ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಸ್ಥಾವರ ವಿರೋಧಿಸಿದ ರೈತರ ಮೇಲೆ ಗುಂಡು

By Prasad
|
Google Oneindia Kannada News

ಬಿಜಾಪುರ, ಜು. 5 : ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕೂಡಗಿ ಗ್ರಾಮದಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟಿಗೆ ವಿರೋಧವಾಗಿ ಸಣ್ಣದಾಗಿ ಹುಟ್ಟಿಕೊಂಡಿದ್ದ ಪ್ರತಿಭಟನೆಯ ಕಿಡಿ ಶನಿವಾರ ಭುಗಿಲೆದ್ದಿದ್ದು, ಭೂಮಿ ಕಳೆದುಕೊಂಡ ರೈತರು, ಸ್ಥಳೀಯರು ಕೆಂಡ ಕಾರುತ್ತಿದ್ದಾರೆ.

ಪ್ರತಿಭಟನೆ ತೀವ್ರ ಕಾವು ಪಡೆದುಕೊಂಡ ಪರಿಣಾಮವಾಗಿ ರೈತರು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ನಿಗೆ ಸೇರಿದ ಲಾರಿ, ಟಿಪ್ಪರ್ ಗಳಿಗೆ, ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೊಚ್ಚಿಗೆದ್ದ ರೈತರನ್ನು ಚೆದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ರೈತರು ಗಾಯಗೊಂಡಿದ್ದರೆ, ಕಾರ್ಮಿಕರು ರೈತರ ಮೇಲೆ ನಡೆಸಿದ ಕಲ್ಲು ತೂರಾಟದಲ್ಲಿ ಕೂಡ ಅನೇಕರು ಗಾಯಗೊಂಡಿದ್ದಾರೆ.

Police fire on protesting farmers in Bijapur

ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಕೆಲ ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಲೇ ಇತ್ತು. ಆದರೆ, ಆ ಪ್ರತಿಭಟನೆ ಶನಿವಾರ ರೌದ್ರಾವತಾರ ತಾಳಿದೆ. ಪ್ರತಿಭಟನಾಕಾರರು ಸ್ಥಾವರಕ್ಕೆ ನಾಲ್ಕು ದಿಕ್ಕಿನಿಂದ ಮುತ್ತಿಗೆ ಹಾಕಿ, ಕಂಡಕಂಡ ವಸ್ತುವಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ರಾಜ್ಯಗಳ ಕಾರ್ಮಿಕರು ಕೂಡ ಕಲ್ಲು ತೂರಾಟ ನಡೆಸಿದ್ದಾರೆ.

ಪರಿಸ್ಥಿತಿ ಹದ್ದುಮೀರುತ್ತಿದೆ ಎಂದು ಅರಿವಿಗೆ ಬರುತ್ತಿದ್ದಂತೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಮುತ್ತಗಿ ಗ್ರಾಮದ ಬಾಬು ಬಡಿಗೇರ್ ಮತ್ತು ಮಸೂತಿ ಗ್ರಾಮದ ಸದಾಶಿವ ಗಣಾಚಾರಿ ಎಂಬಿಬ್ಬರಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಅವರನ್ನು ಮತ್ತು ಕಲ್ಲು ತೂರಾಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಮಿಕರು ದಿಕ್ಕೆಟ್ಟು ಪರಾರಿ : ಸ್ಥಾವರದಲ್ಲಿ ಹೆಚ್ಚಾಗಿ ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ಬಿಹಾರ, ಗುಜರಾತ್ ರಾಜ್ಯದಿಂದ ಬಂದಿರುವ ಸುಮಾರು 700ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆ ಭುಗಿಲೇಳುತ್ತಿದ್ದಂತೆ ಕಾರ್ಮಿಕರೆಲ್ಲ ತಮ್ಮ ಸಾಮಾನು ಸರಂಜಾಮು ಎತ್ತಿಕೊಂಡು ದಿಕ್ಕಾಪಾಲಾಗಿದ್ದಾರೆ.

ರೈತರ ಆಕ್ರೋಶಕ್ಕೆ ಕಾರಣ : ಸ್ಥಾವರಕ್ಕಾಗಿ ತಮ್ಮ ಭೂಮಿಯನ್ನು ಕಿತ್ತುಕೊಂಡಿರುವ ಸಂಸ್ಥೆ ಸ್ಥಳೀಯರಿಗೆ ಸೂಕ್ತವಾದ ಕೆಲಸ ಕೊಟ್ಟಿಲ್ಲ. ಹೌಸ್ ಕೀಪಿಂಗ್, ಗುಡಿಸುವ ಕೆಲಸ ಮಾತ್ರ ಕೊಡುತ್ತಿದ್ದಾರೆ. ವಾಗ್ದಾನ ನೀಡಿದಂತೆ ಶಾಲೆ, ರಸ್ತೆ, ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯ ನಿರ್ಮಿಸುವ ಮಾತನ್ನೂ ಮರೆತಿದ್ದಾರೆ. ಅಲ್ಲದೆ, ಈ ಸ್ಥಾವರದಿಂದಾಗಿ ಸ್ಥಳೀಯರ ಆರೋಗ್ಯ ಹದಗೆಡುತ್ತದೆ ಎಂಬುದು ರೈತರ ಪ್ರತಿಭಟನೆಗೆ ಕಾರಣವಾಗಿದೆ.

ಶಾಸಕರ ವ್ಯತಿರಿಕ್ತ ಹೇಳಿಕೆ : ಬಸವನಬಾಗೇವಾಡಿಯ ಶಾಸಕ ಶಿವಾನಂದ ಪಾಟೀಲರು ಹೇಳುವುದೇನೆಂದರೆ, 2012ರಲ್ಲಿ ಸ್ಥಾವರ ನಿರ್ಮಾಣದ ಯೋಜನೆ ಆರಂಭವಾದಾಗಲೇ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಲಾಗಿದೆ. ಆದರೆ, ಈಗ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ. ಅಂದು ಪ್ರತಿಭಟನೆ ಮಾಡದ ಸ್ಥಳೀಯರು ಈಗ ಏಕೆ ಪ್ರತಿಭಟನೆಗಿಳಿದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

English summary
Farmers and local residents in Kudali in Bijapur district opposing thermal power plant by National Thermal Power Corporation (NTPC) turn violent, burn vehicles. Police open fire injuring two residents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X