ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬೆಂಬಲಿಸಿದ ಭೈರಪ್ಪ, ಯುಆರ್‌ಎ ಏನಂದ್ರಪ್ಪ

By Mahesh
|
Google Oneindia Kannada News

ಬೆಂಗಳೂರು, ಏ.23: ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಮತ್ತೊಮ್ಮೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ಹೇಳಿಕೆ ನೀಡಿದ್ದಾರೆ. ಕುಟುಂಬ ರಾಜಕೀಯ ದೇಶದ ಪ್ರಗತಿಗೆ ಮಾರಕ, ಮೋದಿ ಸಮರ್ಥ ನಾಯಕ ಎಂದಿದ್ದಾರೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ಕನ್ನಡ ಸಾಹಿತಿಗಳ ಪರ-ವಿರೋಧ ಹೇಳಿಕೆಗಳು ಮತ್ತೆ ಮುಂದುವರೆದಿದೆ.

ಕೆಲವು ದಿನಗಳ ಹಿಂದೆಯಷ್ಟೇ ಮೋದಿ ವಿರೋಧಿಸಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ದೆಹಲಿಯಲ್ಲಿ ಗುಡುಗಿದ್ದರು. ಈಗ ಮೋದಿ ಪರ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಹೇಳಿಕೆ ನೀಡಿದ್ದಾರೆ.

ದೆಹಲಿಯ ಕಾನ್ ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಕರೆದಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಎಸ್.ಎಲ್.ಭೈರಪ್ಪ, 'ನಾನು ಗುಜರಾತಿನಲ್ಲಿ 6 ವರ್ಷ ಕೆಲಸ ಮಾಡಿದ್ದು, ಈಗಲೂ ಭೇಟಿ ನೀಡುತ್ತೇನೆ. ಅಲ್ಲಿ ಲಂಚವಿಲ್ಲದೆ ಕೆಲಸ ನಡೆಯುತ್ತಿದೆ. ಮೋದಿಗೆ ಪರ್ಯಾಯ ನಾಯಕ ದೇಶದಲ್ಲಿ ಸದ್ಯಕ್ಕಿಲ್ಲ. ಕೆಲವು ಸಾಹಿತಿಗಳು ಮೋದಿ ಟೀಕಿಸುತ್ತಾರೆ, ಅವರು ಪ್ರಧಾನಿಯಾದರೆ ಸ್ವಾಗತಿಸಲು ಈ ಸಾಹಿತಿಗಳೇ ಹೂಗುಚ್ಛ ಹಿಡಿದುಕೊಂಡು ನಿಂತಿರುತ್ತಾರೆ ಎಂದಿದ್ದರು.

'ನನ್ನ ದೃಷ್ಟಿಯಲ್ಲಿ ನರೇಂದ್ರ ಮೋದಿ ಅತ್ಯುತ್ತಮ ಪ್ರಗತಿಶೀಲ ಆಡಳಿತಗಾರ. ಗುಜರಾತಿನಲ್ಲಿ ಏನು ಮಾಡಿದ್ದರೋ ಅದನ್ನು ದೇಶವ್ಯಾಪಿ ಮಾಡಲಿ ಎಂಬುದು ನನ್ನ ಅಪೇಕ್ಷೆ. ದೇಶವನ್ನು ಒಂದೇ ಕುಟುಂಬದವರು ಆಳಬೇಕೆ? ನರೇಂದ್ರ ಮೋದಿ ಚಹಾ ಮಾರುತ್ತಿದ್ದವನು, ಇನ್ನೊಬ್ಬರು ಇನ್ಯಾವುದೋ ವೃತ್ತಿಯಲ್ಲಿರಬಹುದು, ಆದರೆ ಈ ಗಾಂಧಿ ಕುಟುಂಬಕ್ಕೆ ಆಳುವುದೇ ಕಸುಬು' ಎಂದು ಟೀಕಿಸಿದ್ದರು., ಇದಕ್ಕೆ ಯುಆರ್ ಅನಂತಮೂರ್ತಿ ಅವರು ನೀಡಿದ ಉತ್ತರವೇನು? ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಭೈರಪ್ಪ ಅವರು ಹೇಳಿದ್ದೇನು? ಮುಂದೆ ಓದಿ...

