ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ಸಚಿವರೇ ಏನ್ರೀ ಇದು ಆಧಾರ್,ಎಲ್ಪಿಜಿ ಕಿರಿಕಿರಿ

By ಬಾಲರಾಜ್ ತಂತ್ರಿ
|
Google Oneindia Kannada News

ಮಾಡ ಬೇಕಾಗಿರುವ ಬೆಟ್ಟದಷ್ಟು ಅಭಿವೃದ್ದಿ ಕೆಲಸವನ್ನು ಬಿಟ್ಟು ಇನ್ನೇನೋ ಮಾಡೋಕೆ ಹೊರಟು, ಜನರ ನೆಮ್ಮದಿಗೆ ಕೊಡಲಿ ಏಟು ಕೊಟ್ಟ ಯುಪಿಎ ಸರಕಾರದ ಗ್ಯಾಸ್ ಸಬ್ಸಿಡಿ ಸ್ಕೀಂ. ಜಾಗತೀಕರಣದ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡುವ ಕಾರ್ಯಕ್ರಮಗಳಲ್ಲಿ ಮನಮೋಹನ್ ಸಿಂಗ್ ಸರಕಾರದ ಎಲ್ಪಿಜಿ ಸಬ್ಸಿಡಿ ನೇರ ನಗದು ವರ್ಗಾವಣೆ ಸ್ಕೀಂ ಕೂಡಾ ಒಂದು.

ಗ್ರಾಹಕರಿಗೆ ನೀಡುವ ಸಬ್ಸಿಡಿಯನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಫಲಾನುಭವಿಗಳಿಗೆ ತಲುಪಿಸುವುದಕ್ಕಾಗಿ 'ನೇರ ನಗದು ವರ್ಗಾವಣೆ' ಯೋಜನೆ ಜಾರಿಗೆ ತರಲಾಗಿದೆ ಎಂದು ಅಬ್ಬರದ ಪ್ರಚಾರ ಪಡೆದುಕೊಂಡ ಈ ಯೋಜನೆ, ಜನಸಾಮಾನ್ಯರಿಗೆ ಉಪಯೋಗವಾಗುವ ಬದಲು ಜನತೆ ರೋಸಿ ಹೋಗುವ ಯೋಜನೆಯಾಗುತ್ತಿದೆ ಎನ್ನುವುದು ಇಂಧನ ಸಚಿವಾಲಯಕ್ಕೆ ತಿಳಿದಿರಲಿ.

ಅಡುಗೆ ಅನಿಲ ಸಂಪರ್ಕ, ಸಿಲಿಂಡರ್ ಮಿತಿ, ಆಧಾರ್ ಕಾರ್ಡ್ ಕಡ್ಡಾಯ ಹೀಗೆ ಗ್ರಾಹಕರನ್ನು ಗೊಂದಲದಲ್ಲಿ ದೂಡಿ ಇಂಧನ ಸಚಿವಾಲಯ ಅದೇನು ಸಾಧಿಸಿದಂತಾಯಿತೋ? ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಗದು ವರ್ಗಾವಣೆ ಯೋಜನೆ ಜಾರಿಯಲ್ಲಿರುವುದು ಕೆಲವು ವಿಘ್ನ ಸಂತೋಷಿಗಳಿಗೆ ವರವಾಗಿ ಪರಿಣಮಿಸಿದೆ. ಗ್ಯಾಸ್ ಏಜನ್ಸಿಗಳು ಆಧಾರ್ ಕಾರ್ಡ್ ಇಲ್ಲದಿದ್ದರೆ ಸಿಲಿಂಡರ್ ನೀಡಲಾಗುವುದಿಲ್ಲ ಎನ್ನುವ ಸುದ್ದಿ ಹಬ್ಬಿಸಿ ಜನತೆಯ ಗೊಂದಲದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುತ್ತಿವೆ.

