ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ವಿಸರ್ಜನೆ ಸಮಯದಲ್ಲಿ ಲೈಂಗಿಕ ದೌರ್ಜನ್ಯ

By Prasad
|
Google Oneindia Kannada News

ಮುಂಬೈ, ಸೆ. 20 : ವಿಪರೀತ ಜನಸಂದಣಿಯ ದುರ್ಲಾಭ ಪಡೆದ ಮೂವರು ಕಾಮುಕರು, ಗಣೇಶನ ವಿಸರ್ಜನೆಯ ಸಂದರ್ಭದಲ್ಲಿ ಯುವತಿಯನ್ನು ಲೈಂಗಿಕವಾಗಿ ದುರ್ಬಳಸಿಕೊಂಡ ಚಿತ್ರಗಳನ್ನು ಛಾಯಾಚಿತ್ರಕಾರರೊಬ್ಬರು ಸೆರೆಹಿಡಿದಿದ್ದಾರೆ.

ಈ ಘಟನೆ ನಡೆದಿರುವುದು ಬುಧವಾರದಂದು ಲಾಲ್ ಬೌಗಚಾ ರಾಜಾ ಗಣೇಶ ಮೂರ್ತಿಯ ವಿಸರ್ಜನೆಯ ಸಂದರ್ಭದಲ್ಲಿ. ಮೂವರು ಕಾಮುಕ ಯುವಕರು ಜನಸಂದಣಿಯಲ್ಲಿ ಅಮಾಯಕರಂತೆ ಅಡ್ಡಾಡುತ್ತ ಯಾವ ರೀತಿ ಯುವತಿಯನ್ನು ಲೈಂಗಿಕವಾಗಿ ಹಿಂಸಿಸಿದರು ಎಂಬುದನ್ನು ಮಿಡ್ ಡೇ ಛಾಯಾಚಿತ್ರಕಾರ ಅತುಲ್ ಕಾಂಬ್ಳೆ ಅವರು ವಿವರಿಸಿದ್ದಾರೆ.

ಅಂದು ಉಳಿದವರಿಗೆ ರಜಾ ಇದ್ದರೂ ಡ್ಯೂಟಿ ಮೇಲಿದ್ದ ಛಾಯಾಪತ್ರಕರ್ತ ಉತ್ತಮ ಚಿತ್ರ ತೆಗೆಯಬೇಕೆಂದು ಕಾಯುತ್ತಿದ್ದಾಗ ಈ ಘಟನೆ ಅವರ ಕಣ್ಣಿಗೆ ಬಿದ್ದಿದೆ. ಯುವತಿಯೊಬ್ಬಳು ಏಕಾಂಗಿಯಾಗಿ ಇದ್ದುದನ್ನು ಗಮನಿಸಿದ ಮೂವರು ಯುವಕರು ಆಕೆಯ ಮೈಮೇಲೆ ಎಲ್ಲೆಂದರಲ್ಲಿ ಸ್ಪರ್ಶಿಸಿದ್ದಾರೆ. ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಅಚ್ಚರಿಯ ಸಂಗತಿಯೆಂದರೆ, ಇಂಥ ಘಟನೆಗಳು ಮುಂಬೈನಲ್ಲಿ ದಿನನಿತ್ಯ ಸಾಮಾನ್ಯವಾಗಿದ್ದು, ಇಷ್ಟು ಜನಸಂದಣಿ ಇರುವ ಸ್ಥಳದಲ್ಲಿ, ಅದೂ ಗಣೇಶನ ವಿಸರ್ಜನೆಯ ಸಮಯದಲ್ಲಿ ಯುವತಿ ಏಕಾಂಗಿಯಾಗಿ ಬರಬಾರದಿತ್ತು. ಇಲ್ಲಿ ಯುವತಿಯ ತಪ್ಪೂ ಇದೆ ಎಂದು ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇಂಥ ಘಟನೆಗಳು ಮುಂಬೈನಲ್ಲಿ ಮಾತ್ರವಲ್ಲ ದೇಶದ ಯಾವುದೇ ನಗರಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಕಾಮುಕರ ಕಪಿಮುಷ್ಟಿಗೆ ಮಹಿಳೆಯರು ಏಕಾಂಗಿಯಾಗಿ ಸಿಕ್ಕಾಗ ಪಾರು ಮಾಡಲು ಕೂಡ ಯಾರೂ ಬರುವುದಿಲ್ಲ. ಕಾಮುಕರ ವಿರುದ್ಧ ತಿರುಗಿ ಬೀಳುವವರು ಲಕ್ಷದಲ್ಲಿ ಒಬ್ಬರಿರುತ್ತಾರೆ. ಮಹಿಳೆ ಕಾಮುಕರ ಕೈಯಲ್ಲಿ ಯಾತನೆ ಅನುಭವಿಸುತ್ತಿದ್ದರೆ ನೋಡಿ ಮಜಾ ತೆಗೆದುಕೊಳ್ಳುವವರೇ ಜಾಸ್ತಿಯಿರುತ್ತಾರೆ.

