ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡೋಣ!

|
Google Oneindia Kannada News

ಹುಬ್ಬಳ್ಳಿ, ಫೆ. 28 : "ಕಾಂಗ್ರೆಸ್ ಪಕ್ಷದ ಹತ್ತು ವರ್ಷದ ಸಾಧನೆ ಏನು? ಎಂದು ಪಕ್ಷದ ನಾಯಕರನ್ನು ಮತ ಕೇಳಲು ಬಂದಾಗ ಕೇಳಿ" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಶುಕ್ರವಾರ ಹುಬ್ಬಳ್ಳಿಯಲ್ಲಿ ಭಾರತ ಗೆಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಆಕ್ಸಫರ್ಡ್ ಕಾಲೇಜು ಪಕ್ಕದ ಮೈದಾನದಲ್ಲಿ ಭಾರೀ ಜನಸ್ತೋಮದ ನಡುವೆ ಶುಕ್ರವಾರ ಸಂಜೆ ನರೇಂದ್ರ ಮೋದಿ ಭಾರತ ಗೆಲ್ಲಿಸಿ ಸಮಾವೇಶಉದ್ದೇಶಿಸಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮುಂತಾದವರು ನರೇಂದ್ರ ಮೋದಿ ಅವರ ಜೊತೆಗಿದ್ದರು.

modi in hubli

ತಮ್ಮ ಭಾಷಣದ ತುಂಬಾ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ " ಸ್ವತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವ ಮಹಾತ್ಮ ಗಾಂಧಿ ಅವರ ಆಸೆಯನ್ನು ನಾವು ಪೂರ್ಣಗೊಳಿಸೋಣ, ಭಾರತವನ್ನು ಕಾಂಗ್ರೆಸ್ ಮುಕ್ತವಾಗಿಸೋಣ" ಎಂದು ಸಮಾವೇಶದಲ್ಲಿ ಸೇರಿದ್ದ ಲಕ್ಷಾಂತರ ಜನರಿಗೆ ಮನವಿ ಮಾಡಿದರು. [ಮೋದಿ ಗುಲ್ಬರ್ಗ ಸಮಾವೇಶದಲ್ಲಿ ಹೇಳಿದ್ದೇನು?]

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ತವರು ಜಿಲ್ಲೆಯಲ್ಲಿ ಮೋದಿ ಅವರ ಸಮಾವೇಶ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಶುಕ್ರವಾರ ಎರಡು ಸಮಾವೇಶ ನಡೆಸುವ ಮೂಲಕ ಗುಲ್ಬರ್ಗ ಮತ್ತು ಬೆಳಗಾವಿಯಲ್ಲಿ ಕಾಂಗ್ರೆಸ್ ನಡೆಸಿದ್ದ ಸಮಾವೇಶಗಳಿಗೆ ತಿರುಗೇಟು ನೀಡಿದ್ದಾರೆ. [ಮೋದಿ ಸಮಾವೇಶಕ್ಕೆ ಅಪಸ್ವರ]

ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು

* ಸಿದ್ದರೂಢರನ್ನು ನೆನಪು ಮಾಡಿಕೊಂಡು ತಮ್ಮ ಭಾಷಣವನ್ನು ಆರಂಭಿಸಿದ ಮೋದಿ, ಮೈದಾನದ ತುಂಬಾ ನನ್ನ ಕಣ್ಣಿಗೆ ಕೇವಲ ಜನರು ಕಾಣುತ್ತಿದ್ದಾರೆ. ಚುನಾವಣೆ ಘೋಷಣೆಯಾಗುವ ಮೊದಲೇ ಇಷ್ಟು ಜನರು ಬಂದಿದ್ದೀರಿ. ಇದು ನಮ್ಮ ದೊಡ್ಡ ಗೆಲವುದು ಎಂದು ಜನರಿಗೆ ಅಭಿನಂದನೆ ಸಲ್ಲಿಸಿದರು.

