ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಷ್ಠಿತ ಕ್ಷೇತ್ರ : ಶಿವಮೊಗ್ಗದಲ್ಲಿ ಬಿಎಸ್ವೈ, ಬಂ ಫ್ಯಾಮಿಲಿ ಫೈಟ್

|
Google Oneindia Kannada News

ಶಿವಮೊಗ್ಗ, ಮಾ. 21 : ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಕೆಲವು ಕ್ಷೇತ್ರಗಳು ವಿವಿಧ ಕಾರಣಗಳಿಗಾಗಿ ಜನರಲ್ಲಿ ಕುತೂಹಲ ಕೆರಳಿಸಿವೆ. ಅಂತಹ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವೂ ಒಂದು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ನಡುವಿನ ಹೋರಾಟದಿಂದಾಗಿ ಶಿವಮೊಗ್ಗ ಕ್ಷೇತ್ರ ಜನರಲ್ಲಿ ಕುತೂಹಲ ಹುಟ್ಟುಹಾಕಿದೆ.

ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಸಿದ ಬಿಎಸ್ ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಹಲವು ಲೆಕ್ಕಾಚಾರಗಳ ನಂತರ ಜೆಡಿಎಸ್ ಮಾಜಿ ಸಿಎಂ ದಿ.ಎಸ್.ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್ ಪಕ್ಷದಿಂದ ಮಂಜುನಾಥ್ ಭಂಡಾರಿ, ಆಮ್ ಆದ್ಮಿ ಪಕ್ಷದ ಶ್ರೀಧರ್ ಕಲ್ಲಹಳ್ಳ ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Shimoga constituency

ಕ್ಷೇತ್ರದ ವ್ಯಾಪ್ತಿ : ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸೊರಬ, ಸಾಗರ ಮತ್ತು ಬೈಂದೂರು ಕ್ಷೇತ್ರಗಳು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿವೆ. 2009ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಎಸ್.ಬಂಗಾರಪ್ಪ ಅವರನ್ನು 52,893 ಮತಗಳ ಅಂತರದಿಂದ ಸೋಲಿಸಿದ್ದರು.

ಬಿ.ಎಸ್. ಯಡಿಯೂರಪ್ಪ
ಹಾಲಿ ಶಿಕಾರಿಪುರ ಕ್ಷೇತ್ರದ ಶಾಸಕ ಬಿಎಸ್ ಯಡಿಯೂರಪ್ಪ (71) ಮೊದಲ ಬಾರಿ ಲೋಕಸಭೆ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಅವರ ಬೆನ್ನಿಗಿವೆ. ಲಿಂಗಾಯತ ಸಮುದಾಯುದ ಪ್ರಬಲ ನಾಯಕ ಯಡಿಯೂರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸದೆ ತಾವೇ ಸ್ಪರ್ಧೆಗೆ ಇಳಿದಿರುವುದು ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿಗೆ ಹೊಸ ಶಕ್ತಿ ತುಂಬುವ ಸಾಧ್ಯತೆ ಇದೆ. ಎದುರಾಳಿ ಪಕ್ಷದವರಿಗೆ ಹೋಲಿಸಿದರೆ, ಯಡಿಯೂರಪ್ಪ ಗೆಲ್ಲುವ ಸಾಧ್ಯತೆ ಹೆಚ್ಚು.

ಗೀತಾ ಶಿವರಾಜ್ ಕುಮಾರ್
ಯಡಿಯೂರಪ್ಪ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ದಿ.ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಪುತ್ರಿ ಮತ್ತು ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ ಸೊಸೆ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿದಿದ್ದಾರೆ. 2008ರ ವಿಧಾನಸಭೆ ಚುನಾವಣೆ ಮತ್ತು 2009 ಲೋಕಸಭೆ ಚುನಾವಣೆಯಲ್ಲಿ ಬಂಗಾರಪ್ಪ ಅವರನ್ನು ಸೋಲಿಸಿದ ಯಡಿಯೂರಪ್ಪ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ಧರಾಗಿದ್ದಾರೆ.

ಸೊರಬ ಶಾಸಕ ಮಧು ಬಂಗಾರಪ್ಪ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ಕೊಡಿಸಿದ್ದು, ಕುಮಾರ್ ಬಂಗಾರಪ್ಪ ಕಣ್ಣು ಕೆಂಪಾಗಿಸಿದೆ. ಆದ್ದರಿಂದ ಮಾಧ್ಯಮಗಳ ಮುಂದೆ ಬಂದ ಅವರು ಮಧು ಬಂಗಾರಪ್ಪ ವಿರುದ್ಧ ಕಟು ಶಬ್ದಗಳಿಂದ ಟೀಕೆ ಮಾಡಿ ಕುಟುಂಬದ ಜಗಳವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಮೊದಲ ಚುನಾವಣೆಯಲ್ಲಿಯೇ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸುತ್ತಿರುವ ಗೀತಾ ಗೆಲ್ತಾರಾ? ಉತ್ತರ ಮೇ 16ರಂದು ದೊರೆಯಲಿದೆ. [ಡಾ.ರಾಜ್ ಫ್ಯಾಮಿಲಿ ಒಡೆದದ್ದು ಗೀತಾ]

