ಕಳೆದ ಶನಿವಾರ ನವೆಂಬರ್ 24ರಂದು ಆಂಗ್ಲನಾಡಿನ 'ಕನ್ನಡ ಬಳಗ ಯುಕೆ' ವಿಜೃಂಭಣೆಯಿಂದ ನಡೆಸಿದ ದೀಪಾವಳಿ ಹಬ್ಬದನಂತರ, ಲಂಡನ್ನಿನಲ್ಲಿರುವ ಥೇಂಸ್ ನದಿಯಲ್ಲಿ ಇನ್ನೂ ಕಣ್ಣೀರಿನ ಪ್ರವಾಹವು ಉಕ್ಕಿ ಹರಿಯುತ್ತಿದೆ. ಇದಕ್ಕೆ ಕಾರಣ ಕಿರಿಯ ಕನ್ನಡಿಗ ತಂಡದವರು "ಪುಣ್ಯ ಕೋಟಿ" ಪದ್ಯವನ್ನು ನಾಟ್ಯರೂಪದಲ್ಲಿ ಅಭಿನಯಿಸಿ ಅಲ್ಲಿ ನೆರೆದಿದ್ದ ಎಲ್ಲಾ ಹಿರಿಯ ಕನ್ನಡಿಗರ ಕಣ್ಣಿನಿಂದ ಕಂಬನಿಯ ಪ್ರವಾಹ ಉಕ್ಕುವಂತೆ ಮಾಡಿದ್ದು.
- ರಾಜಾರಾಮ್ ಕಾವಳೆ, ಬೇಸಿಂಗ್ ಸ್ಟೋಕ್, ಇಂಗ್ಲೆಂಡ್ ಯುಕೆ.
ಆಂಗ್ಲನಾಡಿನಲ್ಲಿ ಸುಮಾರು ಇಪ್ಪತೈದು ವರ್ಷಗಳಿಂದ ಪ್ರತಿಷ್ಠಾಪಿತವಾದ ಕನ್ನಡಬಳಗ ಯುಕೆ ಸಂಸ್ಥೆಯವರು ಲಂಡನ್ನಿನ ಹ್ಯಾರೋವಿನಲ್ಲಿ ಈ ವರ್ಷದ ದೀಪಾವಳಿಯ ಹಬ್ಬವನ್ನು ಆಚರಿಸಿದರು. ಈ ಸಮಾರಂಭದ ಜೊತೆಗೆ ಭಾರತದ ಅರವತ್ತನೆಯ ಸ್ವಾತಂತ್ರ್ಯದ ದಿನಾಚರಣೆಯನ್ನೂ ಆಚರಿಸಲಾಯಿತು. ಈ ಸಮಾರಂಭಕ್ಕೆ ಹ್ಯಾರೊ ವೆಸ್ಟ್ ವಿಭಾಗದ ಪಾರ್ಲಿಮೆಂಟ್ ಸದಸ್ಯರಾದ ಗ್ಯಾರೆತ್ ಥಾಮಸ್ ಎಂಪಿ ಯವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಹ್ಯಾರೊವಿನ ಕನ್ನಡಿಗ ಮೇಯರ್ ಕೆ ತಮ್ಮಯ್ಯ ಅವರನ್ನೂ ಕೂಡ ಆಮಂತ್ರಿಸಲಾಗಿತ್ತು.
