ಅಮೆರಿಕಾದ "ಬೆಂಗಳೂರಿನಲ್ಲಿ" ಕನ್ನಡಚಿತ್ರಗಳ ಫ್ಲಾಪ್ ಶೊ
ಕನ್ನಡ ಕೂಟಗಳು ಕನ್ನಡ ಚಿತ್ರ ಪ್ರದರ್ಶಿಸಲು ನಾ ಮುಂದೆ ತಾಮುಂದೆ ಎಂದವು. ಕಳೆದ ಎರಡು ತಿಂಗಳಲ್ಲಿ ಅಮೆರಿಕದಲ್ಲಿ 5ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಬಿಡುಗಡೆ ಆಗಿದೆ. ಆದರೆ ಈ ಬಾರಿ ಚಿತ್ರಗಳಿಗೆ ಸಿಕ್ಕ ಪ್ರತಿಕ್ರಿಯೆ ಒಂದೊಂದು ಊರಿನಲ್ಲಿ ಒಂದೊಂದು ತರಹ. ಅಮೆರಿಕೆಯ ಅಮೆರಿಕಾದ ಬೆಂಗಳೂರೆಂದೇ ಬಣ್ಣಿಸಲಾಗುವ San Jose ಪ್ರದೇಶದಲ್ಲಿ ಮುಂಗಾರು ಮಳೆಯೊಂದನ್ನು ಬಿಟ್ಟು ಈ 5 ಚಿತ್ರಗಳು ಢುಂಕಿ ಹೊಡೆದಿವೆ.
"ಹುಡುಗಾಟ" ಪ್ರೇಕ್ಷಕರಿಗಾಗಿ ಹುಡುಕಾಡುವ ಪರಿಸ್ಥಿತಿಗೆ ಬಂದಿತ್ತು. ತಮ್ಮ ಅಭಿಮಾನಿಗಳ ಮಹಾಪೂರವೇ ಇರುವ ಟಿಎನ್ ಸೀತಾರಾಮ್ರವರ "ಮೀರಾ ಮಾಧವ ರಾಘವ" ಚಿತ್ರ ನಿರೀಕ್ಷೆಯ ಸಮೀಪವೂ ತಲುಪಲಿಲ್ಲ. ಅಮೆರಿಕಾ ಅಮೆರಿಕಾ ಚಿತ್ರದ ನಂತರ ನಾಗತಿಹಳ್ಳಿ ಅವರ ಚಿತ್ರಗಳೂ ಎಂದೂ ಈ ಸಿಲಿಕಾನ್ ಕಣಿವೆಯಲ್ಲಿ ಮುಗ್ಗರಿಸಿರಲಿಲ್ಲ. ಅಮೆರಿಕೆಯ ಇತರ ರಾಜ್ಯಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದ "ಮಾತಾಡ್ ಮಾತಾಡು ಮಲ್ಲಿಗೆ" ಈ ಕಣಿವೆಯಲ್ಲಿ ಉಸಿರೆತ್ತಲಿಲ್ಲ.
