ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು: ಕೊಲೆಯಾದ ಶಿಲ್ಪಾಳ ಕಂಪ್ಲೀಟ್ ಸ್ಟೋರಿ ಇಲ್ಲಿದೆ

By Srinath
|
Google Oneindia Kannada News

Mysore inter-caste marriage- Woman Shilpa burnt alive -detail story
ಮೈಸೂರು, ಏ.24: ಅಂತರ್ಜಾತಿ ವಿವಾಹ ಯುವ ಶಿಲ್ಪಾಳ ಬಾಳನ್ನು ಹೊಸಕಿ ಹಾಕಿದೆ. ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾ? ಅನ್ನೋ ಭಾವನೆ ಈಗ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಸ್ಪುರದ್ರೂಪಿಯಾಗಿದ್ದ ಶಿಲ್ಪಾ ಇಂದು ಹೆಣವಾಗಿದ್ದಾಳೆ. ಈ ಮುಗ್ಧ ಜೀವ ಮಾಡಿದ ತಪ್ಪಾದ್ರೂ ಏನು? ಈಕೆಯ ಸಾವಿನಿಂದ ಎಲ್ಲಾ ರೀತಿಯ ಸಮಸ್ಯೆಗಳು ಬಗೆ ಹರಿಯುತ್ತವೆಯಾ? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾನೂನು ಎಷ್ಟೇ ಬಿಗಿಯಾಗಿದ್ರು ಅತ್ಯಾಚಾರ, ಕೊಲೆ, ಹಿಂಸೆಯಂತಹ ಹೀನಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಯನ್ನು ಬಿಟ್ಟಿರಲಾದಂತಹ ಪ್ರೇಮಿಗಳು ಅಂತರ್ಜಾತಿ ವಿವಾಹವಾಗಿದ್ದೇ ದೊಡ್ಡ ತಪ್ಪು ಎನ್ನುವಂತೆ ಪ್ರಿಯತಮೆಯನ್ನು ಪ್ರಿಯಕರನ ಚಿಕ್ಕಪ್ಪ ಚಿಕ್ಕಮ್ಮ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾರೆ. ಇಂಥ ಹೀನ ಕೃತ್ಯದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಮೈಸೂರಿನ ಮೇಟಗಳ್ಳಿ ನಿವಾಸಿ ಬಿಲ್ಲಯ್ಯ-ನಾಗಮ್ಮ ದಂಪತಿಯ ಪುತ್ರ ಅಭಿಜಿತ್ ಹಾಗೂ ಮುರುಗೇಶ್-ಮಂಗಳಮ್ಮ ಪುತ್ರಿ ಶಿಲ್ಪಾ ಪರಸ್ಪರ ಪ್ರೀತಿಸುತ್ತಿದ್ರು. ಒಬ್ಬರೊನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತರವಾಗಿದ್ದರು. ಇಬ್ಬರ ಪ್ರೀತಿಯ ವಿಷಯ ಪೋಷಕರಿಗೆ ಗೊತ್ತಾಗಿ ಇವರಿಬ್ಬರ ಪ್ರೀತಿಗೆ ಅಡ್ಡಿಪಡಿಸಿದ್ರು. ಪೋಷಕರಿಂದ ಮದುವೆಗೆ ಅಡ್ಡಿಯಾಗುತ್ತದೆಂದು ಹೆದರಿ 2014ರ ಜನವರಿ 1 ರಂದು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ರು.

ಇಬ್ಬರೂ ನಿಗೂಢ ಸ್ಥಳದಲ್ಲಿ ವಾಸವಾಗಿ ಸುಖಸಂಸಾರವನ್ನು ಮಾಡುತ್ತಿದ್ದರು. ಇಬ್ಬರೂ ಸುಖಸಂಸರ ನಡೆಸುತ್ತಿದ್ದದ್ದು ಆ ದೇವರಿಗೂ ಇಷ್ಟವಾಗ್ಲಿಲ್ಲವೇನೋ. ಇಬ್ಬರೂ ಮದುವೆಯಾಗಿರೋ ಸುದ್ದಿ ತಿಳಿದ ಅಭಿಜಿತ್ ಪೋಷಕರು ಕೆಂಡಾಮಂಡಲವಾದ್ರು. ಕೀಳು ಜಾತಿಯ ಹುಡುಗಿಯನ್ನು ತಮ್ಮ ಮಗ ಮದುವೆಯಾಗಿದ್ದರಿಂದ ನಮಗೆ ಅವಮಾನವಾಗಿದೆ ಎಂದು ಭಾವಿಸಿ ಏನಾದ್ರು ಮಾಡ್ಲೇ ಬೇಕು ಅಂತ ಸ್ಕೆಚ್ ಹಾಕಿದ್ದಾರೆ.

