ಪ್ರಸಿದ್ಧ ಮ್ಯಾನೇಜ್‌ಮೆಂಟ್ ಗುರು ಪೀಟರ್‌ನ ಸಿದ್ಧಾಂತಗಳು ಹೀಗಿವೆ- ‘ಅಸಮರ್ಥರನ್ನು ದೊಡ್ಡ ಹುದ್ದೆಗಳಿಗೆ ಏರಿಸುವುದು ಬುದ್ಧಿವಂತಿಕೆಯಲ್ಲ. ಎಂದಿಗೂ ಸಲ್ಲುವ ಗುರುತ್ವಾಕರ್ಷಣ ಬಲದ ನಿಯಮದಂತೆ, ಅವರು ತಮ್ಮ ಜೊತೆ ತಮ್ಮ ಸಂಸ್ಥೆಯನ್ನೂ ಕಟ್ಟಿಕೊಂಡು ನಿಮ್ಮ ಮೇಲೆ ನೆಲಕ್ಕೆ ಬೀಳುತ್ತಾರೆ’. ಅದೇ ಅರ್ಥದ ಇನ್ನೊಂದು- ‘ಪ್ರತಿಯಾಬ್ಬರೂ ತಮ್ಮ ಅಸಮರ್ಥತೆಯ ಮಟ್ಟಕ್ಕೆ ಏರುತ್ತಾರೆ’. ಇವುಗಳ ಸರಳ ಅರ್ಥ, ಪ್ರತಿಯಾಬ್ಬ ವ್ಯಕ್ತಿಗೂ ಸೀಮಿತ ಯೋಗ್ಯತೆಗಳಿದ್ದು, ಅನರ್ಹನಾದ ಕೆಲಸಕ್ಕೆ ಅವನನ್ನು ನೇಮಿಸಿದರೆ ಆತ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಲಾರ. ಇದಕ್ಕೆ ಉದಾಹರಣೆಯಾಗಿ ನಾವು ಯಶಸ್ವೀ ಸಂಸ್ಥೆ, ದೇಶಗಳನ್ನು ಗಮನಿಸಬಹುದು. ಇಲ್ಲೆಲ್ಲ ವೃತ್ತಿಪರರನ್ನು, ನಾಯಕರನ್ನು ಅವರ ಸೇವಾ ಸಮಯದ, ಇಲ್ಲವೇ ವಂಶಾಪಾರಂಪರ್ಯದ ಮೇಲೆ ಬಡ್ತಿ ನೀಡದೆ, ಯೋಗ್ಯತೆಯ ಮೇಲೆ ನೀಡಿರುತ್ತಾರೆ.

ಈ ವಾದ ಒಂದು ರೀತಿಯಲ್ಲಿ ವಿವಾದಾಸ್ಪದ ಕೂಡ. ಒಬ್ಬ ವ್ಯಕ್ತಿಯ ಯೋಗ್ಯತೆ ಇಷ್ಟೇ ಎಂದು ಹೇಳಿ ಇದು ವ್ಯಕ್ತಿತ್ವ ಬೆಳವಣಿಗೆಯ, ಬುದ್ದಿ, ಕ್ರಿಯಾಶೀಲತೆ, ಸೃಜನಶೀಲ ಬೆಳವಣಿಗೆಯನ್ನು ಸೀಮಿತಗೊಳಿಸುವ ಒಂದು ಹೂಟ ಎನ್ನಬಹುದು. ಅದಕ್ಕಾಗಿಯೇ ವಿಶೇಷ ಪಾಠಗಳ ವ್ಯವಸ್ಥೆ, ಕೋಚಿಂಗ್, ತರಬೇತಿ, ಹೊಸ ಓದು, ಇತ್ಯಾದಿಗಳನ್ನು ಕಾಲ ಕಾಲಕ್ಕೆ ತಮ್ಮ ಸಮರ್ಥತೆಯ ಮಟ್ಟ ಏರಿಸಿಕೊಳ್ಳಲು ಮಾಡುತ್ತಿರಬೇಕಾಗುತ್ತದೆ. ಆದರೂ, ಒಂದು ವ್ಯಕ್ತಿಯ ಯೋಗ್ಯತೆ ಕಾಲಕ್ಕೆ, ವಯಸ್ಸಿಗೆ, ನಡತೆಗೆ ತಕ್ಕಂತೆ ಬದಲಾಗಬಹುದು. ಈ ಬದಲಾವಣೆ ಗುಣಾತ್ಮಕ ಇರಬಹುದು ಇಲ್ಲವೇ ಋಣಾತ್ಮಕವೂ ಆಗಬಹುದು. ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿ ಕಾಯಿಲೆ ಇದ್ದಾಗ ಒಬ್ಬ ಪತ್ರಕರ್ತ ಮಿತ್ರರು ಅವರನ್ನು ನೋಡಿ ಮಾತನಾಡಿಸಲು ಹೋಗಿದ್ದಾಗ ಕೇಳಿದರಂತೆ, ‘ನೀವು ಮುಖ್ಯಮಂತ್ರಿಯಾಗಿ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದಿರಿ. ಮುಖ್ಯಮಂತ್ರಿಯಾಗಿ ಎಲ್ಲವನ್ನೂ ಮಾಡುವ ಶಕ್ತಿಯಿದ್ದರೂ ಯಾಕೆ ನೀವು ವಿಫಲರಾದಿರಿ?’ ಎಂದು. ಅದಕ್ಕೆ ಪಟೇಲರೆಂದರಂತೆ ‘ನನಗೆ ಕೆಲಸ ಮಾಡುವ ಶಕ್ತಿಯಿದ್ದಾಗ ಅಧಿಕಾರ ದೊರಕಲಿಲ್ಲ. ಅಧಿಕಾರ ದೊರೆತಾಗ ಕೆಲಸ ಮಾಡುವ ಶಕ್ತಿ ಇರಲಿಲ್ಲ’.
