•  

ಉತ್ತರ ಅಮೇರಿಕೆಯಲ್ಲೊಬ್ಬ ಬಾಲ ಪೀಲೆ?

ಗುರುವಾರ, ಏಪ್ರಿಲ್ 10, 2003, 5:30 [IST]
ಐದು ವರ್ಷಗಳ ಅವಧಿಯಲ್ಲಿ 50,000 ಕ್ಕಿಂತ ಕಮ್ಮಿ 'ಶಾಶ್ವತ ನಿವಾಸಿ" ವಲಸೆಗಾರರನ್ನು ಕಳುಹಿಸುವ ದೇಶಗಳ ಜನರಿಗೆ, ವಲಸೆಗಾರರ ದೇಶ ಅಮೇರಿಕಾ ಸಂಯುಕ್ತ ಸಂಸ್ಥಾನ ಪ್ರತಿವರ್ಷವೂ ಒಟ್ಟು 50,000 ವೀಸಾಗಳನ್ನು 'ವೈವಿಧ್ಯ ವಲಸಿಗರು" ಕಾರ್ಯಕ್ರಮದಡಿಯಲ್ಲಿ ಕಂಪ್ಯೂಟರ್‌ ಲಾಟರಿ ಎತ್ತುವುದರ ಮುಖಾಂತರ ನೀಡುತ್ತದೆ. 1997ರಲ್ಲಿ ಈ ಲಾಟರಿ ಗೆದ್ದ ಆಫ್ರಿಕಾ ಖಂಡದ ಘಾನಾ ದೇಶದ ಎರಡು ಮಕ್ಕಳ ತಾಯಿ ಎಮಿಲಿಯ. ಹೀಗೆ ಆರು ವರ್ಷಗಳ ಹಿಂದೆ ತನ್ನ ಎಂಟು ವರ್ಷದ ಮಗ ಫ್ರೆಡ್ಡಿ, ಅವನ ತಮ್ಮ ಮತ್ತು ತನ್ನ ಗಂಡನ ಜೊತೆಗೆ ಅಮೇರಿಕೆಗೆ ಬಂದವಳು.

'ನೀನು ಸಮರ್ಥವಾಗಿದ್ದರೆ ನಿನಗೆ ವಯಸ್ಸಾದಂತೆ"; 'If you are good enough, you are old enough". 'ನಿನಗೆ ಮಾಡಲು ಸಿದ್ಧನಾಗಿದ್ದೇನೆ ಎನಿಸಿದರೆ, ಹೇ, ಒಂದು ಕೈ ನೋಡು!". ಇವು ಈಗ ಹದಿನಾಲ್ಕು ವರ್ಷದ ಫ್ರೆಡ್ಡಿ ಅಡು ಹೇಳುವ ನುಡಿಮುತ್ತುಗಳು. ಇದು ಅವನ ಬಗೆಗೆ CNN ಹೇಳುವ ಮಾತುಗಳು; 'ಟೀನೇಜ್‌ ಕಾಲ್ಚೆಂಡು ರೋಮಾಂಚನ ಫ್ರೆಡ್ಡಿ ಅಡು ಮೇಜರ್‌ ಲೀಗ್‌ ಫುಟ್ಬಾಲ್‌ನ ಡಿ.ಸಿ. ಯುನೈಟೆಡ್‌ ತಂಡದೊಡನೆ ಬಹುವರ್ಷದ ಗುತ್ತಿಗೆಗೆ ಸಹಿ ಮಾಡುವುದರ ಮೂಲಕ ಈ ವಾರ ವೃತ್ತಿಪರ ಆಟಗಾರನಾದ. ಈ ಗುತ್ತಿಗೆ ಬಹುಶಃ ಈತನನ್ನು ಲೀಗ್‌ನ ಅತಿ ಬೆಲೆಯ ಆಟಗಾರನನ್ನಾಗಿಸಿದೆ. ಹದಿನಾಲ್ಕು ವರುಷದ ಅಡು ಘಾನಾದಿಂದ ಸಂಯುಕ್ತ ಸಂಸ್ಥಾನಕ್ಕೆ 1997ರಲ್ಲಿ ವಲಸೆ ಬಂದವನು. ಇವನನ್ನು ಜಾಗತಿಕ ಫುಟ್ಬಾಲ್‌ನ ಅತಿ ಭರವಸೆಯ ಯುವ ಆಟಗಾರನೆಂದು ಪರಿಗಣಿಸಲಾಗಿದೆ." ಫುಟ್ಬಾಲ್‌ ಜಗತ್ತಿನಲ್ಲಿ ವಾರದಿಂದ ಇವನದೇ ಸುದ್ದಿ.