ಮಂಜುನಾಥ ಭಂಡಾರಿ
ಕುಮಾರ್ ಬಂಗಾರಪ್ಪ, ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ ಮುಂತಾದ ಹಲವಾರು ಹೆಸರುಗಳನ್ನು ನಡುವೆ ಹಗ್ಗಜಗ್ಗಾಟವಾಡಿದ ಕಾಂಗ್ರೆಸ್ ಅಂತಿಮವಾಗಿ ಉದ್ಯಮಿ ಮಂಜುನಾಥ ಭಂಡಾರಿ ಅವರಿಗೆ ಕ್ಷೇತ್ರದ ಟಿಕೆಟ್ ನೀಡಿದೆ. ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರ ಆಪ್ತರಾಗಿರುವ ಭಂಡಾರಿ ಅವರಿಗೆ ಇದು ಮೊದಲ ಚುನಾವಣೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಎಂಬುದು ಮಾತ್ರ ಮಂಜುನಾಥ ಭಂಡಾರಿ ಅವರಿಗೆ ಪ್ಲಸ್ ಪಾಯಿಂಟ್. ಟಿಕೆಟ್ ಕೈ ತಪ್ಪಿದ ಕುಮಾರ್ ಬಂಗಾರಪ್ಪ ಬಂಡಾಯವಾಗಿ ಸ್ಪರ್ಧಿಸುವುದಾಗಿ ಕೈ ನಾಯಕರಿಗೆ ಹೇಳಿದ್ದು, ಕ್ಷೇತ್ರದಲ್ಲಿ ಬಂಡಾಯದ ಕಹಳೆ ಮೊಳಗುವ ಲಕ್ಷಣಗಳನ್ನು ಸಾರಿ ಹೇಳುತ್ತಿದೆ.

ಆಮ್ ಆದ್ಮಿ ಪಕ್ಷ
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪಟ್ಟಿ ಮಾಡಿದ್ದ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಹೆಸರು ಸೇರಿಸಿದ್ದ ಅವರು, ಲೋಕಸಭಾ ಚುನಾವಣೆಯಲ್ಲಿಯೂ ಯಡಿಯೂರಪ್ಪ ವಿರುದ್ಧ ಪಕ್ಷದಿಂದ ಶ್ರೀಧರ್ ಕಲ್ಲಹಳ್ಳ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ. ಸಾಮಾಜಿಕ ಹೋರಾಟಗಾರರಾಗಿರುವ ಶ್ರೀಧರ್ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದು. ಯಡಿಯೂರಪ್ಪ ನಡೆಸಿದ ಭ್ರಷ್ಟಾಚಾರವೇ ತಮ್ಮ ಚುನಾವಣಾ ವಿಷಯ ಎಂದು ಹೇಳಿಕೊಳ್ಳುತ್ತಿದ್ದಾರೆ.

ಕ್ಷೇತ್ರದ ಸದ್ಯದ ಪರಿಸ್ಥತಿ : ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ಗೆಲುವು ಖಚಿತ ಎಂಬುದು ಸದ್ಯದ ಪರಿಸ್ಥಿತಿ. ಬಿಜೆಪಿಯ ದೊಡ್ಡ ನಾಯಕರ ಪಡೆ ಮತ್ತು ಸಾವಿರಾರು ಕಾರ್ಯಕರ್ತರು ಹಗಲಿರುಳು ಯಡಿಯೂರಪ್ಪ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರಿಗೆ ಸೋಲು ಖಚಿತ ಎಂದು ಕುಮಾರ್ ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ. ಬಂಗಾರಪ್ಪ, ಯಡಿಯೂರಪ್ಪ ಕುಟುಂಬದ ಕಾದಾಟದ ನಡುವೆ ಬಂದಿರುವ ಮಂಜುನಾಥ ಭಂಡಾರಿ, ಶ್ರೀಧರ್ ಕಲ್ಲಹಳ್ಳ ಕಥೆ ಏನೆಂದು ಮೇ.16ರಂದು ತಿಳಿಯಲಿದೆ.

English summary
Elections 2014 : Former Karnataka chief minister BS Yeddyurappa will take on Congress's Manjunath Bhandari, JD(S)'s Geetha Shivarajkumar and Aam Aadmi Party's (AAP) Sreedhar Kallahalla Gangadhar from Shimoga constituency. But election is family fight between BS Yeddyurappa and S.Bangarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X