ಇತ್ತೀಚೆಗೆ ಮಿತ್ರರೊಬ್ಬರು ಹೇಳಿದ್ದು- ‘ಬುದ್ಧಿಜೀವಿ ಸಮಸ್ಯೆಯ ಮೂಲಕ್ಕೆ ಹೋಗುತ್ತಾನೆ. ಬುದ್ಧಿವಂತ ತನ್ನ ಗುರಿಸಾಧನೆಯತ್ತ ದುಡಿಯುತ್ತಾನೆ. ಸ್ವಾತಂತ್ರ್ಯೋತ್ತರದಲ್ಲಿ ಭಾರತದ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮೇಲಿನಿಂದ ಕೆಳಗಿನವರೆಗೆ, ಗ್ರಾಮಲೆಕ್ಕಿಗನಿಂದ ಹಿಡಿದು ರಾಷ್ಟ್ರಪತಿಯವರೆಗೆ ದುಡಿದವರಲ್ಲಿ ಬಹುಸಂಖ್ಯಾತ ಜನರು ಬುದ್ಧಿಜೀವಿಗಳೂ ಇರಲಿಲ್ಲ, ಬುದ್ಧಿವಂತರೂ ಆಗಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಬೇಕಾದ ದೂರದರ್ಶಿತ್ವ, ದೂರಗಾಮಿ ಚಿಂತನೆಗಳೂ ಇರಲಿಲ್ಲ. ಇದ್ದರೂ, ಅವರು ವ್ಯವಸ್ಥೆಯ ಜೊತೆ, ಸಮಸ್ಯೆಗಳ ಜೊತೆ ರಾಜಿ-ಪಂಚಾಯಿತಿ ಮಾಡಿಕೊಂಡು ಪೀಟರ್‌ನ ಸಿದ್ಧಾಂತವನ್ನು ಸಮರ್ಥಿಸಿದವರೆ’.
ಕನ್ನಡ ಭಾಷಿಕರು ಬಹುಸಂಖ್ಯಾತರಾಗಿರುವ ಭೂಪ್ರದೇಶಗಳೆಲ್ಲಾ ಸೇರಿ, ಕನ್ನಡ ನಾಡ ಭಾಷೆ, ಆಡಳಿತ ಭಾಷೆ ಎಂದು ಗುರುತಿಸಿಕೊಂಡು ಒಂದು ರಾಜ್ಯ ಕರ್ನಾಟಕವೆಂದಾಗಿ ಹಲವು ದಶಕಗಳೇ ಸಂದಿದೆ. ಈ ಮಧ್ಯೆ ಕನ್ನಡ ಮತ್ತು ಕರ್ನಾಟಕದ ಬೆಳವಣಿಗೆ ತೃಪ್ತಿದಾಯಕವಾಗಿಲ್ಲ ಎನ್ನುವುದು ಬುದ್ಧಿಜೀವಿ-ಬುದ್ಧಿವಂತರ ಕೊರಗು. ಇದು ಸ್ವಂತಿಕೆ, ಸಂಸ್ಕೃತಿ, ನುಡಿ ಉಳಿಸಿ ಬೆಳೆಸಬೇಕೆನ್ನುವ ಜನಸಾಮಾನ್ಯರ ಕೊರಗೂ ಸಹ. ಈ ಭಾಷೆಯ ಸ್ಥಿತಿಗತಿಗಳ ಬಗೆಗೆ ಜ್ಞಾನವಿರುವ, ಸಮಕಾಲೀನ, ವಾಸ್ತವ ಪರಿಸ್ಥಿತಿ ತಿಳಿದಿರುವ ಸಾಹಿತಿ ಯು.ಆರ್.ಅನಂತಮೂರ್ತಿಯವರು ಕೆಲವು ವರ್ಷಗಳ ಹಿಂದೆ, ‘ನಮ್ಮ ಸಂಸ್ಕೃತಿ ಮತ್ತು ಭಾಷೆ ಬದುಕುವುದು ಅಭಿವೃದ್ದಿಯ ಬಸ್ಸನ್ನು ಮಿಸ್ ಮಾಡಿಕೊಳ್ಳುವ ಜನರಿಂದ ಮಾತ್ರ. ದಲಿತ, ಹಿಂದುಳಿದವರಿಂದಾಗಿ, ಹಳ್ಳಿಯವರಿಂದಾಗಿ. ಯಾಕೆಂದರೆ ಇವರು ಬಡವರಾಗಿದ್ದು, ಇವರ ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುವುದರಿಂದ’ ಎಂಬ ಅರ್ಥ ಬರುವ ಮಾತುಗಳನ್ನು ಆಡಿದ್ದರು. ಇದು ಕಟುವಾಸ್ತವವಾಗಿದ್ದರೂ, ಆಗ ಪಿ.ಲಂಕೇಶ್ ಮತ್ತಿತರರು, ಇದನ್ನು ಪ್ರತಿಗಾಮಿ ಚಿಂತನೆ ಎಂದು ಖಂಡಿಸಿದ್ದರು. ಇಲ್ಲಿ ನನ್ನ ಪ್ರಕಾರ ಲಂಕೇಶರು ಬುದ್ಧಿಜೀವಿ. ರಾಜಕೀಯ-ಸಾಮಾಜಿಕ-ಸಾಹಿತ್ಯಿಕ ಸಮಸ್ಯೆಗಳ ಮೂಲಕ್ಕೆ ಇಳಿದವರು ಮತ್ತು ಓದುಗರಿಗೆ ಆ ಮೂಲದರ್ಶನ ಮಾಡಿಸಿದವರು. ಪರಿಹಾರ ಮತ್ತು ಪರಿಹರಿಸುವ ರೀತಿನೀತಿಯನ್ನು ಬೇರೆಯವರಿಗೆ ಬಿಟ್ಟವರು. ಅನಂತಮೂರ್ತಿಯವರು ಇಲ್ಲಿ ಖಂಡಿತವಾಗಿ ಬುದ್ಧಿವಂತರು. ತಮ್ಮ ಮತ್ತು ತಮ್ಮ ಸಹೋದ್ಯೋಗಿ ಕನ್ನಡ ಬರಹಗಾರರಿಗೆ ಭವಿಷ್ಯದ ಕನ್ನಡ ಓದುಗ ಎಲ್ಲಿದ್ದಾನೆ ಮತ್ತು ಯಾರವನು ಎಂದು ಅವರು ತಿಳಿದವರು, ತಿಳಿಸಿದವರು. ಕನ್ನಡ ಓದುಗರು ಹೆಚ್ಚಾಗಬೇಕೆಂದುಕೊಂಡವರು.