Freddy, will he be another pele?ತನ್ನ ವೃತ್ತಿಪರ ಆಟವನ್ನು ತನ್ನ ಕುಟುಂಬ ವಾಸಿಸುತ್ತಿರುವ ವಾಷಿಂಗ್ಟನ್‌ ಡಿ.ಸಿ. ಭಾಗದ ಡಿ.ಸಿ.ಯುನೈಟೆಡ್‌ ತಂಡಕ್ಕೆ ಆಡುವುದರ ಮೂಲಕ ಪ್ರಾರಂಭಿಸಲಿರುವ ಫ್ರೆಡ್ಡಿ 2006ರ ವಿಶ್ವಕಪ್‌ನಲ್ಲಿ ಅಮೇರಿಕೆಯನ್ನು ಪ್ರತಿನಿಧಿಸುವ ಬಗೆಗೆ ಆಶಾವಾದಿಯಾಗಿದ್ದಾನೆ. 'ನಾನು ವಿಶ್ವಕಪ್‌ನಲ್ಲಿ ಆಡುವ ಅವಕಾಶವಿದೆ ಎಂದು ನನಗೆ ಎನ್ನಿಸುತ್ತದೆ" ಎನ್ನುವ ಈ ಹುಡುಗನ ಹದಿನೇಳನೆ ವರ್ಷದ ಜನ್ಮದಿನದ ವಾರದ ನಂತರ ಆ ವಿಶ್ವಕಪ್‌ ಪಂದ್ಯಾವಳಿ ಪ್ರಾರಂಭವಾಗುತ್ತದೆ.

ದಕ್ಷಿಣ ಅಮೇರಿಕಾ ಖಂಡದ ಬ್ರೆಜಿಲ್‌ ದೇಶದ ಪೀಲೆ ವಿಶ್ವಕಪ್‌ ಫುಟ್ಬಾಲ್‌ನಲ್ಲಿ ಪ್ರಥಮ ಬಾರಿ 1958ರಲ್ಲಿ ಆಡಲು ಇಳಿದಾಗ ಆತನ ವಯಸ್ಸೂ 17. ಸೆಮಿಪೈನಲ್‌ನಲ್ಲಿ ಫ್ರಾನ್ಸ್‌ ವಿರುದ್ದ 3 ಗೋಲು ಮತ್ತು ಫೈನಲ್‌ ಪಂದ್ಯದಲ್ಲಿ ಸ್ವೀಡನ್‌ ವಿರುದ್ದ 2 ಗೋಲು ಒದ್ದು ಬ್ರೆಜಿಲ್‌ ಚಾಂಪಿಯನ್‌ ಪಟ್ಟ ಪಡೆಯಲು ಕಾರಣನಾದ. ಅಂದು ಆತನ ಸಹ ಆಟಗಾರರು ಆತನನ್ನು ಮೈದಾನದಿಂದ ಹೆಗಲ ಮೇಲೆ ಹೊತ್ತು ನಡೆದಾಗ ಆ ಯುವಕನ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಎದುರಾಳಿ ಸ್ವೀಡನ್‌ ತಂಡದ ಆಟಗಾರ ಪಾರ್ಲಿಂಗ್‌ ನಂತರ ಹೇಳಿದ್ದು; 'ಐದನೇ ಗೋಲಿನ ನಂತರ ಸ್ವತಃ ಶ್ಲಾಘಿಸುವ ಮನಸ್ಸಾಗಿತ್ತು". ಅದಾದ ನಂತರ, ಇಲ್ಲಿಯ ತನಕದ ಇತಿಹಾಸದಲ್ಲಿ ಫುಟ್ಬಾಲ್‌ ಜಗತ್ತು ಕಂಡ ಶ್ರೇಷ್ಠ ಆಟಗಾರನಾಗಿ ಪೀಲೆ ದಾಖಲಾಗಿದ್ದಾನೆ. ಮರಡೊನ, ಬ್ಯಾಜಿಯಾ, ರೊನಾಲ್ಡೊ, ಬೆಕ್ಕಾಮ್‌ ಮುಂತಾದ ಶ್ರೇಷ್ಠರು ಬಂದು ಹೋಗುತ್ತಿದ್ದರೂ ಪೀಲೆಯ ಸಮಕ್ಕೆ ಇನ್ನೂ ಯಾರೂ ಏರಿಲ್ಲ.

