ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ಧೇಶಿ ದೂಸ್ರಾ ಬೌಲಿಂಗ್ನಲ್ಲಿ ಮಲ್ಲಿ ಬೋಲ್ಡ್?

By ಶೈಲಾಬಾನು
|
Google Oneindia Kannada News

ನರೇಂದ್ರ ಮೋದಿಯ ಮೋಡಿ ಒಲಿದರೆ, ಸಿದ್ಧೇಶಿಯ ದೂಸ್ರಾ ಬೌಲಿಂಗ್ನಲ್ಲಿ ಮಲ್ಲಿ ಬೋಲ್ಡ್ ಆಗಬಹುದೂ ಅನ್ನೋದು ಹೊನ್ನಾಳಿಯ ಹೋರಿ ಮಾಜಿ ಶಾಸಕ ರೇಣುಕಾಚಾರ್ಯನ ಲೆಕ್ಕಾಚಾರ. ಹೊನ್ನಾಳಿ ಶಾಸಕ ಶಾಂತನಗೌಡರಿಗೆ ಮಲ್ಲಿಯ ಬ್ಯಾಟಿಂಗು ನೋಡೋ ಕುತೂಹಲ ಮಾತ್ರ!

ಮಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿ ಕ್ಯಾಚ್ ಕೊಡ್ತಾನೆ. ಆದರೆ ಬೌಂಡರಿಯಿಂದ ಹೊರಗೆ ಹೋಗಿ ಕ್ಯಾಚ್ ಆಗಿ ನನ್ನಿಂದಲೇ ಗೆಲ್ತಾನೆ ಅನ್ನೋ ಕನಸು ಕಾಣ್ತಿರೋದು ಹರಿಹರದ ಬಿ.ಪಿ ಹರೀಶ್ ಎಂಬ ಪಕ್ಷಾಂತರಿ. ಆದರಿಲ್ಲಿ ಜೆಡಿಎಸ್ ನ ಶಿವಶಂಕರನಿಗೆ ಅಂಪೈರ್ ಮ್ಯಾಲೆ ಕಣ್ಣು. ಹರಿಹರದ ಕಾಂಗ್ರೆಸ್ಸಿಗ ನೀರು ರಾಮಪ್ಪಜ್ಜ ಮಾತ್ರ, ಬಿ.ಪಿ. ಹರೀಶನ ಹಗಲುಗನಸಿಗೆ ರಾತ್ರಿಯಲ್ಲಿ ಬಾವಿ ಹುಡುಕುತ್ತಿದ್ದಾನೆ.

Lok Sabha Election battle in Davanagere

ಹರಪನಹಳ್ಳಿಯ ರವೀಂದ್ರನಿಗೆ ಶಾಮನೂರು ಮಲ್ಲಿಗೆ ಜೊತೆಯಲ್ಲಿ ಬ್ಯಾಟ್ ಮಾಡುವ ಆಸೆ. ಆದ್ರೆ ಮಲ್ಲಿಯ ದಾವಣಗೆರೆಯ ಪಟಾಲಮ್ಮು ಅದಕ್ಕೆ ಹರಿಗೊಡುತ್ತಿಲ್ಲ. ಹರಪನಹಳ್ಳಿಯ ಕರುಣಾಕರ ರೆಡ್ಡಿ, ಸಿದ್ಧೇಶಿಯ ಪಕ್ಕಕ್ಕೆ ನಿಂತುಬಿಟ್ಟಿದ್ದಾನೆ. ಇಲ್ಲಿ ಬಾವಿ ಬೆಟ್ಟಪ್ಪ ಅಂಪೈರು ಮಹಿಮಾ ಪಟೇಲನ ಕಡೆ. ಜಗಳೂರಿನ ಎಸ್. ವಿ. ರಾಮಚಂದ್ರನಿಗೆ ಬಡಿಯೋ ಹಾಗೆ ಬ್ಯಾಟ್ ಬೀಸ್ತೀನಿ ಅನ್ನೋದು ಮಲ್ಲಿಯ ಆಸೆ ಆದರೆ, ರನೌಟ್ ಮಾಡೋನು ನಾನೇ ಅಂತ ಬೀಗುತ್ತಿದ್ದಾನೆ ರಾಮಚಂದ್ರ. [ಇವರೇ ಎಸ್ಎಸ್ ಮಲ್ಲಿಕಾರ್ಜುನ]

