•  

ಯುದ್ಧ ವ್ಯಾಪಾರಂ ದ್ರೋಹ ಚಿಂತನಂ

ಶನಿವಾರ, ಏಪ್ರಿಲ್ 12, 2003, 5:30 [IST]
Ravi Krishna Reddy ರವಿ ಕೃಷ್ಣಾರೆಡ್ಡಿ

'ಷಿಂಡ್ಲರ್ಸ್‌ ಲಿಸ್ಟ್‌" - ಪ್ರತಿಭಾವಂತ ನಿರ್ದೆಶಕ ಸ್ಟೀವನ್‌ ಸ್ಪೀಲ್ಬರ್ಗ್‌ನ ಯುದ್ಧ, ಹಿಂಸೆ, ಕ್ರೌರ್ಯ, ಕಾರುಣ್ಯದ ಚಿತ್ರಕಾವ್ಯ. ಇದರಲ್ಲಿ ಬರುವ ಷಿಂಡ್ಲರ್‌ ಎರಡನೆ ಮಹಾಯುದ್ಧದ ಸಮಯದಲ್ಲಿ ಪೊಲೆಂಡ್‌ನಲ್ಲಿ ಕಾನ್ಸಂಟ್ರೇಶನ್‌ ಕ್ಯಾಂಪ್‌ಗಳಲ್ಲಿ ಇರುತ್ತಿದ್ದ ಗಟ್ಟಿ ಮುಟ್ಟು ಯಹೂದಿಗಳನ್ನು ತನ್ನ ಯುದ್ಧ ಸಾಮಗ್ರಿ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸಕ್ಕಿಟ್ಟುಕೊಂಡು, ಜರ್ಮನಿಯ ಭ್ರಷ್ಟ ನಾಜಿ ಸೈನ್ಯಾಧಿಕಾರಿಗಳನ್ನು ಉಪಯೋಗಿಸಿಕೊಂಡು, ಸೈನ್ಯಕ್ಕೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಮಾರಿ ಸಾಕಷ್ಟು ದುಡ್ಡು ಮಾಡುತ್ತಾನೆ. ಹೀಗೆ ಯಶಸ್ವಿಯಾದ ಈತ ತನ್ನ ಹೆಂಡತಿಯನ್ನು ಒಂದು ಸಲ ಕೇಳುತ್ತಾನೆ, 'ನಾನು ಈ ಮೊದಲು ಮಾಡಿದ ಯಾವುದೇ ಉದ್ಯಮದಲ್ಲಿ ಎಲ್ಲಾ ಸರಿಯಾಗಿದ್ದರೂ ಯಶಸ್ವಿಯಾಗಲಿಲ್ಲ. ಈ ಸಲ ಹಾಗಾಗಲಿಲ್ಲ , ಕಾರಣ ಆಗ ಇದ್ದ ಕೊರತೆ ಈಗ ಇಲ್ಲ . ಏನದು ಗೊತ್ತೆ?" ಹೆಂಡತಿ ಹೇಳಿದ್ದು ಯಾವ ಸಾಮನ್ಯರೂ ಹೇಳಬಹುದಾದ ಉತ್ತರ; 'ಅದೃಷ್ಟ?".
'ಅಲ್ಲ. ಯುದ್ಧ" ಎನ್ನುತ್ತಾನೆ ಷಿಂಡ್ಲರ್‌ !

ಈಗ ಅಮೇರಿಕ ಇರಾಕ್‌ ಮೇಲೆ 'ಸರ್ವಾಧಿಕಾರದಿಂದ, ದಬ್ಬಾಳಿಕೆಯಿಂದ ವಿಮೋಚನೆ" ಎಂಬ ಹೆಸರಿಟ್ಟುಕೊಂಡು ದಾಳಿ ಮಾಡಿದೆ. ಅದು ಎಷ್ಟು ಸರಿ ಮತ್ತು ಈ ಯುದ್ಧದಿಂದ ಯಾವ ವ್ಯಾಪಾರಿಗಳಿಗೆ, ಬಂಡವಾಳಶಾಹಿಗಳಿಗೆ ಲಾಭ ಎಂದು ನೋಡಬೇಕಾದ ಸಂದರ್ಭವಿದು. ಕಾರಣ, ಅಮೇರಿಕ ನೀಡುತ್ತಿರುವ ಯುದ್ಧಕಾರಣ ಮಹಾ ನೈತಿಕ, ಆದರ್ಶಗಳಿಂದ ಕೂಡಿರುವುದು.