ಇದನ್ನೆಲ್ಲ ನೋಡಿದರೆ ಫ್ರೆಡ್ಡಿಯ ಕನಸೇನೂ ಇಲ್ಲಿಯ ತನಕ ಯಾರೂ ಸಾಧಿಸದೆ ಇರುವುದೇನೂ ಅಲ್ಲ. ನಿನ್ನ ಯಾವ ವಯಸ್ಸಿನಲ್ಲಿ ನೀನು ವಿಶೇಷ ಆಟಗಾರನೆಂದು ನಿನಗನ್ನಿಸಿತು ಎನ್ನುವ ಪ್ರಶ್ನೆಗೆ ಅವನು ಹೇಳುವುದು 'ಬಹುಶಃ ನಾನು ಆಗಲೇ 9-10 ವರ್ಷದ ಹುಡುಗರೊಡನೆ ಆಡುತ್ತಿದ್ದೆ ಮತ್ತು ಆಗಲೂ ನನ್ನ ಸ್ಥಾನ ನನಗಿತ್ತು" ಎನ್ನುತ್ತಾನೆ. ಹಾಗೆಯೇ 'ಪ್ರತಿ ಪಂದ್ಯದಲ್ಲಿಯೂ ಹೊರ ಬಂದು ಹೊಸ ಪಂದ್ಯ ಎಂದು ಆಡಬೇಕು, ಯಾವುದೇ ಪಂದ್ಯಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು, ಹಾಗೆಯೇ ಭಯವೂ ಇರಬಾರದು. ಹೋಗಬೇಕು, ಆಡಬೇಕು, ಖುಷಿ ಪಡಬೇಕು" ಎಂದೂ ಹೇಳುತ್ತಾನೆ.

ಈತನ ಮೆಚ್ಚಿನ ಆಟಗಾರ ಪೀಲೆ. ಆತನಲ್ಲಿ ಏನು ಮೆಚ್ಚಿದೆ ಎಂದರೆ, 'ಆತನ ವೇಗ, ಗೋಲು ಗಳಿಸುವ ತಾಕತ್ತು, ಆತನ ಕೌಶಲ, ಆತನ ಬಗ್ಗೆ ಪ್ರತಿಯಾಂದೂ; ಆತ ಅತಿ ಶ್ರೇಷ್ಠ ಆಟಗಾರ" ಎನ್ನುತ್ತಾನೆ. ನಿಮ್ಮಿಬ್ಬರಲ್ಲೇನಾದರೂ ಸಾಮ್ಯತೆಗಳು ಕಾಣಿಸುತ್ತವೆಯೇ ಅಂತ ಕೇಳಿದರೆ, 'ಗೊತ್ತಿಲ್ಲ ; ಬಹುಶಃ ವೇಗ, ನಾವು ಕಾಣಿಸುವ ರೀತಿ ಇರಬಹುದು" ಎನ್ನುತ್ತಾನೆ ಆ ಕಪ್ಪು ಬಣ್ಣದ ಮಾಂತ್ರಿಕನನ್ನು ಮೆಚ್ಚುವ ಮಾಂತ್ರಿಕನಾಗುತ್ತಿರುವ ಈ ಕಪ್ಪು ಬಣ್ಣದ ಹುಡುಗ.