ರಮೇಶ್ ಅವರು ತಮ್ಮ ಪ್ರೌಢ ಅಭಿನಯದಿಂದ ಹಾಗೂ "ರಾಮ ಭಾಮ ಶಾಮ" ಚಿತ್ರದ ನಂತರವಂತೂ ಅಮೆರಿಕನ್ನಡಿಗರ ನಾಡಿಯನ್ನು ಬಲ್ಲ ನಟ ನಿರ್ದೇಶಕನೆಂದೇ ಹೆಸರು ಮಾಡಿದ್ದಾರೆ. ಅಮೆರಿಕನ್ನಡಿಗರಲ್ಲಿ ತಮ್ಮದೇ ಆದ ಒಂದು ಛಾಪವನ್ನು ಒತ್ತಿದ್ದಾರೆ. ಹೀಗಾಗಿಯೂ ಸಹ ಸ್ಯಾನ್ ಹೊಸೆಯಲ್ಲಿ ಅವರ ಇತ್ತೀಚಿನ ಹಾಸ್ಯ ಚಿತ್ರ "ಸತ್ಯವಾನ್ ಸಾವಿತ್ರಿ" ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ವಿಫಲಗೊಂಡಿತು. ಆಶ್ಚರ್ಯವೆಂದರೆ ಲಾಸ್ ಏಂಜಲೆಸ್, ಅಟ್ಲಾಂಟಾ, ನ್ಯೂ ಜೆರ್ಸಿ, ದಲ್ಲಾಸ್ ರಾಜ್ಯಗಳಲ್ಲಿ ಈ 5 ಹೊಸ ಚಿತ್ರಗಳು ಜಯಭೇರಿ ಬಾರಿಸಿವೆ. ಎಲ್ಲಾ ಸೆಂಟರ್ಗಳಲ್ಲಿ ಈ ಚಿತ್ರಗಳು ಹೆಚ್ಚೂಕಡಿಮೆ ತುಂಬಿದ ಚಿತ್ರಮಂದಿರಗಳಲ್ಲೇ ಓಡಿತು ಎನ್ನಬಹುದು.
ಕನ್ನಡ ಚಿತ್ರಗಳಿಗೆ ಅಮೆರಿಕೆಗೆ ಚಿತ್ರ ತರಿಸುವ ಖರ್ಚು, ಒಂದು ಹೊಸ ಪ್ರಿಂಟ್ನ ಖರ್ಚು, ಸಬ್ ಟೈಟಲ್ (ಇದ್ದರೆ) ಅದರ ಖರ್ಚು ಹುಟ್ಟಬೇಕಾದರೆ, ಕಡೇ ಪಕ್ಷ ಸ್ಯಾನ್ ಹೊಸೆ ಸಿಲಿಕಾನ್ ವ್ಯಾಲಿಯ 500 ಜನ ನೋಡವಂತಾಗಬೇಕು. ನೋಡಲಿಲ್ಲವೆಂದರೆ ಅಮೆರಿಕೆಗೆ ಕನ್ನಡ ಚಿತ್ರಗಳೇ ವಿರಳವಾಗುವ ಅಪಾಯವಿದೆ. ಯಾಕೆ ? ಸಿಲಿಕಾನ್ ವ್ಯಾಲಿಯ ಕನ್ನಡಿಗರಿಗೆ ಕನ್ನಡ ಚಿತ್ರಗಳು ಬೇಡಾಯಿತೆ?
ಸ್ಯಾನ್ ಹೊಸೆ ಉತ್ತರ ಕ್ಯಾಲಿಫೋರ್ನಿಯಾದ ಜನನಿಬಿಡ ನಗರ. ಇಲ್ಲಿ ಭಾರತೀಯರ ಪ್ರಾಬಲ್ಯ, ಮುಖ್ಯವಾಗಿ ಕನ್ನಡಿಗರ ಜನಸಾಂದ್ರತೆ ಹೆಚ್ಚು. ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಗೀತ ಮತ್ತು ಕರ್ನಾಟಕವನ್ನು ಪ್ರೀತಿಸುವ ಹತ್ತಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಈ ಭಾಗದ ಕನ್ನಡ ಕೂಟ ಲಾಗಾಯ್ತಿನಿಂದಲೂ ಚಲನಶೀಲವಾಗಿದ್ದು ಕನ್ನಡತನವನ್ನು ಎತ್ತಿಹಿಡಿಯುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಇಂಥ ಹಿರಿಮೆವುಳ್ಳ ಬೇ ಏರಿಯಾ ಕನ್ನಡಿಗರ ಆಡುಂಬೊಲ ಸ್ಯಾನ್ ಹೊಸೆ ಕನ್ನಡ ಚಿತ್ರಪ್ರಪಂಚದ ಮತ್ತೊಂದು ಬೆಂಗಳೂರು ಆಗದಿರಲಿ ಎನ್ನುವುದೇ ಕನ್ನಡ ಚಿತ್ರರಂಗದ ಆಶಯ.