ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರಿಗೆ ಬಂದ ಕಾಡಿನಬೆಂಕಿ:ಸ್ವಾನುಭವ

By Staff
|
Google Oneindia Kannada News

Great Indian escape from LA backfire
ಮಲಗುವ ಕೋಣೆಯ ಕಿಟಕಿಯಿಂದ ಕಾಡಿನ ಬೆಂಕಿ ತೂರಿ ಒಳಬಂದರೆ ಏನಾಗಬೇಡ? ಅಯ್ಯಯ್ಯಪ್ಪಾ ! ಬದುಕಿದೆಯಾ ಬಡಜೀವವೇ ಎಂದು ಪ್ರಲಾಪಿಸುತ್ತಾ ಜೀವಭಯ ಕಾಲಿಗೆ ಬುದ್ಧಿ ಹೇಳಿಸತ್ತೆ. ಹೌದ್ರಿ. ಮೊನ್ನೆ ನಮ್ಮ ಮನೆ ಹಿತ್ತಲಲ್ಲೂ ಅಂಥ ಕಾಳ್ಗಿಚ್ಚು ಬಂದಿತ್ತು. ಸ್ವಾಮೀ, ದೇವನೆ ಲೋಕಪಾವನೆ ತೇ ನಮೋಸ್ತು ನಮೋಸ್ತುತೇ..

*ಮವಾಸು, ಲಾಸ್ ಏಂಜಲಿಸ್

ನಮ್ಮ ಮನೆಯ ಫೋನಿನ ಟ್ರಿನ್ ಶಬ್ಧಕ್ಕೆ ಎದ್ದೆ. ಹೆಲ್ಲೊ ಎಂದು ನಿದ್ದೆಗಣ್ಣಿನಲ್ಲೆ ಅಂದೆ. Just open your window and look outside ಎಂದಿತು ಆ ಕಡೆಯ ಧ್ವನಿ. ಯಾರು ಮಾತನಾಡುತ್ತಿರುವುದು ಅನ್ನುವುದೇ ಗೊತ್ತಿಲ್ಲ. ಆಮೇಲೆ ತಿಳಿದಿದ್ದು, ಕರೆಯನ್ನು ಮಾಡಿದ್ದು ನಮ್ಮ ಪಕ್ಕದ ಮನೆಯವಳೇ. ತಕ್ಷಣ ನಮ್ಮ ಬೆಡ್‌ರೂಮಿನ ಕಿಟಕಿ ತೆಗೆದು ನೋಡಿದೆ. ಬೆಂಕಿಯ ಉಂಡೆಗಳು ಸುರಳಿ ಸುರಳಿಯಾಗಿ ನಮ್ಮ ಮನೆ ನೆಕ್ಕಲು ನುಗ್ಗಿ ಬರುತ್ತಿವೆ.

ಎದೆ ಧಸಕ್ಕೆಂದಿತು. ಅಂತಹ ನೋಟ, ಅಂತಹ ಹೆದರಿಕೆ ಜೀವನದಲ್ಲಿ ನಾನೆಂದೂ ಅನುಭವಿಸಿರಲಿಲ್ಲ. ಇನ್ನು ನನ್ನ ಮನೆ ಉಳಿಯುವುದಿಲ್ಲ ಅಂದು ಕೊಂಡೆ. ನನ್ನ ಪತ್ನಿ ವಿದ್ಯಾ, ಮಗಳು ವಿವಾಳನ್ನು ಎಬ್ಬಿಸಿದೆ. ನಮ್ಮ ಮನೆಯಲ್ಲಿ ಇನ್ನೊಬ್ಬರು ಅತಿಥಿಗಳೂ ಇದ್ದರು. ಅವರನ್ನೂ ಎಬ್ಬಿಸಿದೆ. ಎಲ್ಲರಿಗೂ ತಮ್ಮ ಪಾಸ್‌ಪೋರ್ಟ್ ತೆಗೆದುಕೊಳ್ಳಲು ಹೇಳಿದೆ. ಕೈಗೆ ಸಿಕ್ಕ ಎರಡು ಮೂರು ಬಟ್ಟೆಗಳನ್ನು ಒಂದು ಸಣ್ಣ ಸೂಟ್‌ಕೇಸ್‌ಗೆ ಹಾಕಿಕೊಂಡೆ. ವಿದ್ಯಾ ಒಡವೆಗಳನ್ನು ಒಂದು ಬ್ಯಾಗ್‌ಗೆ ಹಾಕಿಕೊಂಡಳು. ಇನ್ಸೂರೆನ್ಸ್ ಪೇಪರ್‌ಗಳು ಮತ್ತು ನಮ್ಮ ಬ್ಯಾಂಕ್ ಪೇಪರ್‌ಗಳು ಒಂದು ಫೈಲಿನಲ್ಲಿ ಇತ್ತು. ಗಡಿಬಿಡಿಯಲ್ಲಿ ಅದನ್ನೂ ಎತ್ತಿಟ್ಟುಕೊಂಡೆ.