ಭವ್ಯ ವಿಧಾನಸೌಧದಿಂದ 25 ಮೈಲಿ (40 ಕಿ.ಮೀ) ದೂರದಲ್ಲಿ ತಮಿಳುನಾಡಿಗೆ ಸೇರಿದ ನಗರ ಹೊಸೂರು. 20 ವರ್ಷಗಳ ಹಿಂದಿನವರೆಗೂ ತಮಿಳುನಾಡಿನಿಂದ ಬೆಂಗಳೂರಿಗೆ ಬರುವವರಿಗೆ ದ್ವಾರವಾಗಿದ್ದ ಸಣ್ಣ ಪಟ್ಟಣ. ಆದರೆ ಈ ಇಪ್ಪತ್ತು ವರ್ಷಗಳಿಂದೀಚೆ ಈ ನಗರ ಬೆಳೆದ ರೀತಿ ಮತ್ತು ಇಲ್ಲಾದ ಬದಲಾವಣೆಗಳು ಅದ್ಭುತ. ಇಂದು ಬಹುಶಃ ಲಕ್ಷದ ಆಜೂಬಾಜಿನ ಜನಸಂಖ್ಯೆಯಿರುವ ದೊಡ್ಡ ಕೈಗಾರಿಕಾ-ವಾಣಿಜ್ಯ ನಗರ.
ಚಿಕ್ಕಂದಿನಲ್ಲಿ ದೀಪಾವಳಿ ಹಬ್ಬಕ್ಕೆ, ಬೇಸಿಗೆಯ ರಜಕ್ಕೆ ತಾಯಿಯ ತವರೂರಿಗೆ ನಾವು ಹೋಗುತ್ತಿದ್ದದ್ದು ಈ ಹೊಸೂರಿನ ಮೂಲಕವೆ. ಏಕೆಂದರೆ ನನ್ನಜ್ಜಿಯ ಊರು ಇರುವುದು ಹೊಸೂರು ತಾಲ್ಲೂಕಿನಲ್ಲಿ. 15 ವರ್ಷಗಳ ಹಿಂದೆ ಸರಿಯಾಗಿ ಅಂತರರಾಜ್ಯ ಸಾರಿಗೆ ಸೌಲಭ್ಯ ಸರಿಯಾಗಿ ಇಲ್ಲದ್ದರಿಂದ, ನನ್ನ ಊರಿನಿಂದ ಹತ್ತು ಕಿ.ಮೀ. ದೂರದ ನಮ್ಮ ಗಡಿಪಟ್ಟಣವಾದ ಅತ್ತಿಬೆಲೆಗೆ ಹೋಗಿ, ಅಲ್ಲಿ ಗಡಿಯಿಂದ ತಮಿಳುನಾಡು ಬಸ್ಸುಗಳಲ್ಲಿ ಐದು ಕಿ.ಮೀ ಹೊಸೂರಿಗೆ ಹೋಗಿ, ಅಲ್ಲಿಂದ ಮತ್ತೆ 15 ಕಿ.ಮೀ. ದೂರದ ಅಜ್ಜಿಯ ಊರಿಗೆ ಅಲ್ಲಿನ ತಮಿಳುನಾಡು ಬಸ್ಸುಗಳಲ್ಲಿ ಹೋಗುತ್ತಿದ್ದೆವು. ಈ ಪ್ರಯಾಣದಲ್ಲಿ ನಾವು ಬಳಸುತ್ತಿದ್ದ ಭಾಷೆ, ಕರ್ನಾಟಕದ ಭಾಗದಲ್ಲಿ ಕನ್ನಡ (ಮತ್ತು ಆಗಾಗ ಸ್ಥಳೀಯರು ಬಳಸುವ ತೆಲುಗು) ಮತ್ತು ತಮಿಳುನಾಡು ಭಾಗದಲ್ಲಿ ಅಲ್ಲಿನ ಬಹುಸಂಖ್ಯಾತರು ಬಳಸುತ್ತಿದ್ದ ತೆಲುಗು. ಹೀಗಾಗಿ ಪ್ರಯಾಣದಲ್ಲಿ ಭಾಷೆಯ ತೊಂದರೆ ಆದದ್ದಿಲ್ಲ.