ಬ್ಯಾಂಕಿನಲ್ಲಿ ಮತ್ತು ಗ್ಯಾಸ್ ಏಜನ್ಸಿಯಲ್ಲಿ ಆಧಾರ್ ಕಾರ್ಡಿನ ಮಾಹಿತಿ ನೀಡದೇ ಇದ್ದಲ್ಲಿ, ಸಬ್ಸಿಡಿ ದರದಲ್ಲಿ ಸಿಲಿಂಡರ್ ಲಭ್ಯವಾಗುವಿದಿಲ್ಲ, ಮಾರುಕಟ್ಟೆ ದರದಲ್ಲಿ (commercial) ಅಡುಗೆ ಅನಿಲ ಖರೀದಿಸ ಬೇಕಾಗುತ್ತದೆ ಎಂದು ತೈಲ ಕಂಪೆನಿಯ ಏಜನ್ಸಿಯವರೇ ಹೇಳುತ್ತಿರುವುದು ಜನಸಾಮಾನ್ಯರನ್ನು ಮತ್ತಷ್ಟು ಗೊಂದಲಕ್ಕೆ ಮತ್ತು ಆತಂಕಕ್ಕೆ ದೂಡಿದೆ.

ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸಂಬಂಧಪಟ್ಟ ಸಚಿವರು ಹೇಳಿಕೆ ನೀಡುತ್ತಿದ್ದರೂ, ಹಗೆಗೆ ಬಿದ್ದವರಂತೆ ಏಜನ್ಸಿಗಳಿಂದ ಮೆಸೇಜ್ ಮೇಲೆ ಮೆಸೇಜ್ ಬರುತ್ತಲೇ ಇದೆ. ಇದೇನಪ್ಪಾ ಕರ್ಮಾ ಎಂದು ಏಜನ್ಸಿಗೆ ದೌಡಾಯಿಸಿದರೆ ಸರಿಯಾದ ಮಾಹಿತಿ ನೀಡುವಲ್ಲಿ ಏಜನ್ಸಿ ಉದ್ಯೋಗಿಗಳು ವಿಫಲರಾಗುತ್ತಾರೆ. ಗ್ರಾಹಕರಿಗೆ ಕೆಲವೊಂದು ಗೊಂದಲ ಬಗೆಹರಿಸುವ ಬದಲು ಇನ್ನಷ್ಟು ಗೊಂದಲದ ಗೂಡಿಗೆ ತಳ್ಳುತ್ತಾರೆ. (ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಕಡ್ಡಾಯವಲ್ಲ : ಮೊಯ್ಲಿ)

Lot of confusion over LPG Aadhaar card linking to get bank subsidy

ಬ್ಯಾಂಕಿಗೆ ಸಬ್ಸಿಡಿ ನಗದು ವರ್ಗಾವಣೆಯಾಗುವುದು ಆಧಾರ್ ಅಪ್ಲಿಕೇಶನ್ ನಲ್ಲಿ ಗ್ರಾಹಕ ಬರೆದ ಬ್ಯಾಂಕ್ ಖಾತೆಗೆ. ಅರ್ಜಿಯಲ್ಲಿ ನಮೂದಿಸಿದ ಬ್ಯಾಂಕ್ ಖಾತೆಯನ್ನು ಗ್ರಾಹಕ ಚಾಲ್ತಿಯಲ್ಲಿ ಇಟ್ಟಿಲ್ಲದೇ ಇದ್ದಲ್ಲಿ ಏನು ಮಾಡಬೇಕು? ಆಧಾರ್ ಅರ್ಜಿಯಲ್ಲಿ ಎರಡು ಬ್ಯಾಂಕ್ ಖಾತೆ ನಮೂದಿಸುವ ಅವಕಾಶವಿದೆ. ಕಾರಣಾಂತರದಿಂದ ಆ ಎರಡೂ ಖಾತೆಯನ್ನು ಚಲಾವಣೆಯಲ್ಲಿ ಇಡಲಾಗದೇ ಇದ್ದ ಪಕ್ಷದಲ್ಲಿ ಸಬ್ಸಿಡಿ ಮೊತ್ತದ ಕಥೆ ಏನು ಅನ್ನುವುದಕ್ಕೆ ಏಜನ್ಸಿಯವರಲ್ಲಿ ಸರಿಯಾದ ಉತ್ತರವಿಲ್ಲ.