ಪಾಸ್‌ಪೋರ್ಟ್‌ಗಳನ್ನು ತೆಗೆದುಕೊಂಡು ನಮ್ಮ ನಮ್ಮ ಗ್ರೀನ್‌ಕಾರ್ಡ್‌ಗಳು, ಪರ್ಸ್‌ಗಳನ್ನು ತೆಗೆದು ಕೊಂಡು ನಮ್ಮ ಚಿನೊ ಹಿಲ್ಸ್‌ ಬಡಾವಣೆಯಲ್ಲಿರುವ ಸ್ನೇಹಿತರಿಗೆಲ್ಲಾ ಫೋನ್ ಮಾಡಿ ಹೇಳಿದೆ. ಎಲ್ಲರೂ ನಮ್ಮನ್ನು ಆದರದಿಂದ ಕರೆದರು. ನಮಗೆ ಮನೆಯಿಂದ ಹೋಗುವುದಕ್ಕೇ ಇಷ್ಟವಿರಲಿಲ್ಲ. ಆದರೂ ಅನ್ಯ ಮಾರ್ಗವಿಲ್ಲದೆ ಮನೆಯಿಂದ ಹೊರ ಹೊರಟೆವು.

***
ನಮ್ಮ ಊರಿನ ಹೆಸರು ಚಿನೋಹಿಲ್ಸ್. ಲಾಸ್‌ಏಂಜಲಿಸ್‌ಗೆ ಸುಮಾರು 60 ಮೈಲಿ ಪೂರ್ವಕ್ಕೆ ಇದೆ. ಬೇಸಿಗೆಯ ಕಾಲದಲ್ಲಿ ಲಾಸ್‌ಏಂಜಲಿಸ್ ಸುತ್ತಮುತ್ತ ಒಣಹವೆ. ಬೇಸಿಗೆಯಲ್ಲಿ ಭಯಂಕರ ಬೆಂಕಿ ಅನಾಹುತಗಳಾಗುವುದು ಸಾಮಾನ್ಯ. ಕಳೆದ ವರ್ಷದ ಸ್ಯಾಂಡಿಯಾಗೋ ಬೆಂಕಿ ಅನಾಹುತವಾಗಲಿ, ಸಿಮಿ ವ್ಯಾಲಿ ಬೆಂಕಿ ಅನಾಹುತದ ಬಿಸಿಯಾಗಲೀ ನಮಗೆ ಅಷ್ಟು ಬಿಸಿ ತಟ್ಟಿರಲಿಲ್ಲ. ಬೆಂಕಿ ಅನಾಹುತವಾದಾಗ ಅಲ್ಲಿರುವ ಸ್ನೇಹಿತರಿಗೆ ಒಂದು ಫೋನ್ ಮಾಡಿ ಅವರಿಗೆ ಏನಾದರೂ ಸಹಾಯ ಬೇಕೆ? ಎಂದು ಕೇಳುತ್ತಿದ್ದೆವು. ಅಷ್ಟೆ. ಆದರೆ, ಒಂದು ದಿನ ಆ ಕಾಡಿನ ಬೆಂಕಿ ನಮ್ಮ ಮನೆಯ ಕಿಟಕಿಯಲ್ಲಿ ತೂರಿ ಬರುತ್ತದೆಂಬ ಕಲ್ಪನೆ ಎಳ್ಳುಕಾಳಿನಷ್ಟೂ ಇರಲಿಲ್ಲ.