ಹೊಸೂರು ತಾಲ್ಲೂಕು ಒಂದು ವಿಶಿಷ್ಟವಾದ ಭೂಪ್ರದೇಶ. ಬೆಂಗಳೂರು, ಕೋಲಾರ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಳ್ಳುವ ದೊಡ್ಡ ತಾಲ್ಲೂಕು. ಅಂಧ್ರ ಕೆಲವು ಮೈಲಿಗಳ ದೂರ. ಇಲ್ಲಿ ತೆಲುಗು, ಕನ್ನಡ, ತಮಿಳು, ಮೂರು ಭಾಷಿಕರೂ ಗಣನೀಯವಾಗಿ, ಬಹುಶಃ ಸರಿಸಮಾನ ಸಂಖ್ಯೆಯಲ್ಲಿದ್ದಾರೆ. ನನ್ನ ಅಜ್ಜಿಯ ಊರಲ್ಲಿ ಐದಾರು ವರ್ಷಗಳ ಹಿಂದಿನ ತನಕ ತೆಲುಗು ಮಾಧ್ಯಮದಲ್ಲಿದ್ದ ಅಲ್ಲಿನ ಸರ್ಕಾರಿ ಶಾಲೆ ಈ ಮಧ್ಯೆ ತಮಿಳು ಮಾಧ್ಯಮವಾಗಿ ಪರಿವರ್ತಿತವಾಗಿದೆ. ಕನ್ನಡ ಮನೆಭಾಷೆಯಾಗಿರುವ, ಒಕ್ಕಲಿಗ ಕುಟುಂಬದ ವೆಂಕಟಸ್ವಾಮಿ ಎಂಬ ಜನತಾದಳದ ಶಾಸಕ ಎರಡು ವರ್ಷದ ಹಿಂದಿನ ತಮಿಳುನಾಡು ವಿಧಾನಸಭೆಯಲ್ಲಿ ಹೊಸೂರನ್ನು ಪ್ರತಿನಿಧಿಸಿದ್ದ ಶಾಸಕರು. ಹೊಸೂರು ಪಟ್ಟಣದಿಂದ, ಗಡಿಭಾಗ ಬಿಟ್ಟು ಹತ್ತು ಮೈಲಿ ಒಳಗೆ ಹೋದರಷ್ಟೆ ಅಪ್ಪಟ ತಮಿಳು ವಾತಾವರಣ ಕಾಣಿಸುವುದು. ಇಂತಹ ತಾಲ್ಲೂಕಿನಲ್ಲಿ, ಈ ಹತ್ತು-ಹದಿನೈದು ವರ್ಷಗಳಲ್ಲಿ ತಮಿಳು ಪಸರಿಸಿರುವ, ಬೇರೂರಿರುವ ರೀತಿ ಅನನ್ಯ. ಅದು ತಮಿಳುನಾಡಿನ ಆಡಳಿತಗಾರರ, ಅವರ ದೂರದರ್ಶಿತ್ವದ, ಸ್ವಂತಿಕೆ ಮತ್ತು ಸ್ವಾಭಿಮಾನದ ಕಾರ್ಯಾಚರಣೆಯ ಫಲ.
ಬೆಂಗಳೂರಿನಿಂದ 30 ನಿಮಿಷ ಪ್ರಯಾಣದ ದೂರದಲ್ಲಿರುವ ಹೊಸೂರಿನಲ್ಲಿರುವ ಸಹಜ, ನೈಸರ್ಗಿಕ, ಮೂಲಭೂತ ಸೌಲಭ್ಯವನ್ನು ಬಳಸಿಕೊಂಡು ತಮಿಳುನಾಡು ಸರ್ಕಾರ ಕೈಗಾರಿಕೆ-ಉದ್ದಿಮೆಗಳ ಸ್ಥಾಪನೆಗೆ ಆಪಾರವಾಗಿ ಪ್ರೋತ್ಸಾಹಿಸಿತು. ಹೊಸೂರಿನ ಸುತ್ತಮುತ್ತಲ ಹಳ್ಳಿಗರಿಂದ ಜಮೀನು ಕೊಂಡ ಸರ್ಕಾರ ಅದನ್ನೆಲ್ಲ ಕೈಗಾರಿಕಾ ಪ್ರದೇಶವನ್ನಾಗಿ ಪರಿವರ್ತಿಸಿತು. ಇದರ ಪರಿಣಾಮ, ಇಂದು ಕರ್ನಾಟಕದ ಗಡಿಯಿಂದ ಒಂದೆರಡು ಮೈಲಿ ದೂರದಲ್ಲಿ ಹಿಂದೂಜಾ ಸಮೂಹದ ಅಶೋಕಾ ಲೈಲ್ಯಾಂಡ್ ಕಾರ್ಖಾನೆಯ ದೊಡ್ಡ ವಿಭಾಗವಿದ್ದು, ಅದರ ಇನ್ನೊಂದು ವಿಭಾಗ ಇಲ್ಲಿಂದ ನಾಲ್ಕೈದು ಮೈಲಿ ದೂರದಲ್ಲಿದೆ. ಇನ್ನೊಂದು ಪ್ರಸಿದ್ಧ ದ್ವಿಚಕ್ರ ಗಾಡಿ ಉತ್ಪಾದಕರಾದ ಟಿ.ವಿ.ಎಸ್. ಕಂಪನಿ ದೊಡ್ಡ ಕಾರ್ಖಾನೆಯನ್ನು ಸ್ಥಾಪಿಸಿದೆ. ಟೈಟಾನ್ ಕೈಗಡಿಯಾರದ ಉದ್ದಿಮೆಯಿದೆ. ಅಸಂಖ್ಯಾತ ಗಾರ್ಮೆಂಟ್ ಕಾರ್ಖಾನೆಗಳಿವೆ. ವರ್ಷ ವರ್ಷವೂ ತಮಿಳುನಾಡು ಸರ್ಕಾರ ಇಲ್ಲಿನ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಿದೆ. ಇವೆಲ್ಲವುಗಳಿಂದಾಗಿ ಇಲ್ಲಿ ಹತ್ತಾರು ಸಾವಿರಕ್ಕೂ ಮೇಲ್ಪಟ್ಟು ಉದ್ಯೋಗ ಸೃಷ್ಟಿಯಾಗಿದೆ. ಮಾಜಿ ಕೇಂದ್ರ ಮಂತ್ರಿ ತಂಬಿದೊರೈಗೆ ಸೇರಿದ ಒಂದು ಇಂಜಿನಿಯರಿಂಗ್ ಕಾಲೇಜೂ ಇದೆ. ಬೆಂಗಳೂರಿನ ವರ್ತಕರು ದೀಪಾವಳಿಯ ಪಟಾಕಿ ಖರೀದಿಗೆ ಶಿವಗಂಗೆ, ಸೇಲಂ ಗೆ ಹೋಗುವ ಅವಶ್ಯಕತೆ ಇಲ್ಲದೆ ಅವು ಅದೇ ಬೆಲೆಗೆ ಇಲ್ಲಿಯೇ ದೊರಕುತ್ತವೆ. ಆದರೆ, ಇತ್ತ ನಮ್ಮ ಕರ್ನಾಟಕದ ಗಡಿಯಲ್ಲಿರುವ ಅತ್ತಿಬೆಲೆ ಮತ್ತು ನನ್ನ ಊರಿನದೇ ಆದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿನ ಉದ್ದಿಮೆ-ಕಾರ್ಖಾನೆಗಳು ಕುಂಟುತ್ತಾ, ಮುಚ್ಚುತ್ತಾ, ತೆರೆಯುತ್ತಾ, ತೆವಳುತ್ತಾ ನಡೆಯುತ್ತಿವೆ.