ಕನ್ನಡಬಳಗದ ದೀಪಾವಳಿ ಸಮಿತಿಯ ಮುಖ್ಯಸ್ಥರಾದ ರಾಮಮೂರ್ತಿಯವರು, ಮುಖ್ಯ ಅತಿಥಿಗಳಾದ ಗ್ಯಾರೆತ್ ಥಾಮಸ್ ರವರನ್ನು ಸಭಿಕರಿಗೆ ಪರಿಚಯಮಾಡಿಸಿದರು. ಗ್ಯಾರೆತ್ ಥಾಮಸ್ ರವರು ಆಂಗ್ಲನಾಡಿನ ಈಗ ಆಳುತ್ತಿರುವ ಸರ್ಕಾರದ ಮಂತ್ರಿಗಳಲ್ಲೊಬ್ಬರೆಂದೂ, ಪಾರ್ಲಿಮೆಂಟಿನ ಇಂಟರ್ ನ್ಯಾಶನಲ್ ಡಿಪಾರ್ಟ್ಮೆಂಟಿನ ಅಂಡರ್ ಸೆಕ್ರೆಟರಿಎಂತಲೂ ಮತ್ತು ಭಾರತದ ಮತ್ತು ಅವರ ಭಾಂಧವ್ಯವನ್ನು ವಿವರಿಸಿದರು. ಆ ತರುವಾಯ ಕನ್ನಡಬಳಗ ಯುಕೆ ಯ ಅಧ್ಯಕ್ಷೆಯಾದ ಡಾಕ್ಟರ್ ಭಾನುಮತಿಯವರು ಕನ್ನಡಬಳಗದ ವಿಚಾರ ಮತ್ತು ಅದರ ಚರಿತ್ರೆಯನ್ನು ಮುಖ್ಯ ಅತಿಥಿಗಳಿಗೂ ಮತ್ತು ಸಭಿಕರಿಗೂ ವಿವರಿಸಿದರು.
ಆಂಗ್ಲನಾಡಿಗೆ ಇಂಜಿನಿಯರ್ ಇಸಂಬಾರ್ಡ್ ಬ್ರೂನೆಲ್ ಹೇಗೋ ಹಾಗೆ ಭಾರತಕ್ಕೆ ವಿಶ್ವೇಶ್ವರಯ್ಯರವರು ಇದ್ದರೆಂದು ವಿವರಿಸಿದರು. ಈಗಿನ ಆಧುನಿಕ ಕಾಲದಲ್ಲೂ ಕರ್ನಾಟಕದಲ್ಲಿ ಪ್ರಗತಿಗೆ ಕಾರಣಕರ್ತರು ಇನ್ನೂ ಇದ್ದಾರೆಂದು ಡಾಕ್ಟರ್ ಭಾನುಮತಿಯವರು ಹೇಳಿದರು. ಆಧುನಿಕ ಗಣಕತಂತ್ರಜ್ಞಾನದಲ್ಲಿ ಕರ್ನಾಟಕವು ವಿಶ್ವದಲ್ಲೆಲ್ಲಾ ಅತಿ ಮುಖ್ಯ ಕೇಂದ್ರವಾಗಿದೆಯೆಂದು ವಿವರಿಸಿದರು. ಅಜೀಮ್ ಪ್ರೇಮ್ ಜಿ, ನಾರಾಯಣಮೂರ್ತಿ ಮತ್ತು ಭಾಟಿಯ ಮುಂತಾದ ಅಗ್ರಗಣ್ಯರು ಗಣಕತಂತ್ರಜ್ಞಾನ ಕೇಂದ್ರಗಳನ್ನು ಕರ್ನಾಟದ ರಾಜಧಾನಿಯಾದ ಬೆಂಗಳೂರಿನಲ್ಲೊಂದರಲ್ಲೇ ಅಲ್ಲದೆ ಭಾರತದ ಮತ್ತು ವಿಶ್ವದ ಇತರ ಅನೇಕ ಭಾಗಗಳಲ್ಲಿ ಸ್ಥಾಪಿಸಿದ್ದಾರೆಂದು ವಿವರಿಸಿದರು.