ಬೆಳಿಗಿನ ಜಾವ ಗಡಿಬಿಡಿಯಿಂದ ಎದ್ದು ನಮ್ಮ ಕಿಟಕಿಯಿಂದ ಬೆಂಕಿ ನೋಡಿದಾಗ ಮನಸ್ಸಿಗೆ ಬಂದಿದ್ದು ಒಂದೇ. ಇನ್ನು ಮುಗಿಯಿತು. ನಮ್ಮ ಮನೆ ಉಳಿಯುವ ಗ್ಯಾರಂಟಿ ಇಲ್ಲ. ಮನೆಯ ಹೊರಗೆ ಬಂದಾಗಲೂ ಆ ಬೆಂಕಿಯ ಶಾಖ ತಟ್ಟುತ್ತಿತ್ತು ಎಂದರೆ ಬೆಂಕಿ ಎಷ್ಟು ಹತ್ತಿರ ಬಂದಿತ್ತು ಎಂದು ಅರ್ಥವಾಗುತ್ತದೆ. ನಮ್ಮ ಮನೆ ಒಂದು ಬೆಟ್ಟದ ಮೇಲೆ ಇದೆ. ಅದಕ್ಕಿಂತಲೂ ಎತ್ತರದ ಬೆಟ್ಟಗಳು ನಮ್ಮ ಮನೆಯ ಹಿಂದೆ ಇದೆ. ಅದು ಕ್ಯಾಲಿಫೋರ್ನಿಯಾ ರಾಜ್ಯದ ಒಂದು ಪಾರ್ಕ್‌ಗೆ ಸೇರಿದ್ದು. ಅಲ್ಲಿ ಬರೀ ದೊಡ್ಡ ಕಾಡಿನ ಗಿಡಗಳು ಪೊದೆ ಪೊದೆಯಾಗಿ ಬೆಳೆದು ಬೇಸಿಗೆಯ ಕಾಲಕ್ಕೆ ಒಣಗಿ ನಿಂತಿರುತ್ತದೆ.

ಈ ರಾಜ್ಯದ ಪಾರ್ಕ್ ಬಹಳ ದೊಡ್ಡದು. ನಮ್ಮ ಮನೆ ಇರುವ ಬಡಾವಣೆ ಆ ಪಾರ್ಕಿನ ಸುಮಾರು ಒಂದು ಮೈಲಿ ಉದ್ದದ ಗಡಿಯನ್ನು ಅರೆವೃತ್ತಾಕರದಲ್ಲಿ ಹಂಚಿಕೊಳ್ಳುತ್ತದೆ. ನಮ್ಮ ಮನೆಯ ಬೆಡ್ ರೂಮಿನ ಕಿಟಿಕಿ ತೆಗೆದರೆ ಕಾಣುವುದು ಈ ಒಂದು ಮೈಲಿ ಉದ್ದದ ಬೆಟ್ಟಗಳೇ. ಆ ಬೆಟ್ಟಗಳ ಪಾದದಲ್ಲೇ ಇರುವ ಇನ್ನೊಂದು ಸಣ್ಣ ಬೆಟ್ಟ ನಮ್ಮ ಬಡಾವಣೆಯಲ್ಲಿ ಇರುವುದು. ಅಂದು ನಮ್ಮ ಬೆಡ್ ರೂಮಿನ ಕಿಟಿಕಿ ತೆಗೆದು ನೋಡಿದಾಗ ನನಗೆ ಕಂಡಿದ್ದು ಈ ಬೆಟ್ಟಗಳನ್ನೆಲ್ಲಾ ಅಗ್ನಿದೇವ ಆವರಿಸಿದ್ದ. ಅಂತಹ ಕತ್ತಲಲ್ಲೂ ಆಕಾಶ ಕಿತ್ತಲೆ ವರ್ಣದಲ್ಲಿ ಜಗಜಗಮಿಸುತ್ತಿತ್ತು. ನನಗನ್ನಿಸಿದ್ದು ನಮ್ಮ ಮನೆ ಬೆಂಕಿಯಿಂದ ಆವರಿಸಿದೆ. ಬೆಂಕಿ ಅಷ್ಟು ಹತ್ತಿರ ಕಾಣುತ್ತಿದೆ. ವಿದ್ಯಾಳಿಗೆ ಹೇಳಿದೆ ನಮ್ಮ ಮನೆ ಸುಟ್ಟು ಬೂದಿಯಾಗುವುದು ಖಂಡಿತ. ನಮ್ಮ ಜೀವ ಉಳಿಸಿಕೊಳ್ಳೋಣ. ನಡಿ, ಹೊರಡು.