ಇದೇ ಅಭಿವೃದ್ಧಿಯ ಸಮಯದಲ್ಲಿ ಹೊಸೂರಿನಲ್ಲಿ ಭಾಷೆಯ ಮೇಲಾಗಿರುವ ಪರಿಣಾಮ ಗಮನಿಸಿದರೆ, ಹತ್ತು ವರ್ಷದ ಹಿಂದೆ ಇಲ್ಲಿನ ವ್ಯವಹಾರಕ್ಕೆ, ಬದುಕಿಗೆ ಸಾಕುಬೇಕಾಗಿದ್ದ ತೆಲುಗು-ಕನ್ನಡ ಇಂದು ಏನೇನೂ ಸಾಲದು. ಎಲ್ಲಾ ಕಡೆಯೂ ತಮಿಳಿನ ಸ್ಥಾಪನೆಯಾಗಿದೆ. ಸರ್ಕಾರಿ ಕಛೇರಿ, ಆಸ್ಪತ್ರೆ, ಶಾಲೆಗಳಿಂದ ಹಿಡಿದು ಬಸ್ ನಿಲ್ದಾಣದವರೆಗೂ ತಮಿಳಿನ ಬಳಕೆಯಾಗುತ್ತಿದೆ. ಅಲ್ಲಿನ ಸರ್ಕಾರಿ ಬಸ್ಸುಗಳ ಚಾಲಕ ನಿರ್ವಾಹಕರೆಲ್ಲರೂ ಕೇವಲ ತಮಿಳು ಮಾತ್ರ ಬಲ್ಲವರಾಗಿದ್ದಾರೆ. ಇದು ತುಂಬಾ ಒಳ್ಳೆಯ ಜನಪರ ಕೆಲಸ. ಏಕೆಂದರೆ ಇಂದು ಇಲ್ಲಿ ತಮಿಳು ಭಾಷಿಕರೇ ಬಹುಸಂಖ್ಯಾತರಾಗಿದ್ದಾರೆ. ಇಲ್ಲಿನ ಕೈಗಾರಿಕಾ ಕ್ರಾಂತಿ ಮೊದಲ ಜನಾಂಗದ ತಮಿಳರನ್ನು ಸೃಷ್ಟಿಸಿದೆ. ಅವರ ಸೇವೆಗೆ ತಮಿಳು ಬಳಕೆ ಅತ್ಯವಶ್ಯಕ, ಅಪೇಕ್ಷಣೀಯ, ಮತ್ತು ಜನಸಾಮಾನ್ಯರ ಅಧಿಕಾರ ಬಲದ ದ್ಯೋತಕ.
ಇಲ್ಲಿ ವೈಯುಕ್ತಿಕವಾಗಿ, ತಮಿಳಿನ ಬಳಕೆ ಮತ್ತು ಅದರ ಸ್ಥಾಪನೆಯ ಬಗೆಗೆ ನನ್ನ ಯಾವುದೇ ಅಭ್ಯಂತರವಿಲ್ಲ. ನನಗೆ ನನ್ನ ಭಾಷೆಯ ಮೇಲೆ ನಿರಭಿಮಾನವಾಗಲಿ, ಅನ್ಯ ಭಾಷೆಯ ಬಗೆಗೆ ದ್ವೇಷವಾಗಲಿ ಇಲ್ಲ. ಇಷ್ಟಕ್ಕೂ ಅಲ್ಲಿನ ಹಳ್ಳಿಗರು ತಮಿಳು ಕಲಿತುಕೊಳ್ಳದೆ ಈ ಮೊದಲೆಲ್ಲಾ ಅಲ್ಲಿನ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲಾಗದೆ, ಅಭಿವೃದ್ಧಿಯ ಬಸ್ಸನ್ನು ಮಿಸ್ ಮಾಡಿಕೊಳ್ಳುತ್ತಿದ್ದವರೆ. ಈಗಲೂ ಅದೇ ಮುಂದುವರಿದರೆ, ಅವರಿಗೆ ಅವರೂರಿನ ಕಾರ್ಖಾನೆಗಳಲ್ಲಿ ಕೆಲಸ ಸಿಗದೇ ಹೋಗಲೂಬಹುದು, ವ್ಯವಹಾರಿಕವಾಗಿ ಕೆಳದರ್ಜೆಯ ನಾಗರೀಕರಾಗುವ ಗತಿ ಬರಬಹುದು.