ಫೆಬ್ರವರಿಯಲ್ಲಿ ಇವರಿರುವ ಜಾಗವನ್ನು ಪತ್ತೆ ಮಾಡಿದ ಅಭಿಜಿತ್ ಚಿಕ್ಕಪ್ಪ ಪುಟ್ಟಸ್ವಾಮಿ ತಮ್ಮ ಮನೆಯಲ್ಲೇ ಇರುವಂತೆ ಕೋರಿದ್ದಾನೆ. ಚಿಕ್ಕಪ್ಪನ ಮಾತು ನಂಬಿದ ಅಭಿಜಿತ್ ತನ್ನ ಹೆಂಡತಿ ಶಿಲ್ಪಾಳನ್ನು ಕರೆತಂದು ಚಿಕ್ಕಪ್ಪನ ಮನೆಯಲ್ಲೇ ವಾಸವಾಗಿದ್ದ.

ದಿನಕಳೆದಂತೆ ಚಿಕ್ಕಪ್ಪ ಪುಟ್ಟಸ್ವಾಮಿ ಮತ್ತು ಚಿಕ್ಕಮ್ಮ ಪ್ರಮೀಳಾರ ವರ್ತನೆಯಿಂದ ಬೇಸತ್ತ ಅಭಿಜಿತ್ ಮತ್ತು ಶಿಲ್ಪಾ ಬೇರೆ ಮನೆ ಮಾಡಲು ನಿರ್ಧರಿಸಿ, ಬೆಳವಾಡಿಯ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡತೊಡಗಿದ್ದರು. ಅಭಿಜಿತ್ ಕಾರ್ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಾ ತನ್ನ ಹೆಂಡತಿಯನ್ನು ಪ್ರೀತಿಯಿಂದಲೇ ನೋಡಿಕೊಂಡಿದ್ದ. ಇಬ್ಬರೂ ಅನ್ಯೋನ್ಯವಾಗಿ ಜೀವನ ಸಾಗಿಸಿಕೊಂಡು ಸುಖವಾಗಿಯೇ ಇದ್ದರು.

ಈ ಮಧ್ಯೆ ಏಪ್ರಿಲ್ 22 ರಂದು ಬೆಳವಾಡಿಯ ಅಭಿಜಿತ್ ಮನೆಗೆ ಬಂದ ಚಿಕ್ಕಪ್ಪ ಪುಟ್ಟಸ್ವಾಮಿ ಮಳವಳ್ಳಿಯ ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಹೋಗೋಣ ಎಂದು ಕರೆದಿದ್ದಾನೆ. ಮೊದಲೇ ಕಾರ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಅಭಿಜಿತ್ ಬರಲು ಸಾಧ್ಯವಿಲ್ಲ, ಶಿಲ್ಪಾಳನ್ನು ಕರೆದುಕೊಂಡು ಹೋಗಿ ಎಂದಿದ್ದಾನೆ.

ಮದುವೆಯಾದಾಗಿನಿಂದ ತವರು ಮನೆ ಮೆಟ್ಟಿಲೇರದ ಶಿಲ್ಪಾ ಜಾತ್ರೆಗೆ ಹೋಗುತ್ತೇನೆಂದು ಹೇಳಿ ಬರಲು ತಾಯಿ ಮನೆಗೆ ಹೋಗಿದ್ದಾಳೆ. ಮಗಳು ಮನೆಗೆ ಬಂದ್ದದ್ದೇ ತವರು ಮನೆಯಲ್ಲಿ ಹಬ್ಬದ ಸಡಗರ. ಮಗಳ ಯೋಗಕ್ಷೇಮ ವಿಚಾರಿಸಿದ ಪೋಷಕರು ಮಗಳು ಚೆನ್ನಾಗಿರುವುದನ್ನು ಕೇಳಿ ಆಕಾಶದಲ್ಲಿ ತೇಲಿದ್ದಾರೆ.

ಸರಿ ಮಾರನೇ ದಿನ ಬುಧವಾರ ಶಿಲ್ಪಾ ತನ್ನ ಚಿಕ್ಕ ಮಾವ ಪುಟ್ಟಸ್ವಾಮಿ, ಚಿಕ್ಕತ್ತೆ ಪ್ರಮೀಳಾ ಜತೆಗೂಡಿ ಮುಡುಕುತೊರೆಯ ಶಿವನ ದೇವಸ್ಥಾನಕ್ಕೆ ಕಾರಿನಲ್ಲಿ ಹೋಗಿದ್ದಳು. ದೇವರ ದರ್ಶನ ಮುಗಿಸಿ ಮಳವಳ್ಳಿಯ ತಮ್ಮ ಸಂಬಂಧಿಕರ ಮನೆಗೆ ಕರೆದುಕೊಂಡು ಹೋದರು. ನಂತರ ರಾತ್ರಿ 11 ಗಂಟೆಗೆ ಮೈಸೂರು ಕಡೆಗೆ ಹೊರಟಿದ್ದಾರೆ.