ಒಂದು ಚಿಕ್ಕ ಸೂಟ್‌ಕೇಸಿನಲ್ಲಿ ಪಾಸ್‌ಪೋರ್ಟ್, ಎಲ್ಲಾ ಅಗತ್ಯ ಪೇಪರ್‌ಗಳನ್ನು ತೆಗೆದುಕೊಂಡು ಹೋಗಿ ಕಾರಿನಲ್ಲಿ ಇಡೋಣವೆಂದು ಹೊರಕ್ಕೆ ಬಂದೆ. ಹೊರಗೆ ಬಂದರೆ, ಎಲ್ಲರೂ ಗಾಬರಿಯಿಂದ ತಮ್ಮ ತಮ್ಮ ಕಾರಿನಲ್ಲಿ ಎಷ್ಟಾಗುತ್ತದೋ ಅಷ್ಟನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಪಕ್ಕದ ಮನೆಯವರು ಪಾಪ ಇಬ್ಬರು ಮುದುಕರು. ಅವರ ಮಗ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾನೆ. ಆ ದೃಶ್ಯಗಳನ್ನು ನೋಡಿದರೆ ಎಂತಹ ಭಯಂಕರ ಸ್ಥಿತಿಯಲ್ಲಿದ್ದೇವೆ ಅನ್ನಿಸಿತು. ನಮಗಂತೂ ಏನೇನು ತೆಗೋಬೇಕೂ ಅನ್ನೋದೆ ಗೊತ್ತಾಗ್ತಿರಲಿಲ್ಲ. ಮನೆಯಲ್ಲಿ ಎಲ್ಲವೂ ಮುಖ್ಯ. ಯಾವುದನ್ನೂ ಬಿಡೋಕ್ಕೂ ಆಗೋಲ್ಲ. ನನಗೆ ನಮ್ಮ ಪ್ರಾಣದ ಬಗ್ಗೆ ಯೋಚನೆ. ವಿದ್ಯಾ, ವಿವಾ ಮತ್ತು ನಮ್ಮ ಅತಿಥಿಯೊಬ್ಬರನ್ನೂ ಕೂಗಿ ಕರೆಯುತ್ತಿದ್ದೆ. ವಿದ್ಯಾ ತಲೆ ಓಡಿಸಿ ಒಡವೆಗಳನ್ನು ಒಂದು ಬ್ಯಾಗಿನಲ್ಲಿ ಹಾಕಿ ತಂದಳು. ನಾವಿಬ್ಬರೂ ಬೇರೆ ಬೇರೆ ಕಾರಿನಲ್ಲಿ ಹೊರಟೆವು. ನನ್ನ ಕಾರು ಮುಂದೆ, ವಿದ್ಯಾ ತನ್ನ ಕಾರನ್ನು ಹಿಂದಕ್ಕೆ ತಿರುಗಿಸಿ ಇನ್ನೊಂದು ರಸ್ತೆಗೆ ಹೋದಳು. ತಕ್ಷಣ ನನ್ನ ಫೋನ್ ರಿಂಗ್ ಆಯಿತು. ಅತ್ತ ವಿದ್ಯಾ ನನ್ನ ಸ್ನೇಹಿತೆ ಶೈಲ ಒಬ್ಬಳೇ ಇದ್ದಾಳೆ, ಅವಳನ್ನೂ ಕರೆದುಕೊಂಡು ಬರುತ್ತೇನೆ ಎಂದು ಹೊರಟಳು.

