಮುಂದೆ ಬಂದರೆ ಅಕ್ಕಳ ಬಾಗಿಲು ಪ್ರತಿಯೊಬ್ಬರಿಗೂ ತೆರೆದೇ ಇರುತ್ತದೆ.

ಜೈ ಭುವನೇಶ್ವರಿ
ತಮ್ಮ ವಿಶ್ವಾಸಿ,
ರಮೇಶ್ ಗೌಡ
ಅಧ್ಯಕ್ಷ, "ಅಕ್ಕ"

ಭಿನ್ನಮತೀಯರ ಪತ್ರ

ಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!ಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X