* ಚುನಾವಣೆಗೆ ಮೊದಲೇ ಇಷ್ಟು ಜನ ಸೇರಿದ್ದೀರಿ, ಘೋಷಣೆ ಆದ ಬಳಿಕ ಸುನಾಮಿಯಂತೆ ಬರುತ್ತೀರಿ. ಆಗ ಕಾಂಗ್ರೆಸ್ ಪಕ್ಷ ಬಚಾವಾಗುವುದು ಕಷ್ಟ ವಾಗುತ್ತದೆ ಎಂದ ಮೋದಿ, ಈ ಬಾರಿಯ ಚುನಾವಣೆ ಪಕ್ಷಗಳದ್ದಲ್ಲ, ವ್ಯಕ್ತಿಗಳದ್ದಲ್ಲ, ಇದು ಜನರ ಚುನಾವಣೆ, ಚುನಾವಣೆಗೆ ಮೊದಲೇ ಜನರು ನಮಗೆ ಇಷ್ಟು ಬೆಂಬಲ ನೀಡಿದ್ದೀರಿ ಎಂದು ಧನ್ಯವಾದ ಅರ್ಪಿಸಿದರು.

* ಭಾರತದ ಪ್ರಜಾಪ್ರಭುತ್ವ ಅತ್ಯಂತ ಶೇಷ್ಠವಾದದ್ದು, ಆದ್ದರಿಂದ ಇಂದು ಚಹಾ ಮಾರುತ್ತಿದ್ದ ನಾನು ನಿಮ್ಮ ಮುಂದೆ ನಿಂತಿದ್ದೇನೆ. ನನ್ನ ಅಕ್ಕಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ. ಆದರೆ, ಇಂದು ಭಾರತದ ಜನರು ನನ್ನನ್ನು ಎಷ್ಟೊಂದು ಪ್ರೀತಿಸುತ್ತಾರೆ ಎಂದು ಮೋದಿ ಬಾಲ್ಯದ ನೆನಪು ಮಾಡಿಕೊಂಡರು.

* ಜನರು ತೋರಿಸಿದ ಪ್ರೀತಿಯನ್ನು ಕಠಿಣ ಪರಿಶ್ರಮದ ಮೂಲಕ ಮರಳಿಸುವುದು ನಮ್ಮ ಸಂಸ್ಕೃತಿ. ನಾನು ಸಹ ನಿಮ್ಮ ಸೇವೆ ಮಾಡಿ ನಿಮ್ಮ ಪ್ರೀತಿಯನ್ನು ತೀರಿಸುತ್ತೇನೆ ಎಂದು ಮೋದಿ ಜನರಿಗೆ ಭರವಸೆ ನೀಡಿದರು. ನಮ್ಮ ದೇಶಕ್ಕೆ ಸೇವಕರು ಬೇಕು, ನಾನು ನಿಮ್ಮ ಸೇವಕನಾಗುತ್ತೇನೆ ಎಂದು ಮೋದಿ ಘೋಷಿಸಿದರು.

* ಮಂಗಳ ಗ್ರಹಂದಿಂದ ಬಂದವರು : ಕಾಂಗ್ರೆಸ್ ಪಕ್ಷದವರು ಮಂಗಳ ಗ್ರಹದಿಂದ ಬಂದವರಂತೆ ವರ್ತಿಸುತ್ತಾರೆ. ಅವರಿಗೆ ದೇಶದ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಕೇವಲ ಭಾಷಣ ಮಾಡುತ್ತಾ ಕಾಲ ಕಳೆಯುತ್ತಾರೆ. ಮಹಿಳೆಯರ ಬಗ್ಗೆ ಗಂಟೆಗಟ್ಟಲೇ ಮಾತನಾಡುವ "ಸೋನಿಯಾ ಮೇಡಂ ನೀವಿರುವ ಸ್ಥಳದಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯ ನಡೆಯುತ್ತಿದೆ, ಅದನ್ನು ಮೊದಲು ಗಮನಿಸಿ ಎಂದು ಮೋದಿ ಕುಟುಕಿದರು.

* ಸಿಕ್ಕಿದ್ದು ಮೂರು ಸಿಲಿಂಡರ್ : ದೆಹಲಿಗೆ ಕಾಂಗ್ರೆಸ್ಸಿಗರು ಪ್ರಧಾನಿ ಅಭ್ಯರ್ಥಿ ಯಾರು? ಎಂದು ತಿಳಿದುಕೊಳ್ಳುವ ಆಸಕ್ತಿಯಿಂದ ಹೋದರು. ಆದರೆ, 3 ಸಿಲಿಂಡರ್ ಹಿಡಿದು ವಾಪಸ್ ಬಂದರು. ಮಹಿಳೆಯರ ಬಗ್ಗೆ ಮಾತನಾಡುವ ಕಾಂಗ್ರೆಸಿಗರ ಮಹಿಳಾ ಪರವಾದ ಕಾಳಜಿ ಎಷ್ಟು ಎಂದು ನಮಗೆ ತಿಳಿದಿದೆ ಎಂದು ಮೋದಿ ಹೇಳಿದರು.

