ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮುಸಲ್ಮಾನರು ದೇಶಕ್ಕಾಗಿ ಬದುಕ್ತಾರೆ, ಸಾಯ್ತಾರೆ : ನರೇಂದ್ರ ಮೋದಿ

By Prasad
|
Google Oneindia Kannada News

ನವದೆಹಲಿ, ಸೆ. 19 : ಭಾರತದ ಮುಸ್ಲಿಮರು ಅಲ್ ಖೈದಾ ಉಗ್ರರ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲ, ಅವರು ಭಾರತಕ್ಕಾಗಿ ಬದುಕುತ್ತಾರೆ ಮತ್ತು ದೇಶಕ್ಕಾಗಿಯೇ ಸಾಯುತ್ತಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಉಗ್ರರಿಗೆ ತಲುಪುವಂತೆ ಇಡೀ ಜಗತ್ತಿಗೆ ಖಡಕ್ ಸಂದೇಶ ಸಾರಿದ್ದಾರೆ.

ಪ್ರಧಾನಿಯಾದ ನಂತರ ನೀಡಿದ ಮೊದಲ ಸಂದರ್ಶನದಲ್ಲಿ ಸಿಎನ್ಎನ್ ಜೊತೆ ಮಾತನಾಡುತ್ತ, ಅವರು (ಉಗ್ರರು) ಭಾರತದ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಮ್ಮ ಅಣತಿಗೆ ತಕ್ಕಂತೆ ಮುಸ್ಲಿಂರು ಕುಣಿಯುತ್ತಾರೆ ಎಂದು ತಿಳಿದಿದ್ದರೆ ಅದು ಅವರ ಭ್ರಮೆ. ದೇಶದ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ, ಸಾಯುತ್ತಾರೆ. ಅವರಲ್ಲಿ ದೇಶದ ಬಗ್ಗೆ ಯಾವುದೇ ಕೆಟ್ಟ ಭಾವನೆಗಳಿಲ್ಲ ಎಂದಿದ್ದಾರೆ.

ಭಾರತದಲ್ಲಿ ಅಲ್ ಖೈದಾ ಬ್ರಾಂಚ್ ತೆರೆಯುತ್ತಿರುವ ಕುರಿತು ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ, ಕಾಶ್ಮೀರದಲ್ಲಿ ಮತ್ತು ಗುಜರಾತ್ ನಲ್ಲಿ ಮುಸಲ್ಮಾನರು ತುಳಿತಕ್ಕೊಳಗಾಗುತ್ತಿದ್ದಾರೆ ಎಂದು ಬಿಂಬಿಸುತ್ತಿರುವ ಬಗ್ಗೆ ಸಿಎನ್ಎನ್‌ನ ಫರೀದ್ ಝಕಾರಿಯಾ ಅವರು ಕೇಳಿದಾಗ ನರೇಂದ್ರ ಮೋದಿ ಅವರು ಮೇಲಿನಂತೆ ಖಡಕ್ಕಾಗಿ ಉತ್ತರಿಸಿದ್ದಾರೆ.

Indian Muslims will live and die for India: Narendra Modi

ಅಲ್ ಖೈದಾ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿದ್ದರೂ ಭಾರತದಲ್ಲಿರುವ 17 ಕೋಟಿ ಮುಸ್ಲಿಮರಲ್ಲಿ ಕೆಲವರು ಮಾತ್ರ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿದ್ದಾರೆ. ಯಾವ ಸಂಗತಿ ಅವರು ಭಯೋತ್ಪಾದಕ ಪ್ರಚೋದನೆಗೆ ಮತ್ತು ಪ್ರಲೋಭನೆಗೆ ಒಳಗಾಗದಂತೆ ತಡೆಯುತ್ತಿದೆ ಎಂಬ ಪ್ರಶ್ನೆಗೆ ಅವರು ಕೆಳಗಿನಂತೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಇದು ಯಾವುದೇ ದೇಶವಾಗಲಿ, ಯಾವುದೇ ಜಾತಿಯಾಗಲಿ ಸಂಕಷ್ಟದಲ್ಲಿ ಸಿಲುಕಿಲ್ಲ, ಇಂದು ಮಾನವೀಯತೆಯೇ ಸಂಕಷ್ಟದಲ್ಲಿದೆ. ಮಾನವೀಯತೆಗಾಗಿ ಇಡೀ ಜಗತ್ತು ಒಗ್ಗೂಡಬೇಕಾ ಬೇಡವಾ ಎಂದು ನಿರ್ಧಾರವಾಗಬೇಕಾಗಿದೆ. ನಾವು ಉಗ್ರರು ನಡೆಸುತ್ತಿರುವ ಯುದ್ಧವನ್ನು ಮಾನವೀಯತೆ ಮತ್ತು ಅಮಾನವೀಯತೆಯ ನಡುವಿನ ಯುದ್ಧವೆಂದೇ ಬಿಂಬಿಸಬೇಕು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಸೆ.28ರಿಂದ ಅಮೆರಿಕ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಬಗ್ಗೆಯೂ ಈ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕ ಮತ್ತು ಭಾರತದ ನಡುವೆ ಬಹಳಷ್ಟು ಸಾಮ್ಯತೆಗಳಿವೆ. ಅಮೆರಿಕದಲ್ಲಿ ಪ್ರತಿಯೊಂದು ದೇಶದ ಪ್ರಜೆಗಳಿದ್ದಾರೆ ಮತ್ತು ಜಗತ್ತಿನ ಪ್ರತಿ ಮೂಲೆಯಲ್ಲಿ ಭಾರತೀಯರಿದ್ದಾರೆ. ಮುಂದೆ ಎರಡೂ ದೇಶಗಳ ನಡುವೆ ಸಂಬಂಧ ಇನ್ನಷ್ಟು ಗಾಢವಾಗಲಿದೆ ಎಂದು ಮೋದಿ ನುಡಿದಿದ್ದಾರೆ.

English summary
Indian Muslims will live and die for India, Prime Minister Narendra Modi has said, maintaining that they will not dance to the tunes of terror outfit Al Qaeda. In an exclusive interview to CNN Narendra Modi has said terrorism is crisis against humanity and not against one country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X