ಮೋದಿ ಎಲ್ಲವನ್ನೂ ನಿಯಂತ್ರಿಸುತ್ತಾರೆ

ಮೋದಿ ಎಲ್ಲವನ್ನೂ ನಿಯಂತ್ರಿಸುತ್ತಾರೆ

ಕಾಂಗ್ರೆಸ್ ನ ಆಡಳಿತದಲ್ಲಿ 10 ಪೈಸೆಗೆ ಸಿಗುತ್ತಿದ್ದ ಔಷಧಿ 10 ರೂ.ಗಳಾಗಿದೆ. ಇಂತಹ ಸ್ಥಿತಿಯಲ್ಲಿ ಬಡವರು ಹೇಗೆ ಜೀವನ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು. ಮೋದಿ ಪ್ರಧಾನಿ ಆದರೆ ಎಲ್ಲವನ್ನೂ ನಿಯಂತ್ರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ನೆಹರು ಹಾಗೂ ಗಾಂಧಿ ಮನೆತನ ಬಿಟ್ಟು ಮತ್ಯಾರು ಅಧಿಕಾರ ನಡೆಸಲು ಲಾಯಕ್ಕಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ಈ ಚಿಂತನೆಯು ದೇಶದ ಜನತೆಗೆ ವಾಕರಿಕೆ ತರಿಸಿದೆ. ಆದರೆ ಮೋದಿ ಪರ ಹೇಳಿಕೆ ಏಕ ವ್ಯಕ್ತಿ ಆರಾಧನೆಯಲ್ಲ. ದೇಶಕ್ಕೆ ಸಮರ್ಥ ಹಾಗೂ ಪ್ರಭಾವಿ ನಾಯಕನ ಅಗತ್ಯವಿದೆ. ಈ ಸ್ಥಾನವನ್ನು ಮೋದಿ ತುಂಬುವ ವಿಶ್ವಾಸವಿದೆ ಎಂದು ಭೈರಪ್ಪ ಹೇಳಿದರು.

ಅನಂತಮೂರ್ತಿ ಅವರ ರಾಜಕೀಯ ಪ್ರೇಮ

ಅನಂತಮೂರ್ತಿ ಅವರ ರಾಜಕೀಯ ಪ್ರೇಮ

'ಈ ಹಿಂದೆ ಅನಂತಮೂರ್ತಿ ಅವರು ದೇವೇಗೌಡ, ರಾಮಕೃಷ್ಣ ಹೆಗಡೆ ಅವರಿಗೂ ಬೆಂಬಲ ನೀಡಿದ್ದರು. ಅವರ ನಿಲುವಿನಲ್ಲಿ ಬದಲಾವಣೆಗಳಾಗುತ್ತಲೇ ಇರುತ್ತದೆ' ಎಂದರು. ಅಧಿಕಾರಕ್ಕೇರುವ ಪಕ್ಷ ಹಾಗೂ ವ್ಯಕ್ತಿಗಳ ಪರ ಮಾತನಾಡುವುದು ಅನಂತಮೂರ್ತಿಗೆ ಮೊದಲಿಂದ ಅಂಟಿದೆ. ಆದರೆ ನಾನು ದೇಶದ ಒಳಿತಿಗಾಗಿ ಮೋದಿ ಅನಿವಾರ್ಯವಾಗಿರುವುದರಿಂದ ಹೇಳಿಕೆ ನೀಡುತ್ತಿದ್ದೇನೆ ಎಂದರು.

ಭೈರಪ್ಪ ಹೇಳಿಕೆಗೆ ಅನಂತಮೂರ್ತಿ ಪ್ರತಿಕ್ರಿಯೆ

ಭೈರಪ್ಪ ಹೇಳಿಕೆಗೆ ಅನಂತಮೂರ್ತಿ ಪ್ರತಿಕ್ರಿಯೆ

ರಾಜ್ಯ ಬಿಜೆಪಿ ಸರ್ಕಾರವು ಅಕ್ರಮ ಗಣಿಗಾರಿಕೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾಗ ಒಂದೂ ಮಾತನಾಡದ ಭೈರಪ್ಪ, ಈಗ ಮೋದಿ ಪರ ನಿಂತಿರುವುದು ಹಾಸ್ಯಾಸ್ಪದ. ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದ ಕಲ್ಲು ಹೃದಯದ ಭೈರಪ್ಪ ಈಗ ಮೋದಿ ಪರ ನಿಂತಿದ್ದಾರೆ. ಮೋದಿಯೊಬ್ಬ ಹಿಟ್ಲರ್ ಎನ್ನುವುದನ್ನು ಅರ್ಥೈಸಿಕೊಳ್ಳದೇ ಬೆಂಬಲಿಸುತ್ತಿದ್ದಾರೆ. ಇನ್ನು ಮೋದಿ ಪ್ರಧಾನಿಯಾದರೆ ಹೂಗುಚ್ಛ ನೀಡುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಜ್ಞಾನಪೀಠ ಸಾಹಿತಿ ಯು.ಆರ್. ಅನಂತಮೂರ್ತಿ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸಂಚು

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸಂಚು

ಮಾಜಿ ಮುಖ್ಯಮಂತ್ರಿ ಬಿ.ಎಸ್ ‌.ಯಡಿಯೂರಪ್ಪ ಮೇಲಿರುವ ಭ್ರಷ್ಟಾಚಾರದ ಆರೋಪವನ್ನು ಭೈರಪ್ಪ ಅಲ್ಲಗಳೆದಿದ್ದಾರೆ. ಒಳ್ಳೆಯ ಕೆಲಸಗಾರ ಬಿಎಸ್ ವೈಗೆ ಜನ ಬೆಂಬಲವಿದೆ. ಅವರು ಜೈಲಿಗೆ ಹೋಗಲು ರಾಜಕೀಯ ಸಂಚು ಕಾರಣ. ಅವರನ್ನು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದರು.

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಶಿಕ್ಷಕರ ಕ್ಷೇತ್ರದ ಮೂಲಕ ಎಂಎಲ್ ಸಿ ಆಗುವಂತೆ ಆಹ್ವಾನ ನೀಡಿದ್ದರು. ಆದರೆ, ನಾನು ಒಪ್ಪಿಕೊಳ್ಳಲಿಲ್ಲ ಎಂದರು

2002ರ ದಂಗೆ ಬಗ್ಗೆ ತಪ್ಪು ಕಲ್ಪನೆ ಬೇಡ

2002ರ ದಂಗೆ ಬಗ್ಗೆ ತಪ್ಪು ಕಲ್ಪನೆ ಬೇಡ

2002ರ ದಂಗೆಯಲ್ಲಿ ಅಂದಿನ ನಿಷ್ಠಾವಂತ ಸಿಬಿಐ ನಿರ್ದೇಶಕರಾಗಿದ್ದ ರಾಘವನ್ ‌ ಅವರಿಗೇ ಮೋದಿಯ ವಿರುದ್ಧ ಆರೋಪಗಳಲ್ಲಿ ಸಾಕ್ಷ್ಯ ಸಿಕ್ಕಿರಲಿಲ್ಲ, ನ್ಯಾಯಾಲಯವು ಕೂಡ ಇದನ್ನು ಪುರಸ್ಕರಿಸಿದೆ ಎಂದು ಮೋದಿಯನ್ನು ಸಮರ್ಥಿಸಿಕೊಂಡರು. ಗುಜರಾತ್ ದಂಗೆಯಲ್ಲಿ ಮೋದಿ ಪಾತ್ರವಿಲ್ಲವೆಂದು ಕೋರ್ಟ್ ಸ್ಪಷ್ಟಪಡಿಸಿದ್ದರೂ ಮೋದಿಯನ್ನು ಸಿಲುಕಿಸುವ ಸಂಚನ್ನು ಮಾಡಲಾಗುತ್ತಿದೆ. ಜನರು ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಹೊಂದಿದ್ದಾರೆ.

ಅರ್ಥವ್ಯವಸ್ಥೆಯಿಂದ ಸುಧಾರಣೆ ಸಾಧ್ಯ

ಅರ್ಥವ್ಯವಸ್ಥೆಯಿಂದ ಸುಧಾರಣೆ ಸಾಧ್ಯ

ದೇಶದ ಆರ್ಥಿಕ ವ್ಯವಸ್ಥೆ ಪ್ರಗತಿಯಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಇದನ್ನು ಗುಜರಾತ್ ‌ ಮುಸ್ಲಿಮರು ಅರ್ಥಮಾಡಿಕೊಂಡಿದ್ದಾರೆ. ಮೋದಿ ಕೆಲಸಗಾರ, ಅವರ ಕೈಗೆಳಗಿನವರು ಕೂಡ ಅದೇ ರೀತಿ ಕೆಲಸ ಮಾಡಬೇಕು ಎಂದು ನಿರೀಕ್ಷಿಸುತ್ತಾರೆ. ಇದನ್ನು ಸರ್ವಾಧಿಕಾರ ಎಂದು ಪರಿಗಣಿಸಲಾಗದು. ಮೋದಿ ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬೈರಪ್ಪ ನುಡಿದರು.

English summary
Writer SL Bhyrappa said Narendra Modi is good leader to lead the country. sending BS Yeddyurappa to jail was a conspiracy. Bhyrappa also clarified that he is not with any political party and even had refused to accept the offer of become an MLC from the teachers constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X