•  

ಸಾಲುಮರದ ತಿಮ್ಮಕ್ಕನ ಭೇಟಿ ಮಾಡಿದೆ !

ಗುರುವಾರ, ಜನವರಿ 9, 2003, 5:30 [IST]
ರವಿ ಕೃಷ್ಣಾ ರೆಡ್ಡಿ

ಸಾಲು ಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ ?

ಕರ್ನಾಟಕದ ಪರಿಸರ ಮತ್ತು ಸಮಾಜದ ಬಗೆಗೆ ಆಸಕ್ತಿ , ಪರಿಚಯ ಇರುವವರಿಗೆಲ್ಲ ಪರಿಚಿತವಾಗಿರುವ ಹೆಸರು ಸಾಲುಮರದ ತಿಮ್ಮಕ್ಕ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್‌ ಗ್ರಾಮದ ತಿಮ್ಮಕ್ಕ-ಬಿಕ್ಕಲು ಚಿಕ್ಕಣ್ಣ ದಂಪತಿಗಳು. ಮದುವೆಯಾಗಿ 20 ವರ್ಷಗಳು ಕಳೆದರೂ ಮಕ್ಕಳಾಗದ ಕಾರಣ ಈ ದಂಪತಿಗಳು ಮುಂದೆ ಹತ್ತು ವರ್ಷಗಳ ಕಾಲ ಹೆತ್ತದ್ದು, ಕಾಪಾಡಿದ್ದು, ಬೆಳೆಸಿದ್ದು 280ಕ್ಕೂ ಹೆಚ್ಚು ಆಲದ ಮರಗಳನ್ನು. ಮರಗಳಲ್ಲೇ ಮಕ್ಕಳನ್ನು ಕಂಡ ಅಮ್ಮಅಪ್ಪ- ತಿಮ್ಮಕ್ಕ, ಬಿಕ್ಕಲು ಚಿಕ್ಕಣ್ಣ .

ಇಂದು ತಿಮ್ಮಕ್ಕ ವಾಸಿಸುತ್ತಿರುವುದು ಸುಮಾರು 8 X 12 ಅಡಿಯ ಹೆಂಚಿನ ಮನೆಯಲ್ಲಿ. ಹಿಂದೆ ಹೇಳಿದ ಹಾಗೆ, ದಾಯದಿಗಳು ನೀಡಿದ ಹಿಂಸೆಗೆ ರೋಸತ್ತು , ತನ್ನ ನಾಲ್ಕು ಎಕರೆಗೂ ಹೆಚ್ಚಿನ ಜಮೀನನ್ನು ಸಿಕ್ಕಷ್ಟಕ್ಕೆ ಮಾರಿ, ಅದರಲ್ಲಿ ಸ್ವಲ್ಪ ಉಪಯೋಗಿಸಿಕೊಂಡು ಕಟ್ಟಿಸಿಕೊಂಡದ್ದು ಈ ಸಣ್ಣ ಮನೆ, ಗಂಡ ಸತ್ತ ನಂತರ. ಇಷ್ಟು ಸಣ್ಣ ಮನೆಯಲ್ಲಿ ಈಗ ಒಂದೆರಡು ವರ್ಷಗಳಿಂದ ತನ್ನ ತಂಗಿಯ ಮಗ ಮತ್ತು ಸೊಸೆಯನ್ನು ತನ್ನೊಂದಿಗೇ ಇರಿಸಿಕೊಂಡಿದ್ದಾಳೆ.

ತಿಮ್ಮಕ್ಕನ ಜೀವನೋಪಾಯಕ್ಕೆ ಹೇಳಿಕೊಳ್ಳುವಷ್ಟಿಲ್ಲವಾದರೂ ಹೆಮ್ಮೆಯಿಂದ, ಆತ್ಮವಿಶ್ವಾಸದಿಂದ ಇರುವುದನ್ನು ಈಕೆಯ ನಡೆನುಡಿಯಲ್ಲಿ ಕಾಣಬಹುದು. ಜಮೀನು ಮಾರಿ ಉಳಿದ ದುಡ್ಡನ್ನು ಬ್ಯಾಂಕಿನಲ್ಲಿ ಇಟ್ಟಿದ್ದಾಳಂತೆ (50000 ಕ್ಕಿಂತ ಕಮ್ಮಿ ಇರಬಹುದು). ಅದರಿಂದ ಬರುವ ಬಡ್ಡಿ, ಸರ್ಕಾರ ವೃದ್ಧರಿಗೆ ನೀಡುವ ಮಾಸಾಶನ (50 ರೂ?), ಸಂಘಸಂಸ್ಥೆಗಳು ಆಗಾಗ ಸತ್ಕರಿಸುವಾಗ ನೀಡುವ ಕಾಣಿಕೆ-ಸಹಾಯಗಳಿಂದ ಜೀವನ ಸಾಗಿಸುತ್ತಿದ್ದಾಳೆ. ಹೀಗೆ ಬರುವ ಕಾಣಿಕೆಗಳನ್ನು ತಿಮ್ಮಕ್ಕ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾಳೆ. ಯಾವುದೋ ಶಾಲೆಯಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸಿಕೊಟ್ಟ ಚಿಲ್ಲರೆ ಹಣವನ್ನು ಮತ್ತು ಅದರ ಹಿಂದಿನ ಪ್ರೀತಿಯನ್ನು ನೆನೆಸಿಕೊಂಡು ಸ್ವಲ್ಪ ಭಾವೋದ್ವೇಗಕ್ಕೂ ಒಳಗಾದಳು.

