ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಣ್ಣೆ ನಗರಿಯಲ್ಲಿ ಸದ್ಯದ ರಾಜಕಾರಣ ಸ್ಮೂತ್ ಸ್ಮೂತ್!

By ಶೈಲಾಬಾನು
|
Google Oneindia Kannada News

ಹಾಗೆ ನೋಡಿದರೆ ದಾವಣಗೆರೆ ಕ್ಷೇತ್ರದಲ್ಲಿ ಸದ್ಯದ ರಾಜಕಾರಣ ಸ್ಮೂತ್ ಸ್ಮೂತ್! ಪರಸ್ಪರರ ಬಗ್ಗೆ ಗೌರವದಿಂದ ಮಾತನಾಡುವ ಅಭ್ಯರ್ಥಿಗಳೇ ಇಲ್ಲಿ ಇದ್ದಾರೆ. ರೇಣುಕಾಚಾರ್ಯನಂಥವರು ಕೂಡ ಕೆಸರೆರಚಾಟಕ್ಕೆ ಇನ್ನೂ ಇಳಿದಿಲ್ಲ. ಮಾಜಿ ಕೃಷಿ ಮಂತ್ರಿ, ರವೀಂದ್ರನಾಥಗೆ ಭರ್ಜರಿ ಕಾಲು ನೋವು ಮತ್ತು ಅವರನ್ನ ಮಾತಾಡಿಸಲಿಕ್ಕೆ ದಾವಣಗೆರೆಯಲ್ಲಿ ಅವರ ಪಕ್ಷದವರಿಗೇ ಟೈಮಿಲ್ಲ. ರಾಮಚಂದ್ರ ಜಗಳೂರಿನ ಗಡಿ ದಾಟುತ್ತಿಲ್ಲ. ದಾವಣಗೆರೆಯಲ್ಲಿ ಆತನ ಉಸಿರು ಕೇಳುತ್ತಿಲ್ಲ. ಹೊನ್ನಾಳಿಯ ಶಾಂತನಗೌಡರು ಮಾತನಾಡಿದ್ದು ಅರ್ಥ ಆಗೋದೇ ಕಷ್ಟ. ಶಿವಮೂರ್ತಿ ನಾಯ್ಕನಿಗೆ ತನ್ನ ವ್ಯವಹಾರದ ವ್ಯಾಜ್ಯಕ್ಕೇ ಟೈಮಿಲ್ಲ.

ಹರಪನಹಳ್ಳಿಯ ರವೀಂದ್ರನಂತೂ ಅವರಪ್ಪ ಎಂ.ಪಿ ಪ್ರಕಾಶರ ಹಾಗೆ ತೂಕದ ಮಾತಿನ ಮನುಷ್ಯ. ಹರಿಹರದ ಬಿ.ಪಿ ಹರೀಶನಿಗೆ ಮಾತಿಗೇ ಸಿಕ್ಕುತ್ತಿಲ್ಲ ಜೆಡಿಎಸ್ ನ ಶಿವಶಂಕರ್. ಇನ್ನು ಮಲ್ಲಿಕಾರ್ಜುನನ ಬಗ್ಗೆ ದಾವಣಗೆರೆಯ ಒಂದು ವರ್ಗದ ಜನರಲ್ಲಿ ಭಯಂಕರ ಅಭಿಮಾನ. ಅವರ ಪ್ರಕಾರ ಆತ 'ಬಂಗಾರದ ಮನುಷ್ಯ'. ಇನ್ನೊಂದು ವರ್ಗ ಕೂಡ ಆ ಮಾತನ್ನ ಒಪ್ಪುತ್ತಾರಾದರೂ, ಹೌದೌದು.. ಆ ಮನುಷ್ಯ ಬಂಗಾರ.. ಆದ್ರೆ, ಕಿವಿ ಹಿತ್ತಾಳೆ ಅಂದು ಕೊಂಕಿಡುತ್ತಾರೆ. ಇನ್ನು ಸಿದ್ಧೇಶ ಪಕ್ಷದೊಳಗೆ ಗುರುಗುಡುತ್ತಾರಾದರೂ ಹೊರಗೆ ಸೌಮ್ಯ ನಡವಳಿಕೆ.