ಒಂಬತ್ತು ಸಿಲಿಂಡರ್ ಸಬ್ಸಿಡಿ ದರದಲ್ಲಿ ಲಭ್ಯವಾಗಲಿದೆ. ಸರಕಾರ ಸಬ್ಸಿಡಿ ಮೊತ್ತವನ್ನು ನೇರ ಬ್ಯಾಂಕಿಗೆ ಜಮಾ ಮಾಡಲಿದೆ ಎನ್ನುವುದು ಸರಕಾರದ ಘೋಷಣೆ. ಸಬ್ಸಿಡಿ ಮೊತ್ತ ಸರಿಯಾದ ವೇಳೆಯಲ್ಲಿ ಬ್ಯಾಂಕ್ ಖಾತೆಗೆ ಜಮಾವಣೆಯಾದರೆ ಬಚಾವ್. ಇಲ್ಲದೇ ಇದ್ದಲ್ಲಿ ಗ್ರಾಹಕ ಇನ್ನಷ್ಟು ಹೈರಾಣವಾಗುವುದು ಗ್ಯಾರಂಟಿ. ಏಜನ್ಸಿಗಳು ಬ್ಯಾಂಕಿನಲ್ಲಿ ವಿಚಾರಿಸಲು ಹೇಳಿ ಅಲ್ಲಿಂದ ಗ್ರಾಹಕನನ್ನು ಸಾಗ ಹಾಕಿದರೆ, ಬ್ಯಾಂಕಿನವರು ಸರಕಾರ ಕೊಟ್ಟರೆ ಕೊಡುತ್ತೇವೆ, ಇಲ್ಲಾಂದ್ರೆ ನಾವೇನೂ ಜೇಬಿನಿಂದ ಕೊಡಕಾಗುತ್ತಾ ಎನ್ನುವ ಉಡಾಫೆಯ ಮಾತನ್ನು ಗ್ರಾಹಕ ಆಲಿಸ ಬೇಕಾಗುತ್ತದೆ. (LPGಗೆಲ್ಲ ಆಧಾರ್ ಕಾರ್ಡ್ ಬಳಸಬೇಡಿ: ಸುಪ್ರೀಂ ತರಾಟೆ)

ನೇರ ನಗದು ವರ್ಗಾವಣೆ ಯೋಜನೆ ಜಾರಿಗೆ ತರುವ ಯುಪಿಎ ಸರಕಾರದ ಹಿಂದಿನ ಉದ್ದೇಶವೇನು ಎನ್ನುವುದೇ ಇಲ್ಲಿ ಅಸ್ಪಷ್ಟ. ಎಲ್ಪಿಜಿ ಅಕ್ರಮ ಮಾರಾಟ ಧಂಧೆ ತಡೆಯುವುದೇ ಅಥವಾ ಕಾರ್ಪೋರೇಟ್ ಕಂಪೆನಿಗಳ ಹಿತ ಕಾಪಾಡುವುದೇ? ಆಧಾರ್ ಕಾರ್ಡ್ ಅಂದರೆ ಏನು, ಅದರಿಂದ ಜನಸಾಮಾನ್ಯರಿಗೆ ಏನು ಪ್ರಯೋಜನ ಎನ್ನುವ ವಿಚಾರ ಗೊತ್ತಿಲ್ಲದವರು ಪ್ರತೀ ಜಿಲ್ಲೆಯಲ್ಲಿ ಇರಬಹುದಿಲ್ಲವೇ? ಆಧಾರ್ ಬಗ್ಗೆ ಜನತೆಗೆ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮಾಡಿದಿಯೇ? ಟಿವಿಯಲ್ಲಿ ಮತ್ತು ದೈನಿಕದಲ್ಲಿ ಆಧಾರ್ ಕಾರ್ಡ್ ಬಗ್ಗೆ ಸಚಿವರ ಭಾವಚಿತ್ರದೊಂದಿಗೆ ಜಾಹೀರಾತು ನೀಡಿದರೆ ಸಾಕೇ? ಬ್ಯಾಂಕ್ ಖಾತೆ ತೆರಯಲು ಐನೂರರಿಂದ ಸಾವಿರ ರೂಪಾಯಿ ಬೇಕಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ ಈ ಮೊತ್ತ ಭರಿಸಲು ಸಾಧ್ಯವೇ?(ಅಡುಗೆ ಸಿಲಿಂಡರ್‌ ಸಂಖ್ಯೆ 12ಕ್ಕೇರಿಸುವ ನಿರೀಕ್ಷೆ)

ಪೆಟ್ರೋಲಿಯಂ ಸಚಿವಾಲಯದ ವೆಬ್ ಸೈಟ್ ಪ್ರಕಾರ ರಾಜ್ಯದ 25 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಆದರೆ ಕಟ್ಟುನಿಟ್ಟಾಗಿ ಈ ಯೋಜನೆಯನ್ನು ಪಾಲಿಸುತ್ತಿರುವ ಜಿಲ್ಲೆಗಳೆಂದರೆ ಮೈಸೂರು, ತುಮಕೂರು, ಬಿಜಾಪುರ, ದಾವಣಗೆರೆ, ಹಾವೇರಿ, ಬೀದರ್, ಕೊಪ್ಪಳ, ದಕ್ಷಿಣಕನ್ನಡ.

