ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಕವಿ ಶಿವರುದ್ರಪ್ಪ ಮೆಚ್ಚಿದ ಹತ್ತು ಕವನಗಳು

By ಮಲೆನಾಡಿಗ
|
Google Oneindia Kannada News

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ..

ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರು ಬರೆದ ಅಸಂಖ್ಯಾತ ಮನಮೋಹಕ ಸಾಲುಗಳಲ್ಲಿ ಇವುಗಳು ಒಂದು. ರಾಷ್ಟ್ರಕವಿ ಎನಿಸಿ ಸಕಲ ಗೌರವಾದರಗಳನ್ನು ಪಡೆದರೂ ಸರಳ ಸಜ್ಜನ ವ್ಯಕ್ತಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಬೆಳಗುತ್ತಿದ್ದಾರೆ. ಯುವ ಪ್ರತಿಭೆಗಳು ಸದಾಕಾಲ ಬೆಂಬಲಿಸುತ್ತಿದ್ದ ಶಿವರುದ್ರಪ್ಪ ಅವರ ಮೆಚ್ಚಿನ ಹತ್ತು ಕವನಗಳು ಯಾವುದು ಎಂಬ ಪ್ರಶ್ನೆಗಳನ್ನು ನಾನು ಕೇಳಿದ್ದು ಸುಮಾರು ಎಂಟು ವರ್ಷಗಳ ಹಿಂದೆ.. ವಿಕ್ರಾಂತ ಕರ್ನಾಟಕ ಪತ್ರಿಕೆಗಾಗಿ ತಮ್ಮ ಮೆಚ್ಚಿನ ಹತ್ತು ಕವನಗಳನ್ನು ಒಲವಿನ ಕವಿಗಳು ಹಂಚಿಕೊಂಡಿದ್ದರು.[ಶಿವರುದ್ರಪ್ಪ ಕೊಟ್ಟ ಕೊಡುಗೆ ಜಯದೇವ್]

ಶಿವರುದ್ರಪ್ಪ ಅವರ ಮೆಚ್ಚಿನ ಮೊದಲ ಕವನ ಅವರ ಗುರುಗಳಾದ ಕುವೆಂಪು ವಿರಚಿತ 'ದೇವರು ರುಜು ಮಾಡಿದನು' ಪಠ್ಯ ಇಲ್ಲಿದೆ.. ಹಾಗೂ ಟಾಪ್ ಕವನಗಳ ಪಟ್ಟಿ ಕೂಡಾ ಇದೆ ನೋಡಿ..[ಜಿಎಸ್ ಶಿವರುದ್ರಪ್ಪ ವಿಧಿವಶ ]

Rashtrakavi G.S. Shivarudrappa's All Time Favourite Poems

1. ದೇವರು ರುಜು ಮಾಡಿದನು - ಕುವೆಂಪು
2. ಕುರುಡು ಕಾಂಚಾಣ - ದ.ರಾ.ಬೇಂದ್ರೆ
3. ಪ್ರತೀಕ್ಷೆ - ಪು.ತಿ.ನರಸಿಂಹಾಚಾರ್
4. ಅವ್ವ - ಪಿ.ಲಂಕೇಶ್
5. ಸಣ್ಣ ಸಂಗತಿ (ಸಾನೆಟ್) - ಕೆ.ಎಸ್.ನರಸಿಂಹ ಸ್ವಾಮಿ
6. ಏಳು ಸುತ್ತಿನ ಕೋಟೆ - ಬಿ.ಸಿ.ರಾಮಚಂದ್ರ ಶರ್ಮ
7. ಚಿಂತಾಮಣಿಯಲ್ಲಿ ಕಂಡ ಮುಖ - ಗೋಪಾಲ ಕೃಷ್ಣ ಅಡಿಗ
8. ಇಬ್ಬರು ರೈತರು - ಸು.ರಂ.ಎಕ್ಕುಂಡಿ
9. ಲಾಲ್ ಬಹದ್ದೂರು - ಚೆನ್ನವೀರಕಣವಿ
10. ರಾಮನ್ ಸತ್ತ ಸುದ್ದಿ - ಕೆ.ಎಸ್.ನಿಸಾರ್ ಅಹಮದ್

ದೇವರು ರುಜು ಮಾಡಿದನು ಕವನ ಇಲ್ಲಿ ಓದಿ

ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಗೆಸೆದಿರೆ
ಕಿಕ್ಕಿರಿದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ

ದೇವರು ರುಜು ಮಾಡಿದನು,
ರಸವಶನಾಗುತ ಕವಿ ಅದ ನೋಡಿದನು!

ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೊರಿತ್ತು.

ಹೂಬಿಸಿಲಲಿ ಮಿರುಗಿರೆ ನಿರಿವೊನಲು
ಮೊರೆದಿರೆ ಬಂಡೆಗಳಲಿ ನೀರ್ತೊದಲು
ರಂಜಿಸ ಇಕ್ಕೆಲದಲಿ ಹೊಮ್ಮಳಲು
ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲಸಿತ್ತು;

ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!
ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,

ಸೃಷ್ಟಿಯ ರಚನೆಯ ಕುಶಲತೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ

ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!

English summary
Distinguished Kannada poet, writer and researcher G.S. Shivarudrappa (87) passed away on Monday morning at his residence in Bangalore. Devaru Ruju Maadidanu by Kuvempu tops the all time favourite poems chosen by GS Shivarudrappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X