ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಷ್ಠಿತ ಕ್ಷೇತ್ರ : ಹಾಸನದಲ್ಲಿ ದೇವೇಗೌಡರಿಗೆ ಸವಾಲು

|
Google Oneindia Kannada News

ಹಾಸನ, ಏ. 4 : ರಾಜ್ಯದ ಜನರಲ್ಲಿ ಕುತೂಹಲ ಹುಟ್ಟು ಹಾಕಿರುವ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿನಿಧಿಸುವ ಹಾಸನ ಕ್ಷೇತ್ರವೂ ಸೇರಿದೆ. ಈ ಬಾರಿ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿರುವ ಮಣ್ಣಿನ ಮಗನಿಗೆ ಯಾರಾದರೂ ಸೋಲುಣಿಸಲು ಸಾಧ್ಯವೇ ಎಂದು ಜನರು ಕಾದು ನೋಡುತ್ತಿದ್ದಾರೆ.

2004, 2009ರಲ್ಲಿ ಕ್ಷೇತ್ರದಲ್ಲಿ ಜಯಗಳಿಸಿ ಸಂಸತ್ ಪ್ರವೇಶಿಸಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರು ಈ ಬಾರಿಯು ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಪ್ರತಾಪ್ ಸಿಂಹ ಆಗಮನದಿಂದ ಮೈಸೂರಿನಲ್ಲಿ ಟಿಕೆಟ್ ಕೈತಪ್ಪಿದ ಸಿ.ಎಚ್.ವಿಜಯಶಂಕರ್ ಹಾಸನ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಅರಕಲಗೋಡು ಶಾಸಕ ಎ.ಮಂಜು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೌಡರ ವಿರುದ್ಧ ತೊಡೆ ತಟ್ಟಿದ್ದರೆ, ಆಮ್ ಆದ್ಮಿ ಪಕ್ಷ ಸಂತೋಷ್ ಮೋಹನ್ ಗೌಡ ಅವರನ್ನು ಕಣಕ್ಕಿಳಿಸಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Hassan lok sabha constituency

ಜೆಡಿಎಸ್ ಭದ್ರಕೋಟೆ ಹಾಸನವನ್ನು ಛಿದ್ರ ಮಾಡುವುದು ಅಷ್ಟು ಸುಲಭದ ಸಂಗತಿಯಲ್ಲ ಎಂಬುದು ವಿರೋಧ ಪಕ್ಷಗಳಿಗೆ ಗೊತ್ತು. ಆದ್ದರಿಂದ ದೇವೇಗೌಡರ ವಿರುದ್ಧ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ಬೇಡ ಎಂಬ ಚರ್ಚೆ ನಡೆಯುತ್ತಿತ್ತು. ಆದರೆ, ಅಂತಿಮವಾಗಿ ಮೂರು ಪಕ್ಷಗಳಿಂದ ಅಭ್ಯರ್ಥಿಗಳು ಗೌಡರ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ನಾಲ್ಕುಬಾರಿ ಗೆದ್ದಿರುವ ಗೌಡರು ಈ ವಯಸ್ಸಿನಲ್ಲಿಯೂ ಐದನೇ ಬಾರಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. [ದೇವೇಗೌಡರ ವಿಶೇಷ ಸಂದರ್ಶನ ಓದಿ]

ಹಾಸನದಲ್ಲಿ ದೇವೇಗೌಡರನ್ನು ಸೋಲಿಸಲು ಅವರ ಕುಟುಂಬದ ಎದುರಾಳಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಉಸ್ತುವಾರಿ ಕೊಟ್ಟಿದೆ. ಅರಕಲಗೂಡು ಮಂಜು ಪರ ಪ್ರಚಾರಕ್ಕಿಳಿದಿರುವ ಅವರು, "ದೇವೇಗೌಡರಿಗೆ ಭವಿಷ್ಯವಿಲ್ಲವೆಂದ ಮೇಲೆ ತೃತೀಯರಂಗ ಎಂಬುದಕ್ಕೆ ಭವಿಷ್ಯವಿರಲು ಸಾಧ್ಯವೇ?" "ಮಂಡ್ಯ ಆದ ಮೇಲೆ ಹಾಸನ ಕಾಂಗ್ರೆಸ್ ವಶವಾಗುವುದು ಸತ್ಯ" ಎಂಬ ಮಾತುಗಳನ್ನು ಹೇಳುತ್ತಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. [ಹಾಸನ ಕ್ಷೇತ್ರದ ಕಿರು ಪರಿಚಯ]

ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡ ಉಳಿದ ಎಲ್ಲಾ ಪಕ್ಷಗಳ ಟಾರ್ಗೆಟ್. ಮಾಜಿ ಪ್ರಧಾನಿಗೆ ಸೋಲುಣಿಸಬೇಕು ಎಂದು ವಿವಿಧ ಪಕ್ಷಗಳು ತಮ್ಮದೇ ಕಾರ್ಯತಂತ್ರ ರೂಪಿಸಿವೆ. ದೇವೇಗೌಡರಿಗೆ ಯಾರು ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂದು ಜನರು ಕಾದು ನೋಡುತ್ತಿದ್ದಾರೆ.