ಅದಕ್ಕೆ ಉತ್ತರವಾಗಿ ಮಾತನಾಡಿದ ಗ್ಯಾರೆತ್ ಥಾಮಸ್ ರವರು ತಾವು ವಿದ್ಯಾರ್ಥಿಯಗಿದ್ದ ಕಾಲದಿಂದಲೂ ಭಾರತದ ವಿಚಾರವಾಗಿ ಬಹಳ ಆಳವಾಗಿ ಅಧ್ಯಯನಮಾಡಿದ್ದರೆಂದೂ ಅಲ್ಲದೆ ತಾವು ತಮ್ಮ ಈ ಮಂತ್ರಿಸ್ಥಾನಕ್ಕೆ ಬಂದಮೇಲೂ ಭಾರತದ ವಿಚಾರವಾಗಿ ಸದಾ ಅವಲೋಕಿಸುತ್ತಿರುವರೆಂದು ಹೇಳಿದರು. ಆಂಗ್ಲನಾಡಿಗೆ ಭಾರತೀಯರು ಮಾಡುತ್ತಿರುವ ಕೊಡುಗೆಯನ್ನು ಬಹಳವಾಗಿ ಶ್ಲಾಘಿಸಿದರು. ತಮ್ಮ ಪಕ್ಷದ ಬೆಂಬಲವಿರುವ ಲೇಬರ್ ಫ್ರೆಂಡ್ಸ್ ಆಫ್ ಇಂಡಿಯ ಎಂಬ ಸಂಸ್ಥೆಯಲ್ಲಿ ಬಹಳ ಆಸಕ್ತಿ ತೋರಿಸುತ್ತಿರುವರೆಂದು ಹೇಳಿದರು. ಭಾರತವು ತನ್ನಪ್ರಗತಿಯಲ್ಲಿ ಎಷ್ಟು ಮುಂದುವರೆದಿದೆಯೆಂದರೆ, ಅದು ಎಲ್ಲಾದೇಶಗಳಿಗೆ ಆದರ್ಶಪ್ರಾಯವಾಗಿದೆ ಎಂದರು. ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳು ಎಂಬ ಭೇದಭಾವಗಳೆಲ್ಲಾ ಆಧುನಿಕ ವಿಶ್ವ ಪರಿಸರದಲ್ಲಿ ಬಹು ಶೀಘ್ರವಾಗಿ ಮಾಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಸಮಾರಂಭಕ್ಕೆ ಆಗಮಿಸಿದ 85 ವರ್ಷದ ಡಾ. ಸ್ಕಾರ್ಲೆಟ್ ಎಫ್ ಸ್ಟೀನ್ ರವರು ಕರ್ನಾಟಕದ ಅನೇಕ ವರ್ಷಗಳ ತಮ್ಮ ಅನುಭವದ ಬಗ್ಗೆ ಮಾತಾಡಿ, ಹಳ್ಳಿಗಳಿಂದ ಪಟ್ಟಣಗಳಿಗಾಗುತ್ತಿರುವ ಜನಗಳ ವಲಸೆಯನ್ನು ತಡೆಗಟ್ಟಲು ಪಟ್ಟಣಗಳ ಸಿರಿಯನ್ನು ಹಳ್ಳಿಗಳಿಗೂ ಹರಡಬೇಕೇಂದರು. ಇವರಾದಮೇಲೆ ಶ್ರೀಮತಿ ಆಲೆಕ್ಸ್ ರೋಟಾಸ್ ರವರು, ತಮ್ಮ ಭಾವಿ ಅಳಿಯರಾದ ಡೇವಿಡ್ ಲಾರ್ಡ್ ರವರ ಕೊಡಗಿನ ದಸ್ತೂರು ಕಾಡಿನಲ್ಲಿ ಆಕಸ್ಮಿಕ ಮರಣದ ನಂತರ ತಮ್ಮ ಮಗಳಾದ ಲೀನ ಲಿಯಂಬಿಯು ಕರ್ನಾಟಕದ ಮಡಿಕೇರಿಗೆ ತನ್ನ ಏಕೈಕ ಪರಿಶ್ರಮದಿಂದ ಒಂದು ಆಂಬುಲೆನ್ಸನ್ನು ಅದೇ ದಿನ ಕೊಡುವವರಿದ್ದಾರೆಂದರು.
