ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೋ ನೋಡಿ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ

By Srinath
|
Google Oneindia Kannada News

ಬೆಂಗಳೂರು, ಅ. 11: ಇದೇ ನೋಡಿ ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ. ಮಡಿಕೇರಿಯಲ್ಲಿ ಜನವರಿ 7ರಿಂದ ಮೂರು ದಿನಗಳ ಕಾಲ ನಡೆಯುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧಿಕೃತ ಲಾಂಛನ ಇದು.

ಲಾಂಛನದ ವಿಶೇಷತೆಗಳು: ವೃತ್ತಾಕಾರದ ಪರಿಧಿಯಲ್ಲಿ ಆನೆಗಳ ಸರದಿ. ವೃತ್ತಾಕಾರದ ಮಧ್ಯದಲ್ಲಿ ಮಡಿಕೇರಿಯ ಪ್ರವಾಸಿ ಕೇಂದ್ರ ರಾಜಾ ಸೀಟ್, ಅದರ ಮೇಲೆ ಕೊಡಗಿನ ಕುಲದೇವತೆ ಕಾವೇರಿ ತಾಯಿಯ ವಿಗ್ರಹ, ಅವೆರಡರ ಕೆಳಗೆ ಪುಸ್ತಕ- ಲೇಖನಿ ಹಾಗೂ ಇವೆಲ್ಲವನ್ನೂ ಒಳಗೊಂಡಂತೆ ಕರ್ನಾಟಕ ನಕಾಶೆ, ಅದರೊಳಗೆ ಬಣ್ಣದಲ್ಲಿ ಕೊಡಗು ಜಿಲ್ಲೆಯ ನಕಾಶೆ.

ನಕಾಶೆಯ ಮೇಲ್ಭಾಗದ ಪಾರ್ಶ್ವಗಳಲ್ಲಿ ಮಾಂದಲ್ ಪಟ್ಟಿ ಪರ್ವತ ಮತ್ತು ಅಬ್ಬಿ ಜಲಪಾತ, ಕೆಳಭಾಗದಲ್ಲಿ ಕೊಡಗಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಕಿತ್ತಳೆ ಹಾಗೂ ಕರಿಮೆಣಸಿನ ಚಿತ್ರಣ 80ನೇ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದ ಬಿಆರ್ ಸತೀಶ್ ರೂಪಿಸಿರುವ ಲಾಂಛನದ ವಿಶೇಷತೆ.

Karnataka Madikeri Kannada Sahitya Sammelana logo released

ಕೊಡಗು ಜಿಲ್ಲೆಯ ಸಂಸ್ಕೃತಿ ಸಂಪತ್ತನ್ನು ಪ್ರತಿಬಿಂಬಿಸುವ ಲಾಂಛನವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಲೋಕೋಪಯೋಗಿ ಸಚಿವ ಡಾ.ಎಚ್ ಸಿ ಮಹಾದೇವಪ್ಪ ಅವರು ನಿನ್ನೆ ಗುರುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಈ ಸಾಹಿತ್ಯ ಸಮ್ಮೇಳನಕ್ಕೆ 2.5 ಕೋಟಿ ರೂ ಖರ್ಚು ಮಾಡುವ ಅಂದಾಜಿದ್ದು, ರಾಜ್ಯ ಬಜೆಟ್ ನಲ್ಲಿ 1 ಕೋಟಿ ರೂ ಮೀಸಲಿಡಲಾಗಿದೆ. ಉಳಿದ 1.5 ಕೋಟಿಯನ್ನು ಸರ್ಕಾರದಿಂದ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದ್ದು, ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಉಳಿದ ರು. 50 ಲಕ್ಷ ಮೊತ್ತವನ್ನು ಇತರ ಮೂಲಗಳಿಂದ ಕ್ರೋಡೀಕರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಡಿಕೇರಿಗೆ ಇದು 3ನೇ ಸಮ್ಮೇಳನ: ಸಾಹಿತಿ ಡಿವಿ ಗುಂಡಪ್ಪ ಅವರ ಅಧ್ಯಕ್ಷತೆಯಲ್ಲಿ 1932ರ ಡಿಸೆಂಬರಿನಲ್ಲಿ ಮಡಿಕೇರಿಯಲ್ಲಿ ಪ್ರಥಮ ಬಾರಿಗೆ 18ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬಳಿಕ ಡಾ. ಶಂಭಾ ಜೋಶಿ ಅವರ ಅಧ್ಯಕ್ಷತೆಯಲ್ಲಿ 1981ರ ನವಂಬರಿನಲ್ಲಿ 2ನೇ ಬಾರಿಗೆ ಅಂದರೆ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.

ಡಿಸೆಂಬರ್ ನಲ್ಲಿ ಅಧ್ಯಕ್ಷರ ಹೆಸರು ಪ್ರಕಟ:
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಮಾತನಾಡಿ, ಗಡಿನಾಡ ಜಿಲ್ಲೆ ಕೊಡಗಿನಲ್ಲಿ ಪ್ರತ್ಯೇಕತೆಯ ಕೂಗು ಹೆಚ್ಚುತ್ತಿದ್ದು, ಆ ಭಾಗದಲ್ಲಿ ಕನ್ನಡದ ವಾತಾವರಣ ಕ್ಷೀಣಿಸುತ್ತಿದೆ. ಹಾಗಾಗಿ, ಕೊಡಗು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸಾರಲು, ಕನ್ನಡದ ಶಕ್ತಿ ಪ್ರದರ್ಶಿಸಲು 80ನೇ ಸಾಹಿತ್ಯ ಸಮ್ಮೇಳನಕ್ಕೆ ಮಡಿಕೇರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಸಾಮಾಜಿಕ ಹಾಗೂ ಪ್ರಾದೇಶಿಕ ಸಮಾನತೆ ಮೇರೆಗೆ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಅಧ್ಯಕ್ಷರ ಹೆಸರನ್ನು ಡಿಸೆಂಬರ್ ನಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದರು.

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
* ನಡೆಯುವ ಸ್ಥಳ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ, ಮಡಿಕೇರಿ.
* ನಡೆಯುವ ಅವಧಿ: ಜನವರಿ 7, 8 ಮತ್ತು 9
* ಪ್ರತಿನಿಧಿಗಳ ಸಂಖ್ಯೆ: 4 ಸಾವಿರಕ್ಕೆ ಸೀಮಿತ
* ನೋಂದಣಿಗೆ ಅಂತಿಮ ದಿನ: ಡಿಸೆಂಬರ್ 15

English summary
Karnataka Madikeri Kannada Sahitya Sammelana logo released. HC. Mahadevappa, Minister for Public Works, who is in charge of Kodagu, on Thursday released the logo of the three-day 80th Akhila Kannada Sahitya Sammelan to be held at Madikeri from January 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X