ಊರಿನ ಹಾಲಿನ ಡೈರಿಯ ಪಕ್ಕದಲ್ಲಿ, ಮುಖ್ಯರಸ್ತೆಯಲ್ಲಿಯೇ, ಸರ್ಕಾರಿ ಜಮೀನಿನಲ್ಲಿ ಅವರಿವರ ಸಹಾಯದಿಂದ, ತಿಮ್ಮಕ್ಕನಿಗೆ ಹೊಸ ಮನೆ ಕಟ್ಟಿ ಕೊಡುವ ಕೆಲಸ ನಡೆದಿದೆ. ಸುಮಾರು 12 X 20ರ ಈ ಮನೆಯಲ್ಲಿ ಒಂದು ಸಣ್ಣ ಕೋಣೆ, ಹಾಲ್‌, ಅಡಿಗೆ ಮತ್ತು ಬಚ್ಚಲು ಕೋಣೆಗಳಿವೆ. ಬಾಕಿಯಿರುವ ಕೆಲಸವೆಂದರೆ, ನೆಲಕ್ಕೆ ಗಾರೆ ಮಾಡುವುದು, ಸುಣ್ಣಬಣ್ಣ ಬಳಿಯುವುದು ಮತ್ತು ಕಿಟಕಿ ಬಾಗಿಲುಗಳನ್ನು ಅಳವಡಿಸುವುದು ಮಾತ್ರ. ಮಾಡಿಸುತ್ತಿರುವವರು ಮನಸ್ಸಿಟ್ಟರೆ ಈ ಆಷಾಢ ಮುಗಿದ ತಕ್ಷಣ ಬರುವ ಶ್ರಾವಣದಲ್ಲಿಯೇ ತಿಮ್ಮಕ್ಕನನ್ನು ಹೊಸ ಮನೆಗೆ ಸೇರಿಸಬಹುದು. ಆದರೆ, ರೇ, ರೇ, .... ನೋಡೋಣ. ನಾಡು ಇಷ್ಟಾದರೂ ತನ್ನ ಕೃತಜ್ಞತೆ ಮರೆತಿಲ್ಲವಲ್ಲಾ, ಅದೇ ಸಂತೋಷ. ಈ ಮನೆಯ ಪಕ್ಕದಲ್ಲಿಯೇ ತಿಮ್ಮಕ್ಕನ ಹೆಸರಿನಲ್ಲಿ ಆಸ್ಪತ್ರೆಯೂ ಏಳುತ್ತಿದೆ, ಅದೂ ಸಂತಸದ ಸಂಗತಿಯೇ.

ಅಚ್ಚುಕಟ್ಟು ಬದುಕು
ಮೇಲ್ನೋಟಕ್ಕೆ ಹೇಳಬಹುದಾದರೆ 76ರ ಇಳಿ ಹರಯದಲ್ಲಿಯೂ ತಿಮ್ಮಕ್ಕ ಜೀವಕಳೆಯಾಗಿ ಆರೋಗ್ಯವಾಗಿದ್ದಾಳೆ. ವಯಸ್ಸಿಗೆ ಸಹಜವಾಗಿ ಬರುವ ಮಧುಮೇಹ ಮತ್ತಿತರ ಕಾಯಿಲೆಗಳಿದ್ದರೂ ತಿಂಡಿತೀರ್ಥದ ವಿಚಾರದಲ್ಲಿ ಕಟ್ಟುನಿಟ್ಟು. ನಾವು ತೆಗೆದುಕೊಂಡು ಹೋದ ಹಣ್ಣು ಮತ್ತು ಹಸಿ ನೆಲಗಡಲೆಯಲ್ಲಿ ಕೇವಲ ಹಣ್ಣು ತಿಂದದ್ದು ಬಿಟ್ಟರೆ ನೆಲಗಡಲೆ ಮುಟ್ಟಲೇ ಇಲ್ಲ. ತನ್ನ ಸೊಸೆಯ ಕೈನಲ್ಲಿ ನೆಲಗಡಲೆ ಹುರಿಸಿ ನಮಗೆ ತಿನ್ನಲು ಸುಲಿದುಕೊಟ್ಟಳೆ ಹೊರತು ತನ್ನ ಆರೋಗ್ಯಕ್ಕೆ ಸರಿಬರದ ಕಾರಣ ತಾನು ತಿನ್ನಲಿಲ ್ಲ. ಈ ಮೆಚ್ಚಬಹುದಾದ ದಾಕ್ಷಿಣ್ಯರಾಹಿತ್ಯವೇ ಈಕೆಯನ್ನು ದೀರ್ಘಾಯುಷಿಯನ್ನಾಗಿಸುತ್ತದೆ. ಅದು ಒಬ್ಬ ಮಹಾತಾಯಿಯ ಹಕ್ಕು ಮತ್ತು ನಾಡಿನ ಸೌಭಾಗ್ಯ ಕೂಡ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Royal Challengers Bangalore: 3 / 0, 0.4 Overs
1st Test , Lord's Cricket Ground, St John's Wood
West Indies: 136 / 4, 55.3 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article