ಮೈಸೂರಿಗೆ ಬರುತ್ತಿದ್ದ ಮಾರ್ಗ ಮಧ್ಯೆ ಶಿಲ್ಪಾ ಮೂತ್ರ ವಿಸರ್ಜನೆ ಮಾಡಬೇಕು ಕಾರು ನಿಲ್ಲಿಸಿ ಎಂದು ಕೇಳಿದ್ದಾಳೆ. ಮೊದಲೇ ಸ್ಕೆಚ್ ಹಾಕಿಕೊಂಡಿದ್ದ ಪುಟ್ಟಸ್ವಾಮಿ- ಪ್ರಮೀಳಾ ದಂಪತಿಗಳು ಮಳವಳ್ಳಿ ತಾಲೂಕಿನ ನೇಣೂರು ಗೇಟ್ ಬಳಿ ಕಾರು ನಿಲ್ಲಿಸಿದ್ದಾರೆ. ಶಿಲ್ಪಾ ಮೂತ್ರ ವಿಸರ್ಜನೆ ಮಾಡುವ ಸಂದರ್ಭ ಹಿಂದಿನಿಂದ ಬಂದ ಪ್ರಮೀಳಾ, ಶಿಲ್ಪಾಳ ದುಪ್ಪಟ್ಟಾದಿಂದ ಕತ್ತು ಬಿಗಿದಿದ್ದಾಳೆ. ತಕ್ಷಣ ಎಚ್ಚೆತ್ತ ಶಿಲ್ಪಾ ಪ್ರಮೀಳಾಳನ್ನು ತಳ್ಳಿ ಭಯದಿಂದ ಓಡಲಾರಂಭಿಸಿದ್ದಾಳೆ.

ತಕ್ಷಣ ದಂಪತಿಗಳಿಬ್ಬರೂ ಶಿಲ್ಪಾಳನ್ನು ಬೆನ್ನಟ್ಟಿ ಓಡಿಸಿಕೊಂಡು ಹೋಗಿದ್ದಾರೆ. ಸುಮಾರು ಒಂದು ಕಿಲೋ ಮೀಟರ್ ದೂರ ಓಡಿದ ಶಿಲ್ಪಾ ಸುಸ್ತಾಗುತ್ತಿದ್ದಂತೆ ಕನ್ನಹಳ್ಳಿ ಗೇಟ್ ಬಳಿ ಕುಸಿದು ಬಿದ್ದಿದ್ದಾಳೆ. ಬೆನ್ನಟ್ಟಿ ಬಂದ ಹಂತಕರು ಶಿಲ್ಪಾಳನ್ನು ಬಲವಂತವಾಗಿ ಹಿಡಿದು ಕೈ ಕಾಲು ಕಟ್ಟಿದ್ದಾರೆ. 'ನೀನು ಕೀಳು ಜಾತಿಯವಳು, ನಮ್ಮ ಮಟ್ಟಕ್ಕೆ ಬರಲು ಸಾಧ್ಯವಿಲ್ಲ. ಒಂದು ಪೈಸೆ ವರದಕ್ಷಿಣೆಯನ್ನೂ ಕೊಟ್ಟಿಲ್ಲ. ನಿನಗೆ ನಮ್ಮ ಸಂಬಂಧ ಬೇಕಾ?' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕಾರಿನಲ್ಲಿ ತಂದಿದ್ದ ಪೆಟ್ರೋಲನ್ನು ಶಿಲ್ಪಾಳ ಮೈಮೇಲೆ ಸುರಿದಿದ್ದಾರೆ.

