ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮುಲು ಬಿಜೆಪಿ ವಾಪಸಾತಿಗೆ ಸುಷ್ಮಾ ವಿರೋಧ

By Prasad
|
Google Oneindia Kannada News

ಬೆಂಗಳೂರು, ಮಾ. 6 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಂತೆ ಪಕ್ಷ ತೊರೆದು ಬಿಎಸ್ಆರ್ ಕಾಂಗ್ರೆಸ್ ಕಟ್ಟಿದ್ದ ಬಿ ಶ್ರೀರಾಮುಲು ಅವರನ್ನು ತಳಿರುತೋರಣ ಕಟ್ಟಿ, ಹಾರ ತುರಾಯಿ ಹಿಡಿದು, ಪಟಾಕಿ ಸಿಡಿಸಿ ಭಾರತೀಯ ಜನತಾ ಪಕ್ಷದೊಳಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆದಿರುವ ಸಂದರ್ಭದಲ್ಲಿ ಶ್ರೀರಾಮುಲು ಅವರ 'ಅಮ್ಮ'ನಂತಿದ್ದ ಸುಷ್ಮಾ ಸ್ವರಾಜ್ ಅವರು ಬೆಚ್ಚಿಬೀಳಿಸುವಂಥ ಬಾಂಬ್ ಸಿಡಿಸಿದ್ದಾರೆ.

"ಬಿಎಸ್ಆರ್ ಕಾಂಗ್ರೆಸ್ ಜೊತೆಗಿನ ವಿಲೀನವಾಗಲಿ, ಆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಾಗಲಿ ನನ್ನ ವಿರೋಧವಿದೆ" ಎಂದು ಟ್ವೀಟ್ ಮಾಡಿರುವ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಬಿಜೆಪಿ ಪಾಳಯದಲ್ಲಿ ಅಚ್ಚರಿ ಉಂಟು ಮಾಡಿದ್ದಾರೆ. ಈ ಸಂದೇಶಕ್ಕೆ ಹಲವಾರು ಟ್ವಿಟ್ಟಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯೊಂದಿಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸಲು, ಲೋಕಸಭೆ ಚುನಾವಣೆ ದಿನಾಂಕಗಳನ್ನು ಘೋಷಿಸಿದ ದಿನವೇ, ಮಾ.5ರಂದು ಬಳ್ಳಾರಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ರೆಡ್ಡಿ ಬ್ರದರ್ಸ್ ಒಗ್ಗೂಡಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಡಲಿದ್ದಾರೆ ಎಂದು ಸೋಮಶೇಖರ ರೆಡ್ಡಿ ಘೋಷಿಸಿದ್ದಾರೆ. ಮಾರ್ಚ್ 9ರಂದು ಶ್ರೀರಾಮುಲು ಅವರು ತಮ್ಮ ಬೆಂಬಲಿಗರ ಜೊತೆ ವಿಧ್ಯುಕ್ತವಾಗಿ ಬಿಜೆಪಿ ಸೇರಲು ಮುಹೂರ್ತ ನಿಗದಿಪಡಿಸಲಾಗಿದೆ.

ಬಿಜೆಪಿಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಶ್ರೀರಾಮುಲು ಅವರು ಕಣಕ್ಕಿಳಿಯುವ ಕನಸು ಕಾಣುತ್ತಿರುವ ಹೊತ್ತಿನಲ್ಲಿ, ರೆಡ್ಡಿ ಸಹೋದರರ ಕಟ್ಟಾ ಬೆಂಬಲಿಗರಾಗಿದ್ದ ಸುಷ್ಮಾ ಸ್ವರಾಜ್ ಅವರು ಶ್ರೀರಾಮುಲು ಅವರ ಆಸೆಗೆ ತಣ್ಣೀರು ಎರಚಿದ್ದಾರೆ. ಸುಷ್ಮಾ ಅವರ ಈ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಏನು ಹೇಳುತ್ತದೆ? ರಾಜ್ಯದ ನಾಯಕರು ಏನು ನಿರ್ಣಯ ತೆಗೆದುಕೊಳ್ಳಲಿದ್ದಾರೆ?

ಸುಷ್ಮಾ ಸ್ವರಾಜ್ ಅವರ ಈ ಅನಿರೀಕ್ಷಿತ ನಿರ್ಣಯದಿಂದ ಕರ್ನಾಟಕದ ಬಿಜೆಪಿಯಲ್ಲಿ ಹೊಸ ಅಲೆಯನ್ನು ಎದುರುನೋಡುತ್ತಿರುವವರಿಗಂತೂ ಆಘಾತವಾಗಿದೆ. ಸುಷ್ಮಾ ಅವರ ಈ ನಿರ್ಣಯವನ್ನು ಪ್ರಶ್ನಿಸಿ ಹಲವಾರು ಜನರು ಪ್ರಶ್ನೆಗಳನ್ನು ಎಸೆದಿದ್ದಾರೆ. ಸುಷ್ಮಾ ಹಿರಿಯರ ಒತ್ತಡಕ್ಕೆ ಮಣಿಯುತ್ತಾರಾ? ತಮ್ಮ 'ಮಕ್ಕಳ'ನ್ನು ಒಪ್ಪಿಕೊಳ್ಳುತ್ತಾರಾ? ಕಾದು ನೋಡಬೇಕಿದೆ.

