ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಟವನ್ನು ಕೊಲ್ಲುವುದು ಹೇಗೆ ?

By Staff
|
Google Oneindia Kannada News

A satirical writeup on Kannada koota members by M. S. Nataraj*ಡಾ. ಮೈ. ಶ್ರೀ ನಟರಾಜ, ಗೈಥರ್ಸ್‌ ಬರ್ಗ್‌, ಮೇರೀಲ್ಯಾಂಡ್‌

  1. ವಾರ್ಷಿಕ ಚಂದಾ ಹಣವನ್ನು ಬಿಸಾಡುವುದರ ಹೊರತು ಮತ್ತಾವ ರೀತಿಯಲ್ಲೂ ಕೂಟದಲ್ಲಿ ಭಾಗವಹಿಸಬೇಡಿ. ‘ಬೇರೆಯವರು’ ಏನಾದರೂ ಮಾಡಿಕೊಂಡು ಹಾಳಾಗಲೆಂದು ಸುಮ್ಮನಿರಿ. ನಂತರ ಸಾಧಾರಣ ಸದಸ್ಯರಿಗೆ ಬೆಲೆ ಇಲ್ಲವೆಂದು ಗೊಣಗಿ.
  2. ಕಾರ್ಯಕಾರೀ ಸಮಿತಿಯ ಯಾವ ಸದಸ್ಯತ್ವವನ್ನೂ ಒಪ್ಪಿಕೊಳ್ಳಬೇಡಿ. ಏಕೆಂದರೆ ನಿಮಗೆ ಕೊಂಚವೂ ಪುರುಸೊತ್ತಿಲ್ಲ. ನಂತರ ‘ಅವರು’ಯಾವ ರೀತಿ ಕೆಲಸ ಮಾಡಬೇಕೆಂಬ ಬಗ್ಗೆ ಉಪದೇಶ ಮಾಡಿ.
  3. ಒಂದು ವೇಳೆ ಬಲಾತ್ಕರಿಸಿ ನಿಮ್ಮನ್ನು ಸಮಿತಿಗೆ ನೇಮಕ ಗೊಳಿಸಿದರೆ ಯಾವ ಕೆಲಸವನ್ನೂ ಮಾಡಬೇಡಿ. ನಂತರ ಕೂಟ ಹೇಗೆ ನಿರ್ಜೀವವಾಗುತ್ತಿದೆ ಎಂದು ಹೀಯಾಳಿಸಿ.
  4. ಅಕಸ್ಮಾತ್‌ ತಪ್ಪಿ ಕಾರ್ಯಕಾರೀ ಸಮಿತಿಯ ಸಭೆಯಾಂದಕ್ಕೆ ಹೋದರೆ, ಯಾವ ಹೊಸ ವಿಚಾರವನ್ನೂ ಮಂಡಿಸಬೇಡಿ. ಬೇರೆಯವರು ದಡ್ಡರು ಯಾರಾದರೂ ಮಂಡಿಸಿದರೆ, ಅದನ್ನು ತಕ್ಷಣ ಖಂಡಿಸಿ.
  5. ಚಂದಾ ಹಣವನ್ನು ಸುಲಭವಾಗಿ ಕೊಟ್ಟು ಬಿಡಬೇಡಿ. ಏಕೆಂದರೆ ಅದು ಬಲು ದುಬಾರಿ ವಿಷಯ. ನಂತರ, ಈ ಬಡಕಲು ಕೂಟದಲ್ಲಿ ಹಣವಿಲ್ಲ ಎಂದು ನಗಿ.
  6. ಇತರರನ್ನು ಸದಸ್ಯರಾಗುವಂತೆ ಹುರಿದುಂಬಿಸಬೇಡಿ. (ಕೂಟ ಬೆಳೆದು ಬಿಟ್ಟೀತು!) ನಂತರ, ಹೇಗೆ ಸದಸ್ಯರ ಸಂಖ್ಯೆ ಕರಗುತ್ತಿದೆ ಎಂದು ಲೊಚಗುಟ್ಟಿ.
  7. ಕೂಟದ ವಾರ್ತಾ ಪತ್ರ ಬಂದ ಕೂಡಲೇ ಓದದೇ ಕಸದ ಬುಟ್ಟಿಯಲ್ಲಿ ಹಾಕಿ. (ಏಕೆಂದರೆ ಅದು ತೀರಾ ಗೌಣವಾದದ್ದು). ನಂತರ ಕೂಟದ ಚಟುವಟಿಕೆಗಳ ಬಗ್ಗೆ ನನಗೆ ಯಾರೂ ಏನೂ ತಿಳಿಸುವುದೇ ಇಲ್ಲ ಎಂದು ಬಡಬಡಿಸಿ.