ಮಾರ್ಚ್‌ 2003ರಲ್ಲಿ , 17 ವರ್ಷದೊಳಗಿನವರ ರಾಷ್ಟ್ರಿಯ ತಂಡದಲ್ಲಿ ತನ್ನ ಪ್ರಥಮ ಅಂತರ್ರಾಷ್ಟ್ರೀಯ ಪಂದ್ಯವನ್ನು ಆಡಲಿಳಿದ ಫ್ರೆಡ್ಡಿ, ಆಗಸ್ಟ್‌ನಲ್ಲಿ ನಡೆದ FIFA Under-17 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಮೇರಿಕ, ಕೊರಿಯಾ ವಿರುದ್ಧ ಗೆದ್ದ 6-1 ಗೋಲುಗಳಲ್ಲಿ ಮೂರು ಗೋಲುಗಳನ್ನು ಒದ್ದಿದ್ದ. ಇದಾದ ಐದು ದಿನಗಳ ನಂತರದ ಸಿಯೆರ್ರಾ ಲಿಯೋನ್‌ ವಿರುದ್ಧದ 2-1 ಗೆಲುವಿನಲ್ಲಿ ವಿಜಯ ತಂದಿತ್ತ ಎರಡನೇ ಗೋಲೂ ಇವನದೇ ಆಗಿತ್ತು. ಆ ಕೂಟದಲ್ಲಿ ಅಮೇರಿಕಾ ಬ್ರೆಜಿಲ್‌ಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿತು. ಇದಕ್ಕೂ ಮುಂಚೆ ಫೆಬ್ರವರಿಯಲ್ಲಿ ಅಮೇರಿಕಾದ ನಾಗರೀಕತ್ವ ಪಡೆದ ಮತ್ತು ಮೇ ತಿಂಗಳಿನಲ್ಲಿ ವಿಶ್ವ ಪ್ರಸಿದ್ಧ ನೈಕಿ ಕಂಪನಿಯಾಂದಿಗೆ 1 ದಶಲಕ್ಷ ಡಾಲರ್‌ನ ಒಪ್ಪಂದಕ್ಕೆ ಸಹಿ ಹಾಕಿದ್ದ. ಇವನಲ್ಲಿ ಅಮೇರಿಕಾ ಫುಟ್ಬಾಲ್‌ನಲ್ಲಿಯೂ ತನ್ನ ಸಾರ್ವಭೌಮತೆಯನ್ನು ಮತ್ತು ತನ್ನ ದೇಶದಲ್ಲಿ ಅದನ್ನು ಜನಪ್ರಿಯಗೊಳಿಸುವ ಆಸೆ ಬಲಿಯುತ್ತಿದೆ. ಅಮೇರಿಕಾದಲ್ಲಿ ಹೆಚ್ಚುತ್ತಿರುವ ಲ್ಯಾಟಿನ್‌ ಮೂಲದ ಜನರ ಮೆಚ್ಚಿನ ಆಟ ಫುಟ್ಬಾಲ್‌.