ನೇರ ನಗದು ವರ್ಗಾವಣೆ ಯೋಜನೆ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಗ್ರಾಹಕ ಆಧಾರ್ ಮಾಹಿತಿಯನ್ನು ಏಜನ್ಸಿಗೆ ನೀಡಿದ್ದ ಪಕ್ಷದಲ್ಲಿ ಸಿಲಿಂಡರ್ ಪಡೆದು ಕೊಳ್ಳುವಾಗ (9 ಸಿಲಿಂಡರ್ ವರೆಗೆ) ಕೊಡಬೇಕಾದ ಮೊತ್ತ ಸಿಲಿಂಡರ್ ಒಂದಕ್ಕೆ - ರೂಪಾಯಿ 1270. ಇದರಲ್ಲಿ ಬ್ಯಾಂಕಿಗೆ ಜಮಾ ಆಗುವ ಸಬ್ಸಿಡಿ ಮೊತ್ತ ರೂಪಾಯಿ 835. ಇಲ್ಲದಿದ್ದಲ್ಲಿ ಒಂಬತ್ತು ಸಿಲಿಂಡರ್ ವರೆಗೆ ರೂಪಾಯಿ 425.

ಈ ಯೋಜನೆ ಜಾರಿಯಲ್ಲಿರದ ಜಿಲ್ಲೆಗಳಲ್ಲಿ (9 ಸಿಲಿಂಡರ್ ವರೆಗೆ) ಗ್ರಾಹಕ ಸಿಲಿಂಡರ್ ಒಂದಕ್ಕೆ ಪಾವತಿಸ ಬೇಕಾದ ಮೊತ್ತ ರೂಪಾಯಿ 423. ಯೋಜನೆ ಜಾರಿಯಲ್ಲಿರದ ಮತ್ತು ಇರುವ ಜಿಲ್ಲೆಗಳಲ್ಲಿ 9 ಸಿಲಿಂಡರ್ ನಂತರ ಗ್ರಾಹಕ ಕೊಡಬೇಕಾದ ದರ ರೂಪಾಯಿ 1265. (ವಾಹನ ಸಾಗಾಣೆ ದರದ ಆಧಾರದ ಮೇಲೆ ಈ ಬೆಲೆ ಹತ್ತರಿಂದ ಇಪ್ಪತ್ತು ರೂಪಾಯಿ ವ್ಯತ್ಯಯವಾಗುವ ಸಾಧ್ಯತೆಯಿದೆ)

ಇಷ್ಟು ಗೊಂದಲದ ಗೂಡಾಗಿರುವ ಈ ಯೋಜನೆಯ ಅವಶ್ಯಕತೆ ಇತ್ತೇ? ಲಂಗು ಲಗಾಮಿಲ್ಲದೇ ಸಾಗುತ್ತಿರುವ ಹಣದುಬ್ಬರ, ಬೆಲೆ ಏರಿಕೆ. ಅದನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿರುವ ಯುಪಿಎ ಸರಕಾರಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆ ಏನು ಪಾಠ ಕಲಿಸಿದ. ಭ್ರಷ್ಟಾಚಾರದ ವಿರುದ್ದ ತೊಡೆ ತಟ್ಟಿದ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಜನತೆ ಯಾವ ರೀತಿಯಲ್ಲಿ ಮಣೆ ಹಾಕಿದ ಎನ್ನುವುದನ್ನು ಪ್ರಮುಖವಾಗಿ ಯುಪಿಎ ಧುರೀಣರು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಾದರೂ ಅರಿತು ಕೊಳ್ಳಲಿ.

Burning issue ಆಗಿರುವ ಈ ಎಲ್ಪಿಜಿ / ಆಧಾರ್ ಬಗ್ಗೆ, ಓದುಗರೇ ನಿಮ್ಮ ಅಭಿಪ್ರಾಯವೇನು?

English summary
Lot of confusion over LPG Aadhaar card linking to get bank subsidy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X