ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಷರೀಫ್ ಕಾಲಿಟ್ಟರೆ ಮೈಸೂರಿನಲ್ಲಿ ತ್ರಿಕೋನ ಸ್ಪರ್ಧೆ ಖಚಿತ

By ಎಲ್ಕೆ ಮೈಸೂರು
|
Google Oneindia Kannada News

ಮೈಸೂರು, ಮಾ. 19 : ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ನಾನಾ ಕಾರಣಗಳಿಂದಾಗಿ ಭಾರೀ ಕುತೂಹಲ ಕೆರಳಿಸಿದ್ದು, ರಾಜಕೀಯ ನಾಯಕರು ಸೇರಿದಂತೆ ಮೈಸೂರು ಮತ್ತು ಕೊಡಗಿನ ಜನರು ಇತ್ತ ಕುತೂಹಲದ ನೋಟ ಬೀರುತ್ತಿದ್ದಾರೆ.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಎಂಬುದು ಒಂದು ಕಾರಣವಾದರೆ, ಮತ್ತೊಂದು ಪತ್ರಕರ್ತ ಪ್ರತಾಪ್ ಸಿಂಹ ಗೌಡ ಸ್ಪರ್ಧಿಸುತ್ತಿರುವುದು. ಇದೆಲ್ಲದರ ನಡುವೆ ಟಿಕೆಟ್ ವಂಚಿತ ಕಾಂಗ್ರೆಸ್‌ನ ಹಿರಿಯ ನಾಯಕ ಜಾಫರ್ ಷರೀಫ್ ಅವರನ್ನು ಜೆಡಿಎಸ್‌ಗೆ ಸೆಳೆದು ಕಣಕ್ಕಿಳಿಸುವ ತಂತ್ರವನ್ನು ದೇವೇಗೌಡರು ಮಾಡುತ್ತಿದ್ದಾರೆ. ಗೌಡರ ತಂತ್ರ ಫಲಿಸಿದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಇನ್ನಷ್ಟು ಕುತೂಹಲ ಕೆರಳಿಸುವುದಂತು ಖಚಿತ. [ಬಿರುಸಿನ ಮತಯಾಚನೆ ಚಿತ್ರಗಳು]

ಈಗಾಗಲೇ ಹಾಲಿ ಸಂಸದ ಅಡಗೂರು ಎಚ್.ವಿಶ್ವನಾಥ್ ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಲೋಕಸಭೆಗೆ ಸ್ಪರ್ಧೆ ಬಯಸಿದ್ದರೆ, ಬಿಜೆಪಿಯಿಂದ ಯುವ ಅಂಕಣಕಾರ ಪ್ರತಾಪ್ ಸಿಂಹ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಜೆಡಿಎಸ್‌ನಿಂದ ಸಾರಾ ಮಹೇಶ್ ಅವರ ಹೆಸರು ಕೇಳಿ ಬರುತ್ತಿದೆಯಾದರೂ ಜಾಫರ್ ಷರೀಫ್ ಅವರ ನಿಲುವು ಪ್ರಕಟವಾದ ನಂತರವಷ್ಟೆ ಚಿತ್ರಣ ತಿಳಿಯಲಿದೆ. ಇಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಜೆಡಿಎಸ್ ಪ್ರಬಲ ಪೈಪೋಟಿ ನೀಡುವುದಂತು ಸ್ಪಷ್ಟ. [ಪ್ರತಾಪ್ ಸಿಂಹ ವ್ಯಕ್ತಿ ಪರಿಚಯ]

Elections 2014 : Triangular contest in Mysore-Kodagu

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ತವರು ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕಾಗಿದೆ. ಈ ಮೊದಲೇ ಅವರ ವಿರುದ್ಧ ಅಪಸ್ವರಗಳು ಕೇಳಿಬಂದಿದ್ದು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಪಕ್ಷದ ನಾಯಕರು ಇದನ್ನೇ ದಾಳವಾಗಿ ಉಪಯೋಗಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನು ತಪ್ಪಿಸಬೇಕಾದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು. ಅದಕ್ಕೆ ಬೇಕಾದ ಕಸರತ್ತನ್ನು ಸಿದ್ದರಾಮಯ್ಯ ಮಾಡಲಿದ್ದಾರೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.

ಇನ್ನು ಬಿಜೆಪಿಯಿಂದ ಪತ್ರಕರ್ತ ಪ್ರತಾಪ್ ಸಿಂಹ ಟಿಕೆಟ್ ಪಡೆದಿರುವುದು ಹಲವರ ಪಾಲಿಗೆ ಬಿಸಿತುಪ್ಪವಾಗಿತ್ತು. ಕಳೆದ ಬಾರಿ 2009ರಲ್ಲಿ ಕೇವಲ 6691 ಮತಗಳಿಂದ ಸೋತಿದ್ದ ಸಿಎಚ್ ವಿಜಯಶಂಕರ್ ಅವರಿಗೆ ಟಿಕೆಟ್ ನೀಡದೆ ಸಿಂಹನಿಗೆ ಟಿಕೆಟ್ ನೀಡಿದ್ದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಮೈಸೂರಿನ ಚಾಮುಂಡಿ ಬೆಟ್ಟ, ಕೊಡಗಿನ ತಲಕಾವೇರಿಗೆ ತೆರಳಿ ಪೂಜೆ ಮಾಡಿ ಬಂದಿರುವ ಅವರು ಕಾರ್ಯಕರ್ತರ ಸಭೆ ನಡೆಸಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. [ನಾನು ಹುಲಿ, ಪ್ರತಾಪ್ ಸಿಂಹ : ವಿಶ್ವನಾಥ್]

ಜೆಡಿಎಸ್‌ನಲ್ಲಿ ಸ್ಪರ್ಧೆಗೆ ಅಭ್ಯರ್ಥಿಗಳು ಸಿದ್ಧವಾಗಿದ್ದರೂ ದೇವೇಗೌಡರು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಟಿಕೆಟ್ ವಂಚಿತ ಜಾಫರ್ ಷರೀಫ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಮತವನ್ನು ಅನಾಯಸವಾಗಿ ಸೆಳೆಯಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಜೆಡಿಎಸ್ ತಟಸ್ಥವಾಗಿ ಉಳಿದಿದೆ. ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಮುಂದಿನ ಬೆಳವಣಿಗೆ ಏನು ಎಂಬುದನ್ನು ಜನ ಕಾದು ನೋಡುತ್ತಿದ್ದಾರೆ.

English summary
Lok Sabha Elections 2014 : Mysore-Kodagu constituency has caught the attension of politicians and public for several reasons. Pratap Simha contesting from BJP is one reason. This being the home district of Siddaramaiah is another reason. Jaffer Sharief may contest here from JDS too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X