* ಕಾಂಗ್ರೆಸ್ ಕಗ್ಗತ್ತಲೆಯಲ್ಲಿದೆ : ಕರ್ನಾಟಕದಲ್ಲಿ ಪೈಪ್ ಲೈನ್ ಮೂಲಕ ಗ್ಯಾಸ್ ಬರುತ್ತಿದೆಯೇ? ಗುಜರಾತ್ ನಲ್ಲಿ ಮಾತ್ರ ನಲ್ಲಿಯಲ್ಲಿ ನೀರು ಬರುವಂತೆ, ಗ್ಯಾಸ್ ಕೊಳವೆ ಮೂಲಕ ಮನೆಗೆ ಬರುತ್ತದೆ. ಇದು ನಮ್ಮ ಮಹಿಳಾ ಪರವಾದ ಕಾಳಜಿ. ಗುಜರಾತ್ ವಿದೇಶದಲ್ಲಿಲ್ಲ, ಭಾರತದಲ್ಲಿದೆ ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ ಅದು ಕಗ್ಗತ್ತಲೆಯಲ್ಲಿದೆ ಎಂದರು.

* ರೂಪಾಯಿ ಮೌಲ್ಯ ಕುಸಿಯುತ್ತಿದೆ : ನಮ್ಮ ಆರ್ಥಿಕ ತಜ್ಞರು ಪ್ರಧಾನಿಯಾಗಿರುವಾಗಲೇ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದು ಹೋಗುತ್ತಿದೆ. ಕೇಂದ್ರ ಸರ್ಕಾರ ರಫ್ತುನ್ನು ಹೆಚ್ಚು ಮಾಡಿದ್ದರೆ, ರೂಪಾಯಿ ಮೌಲ್ಯ ಹೆಚ್ಚಾಗುತ್ತಿತ್ತು. ರೈತರು ಬೆಳೆಯುವ ಕೆಂಪು ಮೆಣಸನ್ನು ರಫ್ತು ಮಾಡುವ ಬದಲು ಕಾಂಗ್ರೆಸ್ಸಿಗರು ಅದನ್ನು ಸಂಸತ್ ಭವನಕ್ಕೆ ಬೆದರಿಸಲು ತಂದಿದ್ದರು ಎಂದು ಮೋದಿ ವ್ಯಂಗ್ಯವಾಡಿದರು.

* ತಾವು ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಒಪ್ಪಿಕೊಳ್ಳಲು ಕಾಂಗ್ರೆಸಿಗರು ತಯಾರಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರ ಅಹಂಕಾರ ನೋಡಿ. ಅವರಿಗೆ ಜನರಿಗೆ ಉತ್ತರ ನೀಡಲು ತಯಾರಿಲ್ಲ. ಈ ಬಾರಿ ಮತ ಕೇಳಲು ಬಂದಾಗ ಅವರನ್ನು ತಡೆದು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀರಿ? ಎಂದು ಕೇಳಿ ಎಂದು ಮೋದಿ ಜನರಿಗೆ ಕರೆ ನೀಡಿದರು.

* ಜನರೇ ಮೋದಿ ನೋಡಿ ಮತ ಹಾಕಬೇಡಿ. ಕಮಲ ಪಕ್ಷ ನೋಡಿ ಮತ ಹಾಕಿ. ಕಮಲವಿದ್ದಕಡೆ ಲಕ್ಷ್ಮೀ ಇರುತ್ತಾಳೆ. ಲಕ್ಷ್ಮೀ ಇರುವ ಕಡೆ ಸಮೃದ್ಧಿ ಇರುತ್ತದೆ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ, ಯುವಕರಿಗೆ ಉದ್ಯೋಗ ದೊರೆಯುವುದಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮೋದಿ ಮನವಿ ಮಾಡಿದರು.

English summary
BJP's prime ministerial candidate and Gujarat chief minister Narendra Modi address the 'Bharata Gellisi' public rally in Hubli, Karnataka on Feb 28, Friday. In his speech modi said, we need your support for Congress Mukt Bharat and fulfilling Mahatma Gandhi's dream.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X