ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಶಾಸಕರಿಗೆ ಕುಮಾರಸ್ವಾಮಿ ಭಾವನಾತ್ಮಕ ಪತ್ರ

|
Google Oneindia Kannada News

ಬೆಂಗಳೂರು, ಆ.30 : ಜೆಡಿಎಸ್ ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ಮತ್ತು ಗೊಂದಲವನ್ನು ದೂರ ಮಾಡಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಶಾಸಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ಗಣೇಶ ಹಬ್ಬದ ಶುಭಾಶಯ ಕೋರಿರುವ ಪತ್ರದಲ್ಲಿ ಹಲವಾರು ಸಂಗತಿಗಳನ್ನು ಪ್ರಸ್ತಾಪಿಸಲಾಗಿದೆ.

ಪತ್ರದಲ್ಲಿ ಕುಮಾರಸ್ವಾಮಿ ಅವರು, ಸೆ.3ರಂದು ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಪಕ್ಷದಲ್ಲಿ ಸಾಕಷ್ಟು ಗೊಂದಲಗಳಿವೆ ಇವುಗಳನ್ನು ಬಗೆಹರಿಸಿಕೊಳ್ಳಲು ಸಭೆ ವೇದಿಕೆಯಾಗಿದೆ. ಆದ್ದರಿಂದ ಎಲ್ಲರೂ ಶಾಸಕಾಂಗ ಸಭೆಗೆ ತಪ್ಪದೇ ಬನ್ನಿ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. [ಪಕ್ಷಾಂತರ:ಶಾಸಕ ಚೆಲುವರಾಯಸ್ವಾಮಿ ಸ್ಪಷ್ಟನೆ]

ಕುಮಾರಸ್ವಾಮಿಯವರ ಭಾವನಾತ್ಮಕ ಪತ್ರದಲ್ಲಿ "ಏನಾದರಾಗಲೀ, ಆತ್ಮಾವಲೋಕನಕ್ಕೆ ಇದು ಸಕಾಲ. ಕವಿಯೊಬ್ಬ ಹೇಳಿದಂತೆ, ಸೋಲು ಸಂಕಟಗಳಿಗೆ ಭಯಪಟ್ಟು, ಚಿಪ್ಪಿನಲ್ಲಿ ಅಡಗುವುದಕ್ಕಿಂತಲೂ ಧೈರ್ಯದ ಪುಟ್ಟ ಬೀಜ ಬಿತ್ತಿ ಆತ್ಮ ವಿಶ್ವಾಸದ ಮರ ಮೊಳೆಯುವಂತೆ ಮಾಡುವ ಕಾಲ. ನನ್ನ ಕಾರಣದಿಂದ ಆಗಿರಬಹುದಾದ ತಪ್ಪುಗಳನ್ನು ತಿದ್ದಿಕೊಳ್ಳಲು ನಾನು ಸಿದ್ಧನಿದ್ದೇನೆ. ನಿಮ್ಮೊಂದಿಗೆ ಮುಕ್ತ ಮನದಿಂದ ಚರ್ಚಿಸಲೆಂದೇ ನಿಮಗೀ ಆಹ್ವಾನ ನೀಡುತ್ತಿದ್ದೇನೆ" ಎಂದು ಬರೆಯಲಾಗಿದೆ. ಕುಮಾರಸ್ವಾಮಿ ಪತ್ರದಲ್ಲೇನಿದೆ ನೋಡೋಣ ಬನ್ನಿ