ಆದರೆ ನನ್ನ ಒಂದೇ ಒಂದು ನೋವೆಂದರೆ, ಹೊಸೂರಿನಿಂದ ಆ ತಾಲ್ಲೂಕಿನ ಮತ್ತೊಂದು ಊರಾದ ಬಾಗಲೂರಿಗೆ ಕರ್ನಾಟಕದ ಅತ್ತಿಬೆಲೆ-ಸರ್ಜಾಪುರ ಪಟ್ಟಣಗಳ ಮುಖಾಂತರ ಅಲ್ಲಿನ ಸರ್ಕಾರಿ ಬಸ್ಸಿನ ಸಾರಿಗೆ ವ್ಯವಸ್ಥೆಯಿದೆ. ಈ ಬಸ್ಸಿನ ಮಾರ್ಗ ಲಾಭದಾಯಕವೂ, ಈ ಭಾಗದ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೌಕರ್ಯ ಕಲ್ಪಿಸುವುದೂ ಆಗಿದೆ. 60%ಕ್ಕೂ ಹೆಚ್ಚು ಭಾಗ ಕರ್ನಾಟಕದ ಗಡಿಯಾಳಗೆ ಸಂಚರಿಸುವ ಈ ಬಸ್ಸನ್ನು ನಾನು ಅಜ್ಜಿಯ ಊರಿಗೆ ಹೋಗಲು ಹಲವಾರು ಸಾರಿ ಬಳಸಿದ್ದೇನೆ. ಆದರೆ ಈ ಐದಾರು ವರ್ಷಗಳಲ್ಲಿ ನಾನು ಗಮನಿಸಿದ ವಿದ್ಯಮಾನ ಏನೆಂದರೆ, ಮೊದಲೇ ತಿಳಿಸಿದಂತೆ ಈ ಬಸ್ಸುಗಳ ಚಾಲಕ ನಿರ್ವಾಹಕರೆಲ್ಲ ತಮಿಳು ಮಾತ್ರವೇ ಬಲ್ಲವರಾಗಿದ್ದು, ತಮಿಳು ಬಾರದ ಬಡ ಪ್ರಯಾಣಿಕರೊಂದಿಗೆ ಅವರು ಆಗಾಗ ನಡೆದುಕೊಳ್ಳುವ ರೀತಿ. ಕೆಲವೊಮ್ಮೆ ತಮಿಳು ಬಾರದ ಪ್ರಯಾಣಿಕರನ್ನು ಸಂಬೋಧಿಸಲಾಗದೆ ಕೋಪದಿಂದ ಪಿತ್ತ ನೆತ್ತಿಗೇರಿಸಿಕೊಳ್ಳುವ ಇವರು, ಕನ್ನಡದ ನೆಲದಲ್ಲಿ ಕನ್ನಡಿಗರನ್ನು ತಮಿಳಿನಲ್ಲಿ ಬೈಯ್ಯುತ್ತಾರೆ. ಸ್ವಲ್ಪ ಪ್ರಯತ್ನ ಪಟ್ಟರೆ ಅಲ್ಲಿನ ಸಾರಿಗೆ ವಿಭಾಗದವರು ತಮಿಳು-ಕನ್ನಡ ಬಲ್ಲ ತಮ್ಮ ಹಲವಾರು ನಿರ್ವಾಹಕರನ್ನು ಈ ಮಾರ್ಗಕ್ಕೆ ನೇಮಿಸಬಹುದು. (ತಮ್ಮ ರಾಜ್ಯದ ಇನ್ನೊಂದು ಊರಿಗೆ ಹೋಗಲು, ಹೀಗೆ ಬೇರೆ ರಾಜ್ಯದ ಮೂಲಕ ಹೋಗುವುದು ಗಡಿಪ್ರದೇಶಗಳಲ್ಲಿ ಸರ್ವೇಸಾಮಾನ್ಯ. ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ಹುಟ್ಟೂರಾದ ಮಾಲೂರು ತಾಲ್ಲೂಕಿನ ಮಾಸ್ತಿಗೆ ನಮ್ಮ ಕೆ.ಎಸ್.ಆರ್.ಟಿ.ಸಿ. ಬಸ್ಸು ಇದೇ ಬಾಗಲೂರಿನ ಮುಖಾಂತರ ಹೋಗುತ್ತಿತ್ತು. ತಮಿಳುನಾಡಿನ ಮುಖಾಂತರ ಹೋಗುವುದು ಸೌಲಭ್ಯದ ದೃಷ್ಟಿಯಿಂದಾಗಿರದೆ, ಬೆಂಗಳೂರಿನಿಂದ ಮಾಸ್ತಿಗೆ ನಮ್ಮ ನೆಲದಲ್ಲಿ ನೇರ, ಉತ್ತಮ ರಸ್ತೆಯಿರದ ದುರವಸ್ಥೆಯಿಂದಾಗಿ.)