ಎಚ್.ಡಿ.ದೇವೇಗೌಡ
ಹಾಸನ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಬಾರಿಯು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು, ಜಿಲ್ಲೆ ಜೆಡಿಎಸ್ ಭದ್ರಕೋಟೆ ಆಗಿರುವುದು ದೇವೇಗೌಡರ ಶಕ್ತಿ. ಮಣ್ಣಿನ ಮಗನಾಗಿ ಸಂಪೂರ್ಣವಾಗಿ ರಾಜಕೀಯದಲ್ಲಿ ಮುಳುಗಿ ಹೋಗಿರುವ ಗೌಡರಿಗೆ ಹಾಸನದ ಜನರು ಈ ಬಾರಿಯು ಬೆಂಬಲ ನೀಡಲಿದ್ದಾರೆ ಎಂಬುದು ಸದ್ಯದ ಪರಿಸ್ಥಿತಿ.

ಸಿ.ಎಚ್.ವಿಜಯಶಂಕರ್
ಮೈಸೂರಿನಲ್ಲಿ ಎರಡು ಬಾರಿ ಗೆಲುವು ಸಾಧಿಸಿರುವ ವಿಧಾನಪರಿಷತ್ ಸದಸ್ಯ ಸಿ.ಎಚ್.ವಿಜಯಶಂಕರ್ ಮೈಸೂರಿನಲ್ಲಿ ಈ ಬಾರಿ ಟಿಕೆಟ್ ಕೈ ತಪ್ಪಿದ್ದರಿಂದ ಹಾಸನ ಕ್ಷೇತ್ರಕ್ಕೆ ಬಂದು ಚುನಾವಣೆಗೆ ನಿಂತಿದ್ದಾರೆ. ವಿಜಯ್ ಶಂಕರ್ ಮೂರು ಹೆಸರುಗಳನ್ನು ಹೇಳಿದ್ದ ಬಿಜೆಪಿ ಕೊನೆ ಕ್ಷಣದಲ್ಲಿ ವಿಜಯ್ ಶಂಕರ್ ಹೆಸರು ಘೋಷಿಸುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲಿ ಟಿಕೆಟ್ ಕೈತಪ್ಪಿದ್ದ ಅನುಕಂಪ, ನರೇಂದ್ರ ಮೋದಿ ಅಲೆ ಮುಂತಾದವು ವಿಜಯ ಶಂಕರ್ ಬೆಂಬಲಕ್ಕಿವೆ. ಅವು ಅವರನ್ನು ವಿಜಯಿಯಾಗಿಸುತ್ತದೆಯೇ ಕಾದು ನೋಡಬೇಕು.

ಅರಕಲಗೋಡು ಮಂಜು
ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸುವುದು ಬೇಡ ಎಂಬ ಪಕ್ಷದ ಹಿರಿಯ ನಾಯಕ ಜಾಫರ್ ಷರೀಫ್ ಅವರ ಅಭಿಪ್ರಾಯವನ್ನು ಮೀರಿ ಪಕ್ಷ ಶಾಸಕ ಅರಕಲಗೋಡು ಮಂಜು ಅವರನ್ನು ಕಣಕ್ಕಿಳಿಸಿದೆ. ಮಂಜು ಅವರನ್ನು ಗೆಲ್ಲಿಸುವ ಹೊಣೆಯನ್ನು ದೇವೇಗೌಡ ಕುಟುಂಬದ ರಾಜಕೀಯ ವೈರಿ ಡಿಕೆ ಶಿವಕುಮಾರ್ ಅವರಿಗೆ ನೀಡಿ, ಹಾಸನವನ್ನು ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಅಂಶ, ಸಿಎಂ ಸಿದ್ದರಾಮಯ್ಯ ದೇವೇಗೌಡರ ವಿರೋಧಿ ಎಂಬ ಅಂಶಗಳು ಮಂಜು ಬೆನ್ನಿಗಿವೆ. ಹಾಸನ ಕಾಂಗ್ರೆಸ್ ವಶವಾಗುತ್ತಾ?

ಸಂತೋಷ್ ಮೋಹನ್ ಗೌಡ

ಆಮ್ ಆದ್ಮಿ ಪಕ್ಷ ಸಂತೋಷ್ ಮೋಹನ್ ಗೌಡ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದೆ. ವಕೀಲರಾಗಿರುವ ಸಂತೋಷ್, ಹಲವಾರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇವೇಗೌಡರಂತಹ ಹಿರಿಯರ ಮುಂದೆ ಯುವಕರನ್ನು ಕಣಕ್ಕಿಳಿಸಿ ಆಮ್ ಆದ್ಮಿ ಹಾನಸದಲ್ಲಿ ತನ್ನ ಖಾತೆ ತೆರೆಯುವ ಉತ್ಸಾಹದಲ್ಲಿದೆ.

English summary
Elections 2014 : It's a tough task for Congress and BJP in Hassan Lok Sabha constituency to face JD(S) candidate and former Prime minister HD Deve Gowda. CH Vijayashankar is BJP candidate in constituency. Arkalgud Manju is Congress candidate. Santhosh Mohan Gowda is AAP candidate against Deve Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X