ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಭಾಷಣದಲ್ಲಿ ಸರ್ ಎಂವಿ ಸ್ಮರಿಸಿದ ಗೌಡ

By Prasad
|
Google Oneindia Kannada News

ನವದೆಹಲಿ, ಆ. 8 : ಕರ್ನಾಟಕದಿಂದ ಮೊದಲ ಬಾರಿಗೆ ರಾಜ್ಯಸಭೆಯನ್ನು ಪ್ರವೇಶಿಸಿರುವ ಕಾಂಗ್ರೆಸ್ ಧುರೀಣ, ಐಐಎಂ-ಬೆಂಗಳೂರಿನಲ್ಲಿ ಉಪನ್ಯಾಸಕರಾಗಿರುವ ರಾಜೀವ್ ಗೌಡ ಅವರು ರಾಜ್ಯಸಭೆಯಲ್ಲಿ ಮಾಡಿದ ಪ್ರಥಮ ಭಾಷಣದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ಸಾಧ್ಯತೆಗಳ ಬಗ್ಗೆ ಮಂಗಳವಾರ, ಆ.5ರಂದು ವಿಸ್ತೃತವಾಗಿ ಮಾತನಾಡಿದರು.

ಭಾಷಣದ ಆರಂಭದಲ್ಲಿ ಕರ್ನಾಟಕದ ಮೇಧಾವಿ ಇಂಜಿನಿಯರ್, ಕೃಷ್ಣರಾಜ ಸಾಗರ ಅಣೆಕಟ್ಟೆಯ ನಿರ್ಮಾತೃ ಸರ್ ಮೋಕ್ಷಗುಂಡು ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದರು. ಬೀದಿದೀಪದ ಕೆಳಗೆ ಓದಿ ಜ್ಞಾನಜ್ಯೋತಿಯನ್ನು ಬೆಳಗಿಸಿಕೊಂಡ ಅವರು, ಮುಂದೆ ಶರಾವತಿ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟನ್ನು ಆರಂಭಿಸಿ ರಾಜ್ಯವನ್ನು ಬೆಳಗುವಂತೆ ಮಾಡಿದರು ಎಂದು ಕೊಂಡಾಡಿದರು.

ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯೆಲ್ ಅವರನ್ನು ಉದ್ದೇಶಿಸಿ ಮಾತು ಮುಂದುವರಿಸಿದ ಅವರು, ಇಂಧನ ಕ್ಷೇತ್ರದಲ್ಲಿ ಬಂಡವಾಳ ಆಕರ್ಷಿಸುವುದು, ಯೋಜನೆ ಅನುಮೋದನೆಗೆ ತಡವಾಗುತ್ತಿರುವುದು, ಕೋಲ್ ಇಂಡಿಯಾದ ಏಕಸ್ವಾಮ್ಯ, ಇಂಧನ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆಯೇ ಚರ್ಚೆಯಾಗುತ್ತಿದೆಯೇ ಹೊರತು ಅಗಾಧವಾದ ಬೇಡಿಕೆ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ನುಡಿದರು. ಅವರ ಮಾತಿನ ಮುಖ್ಯಾಂಶಗಳು ಕೆಳಗಿನಂತಿವೆ.

Maiden speech by Rajeev Gowda in Rajya Sabha on Power sector

* ದೇಶದ ಅನೇಕ ಪ್ರತಿಭಾವಂತ ಮಕ್ಕಳಿಗೆ ಕನಿಷ್ಠಪಕ್ಷ ಬೀದಿದೀಪದ ಸೌಲಭ್ಯ ಕೂಡ ಲಭ್ಯವಿಲ್ಲ. ಬಡಮಕ್ಕಳ ಜ್ಞಾನವೃದ್ಧಿಯಾಗಬೇಕಾದರೆ, ಉದ್ಧಾರವಾಗಬೇಕಾದರೆ ವಿದ್ಯುತ್ ಮೊದಲು ಸಿಗುವಂತಾಗಬೇಕು. ತಮಸೋಮಾ ಜ್ಯೋತಿರ್ಗಮಯ ಎಂಬುದು ಸರಕಾರದ ಮಂತ್ರವಾಗಬೇಕು.

* ಯುಪಿಎ ಸರಕಾರ ಆರಂಭಿಸಿದ್ದ ರಾಜೀವ್ ಗಾಂಧಿ ವಿದ್ಯುದೀಕರಣ ಯೋಜನೆಯಲ್ಲಿ ನಂಬಿಕೆಯಿಟ್ಟು ಮುಂದುವರಿಸಿದ್ದಕ್ಕೆ ಮತ್ತು 5,144 ಕೋಟಿ ರು. ಅನುದಾನವನ್ನು ಮೀಸಲಿಟ್ಟಿದ್ದಕ್ಕೆ ಎನ್‌ಡಿಎ ಸರಕಾರವನ್ನು ಅಭಿನಂದಿಸುತ್ತೇನೆ. ಇದರಿಂದ 1 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಲಭಿಸುವಂತಾಗಿದೆ.