ಪಕ್ಷಕ್ಕಾಗಿ ಪ್ರಾಮಾಣಿಕನಾಗಿ ದುಡಿದಿದ್ದೇನೆ

ಪಕ್ಷಕ್ಕಾಗಿ ಪ್ರಾಮಾಣಿಕನಾಗಿ ದುಡಿದಿದ್ದೇನೆ

ಜನತಾದಳ ಎಂಬ ಮಹಾವೃಕ್ಷದ ನೆರಳಿನಲ್ಲಿ ಅರಳುತ್ತಿರುವ ನಾನು ಅತ್ಯಂತ ಕಿರಿಯ. ದೇಶದ ಹಿರಿಯ ನಾಯಕರ ಸಾಲಿನಲ್ಲಿ ನಿಲ್ಲಲಾಗದಷ್ಟು ಕುಬ್ಜ. ನಿಮ್ಮೆಲ್ಲರ ಆಸೆ-ಆಕಾಂಕ್ಷೆಗಳಿಂದಾಗಿ ನಿಮ್ಮ ಸಹೃದಯ ಬೆಂಬಲ, ಪ್ರೋತ್ಸಾಹಗಳಿಂದಾಗಿ ನಾನು ಪಕ್ಷದಲ್ಲಿ ನೆಲೆ ಕಂಡುಕೊಂಡೆ. ರಾಜ್ಯ ಘಟಕದ ಅಧ್ಯಕ್ಷನಾದೆ, ಮುಖ್ಯಮಂತ್ರಿಯೂ ಆದೆ. ನಿಮ್ಮ ನಂಬಿಕೆಗೆ ಧಕ್ಕೆ ಬಾರದಂತೆ ಮತ್ತು ಪಕ್ಷದ ವರ್ಚಸ್ಸು ವೃದ್ಧಿಯಾಗುವಂತೆ ಪ್ರಾಮಾಣಿಕವಾಗಿ ದುಡಿದಿದ್ದೇನೆ.

ಇತ್ತೀಚಿನ ಆರೋಪಗಳಿಂದ ನೊಂದಿದ್ದೇನೆ

ಇತ್ತೀಚಿನ ಆರೋಪಗಳಿಂದ ನೊಂದಿದ್ದೇನೆ

ಇತ್ತೀಚಿನ ದಿನಗಳಲ್ಲಿ ಜನತಾದಳದ ಕುರಿತು ಕೇಳಿಬರುತ್ತಿರುವ ಮಾತುಗಳು, ಮೂಡಿ ಬರುತ್ತಿರುವ ವರದಿಗಳಿಂದ ನಾನು ನೊಂದಿದ್ದೇನೆ. ಜನತಾದಳದ ತಾಂತ್ರಿಕ ವ್ಯವಸ್ಥೆ ಕುಸಿಯುತ್ತಿದೆ, ಸಮನ್ವಯದ ಕೊರತೆಯಿದೆ, ಜನತಾದಳದ ವರ್ಚಸ್ಸು ಮಾಸುತ್ತಿದೆ ಎನ್ನುವ ಈ ವರದಿಗಳು ನನ್ನನ್ನು ಕೂಡ ಅಪರಾಧಿ ಸ್ಥಾನದಲ್ಲಿ ನಿಲ್ಲಿಸತೊಡಗಿವೆ. ಪ್ರತಿದಿನ ನೂರಾರು ಕಾರ್ಯಕರ್ತರು ನನ್ನನ್ನು ಭೇಟಿ ಮಾಡಿ, ದೂರವಾಣಿ ಮುಖಾಂತರ ಸಂಪರ್ಕಿಸಿ, ಇದೇನಿದು? ಈ ಸಮಸ್ಯೆಗೆ ದಯಮಾಡಿ ಪರಿಹಾರ ಕಂಡುಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ.

 ಜೆಡಿಎಸ್ ಪಕ್ಷ ಕುಸಿಯುತ್ತಿಲ್ಲ

ಜೆಡಿಎಸ್ ಪಕ್ಷ ಕುಸಿಯುತ್ತಿಲ್ಲ

ಜನತಾದಳ ನಾಡಿಗೆ ನೀಡಿರುವ ಕೊಡುಗೆ ದೊಡ್ಡದು. ಮೀಸಲಾತಿಯಿರಲಿ, ರೈತ ಸಮಸ್ಯೆಯಿರಲಿ, ಮೂಲಭೂತ ಸೌಲಭ್ಯಗಳ ನಿರ್ಮಾಣದಲ್ಲಾಗಲಿ ಜನತಾದಳದ ಕಾಣಿಕೆ ಅಪರೂಪ ಎನಿಸುವಂತಹದು. ಇಂತಹ ಪ್ರಭಾವಿ ಪಕ್ಷವೊಂದು ಕುಸಿಯುತ್ತಿದೆ ಎನ್ನುವ ಮಾತೇ ಸತ್ಯಕ್ಕೆ ದೂರವಾದದ್ದು. ಹಲವಾರು ಏಳು-ಬೀಳುಗಳನ್ನು ಸಮರ್ಥವಾಗಿ ಎದುರಿಸಿ ಪಕ್ಷ ಮುನ್ನಡೆದಿದೆ. ನಾಡಿನ ಭವಿಷ್ಯದ ಹರಿಕಾರನಾಗಿದೆ. ಆದರೆ, ಅದು ನಾಶವಾಗುತ್ತಿಲ್ಲ, ನಾಶವಾಗುವುದು ಇಲ್ಲ.

ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನ ನಡೆಯುತ್ತಿದೆ

ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನ ನಡೆಯುತ್ತಿದೆ

ಪಕ್ಷದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಅದನ್ನು ಸಾವಿರ ಬಾರಿ ಪ್ರತಿಪಾದಿಸಿ ಸತ್ಯ ಎಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ. ನನಗಿಂತಲೂ ಪಕ್ಷವನ್ನು ನಂಬಿರುವ ಲಕ್ಷಾಂತರ ಕಾರ್ಯಕರ್ತರ ಆತಂಕ ಕೂಡ ಇದೇ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಅದಕ್ಕೊಂದು ಪರಿಹಾರ ಇದ್ದೇ ಇದೆ. ಸ್ವಲ್ಪ ಸಹನೆ, ವಿವೇಕಯುತ ತಿಳಿ ಮನಸ್ಸಿನಿಂದ ಪರಿಶೀಲಿಸಿದರೆ ಸಂಕಟದಿಂದ ಪಾರಾಗಲು ಅವಕಾಶಗಳು ದೊರೆಯುತ್ತವೆ.

ಆತ್ಮಾವಲೋಕನಕ್ಕೆ ಸಕಾಲ

ಆತ್ಮಾವಲೋಕನಕ್ಕೆ ಸಕಾಲ

ಆತ್ಮಾವಲೋಕನಕ್ಕೆ ಇದು ಸಕಾಲ. ಕವಿಯೊಬ್ಬ ಹೇಳಿದಂತೆ, ಸೋಲು ಸಂಕಟಗಳಿಗೆ ಭಯಪಟ್ಟು, ಚಿಪ್ಪಿನಲ್ಲಿ ಅಡಗುವುದಕ್ಕಿಂತಲೂ ಧೈರ್ಯದ ಪುಟ್ಟ ಬೀಜ ಬಿತ್ತಿ ಆತ್ಮ ವಿಶ್ವಾಸದ ಮರ ಮೊಳೆಯುವಂತೆ ಮಾಡುವ ಕಾಲ. ನನ್ನ ಕಾರಣದಿಂದ ಆಗಿರಬಹುದಾದ ತಪ್ಪುಗಳನ್ನು ತಿದ್ದಿಕೊಳ್ಳಲು ನಾನು ಸಿದ್ಧನಿದ್ದೇನೆ. ನಿಮ್ಮೊಂದಿಗೆ ಮುಕ್ತ ಮನದಿಂದ ಚರ್ಚಿಸಲೆಂದೇ ನಿಮಗೆ ಈ ಆಹ್ವಾನ ನೀಡುತ್ತಿದ್ದೇನೆ.

ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ

ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ

ಯಾವ ವ್ಯಕ್ತಿಯೂ ಪಕ್ಷಕ್ಕಿಂತ ಎಂದೂ ದೊಡ್ಡವನಲ್ಲ ಎನ್ನುವುದು ನನ್ನ ಖಚಿತ ನಂಬಿಕೆ. ನನ್ನ ನಾಯಕತ್ವದಲ್ಲಿ ತಮಗೆ ಅನುಮಾನಗಳಿದ್ದರೆ ಅದನ್ನು ಪರಿಹರಿಸಿಕೊಳ್ಳೋಣ, ಅವಶ್ಯ ಕಂಡರೆ ಪರ್ಯಾಯ ನಾಯಕತ್ವ ಹುಡುಕೋಣ. ನಾನು ಜನತಾದಳದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲು ಸದಾ ಸಿದ್ಧ. ನಾವು ನೀವು ಕುಳಿತು ಚರ್ಚೆ ಮಾಡಿ ಒಂದು ಒಮ್ಮತಕ್ಕೆ ಬರೋಣ.

ಶಾಸಕಾಂಗ ಪಕ್ಷದ ಸಭೆಗೆ ಬನ್ನಿ

ಶಾಸಕಾಂಗ ಪಕ್ಷದ ಸಭೆಗೆ ಬನ್ನಿ

ಸೆ.3ರಂದು ಬೆಳಗ್ಗೆ 11.00 ಗಂಟೆಗೆ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಬನ್ನಿ. ಯಾವ ಪೂರ್ವಾಗ್ರಹವೂ ಬೇಡ, ಹಿಂಜರಿಕೆಯೂ ಬೇಡ. ಮುಕ್ತ ವಾತಾವರಣದಲ್ಲಿ ನಿಮ್ಮೆಲ್ಲರ ಉಪಸ್ಥಿತಿಯಲ್ಲಿ ಮುಕ್ತವಾಗಿ ಚರ್ಚಿಸೋಣ ಬನ್ನಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

English summary
JD(S) leader and former Karnataka Chief Minister HD Kumaraswamy writes emotional letter to party MLAs and invite them to CLP meeting on September 3 at The Chancery Pavillion hotel Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X