Lok Sabha Election battle in Davanagere

ಆದರೆ ಸಭ್ಯ ನಡವಳಿಕೆಯ ಜೊತೆಜೊತೆಯಲ್ಲಿಯೇ ಅಂದರಿಕಿ ಮಂಚುವಾಳ್ಳು ನಾಯಕತ್ವವನ್ನೂ ರೂಢಿಸಿಕೊಂಡಿದ್ದಾರೆ ಇಲ್ಲಿನ ನಾಯಕರು. ಸಿದ್ಧೇಶ್ ಜೊತೆಗೆ ಪ್ರಚಾರಕ್ಕೆ ವ್ಯಾನು ಹತ್ತಿದ್ದ ಬಿ.ಪಿ.ಹರೀಶ್ ನನ್ನು ರಾತ್ರೋರಾತ್ರಿ ಎತ್ತಾಕಿಕೊಂಡು ಬಂದು ಕಿಸಕ್ಕನೇ ನಕ್ಕೋರು ಶಾಮನೂರು ಮಲ್ಲಿ. ದುಗ್ಗಮ್ಮನಾಣೆಗೂ ಯಾವ ಆಮಿಷಕ್ಕೆ ಒಳಗಾಗಿಲ್ಲ ಅಂತ ಒರಲುವ ಬಿ.ಪಿ.ಹರೀಶ್ ಮಾತಿಗೆ ದಾವಣಗೆರೆ-ಹರಿಹರದ ಜನ ಅಂಡು ಬಡಿದುಕೊಂಡು ನಗುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಭರ್ಜರಿ ಪೇಮೆಂಟು ಶುರು ಹಚ್ಚಿಕೊಂಡಿರುವ ಸಿದ್ದೇಶ್ ಮಲ್ಲಿಕಾರ್ಜುನ್ ಏಟುಗಳಿಗೆ ಪ್ರತಿಯೇಟು ನೀಡುತ್ತಿದ್ದಾರೆ. ಮಹಿಮಾ ಪಟೇಲ್ ಗೆ ಜೆಡಿಎಸ್ಸು ಟಿಕೆಟ್ಟು ಎಂದು ಖಾಯಂ ಆದ ಕೂಡಲೇ, ಮನೆಗೋಗಿ ಇಲ್ಲಿನ ಪಂಚಮಸಾಲಿ ಪಂಗಡದ ಮುಖಂಡ ಜವಳಿ ವರ್ತಕ ಬಿ.ಸಿ.ಉಮಾಪತಿಯವರನ್ನ ಜೊತೆಗೆ ನೆಡೆಸಿಕೊಂಡು ಹೋಗಿ ಪ್ರಚಾರಕ್ಕೆ ನಿಂತಿದ್ದು ಖುದ್ದು ಶಾಮನೂರು ಶಿವಶಂಕರಪ್ಪನೇ!

ದುಗ್ಗಮ್ಮನ ಹಬ್ಬಕ್ಕೆ ಕೋಣ, ಕುರಿಗಳ ಗಿಫ್ಟು ಕಟ್ಟಿಕೊಟ್ಟು, ಬೂತ್ ಮಟ್ಟದಲ್ಲಿ, ನೆಲ್ಲಿ ಛಾಪ್ಸು, ಹಾಫ್ ರೇಟ್, ಚೀಪ್ ರೇಟ್ ಲಿಕ್ಕರ್ ಹಂಚಿ ರಾಜಕಾರಣ ಮಾಡುವ ದಾವಣಗೆರೆಯವರ ನೌಟಂಕಿ ರಾಜಕೀಯ ಕಡಿಮೆಯನೇದೇನಲ್ಲ, ಆದರೂ ಸಭ್ಯತೆಯ ಪರಿಧಿಯಲ್ಲೇ ಇರೋ ಇಲ್ಲಿನ ರಾಜಕಾರಣದ ಬಗ್ಗೆ ಹೆಮ್ಮೆಯಂತೂ ಇಲ್ಲಿನ ನಾಗರೀಕರಲ್ಲಿದೆ. ಚನ್ನಗಿರಿಯ ಜನಕ್ಕಂತೂ ಮಹಿಮಾ ಪಟೇಲರ ಬಗ್ಗೆ ಭಯಂಕರ ಅಭಿಮಾನ. ಸದ್ಯ ತಮ್ಮ ನಾಯಕ ಕಳೆದಬಾರಿಯಂತೆ, ಸೂಳೆಕೆರೆಯ ದಂಡೆಯ ಮೇಲೆ, ಶಾಮಿಯಾನಾ ಹಾಕಿ, ಜನರಿಗೆ ಮಜ್ಜಿಗೆ, ಶರಬತ್ತು ಹಂಚುತ್ತಾ ಧ್ಯಾನಕ್ಕೆ ಕೂರದೇ, ಊರೂರು ತಿರುಗಿ ಮತಯಾಚನೆ ಮಾಡುತ್ತಿರೋದು ಸಮಾಧಾನ ತಂದಿದೆ.

ಮಹಿಮಾ ಪಟೇಲ್ ಎಷ್ಟು ವೋಟು ಯಾರದ್ದು ಕೀಳಲಿದ್ದಾರೆ ಎನ್ನುವದರ ಮೇಲೆ ನಿರ್ಧಾರವಾಗಲಿದೆ ದಾವಣಗೆರೆಯ ಫಲಿತಾಂಶ. ಸದ್ಯದ ಮಟ್ಟಿಗೆ ಮಲ್ಲಿ-ಸಿದ್ಧೇಶಿ ಮಧ್ಯೆ ಕ್ಲೋಸ್ ಫೈಟು. ಅಂಪೈರು ಮಹಿಮಾ ಪಟೇಲ್, ಆಟ ನೋಡಿ ಹೊರಡ್ತಾರೋ, ಅಥವಾ ಇಬ್ಬರ ಜಗಳದಲ್ಲಿ ಲಾಭ ಮಾಡಿಕೊಳ್ತಾರೋ ಕಾದುನೋಡಬೇಕಿದೆ. ಮಲ್ಲಿ ಮತ್ತು ಸಿದ್ಧೇಶರ ಮಧ್ಯೆ ತೂರಿಹೋಗಿ ಜಯಿಸಬೇಕೆಂದರೆ ಮಹಿಮಾ ಪವಾಡವನ್ನೇ ಮಾಡಬೇಕು. ಧ್ಯಾನ, ಪ್ರೀತಿ, ವಿಶ್ವಾಸದ ಪ್ರವಚನಗಳಷ್ಟೇ ಪವಾಡ ಮಾಡಲಾರವು ಅನ್ನೋದು ದಾವಣಗೆರೆಯ ಮತದಾರದ ಅಂತರಾಳದ ಮಾತು.

English summary
Lok Sabha Election battle in Davanagere : It's triangular war between Siddeswara of BJP, SS Mallikarjun of Congress and Mahima Patel of JD(S). Will Siddeswara retain the MP seat? Or Will Mallikarjun clinch it from him?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X