ಮೌನವಾಗಿ ಇಂಥ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಳ್ಳದೆ ಕಾಮುಕರ ವಿರುದ್ಧ ತಿರುಗಿಬಿದ್ದಾಗ ಮಾತ್ರ ದುರುಳರನ್ನು ಮೆಟ್ಟಿನಿಲ್ಲಲು ಸಾಧ್ಯ. ಕಾಮುಕರನ್ನು ಸಾರ್ವಜನಿಕವಾಗಿಯೇ ಅವಮಾನಕ್ಕೀಡು ಮಾಡಿದಾಗ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಆಗುತ್ತದೆ ಎಂಬುದು ಮತ್ತೊಬ್ಬರ ಉವಾಚ.

ದೆಹಲಿ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಸೆಷನ್ಸ್ ಕೋರ್ಟ್ ವಿಧಿಸಿದ ಸಂದರ್ಭದಲ್ಲಿ, ಅಪರಾಧಿಗಳ ಪರ ವಾದಿಸಿದ್ದ ವಕೀಲ ಎಪಿ ಸಿಂಗ್, "ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ತಡೆಯಬೇಕಿದ್ದರೆ ಪಾಲಕರೇ ಹೆಣ್ಣುಮಕ್ಕಳನ್ನು ಹದ್ದುಬಸ್ತಿನಲ್ಲಿಡಬೇಕು. ನನ್ನ ಮಗಳೇನಾದರೂ ಬಾಯ್ ಫ್ರೆಂಡ್ ಜೊತೆ ರಾತ್ರಿ ಸುತ್ತಾಡಿದರೆ ಜೀವಂತ ಸುಟ್ಟುಹಾಕುತ್ತೇನೆ" ಎಂದು ಅಸಂಬದ್ಧವಾಗಿ ಅಬ್ಬರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪೊಲೀಸರ ಆಘಾತಕಾರಿ ಹೇಳಿಕೆ : ಜಂಟಿ ಕಮಿಷನರ್ ಸದಾನಂದ್ ದಾಟೆ ಅವರು, "ಚಿತ್ರಗಳನ್ನು ನೋಡುವವರೆಗೆ ಏನೂ ಪ್ರತಿಕ್ರಿಯಿಸುವುದಿಲ್ಲ" ಎಂದಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರವೀಣ್ ಸಾಳುಂಕೆ "ನಾನು ರಜೆಯಲ್ಲಿದ್ದೇನೆ" ಎಂದಿದ್ದರೆ, ಉಪ ಆಯುಕ್ತ ಕಾರಳೆ, "ನಾನು ಸಂಬಂಧಿಕರ ಮನೆಯಲ್ಲಿ ಬಿಜಿಯಾಗಿದ್ದೇನೆ, ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ" ಎಂಬ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಆರಕ್ಷಕರೇ ಹೀಗೆ ಆಡಿದರೆ ಮಹಿಳೆಯರ ರಕ್ಷಣೆ ಹೇಗೆ ಸಾಧ್ಯ?