  8. ನಿಮ್ಮಲ್ಲಿ ಪ್ರತಿಭೆ ಏನಾದರೂ ಇದ್ದರೆ, ಈ ಯಃಕಶ್ಚಿತ್‌ ಕೂಟದ ಸಭೆಗಳಲ್ಲಿ ಮಾತ್ರ ಅದನ್ನು ಪ್ರದರ್ಶಿಸಬೇಡಿ.(ಅದು ನಿಮ್ಮ ಘನತೆಗೆ ಕುಂದು ಅಲ್ಲವೇ ?) ನಂತರ, ನನ್ನನ್ನು ಯಾರೂ ಕೇಳುವುದಿಲ್ಲ, ಪ್ರತಿಭೆಗೆ ಬೆಲೆ ಕೊಡುವವರು ಯಾರಾದರೂ ಇದ್ದರೆ ತಾನೇ ?’ ಎಂದು ಕುದಿಯಿರಿ.
  9. ದೂರದರ್ಶನದ ಮೇಲೆ ಸಹ ಉತ್ತಮ ಕಾರ್ಯಕ್ರಮ ಇಲ್ಲದಿದ್ದಾಗ, ಇಸ್ಪೀಟಾಟಕ್ಕೆ ಬರುತ್ತೇನೆ ಎಂದಿದ್ದ ಗೆಳೆಯ ಕೈ ಕೊಟ್ಟಾಗ, ಹೊರಗೆ ಚಳಿಯೂ ಇಲ್ಲದೆ ಸೆಖೆಯೂ ಇಲ್ಲದೆ ಹವಾ ಹಿತಕರವಿದ್ದಾಗ, ಕೂಟದವರು ಕಾರ್ಯಕ್ರಮವೊಂದನ್ನು ಏರ್ಪಡಿಸಿದರೆ, ಖಂಡಿತ ಹೋಗಿ. ಆದರೆ, ಬಿಟ್ಟಿ ಕೂಳಿದ್ದರೆ ಮಾತ್ರ. ಊಟದ ಸಮಯಕ್ಕೆ ಸರಿಯಾಗಿ ಹೋಗಿ, ಬೇರಾವ ಕಾರ್ಯಕ್ರಮದಲ್ಲೂ ನಿಮ್ಮ ಅಮೂಲ್ಯವಾದ ವೇಳೆಯನ್ನು ಹಾಳು ಮಾಡಿಕೊಳ್ಳದೇ ಉಪಾಯವಾಗಿ ಜಾರಿಕೊಳ್ಳಿ. ನಂತರ, ಹುಳಿಯನ್ನಕ್ಕೆ ಉಪ್ಪು ಕಮ್ಮಿ ಎಂತಲೋ ಬೋಂಡ ವಿಪರೀತ ಎಣ್ಣೆ ಕುಡಿದಿತ್ತು ಅಂತಲೋ,, ಲಡ್ಡುವಿನಲ್ಲಿ ಲವಂಗ ಇರಲಿಲ್ಲವೆಂತಲೋ ಟೀಕಿಸುತ್ತಾ ಗಠಾರ್‌ ಎಂದು ತೇಗಿ.
  10. ನಿಮ್ಮಂಥಾ ಮಹಾನುಭಾವರು ಇಷ್ಟೆಲ್ಲಾ ಶ್ರಮಿಸಿದ ಮೇಲೂ ಕೂಟದ ಏಳಿಗೆ ಆದರೆ, ನಿಮ್ಮ ಮುಂದಿನ ಪೀಳಿಗೆಯವರಲ್ಲಿ ಈ ರೀತಿ ಕೊಚ್ಚಿಕೊಳ್ಳಿ... ‘ನಾನು ಈ ಕೂಟಕ್ಕಾಗಿ ದುಡಿದಷ್ಟು ಮತ್ತಾರೂ ದುಡಿದಿಲ್ಲ... ಈ ಕೂಟ ಇಂದು ಈ ದೆಸೆಯಲ್ಲಿರುವುದಕ್ಕೆ ನಾನೇ ಕಾರಣ...’ ಇತ್ಯಾದಿ ಇತ್ಯಾದಿ.

(‘ಜರ್ನಲ್‌ ಆಫ್‌ ದಿ ವರ್ಜೀನಿಯಾ ಅಕಾಡೆಮಿ ಆಫ್‌ ಫ್ಯಾಮಿಲಿ ಪ್ರಾಕ್ಟೀಸ್‌’ 1981ರ ಬೇಸಿಗೆ-ನಲ್ಲಿ ಪ್ರಕಟವಾದ ಒಂದು ಲೇಖನದ ಆಧಾರದಿಂದ ಭಾವಾನುವಾದಿಸಿದ್ದು. ಮೊದಲು ಪ್ರಕಟವಾದದ್ದು ಐದನೆಯ ಈಶಾನ್ಯ ಅಮೆರಿಕ ಕನ್ನಡ ಸಮ್ಮೇಳನದ ಸಂಚಿಕೆ, ಜೂನ್‌, 1981, ನ್ಯೂಯಾರ್ಕ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X