ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಪರ್ಯಾಯಕ್ಕೆ ವೈಭವದ ತೆರೆ

|
Google Oneindia Kannada News

ಉಡುಪಿ, ಜ 18: ಎಂಟು ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಸ್ಥಾಪಿಸಿದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು (ಶನಿವಾರ, ಜ 18) ಸೋದೆ ಶ್ರೀಗಳು ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರಿಗೆ ಶ್ರೀಕೃಷ್ಣ ದ್ವೈವಾರ್ಷಿಕ ಪೂಜಾ ಕೈಂಕರ್ಯ ಮತ್ತು ಮಠದ ಆಡಳಿತವನ್ನು (ಪರ್ಯಾಯ) ಹಸ್ತಾಂತರಿಸಿದ್ದಾರೆ.

ಅತ್ಯಂತ ವೈಭವದಲ್ಲಿ ನಡೆದ ಪರ್ಯಾಯ ಮೆರವಣಿಗೆಯಲ್ಲಿ ಶಿರೂರು ಶ್ರೀಗಳು ಮಾನವ ಹೊರುವ ಪಲ್ಲಕ್ಕಿಯಲ್ಲಿ ಪಟ್ಟದ ದೇವರನ್ನು ಇಟ್ಟು, ತಾನು ಅಲಂಕೃತ ಜೀಪಿನಲ್ಲಿ ಪರ್ಯಾಯ ಮೆರವಣಿಗೆಯಲ್ಲಿ ಬಂದರು.

ಹಿರಿಯ ಮತ್ತು ಕಿರಿಯ ಪೇಜಾವರ ಶ್ರೀಗಳು, ಕಾಣಿಯೂರು, ಕೃಷ್ಣಾಪುರ, ಫಲಿಮಾರು ಶ್ರೀಗಳು ಮಾತ್ರ ಹಿರಿಯ ಪೇಜಾವರ ಶ್ರೀಗಳ ಆದೇಶದಂತೆ ಟ್ಯಾಬ್ಲೋದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕೂತು ಮೆರವಣಿಗೆಯಲ್ಲಿ ಸಾಗಿದರು. ಅದಮಾರು ಮತ್ತು ಪುತ್ತಿಗೆ ಮಠಾಧೀಶರುಗಳು ಪರ್ಯಾಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿಲ್ಲ. (ಹೊಸವರ್ಷದ ಮುನ್ನ ಪೇಜಾವರರ ಮಹತ್ವದ ನಿರ್ಧಾರ)

ಶನಿವಾರ ಪ್ರಾತಃಕಾಲ ಎರಡು ಗಂಟೆಗೆ ಕಾಣಿಯೂರು ಶ್ರೀಗಳು ದಂಡತೀರ್ಥಕ್ಕೆ ತೆರಳಿ ಪವಿತ್ರ ಸ್ನಾನ ಮತ್ತು ಇತರ ಧಾರ್ಮಿಕ ವಿಧಿವಿಧಾನ ಮುಗಿಸಿದ ನಂತರ ಜೋಡುಕಟ್ಟೆ ವೃತ್ತಕ್ಕೆ ಮೂರು ಗಂಟೆ ಸುಮಾರಿಗೆ ಆಗಮಿಸಿದರು.

Udupi Kaniyoor Seer ascends Paryaya Peetha amid grand celebrations

ಅಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ನಂತರ, 3.30ಕ್ಕೆ ವೈಭವದ ಪರ್ಯಾಯ ಮೆರವಣಿಗೆ ಆರಂಭವಾಯಿತು. ದೇಶ, ವಿದೇಶದಿಂದ ಬಂದ ಲಕ್ಷಾಂತರ ಮಂದಿ ಭಕ್ತಾದಿಗಳು ಪರ್ಯಾಯ ಉತ್ಸವಕ್ಕೆ ಸಾಕ್ಷಿಯಾದರು.

ಇಪ್ಪತ್ತು ವಿವಿಧ ಟ್ಯಾಬ್ಲೋಗಳು, ಚಂಡೆ, ಡೊಳ್ಳುಕುಣಿತ, ಹುಲಿವೇಷ, ನಾಸಿಕ್ ಬ್ಯಾಂಡ್ ಮುಂತಾದವು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಬೆಳಗ್ಗೆ ಆರು ಗಂಟೆ ಸುಮಾರಿಗೆ ಮೆರವಣಿಗೆ ರಥಬೀದಿ ಪ್ರವೇಶಿಸಿತು.

ಅಲ್ಲಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದ ಕಾಣಿಯೂರು ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ ಪಡೆದ ಕೃಷ್ಣಮಠಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ನಂತರ ಮಧ್ವಾಚಾರ್ಯರು ಆಸೀನರಾಗಿದ್ದ ಎಂದು ನಂಬಲಾಗುವ ಸರ್ವಜ್ಞ ಪೀಠದಲ್ಲಿ ಸೋದೆ ಶ್ರೀಗಳು ಕಾಣಿಯೂರು ಶ್ರೀಗಳಿಗೆ ಮಠದ ಕೀಲಿಕೈ ಮತ್ತು ಅಕ್ಷಯ ಸಟ್ಟುಗವನ್ನು ಹಸ್ತಾಂತರಿಸಿದರು. ಈ ಧಾರ್ಮಿಕ ವಿಧಿವಿಧಾನ ಮುಗಿದ ನಂತರ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ನಡೆಯಿತು. ದರ್ಬಾರಿನಲ್ಲಿ ವಿವಿಧ ಧಾರ್ಮಿಕ ಮುಖಂಡರು, ಸಚಿವರು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಭಾಗವಹಿಸಿದ್ದರು.

ಉಡುಪಿ ಜಿಲ್ಲಾಡಳಿತ ಪರ್ಯಾಯ ಭದ್ರತಾ ವ್ಯವಸ್ಥೆಗೆ ಐದು ಜಿಲ್ಲೆಗಳಿಂದ ಬಂದ ಪೊಲೀಸರಿಂದ ಭಾರೀ ಬಂದೋಬಸ್ತ್ ನೀಡಿತ್ತು.

English summary
Udupi (Karnakata) Kaniyoor Seer ascends Paryaya Peetha from Sode Seer amid grand celebrations on Jan 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X