ಟ್ವಿಟ್ಟರಲ್ಲಿ ಮುಂಬೈ ಲೈಂಗಿಕ ದೌರ್ಜನ್ಯ ಘಟನೆಗೆ ಛೀಮಾರಿ

ಛಾಯಾಪತ್ರಕರ್ತ ಸೆರೆಹಿಡಿದಿರುವ ಚಿತ್ರ

ಛಾಯಾಪತ್ರಕರ್ತ ಸೆರೆಹಿಡಿದಿರುವ ಚಿತ್ರ

ಫೋಟೋ ತೆಗೆಯುವ ಸಮಯದಲ್ಲಿ ನಾನು ಫ್ಲೈ ಓವರ್ ಮೇಲಿದ್ದೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿದಂತೆ ಏನನ್ನೂ ಮಾಡಲಾಗಲಿಲ್ಲ. ಅಲ್ಲದೆ ಹತ್ತಿರದಲ್ಲಿ ಯಾವ ಪೊಲೀಸನೂ ಇರಲಿಲ್ಲ ಎಂದು ಪತ್ರಕರ್ತ ಹೇಳಿದ್ದಾರೆ. (ಮಿಡ್ ಡೇ ಚಿತ್ರ)

ಎಲ್ಲಾರನ್ನೂ ಒಟ್ಟಾಗಿ ಸೇರಿಸಿ ಉಡಾಯಿಸಬೇಕು

ಲೈಂಗಿಕ ದೌರ್ಜನ್ಯ ಎಸಗುವ ಇಂಥ ಕಾಮುಕರನ್ನು ಒಟ್ಟಾಗಿ ಸೇರಿಸಿ ಉಡಾಯಿಸಬೇಕೆನ್ನಿಸುತ್ತದೆ.

ಭಾರತೀಯ ಪುರುಷರ ಚೀಪ್ ಮೆಂಟ್ಯಾಲಿಟಿ

ಸೋಷಿಯಲ್ ಮೀಡಿಯಾದಲ್ಲಿ ಸುತ್ತಾಡುತ್ತಿರುವ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನು ನೋಡಿದರೆ ಭಾರತೀಯ ಪುರುಷರ ಮೆಂಟ್ಯಾಲಿಟಿ ಎಂಥಾ ಚೀಪ್ ಎಂಬುದನ್ನು ತೋರಿಸುತ್ತದೆ.

ಸಂದರ್ಭವನ್ನು ಹೇಗೆ ದುರ್ಬಳಿಸಿಕೊಳ್ತಾರೆ

ವಿಕೃತ ಕಾಮುಕರು ಜನದಟ್ಟಣೆ ಮತ್ತು ಸಂದರ್ಭವನ್ನು ಹೇಗೆ ದುರ್ಬಳಿಸಿಕೊಳ್ತಾರೆ ನೋಡಿ.

ನನಗೆ ಸ್ಪಾಗಳನ್ನು ಕಂಡ್ರೇನೆ ಅಸಹ್ಯ

ಸ್ಪಾಗಳಲ್ಲಿ ಮಾಡುವುದು ಮಸಾಜ್ ಅಲ್ಲ ಲೈಂಗಿಕ ದೌರ್ಜನ್ಯ.

ಲೈಂಗಿಕ ಕಿರುಕುಳ ಹೆಚ್ಚಾಗ್ತಾ ಇದೆ

ಲಾಲ್ ಬೌಗಚಾ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದೆ.

ಸಾಕ್ಷಿಯಾಗಿ ಫೋಟೋನೇ ಇದೆಯಲ್ಲ?

ಪೊಲೀಸರ ಮೇಲಿನ ಗೌರವದಿಂದ ಹೇಳುತ್ತಿದ್ದೇನೆ... ಸಾಕ್ಷಿಯಾಗಿ ಫೋಟೋಗಳೇ ಇವೆಯಲ್ಲ. ಆದರೂ ಯುವತಿ ಬಂದು ದೂರು ಏಕೆ ನೀಡಬೇಕು?

English summary
A girl was molested in public by perverts in Mumbai during Ganesh visarjan procession. Mid-day photographer has captured the goons molesting the girl. It has become common scene in any city and women have to be doubly careful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X