ಫ್ರೆಡ್ಡಿಯನ್ನು ಕುರಿತು 'ಆತ ಒಬ್ಬ graceful ಆಟಗಾರ. ಅವನ ಸ್ಪರ್ಶ ಮತ್ತು ದೃಷ್ಟಿ ವಯಸ್ಸಿಗೆ ಮೀರಿದ್ದು" ಎನ್ನುವ ಅಮೇರಿಕಾದ ರಾಷ್ಟ್ರೀಯ ತಂಡದ ಕೋಚ್‌ ಬ್ರೂಸ್‌ ಅರೇನ 'ಈ ದೇಶದಲ್ಲಿ ಮತ್ತು ಪ್ರಪಂಚದ ಬೇರೆ ಕಡೆ, ಎಲ್ಲಾ ತರಹದ ಕ್ರೀಡೆಗಳಲ್ಲಿಯೂ ಹಿರಿಯ ಆಟಗಾರರಿಂದ ಸಣ್ಣ ವಯಸ್ಸಿನಲ್ಲಿಯೇ ಗೌರವಿಸಲ್ಪಡುವ ಆದರೆ (ಕಾಲಾಂತರದಲ್ಲಿ) ನಿರೀಕ್ಷೆಯನ್ನು ಮುಟ್ಟದ ಯುವ ಆಟಗಾರರಿದ್ದಾರೆ" ಎಂದೂ ಹೇಳುತ್ತಾನೆ. ಇಂದಿನ ಗಣಿಕೆಯ ಆಧಾರದ ಮೇಲೆ ಭವಿಷ್ಯ ಹೀಗೇ ಎಂದು ಸಾರುವುದೂ ಕಷ್ಟವೆ. ಬಹಳಷ್ಟು ಸಾರಿ ಜೀವನದಲ್ಲಿ, ಪ್ರಪಂಚದಲ್ಲಿ ಘಟಿಸುವಂತೆ ಫ್ರೆಡ್ಡಿಯೂ 'ಏಕ ಬಾರಿಯ ಅದ್ಭುತ" ವಾಗದೆ ಮತ್ತೊಬ್ಬ ಪೀಲೆಯಾಗಲಿ ಎಂದಷ್ಟೇ ಹಾರೈಸುವ. ಇದು ಸಾಧ್ಯವಾಗಬಹುದೇನೋ ಎಂದುಕೊಳ್ಳುವುದಕ್ಕೆ ನಾವು ದೂರದ ಬ್ರೆಜಿಲ್‌ನ ಪೀಲೆಯ ತನಕ ಹೋಗುವ ಅವಶ್ಯಕತೆಯೂ ಇಲ್ಲ. ನಮ್ಮಲ್ಲಿಯೇ ಹದಿನಾರು ವಯಸ್ಸಿಗೇ ಅಂತರ್ರಾಷ್ಟ್ರೀಯ ಕ್ರಿಕೆಟ್‌ ಆಡಲು ಇಳಿದ ತೆಂಡೂಲ್ಕರ್‌ ಇಲ್ಲವೆ?

ಇವೆಲ್ಲವುಗಳ ಮಧ್ಯೆ ಭಾರತದಲ್ಲಿನ ಕ್ರೀಡೆಗಳ ಸ್ಥಿತಿ ಶೋಚನೀಯ. ನವೆಂಬರ್‌ 19, 2003ರ ಹೊಸ ಪಟ್ಟಿಯ ಪ್ರಕಾರ ವಿಶ್ವ ಫುಟ್ಬಾಲ್‌ನಲ್ಲಿ ಭಾರತದ ಸ್ಥಾನ 204 ಸ್ಥಾನಗಳಲ್ಲಿ 128ನೆಯದು. ಅಮೇರಿಕೆಯಂತಹ ದೇಶ ಲಾಟರಿಯೋ ಮತ್ತೊಂದೋ ನೀಡಿ, ತಿಳಿದೋ, ತಿಳಿಯದೆಯೋ ಎಲ್ಲಾ ರಂಗಗಳಲ್ಲಿಯೂ ಪ್ರಪಂಚದಲ್ಲಿನ ಶ್ರೇಷ್ಠರನ್ನು ತನ್ನತ್ತ ಸೆಳೆಯುತ್ತಿದೆ. ನಾವು ಕ್ರಿಕೆಟ್‌ ಎಂಬ ಒಂದೇ ಆಟದಲ್ಲಿ ದೇಶದ ಚೈತನ್ಯ ಮತ್ತು ಆಶಾವಾದವನ್ನು ಅರಸುತ್ತ ಸಾಗುತ್ತಿದ್ದೇವೆ. ಒಬ್ಬ ಕಪಿಲ್‌ ದೇವ್‌ಗೆ, ಒಬ್ಬ ಗಾಂಧಿಗೆ, ಒಬ್ಬ ಠಾಗೂರ್‌ಗೆ, ಒಬ್ಬ ರಾಮನ್‌ಗೆ, ಒಬ್ಬ ಟಾಟಾಗೆ, ಒಬ್ಬ ಧ್ಯಾನ್‌ ಸಿಂಗ್‌ಗೆ ತೃಪ್ತಿಪಟ್ಟುಕೊಳ್ಳುತ್ತ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ. ನೆರೆ ಮನೆಯವನ ಎರಡೂ ಕಣ್ಣೂ ಹೋಗಲಿ ಎಂಬ ವಿಲಕ್ಷಣ ತೃಪ್ತಿಯಲ್ಲಿದ್ದೇವೆ. ನಮಗೆ ಬೇಕಾಗಿರುವುದು ಒಬ್ಬಿಬ್ಬರಲ್ಲ, ಬದಲಿಗೆ ಪ್ರತಿ ರಂಗದಲ್ಲಿಯೂ ಸಾವಿರಾರು ಗಾಂಧಿ-ರಾಮನ್‌-ಮೂರ್ತಿ-ಠಾಗೂರ್‌-ಧ್ಯಾನ್‌ಗಳು ಎಂದು ತಿಳಿದುಕೊಳ್ಳದೆ ಹೋಗುತ್ತಿದ್ದೇವೆ.