ಪ್ರಾಣ ಉಳಿಸಿಕೊಳ್ಳಲು ಪರಿಪರಿಯಾಗಿ ಬೇಡಿಕೊಂಡರೂ ಹಂತಕರಿಗೆ ಕರುಣೆಯೇ ಬಂದಿಲ್ಲ. ಪೆಟ್ರೋಲಿನಿಂದ ತೊಯ್ದಿದ್ದ ಶಿಲ್ಪಾಳ ಮೇಲೆ ಕರುಣೆಯೇ ಇಲ್ಲದೆ ಬೆಂಕಿ ಹಚ್ಚಿದ್ದಾರೆ. ಇನ್ನೇನು ಇವಳ ಸಾವು ಖಚಿತ ಎಂದು ಭಾವಿಸಿದ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ. ಬೆಂಕಿಯ ಶಾಖದಿಂದ ನರಳಿದ ದುರ್ದೈವಿ ಶಿಲ್ಪಾ ಕಿರುಚಿಕೊಂಡಿದ್ದಾಳೆ. ಬೆಂಕಿಯನ್ನು ಗಮನಿಸಿದ ದಾರಿಹೋಕರು ತಕ್ಷಣ ಸ್ಥಳಕ್ಕೆ ಹೋಗಿ ನೋಡಿದ್ದಾರೆ.

ಶಿಲ್ಪಾಳ ಕಿರುಚಾಟ ಗಮನಿಸಿ ಬೆಂಕಿಯನ್ನು ನಂದಿಸಿ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ. 50 ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಶಿಲ್ಪಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಳಗಿನ ಜಾವ ಸುಮಾರು 4-5 ಗಂಟೆ ಸಮಯದಲ್ಲಿ ನಡೆದ ಘಟನೆಯಿಂದ ಇಡೀ ಸುತ್ತ ಮುತ್ತಲ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಮಹಿಳಾ ಸಂಘಟನೆಗಳು ಶಿಲ್ಪಾಳ ನೆರವಿಗೆ ದೌಡಾಯಿಸಿವೆ.

ಶಿಲ್ಪಾಳಿಂದ ಅವರ ಪೋಷಕರು ದೂರವಾಣಿ ಸಂಖ್ಯೆ ಪಡೆದು ಸಂಪರ್ಕಿಸಲಾಗಿದೆ. ಮಗಳಿಗಾದ ಅನ್ಯಾಯವನ್ನು ಕಂಡ ತಾಯಿ ಮಂಗಳಮ್ಮ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮಗಳ ಪರಿಸ್ಥಿತಿಯನ್ನು ಕಂಡ ಹೆತ್ತವ್ವನ ರೋಧನ ಮುಗಿಲು ಮುಟ್ಟಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಸ್ಪಿ ಭೂಷಣ್ ಜಿ ಬೊರಸೆ ಶಿಲ್ಪಾಳಿಂದ ಹೇಳಿಕೆ ಪಡೆದಿದ್ದಾರೆ. ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದಾಗ... ಚಿಕ್ಕತ್ತೆ ಪ್ರಮೀಳಾಳನ್ನು ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಚಿಕ್ಕ ಮಾವ ಪುಟ್ಟಸ್ವಾಮಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಇತ್ತ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಶಿಲ್ಪಾ ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಮಗಳ ಸಾವನ್ನು ಕಣ್ಮುಂದೆ ನೋಡಿದ ತಾಯಿಯ ಕೂಗು ಮುಗಿಲು ಮುಟ್ಟಿದೆ. ಇಡೀ ಆಸ್ಪತ್ರೆ ಆವರಣ ಶಿಲ್ಪಾಳ ಸಾವಿನಿಂದ ಮಮ್ಮಲ ಮರುಗಿದೆ.

ಅತ್ತ ಶಿಲ್ಪಾಳ ಗಂಡ ಅಭಿಜಿತ್‌ ಗೆ ತನ್ನ ಹೆಂಡತಿಗೆ ಏನಾಗಿದೆ ಎಂದು ತಿಳಿಸಲೂ ಯಾರೂ ಇಲ್ಲ. ಮಧ್ಯಾಹ್ನವಾದ್ರು ಆ ಮುಗ್ಧ ಜೀವ ತನ್ನ ಹೆಂಡತಿ ಬರುತ್ತಾಳೆ ಎಂದು ಕಾಯುತ್ತಲೇ ಇತ್ತು. ಇನ್ನು ಶಿಲ್ಪಾಳ ಸ್ವಂತ ಅತ್ತೆ ಮಾವ ನಮ್ಮ ಪಾತ್ರವೇನೂ ಇಲ್ಲದಂತೆ ಮುಗುಮ್ಮಾಗೇ ಇದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಘಟನೆ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ. ತನಿಖೆ ನಂತರವಷ್ಟೆ ಈ ಘಟನೆಗೆ ಕಾರಣವೇನೆಂಬುದು ತಿಳಿದು ಬರಲಿದೆ.

English summary
Mysore - A 19 year old young woman Shilpa who married Abhijit on inter-caste marriage was burnt alive by Abhijit's uncle and aunty on April 23 night. Shilpa who was struggling to survive with burn injuries in Mandya Hospital succumbed on April 24 noon. A complete story of Shilpa love is given here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X