* ದೇಶದ ಗ್ರಾಮಗಳಲ್ಲಿ ಶೇ.45ರಷ್ಟು ಜನರಿಗೆ ಇನ್ನೂ ವಿದ್ಯುತ್ ಲಭ್ಯವಾಗಿಲ್ಲ ಎಂಬುದು ಕಳವಳಕಾರಿ. ಶೇ.10ರಷ್ಟು ಗ್ರಾಮೀಣ ಜನರಿಗೆ ವಿದ್ಯುತ್ ಲಭಿಸಿದ್ದಕ್ಕೆ ಇಡೀ ಗ್ರಾಮಕ್ಕೇ ವಿದ್ಯುತ್ ಲಭಿಸಿದಂತೆ ಎನ್ನುವುದು ಸರಿಯಲ್ಲ. ವಿದ್ಯುತ್ ಸಿಕ್ಕರೂ ಅವರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ.

* ವಿದ್ಯುತ್ ಲಭ್ಯವಿಲ್ಲದ್ದರಿಂದ ಮಕ್ಕಳು ಓದಲು ಸಾಧ್ಯವಾಗದೆ ಶಾಲೆ ತೊರೆಯುತ್ತಿದ್ದಾರೆ, ಉತ್ತಮ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಅವರಿಗೆಲ್ಲ ವಿದ್ಯುತ್ ಸಿಗುವಂತಾದರೆ ಅದಕ್ಕಿಂತ ಉತ್ತಮವಾದದ್ದು ಇನ್ನೊಂದಿಲ್ಲ.


* ಹೇಗೆ ಉತ್ಪಾದಿಸುವುದು? ಗಾಂಧೀಜಿ ಇದಕ್ಕೊಂದು ಪರಿಹಾರ ಹುಡುಕಿದ್ದರು. 'ಸಣ್ಣದು ಸುಂದರ' ಎಂಬ ಮಹಾತ್ಮಾ ಗಾಂಧೀಜಿ ಅವರ ತತ್ತ್ವದಂತೆ ವಿದ್ಯುತ್ ವಿತರಣಾ ವ್ಯವಸ್ಥೆ ವಿಕೇಂದ್ರೀಕರಣವಾಗಬೇಕು ಮತ್ತು ಭಾರತದ ಗ್ರಾಮಗಳು ಸ್ವತಂತ್ರವಾಗಿ ವಿದ್ಯುತ್ ಉತ್ಪಾದಿಸುವಂತಾಗಬೇಕು. ಸೋಲಾರ್, ಗಾಳಿಯನ್ನು ಬಳಸಿ ವಿದ್ಯುತ್ ಉತ್ಪಾದನೆಯಾಗಬೇಕು.

* ಆಫ್ ಗ್ರಿಡ್ ವಿದ್ಯುತ್ ಉತ್ಪಾದಿಸಲು ಗ್ರಾಮಗಳಲ್ಲಿ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಬೇಕು. ಅವರಿಗೆ ವಿದ್ಯುತ್ ಉತ್ಪಾದಿಸಲು ತರಬೇತಿ ನೀಡಿ, ಇಡೀ ಗ್ರಾಮಕ್ಕೆ ವಿದ್ಯುತ್ ತಲುಪುವಂತಾಗಬೇಕು.

* ತಂತ್ರಜ್ಞಾನ ಬಳಕೆಯಾಗಬೇಕು. ರಾಜೀವ್ ಗಾಂಧಿ ಮತ್ತು ಸ್ಯಾಮ್ ಪಿತ್ರೋಡಾ ಟೆಲಿಫೋನ್ ಕ್ಷೇತ್ರದಲ್ಲಿ ಏನು ಸಾಧನೆ ಮಾಡಿದರು ಎಂಬುದನ್ನು ನೋಡಬೇಕು. ಅವರ ಸಾಧನೆಯಿಂದ ಸ್ಫೂರ್ತಿ ಪಡೆದು ಆಧುನಿಕ ತಂತ್ರಜ್ಞಾನವನ್ನು ಬಳಸಿ ವಿದ್ಯುತ್ ಉತ್ಪಾದನೆಯಾಗಬೇಕು.

* ನಗರಗಳಲ್ಲಿ ಹಸಿ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿದೆ. ಆದರೆ, ಇದೇ ಹಸಿ ತ್ಯಾಜ್ಯವನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ನಗರಗಳಲ್ಲಿ ಸ್ಥಾಪಿಸಿ, ಪರ್ಯಾಯವಾಗಿ ವಿದ್ಯುತ್ ಉತ್ಪಾದಿಸಬೇಕು. ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದು ಸ್ವತಃ ವಿದ್ಯುತ್ ಉತ್ಪಾದಿಸಿ ಕೋಟಿ ಕೋಟಿ ಹಣವನ್ನು ಉಳಿತಾಯ ಮಾಡಿದೆ.

English summary
Maiden speech by Karnataka Congress leader Prof. Rajeev Gowda in Rajya Sabha. He spoke about performance and possibility in power sector. In his speech he remembered Sir M. Visweswaraya, who studied under the street light and contributed immensely towards power generation in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X