ಈ ಸಮಯದಲ್ಲಿ ವಿದ್ಯಾ ತನ್ನ ಸ್ನೇಹಿತಳ ಬಗ್ಗೆ ಯೋಚಿಸಿದಳಲ್ಲಾ, ಅವಳಿಗೆ ನಿಜವಾಗಲೂ ಮೆಚ್ಚಬೇಕಾದದ್ದೇ. ಗಾಬರಿಯಲ್ಲಿ ನನಗೆ ನಮ್ಮ ಬಡಾವಣೆಯಿಂದ ಹೊರಗೆ ಹೋದರೆ ಸಾಕು ಎನಿಸಿತ್ತು. ನನಗೆ ಇನ್ಯಾವುದೂ ಯೋಚನೆ ಬಂದಿರಲಿಲ್ಲ. ಆಷ್ಟು ಹೊತ್ತಿಗೆ ನಮ್ಮ ಇಬ್ಬರು ಸ್ನೇಹಿತರು ತಮ್ಮ ತಮ್ಮ ಕಾರುಗಳನ್ನು ತೆಗೆದುಕೊಂಡು ಬಂದಿದ್ದರು. ಎಲ್ಲರೂ ಸೇರಿ ಹತ್ತಿರದಲ್ಲೇ ಇದ್ದ ಒಂದು ಶಾಪಿಂಗ್ ಕಾಂಪ್ಲೆಕ್ಸ್ ಪಾರ್ಕಿಂಗ್ ಜಾಗಕ್ಕೆ ಹೋದವು. ಅಲ್ಲಿ ಎಲ್ಲರೂ ಒಂದೊಂದು ರೀತಿ ಮಾತನಾಡಿಕೊಳ್ಳುತ್ತಿದ್ದರು. ಸ್ವಲ್ಪ ಜನ 'ಅವರು ಮಾಡಿದ್ದು ಒಳ್ಳೆಯದಾಯಿತು' ಕೆಲವರು 'ನಮಗೆ ಮುಂಚೆಯೇ ತಿಳಿಸಬಹುದಾಗಿತ್ತು' ಮತ್ತೆ ಕೆಲವರು ನಿಮಗೆ 'ಈ-ಮೈಲ್ ಬಂದಿಲ್ಲವೇ' ಎನ್ನುತ್ತಿದ್ದರು.

ನನಗೆ ಅರ್ಥವೇ ಆಗಲಿಲ್ಲ. ಹಾಗೆಯೇ ಒಬ್ಬರನ್ನು ಕೇಳಿದೆ ಏನದು, ಈ-ಮೈಲ್ ಎಂದು. ಆಗ ಅವರು ಇದು backfire ಮಾಡುತ್ತಿದ್ದಾರೆ. ಇದರಿಂದ ಯಾವುದೇ ಹಾನಿ ಆಗುವುದಿಲ್ಲ ಎಂದರು. ಅದೂ ನನಗೆ ಅರ್ಥವಾಗಲಿಲ್ಲ. ಆಗ ನನ್ನ ಸ್ನೇಹಿತರು ಅದರ ಬಗ್ಗೆ ವಿವರಿಸಿದರು. ಬೆಂಕಿಯನ್ನು ಬೆಂಕಿಯಿಂದಲೇ ಕೊಲ್ಲುವುದು. ಅಂದರೆ ಎಲ್ಲಿ ಬೆಂಕಿ ಹಬ್ಬುವ ಅನುಮಾನವಿದೆಯೋ ಆಜಾಗದಲ್ಲಿ ಅಗ್ನಿಶಾಮಕ ದಳದವರೇ ಬೆಂಕಿ ಹಾಕಿ ಅದು ಎಲ್ಲೂ ಬೇರೆಕಡೆಗೆ ಹರಿಯದಂತೆ ಮಾಡಿ ನಿಗದಿತ ಪ್ರದೇಶದಲ್ಲಿ ಕಂಡುಬರುವ ಎಲ್ಲಾ ಪೊದೆಗಳನ್ನು ಹುಲ್ಲುಗಳನ್ನು ಸುಡುತ್ತಾರೆ. ಈ ಕಸರತ್ತು ಸುಲಭದ್ದಲ್ಲ. ಒಂದು ಸಾರಿ ಆ ದೃಶ್ಯವನ್ನು ಜೀವಮಾನದಲ್ಲಿ ನೋಡಲು ಸಿಗುವುದಿಲ್ಲ.