ವಿಷ ಸರ್ಪ ಕೊಲ್ಲುವ ಕಾರಣ ಕೊಟ್ಟು ಪಕ್ಕದ ಮನೆಗೆ ಬೆಂಕಿಯಿಟ್ಟು ಮೈ ಕಾಯಿಸಿಕೊಳ್ಳುವರ ಉಪಮೆ ಕಾಣಿಸಿದಾಗ, ಮತ್ತು ಅದು ಯುದ್ಧದಂತ ವಿನಾಶಕಾರಿ ವಿಧಾನದಿಂದ ಸಾಧಿಸುವ ಲಕ್ಷಣಗಳು ಕಂಡಾಗ ಮಾತ್ರ ಪ್ರಜ್ಞಾವಂತರು ಮೈ ಪರಚಿಕೊಳ್ಳಬೇಕಾಗುತ್ತದೆ. ಈಗ ನಮಗಿರುವ ಸಂದೇಹ, ದಾಖಲೆ, ಇತಿಹಾಸ ಇಂತಹ ಸಾಧ್ಯತೆಗಳನ್ನು ಬೆಟ್ಟು ಮಾಡಿ ತೋರಿಸುತ್ತಿದೆ.

ಹಿರಿಯ ಜಾರ್ಜ್‌ ಬುಷ್‌ ಕುವೈತ್‌ ನಿಂದ ಇರಾಕನ್ನು ಓಡಿಸಲು 1991 ರಲ್ಲಿ ಪ್ರಥಮ ಕೊಲ್ಲಿ ಯುದ್ಧ ಮಾಡಿದಾಗ ಈಗಿನ ಅಮೇರಿಕಾದ ಉಪಾಧ್ಯಕ್ಷನಾದ ಡಿಕ್‌ ಚೇನಿ ಅಮೇರಿಕಾದ ರಕ್ಷಣಾ ಸಚಿವ. ಕೇವಲ ನಾಲ್ಕೈದು ದಿನದಲ್ಲಿ ಮುಗಿದ ಆ ಯುದ್ಧದಲ್ಲಿ, ಕುವೈತಿನಿಂದ ಕಾಲ್ಕೀಳುವಾಗ ಸದ್ದಾಮನ ಸೇನೆ ಸುಮಾರು 700 ತೈಲಬಾವಿಗಳಿಗೆ ಬೆಂಕಿ ಇಡುವ ಮೂಲಕ- ಪರಿಸರಕ್ಕೆ, ಮಾನವ ಕೋಟಿಗೆ ಉಪಕರಿಸದೇ ಹೋಗಿತ್ತು . ಬೆಂಕಿ ಬಿದ್ದ ತೈಲಬಾವಿಗಳನ್ನು ನಂದಿಸಲು ಆಗ ಕಾಂಟ್ರಾಕ್ಟ್‌ ಪಡೆದ ಕಂಪನಿಗಳಲ್ಲಿ ಒಂದು ಹ್ಯಾಲ್ಲಿಬರ್ಟನ್‌. ಖಂಡಿತವಾಗಿಯೂ ಅದು ಲಾಭದಾಯಕ ಉದ್ದಿಮೆ. ಯುದ್ಧ ಗೆದ್ದರೂ ಆರ್ಥಿಕ ಪರಿಸ್ಥಿತಿಯ ಅನರ್ಥಗಳಿಗಾಗಿ ಬುಷ್‌ ಮರುಚುನಾವಣೆಯಲ್ಲಿ ಸೋತಿರು. ಬಿಲ್‌ ಕ್ಲಿಂಟನ್‌ ಎರಡು ಬಾರಿ ಆಡಳಿತ ನಡೆಸಿದ್ದು ಈಗ ಇತಿಹಾಸ. ಈ ಸಮಯದಲ್ಲಿ ಡಿಕ್‌ ಚೇನಿ 1995-2000ದ ವರೆಗೆ ಹ್ಯಾಲ್ಲಿಬರ್ಟನ್‌ ಕಂಪನಿಯ ಸಿ.ಇ.ಒ. (ಮುಖ್ಯ ಕಾರ್ಯ ನಿರ್ವಹಣಾಧಿಕಾರಿ).

ಕಿರಿಯ ಜಾರ್ಜ್‌ ಬುಷ್‌, ಚೇನಿಯನ್ನು 2000ದಲ್ಲಿ ತನ್ನ ಉಪಾದ್ಯಕ್ಷ ಅಭ್ಯರ್ಥಿಯಾಗಿ ಚುನಾವಣೆಗೆ ಆರಿಸಿಕೊಂಡಾಗ ಕೆಲಸ ಬಿಟ್ಟ ಚೇನಿಗೆ ಸಿಕ್ಕ ಬೋನಸ್‌ ಸುಮಾರು 1.5 ದಶಲಕ್ಷ ಡಾಲರ್‌, ಮತ್ತು ತನಗೆ ಕಂಪನಿ ಕೊಟ್ಟಿದ್ದ ಷೇರುಗಳನ್ನು ಮಾರಿ ಗಳಿಸಿದ್ದು 22 ದಶಲಕ್ಷ ಡಾಲರ್‌. ಇದೇನು ಋಣಸಂದಾಯವೆ? ಶ್ರೀಮಂತ ಅಮೇರಿಕನ್‌ ಲೆಕ್ಕಾಚಾರದಲ್ಲಿಯೂ ಇದೇನೂ ಸಣ್ಣ ಮೊತ್ತವಲ್ಲ.