ಆದರ್ಶಗಳನ್ನು ಸಿನೆಮಾಗಳಲ್ಲಿಯೂ, ನಾಯಕತ್ವವನ್ನು ನಟರಲ್ಲಿಯೂ, ತೃಪ್ತಿಯನ್ನು ಕ್ರಿಕೆಟ್‌ನಲ್ಲಿಯೂ ಕಾಣುತ್ತ ಮೂಲಭೂತ ಸಮಸ್ಯೆಗಳಿಗೆ ಒತ್ತು ನೀಡದೆ ಮೂಲಭೂತವಾದ ಬೆಳೆಸುತ್ತ ವೈಜ್ಞಾನಿಕತೆಯಿಲ್ಲದೆ ಧರ್ಮ ಕರ್ಮಗಳಲ್ಲಿ ಮುಳುಗೇಳುತ್ತಿದ್ದೇವೆ. ಬೆಂಗಳೂರಿನ ಸುಸಜ್ಜಿತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಷಕ್ಕೊಂದು ಆಟ ಆಡಿಸುತ್ತ, ತಂಡವನ್ನು ದೇಶದಾಚೆ ಕಳುಹಿಸಿ ಇಲ್ಲಿನ ಜನರಿಗೆ ಟಿ.ವಿ. ನೋಡಿಸುತ್ತ, ಸ್ಥಳೀಯ ಪಂದ್ಯಗಳ ಕತ್ತು ಹಿಸುಕುತ್ತ, ಇಲ್ಲಿ ಆಡಿಸುವ ಒಂದು ಆಟ ಎಷ್ಟು ಉದ್ಯೋಗ, ನೆಮ್ಮದಿ, ಉಪಕಸುಬುಗಳನ್ನು ಸೃಷ್ಟಿಸುತ್ತದೆ ಎಂಬ ಪರಿವೆಯಿಲ್ಲದೆ ದೂರದೃಷ್ಟಿಯಿಲ್ಲದ ಜೋಭದ್ರಗೇಡಿಗಳಡಿಯಲ್ಲಿ ಕ್ರೀಡೆ, ದೇಶ ಹಿಂದುಳಿಯುತ್ತಿದೆ. ಅಮೇರಿಕೆಯಲ್ಲಿ 60 ವರ್ಷಗಳ ಹಿಂದೆ ಮಹಾ ಆರ್ಥಿಕ ಮುಗ್ಗಟ್ಟು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಜನತೆ Seabiscuit ಎಂಬ ರೇಸ್‌ ಕುದುರೆಯಲ್ಲಿ ತನ್ನ ಚೈತನ್ಯವನ್ನು ಕಂಡು ಕೊಂಡಿತು. ಅಂತಹ ಮಾನಸಿಕ, ದೈಹಿಕ, ಆರ್ಥಿಕ ಚೈತನ್ಯ ಪ್ರತಿ ರಂಗದಲ್ಲಿಯೂ, ಕ್ರೀಡೆಯಲ್ಲಿಯೂ ಕಾಣೋಣ ಎಂದು ಆಶಿಸುತ್ತಾ, ಬಿಡದೆ ಪ್ರಯತ್ನಿಸುತ್ತಾ, ಕಲಿಯುತ್ತಾ ಸಾಣೆಗೊಡ್ಡಿಕೊಳ್ಳುವ ಜಾಯಮಾನ ನಮ್ಮದಾಗೋದು ಯಾವಾಗ?
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Royal Challengers Bangalore: 11 / 0, 1.4 Overs
1st Test , Lord's Cricket Ground, St John's Wood
West Indies: 140 / 4, 56.4 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article