ಬಿಎಸ್ಆರ್ - ಬಿಜೆಪಿ ವಿಲೀನ ವಿರೋಧಕ್ಕೆ ಕಾರಣ?

ಬಿಎಸ್ಆರ್ - ಬಿಜೆಪಿ ವಿಲೀನ ವಿರೋಧಕ್ಕೆ ಕಾರಣ?

ಕಾರಣ ಅತ್ಯಂತ ಸರಳ. ಒಂದಾನೊಂದು ಕಾಲದಲ್ಲಿ ರೆಡ್ಡಿ ಸಹೋದರರನ್ನು ಸುಷ್ಮಾ ಬೆಂಬಲಿಸಿದ್ದು ನಿಜ. ಆದರೆ, ರೆಡ್ಡಿ ಸಹೋದರರಲ್ಲಿ ಜನಾರ್ದನ ರೆಡ್ಡಿ ಕಳಂಕಿತರಾಗಿ ಜೈಲು ಸೇರಿದ್ದಾರೆ, ಅವರ ಬೆಂಬಲಿಗರಲ್ಲಿ ಅನೇಕರು ಆರೋಪ ಹೊತ್ತಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಮತ್ತೆ ಜೊತೆಗೂಡಿ ಕಾಣಿಸುವುದು ಸುಷ್ಮಾಗೆ ಬೇಡವಾಗಿದೆ. ಅಥವಾ ಮತ್ತೇನಾದರೂ ಕಾರಣವಿದೆಯೆ?

ಸುಷ್ಮಾ ಸ್ವರಾಜ್ ಕುಟ್ಟಿಸಿರುವ ಟ್ವಿಟ್ಟರ್ ಸಂದೇಶ

ಬಿಎಸ್ಆರ್ ಕಾಂಗ್ರೆಸ್ ಜೊತೆ ಮೈತ್ರಿಯಾಗಲಿ, ವಿಲೀನವಾಗಲಿ ನನಗೆ ಬೇಕಾಗಿಲ್ಲ ಎಂದು ಸುಷ್ಮಾ ಸ್ವರಾಜ್ ಖಡಾಖಂಡಿತವಾಗಿ ಹೇಳಿದ್ದಾರೆ.

ನಿಮ್ಮ ನಿರ್ಣಯ ತಿಳಿಸಲು ಟ್ವಿಟ್ಟರ್ ವೇದಿಕೆ ಏಕೆ?

ಬಿಎಸ್ಆರ್ ಕಾಂಗ್ರೆಸ್ ಜೊತೆ ವಿಲೀನ ಅಥವಾ ಮೈತ್ರಿ ಬೇಡವೆಂದು ಟ್ವಿಟ್ಟರ್ ವೇದಿಕೆಯನ್ನು ಏಕೆ ಬಳಸುತ್ತಿದ್ದೀರಿ? ಪಕ್ಷದ ಸಭೆಯಲ್ಲಿಯೇ ಇದನ್ನು ತಿಳಿಸಬಹುದಿತ್ತಲ್ಲ? ಎಂದು ಪ್ರಶಾಂತ್ ಭಟ್ ಎಂಬುವವರು ಪ್ರಶ್ನಿಸಿದ್ದಾರೆ.

'ಶ್ರೀರಾಮುಲು ಹೆಚ್ಚು ಸೀಟು ಗೆದ್ದು ಕೊಡಬಲ್ಲರು'

ಶ್ರೀರಾಮುಲು ದಲಿತರಾಗಿರುವುದರಿಂದ ಬಳ್ಳಾರಿಯಲ್ಲಿ ಬಿಜೆಪಿಗೆ ದೊಡ್ಡ ಗೆಲುವು ತಂದುಕೊಡಬಲ್ಲರು ಎಂದು ಶಂಕರ್ ಎನ್ನುವವರು ಸುಷ್ಮಾ ಟ್ವೀಟಿಗೆ ಪ್ರತಿಟ್ವೀಟಿಸಿದ್ದಾರೆ.

'ನಿಮ್ಮ ನಿರ್ಣಯ ಪಕ್ಷ ಮಾನ್ಯ ಮಾಡುತ್ತಾ ಸುಷ್ಮಾ?'

ನಿಮ್ಮ ನಿರ್ಣಯ ಪಕ್ಷ ಮಾನ್ಯ ಮಾಡುತ್ತಾ ಸುಷ್ಮಾ? ನಿಮ್ಮ ಇಂಥ ಮಾತಿಗೆ ಪಕ್ಷದಲ್ಲಿ ತೂಕ ಇದೆಯಾ ಎಂದು ಶ್ರೀವತ್ಸ ಎನ್ನುವವರು ವ್ಯಂಗ್ಯವಾಡಿದ್ದಾರೆ.

English summary
Senior leader of BJP Sushma Swaraj has opposed BSR Congress leader B Sriramulu's re-entry into BJP. In a twitter message she has clearly expressed her view, which has baffled many including Sriramulu. BSR Congress is expected to be merged with BJP on March 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X