ಈಗ ಎರಡನೆ ಕೊಲ್ಲಿ ಯುದ್ಧ ಪ್ರಗತಿಯಲ್ಲಿರುವಾಗಲೆ, ಅಮೇರಿಕ ಇರಾಕನ್ನು ಪುನರ್‌-ನಿರ್ಮಿಸುವ ಬೃಹತ್‌ ಯೋಜನೆಯ ಬಗ್ಗೆ ವಿವಿಧ ಕಾರ್ಯಾಲೋಚನೆಗಳನ್ನು ನಡೆಸಿ ಈ ದೆಸೆಯಲ್ಲಿ ಸಾಕಷ್ಟು ತೀರ್ಮಾನಗಳನ್ನೂ ಕೈಗೊಂಡಿದೆ. ವಿವಿಧ ಕಂಪನಿಗಳನ್ನು ಈ ಕಾರ್ಯಗಳಿಗಾಗಿ ಶಾರ್ಟ್‌ ಲಿಸ್ಟ್‌ ಕೂಡ ಮಾಡಿದೆ. 'ಕೆಲ್ಲಾಗ್‌, ಬ್ರೌನ್‌ ಅಂಡ್‌ ರೂಟ್‌" ಈ ಕಂಪನಿಗಳಲ್ಲೊಂದು. ಈ ಯೋಜನಾ ಕಾರ್ಯದ ಮೊತ್ತ ಸರಿಸುಮಾರು 900 ದಶಲಕ್ಷ ಡಾಲರ್‌. ಈ ಯುದ್ಧದ ಮೊದಲ ವಾರದಲ್ಲಿ ಇರಾಕ್‌ ಪಡೆಗಳು ದಕ್ಷಿಣ ಇರಾಕ್‌ನಲ್ಲಿ ಬೆಂಕಿಯಿಟ್ಟ ಕೆಲವು ತೈಲಬಾವಿಗಳನ್ನು ನಂದಿಸಲು ಕಾಂಟ್ರಾಕ್ಟ್‌ ಪಡೆದ ಕಂಪನಿ ಸಹಾ ಇದೇ. ಅಂದ ಹಾಗೆ ಈ ಕಂಪನಿಯ ಮಾತೃ ಸಂಸ್ಥೆಯ ಹೆಸರು ಹ್ಯಾಲ್ಲಿಬರ್ಟನ್‌!

ಅಮೇರಿಕಾದ ಸದ್ಯದ ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿಲ್ಲದಿರುವುದು, ಬಹಳಷ್ಟು ಕಂಪನಿಗಳು ಲಾಭ ಸಾಧಿಸದಿರುವುದು ಇಲ್ಲ ವೇ ನಷ್ಟದಲ್ಲಿರುವುದನ್ನು ನಾವು ಗಮನಿಸಬೇಕು ಮತ್ತು ಈ ಹೊಸ ಉದ್ದಿಮೆಗಳಿಂದ ಅವುಗಳಿಗಾಗಬಹುದಾದ ಲಾಭವನ್ನೂ. ಈ ಮಧ್ಯೆ ಕೆಲವೊಂದು ಭಾರತೀಯ ಕಂಪನಿಗಳು ಇರಾಕ್‌ ಪುನರ್ನಿರ್ಮಾಣದಲ್ಲಿ ಅಮೇರಿಕಾದ ಕಂಪನಿಗಳಿಂದ ಪುಡಿ-ಗುತ್ತಿಗೆ ಪಡೆವ ಅವಕಾಶಗಳಿರುವುದು ಮತ್ತು ಕುವೈತ್‌ ನ ಭಾರತ ರಾಯಭಾರ ಕಛೇರಿಯಲ್ಲಿ ಈ ಬಗ್ಗೆ ಆಸಕ್ತ ಆಮೆರಿಕ ಕಂಪನಿಗಳು ವಿಷಯ ಶೇಖರಿಸುತ್ತಿರುವುದು ಸಹಾ ಅಷ್ಟೇ ನಿಜ. ಅಂದ ಹಾಗೆ, ಯುದ್ಧ ಮುಗಿದನಂತರ ಈ ಖರ್ಚಿನ ವೆಚ್ಚ ತುಂಬುವುದು ಇರಾಕ್‌ನ ತೈಲದಿಂದ ಸಂಪಾದಿಸುವ ಹಣದಿಂದ.

ಬಲಿಷ್ಟರ ಪಾಲಿಗೆ ಯುದ್ಧ ಎನ್ನುವುದು ಎಷ್ಟು ಲಾಭದಾಯಕ ವ್ಯವಹಾರ ಅಲ್ಲವೇ!?




User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Royal Challengers Bangalore: 11 / 0, 1 Overs
1st Test , Lord's Cricket Ground, St John's Wood
West Indies: 140 / 4, 56.1 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article