***
ಟೆಕ್ಸಾಸ್ ರಾಜ್ಯದ ಕಾಡು ಪ್ರದೇಶದಲ್ಲಿ ಈ ರೀತಿ ಮಾಡಲು ಹೋಗಿ ಕೈ ಮೀರಿ ಬಹಳ ದೊಡ್ಡ ದುರಂತಕ್ಕೆ ಒಳಗಾಗಿತ್ತು. ಇಂತಹ ಈ ಕಸರತ್ತು ನಿಜವಾದ ಬೆಂಕಿಯ ಹೊಡದಾಟದಂತೆ ಹೋರಾಡಬೇಕು. ಅಗ್ನಿಶಾಮಕ ದಳದವರು ಮೊದಲು ಜನಗಳನ್ನು ಮನೆಯಿಂದ ಹೊರಗೆ ಸುರಕ್ಷಿತ ಸ್ಥಳಗಳಿಗೆ ಕಳುಹಿಸುತ್ತಾರೆ. ಸುರಕ್ಷಿತ ಶಾಲೆಗಳಲ್ಲಿ ತುರ್ತು ತಾಣಗಳನ್ನಾಗಿ ಮಾಡಿ ಅಲ್ಲಿ ಜನಗಳನ್ನು ಇಡುತ್ತಾರೆ.ಅಂತಹ ದೃಶ್ಯ ನೋಡೋಕ್ಕೆ ಸಿನಿಮಾದಲ್ಲೂ ಸಿಗೋಲ್ಲ. ಚಿನೋಹಿಲ್ಸ್‌ನ ರಾಜ್ಯ ಪಾರ್ಕಿನ ಪಶ್ಚಿಮ ಭಾಗದಲ್ಲಿ ಬೆಂಕಿ ತಗುಲಿದೆಯೆಂದು ಗೊತ್ತಾದಾಗ ತಕ್ಷಣ ಪೂರ್ವಭಾಗದಿಂದ ಈ backfire ಕಸರತ್ತನ್ನು ಪ್ರಾರಂಭಿಸಿದ್ದರು. ನನಗೆ ಯಾವಾಗ ಇದು backfire ಅಂತ ಗೊತ್ತಾಯ್ತೋ, ನನ್ನಲ್ಲಿ ಇದ್ದ ಭಯ ಎಲ್ಲಾ ಹೊರಟು ಹೋಯ್ತು. ಆಗ ನಾನು ಆ ಬೆಂಕಿ ದೃಶ್ಯಗಳನ್ನ ನೋಡಿ ಆನಂದ ಪಡುವುದಕ್ಕೆ ಶುರುಮಾಡ್ದೆ. ಇಂತಹ ಸ್ಥಿತಿಗೆ ಹರಸಬಾರದು, ಆದರೆ ನಂಬಿದರೆ ನಂಬಿ ಬಿಟ್ಟರೆ ಬಿಡಿ ನಾನಂತೂ ನಮ್ಮ ಬಡಾವಣೆಯ ಎದುರಿಗೆ ಇರೋ ಗುಡ್ಡದ ಮೇಲೆ ಹೋಗಿ ವಿಡಿಯೋ ತೆಗೊಂಡೆ. ನನಗನ್ನಿಸಿದ್ದು ಜೀವಮಾನದಲ್ಲಿ ಸಿಗೋ ಅಂತ ಒಂದು ಅವಕಾಶ ಅಂದ್ಕೊಂಡೆ.

Great Indian escape from LA backfire
ಮೊದಲ ಬಾರಿಗೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಗ್ನಿಶಾಮಕ ದಳದವರು, ಪೋಲೀಸ್‌ನವರು, ವಾಹನಗಳು, ಆ ತುರ್ತು ವಾಹನಗಳ ಬಣ್ಣ ಬಣ್ಣದ ದೀಪದ ಬೆಳಕು ಹಾಗೂ ಶಬ್ಧ ಹೀಗೆ ಎಲ್ಲವೂ ನೋಡುವುದಕ್ಕೆ ಒಂದು ರೀತಿಯ ಹೊಸ ಅನುಭವವನ್ನೇ ಕೊಟ್ಟಿತು. ಸುಮಾರು 30ಕ್ಕೂ ಹೆಚ್ಚು ಮೈಲಿಗಳಷ್ಟು ವೃತ್ತಾಕಾರದಲ್ಲಿ ಐನೂರಕ್ಕೂ ಹೆಚ್ಚು ಅಗ್ನಿಶಾಮಕದಳದವರು ಆ ಅಗ್ನಿದೇವನ ಜೊತೆಯಲ್ಲಿ ಹೊಡೆದಾಡುವ ದೃಶ್ಯ ಒಂದು ಯುದ್ಧದಂತೇ ಇತ್ತು. ಜನಗಳಲ್ಲಿ ಭಯ ಭೀತಿ ಇದ್ದರೂ, ಅಗ್ನಿಶಾಮಕ ದಳದವರು ಧೈರ್ಯದಿಂದ ಸಮಾಧಾನವಾಗಿ ಅಗ್ನಿಯನ್ನು ಶಮನ ಮಾಡುತ್ತಿದ್ದರು. ಜನರೂ ಮುಖದಲ್ಲಿ ಭಯದ ಛಾಯೆ ಕಾಣುತ್ತಿತ್ತೇ ಹೊರತು, ಯಾವುದೇ ಅಹಿತಕರ ಘಟನೆಯಾಗಲಿ, ಕೂಗಾಟವಾಗಲಿ ಕಾಣಲಿಲ್ಲ. ನಾನಂತೂ ನಮ್ಮ ಮನೆಯ ಬಗ್ಗೆ ಯೋಚನೆಯನ್ನೇ ಮಾಡಲಿಲ್ಲ. ಅಮೇಲೆ ಅನ್ನಿಸಿದ್ದು ಯೋಚಿಸಿದ್ದರೂ ನಾನು ಏನು ಮಾಡಲು ಸಾಧ್ಯವಿತ್ತು ಎಂದು.

ಅಮೆರಿಕೆ ದೇಶಕ್ಕೆ ಹೇಗೆ ಬಂದಿಳಿದಿದ್ದೆವೋ ಅದೇ ಸ್ಥಿತಿಯಲ್ಲಿ ಹೊರಗೆ ಕಾಯುತ್ತಾ ಕುಳಿತಿದ್ದೆವೇ ಹೊರತು ಆ ಅಗ್ನಿ ದೇವನ ಅವತಾರದ ಮುಂದೆ ನಾವೇನು ಮಾಡುವ ಸ್ಥಿತಿಯಲ್ಲಿರಲಿಲ್ಲ. ಬೆಂಕಿಯ ರೌದ್ರಾವತಾರವನ್ನು ವಿವರಿಸುವುದು ಅಸಾಧ್ಯ. ಅದರ ಆಕಾರವನ್ನೂ ಹಾಹಾಕಾರವನ್ನೂಊಹಿಸಲೂ ಅಸಾಧ್ಯ. ನಾನಂತೂ ಬೆಟ್ಟದ ಮೇಲೆ ನಿಂತು ನೋಡುತ್ತಿದ್ದಾಗ ಕಾಲ ಹೇಗೆ ಕಳೆಯಿತು ಎನ್ನುವುದೇ ಗೊತ್ತಾಗಲಿಲ್ಲ. ಮೂರು ಘಂಟೆಗಳ ಕಾಲ ನೋಡುತ್ತಾ ನಿಂತಿದ್ದೆ. ನನ್ನ ಜೊತೆ ಆಶ್ಚರ್ಯದಿಂದ ಆನಂದ ಪಟ್ಟವಳು ಎಂದರೆ ನನ್ನ ಮಗಳು ವಿವಾ. ಅವಳಂತೂ ತನ್ನ ಎಲ್ಲಾ ಸ್ನೇಹಿತರಿಗೆ ಫೋನ್ ಮಾಡುತ್ತಾ running commentary ಕೊಡುತ್ತಿದ್ದಳು. ಆ ಬೆಟ್ಟದ ಮೇಲಿನಿಂದ ಒಂದು ಪಕ್ಷಿನೋಟದಂತಿತ್ತು. ನನ್ನ ಸ್ನೇಹಿತರುಗಳಿಗೂ ಫೋನ್ ಮಾಡಿ ಎಲ್ಲರಿಗೂ ಹೇಳುತ್ತಿದ್ದೆ. ಅವರುಗಳು ನನ್ನನ್ನು When Rome was burning, Nero was playing flute ಅನ್ನೋ ಹಾಗೆ ಮಾತಾಡ್ತೀಯಲ್ಲೋ ಅಂತ ಬೈಯ್ದುರು.

***
ಬೆಳಿಗ್ಗೆ 6 ಘಂಟೆ ಹೊತ್ತಿಗೆ ದೊಡ್ಡ ಬೆಂಕಿಗಳು ಶಮನವಾಗಿತ್ತು. ನಾವುಗಳು ನಮ್ಮ ಸ್ನೇಹಿತರ ಮನೆಗೆ ಹೋಗಿ ಕಾಫಿ ಕುಡಿದುಕೊಂಡು ಟಿವಿ ನೋಡುತ್ತಿದ್ದೆವು. ಸುಮಾರು 7 ಘಂಟೆಯ ಹೊತ್ತಿಗೆ ನಮ್ಮ ನೆರೆಹೊರೆಯವರಿಂದ ಗೊತ್ತಾಯಿತು ಮತ್ತೆ ಮನೆಗೆ ಬಿಡುತ್ತಿದ್ದಾರೆ ಎಂದು, ಮನೆಗೆ ವಾಪಸ್ ಬಂದೆವು. ದೇವರ ದಯೆಯಿಂದ ನಮ್ಮ ಮನೆ ಏನೇನೂ ಆಗಿರಲಿಲ್ಲ. ಇದ್ದ ಹಾಗೆ ಇತ್ತು. ಅಗ್ನಿ ದೇವನಿಗೆ ನಮಿಸುತ್ತಾ ಮನೆಯ ಒಳಗೆ ಬಂದು ಹಾಯಾಗಿ ಮತ್ತೆ ಟಿವಿ ಹಾಕಿಕೊಂಡು ಕುಳಿತುಕೊಂಡೆವು. ಆಗ ಅದರಲ್ಲಿ ಬರುತ್ತಿದ್ದಿದ್ದು ಯೊರ್ಬಲಿಂಡ ಅನ್ನುವ ಪ್ರದೇಶದಲ್ಲಿ ಅಗ್ನಿ ಆಹುತದಲ್ಲಿ ಮನೆಗಳು ಸುಟ್ಟುಹೋಗುವುದು. ನಾವು ಎಷ್ಟೂ ಅದೃಷ್ಟವಂತರು ಅಂದುಕೊಂಡೆವು. ಮೇಲಿನಿಂದ ವಿಮಾನದಿಂದ ಅಗ್ನಿಶಮನ ರಾಸಾನಿಕ ಪುಡಿಯನ್ನು ಚೆಲ್ಲುವುದು, ಹೆಲಿಕಾಪ್ಟರಗಳಿಂದ ನೀರನ್ನು ಎರಚುವ ದೃಶ್ಯಗಳನ್ನು ನೋಡಿದರೆ ಅಗ್ನಿಯ ಆಕಾರ ಎಷ್ಟು ದೊಡ್ಡದಿರಬಹುದೆಂದು ಊಹಿಸಬಹುದು.

ಈ ಘಟನೆಯಿಂದ ನಮಗೆ ಮನದಟ್ಟಾಗಿದ್ದು ಏನೆಂದರೆ ಇನ್ನು ಮುಂದೆ ಯಾರಾದರು ಅಗ್ನಿ ಶಾಮಕದಳದವರು ಯಾವುದಾದರೂ ಗೆ ಫೋನ್ ಮಾಡಿದಾಗ ಕೈಲಾದಷ್ಟು ಸಹಾಯ ಮಾಡಬೇಕೆಂಬುದು. ಇನ್ನೊಂದು ಮನದಟ್ಟಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ನಮ್ಮ ಜೀವವೊಂದೇ ಮುಖ್ಯವಾಗುತ್ತದೆ. ದುರಾದೃಷ್ಟವಶಾತ್ ಏನಾದರೂ ನಮ್ಮ ಮನೆ ಸುಟ್ಟು ಹೋಗಿದ್ದಿದ್ದರೆ ಉಳಿಯುತ್ತಿದ್ದದ್ದು ನಮ್ಮ ಜೀವವೊಂದೇ ಅಲ್ಲವಾ ಎಂದೂ ಅನ್ನಿಸಿಬಿಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X