ಬೆಳಗಾವಿ ಕರ್ನಾಟಕದ ನನ್ನ ನೆಚ್ಚಿನ ಪಟ್ಟಣಗಳಲ್ಲಿ ಒಂದು. ಪಶ್ಚಿಮಘಟ್ಟಗಳಿಗೆ ಹೊಂದಿಕೊಂಡಿರುವ ಈ ಸುಂದರ ನಗರ ಬೆಂಗಳೂರಿನಂತಹುದೇ ಆಹ್ಲಾದಕರ ಹವಾಮಾನದಿಂದ ಕೂಡಿದೆ. ಪ್ರಸಿದ್ಧ ಬೆಳಗಾವಿ ಕುಂದಾ ನನ್ನ ಪ್ರೀತಿಯ ಸಿಹಿ ತಿಂಡಿಗಳಲ್ಲೊಂದು. ಬಯಲು ಸೀಮೆ, ಘಟ್ಟಪ್ರದೇಶಗಳನ್ನೊಳಗೊಂಡ ಈ ಕೆಚ್ಚೆದೆಯ ಜಿಲ್ಲೆ ಮತ್ತು ನಗರವನ್ನು ನಾಲ್ಕಾರು ಬಾರಿ ಸುತ್ತಿದ್ದೇನೆ. ನನ್ನ ಆತ್ಮೀಯ ಸ್ನೇಹಿತರಲ್ಲಿ ಹಲವರು ಈ ಸುಂದರ, ಪ್ರೀತಿಯ ನಾಡಿನಿಂದ ಬಂದವರು. ಕೆಲವರು ನನ್ನ ರೀತಿಯೇ ಗಡಿಪ್ರದೇಶದ ಜೀವನವನ್ನು ನೋಡಿದವರು. ಆದರೆ ಪ್ರತಿಸಲ ಬೆಳಗಾವಿಗೆ ಹೋದಾಗಲೂ ಅಲ್ಲಿನ ಕನ್ನಡ- ಮರಾಠಿ ಜಟಾಪಟಿ ನೆನೆದು, ಅಲ್ಲಿನ ಪರಿಸ್ಥಿತಿ ನೋಡಿ ನೋವೂ ಆಗುತ್ತದೆ. ಮರಾಠಿ ಅಥವ ಹಿಂದಿ ಬರದೇ ಬೆಳಗಾವಿ ನಗರವನ್ನು ಸುತ್ತುವುದು ಕಷ್ಟದ ಕೆಲಸ. ಬಳಕೆಗಾಗುವಷ್ಟು ಹಿಂದಿ ಬಂದರೂ ಕನ್ನಡವನ್ನೇ ಬಳಸಬೇಕೆನ್ನುವ ನನ್ನ ದಾರ್ಷ್ಟ್ಯದಿಂದ ಅಲ್ಲಿನ ಖಡೇ ಬಜಾರ್, ಗಣಪತ್ ಗಲ್ಲಿಗಳಲ್ಲಿ ನನ್ನ ಕನ್ನಡದಲ್ಲಿನ ಮಾತಿಗೆ (ಉತ್ತರ ಕರ್ನಾಟಕ ಧಾಟಿಯಲ್ಲಿ ಕೇಳಿದರೂ) ಉತ್ತರಿಸದ ವರ್ತಕರ, ಜನರ ಅಸೌಜನ್ಯದಿಂದ ಅಭಿಮಾನಭಂಗವಾದದ್ದಿದೆ. ಇಲ್ಲಿನ ಬಸ್ ನಿಲ್ದಾಣಗಳಲ್ಲಿ, ನಗರ ಸಾರಿಗೆ ಬಸ್ಸುಗಳಲ್ಲಿ ಕೇವಲ ಕನ್ನಡ ಮಾತ್ರ ಗೊತ್ತಿದ್ದರೆ ಕಷ್ಟವೇ.
ಒಂದು ಪ್ರದೇಶದಲ್ಲಿ ಆ ನೆಲದಲ್ಲಿನ ಬಹುಜನರ ಭಾಷೆಯನ್ನು ಬಳಸುವುದು ತುಂಬಾ ಅವಶ್ಯಕ. ಅದು ಜನರ ಬಳಿಗೆ ಸರ್ಕಾರ ಮತ್ತು ಸೌಲಭ್ಯಗಳನ್ನು ಒದಗಿಸುವ ಸಾಧನ. ಬೆಳಗಾವಿ ಜಿಲ್ಲಾಕೇಂದ್ರವೂ ಆಗಿದ್ದು, ಇಲ್ಲಿಗೆ ಕೇವಲ ಚಿಕ್ಕೋಡಿ, ನಿಪ್ಪಾಣಿ, ಖಾನಾಪುರಗಳಿಂದ ಮಾತ್ರವೇ ಜನರು ಬರದೆ ಬೈಲಹೊಂಗಲ, ಗೋಕಾಕ, ಕಿತ್ತೂರು, ಸವದತ್ತಿ, ರಾಮದುರ್ಗ ಮುಂತಾದ ಕಡೆಗಳಿಂದಲೂ ಕನ್ನಡ ಭಾಷಿಕರು ತಮ್ಮ ವ್ಯವಹಾರಗಳಿಗೆ ಬರುತ್ತಾರೆ. ಹಾಗೆಯೇ ಬೆಳಗಾವಿ ನಗರದಲ್ಲಿಯೂ ಕನ್ನಡಿಗರು ಬಹುಸಂಖ್ಯಾತರೆನ್ನುವುದು ನಿರ್ವಿವಾದ. ಇಂತಹ ಹಿನ್ನೆಲೆಯಲ್ಲಿ ಬೆಳಗಾವಿ ಮರಾಠಿಗರದೆನ್ನುವುದು ಅವರ ಭಾವನಾತ್ಮಕವಾದುದೇ ಹೊರತು ಅದಕ್ಕೆ ವರ್ತಮಾನದ ವಾಸ್ತವದ ತಳಪಾಯವಿಲ್ಲ.