ಕನ್ನಡಬಳಗ ಯುಕೆಯ ಕಾರ್ಯದರ್ಶಿಗಳಾದ ಡಾಕ್ಟರ್ ಆನಂದ ನಾಡಿಗ್ ರವರು ವಂದನಾರ್ಪಣೆ ಮಾಡಿದರು. ಅದಾದನಂತರ ಸಭಿಕರೆಲ್ಲಾ ಭಾರತದ ರಾಷ್ಟ್ರಗೀತೆಯನ್ನು ಹಾಡಿದನಂತರ ಭಾರತದ ಸ್ವಾತಂತ್ರ್ಯದಿನಾಚರಣೆಯ ಭಾಗವು ಮುಕ್ತಾಯವಾಯಿತು. ಆ ನಂತರ ಕನ್ನಡಬಳಗದ ಅಧ್ಯಕ್ಷೆಯರಾದ ಡಾ. ಭಾನುಮತಿಯವರು ಮತ್ತು ಬಳಗದ ಕಾರ್ಯಕಾರೀ ಸದಸ್ಯರಾದ ರಾಮಮೂರ್ತಿ ಯವರು, ಕನ್ನಡಬಳಗವು ಹಮ್ಮಿಕೊಳ್ಳುತ್ತಿರುವ ಮುಂದಿನವರ್ಷದ ಬಳಗದ ರಜತ ಮಹೋತ್ಸವದ ಬಗ್ಗೆ ಮಾತಾಡಿದರು.
ಕನ್ನಡದ ಹಾಸ್ಯ ಮಾಸಪತ್ರಿಕೆ "ಅಪರಂಜಿ"ಯ ಉತ್ಪಾದಕರಾದ ಶಿವಕುಮಾರ್ ರವರು ತಮ್ಮ ತಂದೆಯವರಾದ ಡಾ.ಶಿವರಾಮ್ ರವರು ನಡೆಸುತಿದ್ದ "ಕೊರವಂಜಿ" ಮಾಸಪತ್ರಿಕೆಯ ವಿಚಾರವಾಗಿ ಮಾತಾಡಿ "ಕೊರವಂಜಿ"ನಂತರ ಉದಯಿಸಿದ "ಅಪರಂಜಿ" ಪತ್ರಿಕೆಯ ಬಗ್ಗೆ ವಿವರಿಸಿದರು. ಆ ಎರಡೂ ಹಾಸ್ಯ ಪತ್ರಿಕೆಗಳಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರಗಳನ್ನು ಪರದೆಯಮೇಲೆ ಪ್ರದರ್ಶಿಸಿ ಸಭಿಕರನೆಲ್ಲಾ ನಗೆಯಲ್ಲಿ ಮುಳುಗಿಸಿದರು.
ಆನಂತರ ದೀಪಾವಳಿಯ ಕಾರ್ಯಕ್ರಮವು ಲಕ್ಷ್ಮೀಪೂಜೆಯೊಂದಿಗೆ ಪ್ರಾರಂಭವಾಯಿತು. ಅದೇಸಮಯದಲ್ಲಿ ಭಾರತೀಯ ವಿದ್ಯಾಭವನದ ಮುಖ್ಯಾದಧಿಕಾರಿಗಳಾದ ಡಾಕ್ಟರ್ ನಂದಕುಮಾರ ಅವರ ವಿರಚಿತ ಸ್ವಾಗತಗೀತೆಯನ್ನು ನವಯುವ ಕನ್ನಡ ಕನ್ನಡತಿಯರು ಸುಶ್ರಾವ್ಯವಾಗಿ ಹಾಡಿದರು. ರೂಪಸಿ ಭಜನೆಹಟ್ಟಿಯವರಿಂದ ನಾಟ್ಯಾಭಿನಯದೊಂದಿಗೆ ಆರಂಭಿಸಿ ಕುಮಾರ ಅಭಿ ಮತ್ತು ನಾಡಿಗರ್ ನುಡಿಸಿದ ಕೀ ಬೋರ್ಡ್ ನಂತರ ಆರುಣ್ ಮತ್ತು ಸರಿತಾ ರವರ ಬಾಲಿವುಡ್ ನಾಟ್ಯದೊಂದಿಗೆ ಕಾರ್ಯಕ್ರಮಗಳು ಒಂದಾದರೊಂದರಮೇಲೆ ಪ್ರವಾಹ ರೂಪದಲ್ಲಿ ಹರಿದವು.