ಮಾಯಕೊಂಡ, ಚನ್ನಗಿರಿಗಳಲ್ಲಿ ಹಳೇ ಆಟಗಾರರಾದ ಸಿದ್ದೇಶಿ ಮತ್ತು ಮಲ್ಲಿಗಿಂತ ಅಂಪೈರು ಪಟೇಲರ ಕುಡಿ ಮಹಿಮನ ಮಹಿಮೆಯೇ ಹೆಚ್ಚು ಪ್ರಸ್ತುತವಾಗಲಿದೆ. ಇಲ್ಲಿಯ ಶಿವಮೂರ್ತಿ ನಾಯ್ಕ, ವಡ್ನಾಳು ರಾಜಣ್ಣ, ಮಾಡಾಳು ವಿರೂಪಾಕ್ಷಪ್ಪ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳಿಗಾಗಿ ಲುಂಗಿ ಎತ್ತಿಕಟ್ಟಿ ನಿಂತಿದ್ದರಾದರೂ ರಿಜಲ್ಟು ಬಂದಾಗ: 'ಗೆದ್ದರೆ ಆಡೋಕೆ ಬಂದಿದ್ದೆ, ಸೋತರೆ ನೋಡೋಕೆ ಬಂದಿದ್ದೆ' ಅನ್ನೋವವರೆ!

ಇನ್ನು ದಾವಣಗೆರೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಅಪ್ಪ - ಮಗ ಕಾಂಗ್ರೆಸ್ಸಿನಿಂದ ಗೆದ್ದು ಹತ್ತು ತಿಂಗಳೂ ಕಳೆದಿಲ್ಲ. ಇವರಿಬ್ಬರಿಗೂ ದಾವಣಗೆರೆಯ ಜನ ಕೊಟ್ಟಿದ್ದು ಒಂದು ಲಕ್ಷಕ್ಕೂ ಹೆಚ್ಚಿನ ಲೀಡು. ಅದಕ್ಕಿಂತ ಹೆಚ್ಚು ಲೀಡು ತಂದುಕೊಡ್ತಿವಿ ಅಂತ ಹೊರಟಿರೋದು ದಾವಣಗೆರೆ ನಗರಪಾಲಿಕೆಯ ನಲವತ್ತೂ ಕಾರ್ಪೋರೇಟರುಗಳು. ಬೆಳಿಗ್ಗೆ ಎದ್ದರೆ, ಗರಿಗರಿ ಬಟ್ಟೆ ಹಾಕಿಕೊಂಡು ಶಾಮನೂರು ಮಲ್ಲಿಯ ಮನೆ ಮುಂದೆ ಜಮಾಯಿಸೋ ಈ ಪಟಾಲಮ್ಮು ದಾವಣಗೆರೆಯ ಉದ್ದಗಲಕ್ಕೂ ಭರ್ಜರಿಯಾಗಿ ತಿರುಗುತ್ತಿದೆ. ಇನ್ನು ವಯೋವೃದ್ಧ ತಂದೆ, ಕರ್ನಾಟಕ ಸರ್ಕಾರದ ಸಚಿವ ಶಾಮನೂರು ಶಿವಶಂಕರಪ್ಪ, ಮಗ ಮಲ್ಲಿಕಾರ್ಜುನನ ಗೆಲುವಿಗೆ, ಬಿಸಿಲು ಕೊಂಚ ಕಳೆದಕೂಡಲೇ, ಊರಲ್ಲಿರೋ ಹಳೇ ಸ್ನೇಹಿತರನ್ನ ಜೊತೆಗೂಡಿಸಿಗೊಂಡು ಊರು ಸುತ್ತತೊಡಗಿದ್ದಾರೆ.

English summary
Lok Sabha Election battle in Davanagere : It's triangular war between Siddeswara of BJP, SS Mallikarjun of Congress and Mahima Patel of JD(S). Will Siddeswara retain the MP seat? Or Will Mallikarjun clinch it from him?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X