ಆದ್ದರಿಂದ ಕರ್ನಾಟಕ ರಾಜ್ಯೋತ್ಸವದ ಈ ತಿಂಗಳಿನಲ್ಲಿಯಾದರು ನಮ್ಮ ಆಡಳಿತಗಾರರು ವಿಧಾನಸೌಧದಿಂದ ಸ್ವಲ್ಪವೇ ದೂರದಲ್ಲಿರುವ ಹೊಸೂರನ್ನು ಅಭ್ಯಸಿಸಿ, ಅನುಕರಿಸಿಯಾದರೂ ಈ ನಿಟ್ಟಿನಲ್ಲಿ ಬೆಳಗಾವಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ಅಲ್ಲಿ ಕನ್ನಡವನ್ನು ಸ್ಥಾಪಿಸುವ ಕ್ರಮ ಕೈಗೊಳ್ಳಬೇಕು. ಇವುಗಳಿಂದಾಗಿ ಇಲ್ಲಿನ ಮರಾಠಿ ಭಾಷಿಕರೂ ಕನ್ನಡ ಕಲಿತು, ಕರ್ನಾಟಕ ಸರ್ಕಾರದ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿನ ವಿವಿಧ ವಿಭಾಗಳಲ್ಲಿ ಸಾಧ್ಯವಿದ್ದಷ್ಟೂ ಕನ್ನಡ ಮಾತ್ರವೇ ತಿಳಿದಿರುವ ರಾಜ್ಯದ ನಡುಭಾಗಗಳಿಂದ ನೌಕರರನ್ನು ವರ್ಗಾವಣೆ ಮಾಡಬೇಕು. ಇದು ಕೆಲವು ಸಮಯದಲ್ಲಿ ಹೇರಿಕೆಯಾದರೂ ಕಾಲಾಂತರದಲ್ಲಿ ಒಳ್ಳೆಯದೇ ಆಗುತ್ತದೆ. ತಮ್ಮ ಕೆಲಸ ಆಗಬೇಕಾದಲ್ಲಿ ಅಧಿಕಾರಸ್ಥರಿಗೆ ತಿಳಿದಿರುವ ಭಾಷೆಯಲ್ಲಿ ಮಾತನಾಡುವ ಗುಣ ಇಂದು ನೆನ್ನೆಯದಲ್ಲ. ಆಗ ಈ ಅಲ್ಪಸಂಖ್ಯಾತ ಭಾಷಿಕರೂ ತಮಗೆ ತಿಳಿದಿರುವ ಕನ್ನಡವನ್ನೇ ಬಳಸುತ್ತಾರೆ. ಅದೇ ಸಮಯದಲ್ಲಿ ನಮ್ಮ ಕಡೆಯಿಂದ ಈ ಪರಭಾಷಿಕರನ್ನು ದ್ವೇಷಿಸದಿರುವ ಸೌಜನ್ಯ ವೃದ್ಧಿಯಾಗಬೇಕು. ಕನ್ನಡ ಕಲಿಯದಿದ್ದರೆ ಅಭಿವೃದ್ಧಿಯ ಬಸ್ಸನ್ನು ತಪ್ಪಿಸಿಕೊಳ್ಳುವ ವಾಸ್ತವವನ್ನು ಸರಿಯಾಗಿ ತಿಳಿಸಬೇಕು. ಹೀಗೆ ಇನ್ನೂ ಹಲವು ಕ್ರಮ ಕೈಗೊಂಡಲ್ಲಿ ಬೆಳಗಾವಿ ಕನ್ನಡದ, ಕರ್ನಾಟಕದ ಹೊಸೂರು ಆಗುವುದರಲ್ಲಿ ಸಂಶಯವಿಲ್ಲ. ಅಂದು ಈ ಮರಾಠಿ-ಕನ್ನಡದ ಗೊಡವೆ, ಹಿಂಸೆಯೂ ಇರುವುದಿಲ್ಲ. ಎಷ್ಟಾದರೂ ಶಾಂತಿ ಮತ್ತು ಸಾಮರಸ್ಯ ಅಭಿವೃದ್ಧಿಗೆ ಅತ್ಯವಶ್ಯ. ಪರಭಾಷೆ ಮತ್ತು ಪರರಾಜ್ಯ, ದೇಶಗಳಿಂದ ಕೊಟ್ಟು-ತೆಗೆದುಕೊಳ್ಳುವ ವ್ಯವಹಾರ ಭಾಷೆ, ವ್ಯಕ್ತಿತ್ವ, ಮತ್ತು ಸಂಪತ್ತಿನ ಅಭಿವೃದ್ಧಿಯ ಅವಶ್ಯ ಭಾಗಗಳು. ಎಲ್ಲಾ ಕಾಲದಲ್ಲಿಯೂ ಕಿಟಕಿ ತೆರೆದಿರಬೇಕು. ದಾಳಿಯ ಸಂದರ್ಭದಲ್ಲಿ ಮಾತ್ರ ಸ್ವರಕ್ಷಣೆಗಾಗಿ ಹೆಬ್ಬಾಗಿಲು ಮುಚ್ಚಬೇಕು. ಮನೆ ಸೂರೆಯಾದ ಮೇಲಲ್ಲ.
ನಾಡು- ನುಡಿ ಅಕ್ಷರಆಡಿಸುವವರು ಬೇಕಾಗಿದ್ದಾರೆ, ಹಾಲೂಡಿಸುವವರು ಬೇಕಾಗಿದ್ದಾರೆಶಾಂತಿನಾಡಲ್ಲಿ ಕನ್ನಡಿಗರ ಸಾಧನೆಗಳನ್ನು ಮುಚ್ಚಿಕೊಂಡ ನಿರಭಿಮಾನಕನ್ನಡಕೆ ಹೋರಾಡು ಕನ್ನಡದ ಕಂದ-ಯಾರ್ಯಾರು ಏನೇನಂತಾರೆ?ಮುಖಪುಟ /
ಎನ್ಆರ್ಐ