ಆಂಗ್ಲನಾಡಿನ "ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕಿ" ಎಂದು ಹೆಸರುವಾಸಿಯಾದ ವಿಜೇಂದ್ರ ಮತ್ತು ಶ್ರೀಮತಿ ಶ್ರೀದೇವಿಯವರು ತಮ್ಮ ಮಧುರ ಕಂಠದಿಂದ ಸಭಿಕರನ್ನು ಆನಂದ ಗೊಳಿಸಿದರು. ಡಾಕ್ಟರ್ ರಾಜ್ ಕುಮಾರ್ ರವರ ಹಳೆಯ ಸಂಗೀತಗಳನ್ನುಹಾಡಿ ಕನ್ನಡಬಳಗದ ಅನೇಕ ಹಿರಿಯ ಸದಸ್ಯರುಗಳಿಗೆ ಬಹು ಆನಂದ ತಂದರು.
ಈ ದೀಪಾವಳಿಹಬ್ಬದ ಮುಖ್ಯ ಆಕರ್ಷಣೆಯಾದ "ಧರಣಿಮಂಡಲ" ಭಾವಪದ್ಯವನ್ನು ರೂಪಸಿಭಜನೆಹಟ್ಟಿ ಮತ್ತು ಸಂಗಡಿಗರು ಅಭಿನಯಿಸಿ, ಎಲ್ಲಾಸಭಿಕರ ಕಣ್ಣುಗಳಿಂದ ಕಣ್ಣೀರಿನ ಹೊಳೆಯನ್ನೇ ಹರಿಸಿದರು. ಆದುದರಿಂದ ಇನ್ನೂ ಥೇಮ್ಸ್ ನದಿಯು ಕಣ್ಣೀರಿನ ಪ್ರವಾಹದಿಂದ ಉಕ್ಕಿಹರಿಯುತ್ತಿದೆ ಎಂದು ಹೇಳಿದರೆ ಅದೇನೂ ಉತ್ಪ್ರೇಕ್ಷೆಯಾಗಿ ತೋರುವುದಿಲ್ಲ. ಇದಾದಮೇಲೆ "ಗಂಡ್ಸಲ್ವೇ ಗಂಡ್ಸು" ಎಂಬ ನಾಟಕವನ್ನು ಆನಂದ್ ಮೂರ್ತಿ ಸಂಗಡಿಗರು ಅಭಿನಯಿಸಿದರು.
ಬೆಂಗಳೂರಿನ ಸಮರ್ಥನ ಸಂಸ್ಥೆಯ ಸದಸ್ಯರುಗಳಿಂದ ಸಂಗೀತವಾದಮೇಲೆ, ವಿಜೇಂದ್ರ ಮತ್ತು ಶ್ರೀದೇವಿಯವರಿಂದ ಕನ್ನಡ, ಹಿಂದಿ ಡಿಸ್ಕೊಹಾಡುಗಳೊಂದಿಗೆ ಕಾರ್ಯಕ್ರಮವು ರಾತ್ರಿ ಹತ್ತು ಘಂಟೆಗೆ ಮುಕ್ತಾಯವಾಯಿತು. ಏನೇ ಆದರೂ ಎಲ್ಲರ ಮನಸ್ಸಿನಲ್ಲಿ ಧರಣಿಮಂಡಲದ ಸಾಲುಗಳು ಅಚ್ಚಳಿಯದ ಭಾವಮುದ್ರೆಯನ್ನು ಒತ್ತಿದ್ದು ಅವಿಸ್ಮರಣೀಯ.
ಕಾರ್ಯಕ್ರಮದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ















